Saturday, March 1, 2014

ಆಕ್ಷನ್ ಕಟ್ ಇತ್ಯಾದಿ..

ಒಂದು ದೃಶ್ಯವನ್ನು ಹೇಗೆ ಚಿತ್ರೀಕರಿಸಿದರೆ ಉತ್ತಮ. ಅಂದರೆ ಹೋಟೆಲ್ಲಿನಲ್ಲಿ ಇಬ್ಬರು ಮಾತನಾಡುತ್ತ ಕುಳಿತಿದ್ದಾರೆ ಎಂದುಕೊಳ್ಳೋಣ. ಅವರಿಬ್ಬರ ಮಾತಿನ ದೃಶ್ಯವನ್ನು ಹೇಗೆಲ್ಲಾ ಚಿತ್ರಿಸಬಹುದು ಎಂಬುದೇ ಪ್ರಶ್ನೆ. ಯಾಕೆಂದರೆ ಸಂಭಾಷಣೆ ಬರೆಯುವಾಗ ಅಥವಾ ಬರಹದ ರೂಪದಲ್ಲಿ ಅವರಿಬ್ಬರೂ ಕುಳಿತು ಮಾತನಾಡುತ್ತಿದ್ದರು ಎಂಬ ವಿವರ ಬರೆದು ಅವರ ಮಾತುಗಳನ್ನು ಒಬ್ಬ ಚಿತ್ರಕತೆ/ಸಂಭಾಷಣೆಕಾರ ಬರೆದಿರುತ್ತಾನೆ. ಆದರೆ ಚಿತ್ರೀಕರಣ ಎಂಬ ವಿಷಯಕ್ಕೆ ಬಂದಾಗ ಕ್ಯಾಮೆರಾ ದಲ್ಲಿ ಅದನ್ನು ಯಾವ ರೀತಿ ಸೆರೆ ಹಿಡಿದರೆ ಅದು ಉತ್ತಮವಾಗಿರುತ್ತದೆ. ಎಷ್ಟು ಶಾಟ್ ಗಳನ್ನೂ ಅದರಲ್ಲಿ ವಿಂಗಡಿಸಿದರೆ ಅದರ ಪರಿಣಾಮ ಹೆಚ್ಚಿರುತ್ತದೆ ಎಂಬುದು ಗೊಂದಲಮಯವಾದ ಉತ್ತರವಿರುವಪ್ರಶ್ನೆ. ಹಾಗೆ ನೋಡಿದರೆ ಒಂದು ದೃಶ್ಯವನ್ನು ಹೀಗೆಯೇ ಇಷ್ಟೇ ಶಾಟ್ ಗಳ ಮೂಲಕ ಚಿತ್ರಿಸಬೇಕು ಎಂಬ ವ್ಯಾಕರಣವೆನಿಲ್ಲ. ಮೊದಲೇ ಹೇಳಿದಂತೆ ಒಂದು ಕತೆಯನ್ನು ಕ್ಯಾಮೆರಾದ ಮೂಲಕ ಅದರ ಅರ್ಥ ತಪ್ಪದಂತೆ ಭಾವ ಕೆಡದಂತೆ ಹೇಳುವುದೇ ದೃಶ್ಯ ಮಾಧ್ಯಮ. ಹಾಗಾಗಿ ಕ್ಯಾಮೆರಾ ಮೂಲಕ ಶಾಟ್ ಮೂಲಕ ಸೆರೆಹಿಡಿದದ್ದು ಅಪ್ಯಾಯಮಾನವಾಗಿರಬೇಕು.
ನಮ್ಮ ಸಿನಿಮಾ ವಿಷಯಕ್ಕೆ ಬಂದರೆ ಕ್ಯಾಮರಾಕ್ಕೆ ಒಂದಷ್ಟು ಅಂಶಗಳಿವೆ. ಟ್ರ್ಯಾಲಿ, ಕ್ರೇನ್, ಸ್ಟಾಂಡ್ ಹೀಗೆ.ಹಾಗೆಯೇ ಶಾಟ್ ವಿಷಯಕ್ಕೆ ಬಂದರೆ ಸಾಮಾನ್ಯವಾಗಿ ಕ್ಲೋಸ್, ಮಿಡ್. ಲಾಂಗ್ ಶಾಟ್ ಗಳಿವೆ. ಇವುಗಳ ಕೋನ ಮತ್ತು ಚೌಕಟ್ಟು ಬದಲಾಗಬಹುದೇನೋ? ಆದರೆ ಶಾಟ್ ಹೆಚ್ಚು ಕಡಿಮೆ ಅದೇ ಆಗಿರುತ್ತದೆ. ಹೀಗಿರುವಾಗ ಇಬ್ಬರು ಹೋಟೆಲ್ಲಿನಲ್ಲಿ ಮಾತನಾಡುವ ದೃಶ್ಯವನ್ನು ಹೇಗೆ ಚಿತ್ರಿಸಿದರೆ ಉತ್ತಮ ಎಂಬುದು ನಿರ್ದೇಶಕನ ಕಲ್ಪನೆಯ ಚಿತ್ರದ ಮೇಲೆ ಅವಲಂಬಿತವಾಗಿರುತ್ತದೆ ಎನ್ನಬಹುದು.ಯಾಕೆಂದರೆ ಚಿತ್ರಿಸಿದ ನಂತರ ಅದನ್ನು ಸಂಕಲನ ಮೇಜಿನ ಮೇಲೆ ಜೋಡಿಸಿದಾಗ ವ್ಯತ್ಯಾಸ ಬರಬಾರದು.
ಹಾಗಂತ ನಮ್ಮಲ್ಲಿ ಉಪಕರಣವಿದೆ ಎಂದು ಅವುಗಳನ್ನು ಯರ್ರಾಬಿರ್ರಿ ಉಪಯೋಗಿಸಲೂ ಬಾರದು. ಇತ್ತೀಚಿಗೆ ಜಿಮ್ಮಿ ಜಿಬ್ ಇದೆ ಎಂಬ ಕಾರಣಕ್ಕೆ ಸುಮಾರಷ್ಟು ಚಿತ್ರಗಳಲ್ಲಿ ಪ್ರತಿ ದೃಶ್ಯದಲ್ಲೂ ಮೇಲಿಂದ ಚಿತ್ರಿಕೆ ತೆಗೆದಿರುವ ಉದಾಹರಣೆ ಇದೆ. ಹಾಗೆಯೇ ಮೊನ್ನೆ ಯಾವುದೋ ಕಿರುಚಿತ್ರವೊಂದನ್ನು ನೋಡುತ್ತಿದ್ದಾಗ ಮೊದಲ ದೃಶ್ಯದಲ್ಲಿ ಕ್ಯಾಮೆರಾವನ್ನು ಕೈಯಲ್ಲಿ ಹಿಡಿದು ಇಷ್ಟಬಂದ ಹಾಗೆ ಅಲುಗಾಡಿಸಿದ್ದಾರೆ. ಅದರ ಉದ್ದೇಶವೇನು. ನೋಡಲು ಕಿರಿಕಿರಿ ಉಂಟ್ರು ಮಾಡುವ ಮತ್ತು ಆ ದೃಶ್ಯದಲ್ಲಿ ಯಾವುದೇ ಕಿರಿಕಿರಿ ಇಲ್ಲದೇ ಇರುವುದರಿಂದ ಅದು ವ್ಯರ್ಥ ಎನಿಸದೇ ಇರದು. ಯಾಕೆಂದರೆ ಸಾಮಾನ್ಯವಾಗಿ ಅಪಘಾತದ ದೃಶ್ಯವನ್ನು ಚಿತ್ರಗಳಲ್ಲಿ ತೋರಿಸುವಾಗ ಕೊನೆಯಲ್ಲಿ ಕ್ಯಾಮೆರಾದ ಅಲುಗಾಟ ಅದರ ಪರಿಣಾಮವನ್ನು ಹೆಚ್ಚಿಸುತ್ತದೆ. ಹಾಗೆಯೇ ಚೇಸ್ ದೃಶ್ಯದಲ್ಲಿ ದೃಶ್ಯಕ್ಕೆ ತಕ್ಕಂತೆ ಕ್ಯಾಮೆರಾ ಚಲನೆಯಿರುತ್ತದೆ.
ಹಾಗೆಯೇ ಮನಸಿನ ಭಾವನೆಗಳ ತುಮುಲವನ್ನು ವ್ಯಕ್ತ ಪಡಿಸಲು ಕೆಲವೊಮ್ಮೆ ಕ್ಯಾಮೆರಾದ ಮೂಲಕ ಕೆಲವು ಪ್ರಯೋಗಗಳನ್ನು ಮಾಡಲಾಗುತ್ತದೆ. ಉದಾಹರಣೆಗೆ ವರ್ಟಿಗೋ ಚಿತ್ರದ ನಾಯಕನಿಗೆ ಮೇಲಿಂದ ಕೆಳಗೆ ನೋಡಿದರೆ ತಲೆ ಸುತ್ತುತ್ತದೆ ಎಂಬುದನ್ನು ಸೂಚಿಸಲು  ಹಿಚ್ ಕಾಕ್ ಒಂದು ವಿಶಿಷ್ಟ ಪ್ರಯೋಗ ಮಾಡಿದ್ದರು. ಅದು ವರ್ಟಿಗೋ ಶಾಟ್ ಎಂದೇ ಇತ್ತೀಚಿಗೆ ಪ್ರಸಿದ್ಧವಾಗಿದೆ. ಕ್ಯಾಮೆರಾದ ಚಲನೆ ಮತ್ತು ಜೂಮ್ ಎರಡನ್ನೂ ವಿರುದ್ಧ ದಿಕ್ಕಿನಲ್ಲಿ ಚಾಲಿಸಿದರೆ ಈ ಪರಿಣಾಮ ದಕ್ಕುತ್ತದೆ. 
ಅಂತೆಯೇ ಇರುವಷ್ಟೇ ಶಾಟ್ ನಿಂದ ಒಂದು ದೃಶ್ಯವನ್ನು ಹೇಗೆ ಚಿತ್ರಿಕರಿಸಬಹುದು ಎಂಬುವುದನ್ನು ಒಂದು ಮಟ್ಟಕ್ಕೆ ನಿರ್ಧರಿಸಬೇಕಾದರೆ ಮತ್ತು ಶಾಟ್ ವಿಂಗಡಣೆ ಮಾಡುವಾಗ ಯಾವುದನ್ನು ಕ್ಲೋಸ್ ನಲ್ಲೂ ಯಾವುದನ್ನು ಲಾಂಗ್ ಶಾಟ್ ನಲ್ಲೂ ಮತ್ತು ಯಾವುದನ್ನು ವೈಡ್ ಶಾಟ್ ನಲ್ಲೂ ಚಿತ್ರೀಕರಿಸಿದರೆ ಉತ್ತಮ ಮತ್ತು ಪರಿಣಾಮಕಾರಿ ಹಾಗೆಯೇ ಒಂದು ದೃಶ್ಯವನ್ನು ಎಷ್ಟು ಶಾಟ್ ಗಳಾಗಿ ವಿಂಗಡಿಸಿದರೆ ಅದು ನಿರೀಕ್ಷಿತ ಪರಿಣಾಮ ಬೀರುತ್ತದೆ ಮತ್ತು ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂಬ ಪ್ರಶ್ನೆಗಳು ಉತ್ತರಿಸಲು ಕಷ್ಟ ಸಾಧ್ಯವಾದವುಗಳು. ಯಾಕೆಂದರೆ ಒಂದು ದೃಶ್ಯವನ್ನು ಒಂದೇ ಶಾಟ್ ನಲ್ಲೂ ಹತ್ತು ಶಾಟ್ ನಲ್ಲೂ ಹತ್ತಾರು ಕೋನದಲ್ಲೂ  ಚಿತ್ರೀಕರಿಸಬಹುದು. 
ಆದರೆ ಹಾಗೆ ವಿಂಗಡಿಸುವ ಮೊದಲಿಗೆ ಕೆಲವು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ಒಳ್ಳೆಯದು.
1. ಇಡೀ ಚಿತ್ರದ ಗತಿ. ಅಂದರೆ ಇಡೀ ಚಿತ್ರದ ನಿರೂಪಣೆಯ ಶೈಲಿ ಯಾವ ರೀತಿಯದ್ದು. ಅಂದರೆ ತೀವ್ರಗತಿಯೋ, ಮಂದ ಗತಿಯೋ  ಎಂಬುದನ್ನು ಮೊದಲೇ ನಿರ್ಧರಿಸಬೇಕು. ಮತ್ತದು ನಿರ್ದೇಶಕನ ತಲೆಯಲ್ಲಿ ಅಚ್ಚೊತ್ತಿರಬೇಕು. ಯಾಕೆಂದರೆ ಒಂದು ದೃಶ್ಯ ಬರೀ ಬಿಡಿಯಾಗಿ ಪ್ರಭಾವಕಾರಿಯಾದರೆ ಸಾಲದು ಒಟ್ಟಾರೆ ಭಾವವನ್ನೂ ಎತ್ತಿ ಹಿಡಿಯಬೇಕು.
2. ದೃಶ್ಯದ ಸಾರ, ಅದರ ಗತಿ ಮತ್ತು ಅದರ ಹಿಂದಿನ ದೃಶ್ಯ ಕೊನೆಯಾದ ಮತ್ತು ಮುಂದಿನ ದೃಶ್ಯ ಪ್ರಾರಂಭವಾಗುವ ರೀತಿ.
ಇದು ಪ್ರಮುಖವಾದ ಅಂಶ ಎನ್ನಬಹುದು. ಯಾಕೆಂದರೆ ಇಡೀ ದೃಶ್ಯ ಏನನ್ನು ಹೇಳುತ್ತದೆ ಎಂಬುದನ್ನು ಸರಿಯಾಗಿ ಒಬ್ಬ ಚಿತ್ರಕರ್ಮಿ ಅರ್ಥ ಮಾಡಿಕೊಂಡು ಬಿಟ್ಟರೆ ಕ್ಯಾಮೆರಾ ಕಣ್ಣು ಹೆಚ್ಚು ಯಾವುದರ ಮೇಲೆ ಕೇಂದ್ರಿಕರಿಸಬೇಕು ಎಂಬುದರ ಅಂದಾಜು ಆತನಿಗೆ ಸಿಕ್ಕಿ ಬಿಡುತ್ತದೆ. ಜೊತೆಗೆ ಕೊನೆಯ ದೃಶ್ಯದ ಅಂತ್ಯ ಎಲ್ಲಾಗಿತ್ತು ಎಂಬುದು ನಿಚ್ಚಳವಾಗಿ ಗೊತ್ತಿದ್ದರೆ ದೃಶ್ಯದಿಂದ ದೃಶ್ಯದ ಬದಲಾವಣೆ ಅಥವಾ ರೂಪಾಂತರ ಸರಿ ಹೋಗುವಂತೆ ಚಿತ್ರಿಸಲು ಸಹಾಯಕವಾಗುತ್ತದೆ. ಹಾಗೆಯೇ ಪ್ರಸ್ತುತ ದೃಶ್ಯದ ಚಿತ್ರಣವನ್ನು ಹೇಗೆ ಪ್ರಾರಂಭಿಸಬೇಕು ಎಂಬುದರ ಅಂದಾಜು ಆಗಿಬಿಡುತ್ತದೆ. ಇಲ್ಲವಾದಲ್ಲಿ  ಸಂಕಲನ ಮೇಜಿನ ಮೇಲೆ ನಾನಾ ರೀತಿಯ ಸರ್ಕಸ್ ಮಾಡಬೇಕಾಗುತ್ತದೆ.
3.ಈಗ ವಿಷಯಕ್ಕೆ ಬರೋಣ. ಇಬ್ಬರು ವ್ಯಕ್ತಿಗಳು ಹೋಟೆಲ್ಲಿನಲ್ಲಿ ಕುಳಿತು ಮಾತನಾಡುತ್ತಿದ್ದಾರೆ.
ಮೊದಲಿಗೆ ಅದು ಹೋಟೆಲ್ ಎಂಬುದನ್ನು ನಾವು ಪ್ರೇಕ್ಷಕನಿಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ. ಅಂದರೆ ಅದರ ಅವಶ್ಯಕತೆ ಎಷ್ಟಿದೆ ಎಂಬುದು ನಿರ್ದೇಶಕನಿಗೆ ಗೊತ್ತಿರಬೇಕು.ಅಂದರೆ ಹೋಟೆಲಿನ ಹೊರಾಂಗಣ ಅಥವಾ ಒಳಾಂಗಣ ಹೀಗೆ. ಮೊದಲ ಚಿತ್ರಿಕೆ ಹೋಟೆಲ್ ಎಂಬುದು ಜನರಿಗೆ ಅರ್ಥವಾಗಿ ಬಿಡಬೇಕಾಗುತ್ತದೆ.  ಏಕಾ ಏಕಿ ಇಬ್ಬರು ಕುಳಿತಿರುವುದನ್ನು ತೋರಿಸಿ ಕೂಡ ಆನಂತರ ಹೋಟೆಲ್ ಪರಿಚಯ ಮಾಡಿಕೊಡಬಹುದು. ಅಥವಾ ಇಬ್ಬರ ಮಾತು ಆದಾದ ಮೇಲೆ ಅವರು ಕುಳಿತಿದ್ದು ಹೋಟೆಲ್ಲಿನಲ್ಲಿ ಎನ್ನುವುದನ್ನು ವಿಷದ ಪಡಿಸಬಹುದು.  ಉದಾಹರಣೆಗೆ ಮೊದಲಿಗೆ ಹೋಟೆಲನ್ನು ತೋರಿಸುವ ಶಾಟ್ ಅನ್ನು ತೋರಿಸಿದ ನಂತರ ಅವರು ಕುಳಿತ ಜಾಗವನ್ನು ಅಥವಾ ಟೇಬಲ್ ಅನ್ನು ತೋರಿಸಬಹುದು. ಇಬ್ಬರೇ ಕುಳಿತಿದ್ದಾರೆ. ಅವರು ಎದುರು ಬದುರು ಕುಳಿತಿದ್ದಾರಾ..? ಅಕ್ಕ ಪಕ್ಕ ಕುಳಿತಿದ್ದಾರಾ  ಎಂಬುದನ್ನು ವಿವರಿಸುವ ಶಾಟ್ ಅನ್ನು ಚಿತ್ರಿಸಿದರೆ ಅವರು ಹೋಟೆಲ್ಲಿನಲ್ಲಿ, ಕುಳಿತಿರುವ ರೀತಿ ಎರಡೂ ಪ್ರೇಕ್ಷಕನ ತಲೆಯಲ್ಲಿ ಅಚ್ಚೋತ್ತಿದಂತಾಯಿತು. ಆನಂತರ ಇಬ್ಬರ ಮಾತುಗಳನ್ನು ಸೆರೆ ಹಿಡಿಯುತ್ತಾ ಸಾಗಬಹುದು.ಇಬ್ಬರ ಮುಖ್ಯವಾದ ಸಂಭಾಷಣೆ ಮತ್ತು ಪ್ರತಿಕ್ರಿಯೆಗೆ ಕ್ಲೋಸ್ ಬಳಸಿದರೆ ಉತ್ತಮ. ಆದರೆ ಮೊದಲೆಲ್ಲಾ ಪರದೆಯ ಆಕಾರ ಆಯತಾಕಾರವಿದ್ದುದರಿಂದ ಕ್ಲೋಸ್ ಚೆನ್ನಾಗಿ ಕಾಣಿಸುತ್ತಿತ್ತು. ಆದರೆ ಸಿನೆಮಾಸ್ಕೋಪ್ ಬರೀ ಕ್ಲೋಸ್ ಅನ್ನು ಒಂದು ಮೂಲೆಯಲ್ಲಿ ತೋರಿಸುವುದರಿಂದ ಅದಕ್ಕಿಂತ ಓ.ಎಸ್.ಎಸ್. ಉತ್ತಮ ಎನ್ನಬಹುದು.
ಹಾಗೆಯೇ ಶಾಟ್ ನ ಕೋನಗಳೂ ಕೂಡ ಭಾವವನ್ನು ವ್ಯಕ್ತ ಪಡಿಸುತ್ತವೆ. ಹಾಗಾಗಿ ಒಂದು ಶಾಟ್ ಮತ್ತದರ ಚೌಕಟ್ಟು ಜೊತೆಗೆ ಕೋನ ಮೂರನ್ನೂ ಗಮನಿಸಿ ಅದು ಆ ದೃಶ್ಯದ ಭಾವಕ್ಕೆ ಪೂರಕವಾಗಿದೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ. ಇಲ್ಲವಾದಲ್ಲಿ ಇಬ್ಬರು ಸರಸ ಸಲ್ಲಾಪ ದ ಮಾತನ್ನಾಡುತ್ತಿದ್ದರೆ ಕೋನದಿಂದಾಗಿ ಅದರ ಭಾವ ಗಂಭೀರ ಎನಿಸುವ ಸಾಧ್ಯತೆ ಇರುತ್ತದೆ.ಹಾಗೆಯೇ ತುಂಬಾ ಗಂಭೀರವಾದ, ಪ್ರಚೋದನಕಾರಿಯಾದ ಭೇಟಿಯ ದೃಶ್ಯ ನೀರಸವಾಗಿ ಬಿಡುತ್ತದೆ.
ಇಷ್ಟೆಲ್ಲಾ ಯಾಕೆ ತಲೆಕೆಡಿಸಿಕೊಳ್ಳಬೇಕು..? ಎಂಬುದೂ ಒಂದು ಪ್ರಶ್ನೆ. ಯಾಕೆಂದರೆ ಸಂಕಲನ ಮೇಜಿನ ಮೇಲೆ ಕುಳಿತಾಗ ಎಷ್ಟೋ ಸಾರಿ ನಾವಂದು ಕೊಂಡದ್ದು ಬೇರೆ ಅಲ್ಲಿ ಚಿತ್ರೀಕರಿಸಿದ ಭಾವವೇ ಬೇರೆ ಎನಿಸಿರುವುದಕ್ಕೆ ಕಾರಣ ಇದಾಗಿರುತ್ತದೆ.
[ನನ್ನ ಪುಸ್ತಕ ಆಕ್ಷನ್-ಕಟ್ ಇತ್ಯಾದಿ' ಯ ಒಂದು ಅಧ್ಯಾಯ]

Sunday, February 23, 2014

ನಾನು ಕಂಡಂತೆ ಟ್ರೈಲರ್ ಗಳು...

ನಮ್ಮೂರಿನ ಚಿತ್ರಮಂದಿರದಲ್ಲಿ ಯಾವುದೋ ಚಿತ್ರವನ್ನು ನೋಡುತ್ತಿದ್ದೆವು. ಆಗ ಮಧ್ಯಂತರದಲ್ಲಿ ಕನ್ನಡದ ಬಿಡುಗಡೆಯಾಗದ ಚಿತ್ರದ ತುಣುಕು ಪ್ರದರ್ಶನವಾಯಿತು. ಅದೆಷ್ಟು ಕೆಟ್ಟದಾಗಿತ್ತು ಎಂದರೇ ಆವತ್ತೇ ಆ ಚಿತ್ರವನ್ನು ನೋಡಬಾರದೆಂದು ನಾವು ಗೆಳೆಯರು ನಿರ್ಧರಿಸಿ ಬಿಟ್ಟಿದ್ದೆವು. ಬಿಡುಗಡೆಯಾಗಿ ಆ ಚಿತ್ರ ಸೋತಾಗ ನಾವೆಲ್ಲಾ ಆ ಟ್ರೈಲರ್ ಗೆ ಕೈ ಮುಗಿದೆವು. ಯಾಕೆಂದರೆ ಆ ಟ್ರೈಲರ್ ನಮ್ಮ ಹಣ ನೆಮ್ಮದಿ ಸಮಯ ಎಲ್ಲವನ್ನೂ ಉಳಿಸಿತ್ತು. ಆದರೆ ಟ್ರೈಲರ್ ಉದ್ದೇಶವನ್ನು ಮಾತ್ರ ಅದು ತಲೆಕೆಳಗು ಮಾಡಿ ಬಿಟ್ಟಿತ್ತು.
ಆದರೆ ಎಲ್ಲಾ ತುಣುಕುಗಳು ಈ ರೀತಿಯ ಋಣಾತ್ಮಕ ಪ್ರಚಾರ ಮಾಡುವುದಿಲ್ಲ.
ಟ್ರೈಲರ್  ಅಥವಾ ಪ್ರಚಾರ ತುಣುಕು ಒಂದು ಸಿನಿಮಾ ಪ್ರಚಾರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಯಾಕೆಂದರೆ ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚು ಮಾಡುವಲ್ಲಿ ಈ ಪ್ರಚಾರ ತುಣುಕುಗಳ ಪಾತ್ರ ದೊಡ್ಡದು. ಮೊದಲೆಲ್ಲಾ ಚಿತ್ರ ಮಂದಿರಗಳಿಗೆ ಹೋಗಿ ಕುಳಿತಾಗ ಮಧ್ಯಂತರದಲ್ಲಿ ಬರುವ ಟ್ರೈಲರ್ ಗಾಗಿ ಕಾದು ಕುಳಿತುಕೊಳ್ಳುತ್ತಿದ್ದೆ. ಅದರಲ್ಲೂ ಹಾಲಿವುಡ್ ಮಂದಿಯ ಚಿತ್ರ ತುಣುಕುಗಳನ್ನು ನೋಡಲು ಎಂತಹದ್ದೋ ಮಜಾ ಎಂದೆ ಹೇಳಬಹುದು.
ದೂರದರ್ಶನ ಒಂದೇ ಇದ್ದ ಸಮಯದಲ್ಲಿ ಆವಾಗಾವಾಗ ಹೊಸ ಚಿತ್ರಗಳ ತುಣುಕುಗಳು ಪ್ರಚಾರವಾಗುತ್ತಿದ್ದವು. ಆಮೇಲೆ ಉಪಗ್ರಹವಾಹಿನಿಗಳು ಬಂದವು. ಅದಕ್ಕಾಗಿಯೇ ಅರ್ಧಗಂಟೆ ಆ ವಾಹಿನಿಗಳು ಮೀಸಲಿಟ್ಟಿದ್ದವು. ಹೊಸ ಚಿತ್ರಗಳ ತುಣುಕುಗಳು ಅಲ್ಲಿ ಪ್ರದರ್ಶನವಾದರೆ ನೋಡಿ ಆ ಚಿತ್ರದ ಗುಣಮಟ್ಟವನ್ನು ಒಂದು ಮಟ್ಟಗಿನ ಅಂದಾಜು ಮಾಡಬಹುದಿತ್ತು.
ಈ ಪ್ರಚಾರ ತುಣುಕು ಎಂದರೆ ಆವಾಗಲೆಲ್ಲಾ ಬರೀ ಚಿತ್ರದ ಒಂದಷ್ಟು ಮುಖ್ಯ ಅಂಶಗಳ ತುಣುಕು, ಸಂಭಾಷಣೆಗಳು ಸಾಹಸ ದೃಶ್ಯಗಳು ಹಾಡಿನ ಚುಟುಕು ಹೀಗೆ ಇವುಗಳನ್ನು ತುಂಡರಿಸಿ ಜೋಡಿಸಲಾಗಿರುತ್ತಿತ್ತು. ಅಂದರೆ ಅದಕ್ಕಾಗಿಯೇ ವಿಶೇಷವಾದ ಸ್ಕ್ರಿಪ್ಟ್ ಸಿದ್ಧ ಪಡಿಸಿದ್ದು ಕಡಿಮೆಯೇ. ನಾವೆಲ್ಲಾ ಅದನ್ನು ನೋಡಿ ಆ ತುಣುಕು ನೆನಪಲ್ಲಿಟ್ಟುಕೊಂಡು ಚಿತ್ರಗಳಿಗೆ ಹೋಗುತ್ತಿದ್ದೆವು.
ಆದರೆ ಅಂತರ್ಜಾಲ ಬಂದ ಹಾಗೆ ಅದರಲ್ಲಿ ಯು ಟ್ಯೂಬ್ ಪ್ರಚಲಿತವಾದ ಹಾಗೆ ಅದಕ್ಕೆ ಬೇರೆಯದೇ ಆದ ಆಯಾಮ ದೊರೆಯಿತು ಎನ್ನಬಹುದು.
ಚಿತ್ರದ ತುಣುಕು ಎಂದರೆ ನಾ ಕಂಡ ಮಟ್ಟಿಗೆ ಎರಡು ನಿಮಿಷ ಮೂರು ನಿಮಿಷಗಳು ಇರುತ್ತಿದ್ದವು. ಆದರೆ ಕನ್ನಡದ ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಬಂತು ನೋಡಿ ಪ್ರಚಾರ ತುಣುಕಿಗೆ ಹೊಸ ಆಯಾಮವೇ ದೊರಕಿತು. ಇಡೀ ಚಿತ್ರದ ಕಥೆಯನ್ನು ಸೂಚ್ಯವಾಗಿ ತಿಳಿಸುವ ಆಕರ್ಷಕವಾದ ತುಸು ಪೋಲಿ ತುಸು ತಮಾಷೆಯ ಪ್ರೊಮೊ ನಿಜಕ್ಕೂ ಅದೆಷ್ಟು ಚೆನ್ನಾಗಿತ್ತು ಎಂದರೆ ನೋಡಿದವರು ಬೇರೆಯವರಿಗೆ ಹೇಳಲಾಗದೆ, ತೋರಿಸಲಾಗದೆ ಇರಲು ಸಾಧ್ಯವಿರಲಿಲ್ಲ. ಬರೀ ಟ್ರೈಲರ್ ಗಾಗಿಯೇ ಒಂದು ಸ್ಕ್ರಿಪ್ಟ್ ಸಿದ್ಧಪಡಿಸಿದ್ದ ಚಿತ್ರತಂಡ ಎಂಟು ನಿಮಿಷಗಳ ಪ್ರೊಮೊದಿಂದಲೇ ಹೆಸರುವಾಸಿಯಾಗಿತ್ತು. ಕನ್ನಡದ ಮಟ್ಟಿಗೆ ಅದೊಂದು ಹೊಸ ಅಲೆ ಎಬ್ಬಿಸಿತಲ್ಲದೆ ಪ್ರೊಮೊ ವಿಷಯದಲ್ಲಿ ಟ್ರೆಂಡ್ ಸೆಟ್ಟರ್ ಆಯಿತು.
ಅಷ್ಟೇ! ಆಮೇಲೆ ಶುರುವಾಯಿತು ನೋಡಿ ಟ್ರೈಲರ್ ಗಳ ಭರಾಟೆ. ಸಿನಿಮಾ ಮಾಡುವ ಬದಲಿಗೆ ಎಲ್ಲರೂ ಟ್ರೈಲರ್ ಮಾಡಲು ಶುರು ಹಚ್ಚಿಕೊಂಡರು. ಸಿಂಪಲ್ ನಲ್ಲಿದ್ದ ಕೆಲವೇ ಕೆಲವು ದ್ವಂದ್ವಾರ್ಥದ ಸಂಭಾಷಣೆಯನ್ನು ಅಪಾರ್ಥ ಮಾಡಿಕೊಂಡವರು ಇಡೀ ಪ್ರೊಮೊ ತುಂಬಾ ಬರೀ ಸೊಂಟದ ಕೆಳಗಿನ ಭಾಷೆಯನ್ನೇ ಬಳಸತೊಡಗಿದರು. ಮಂಚದ ಸುತ್ತವೇ ಸುತ್ತತೊಡಗಿದ ಮಾತುಗಳು ಮಾತೆತ್ತಿದರೆ ನೀವು ಹುಡುಗಿಯರು ಎಂದೆ ಪ್ರಾರಂಭವಾಗುತ್ತಿದ್ದವು. ಮತ್ತವುಗಳ ಉದ್ದವೂ ಗಮನಾರ್ಹವಾದಷ್ಟು ಉದ್ದವಾಗಿದ್ದಂತೂ ಸತ್ಯ. ಈಗಲೂ ಯೂ ಟ್ಯೂಬ್ ನಲ್ಲಿ ಅಂತಹ ಅಸಹ್ಯಕರವಾದ ಹಲವಾರು ಪ್ರೋಮೊಗಳಿವೆ. ಎಲ್ಲದರಲ್ಲೂ ಹೇರಳವಾದ ಕೆಟ್ಟ ಕೆಟ್ಟ ಅಶ್ಲೀಲ ಎನಿಸುವ ಮಾತುಗಳಿವೆ. ಪೋಲಿತನ, ಶೃಂಗಾರ ತುಂಟುತನ ಅಶ್ಲೀಲ ನಡುವಣ ವ್ಯತ್ಯಾಸ ತಿಳಿಯದ ಗೆಳೆಯ ನಿರ್ದೇಶಕರು ಸುಮ್ಮನೆ ಒಂದು ಕ್ಯಾಮೆರಾ ಹಿಡಿದು ಮನಸ್ಸಿಗೆ ಬಂದ ಅಸಹ್ಯವನ್ನೆಲ್ಲಾ ಪ್ರೊಮೊ ಮೂಲಕ ಕಾರಿಕೊಂಡಿದ್ದಾರೆ. ಈ ಟ್ರೈಲರ್ ಭರಾಟೆ ಅದೆಷ್ಟರ ಮಟ್ಟಿಗೆ ಸಿನಿಮಾಗಳಿಗೆ ಅನಿವಾರ್ಯ ಎನಿಸಿತು ಎಂದರೆ ಎಲ್ಲಾ ನಿರ್ದೇಶಕರು ಅದನ್ನು ಮಾಡತೊಡಗಿದರು. ಹರ್ಷ ಭಜರಂಗಿ ಚಿತ್ರದ ಟ್ರೈಲರ್ ಅನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ ಗಮನ ಸೆಳೆದರು. ಆದರೆ ಅದರಲ್ಲಿ ವಿಶೇಷವಾದ ಕಾನ್ಸೆಪ್ಟ್ ಇರಲಿಲ್ಲ.
ಈಗ ಮತ್ತೆ ಅದೇ ತಂಡ ಉಳಿದವರು ಕಂಡಂತೆ ಚಿತ್ರದ ನಾಲ್ಕು ಚಿಲ್ಲರೆ ನಿಮಿಷಗಳ ಪ್ರೊಮೊ ಬಿಡುಗಡೆ ಮಾಡಿದೆ. ಯಾತಿಕ್ರೋ ಬೋಳಿಮಕ್ಲ ನಗ್ತಾ ಇದ್ದೀರಾ ಶೂಟ್ ಮಾಡ್ಬೇಕಾ ಎನ್ನುವ ಮಾತಿನಿಂದ ಶುರುವಾಗುವ ಪ್ರೊಮೊ ನಿಜಕ್ಕೂ ಆಕರ್ಷಕವಾಗಿದೆ. ಹಾಗೆಯೇ ಚಿತ್ರದ ಬಗ್ಗೆ ಒಂದು ನಿರೀಕ್ಷೆಯನ್ನು ಹುಟ್ಟಿ ಹಾಕಿದೆ. ಒಂದು ಮುತ್ತಿನ ಕತೆಯ ಎಳೆಯನ್ನು ಸೂಚ್ಯವಾಗಿ ಬಿಚ್ಚಿಡುವ ಈ ಪ್ರೊಮೊ ಉಳಿದವರು ಕಂಡಂತೆ ಚಿತ್ರವನ್ನು ನೋಡಲೇಬೇಕಾದ ಚಿತ್ರವನ್ನಾಗಿ ಮಾಡಿಬಿಟ್ಟಿದೆ. ಒಬ್ಬ ನಟನಾಗಿ ತೆರೆಗೆ ಕಾಲಿಟ್ಟ ರಕ್ಷಿತ್ ಅವರ ಪ್ರತಿಭೆ ಇಷ್ಟು ದಿನ ಅದೆಲ್ಲಿ ಅಡಗಿ ಕುಳಿತಿತ್ತು ಅನಿಸುತ್ತದೆ.
ಚಿತ್ರಕ್ಕೆ ತಕ್ಕಂತೆ ಇರುವ ಪ್ರೊಮೊ ದಲ್ಲಿ ದ್ವಂದ್ವಾರ್ಥವಿಲ್ಲದ ಕಾರಣ ಚಿತ್ರತಂಡ ತಮ್ಮದೇ ಸೂತ್ರವನ್ನು ಪರಿವರ್ತಿಸಿಲ್ಲದಿರುವುದು ಮೆಚ್ಚುಗೆಗೆ ಕಾರಣವಾಗಿದೆ ಎನ್ನಬಹುದು.