ಅದ್ಯಾವ ಮಾಯೆಯಲ್ಲಿ ಅದ್ಯಾವ ಘಳಿಗೆಯಲ್ಲಿ ನಾನು ನಿರ್ದೇಶಕನಾಗಬೇಕೆ೦ದುಕೊ೦ಡೆ ಎಂಬುದು ಈವತ್ತಿಗೂ ನೆನಪಾಗುತ್ತಿಲ್ಲ. ಅದೆಂತಹ ಆಕರ್ಷಣೆ ಸಿನಿಮಾದೆಡೆಗೆ ..ಅದೆ೦ತಹ ಹುಚ್ಚು..ನೆನಪಿಸಿಕೊಂಡರೆ ಇಂದಿಗೂ ಆಶ್ಚರ್ಯವಾಗುತ್ತದೆ.ಸಿನಿಮಾ ಹುಚ್ಚಿರುವ ಹಲವಾರು ಗೆಳೆಯರನ್ನು ನಾನು ನೋಡಿದ್ದೇನೆ..ಆದರೆ ಅವರ್ಯಾರು ಸಿನೆಮಾ ಮಾಡಬೇಕೆಂದು ನಿ೦ತವರಲ್ಲ.ನನ್ನಂತೆ ಕನಸು ಕವಲೊಡೆದ ಕ್ಷಣದಿಂದ ಅದರೆಡೆಗೆ ಧೇನಿಸಿದವರೂ ಅಲ್ಲ.
ಆನಂತರ ನನಗೆ ಜತೆಯಾದವನು ನನ್ನದೇ ತರಗತಿಯ .ಮಾದಪ್ಪ.ಅವನು ದಲಿತರ ಹುಡುಗ. ನನ್ನಂತೆಯೇ ಚಿತ್ರ ಬಿಡಿಸುತ್ತಿದ್ದ. ಅವನಿಗೂ ಸಿನೆಮಾ ಎಂದರೆ ಏನೋ ಹುಚ್ಚು. ನಾನೊಂದು ದಿನ ಸಿನಿಮಾದ ಬಗ್ಗೆ ಅದೂ ಇದೂ ಹೇಳಿ ನಾವು ಸಿನೆಮಾ ಬಿಡೋಣ ಎಂದಾಗ ಆಯ್ತು ಎಂದು ನನ್ನೊಡನೆ ಅದರ ಬಗ್ಗೆ ಮಾತಾಡುತ್ತಿದ್ದ. ಆಗೆಲ್ಲ ಅಂಗಡಿಯಲ್ಲಿ ಸಿನಿಮಾದ ರೀಲುಗಳ ಫ್ರೇಮುಗಳನ್ನು ಕತ್ತರಿಸಿ ಮಾರುತ್ತಿದ್ದರು.ಅದನ್ನು ತಂದವನು ಇದರಲ್ಲಿ ಸಿನಿಮಾ ಬಿಡಲು ಸಾಧ್ಯವಾ? ಎಂದು ಅದೊಂದು ದಿನ ಕೇಳಿದ. ಸರಿ ಟ್ರೈ ಮಾಡೋಣ ಎಂದು ಅದರ ಪಾರದರ್ಶಕ ಚಿತ್ರಣದ ಮೂಲಕ ಬಿಸಿಲು ಹಾಯಿಸಿ ಗೋಡೆಯ ಮೇಲೆ ಅದರ ಪ್ರತಿಬಿಂಬ ಮೂಡಿಸಲು ಅದೆಷ್ಟು ಕಷ್ಟ ಪಟ್ಟರೂ ಸಾಧ್ಯವಾಗಲಿಲ್ಲ. ಆನ೦ತರ ಅವನೇ ಇನ್ನೊಂದು ಐಡಿಯ ಕೊಟ್ಟಿದ್ದ . ಬರ್ನ್ ಆದ ಬಲ್ಬೋ೦ದನ್ನು ತೆಗೆದುಕೊಂಡು ಅದರ ಹಿ೦ದುಗಡೆಯ ಭಾಗವನ್ನು ಹುಷಾರಾಗಿ ತೆಗೆದುಬಿಡುವುದು, ಆನಂತರ ಅದರ ತುಂಬಾ ನೀರುತುಂಬಿ ರಟ್ಟಿನ ಡಬ್ಬಿಯ ತಳದಲ್ಲಿ ಮರಳು ಹಾಕಿ ಬಲ್ಬನ್ನು ಒಳಗೆ ಕೂರಿಸಿ, ರಟ್ಟಿನ ಡಬ್ಬದ ಇಕ್ಕೆಲಗಳಲ್ಲಿ ಎರಡು ತೂತು ಕೊರೆಯುವುದು. ಆನಂತರ ಅದರ ಮೂಲಕ ಬಿಸಿಲಿನ ಕಿರಣ ಹಾಯಿಸಿದರೆ ಅದೊಂತರ ಪ್ರೋಜೆಕಟರ ತರಹವೇ ಕೆಲಸ ಮಾಡುತ್ತದೆ. ನಾವು ಆ ಬಲ್ಬಿನ ಹಿಂದೆ ರೀಲಿನ ಫ್ರೇಮು ಇಟ್ಟು, ಅದರ ಮೂಲಕ ಬಿಸಿಲು ಹಾಯಿಸಿದರೆ ಅದು ಗೋಡೆಯ ಮೇಲೆ ಫ್ರೇಮಿನಲ್ಲಿದ್ದ ಚಿತ್ರವನ್ನು ಯಥವಥಾಗಿ ಮೂಡಿಸುತ್ತದೆ ಎಂದು.ಅದಕ್ಕಾಗಿ ಎಲ್ಲಿ ಬಲ್ಬು ಕಂಡರೂ ಹೆಕ್ಕುವುದೇ ನಮ್ಮ ಕೆಲಸವಾಯಿತು. ಅದಕ್ಕಿಂತ ಚಿತ್ರಹಿಂಸೆಯ ಕೆಲಸವೆಂದರೆ ಅದರ ಹಿಂದುಗಡೆಯ ಹೋಲ್ಡರ್ ನ್ನು ಹುಷಾರಾಗಿ ತೆಗೆಯುವುದು. ಅದನ್ನು ತೆಗೆಯುವಾಗಲೇ ಬಲ್ಬು ಫಳ್ ಎಂದು ಹೊಡಿದುಹೋಗುತ್ತಿದ್ದವು. ಕೈಗೆಲ್ಲ ಗಾಜಿನ ಚೂರು ಚುಚ್ಚಿ ಗಾಯವಾಗುತ್ತಿತ್ತು. ಆದರೂ ನಮ್ಮ ಪ್ರಯತ್ನ ನಿಲ್ಲಿಸದೆ ಎಡಬಿಡದೆ ತಿಂಗಳುಗಟ್ಟಲೆ ಪ್ರಯತ್ನಿಸಿ ಕೊನೆಗೂ ಒಂದು ಬಲ್ಬಿನ ಪ್ರೊಜೆಕ್ಟರ್ ತಯಾರಿಸಿಯೇ ಬಿಟ್ಟಿದ್ದೆವು. ಆದರೆ ಫಲಿತಾಂಶ ಮಾತ್ರ ಆಶಾದಾಯಕವಾಗಿರಲಿಲ್ಲ. ಗೋಡೆಯ ಮೇಲೆ ಚಿತ್ರವೇನೋ ಮೂಡುತ್ತಿತ್ತು..ಆದರೆ ಅದರ ಆಕಾರವೇ ಬದಲಾಗಿ ಬಿಡುತ್ತಿತ್ತು. ಇದಾದ ನಂತರ ಭೂತಗಾಜನ್ನು ನಾವು ಈ ಕೆಲಸಕ್ಕಾಗಿ ಬಳಸಬಹುದೆಂಬ ಐಡಿಯ ಹೊಳೆಯಿತು. ಅದು ಬಾಲ ವಿಜ್ಞಾನ ಎಂಬ ಮಕ್ಕಳ ಪತ್ರಿಕೆಯಿ೦ದಾಗಿ ತಿಳಿದುಬಂತು. ಆದರೆ ಭೂತಗಾಜು ಹುಡುಕುವುದಾದರೂ ಎಲ್ಲಿ . ಅದಕ್ಕಾಗಿ ಜಾತ್ರೆಯವರೆಗೆ ಕಾಯಬೇಕಾಯಿತು. ವರ್ಷಕ್ಕೊಮ್ಮೆ ಬರುವ ಜಾತ್ರೆಯವರೆಗೆ ಕಾಯ್ದು ಅಲ್ಲಿ ಭೂತಗಾಜಿನ ಜೊತೆಗೆ ಬೈನಾಕುಲರಿನ೦ತ ಸಾಧನವನ್ನು ಕೊಂಡದ್ದಾಯಿತು. ಅದರಲ್ಲಿ ಸಿನಿಮಾದ ಫ್ರೇಮಿಟ್ಟು ನೋಡಿದರೆ ದೊಡ್ಡದಾಗಿ ಕಾಣುತ್ತಿತ್ತು. ಅದನ್ನು ಹೊಡೆದುಹಾಕಿ ಆ ಭೂತಗಾಜನ್ನು ತೆಗೆದುಕೊಂಡು ಅ
ದೇನೇನೋ ಸರ್ಕಸ್ಸು ಮಾಡಿದ್ದಾಯಿತು...ಆದರೆ ಫಲಿತಾಂಶ ಮಾತ್ರ ನಿರಾಶದಾಯಕವೇ ಆಗಿತ್ತು..

ಈಗ ಮಾದಪ್ಪ ಎಲ್ಲಿದ್ದಾನೋ ಗೊತ್ತಿಲ್ಲ.ನನ್ನ ಸಿನಿಮಾದೆಡಿಗಿನ ಹಾದಿಯಲ್ಲಿ ಅದೆಷ್ಟು ಗೆಳೆಯರು ಸಾಥ್ ಕೊಡುತ್ತೆವೆ೦ದು ಬಂದರೋ..ಅವರ್ಯಾರು ಈಗ ನನ್ನ ಸಂಪರ್ಕದಲ್ಲಿಲ್ಲ.ಅವರರವ ಬದುಕಿನ ಮಾರ್ಗ ಹಿಡಿದು ತಮ್ಮ ಬದುಕಿನ ಪುಸ್ತಕದಲ್ಲಿನ ಅರ್ಧದಷ್ಟು ಪುಟಗಳನ್ನು ಯಶಸ್ವಿಯಾಗಿ ತೃಪ್ತಿದಾಯಕವಾಗಿ ಮುಗಿಸಿಯೇ ಬಿಟ್ಟಿದ್ದಾರೆ, .ಆದರೆ ನಾನು ಮಾತ್ರ ಇನ್ನೂ ಕನಸಿನ ಚು೦ಗು ಹಿಡಿದು ಹೋಗುತ್ತಲೇ ಇದ್ದೇನೆ. ನನ್ನ ಬದುಕಿನ, ಕನಸಿನ ಪುಸ್ತಕದ ಮೊದಲಪುಟವನ್ನೂ ಯಶಸ್ವಿಯಾಗಿ ಮುಗಿಸಲಾಗದೆ..?