Sunday, February 23, 2014

ನಾನು ಕಂಡಂತೆ ಟ್ರೈಲರ್ ಗಳು...

ನಮ್ಮೂರಿನ ಚಿತ್ರಮಂದಿರದಲ್ಲಿ ಯಾವುದೋ ಚಿತ್ರವನ್ನು ನೋಡುತ್ತಿದ್ದೆವು. ಆಗ ಮಧ್ಯಂತರದಲ್ಲಿ ಕನ್ನಡದ ಬಿಡುಗಡೆಯಾಗದ ಚಿತ್ರದ ತುಣುಕು ಪ್ರದರ್ಶನವಾಯಿತು. ಅದೆಷ್ಟು ಕೆಟ್ಟದಾಗಿತ್ತು ಎಂದರೇ ಆವತ್ತೇ ಆ ಚಿತ್ರವನ್ನು ನೋಡಬಾರದೆಂದು ನಾವು ಗೆಳೆಯರು ನಿರ್ಧರಿಸಿ ಬಿಟ್ಟಿದ್ದೆವು. ಬಿಡುಗಡೆಯಾಗಿ ಆ ಚಿತ್ರ ಸೋತಾಗ ನಾವೆಲ್ಲಾ ಆ ಟ್ರೈಲರ್ ಗೆ ಕೈ ಮುಗಿದೆವು. ಯಾಕೆಂದರೆ ಆ ಟ್ರೈಲರ್ ನಮ್ಮ ಹಣ ನೆಮ್ಮದಿ ಸಮಯ ಎಲ್ಲವನ್ನೂ ಉಳಿಸಿತ್ತು. ಆದರೆ ಟ್ರೈಲರ್ ಉದ್ದೇಶವನ್ನು ಮಾತ್ರ ಅದು ತಲೆಕೆಳಗು ಮಾಡಿ ಬಿಟ್ಟಿತ್ತು.
ಆದರೆ ಎಲ್ಲಾ ತುಣುಕುಗಳು ಈ ರೀತಿಯ ಋಣಾತ್ಮಕ ಪ್ರಚಾರ ಮಾಡುವುದಿಲ್ಲ.
ಟ್ರೈಲರ್  ಅಥವಾ ಪ್ರಚಾರ ತುಣುಕು ಒಂದು ಸಿನಿಮಾ ಪ್ರಚಾರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಯಾಕೆಂದರೆ ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚು ಮಾಡುವಲ್ಲಿ ಈ ಪ್ರಚಾರ ತುಣುಕುಗಳ ಪಾತ್ರ ದೊಡ್ಡದು. ಮೊದಲೆಲ್ಲಾ ಚಿತ್ರ ಮಂದಿರಗಳಿಗೆ ಹೋಗಿ ಕುಳಿತಾಗ ಮಧ್ಯಂತರದಲ್ಲಿ ಬರುವ ಟ್ರೈಲರ್ ಗಾಗಿ ಕಾದು ಕುಳಿತುಕೊಳ್ಳುತ್ತಿದ್ದೆ. ಅದರಲ್ಲೂ ಹಾಲಿವುಡ್ ಮಂದಿಯ ಚಿತ್ರ ತುಣುಕುಗಳನ್ನು ನೋಡಲು ಎಂತಹದ್ದೋ ಮಜಾ ಎಂದೆ ಹೇಳಬಹುದು.
ದೂರದರ್ಶನ ಒಂದೇ ಇದ್ದ ಸಮಯದಲ್ಲಿ ಆವಾಗಾವಾಗ ಹೊಸ ಚಿತ್ರಗಳ ತುಣುಕುಗಳು ಪ್ರಚಾರವಾಗುತ್ತಿದ್ದವು. ಆಮೇಲೆ ಉಪಗ್ರಹವಾಹಿನಿಗಳು ಬಂದವು. ಅದಕ್ಕಾಗಿಯೇ ಅರ್ಧಗಂಟೆ ಆ ವಾಹಿನಿಗಳು ಮೀಸಲಿಟ್ಟಿದ್ದವು. ಹೊಸ ಚಿತ್ರಗಳ ತುಣುಕುಗಳು ಅಲ್ಲಿ ಪ್ರದರ್ಶನವಾದರೆ ನೋಡಿ ಆ ಚಿತ್ರದ ಗುಣಮಟ್ಟವನ್ನು ಒಂದು ಮಟ್ಟಗಿನ ಅಂದಾಜು ಮಾಡಬಹುದಿತ್ತು.
ಈ ಪ್ರಚಾರ ತುಣುಕು ಎಂದರೆ ಆವಾಗಲೆಲ್ಲಾ ಬರೀ ಚಿತ್ರದ ಒಂದಷ್ಟು ಮುಖ್ಯ ಅಂಶಗಳ ತುಣುಕು, ಸಂಭಾಷಣೆಗಳು ಸಾಹಸ ದೃಶ್ಯಗಳು ಹಾಡಿನ ಚುಟುಕು ಹೀಗೆ ಇವುಗಳನ್ನು ತುಂಡರಿಸಿ ಜೋಡಿಸಲಾಗಿರುತ್ತಿತ್ತು. ಅಂದರೆ ಅದಕ್ಕಾಗಿಯೇ ವಿಶೇಷವಾದ ಸ್ಕ್ರಿಪ್ಟ್ ಸಿದ್ಧ ಪಡಿಸಿದ್ದು ಕಡಿಮೆಯೇ. ನಾವೆಲ್ಲಾ ಅದನ್ನು ನೋಡಿ ಆ ತುಣುಕು ನೆನಪಲ್ಲಿಟ್ಟುಕೊಂಡು ಚಿತ್ರಗಳಿಗೆ ಹೋಗುತ್ತಿದ್ದೆವು.
ಆದರೆ ಅಂತರ್ಜಾಲ ಬಂದ ಹಾಗೆ ಅದರಲ್ಲಿ ಯು ಟ್ಯೂಬ್ ಪ್ರಚಲಿತವಾದ ಹಾಗೆ ಅದಕ್ಕೆ ಬೇರೆಯದೇ ಆದ ಆಯಾಮ ದೊರೆಯಿತು ಎನ್ನಬಹುದು.
ಚಿತ್ರದ ತುಣುಕು ಎಂದರೆ ನಾ ಕಂಡ ಮಟ್ಟಿಗೆ ಎರಡು ನಿಮಿಷ ಮೂರು ನಿಮಿಷಗಳು ಇರುತ್ತಿದ್ದವು. ಆದರೆ ಕನ್ನಡದ ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಬಂತು ನೋಡಿ ಪ್ರಚಾರ ತುಣುಕಿಗೆ ಹೊಸ ಆಯಾಮವೇ ದೊರಕಿತು. ಇಡೀ ಚಿತ್ರದ ಕಥೆಯನ್ನು ಸೂಚ್ಯವಾಗಿ ತಿಳಿಸುವ ಆಕರ್ಷಕವಾದ ತುಸು ಪೋಲಿ ತುಸು ತಮಾಷೆಯ ಪ್ರೊಮೊ ನಿಜಕ್ಕೂ ಅದೆಷ್ಟು ಚೆನ್ನಾಗಿತ್ತು ಎಂದರೆ ನೋಡಿದವರು ಬೇರೆಯವರಿಗೆ ಹೇಳಲಾಗದೆ, ತೋರಿಸಲಾಗದೆ ಇರಲು ಸಾಧ್ಯವಿರಲಿಲ್ಲ. ಬರೀ ಟ್ರೈಲರ್ ಗಾಗಿಯೇ ಒಂದು ಸ್ಕ್ರಿಪ್ಟ್ ಸಿದ್ಧಪಡಿಸಿದ್ದ ಚಿತ್ರತಂಡ ಎಂಟು ನಿಮಿಷಗಳ ಪ್ರೊಮೊದಿಂದಲೇ ಹೆಸರುವಾಸಿಯಾಗಿತ್ತು. ಕನ್ನಡದ ಮಟ್ಟಿಗೆ ಅದೊಂದು ಹೊಸ ಅಲೆ ಎಬ್ಬಿಸಿತಲ್ಲದೆ ಪ್ರೊಮೊ ವಿಷಯದಲ್ಲಿ ಟ್ರೆಂಡ್ ಸೆಟ್ಟರ್ ಆಯಿತು.
ಅಷ್ಟೇ! ಆಮೇಲೆ ಶುರುವಾಯಿತು ನೋಡಿ ಟ್ರೈಲರ್ ಗಳ ಭರಾಟೆ. ಸಿನಿಮಾ ಮಾಡುವ ಬದಲಿಗೆ ಎಲ್ಲರೂ ಟ್ರೈಲರ್ ಮಾಡಲು ಶುರು ಹಚ್ಚಿಕೊಂಡರು. ಸಿಂಪಲ್ ನಲ್ಲಿದ್ದ ಕೆಲವೇ ಕೆಲವು ದ್ವಂದ್ವಾರ್ಥದ ಸಂಭಾಷಣೆಯನ್ನು ಅಪಾರ್ಥ ಮಾಡಿಕೊಂಡವರು ಇಡೀ ಪ್ರೊಮೊ ತುಂಬಾ ಬರೀ ಸೊಂಟದ ಕೆಳಗಿನ ಭಾಷೆಯನ್ನೇ ಬಳಸತೊಡಗಿದರು. ಮಂಚದ ಸುತ್ತವೇ ಸುತ್ತತೊಡಗಿದ ಮಾತುಗಳು ಮಾತೆತ್ತಿದರೆ ನೀವು ಹುಡುಗಿಯರು ಎಂದೆ ಪ್ರಾರಂಭವಾಗುತ್ತಿದ್ದವು. ಮತ್ತವುಗಳ ಉದ್ದವೂ ಗಮನಾರ್ಹವಾದಷ್ಟು ಉದ್ದವಾಗಿದ್ದಂತೂ ಸತ್ಯ. ಈಗಲೂ ಯೂ ಟ್ಯೂಬ್ ನಲ್ಲಿ ಅಂತಹ ಅಸಹ್ಯಕರವಾದ ಹಲವಾರು ಪ್ರೋಮೊಗಳಿವೆ. ಎಲ್ಲದರಲ್ಲೂ ಹೇರಳವಾದ ಕೆಟ್ಟ ಕೆಟ್ಟ ಅಶ್ಲೀಲ ಎನಿಸುವ ಮಾತುಗಳಿವೆ. ಪೋಲಿತನ, ಶೃಂಗಾರ ತುಂಟುತನ ಅಶ್ಲೀಲ ನಡುವಣ ವ್ಯತ್ಯಾಸ ತಿಳಿಯದ ಗೆಳೆಯ ನಿರ್ದೇಶಕರು ಸುಮ್ಮನೆ ಒಂದು ಕ್ಯಾಮೆರಾ ಹಿಡಿದು ಮನಸ್ಸಿಗೆ ಬಂದ ಅಸಹ್ಯವನ್ನೆಲ್ಲಾ ಪ್ರೊಮೊ ಮೂಲಕ ಕಾರಿಕೊಂಡಿದ್ದಾರೆ. ಈ ಟ್ರೈಲರ್ ಭರಾಟೆ ಅದೆಷ್ಟರ ಮಟ್ಟಿಗೆ ಸಿನಿಮಾಗಳಿಗೆ ಅನಿವಾರ್ಯ ಎನಿಸಿತು ಎಂದರೆ ಎಲ್ಲಾ ನಿರ್ದೇಶಕರು ಅದನ್ನು ಮಾಡತೊಡಗಿದರು. ಹರ್ಷ ಭಜರಂಗಿ ಚಿತ್ರದ ಟ್ರೈಲರ್ ಅನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ ಗಮನ ಸೆಳೆದರು. ಆದರೆ ಅದರಲ್ಲಿ ವಿಶೇಷವಾದ ಕಾನ್ಸೆಪ್ಟ್ ಇರಲಿಲ್ಲ.
ಈಗ ಮತ್ತೆ ಅದೇ ತಂಡ ಉಳಿದವರು ಕಂಡಂತೆ ಚಿತ್ರದ ನಾಲ್ಕು ಚಿಲ್ಲರೆ ನಿಮಿಷಗಳ ಪ್ರೊಮೊ ಬಿಡುಗಡೆ ಮಾಡಿದೆ. ಯಾತಿಕ್ರೋ ಬೋಳಿಮಕ್ಲ ನಗ್ತಾ ಇದ್ದೀರಾ ಶೂಟ್ ಮಾಡ್ಬೇಕಾ ಎನ್ನುವ ಮಾತಿನಿಂದ ಶುರುವಾಗುವ ಪ್ರೊಮೊ ನಿಜಕ್ಕೂ ಆಕರ್ಷಕವಾಗಿದೆ. ಹಾಗೆಯೇ ಚಿತ್ರದ ಬಗ್ಗೆ ಒಂದು ನಿರೀಕ್ಷೆಯನ್ನು ಹುಟ್ಟಿ ಹಾಕಿದೆ. ಒಂದು ಮುತ್ತಿನ ಕತೆಯ ಎಳೆಯನ್ನು ಸೂಚ್ಯವಾಗಿ ಬಿಚ್ಚಿಡುವ ಈ ಪ್ರೊಮೊ ಉಳಿದವರು ಕಂಡಂತೆ ಚಿತ್ರವನ್ನು ನೋಡಲೇಬೇಕಾದ ಚಿತ್ರವನ್ನಾಗಿ ಮಾಡಿಬಿಟ್ಟಿದೆ. ಒಬ್ಬ ನಟನಾಗಿ ತೆರೆಗೆ ಕಾಲಿಟ್ಟ ರಕ್ಷಿತ್ ಅವರ ಪ್ರತಿಭೆ ಇಷ್ಟು ದಿನ ಅದೆಲ್ಲಿ ಅಡಗಿ ಕುಳಿತಿತ್ತು ಅನಿಸುತ್ತದೆ.
ಚಿತ್ರಕ್ಕೆ ತಕ್ಕಂತೆ ಇರುವ ಪ್ರೊಮೊ ದಲ್ಲಿ ದ್ವಂದ್ವಾರ್ಥವಿಲ್ಲದ ಕಾರಣ ಚಿತ್ರತಂಡ ತಮ್ಮದೇ ಸೂತ್ರವನ್ನು ಪರಿವರ್ತಿಸಿಲ್ಲದಿರುವುದು ಮೆಚ್ಚುಗೆಗೆ ಕಾರಣವಾಗಿದೆ ಎನ್ನಬಹುದು.

No comments:

Post a Comment