Friday, February 21, 2014

ಒಂದೇ ಎಳೆ...ಅದೇ ರೀತಿ ಬೇರೆ ನೀತಿ

ಒಬ್ಬ ನಿರ್ದೇಶಕ ಸಿನಿಮಾ ಮಾಡುತ್ತಾ ಸಾಗಿದಂತೆ ತನ್ನದೇ ಶೈಲಿ ರೂಪಿಸಿಕೊಳ್ಳುತ್ತಾನೆ. ಅದರ ಜೊತೆಗೆ ತನ್ನತನವನ್ನು ಅದರಲ್ಲಿ ತೋರಿಸುತ್ತಾನೆ ಆದರೆ ಇನ್ನೂ ಸ್ವಲ್ಪ ಹೆಚ್ಚೇ ಗಮನಿಸಿದರೇ ಒಂದೇ ಕತೆ ಎಳೆಯನ್ನು ಅಥವಾ ನಿರೂಪಣೆಯ ಶೈಲಿಯನ್ನು ಅಲ್ಪ ಸ್ವಲ್ಪ ಬದಲಿಸಿರುತ್ತಾನೆ.
ಉದಾಹರಣೆಗೆ ಉಪೇಂದ್ರರ ಎ, ಓಂ, ಉಪೇಂದ್ರ ಮುಂತಾದ ಚಿತ್ರಗಳನ್ನು ಗಮನಿಸಿದರೇ ಗೊತಾಗುತ್ತದೆ. ಮೊದಲಿಗೆ ವ್ಯಕ್ತಿಯ ಘಟನೆಯ ಉಚ್ಛ್ರಾಯ ಸ್ಥಿತಿ ತೋರಿಸಿ ಆನಂತರ ಅದರ ವ್ಯತಿರಿಕ್ತವಾದ ಘಟನೆ, ಸನ್ನಿವೇಶ ಪಾತ್ರ ತೋರಿಸಿ ಮೂರನೆಯ ಭಾಗದಲ್ಲಿ ಪ್ರಸ್ತುತ ನಡೆಯುತ್ತಿರುವುದನ್ನು ತೋರಿಸಿದ್ದಾರೆ. ಅಂದರೆ ಅವರ ಚಿತ್ರದ ಕತೆಯನ್ನು/ನಿರೂಪಣೆಯನ್ನು ಮೂರು ಭಾಗಗಳಾಗಿ ಮಾಡಿದ್ದಾರೆ ಎನ್ನಬಹುದು. ಓಂ ಚಿತ್ರದಲ್ಲಿ ಮೊದಲಿಗೆ ಡಾನ್ ಆದ ಸತ್ಯ ಅಂದರೆ ರೌಡಿಸಂ ನ ಉಚ್ಛ್ರಾಯ ಸ್ಥಿತಿ ಆನಂತರ ಅದಕ್ಕೆ ವ್ಯತಿರಿಕ್ತವಾದ ದೇವಸ್ಥಾನದ ಅರ್ಚಕ, ಅಮಾಯಕ ಸತ್ಯ ಹಾಗೆ ಮೂರನೆಯ ಭಾಗದಲ್ಲಿ ಈಗ[ಆಗ] ನಡೆಯುವ ಘಟನೆಗಳನ್ನು ಪೋಣಿಸುತ್ತಾರೆ. ಎ ಕೂಡ ಹಾಗೆ. ಮೊದಲಿಗೆ ಹುಚ್ಚುಚ್ಚಾಗಿ ಆಡುವ ಪ್ರೇಮಿ ಸೂರ್ಯ ಆನಂತರ ಹೆಣ್ಣು ಪ್ರೀತಿಯೆಂದರೆ ಬೆಂಕಿಯ ಹಾಗೆ ಸಿಡುಕುವ ಸೂರ್ಯ, ಮೂರನೆಯ ಭಾಗದಲ್ಲಿ ಮತ್ತೆ ವಾಸ್ತವ ತೋರಿಸುತ್ತಾರೆ. ಸೂಪರ್ ಚಿತ್ರದಲ್ಲೂ ಹಾಗೆಯೇ ಇದೆ. 
ಹಾಗೆ ಪ್ರೇಮ್ ಚಿತ್ರಗಳಲ್ಲಿ ಹುಡುಕಾಟ ಪ್ರಮುಖ ಪಾತ್ರ ಎನಿಸುತ್ತದೆ. ಅವರ ಮೊದಲ ಚಿತ್ರ ಕರಿಯ ದಲ್ಲಿ ನಾಯಕ ನಾಯಕಿ ಒಬ್ಬರನ್ನೊಬ್ಬರು ಹುಡುಕುತ್ತಾ ಸಾಗುತ್ತಾರೆ, ಜೋಗಿ ಚಿತ್ರದಲ್ಲಿ ಅಮ್ಮ ಮಗ ಪರಸ್ಪರ ಹುಡುಕುತ್ತಾರೆ, ಎಕ್ಸ್ ಕ್ಯೂಸ್ ಮಿ ಯಲ್ಲಿ ನಾಯಕನನ್ನು ನಾಯಕಿ ಹುಡುಕುತ್ತಾಳೆ, ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದಲ್ಲಿ ಮತ್ತೆ ನಾಯಕ ನಾಯಕಿ ಹುಡುಕಾಟ ಹೀಗೆ.
ಸುಮ್ಮನೆ ಯೋಗರಾಜ್ ಭಟ್ ಅವರ ಇತ್ತೀಚಿನ ಚಿತ್ರಗಳನ್ನು ಗಮನಿಸೋಣ. ಅವರ ಕತೆಯ ಪ್ರಕಾರ ಪ್ರೀತಿ ಹುಟ್ಟ ಬೇಕಾದರೆ ಊರು ಬಿಟ್ಟು ಹೋಗಲೇಬೇಕು. ಇದ್ದ ಕಡೆ ಪ್ರೀತಿ ಹುಟ್ಟಿಸಿದ್ದು ಯೋಗರಾಜ್ ಭಟ್ ಕಡಿಮೆ. ಮುಂಗಾರು ಮಳೆ ಚಿತ್ರದಲ್ಲಿ ಇಲ್ಲಿಂದ ಮದುವೆಗೆ ಹೋದ ನಾಯಕನಿಗೆ ಅಲ್ಲಿ ಲವ್ ಆಗುತ್ತದೆ, ಗಾಳಿಪಟದಲ್ಲಿ ರಜಾ ಕಳೆಯಲು ಹೋದರೆ ಮೂರು ಜನಕ್ಕೂ ಅಲ್ಲೇ ನಾಯಕಿಯರು ಸಿಕ್ಕಿ ಪ್ರೀತಿ ಶುರುವಾಗುತ್ತದೆ, ಡ್ರಾಮಾ ಚಿತ್ರದಲ್ಲಿ ಊರು ಬಿಟ್ಟು ನಿರ್ಜನ ಪ್ರದೇಶದಂತಹ ಕಾಲೇಜಿನಲ್ಲಿ ಪ್ರೀತಿಯಾಗುತ್ತದೆ, ಮನಸಾರೆ ಚಿತ್ರದಲ್ಲಿ ಬೆಂಗಳೂರು ಬಿಟ್ಟು ದೂರದೂರಿನ ಹುಚ್ಚಾಸ್ಪತ್ರೆಯಲ್ಲಿ ಪ್ರೀತಿ ಸಿಗುತ್ತದೆ. ಪಂಚರಂಗಿಯಲ್ಲಿ ಅಣ್ಣನ ಮದುವೆಗೆ ಹೋದ ನಾಯಕನಿಗೆ ಪ್ರೀತಿ ಸಿಗುತ್ತದೆ. ಅಂದರೆ ಬೇರೆ ಊರಿಗೆ ಕಾಲಿಟ್ಟ ನಾಯಕನಿಗೆ ನಾಯಕಿ ಪ್ರೀತಿ ಸಿಗುತ್ತದೆ ಎನ್ನಬಹುದು.
ಹಿಂದಿಯ ರಾಕೇಶ್ ರೋಶನ್ ಚಿತ್ರಗಳು ಹೇಗೆ 'ಕ' ಅಕ್ಷರದಿಂದ ಶುರುವಾಗುತ್ತವೋ ಹಾಗೆಯೇ ಚಿತ್ರದ ಕತೆಯೂ ಹೆಚ್ಚು ಕಡಿಮೆ ಒಂದೇ ಇರುತ್ತದೆ. ಅವರ ಚಿತ್ರಗಳ ಕತೆಯ ಎಳೆ ಮೊದಲಾರ್ಧ ನಾಯಕ ಸುಮ್ಮನಿರುತ್ತಾನೆ, ಎರಡನೆಯ ಭಾಗದಲ್ಲಿ ಪ್ರತೀಕಾರ ಕೈಗೊಳ್ಳುತ್ತಾನೆ.
ಕೊಯ್ಲಾ ಚಿತ್ರದಲ್ಲಿ ಮೂಗನಾಗಿರುತ್ತಾನೆ ನಾಯಕ. ಮಧ್ಯಂತರದ ನಂತರ ರೊಚ್ಚಿಗೆಳುತ್ತಾನೆ. ಕಹೋನ ಪ್ಯಾರ್ ಹೈ ಚಿತ್ರದಲ್ಲಿ ಮೊದಲಾರ್ಧದ ನಾಯಕ ಮೆದು ಸ್ವಭಾವದವನು. ಅವನಿಗೆ ಅನ್ಯಾಯವಾಗುತ್ತದೆ. ಎರಡನೆಯ ಭಾಗದಲ್ಲಿ ಮತ್ತೆ ಪ್ರತೀಕಾರ. ಕ್ರಿಶ್, ಕೋಇ ಮಿಲ್ ಗಯಾ, ಕರಣ್ ಅರ್ಜುನ್  ಚಿತ್ರಗಳದ್ದೂ ಹಾಗೆಯೇ.ಆದರೆ ಇದೆ ಸೂತ್ರ ಎಲ್ಲಾ ನಿರ್ದೇಶಕರಿಗೂ ಅನ್ವಯಿಸುವುದಿಲ್ಲ. ನಮ್ಮ ಸೂರಿ ಪ್ರತಿ ಸಿನಿಮಾದಲ್ಲೂ ನಾಯಕನನ್ನು ಕೆಳಮಾಧ್ಯಮ ವರ್ಗದ ಹುಡುಗನಾಗಿ ಚಿತ್ರಿಸುತ್ತಾರೆ.ಮಠ ಗುರು ಪ್ರಸಾದ್ ಚಿತ್ರಗಳ ಮುಖ್ಯ ಪಾತ್ರಗಳಲ್ಲಿ ಉಂಡಾಡಿಗುಂಡರ ಸಂಖ್ಯೆ ಜಾಸ್ತಿ ಇರುತ್ತದೆ.ಸೂರಜ್ ಆರ್ ಬಾರ್ಜಾತ್ಯ ಇಡೀ ಸಿನಿಮಾ ಮನೆಯಲ್ಲೇ ಮದುವೆ ಸಂಭ್ರಮದಲ್ಲೇ ಮುಗಿದುಹೋಗುತ್ತದೆ.
ಹಾಗೆ ನೋಡಿದರೆ ಬರೀ ಒಬ್ಬ ನಿರ್ದೇಶಕರನ್ನು ಇಂತಹ ಸರಣಿಗಳು ಆವರಿಸುವುದಿಲ್ಲ. ಕೆಲವೊಮ್ಮೆ ಒಂದಷ್ಟು ಚಿತ್ರಗಳ ಯಶಸ್ಸೂ ಕೂಡ ಎಲ್ಲಾ ನಿರ್ದೇಶಕರಿಗೂ ಈ ರೀತಿ ಮಾಡುವಂತೆ ಮಾಡಿದ ಉದಾಹರಣೆಗಳಿವೆ. ಹೀಗೆ ಸ್ವಲ್ಪ ಕಾಲದ ಹಿಂದೆ ತೆಲುಗಿನ ಬಹುತೇಕ ಚಿತ್ರಗಳಲ್ಲಿ ನಡೆಯುತ್ತಿದ್ದ ಮ್,ಮದುವೆ ಮುರಿದುಬಿದ್ದು ವಧುವೋ ವರನೋ[ಹೆಚ್ಚಾಗಿ ವಧುವೇ] ನನಗಿವನು ಬೇಡ, ಅವನೇ ಬೇಕು ಎಂದು ಪ್ರಿಯಕರನ ಹತ್ತಿರಕ್ಕೆ ಹಾರಿ ಹೋಗಿದ್ದರು. ಅದುವರೆವಿಗೂ ನಾಯಕನೇನೂ ಬೇರೆಲ್ಲೋ ದೂರದಲ್ಲಿ ಇರುತ್ತಿರಲಿಲ್ಲ. ಅವಳ ಹಿಂದೆ ಮುಂದೆ ಸುತ್ತಾಡುತ್ತಿರುತ್ತಿದ್ದ. ಆದರೆ ನಾಯಕಿ ಮಾತ್ರ ಬಿಂಕ ತೋರಿಸಿ ಅಪ್ಪ ಅಮ್ಮನ ಕೈಲಿ ಮದುವೆ ಖರ್ಚು ಮಾಡಿಸಿ ಆನಂತರ ಹೀಗೆ ಹೇಳಿದಾಗ ಅಲ್ಲಿಯವರೆಗೆ ಅದನ್ನೇ ನಿರೀಕ್ಷಿಸುತ್ತಾ ಕುಳಿತಿದ್ದ ನಮಗೆ ಗೊತ್ತಿತ್ತು..ಆದರೂ ಮೊದಲೇ ಹೇಳಬೇಕಲ್ಲಮ್ಮ...ಈಗ ಎಷ್ಟೆಲ್ಲಾ ಖರ್ಚಾಯಿತು ಎಂದು ಸಿನೆಮಾದ ವೆಚ್ಚದ ಜೊತೆಗೆ ನಮ್ಮ ಟಿಕೆಟ್ ನ ವೆಚ್ಚವನ್ನು ಸೇರಿಸಿ ಉದ್ಗಾರ ತೆಗೆಯುತ್ತಿದ್ದದ್ದುಂಟು.
ಆದರೂ ಕೆಲ ನಿರ್ದೇಶಕರು ತಮ್ಮ ಅನನ್ಯ ಶೈಲಿಯಿಂದ ತಮ್ಮದೇ ಛಾಪು ಮೂಡಿಸಿರುವುದಂತೂ ನಿಜ. ಬರೀ ಶಾಟ್ ಗಳನ್ನೇ ನೋಡಿ ಅಥವಾ ಹಾಡುಗಳನ್ನು ಕೇಳಿ ಅಥವಾ ಪೋಸ್ಟರ್ ಗಮನಿಸಿ ಇದು ಇವರದೇ ಎಂದೇ ಹೇಳಿಬಿಡಬಹುದು. ಅದವರ ಸಾಮರ್ಥ್ಯ ಎನ್ನಬಹುದು.
ಒಬ್ಬರ ಮುಖ ಒಬ್ಬರಿಗೆ ಕಾಣದ ರೀತಿ ಕುಳಿತು ಗಂಭೀರವಾಗಿ ಮಾತನಾಡುತ್ತಿದ್ದಾರೆಂದರೆ ಅದು ರಾಮ ಗೋಪಾಲ್ ವರ್ಮ ಶೈಲಿ. ಇಲ್ಲವಾದರೆ ಆ ತರಹ ಕತ್ತಲಕೂಪದಲ್ಲಿ ಯಾರಾದರೂ ಯಾಕೆ ಕುಳಿತುಕೊಳ್ಳುತ್ತಾರೆ ಹೇಳಿ. ಮನೆ ಎಂದರೆ ಅರಮನೆ, ವಾಹನವೆಂದರೆ ಹೆಲಿಕ್ಯಾಪ್ಟರ್ ಅಂದರೆ ಅದು ಕರಣ್ ಜೋಹರ್ ಎನ್ನಬಹುದು. ಇನ್ನು ಮಣಿರತ್ನಂ ಎಂದರೆ ತೀರಾ ಮನರಂಜನೆ ನಿರೀಕ್ಷಿಸುವ ಹಾಗಿಲ್ಲ. ಹಾಗೆಯೇ ಅರಳು ಹುರಿದಂತೆ ಮಾತನಾಡುವ ಜಾಯಮಾನದ ಪಾತ್ರಗಳು ಅವರಲ್ಲಿ ಕಡಿಮೆಯೇ. ಮಾತು ಕಡಿಮೆ ಎಂದರೆ ಕಿಂ ಕಿ ಡಕ್. ಗ್ರಾಫಿಕ್ಸ್ ಎಂದರೆ ರೋಲಂಡ್ ಎಮ್ರಿಚ್. ಉದ್ದನೆಯ ಅವಧಿಯ ಚಿತ್ರ ಎಂದರೆ ಅಶುತೋಷ್ ಗೋವಾರಿಕರ್, ಶೃಂಗಾರಮಯ ಎಂದರೆ ಟಿಂಟ್ ಬ್ರಾಸ್ ಹೀಗೆ. ಅವರ ಒಟ್ಟಾರೆ ಚಿತ್ರಗಳಲ್ಲಿ  ಅಡಕವಾಗಿರುವ ಹೆಚ್ಚಿನ ದ್ರವ್ಯದ ಮೇಲೆ ಪಟ್ಟಿ ಮಾಡುತ್ತಾ ಸಾಗಬಹುದೇನೋ?
ನಾನಂತೂ ಒಂದು ಚಿತ್ರ ನೋಡಿದ ಅದು ಇಷ್ಟವಾದರೆ  ಆ ನಿರ್ದೇಶಕನ ಎಲ್ಲಾ ಚಿತ್ರಗಳನ್ನು ನೋಡಲು ಇಷ್ಟಪಡುತ್ತೇನೆ.ಅದು ಯಾವುದೇ ಭಾಷೆಯಾದರೂ ಸರಿ. ಯಾಕೆಂದರೆ ಪ್ರತಿ ನಿರ್ದೇಶಕನಲ್ಲೂ ಒಂದು ಗುರ್ತಿಸಬಹುದಾದ ಅಂಶವಿದ್ದೇ ಇರುತ್ತದೆ. ಅದೇ ಅವನ ಶಕ್ತಿ  ಎನ್ನಬಹುದು.
ನನ್ನ ಪ್ರಶ್ನೆ: ನಿಮಗೆ ಕಂಡ ನಿಮ್ಮ ನೆಚ್ಚಿನ ನಿರ್ದೇಶಕರ ಮಾಮೂಲಿ ಮತ್ತು ಶಕ್ತಿಶಾಲಿ ಅಂಶ ಯಾವುದು?

Sunday, February 16, 2014

ಲಾಜಿಕ್, ವಾಸ್ತವ, ಅತಿಕಲ್ಪಿತ- ಒಂದು ತಲೆ ಹರಟೆ.

ನನ್ನ ಕಳೆದ ವಾರದ ಲೇಖನ ಓದಿ ಯಾರೋ ಫೋನ್ ಮಾಡಿದ್ದರು. ನಿಮಗೆ ಯಾರದಾದರೂ ಯಶಸ್ಸು ಕಂಡರೆ ಆಗುವುದಿಲ್ಲವಾ..? ಏನಾದರೊಂದು ಹುಡುಕಿ ಅದು ಒರಿಜಿನಲ್ ಅಲ್ಲ ಎನ್ನುವ ರೀತಿ ಮಾಡುತ್ತೀರಾ..? ಈಗ 6-5=2 ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಇದು ಬೇಕಿತ್ತಾ ಎನ್ನುವ ರೀತಿ ಮಾತನಾಡಿದರು.
ಹಾಗೆ ನೋಡಿದರೆ ಈ ಚಿತ್ರದ ಪೋಸ್ಟರ್ ನೋಡಿದಾಗಲೇ ನನಗೆ ಗೊತ್ತಿತ್ತು.ಆದರೆ ನಾನೇ ಸಿನಿಮಾ ಬಿಡುಗಡೆಯಾದ ತಕ್ಷಣ ಲೇಖನ ಪ್ರಕಟಿಸಬಹುದಿತ್ತು. ಆದರೆ ಹಾಗೆ ಮಾಡಿದರೆ ಯಾಕೋ ಸರಿಯಾಗುವುದಿಲ್ಲ ಎನಿಸಿ ಒಂದಷ್ಟು ದಿನ ತಡೆದು ಆನಂತರ ಪ್ರಕಟಿಸಿದ್ದೇನೆ.
ಒಂದು ಚಿತ್ರ ಇನ್ನೊಂದು ಚಿತ್ರದ ರೀಮೇಕ್, ಸ್ಫೂರ್ತಿ ನೆರಳು ಏನಾದರೂ ಒಂದು ಆಗಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ನಾನವರಿಗೆ ಹೇಳಿದೆ. ನನ್ನ ಚಿತ್ರವೇ ಎರಡ್ಮೂರು ಚಿತ್ರಗಳ ಸ್ಫೂರ್ತಿ. ಅದರಲ್ಲಿ ನಾನೇಕೆ ದೊಡ್ಡತನ ತೋರಿಸಲಿ ಎಂದೆ. ಯಾಕೆಂದರೆ ಎಲ್ಲಾ ವಿಷಯಗಳೂ ನಮ್ಮ ಪರಿಧಿಗೆ ನಿಲುಕುವುದಿಲ್ಲ. ನಾನು ಪ್ರತಿಸಾರಿಯೂ ಕತೆ ಮಾಡುವಾಗ ಅಥವಾ ಚಿತ್ರ ನೋಡುವಾಗ ಅಲ್ಲಿನ ಪರಿಸರ ಅಥವಾ ಮಾತು ದೃಶ್ಯ ಮುಂತಾದವುಗಳನ್ನು ನೋಡಿ ಅಚ್ಚರಿ ಪಡುತ್ತೇನೆ. ಯಾಕೆಂದರೆ ಎಷ್ಟೋ ಸನ್ನಿವೇಶಗಳು ನಮಗೆ ಗೊತ್ತೇ ಇರುವುದಿಲ್ಲ. ಉದಾಹರಣೆಗೆ ಜೈಲಿನ ಒಳಭಾಗದಲ್ಲಿ ನಡೆಯುವ ಘಟನೆಗಳು ನಮ್ಮ ಎಷ್ಟು ಜನಕ್ಕೆ ಅನುಭವಕ್ಕೆ ಸಿಲುಕುತ್ತವೆ ಹೇಳಿ.. ನನಗೆ ನ್ಯಾಯಾಲಯ. ಜಡ್ಜ್ ಮುಂತಾದ ಪರಿಕಲ್ಪನೆ ಚಿಕ್ಕಂದಿನಲ್ಲೇ ಬಂದಿತ್ತು. ನಾನಿದ್ದದ್ದು ಹುಟ್ಟಿದ್ದು ಹಳ್ಳಿಯಲ್ಲಿ. ಹಾಗಿದ್ದು ಅದರ ಸ್ಪಷ್ಟ ಚಿತ್ರ ನನ್ನಲ್ಲಿ ಪಡಿ ಮೂಡಿದ್ದಕ್ಕೆ ಚಿತ್ರಗಳೇ ಕಾರಣ. ಚಿಕ್ಕ ಚಿಕ್ಕ ವಿಷಯಕ್ಕೂ ಎರಡೂ ಕಡೆ ಮೇಜು ಗುದ್ದಾಡಿಕೊಂಡು ಶರಂಪರ ವಾದ ಮಾಡುವ ಮಾತಿಗೆ ಮಾತು ಬೆಸೆಯುವ ಹಾಗೆಯೇ ನಾಯಕ ಜಡ್ಜ್ ಗೆ ಪ್ರತಿವಾದ ಮಾಡುವ ದೃಶ್ಯಗಳನ್ನು ನೋಡಿ ರೋಮಾಂಚಿತನಾಗಿದ್ದೆ. ಚಿತ್ರರಂಗಕ್ಕೆ ಬಂದ ಮೇಲೆ  ಅದೆಲ್ಲವನ್ನೂ ಒಮ್ಮೆ ಕಣ್ಣಾರೆ ನೋಡೇ ಬಿಡೋಣ ಎಂದುಕೊಂಡು ಒಂದಷ್ಟು ದಿನ ನ್ಯಾಯಾಲಯಗಳಿಗೆ ಸುತ್ತಾಡಿದೆ. ಅಲ್ಲಿ ವಾದ ವಿವಾದಗಳು ಕೇಳಿಸಲೇ ಇಲ್ಲ. ಜಡ್ಜ್ ಏನೋ ನೋಡಿ ಆರೋಪಿಯನ್ನು ಕರೆದರೆ, ಮತ್ತೆ ಪ್ರತಿವಾದಿ ಆ ಫೈಲ್ ಅನ್ನು ಮುಂದಿಟ್ಟರೆ ತಲೆ ಎತ್ತಿ ನೋಡಿ ಮುಂದಿನ ದಿನಾಂಕ ಕೊಡುತ್ತಿದ್ದರು. ಈ ಪ್ರಕ್ರಿಯೆ ಇಷ್ಟು ನೀರಸವಾ ಎನಿಸದೇ ಇರಲಿಲ್ಲ. ಆನಂತರ ನನ್ನ ಪರಿಚಿತ ವಕೀಲರನ್ನು ಈ ಬಗ್ಗೆ ವಿಚಾರಿಸಿದಾಗ ಆ ತರಹ ನಡೆಯುತ್ತವೆ. ಹಾಗಂತ ನಿಮ್ಮ ಚಿತ್ರಗಳಲ್ಲಿ ತೋರಿಸುವ ಹಾಗೆ ನಡೆಯುವುದು ತೀರಾ ಕಡಿಮೆ. ಸಾಕ್ಷಿಗಳು, ಆರೋಪಿಗಳು ಮಾತನಾಡುವುದೇ ಕಡಿಮೆ. ಒಂದಷ್ಟು ಅತ್ತು ಕರೆದು ಮಾಡುತ್ತಾರೆ. ಯಾಕೆಂದರೆ ಎಲ್ಲವೂ ಸಾಕ್ಷಿಯ ಮೇಲೆ ನಿಂತಿರುತ್ತದೆ ಎಂದರು.
ಹಾಗೆಯೇ ನಮ್ಮ ಚಿತ್ರಗಳಲ್ಲಿ ಉದ್ದನೆಯ ಮಚ್ಚನ್ನು ,ಲಾಂಗನ್ನು ಬೆನ್ನಹಿಂದೆ ಇಟ್ಟುಕೊಂಡು ಎದುರಾಳಿಯ ಮುಂದೆ ನಿಂತಾಗ ನಾಯಕ ಸ್ಟೈಲ್ ಆಗಿ ಅದನ್ನು ಹೊರತೆಗೆಯುವ ದೃಶ್ಯ ರೋಮಾಂಚಕ ಎನ್ನಬಹುದು. ಯಾಕೆಂದರೆ ಅದಕ್ಕೆ ಹೆಚ್ಚು ಶಿಳ್ಳೆ ಬೀಳುವುದು. ಆದರೆ ಅಷ್ಟುದ್ದದ ಲಾಂಗನ್ನು ಅದೇಗೆ ಬೆನ್ನಹಿಂದೆ ಇಡುವುದು ಎನ್ನುವುದೇ ನನ್ನ ಯಕ್ಷ ಪ್ರಶ್ನೆ. ಹೇಗೋ ನಿಧಾನಕ್ಕೆ ಇಡಬಹುದೇನೋ. ಆದರೆ ಬೆನ್ನ ಬಗ್ಗಿಸದೆಯೇ ಓಡಾಡುವುದು ಹೇಗೆ. ಸೊಂಟಕ್ಕೆ ಮೊದಲು ರಾಜರು ಖಡ್ಗ ಇಟ್ಟುಕೊಳ್ಳುತ್ತಿದ್ದರು. ಈಗಲೂ ಪಿಸ್ತೂಲ್ ಸೊಂಟದಲ್ಲಿರುತ್ತದೆ. ಆದರೆ ದರ್ಶನ್ ಅಂತಹ ಎತ್ತರದ ವ್ಯಕ್ತಿ ಹೇಗೋ ಬೆನ್ನಹಿಂದೆ ಜಾಗ ಹೊಂದಿಸಬಹುದೇನೋ .ಆದರೆ ಉಳಿದವರು ಹೇಗೆ? ಎದುರಾಳಿ ಎದುರಿಗೆ ನಿಂತಾಗ ನಾಜೂಕಾಗಿ ತೆಗೆಯಬೇಕು. ಹೆಚ್ಚು ಕಡಿಮೆಯಾದರೆ ಸೊಂಟದಿಂದ ಬೆನ್ನವರೆಗೆ ಅವರೇ ಗಾಯ ಮಾಡಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ. ಅದಕ್ಕೂ ನಾನು ಸುಮ್ಮನೆ ಒಂದಷ್ಟು ಜನರನ್ನು ಕೇಳಿದ್ದೆ. ಅದಕ್ಕೆ ಇಲ್ಲಾರೀ ವಾಹನಗಳ ಸೀಟಿನ ಕೆಳಗೆ, ಒಳಗೆ ಅಡಗಿಸಿಡುತ್ತೇವೆ..ತೀರಾ ಬೆನ್ನಹಿಂದೆ ಇಟ್ಟುಕೊಂಡು ಹೊಡೆದಾಟದ ಸಮಯದಲ್ಲಿ ಅವನ ಮುಂದೆ ತೆಗೆಯಲು ಸಮಯವಾದರೂ ಎಲ್ಲಿರುತ್ತದೆ ಎಂದರು.ಆದರೆ ಅದನ್ನೇ ಹಾಗೆ ತೋರಿಸಿದರೆ ನೀರಸ ಎನಿಸುವ ಸಂಭವ ಇದ್ದೇ ಇರುತ್ತದೆ..
ಹಾಗಂತ ಎಲ್ಲವನ್ನೂ ವಾಸ್ತವದ ನೆಲೆಗಟ್ಟಿನಲ್ಲಿ ತಾರ್ಕಿಕ ಅಂಶಗಳ ಜೊತೆ ನಿರೂಪಿಸುತ್ತೇವೆ ಎನ್ನುವುದು ಅಸಾಧ್ಯದ ಮಾತು.ಏಕೆಂದರೆ ಒಂದು ಮನರಂಜನೀಯ ಸಿನಿಮಾಕ್ಕೆ ಅದರದೇ ಆದ ಇತಿಮಿತಿ ಇದ್ದೇ ಇರುತ್ತದೆ. ಎಲ್ಲವನ್ನೂ ತಾರ್ಕಿಕವಾಗಿ ತೋರಿಸುತ್ತಾ ಪ್ರತಿಯೊಂದಕ್ಕೂ ಕಾರಣ ಕೊಡುತ್ತಾ ಸಾಗಿದರೆ ಚಿತ್ರವೊಂದು ಸಾಕ್ಷ್ಯಚಿತ್ರವಾಗಿ ಬೋರ್ ಆಗಿಬಿಡುವ ಸಾಧ್ಯತೆ ಇದ್ದೇ ಇದೆ.
ಆದರೂ ಕೆಲವು ಚಿತ್ರಗಳಲ್ಲಿನ ಕೆಲವೇ ಕೆಲವು ವಿಷಯಗಳನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಅಥವಾ ಆ ಚಿತ್ರ ಮನಸ್ಸಿಗೆ ತಟ್ಟುವುದೂ ಇಲ್ಲ. ಯಾಕೆ ಹೀಗೆ ಎಂದರೆ ಅಲ್ಲಿರುವ ವಿಷಯವನ್ನು ನಿರ್ದೇಶಕ/ಬರಹಗಾರ ಕನ್ವಿನ್ಸ್ ಮಾಡಲು ಸೋತಿರುತ್ತಾನೆ. ಪರದೆಯ ಮೇಲಿನ ದೃಶ್ಯ ಏನೇ ಇರಲಿ ಅದನ್ನು ನಂಬಿಸುವ ಕಲೆ ನಿರ್ದೇಶಕನಿಗೆ ಬಿಟ್ಟದ್ದು. ಆಗ ಹಿಂದೆ ಮುಂದೆ ಯೋಚಿಸದೆ ಪ್ರೇಕ್ಷಕ ಸಿನಿಮಾ ನೋಡುತ್ತಾ ಕುಳಿತುಬಿಡುತ್ತಾನೆ. ಯಾವಾಗ ತೆರೆಯ ಮೇಲಿನ ದೃಶ್ಯ ನಮ್ಮೊಳಗೇ ಸೇರುವುದಿಲ್ಲವೋ, ಅಥವಾ ನಾವು ನಂಬುವುದಕ್ಕೆ ಆಗುವುದಿಲ್ಲವೋ ಗಮನ ಬೇರೆಡೆಗೆ ಸರಿದು ಚಿತ್ರ ಬೋರ್ ಆಗಲು ಪ್ರಾರಂಭಿಸಿ ಅದರಲ್ಲಿ ನೂರು ತಪ್ಪು ಕಾಣಸಿಗುತ್ತದೆ.
ದೆವ್ವ ಭೂತದ ಚಿತ್ರಗಳಲ್ಲಿ ಅದೇಕೆ ಮಧ್ಯರಾತ್ರಿಯಲ್ಲಿ ಒಬ್ಬೊಬ್ಬರೇ ಎದ್ದು ಹೊರಗೆ ಹೋಗುತ್ತಾರೆ, ಅಪ್ಪು ಚಿತ್ರದಲ್ಲಿ ಮಧ್ಯರಾತ್ರಿ ಮೀರಿದ ಸಮಯದಲ್ಲಿ ನಾಯಕಿ ಏಕೆ ಕಾರನ್ನು ಒಬ್ಬಳೇ ಚಾಲಿಸುತ್ತಾ ಬರುತ್ತಾಳೆ, ರಾಜಾಹುಲಿ ಚಿತ್ರದಲ್ಲಿ ನಾಯಕಿ ದಿನಂಪ್ರತಿ ಒಂದು ದಿನವೂ ಮಿಸ್ ಆಗದಂತೆ ಅದೇ ಸೀಟಿನಲ್ಲಿ ಹೇಗೆ ಕುಳಿತುಕೊಳ್ಳುತ್ತಾಳೆ, ಅಂಬಾನಿ, ಟಾಟಾ ನಂದನ್ ನಿಲಕೆನಿ ರಸ್ತೆಯಲ್ಲಿ ನಡೆದರೂ ಗುರುತಿಸಲಾಗದ ಜನರ ಮಧ್ಯ ಎರಡೇ ವರ್ಷದಲ್ಲಿ ವ್ಯವಹಾರದಲ್ಲಿ ಹಣ ಮಾಡುವ ಗೂಗ್ಲಿ  ಚಿತ್ರದ ನಾಯಕ ಅದೇಗೆ ಸೆಲೆಬ್ರಿಟಿ ತರ ಜನರಿಂದ ಸುತ್ತುವರೆಯುತ್ತಾನೆ,   ಅಮ್ಮ ಸಿಕ್ಕರೆ ನನ್ನ ಅಡ್ರೆಸ್ ಕೊಡು ಎನ್ನುವ ಜೋಗಿ ಚಿತ್ರದ ನಾಯಕ ಮೊಬೈಲ್ ಯಾಕೆ ಬಳಸುವುದಿಲ್ಲ, ಹಳ್ಳಿಯಲ್ಲಿ ಗಟ್ಟುಮುಟ್ಟಾದ ರೋಗ ರುಜಿನವಿಲ್ಲದ ಮುದುಕಿ ಅದೇಗೆ ಒಂದೇ ರಾತ್ರಿಯ ಮಳೆಗೆ ಸತ್ತೆ ಹೋಗುತ್ತಾಳೆ, ..ಹೀಗೆ ಒಂದಷ್ಟು ಪಟ್ಟಿ ಮಾಡಬಹುದು. ಆದರೆ ಇವೆಲ್ಲಾ ಯಶಸ್ವೀ ಚಿತ್ರಗಳು ಮತ್ತು ಪ್ರೇಕ್ಷಕ ಇದಾವುದನ್ನೂ ತಲೆಕೆಡಿಸಿಕೊಳ್ಳದೆ ಒಟ್ಟಾರೆ ಭಾವವನ್ನು ಪರಿಗಣಿಸುತ್ತಾನೆ ಎಂಬುದು ನನ್ನ ಅನಿಸಿಕೆ.
ನೀವೇನಂತೀರಿ..?