Friday, January 4, 2013

ನಾಗಾಭರಣರ ಮುನ್ನುಡಿ...

ಒಂದು ಖುಷಿಯ ವಿಚಾರ: ಖ್ಯಾತ ನಿರ್ದೇಶಕ ನಾಗಾಭರಣ ನನ್ನ ಪುಸ್ತಕ 'ನೋಡಲೇ ಬೇಕಾದ ಕನ್ನಡ ಚಿತ್ರಗಳು' ಗೆ ಮುನ್ನುಡಿ ಬರೆದಿದ್ದಾರೆ.ನಾನು ನಾಗಭರಣರನ್ನು ನೋಡಿದ್ದೆ  . ಆದರೆ ಅವರಿಗೆ ನನ್ನ ಪರಿಚಯವಿರಲಿಲ್ಲ . ಅವರ ಮೊಬೈಲ್ ನಂಬರ್ ಸಂಗ್ರಹಿಸಿ ಫೋನ್ ಮಾಡಿ ವಿಷಯ ತಿಳಿಸಿದೆ. 'ಸರಿ ಪುಸ್ತಕ ತಂದು ಕೊಡಪ್ಪಾ...ನೋಡೋಣ ಓದ್ತೀನಿ ಎಂದರು..' ನಾನು ಅವರ ಆಫೀಸಿಗೆ ತೆಗೆದುಕೊಂಡು ಹೋಗಿ ಕೊಟ್ಟುಬಂದೆ. ಆಮೇಲೆ ಫೋನ್ ಮಾಡೋಣ ಎನಿಸಿದರೂ ಆ ಸಮಯದಲ್ಲಿ 'ಬೆಂಗಳೂರು ಚಿತ್ರೋತ್ಸವ ' ಇದ್ದುದರಿಂದ ಅವರು ಕೆಲಸದ ಒತ್ತಡದಲ್ಲಿರುತ್ತಾರೆಂದು ಫೋನ್ ಮಾಡಲಿಲ್ಲ. ಅವರು ಚಿತ್ರೋತ್ಸವದಲ್ಲಿ ಸಿಕ್ಕರಾದರೂ ಅವರನ್ನು ಆ ವಿಷಯವಾಗಿ ಮಾತಾಡಿಸುವುದು ಒಳ್ಳೆಯದಲ್ಲ ಎನಿಸಿ ಸುಮ್ಮನಾದೆ. ನಾನು ಪುಸ್ತಕ ಕೊಟ್ಟ ನಾಲ್ಕನೆಯ ದಿನ ಚಿತ್ರೋತ್ಸವದಲ್ಲಿ ಚಿತ್ರವೊಂದನ್ನು ನೋಡುತ್ತಿದ್ದೆ. ಆಗ ಫೋನ್ ಮಾಡಿದ ನಾಗಾಭರಣರು 'ಮುನ್ನುಡಿ ಬರೆದಿದ್ದೇನೆ...' ಎಂದರು.ನಾನು ಹೋಗಿ ಮುನ್ನುಡಿ ಸಂಗ್ರಹಿಸಿಕೊಂಡು ಬಂದಾಗಲೂ ಅವರನ್ನು ನಾನು ಭೇಟಿಯಾಗಲಿಕ್ಕೆ ಸಾಧ್ಯವಾಗಲಿಲ್ಲ.
ಅದಕ್ಕೆ ಮೊನ್ನೆ ಕೆಳದಿ ಚೆನ್ನಮ್ಮ ಧಾರಾವಾಹಿಯ ಚಿತ್ರೀಕರಣಕ್ಕೆ ಸ್ಥಳಕ್ಕೆ ಹೋದಾಗ ನಾಗಾಭರಣ ಸಿಕ್ಕರು. ಗಂಟೆಗಟ್ಟಲೆ ಕುಳಿತು ಮಾತಾಡಿದ್ದು ನನಗೆ ಖುಷಿಯಾಯಿತು. ನನ್ನ ಸಿನೆಮಾದ ಬಗ್ಗೆ ವಿಚಾರಿಸಿದರು, ನನ್ನ ಇನ್ನೊಂದು ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಲು ಒಪ್ಪಿಕೊಂಡರು.
"ಚಲನಚಿತ್ರಗಳು ಕೇವಲ ಮನರಂಜನೆಗಾಗಿ ಅಲ್ಲ, ಮನೋವಿಕಾಸಕ್ಕೆ ಮತ್ತು ಭಾವಲೋಕ ವಿಹಾರಕ್ಕೆ.ಈ ಬುದ್ದಿ ಹಾಗೂ ಭಾವಗಳ ತಾಕಲಾಟ ಮತ್ತು ಸಮೀಕರಣ ನಾವು ಕಾಣುವ ಚಿತ್ರಗಳಲ್ಲಿವೆ ಮತ್ತು ಯಾವ ಕಾರಣಗಳಿಂದಾಗಿ ಅವು ನಮ್ಮ ಸಮಾಜದ ಸಾಕ್ಷಿ ಪ್ರಜ್ಞೆಯಾಗಿ ಉಳಿದಿವೆ.? ಅಲ್ಲದೆ ವೈಯಕ್ತಿಕ ಬದುಕಿನ ನೆನಪಿನಾಳದಲ್ಲಿ ಸದಾ ಜಾಗೃತವಾಗಿವೆ.? ಇವುಗಳನ್ನ ಗಮನಿಸಿದಾಗ ದೃಶ್ಯಮಾಧ್ಯಮದ ಘಟಸ್ಫೋಟದಿಂದ ಲಕ್ಷಾಂತರ ಚಲನಚಿತ್ರಗಳು ಚಲಿಸುತ್ತಿದ್ದಾವಾದರೂ, ನಮ್ಮ ನಿಲುವಿನಲ್ಲಿ ನಿರಂತರವಾಗಿ ಉಳಿಯುವವು  ಕೆಲವೇ ಕೆಲವು. ಅವುಗಳನ್ನ ಹೆಕ್ಕಿ ದೃಡೀಕರಿಸುವುದು ಸುಲಭದ ಕೆಲಸವಲ್ಲ. ಲೋಕೊಭಿನ್ನರುಚಿ:ಹೀಗಾಗಿ ಬಹುಮಾನ್ಯ ರುಚಿಗಳಲ್ಲಿ ಸದಭಿರುಚಿಯನ್ನು ಸಾಧಿಸಿ ಶೋಧಿಸುವ ಕೆಲಸವನ್ನ ಶ್ರೀ.ರವೀಂದ್ರ  ಪ್ರಯತ್ನಿಸಿದ್ದಾರೆ. ಪ್ರಯತ್ನ ಸ್ತುತ್ಯಾರ್ಹ."
ಇದು  ನಾಗಾಭರಣ ಸರ್ ಬರೆದ ಮುನ್ನುಡಿಯ ತುಣುಕು.
ಇಷ್ಟರಲ್ಲೇ ಪುಸ್ತಕ ಮಾರುಕಟ್ಟೆಯಲ್ಲಿರುತ್ತದೆ. ಎಲ್ಲಾ ಗೆಳೆಯ/ಗೆಳತಿಯರು ಮನಸು ಮಾಡಿ, ಪುಸ್ತಕ ಓದಿ ನನ್ನನ್ನು ಹರಸಿ ಉಳಿಸಿ ಎಂಬ ಪ್ರಾರ್ಥನೆ ನನ್ನದು.
ಪ್ರಶಾಂತ ವಿಟ್ಲ ಎರಡು ಮುಖಪುಟದ ಮಾದರಿಯನ್ನು ಕಳುಹಿಸಿದ್ದರು. ನಾವು  ಮೊದಲನೆಯದನ್ನು ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದೇವೆ. ನಿಮ್ಮ ಅಭಿಪ್ರಾಯ..?
ಓದಿ ಮೆಚ್ಚಿದ್ದು :
ಮೌನ ಕಣಿವೆ
ಬ್ಲಾಗ್ ನಲ್ಲಿ ಅದೆಷ್ಟು ಒಳ್ಳೊಳ್ಳೆ ಲೇಖನಗಳಿವೆ ಗೊತ್ತಿದೆಯೇ..? ನೀವು ಭೇಟಿ ನೀಡಿಲ್ಲವಾದರೆ ಅವಶ್ಯವಾಗಿ ಒಮ್ಮೆ ನೋಡಿ.
ಇಂದು ನನಗೆ ಭುಜದೆತ್ತರ ಬೆಳೆದು ನಿಂತ ಮಗಳಿದ್ದಾಳೆ. ಆದರೂ ಒಬ್ಬಂಟಿ ಪುರುಷನಿರುವೆಡೆ, ಆತ ಪರಿಚಿತನಾಗಿದ್ದರೂ ನಾನು ಹೋಗಲಾರೆ. ಆತನನ್ನು ನಾನು ನಂಬಲಾರೆ ಎನ್ನುವುದಕ್ಕಿಂತಲೂ ನನ್ನನ್ನು ನಾನೇ ನಂಬದಿರುವಂತ  ಸ್ಥಿತಿ ನನ್ನದು.
"ಸಂಬಂಧದ ಕೊಂಡಿ ಮತ್ತೆ ಸೇರಿಕೊಳ್ಳುವುದು ನನಗೆ ಬೇಕಾಗಿರಲಿಲ್ಲ. ಅಷ್ಟರಲ್ಲೇ ನನಗೆ ಅರ್ಥವಾಗಿಬಿಟ್ಟಿತ್ತು. ಪ್ರೀತಿಯ ಜಗತ್ತೇ ಬೇರೆ. ವಾಸ್ತವವೇ ಬೇರೆ. ಸಾಮಾಜಿಕ ಸ್ಥಾನ-ಮಾನ ನನ್ನ ಘನತೆ ಅಂತಸ್ತುಗಳನ್ನು ಹೆಚ್ಚಿಸಿರಬಹುದು. ಆದರೆ ಒಳಗೊಳಗೇ ನಾನು ಕುಸಿದುಹೋಗಿದ್ದೇನೆ.."
"ನನಗೀಗಲೂ ನೆನಪಿದೆ. ನನ್ನ ಮಗನೊಮ್ಮೆ ಮಾತಿನ ಮಧ್ಯೆ ”ಹೆಂಗಸು’ ಎಂಬ ಪದವನ್ನು ಉಪಯೋಗಿಸಿದ. ನನಗೆ ಆ ಪದವನ್ನು ಕೇಳಿದರಾಗದು. ನಾನು ಎಂದೂ ಆ ಪದವನ್ನು ಉಪಯೋಗಿಸುವುದಿಲ್ಲ. ಹೆಂಗಸು ಅಂದರೆ ಹೆಣ್ಣು ಕೂಸು. ಹೆರುವವಳು ಎಂಬ ಅರ್ಥ ಅದರಿಂದ ಸ್ಫುರಿಸುತ್ತದೆಯೆಂಬುದು ನನ್ನ ಭಾವನೆ., ಮಹಿಳೆಯ ಅಸ್ತಿತ್ವವನ್ನು ಅದು ಸೀಮಿತಗೊಳಿಸುತ್ತದೆಯೆಂಬುದು ನನ್ನ ಗ್ರಹಿಕೆ. ನನ್ನನ್ನು ಯಾರಾದರೂ ’ಆಯಮ್ಮ’ ಎಂದು ಸಂಭೋದಿಸಿದರೆ ನನ್ನ ಸಿಟ್ಟು ನೆತ್ತಿಗೇರುತ್ತದೆ!  ನನ್ನ ಮಗನಿನ್ನೂ ತುಂಬಾ ಚಿಕ್ಕವನು, ಆದರೂ ನಾನವನಿಗೆ ಹೇಳಿದೆ ’ಹೆಂಗಸು ಅನ್ನಬಾರದು, ಮಹಿಳೆ ಅನ್ನು’ ಅಂತ ಆಮೇಲೆ ನಾನದನ್ನು ಮರೆತು ಬಿಟೆ."
ಸಾಲುಗಳಲ್ಲಿನ  ವೈವಿಧ್ಯತೆಯನ್ನು ಗಮನಿಸಿ .

Monday, December 31, 2012

ಹೊಸವರ್ಷದ ಶುಭಾಶಯಗಳು-2013

ಹೊಸ ವರ್ಷದ ಶುಭಾಶಯಗಳು.
ಮೊಟ್ಟ ಮೊದಲ ಬಾರಿಗೆ ಹೊಸವರ್ಷದ ಕಲ್ಪನೆ ನನಗೆ ಬಂದದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೋದೆ. ನಮ್ಮ ಮನೆಗೆ ಒಂದು ದೊಡ್ಡ ಅಂಚೆ ಪತ್ರ ಬಂದಿತ್ತು. ನಮ್ಮ ಮನೆಯವರಿಗೆಲ್ಲಾ ಆಶ್ಚರ್ಯ. ಇದೇನು.. ಮಾಮೂಲಿ ಪತ್ರದ ಗಾತ್ರ ಬೇರೆ. ಇದರ ಉದ್ದಗಲವೇ ಬೇರೆ. ಅದನ್ನು ಬಿಡಿಸಿ ನೋಡಿದಾಗಲೇ ಗೊತ್ತಾದದ್ದು ಅದು ಹೊಸವರ್ಷದ ಶುಭಾಷಯ ಪತ್ರ ಎಂದು. ಅದನ್ನು ನಮ್ಮ ಚಿಕ್ಕಪ್ಪ ಕಳುಹಿಸಿದ್ದರು. ಅದು ನಮಗೆ ಬಂದ ಮೊದಲ ಹೊಸವರ್ಷದ ಶುಭಾಷಯ ಪತ್ರ. ನಾನಾಗ ಬಹುಶ ಪ್ರಾಥಮಿಕ ಶಾಲೆಯಲ್ಲಿದ್ದೆ. ಹೊಸವರ್ಷ, ಶುಭಾಷಯ ಪತ್ರ ಮುಂತಾದವುಗಳ ಪರಿಕಲ್ಪನೆ ಮೊಟ್ಟಮೊದಲ ಬಾರಿಗೆ ಮೂಡಿಸಿದ್ದು ನಮ್ಮ ಚಿಕ್ಕಪ್ಪನ ಆ ಪತ್ರ ಎಂದು ಹೇಳಬಹುದು. ತದನಂತರ ನಾವು ಒಂದಷ್ಟು ವರುಷಗಳು ಜನವರಿಗಾಗಿ ಕಾಯುತ್ತಿದ್ದೆವು. ಶುಭಾಷಯ ಪತ್ರ ಕಳುಹಿಸಲು ಮತ್ತು ಸ್ವೀಕರಿಸಲು. ನಾನು ಪ್ರೌಢ ಶಾಲೆಗೇ ಬಂದಾಗ ಶಾಲೆಯಲ್ಲಿ ಹೊಸವರ್ಷದ ಆಚರಣೆ ತುಸು ಜೋರಾಗೆ ಇರುತ್ತಿತ್ತು. ತೀರಾ ಆತ್ಮೀಯರಾಗಿ ಓಡಾಡುತ್ತಿದ್ದವರು ಯಾವುದೋ ಮಾತಿಗೆ ಜಗಳವಾಡಿಕೊಂಡು ಮಾತು ಬಿಟ್ಟಿದ್ದರೆ, ಇಬ್ಬರಿಗೂ ಮಾತಾಡಿಸಿಕೊಳ್ಳಬೇಕೆಂಬ ತುಡಿತ ಇರುತ್ತಿತ್ತಾದರೂ ಬಿಂಕ ಅದಕೆ ಅವಕಾಶ ಮಾಡಿಕೊಡುತ್ತಿರಲಿಲ್ಲ. ಆದರೆ ಹೊಸವರ್ಷದ ಒಂದು ಶುಭಾಷಯ ಪತ್ರ ಇಬ್ಬರನ್ನು ಒಂದು ಮಾಡಿಬಿಡುತ್ತಿತ್ತು.ನಾವು ಹೈಸ್ಕೂಲಲ್ಲಿದ್ದಾಗ ನಮ್ಮನ್ನು ನೋಡಿ ನನ್ನ ತಂಗಿಯೂ  ಶುಭಾಷಯ ಪತ್ರಗಳನ್ನೂ ತನ್ನ ಗೆಳತಿಯರಿಗೆ ಕೊಡುವುದಕ್ಕೆ ಶುರುಮಾಡಿದ್ದಳು. ಶ್ರುತಿ, ಬೇಬಿ ಶ್ಯಾಮಿಲಿಯ ಫೋಟೋಗಳು, ಗುಲಾಬಿ ಹೂವುಗಳ ಹೂಕುಂಡದ ಫೋಟೋಗಳು, ಸೂರ್ಯೋದಯ, ನದಿ,ದೋಣಿ, ಮಾಲಾಶ್ರೀ , ಸುಧಾರಾಣಿ ಮುಂತಾದವುಗಳೆ ಶುಭಾಷಯ ಪತ್ರಗಳಾಗಿದ್ದವು.ಅದರ ಹಿಂದೆ ಬರೆಯುತ್ತಿದ್ದ ನುಡಿಗಟ್ಟುಗಳು, ಚಿಕ್ಕ ಚಿಕ್ಕ ಕವನಗಳು ಮಜಾ ಕೊಡುತ್ತಿದ್ದವು.
ನನ್ನದೊಂದು ಉಡುಗೊರೆ
ನಿನ್ನದೊಂದು ಉಡುಗೊರೆ
ನಮ್ಮಿಬ್ಬರ ಉಡುಗೊರೆ ತವರುಮನೆ ಉಡುಗೊರೆ.,
ಆಕಾಶಕ್ಕೆ ಎಣಿಯಿಲ್ಲ
ಸಮುದ್ರಕ್ಕೆ ಸೇತುವೆಯಿಲ್ಲ
ನನ್ನ ನಿನ್ನ ಸ್ನೇಹಕ್ಕೆ ಮಿತಿಯಿಲ್ಲ.
ಎಂಬ ಕಿರುಕವನದ ತರಹದ ಬರಹಗಳಿಂದ ಹಿಡಿದು, 
ಕೈಕೆಸರಾದರೆ ಕೈ ತೊಳ್ಕೋ
ಬಾಯಿ ಮೊಸರಾದರೆ ಬಾಯಿ ಒರೆಸ್ಕೋ
ಆದರೆ ನನ್ನ ಸ್ನೇಹ ಯಾವತ್ತಿಗೂ ನೆನಪಿಟಕೋ
 ತರಹದ ತರಲೆ ನುಡಿಬರಹಗಳನ್ನೂ ಬರೆಯುತ್ತಿದ್ದದ್ದುಂಟು. ನನ್ನ ತಂಗಿಯರಂತೂ ತಮ್ಮ ಗೆಳೆತಿಯರಿಗೆಲ್ಲ ಬರೆಯಲು ಉತ್ಸುಕರಾಗುತ್ತಿದ್ದರಷ್ಟೇ ಅಲ್ಲ ಮೊದಲೇ' ನಿನಗೆ ಈ ಕಾರ್ಡ್ ಇಷ್ಟಾನಾ ಹಾಗಾದ್ರೆ ಇದನ್ನೇ ಕಳುಹಿಸ್ತೀನಿ, ಅವಳಿಗೆ ಇದು ಸಾಕು ಅಂತಲೋ, ಲೇ...ಅದು ನನಗೆ ಇಷ್ಟ ಆಯ್ತು...ನನಗೇನೆ ಅದ  ಕಳಿಸೆ...' ಎಂದು ಮೊದಲೇ ಪಿಕ್ಸಿಂಗ್ ಮಾಡಿಕೊಳ್ಳುತ್ತಿದ್ದದ್ದು ನನಗೆ ನಗೆ ತರಿಸುತ್ತಿತ್ತು.
 ನಮ್ಮ ಹೈಸ್ಕೂಲಿನಲ್ಲಿ ಬೇರೆಯದೆ ಆದ ವಾತಾವರಣವಿತ್ತು. ಯಾವ ಹುಡುಗಿ ಯಾವ ಹುಡುಗನಿಗೆ ಯಾವ ಗ್ರೀಟಿಂಗ್ ಕಾರ್ಡ್ಸ್ ಕೊಟ್ಟಿದ್ದಾನೆ/ಳೆ ಎಂಬುದು ಕುತೂಹಲ ತರುವ ರೋಮಾಂಚನಗೊಳಿಸುವ ವಿಷಯವಾಗಿತ್ತು.ಕೆಂಪು ಒಂಟಿ ಗುಲಾಬಿಯ , ಫೋಲ್ಡಿಂಗ್ ತರಹದ ಕಾರ್ಡ್ ಕೊಟ್ಟಿದ್ದಾನೆಂದರೆ  ಅಥವಾ ಕೊಟ್ಟಿದ್ದಾಳೆಂದರೆ ಅವರಿಬ್ಬರ ನಡುವೆ ಏನೋ ಇದೆ ಎಂಬುದನ್ನು ಅವರಿಗಿಂತ ಮೊದಲೇ ಬೇರೆಯವರು ನಿರ್ಧರಿಸಿಬಿಡುತ್ತಿದ್ದರು.ಕೆಲವೊಮ್ಮೆ ಕೆಲ ಖದೀಮರು ತಮಗಿಷ್ಟವಿದ್ದವರಿಗೆ [ ಆದರೆ ಆಕೆಗಿಷ್ಟವಿಲ್ಲದಿದ್ದರಿಂದ ] ಸಮಯಸಾಧಿಸಿ ಕೆಂಪು ಗುಲಾಬಿಯ ಹೂವಿನ ಶುಭಾಷಯ ಪತ್ರ ಕೊಟ್ಟು ಸಿನೆಮಾದ ಚಂದನೆಯ ಪ್ರೇಮಗೀತೆಯ ಸಾಲು ಬರೆಯುತ್ತಿದ್ದರು. ಮುಂದೆ ಅದು ವಿವಾದಗಳ ಗೂಡಾಗಿ ಶಿಕ್ಷಕರ ಹತ್ತಿರಕ್ಕೆ ಇತ್ಯರ್ಥಕ್ಕೆ ಬಂದಾಗ 'ನಾನು ಫ್ರೆಂಡ್ ಶಿಪ್ಪಲ್ಲಿ ಕೊಟ್ಟೆ..ಅದಕ್ಕೆ ತಪ್ಪು ತಿಳ್ಕೋಬೇಕಾ...ಅದು ಫಿಲಂ ಸಾಂಗು...ನಾ ಬರೆದಿದ್ದಾ..' ಎಂಬೆಲ್ಲಾ ಮಾತುಗಳಿಂದ ತಮ್ಮನ್ನು ತಾವು ಆರೋಪಮುಕ್ತನನ್ನಾಗಿ ಮಾಡಿಕೊಳ್ಳುತ್ತಿದ್ದರಲ್ಲದೆ 'ಮನಸ್ಸಲ್ಲಿ ಏನೇನೋ ಇಟ್ಕೊಂಡು ನಮ್ಮದೇ ತಪ್ಪು ಅಂತಾರೆ..' ಎಂಬರ್ಥದ ಮಾತುಗಳಿಂದ ಆರೋಪಿಸಿದವರನ್ನೇ ಸಣ್ಣಮನಸ್ಸಿನವರು ಎಂದು ಸಾಧಿಸುತ್ತಿದ್ದರು.
ಮುಂದೆ ಕಾಲೇಜಿನಲ್ಲೂ ಶುಭಾಷಯ ಪತ್ರವಿತ್ತಾದರೂ ಹೊಸವರ್ಷಕ್ಕೆ ಅದರಲ್ಲಿ ಅಂತಹ ಪುಳಕವಿರುತ್ತಿರಲಿಲ್ಲ. ಮೊದಲೇ ಜೋಡಿಗಳು ನಿಕ್ಕಿಯಾಗುತ್ತಿದ್ದರಿಂದ ಮತ್ತೆಲ್ಲಾ ಗೊತ್ತಿದ್ದರಿಂದ ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು ಎಂಬಂತೆ ಇದ್ದುಬಿಡುತ್ತಿದ್ದೆವು. ಆದರೂ ಶುಭಾಷಯ ಪತ್ರಗಳ ಭರಾಟೆಯಂತೂ ಇದ್ದೆ ಇರುತ್ತಿತ್ತು. ಸಂಗೀತ ಹಾಡುವ ಬಣ್ಣಬಣ್ಣದ ದುಬಾರಿ ಬೆಲೆಯ ಕಾರ್ಡುಗಳ ವಿತರಣೆಯಂತೂ ನಡೆದು ಜೋಡಿಯಾಗಿ, ಜಗಳವಾಗಿ ಏನೇನೋ ಆಗುತ್ತಿದ್ದದುಂಟು.
ಈವಾಗ ಮೊಬೈಲ್ ಬಂದಿದೆ. ಇಮೇಲ್ ಇದೆ. ಕಡಿಮೆ ಖರ್ಚಿನಲ್ಲಿ ಶುಭಾಶಯಗಳ ರವಾನೆಯಾಗುತ್ತದೆ.ಒಂದೇ ಇಮೇಲ್, ಅಥವಾ ಒಂದೆ ಮೆಸೇಜ್ ಎಲ್ಲರಿಗೂ ಒಂದೆ ಸಾರಿ ರವಾನೆಯಾಗುತ್ತದೆ. ಅದು ಬೇರೆಯವರಿಗೆ ಗೊತ್ತಾಗುವ ಸಂಭವವೂ ಕಡಿಮೆ ಇದೆ. ಮೊದಲೆಲ್ಲಾ 'ನಿನಗೂ ಇದೆ ಕೊಟ್ಟಿದ್ದಾನಾ...ನೋಡು ನನಗೂ ಇದೆ ಗ್ರೀಟಿಂಗ್ಸ್ ಕಳಿಸಿದ್ದಾನೆ...? 'ಎನ್ನುವ  ಮಾತುಗಳು ಅರ್ಥ ಕಳೆದುಕೊಂಡಿವೆ.
ಇರಲಿ ಮತ್ತೊಮ್ಮೆ ಹೊಸವರ್ಷದ ಶುಭಾಶಯಗಳು...