Friday, October 9, 2015

ಮಹಾಭಾರತ ನಡೆದದ್ದು ನಿಜವೇ? ಭಾಗ-1

ಕಿ.ಪೂ. ಅಕ್ಟೋಬರ್ 16, 5561.
ಅನಾಮತ್ತು ಎರಡು ವರ್ಷಗಳ ನನ್ನ ರಜೆ ಮುಗಿದಿದೆ. ಚಿತ್ರರಂಗದಿಂದ ಸ್ವಲ್ಪ ಬೇರೆಕಡೆ ಜೀವನೋಪಾಯಕ್ಕಾಗಿ ಹೊರಳಿಕೊಂಡಿದ್ದ ನಾನು ಮತ್ತೆ ಚಿತ್ರರಂಗಕ್ಕೆ ಧಾವಿಸಿದ್ದೇನೆ. ಈ ಸಾರಿ ಮೊದಲಿನ ತಪ್ಪುಗಳ ಬಗೆಗಿನ ಅರಿವಿದೆ. ಮೂರ್ಖತನದ ಸ್ಪಷ್ಟ ಚಿತ್ರಣವಿದೆ. ಸಾಧ್ಯವಾದಷ್ಟು ಕಡಿಮೆ ತಪ್ಪುಗಳನ್ನು ಮಾಡುತ್ತಾ ಈ ಸಾರಿ
ಸಿನಿಮಾ ಮಾಡಬೇಕೆಂದು ನಿರ್ಧರಿಸಿದ್ದೇನೆ.
ಅದಕ್ಕೆ ಸಂಬಂಧಿಸಿದಂತೆ ನಾನು ಆಯ್ದುಕೊಂಡ ಕತೆಗೆ ಸ್ವಲ್ಪ ಮಹಾಭಾರತ ಹೋಲುತ್ತದೆ. ಪ್ರತಿ ಕತೆಯಲ್ಲಿಯೂ ಮಹಾಭಾರತದ ತುಣುಕು ಒಂದು ನನಗಂತೂ ಕಾಣಸಿಗುತ್ತದೆ. ಆದರೆ ನನ್ನದೇ ಚಿತ್ರದಲ್ಲಿ ಅದರ ಅಂಶ ಸ್ವಲ್ಪ ಜಾಸ್ತಿಯೇ ಇದೆ ಎನ್ನಬಹುದು. ಇದೊಂದು ಪ್ರೇಮಕತೆ, ದುಷ್ಟ ಸಂಹಾರದ ಕತೆ, ಧರ್ಮ ಯುದ್ಧದ ಕತೆ ಹೀಗೆ ನೀವು ಏನು ಬೇಕಾದರೂ ಹೇಳಬಹುದು. ನಾನು ಯಾವುದೇ ಶೈಲಿಯ ಕತೆ ಮಾಡಿದರೂ ಒಮ್ಮೆ ಕತೆ ಮಾಡಿದ ಮೇಲೆ ಅಥವಾ ಅದಕ್ಕೂ ಮುನ್ನ ಆ ಸಂಬಂಧಿ ಒಂದಷ್ಟು ಚರ್ಚೆ ಅಧ್ಯಯನ ಮಾಡುತ್ತೇನೆ. ಇನ್ನು ಮಹಾಭಾರತ ಎಂದಾಗ ಅದರ ಬಗ್ಗೆ ಅಧ್ಯಯನ ಮಾಡಲು ನನಗಂತೂ ಈ ಜನ್ಮ ಸಾಲುವುದಿಲ್ಲ ಎನಿಸಿಬಿಡುತ್ತದೆ.
ಮೊದಲೆಲ್ಲಾ ಮಹಾಭಾರತ ಎಂದರೆ ಅದೊಂದು ರೋಚಕ ಕಥಾನಕದ ಸಂಕಲನ ಎನಿಸುತ್ತಿತ್ತು. ಅದರಲ್ಲಿರುವ ಮಸಾಲೆ ಅಂಶಕ್ಕೆ ಲೆಕ್ಕವೆಲ್ಲಿದೆ? ಒಬ್ಬಳು ಐವರನ್ನು ಪತಿ ಎಂದು ಒಪ್ಪಿಕೊಳ್ಳುತ್ತಾಳೆ, ನಟ್ಟ ನಡುವಣ ಸಭೆಯಲ್ಲಿ ಹೆಂಗಸಿನ ಸೀರೆ ಸೆಳೆಯಲಾಗುತ್ತದೆ, ಅಣ್ಣ ತಮ್ಮಂದಿರು ಜೂಜಾಡಿ ಸೋಲುತ್ತಾರೆ,  ಅರಗಿನ ಮನೆಗೆ ಬೆಂಕಿ ಬೀಳುತ್ತದೆ.. ಒಂದೇ ಎರಡೇ ತಂತ್ರ, ಕುತಂತ್ರ, ಮಂತ್ರ, ರೋಚಕತೆ, ಪ್ರೀತಿ ,ಪ್ರಣಯ, ಸಾಹಸ, ಅನ್ಯಾಯ, ನ್ಯಾಯ, ಧರ್ಮ, ಅಧರ್ಮ.. ಹಿಂಸೆ, ಅಹಿಂಸೆ, .. ಸದಾಚಾರ, ಅನಾಚಾರ, ಅತ್ಯಾಚಾರ.. ಅಬ್ಬಬ್ಬಾ ಏನೇನಿದೆ ಅದರಲ್ಲಿ. ಮೊದಲೆಲ್ಲಾ ನಮ್ಮಪ್ಪ ನಮ್ಮನ್ನು ಕೂರಿಸಿಕೊಂಡು ದಿನಾ ರಾತ್ರಿ ಊಟದ ನಂತರ ವಿದ್ಯುತ ಇಲ್ಲದಾದಾಗ ಮಹಾಭಾರತದ ಒಂದೊಂದೇ ಅಧ್ಯಾಯವನ್ನು ಹೇಳುತ್ತಿದ್ದಾಗ ಮೈಯೆಲ್ಲಾ ರೋಮಾಂಚನ ಉಂಟಾಗುತ್ತಿತ್ತು. ಆನಂತರ ನಾನೇ ಒಂದಷ್ಟು ಓದತೊಡಗಿದೆ. ಹೊಸ ಹಳೆಯ ವಿಮರ್ಶಾತ್ಮಕ, ವಿಡಂಬನಾತ್ಮಕ, ವಿಶ್ಲೇಷಣಾತ್ಮಕ ಬರಹ ಕಾದಂಬರಿ ಪುಸ್ತಕಗಳನ್ನು ಆಗಾಗ ಸಿಕ್ಕ ಸಿಕ್ಕಲ್ಲಿ ಓದುತ್ತಿದ್ದೆ. ಹಿರಿಯರು ಸಿಕ್ಕರೆ ಕೇಳುತ್ತಿದ್ದೆ.
ನನಗೆ ಆವಾಗಲೆಲ್ಲಾ ಏಳುತ್ತಿದ್ದ ಪ್ರಶ್ನೆ ಒಂದೇ..
ಮಹಾಭಾರತ ನಿಜವಾಗಿಯೂ ನಡೆದ ಕತೆಯೇ? ಅಥವಾ ಕಪೋಲ ಕಲ್ಪಿತವೆ?
ಕತೆಯ ಹೂರಣ ನೋಡಿದರೆ ಅದು ಕಲ್ಪನೆ ಎನ್ನಲೂಬಹುದು, ಹಾಗೆಯೇ ವಾಸ್ತವ ಎನ್ನಲೂ ಬಹುದು. ಹಾಗಾದರೆ ಬಕಾಸುರ ಇದ್ದಾನೆ? ಕೃಷ್ಣನ ಚಕ್ರ ತಿರುಗುತ್ತಿತ್ತೆ..? ಹೀಗೆ ಸುಮ್ಮನ್ನೇ ನನ್ನನ್ನೇ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದೆ. ಆದರೆ ಅದರ ಬಗ್ಗೆ ಹೆಚ್ಚು ಅಧ್ಯಯನ ಮಾಡಲು ಹೋಗಿರಲಿಲ್ಲ. 
ಮೊನ್ನೆ ಮೊನ್ನೆ ನಮ್ಮ ಸಿನಿಮಾಕ್ಕಾಗಿ ಮಹಾಭಾರತದ ಕುರಿತಾದ ಒಂದಷ್ಟು ಅಧ್ಯಯನ ಕೈಗೊಂಡೆ. ಕೆಲವು ಅಚ್ಚರಿಗಳು ನನಗೆ ಎದುರಾದವು.ಹಾಗಂತ ನಾನೇನೋ ಸಂಶೋಧನೆ ಮಾಡಲಿಲ್ಲ, ಯಾರ್ಯಾರೋ ಬರೆದಿದ್ದ ಪುಸ್ತಕಗಳನ್ನು ಓದುತ್ತಾ ಓದುತ್ತಾ ಟಿಪ್ಪಣಿ ಹಾಕಿಕೊಂಡೆ ನೋಡಿ.
ಮಹಾಭಾರತ ನಡೆದದ್ದು ನಿಜವೇ ಎನಿಸುವ ಅಂಶ ಒಂದು ಪುಸ್ತಕದಲ್ಲಿ ದೊರಕಿತು.
ಕಿ.ಪೂ. ಅಕ್ಟೋಬರ್ 16, 5561 ರಂದು ಮಹಾಭಾರತದ ಕುರುಕ್ಷೇತ್ರ ಯುದ್ಧ ನಡೆದಿದೆ. ಅಂದರೆ ಸರಿ ಸುಮಾರು ಮಹಾಭಾರತ ಯುದ್ಧ ಜರುಗಿ ಈವತ್ತಿಗೆ 7575 ವರ್ಷಗಳಾಗಿವೆ. 
ಅಷ್ಟು ಕರಾರುವಕ್ಕಾಗಿ ಅದೇಗೆ ಅದ್ಯಾವ ಆಧಾರದ ಮೇಲೆ ಹೇಳಲು ಸಾಧ್ಯ ಎನ್ನುವುದು ಮೊದಲ ಪ್ರಶ್ನೆ. ಪುರಾಣ ಪುಸ್ತಕ ಅಥವಾ ಏನೋ.. ಅವುಗಳ ಪ್ರಕಾರ ನಮ್ಮದು ಕಲಿಯುಗದ ಮೊದಲ ಪಾದ. ಮಹಾಭಾರತ ಜರುಗಿದ್ದು ದ್ವಾಪರಯುಗದಲ್ಲಿ. ಅಂದರೆ ಕಲಿಯುಗ ಶುರುವಾದದ್ದು ಯಾವಾಗ ಎನ್ನುವುದು ಪ್ರಶ್ನೆ. ನಮ್ಮ ಪುರಾಣ ಪುಸ್ತಕಗಳ ಪ್ರಕಾರ ನಾಲ್ಕು ಲಕ್ಷ ಮೂವತ್ತೆರೆಡು ವರ್ಷಗಳಿರುವ ಕಲಿಯುಗದಲ್ಲಿ ಈಗ ಜರುಗಿರುವುದು ಕೇವಲ ಐದು ವರ್ಷಗಳು ಅಂದುಕೊಳ್ಳೋಣ. ಅಂದರೆ ಊಹಿಸಿ.. 
ಇರಲಿ.
ಮೊದಲಿಗೆ ಈ ಮಹಾಭಾರತ ಯುದ್ಧದ ದಿನಾಂಕವನ್ನು ಪತ್ತೆ ಮಾಡಿದ್ದು ಯಾವುದರ ಆಧಾರದ ಮೇಲೆ ಎಂಬುದು ಪ್ರಶ್ನೆ. ಈ ವೈಜ್ಞಾನಿಕ ಮಾರ್ಗದ ಮೂಲಕ ಕರಾರುವಕ್ಕಾದ ಮಹಾಭಾರತ ಯುದ್ಧದ ದಿನಾಂಕವನ್ನು ಸಂಶೋಧಕರು ಮೇಧಾವಿಗಳು ಪಡೆಯಲು ಹಲವಾರು ಮಾರ್ಗದ ಮೊರೆ ಹೋಗಿದ್ದಾರೆ. ಜ್ಯೋತಿಷ್ಯ ಶಾಸ್ತ್ರ, ಜೀನಿಯಾಲಜಿ, ಆ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡಿದ ವಿದೇಶಿ ಯಾತ್ರಿಕರ ಬರಹಗಳು, ಖಗೋಳ ವಿಜ್ಞಾನ, ಶಾಸನಗಳು, ಭಾಷಾಶಾಸ್ತ್ರ, ಪುರಾತತ್ವ ಶಾಸ್ತ್ರ, ಪುರಾಣ ಕತೆಗಳು, ವೇದಗಳು ಹೀಗೆ ಹತ್ತು ಹಲವು ವಿಷಯಗಳನ್ನು ಅಧ್ಯಯನ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ವ್ಯಾಸ ರಚಿಸಿದ ಮಹಾಭಾರತ ಮುಖ್ಯವಾದದ್ದು .
ಇರಲಿ ಓದುತ್ತಾ ಓದುತ್ತಾ ನಾನೂ ಲೆಕ್ಕ ಹಾಕಲು ಕುಳಿತುಕೊಂಡೆ. ಹಾಗೆಯೇ ಗೊತ್ತಿರದ ವಿಷಯಗಳನ್ನು ಗೂಗಲ್ ಮಾಡುತ್ತಾ ಸಾಗಿದೆ. ಯಾಕೋ ಒಂದು ಜನ್ಮಕ್ಕೆ ಮುಗಿಯದ ಕೆಲಸವಲ್ಲ ಎನಿಸಿತು. ಎನಿವೇ ನಾನು ಓದಿದ್ದನ್ನು ನನಗನಿಸಿದ್ದನ್ನು ಬರೆದಿಡೋಣ ಎನಿಸಿ ಬರೆದದ್ದು ಇದು.
ದಿ ಸೈಂಟಿಫಿಕ್ ಡೇಟಿಂಗ್ ಆಫ್ ಮಹಾಭಾರತ ವಾರ್ ಎನ್ನುವ ಪುಸ್ತಕವದು. ಒಮ್ಮೆ ಸಿಕ್ಕರೆ ನೀವು ಓದಿ.
ಈಗ ಸಿನಿಮಾದ ಬರವಣಿಗೆ ಕೆಲಸ ಮುಕ್ಕಾಲು ಪಾಲು ಮುಗಿದಿದೆ. ಇನ್ನೇನಿದ್ದರೂ ಚಿತ್ರೀಕರಣಕ್ಕೆ ಬೇಕಾದ ಜಾಗಗಳ ಹುಡುಕಾಟ, ಕಲಾವಿದರ ಹುಡುಕಾಟ. ಈ ಸಿನಿಮಾದಂತೆಯೇ ಈ ಪುಸ್ತಕವೂ ನನ್ನನ್ನು ಕಾಡುತ್ತಿರುವುದು ವಿಪರ್ಯಾಸ.
[ಮುಂದುವರೆಯುತ್ತದೆ]

Thursday, October 8, 2015

ಮೋನಿಕಾ ಮಿಸ್ಸಿಂಗ್ ಗೆ ಜಾಗವಿದೆ..?

ಇದು ಈವತ್ತಿನ ವಿಷಯವಲ್ಲ... ವರ್ಷಗಟ್ಟಲೆ ಹಳೆಯದು. ಜಾಗತಿಕ ಚಿತ್ರಗಳನ್ನು ಅದ್ಯಯನ ಮಾಡಿ ಅವುಗಳಲ್ಲಿನ ನೋಡಲೇಬೇಕಾದ ಚಿತ್ರಗಳನ್ನು ಪಟ್ಟಿ ಮಾಡಿ ಪುಸ್ತಕವೊಂದನ್ನು ರಚಿಸಿದ್ದೆ. ಅದನ್ನು ಪ್ರಕಟಿಸುವ ಉದ್ದೇಶ ಆವಾಗ ಇರಲಿಲ್ಲವಾದರೂ ಒಂದು ಸಿನಿಮಾ ನಿಂತು ಹೋಗಿ ಹಣಕಾಸಿನ ತೊಂದರೆಯಿಂದಾಗಿ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಸಮಯವದು. ಕೆಲಸ ಮುಗಿದ ನಂತರ ಸಿನಿಮಾ ನೋಡುವುದು ಮತ್ತದರ ಬಗ್ಗೆ ನನ್ನದೇ ಗೆಳೆಯರ ಜೊತೆಗೆ ಚರ್ಚಿಸುವುದು ಇದಿಷ್ಟೇ ಕೆಲಸವಿತ್ತು ಆವಾಗ. ಸಿನಿಮಾ ಗೆಳೆಯರನ್ನು ಮೀಟ್ ಮಾಡುತ್ತಿರಲಿಲ್ಲ. ಮತ್ತೆಲ್ಲಿ ಸಿನಿಮಾದ ಕಡೆಗೆ ಮನಸ್ಸು ಹೊರಳಿಬಿಡುತ್ತದೋ ಎರಡು ವರ್ಷ ಸಿನಿಮಾ ಜಗತ್ತು ಬೇಡ ಎಂದು ಕರಾರುವಕ್ಕಾಗಿ ನಿರ್ಧರಿಸಿದ್ದ ದಿನಗಳಾಗಿತ್ತು ಅವು. ಆ ಸಂದರ್ಭದಲ್ಲಿ ಗೆಳೆಯ ಕೃಷ್ಣನ ಜೊತೆಗೆ ಮಾತನಾಡುತ್ತಿದ್ದಾಗ ಆತ ಆಗಲೇ ಒಂದು ಪುಸ್ತಕವನ್ನು ಪ್ರಕಟಿಸಿದ್ದ. ಸರಿ ನಿನ್ನ ಪುಸ್ತಕ ನಾನೇ ಪ್ರಕಟಿಸುತ್ತೇನೆ ಕೊಡು ಎಂದ. ಸಧ್ಯಕ್ಕೆ ಬೇಡ ಬಿಡು ಮಾರಾಯ ಎಂದೇ. ಹಾಗಾದರೆ ಒಂದು ಕೆಲಸ ಮಾಡು, ಕನ್ನಡದಲ್ಲಿ ನೋಡಲೇಬೇಕಾದ  ನೂರೊಂದು ಕನ್ನಡ ಚಿತ್ರಗಳು ಎನ್ನುವ ಪುಸ್ತಕ ಇಲ್ಲ, ಪರಭಾಷೆಯ ಅದರಲ್ಲೋಒ ಜಾಗತಿಕ ಮಟ್ಟದಲ್ಲಿ ಆಯಾ ಭಾಷೆಯಲ್ಲಿ ಸುಮಾರಷ್ಟು ಪುಸ್ತಕಗಳಿವೆ, ಕನ್ನಡದಲ್ಲಿ ಆ ಪ್ರಯತ್ನ ಯಾರೂ ಮಾಡಿಲ್ಲ, ಹೇಗೋ ಸಿನೆಮಾದಿಂದ ಸ್ವಲ್ಪ ದೂರ ಇದ್ದೀಯ, ಯಾಕೆ ಆ ಪುಸ್ತಕ ಬರೆಯಬಾರದು ಎಂದ. ನಾನು ಹೂಂ ಎಂದೆ.
ಅಷ್ಟೇ. ಆ ಪುಸ್ತಕ ನನಗೆ ಸರಿ ಸುಮಾರು ಒಂಭತ್ತು ತಿಂಗಳುಗಳ ಸಮಯವನ್ನು ಎಡೆಬಿಡದೆ ತೆಗೆದುಕೊಂಡು ಬಿಟ್ಟಿತ್ತು. ಸಿನಿಮಾ ನೋಡುವ ಚರ್ಚಿಸುವ ಮತ್ತದರ ತುಲನೆ ಮಾಡುವ ನಮ್ಮದೇ ಮಾನದಂಡಗಳಲ್ಲಿ ಅದನ್ನು ವಿಂಗಡಿಸುವ ಹೀಗೆ ಅದರ ಕೆಲಸಗಳನ್ನು ನನ್ನ ನಿದ್ರೆ ಕಸಿದಿದ್ದವು. ಎಲ್ಲಾ ಮುಗಿಸಿ ಪುಸ್ತಕ ಬರೆದು ಮುಗಿಸಿದಾಗ ದೊಡ್ಡ ನಿಟ್ಟುಸಿರು ಬಿಟ್ಟಿದ್ದಾಗಿತ್ತು.
ಆಮೇಲೆ ಅದನ್ನು ಪ್ರಕಟಿಸಲಾಯಿತು. ಓದಿದವರು ಚೆನ್ನಾಗಿದೆ ಎಂದರು. ಒಂದಷ್ಟು ಪತ್ರಿಕೆಗಳಲ್ಲೂ ಅದರ ಬಗ್ಗೆ ಬರೆಯಲಾಯಿತು. ಹಾಗೆಯೇ ಅದೊಂದು ದಿನ ನಿಮ್ಮ ಪುಸ್ತಕ ಹಿಡಿದುಕೊಂಡು ನಮ್ಮ ಕಚೇರಿಗೆ ಬನ್ನಿ ಎಂದರು ಸುದ್ದಿ ವಾಹಿನಿಯವರು. ನಾನು ಖುಷಿಯಾಗಿ ಹೋದೆ. ಪುಸ್ತಕದ ಬಗ್ಗೆ ಮಾತನಾಡಿಸಿ, ಎಂಥ ಅದ್ಭುತವಾದ ಪುಸ್ತಕ ಬರೆದಿದ್ದೀರಿ, ಕನ್ನಡದಲ್ಲಿ ಈ ಸಾಧನೆಯನ್ನು ಬೇರೆ ಯಾರೂ ಮಾಡಿಲ್ಲ, ಒಂದು ಚಿಕ್ಕ ಬೈಟ್ ಕೊಡಿ ಎಂದರು, ಕೊಟ್ಟೆ. ಸಾರ್ ಇದನ್ನು ಪ್ರಸರಿಸುವ ದಿನ ಸಮಯ ನನಗೆ ಹೇಳಿ, ನಾನು ಒಂದಷ್ಟು ಜನರಿಗೆ ಹೇಳುತ್ತೇನೆ, ಪುಸ್ತಕದ ಮಾರಾಟಕ್ಕೆ ಸಹಾಯವಾಗುತ್ತದೆ ಎಂದೆ, ಹೇಯ್ ಖಂಡಿತ ಸಾರ್, ನೀವು ಇಷ್ಟು ಕೆಲಸ ಮಾಡಿದ್ದೀರಿ.. ನಾವು ಇಷ್ಟು ಮಾಡಲಾರೆವಾ? ಸರಿಯಾದ ಸಮಯದಲ್ಲಿ ಹಾಕುತ್ತೇವೆ.. ಎಂದರು. ಖುಷಿಯಾಗಿ ಪ್ರಕಾಶಕರಿಗೆ ಅಲ್ಲೇ ಕರೆ ಮಾಡಿ ವಿಷಯ ತಿಳಿಸಿ, ಮನೆಗೂ ಬಂದು ಹೇಳಿ ಮತ್ತೆ ಕೆಲಸದಲ್ಲಿ ತೊಡಗಿಸಿಕೊಂಡೆ.
ಒಂದು ವಾರವಾಯಿತು. ಏಕೋ ಪ್ರಸಾರವಾಗಲಿಲ್ಲ. ಫೋನ್ ಮಾಡಿ ಕೇಳುವುದಾದರೂ ಏಕೆ ಎಂದುಕೊಂಡೆ. ಇರಲಿ ಎಂದು ಒಂದು ಫೋನ್ ಒಗಾಯಿಸಿದೆ. ತಕ್ಷಣ ಪ್ರತಿಕ್ರಿಯಿಸಿದ ಆ ಮಂದಿ ಈ ವಾರದಲ್ಲಿ ಪ್ರಸಾರ ಮಾಡುತ್ತೇವೆ ಎಂದರು. ಸಿನಿಮಾ ಕಾರ್ಯಕ್ರಮದಲ್ಲಿಯೇ ಪ್ರಕಟಿಸುತ್ತೇವೆ, ಅಷ್ಟು ಮಾಡಿರೋಅವರಿಗೆ ನಾವಿಷ್ಟು ಮಾಡಲು ಸಾಧ್ಯವಿಲ್ಲವೇ ಎಂದರು. 
ಮತ್ತೆ ಹತ್ತು ಹದಿನೈದು ದಿನ ಕಳೆದವು. ಪ್ರಸಾರವಾಗಲಿಲ್ಲ. ಮತ್ತೆ ಮತ್ತೆ ಕೇಳಿದರೆ ಚನ್ನವೆ? ಇರಲಿ ಎಂದು ಫೋನ್ ಹಾಕಿದೆ. ಸಾರ್.. ಅದನ್ನು ಪ್ರಸಾರಮಾಡಬೇಕು, ಆದರೆ ಸರಿಯಾದ ಸ್ಲಾಟ್ ಸಿಗುತ್ತಿಲ್ಲ, ಸಿಕ್ಕ ತಕ್ಷಣ ಖಂಡಿತ ಪ್ರಸಾರ ಮಾಡುತ್ತೇವೆ, ಆ ಸಮಯದಲ್ಲಿ ನಾವೇ ನಿಮಗೆ ಕರೆ ಮಾಡಿ ಹೇಳುತ್ತೇವೆ ಎಂದರು. ನಾನು ಆಯಿತು ಎಂದೆ.
ವರ್ಷಗಳೇ ಕಳೆದುಹೋಯಿತು.
ಅವರಿಗೆ ಸಮಯ ಸಿಗಲಿಲ್ಲ, ಹಾಗಾಗಿ ಪ್ರಸಾರ ಮಾಡಲು ಆಗಲಿಲ್ಲ.
ನಾನು ಮಾಧ್ಯಮದಲ್ಲಿ ಒಂದಷ್ಟು ದಿನ ಕೆಲಸ ಮಾಡಿದವನೇ/. ಟಿಆರ್ಪಿ ಬೆನ್ನು ಬಿದ್ದಾಗ ಯಾವುದು ಹೆಚ್ಚು ವಿವಾದ ಹುಟ್ಟಿಸುತ್ತದೆ ಎಂಬುದರ ಮೇಲಷ್ಟೇ ಗಮನ ಇರುತ್ತದೆ. ಅದಾದ ನಂತರ ಹುಚ್ಚ ವೆಂಕಟ್ ಥೂ ಕನ್ನಡ ನನ್ನ ಎಕ್ಕಡ ಎಂದರು, ತಕ್ಷಣಕ್ಕೆ ಅತನದೂ ಟಿವಿಯಲ್ಲಿ ನೇರ ಪ್ರಸಾರದ ಜೊತೆಗೆ ವಿಧವಿಧವಾಗಿ ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ಆಯಾಮ ಪಡೆದು ದಿನಗಟ್ಟಲೆ ವಾರಗಟ್ಟಲೆ  ಪ್ರಸಾರವಾಯಿತು, ಆ ದಿನದಿಂದ ಕಾರ್ಯಕ್ರಮಗಳನ್ನು ಗಮನಿಸುತ್ತ ಬಂದಾಗ ಚಪ್ಪಲಿಯಲ್ಲಿ ಹೊಡೆದವರು ಹೊಡೆಸಿಕೊಂಡವರು ಸೆಲೆಬ್ರಿಟಿ ಆದದ್ದು ಸಿನಿಮಾ ಜಗತ್ತಿನಲ್ಲಿ ಸಾಧನೆ ಎನಿಸಿಕೊಂಡದ್ದು ನೋಡಿ ಇದೆಂತಹ ವಿಪರ್ಯಾಸ ಎನಿಸಲಿಲ್ಲ. ವರ್ಷಗಟ್ಟಲೆ ಕಷ್ಟಪಟ್ಟು ಕನ್ನಡ ಸಿನಿಮಾದ ಬಗೆಗೆ ಪುಸ್ತಕ ಬರೆದರೆ ಒಂದು ಚಿಕ್ಕ ಬೈಟ್ ಹಾಕಲು, ಪುಸ್ತಕದ ಬಗ್ಗೆ ಚಿಕ್ಕ ವಿವರ ನೀಡಲೂ ಜಾಗವಿಲ್ಲ ಎನ್ನುವವರಿಗೆ ಇದಕ್ಕೆಲ್ಲಾ ಗಂಟೆಗಟ್ಟಲೆ ಸಮಯ ಹೇಗೆ ಸಿಗುತ್ತದೆ ಎನಿಸದಿರಲಿಲ್ಲ. ಆತ ನಾನು ಗಂಡಸಲ್ಲ ಎಂದರೆ ಅದು ದಿನಗಟ್ಟಲೆ ಸುದ್ದಿ, ಸಿನಿಮಾ ಜಗತ್ತಿನಲ್ಲಿ ಯಾರೋ ಹುಡುಗಿಯನ್ನು ಕರೆದರೆ ದಿನಗಟ್ಟಲೆ ಸುದ್ದಿ, ನನ್ನನ್ನು ಆತ ಲೆಕ್ಕವಿಡುವಷ್ಟು ಸಾರಿ ಅತ್ಯಾಚಾರ ಮಾಡಿದ್ದಾನೆ ಎಂದರೆ ಅದಕ್ಕೂ ದಿನವೆಲ್ಲಾ ಸಮಯವಿದೆ..ಅದೆಲ್ಲಾ ಓಕೆ. ಮಧ್ಯ ಮಧ್ಯ ಇಂತಹದ್ದಕ್ಕೂ ಮೂರ್ನಾಲ್ಕು ನಿಮಿಷ ಎತ್ತಿಟ್ಟರೆ ಖುಷಿಯಾಗುತ್ತದೆ ಅಲ್ಲವೇ?
ಇದೆಲ್ಲಾ ನೆನಪಿಗೆ ಬಂದದ್ದು ನಿನ್ನೆ ಮೋನಿಕಾ ಮಿಸ್ಸಿಂಗ್ ವಿವಾದ ಸುದ್ದಿ ವಾಹಿನಿಯಲ್ಲಿ ನೇರಪ್ರಸಾರವಾದಾಗ. ಆಸ್ಕರ್ ಕೃಷ್ಣ ಮೋನಿಕಾ ಮಿಸ್ಸಿಂಗ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಷ್ಟೇ ಗಂಟೆಗಟ್ಟಲೆ ಟಿವಿಯಲ್ಲಿ ಕುಳಿತು ಮಾತನಾಡಬೇಕಾಯಿತು. ಆದರೆ ಇದೇ ವ್ಯಕ್ತಿ ಹಣ ಖರ್ಚು ಮಾಡಿ ನೋಡಲೇ ಬೇಕಾದ ಕನ್ನಡದ ನೂರೊಂದು ಚಿತ್ರಗಳು ಪುಸ್ತಕ ಪ್ರಕಟಿಸಿದಾಗ ಯಾರೂ ಮಾತು ಆಡಿಸಲಿಲ್ಲ. ಇದೇನು ಈ ತರಹದ್ದೊಂದು ಒಳ್ಳೆಯ ಪುಸ್ತಕ ಪ್ರಕಟಿಸಿದ್ದೀರಾ ಬನ್ನಿ ಕಾರ್ಯಕ್ರಮ ಮಾಡೋಣ ಎನ್ನಲಿಲ್ಲ.. 
ಇದಲ್ಲವೇ ವಿಪರ್ಯಾಸ...