Saturday, June 4, 2016

ಗೋದಿ ಬಣ್ಣ ಸಾಧಾರಣ ಮೈಕಟ್ಟು-ಚಿತ್ರವಿಮರ್ಶೆ

ಮಾತಿಗೆ ಮೊದಲೇ ಹೇಳಬೇಕೆಂದರೆ ಇದೊಂದು ಭಾವಪೂರ್ಣ ಚಿತ್ರ. ಇಡೀ ಚಿತ್ರದ ತುಂಬಾ ನೋಡುಗನನ್ನು ಆವರಿಸಿಕೊಳ್ಳುವುದು ಭಾವುಕತೆ. ಈವತ್ತಿನ ಬ್ಯುಸಿ ಜಗತ್ತಿನ ಮಗ, ಅರಳುಮರಳು ಖಾಯಿಲೆಯ ಅಪ್ಪ ಇವರ ನಡುವಣ ಸಂಬಂಧಗಳ ಸೂಕ್ಷ್ಮಗಳ ಜೊತೆಗೆ ಒಂದಷ್ಟು ಥ್ರಿಲ್ಲರ್ ಅಂಶಗಳನ್ನು ಬೆರೆಸಿರುವ ಚಿತ್ರವಿದು. ಹಾಗಾಗಿ ಒಂದೊಳ್ಳೆ ಕೌಟುಂಬಿಕ ಚಿತ್ರವನ್ನು ನೋಡಬೇಕೆನ್ನುವ ಹಗುರ ಮನದ ನೋಡುಗರಿಗೆ ಹೇಳಿ ಮಾಡಿಸಿದ ಚಿತ್ರವಿದು.
ಚಿತ್ರದ ಕತೆ ಸಾಧಾರಣವಾದದ್ದೆ. ಅಲ್ಜಮೈರ್ ಖಾಯಿಲೆಯ ತಂದೆಯನ್ನು ಮನೆಯಲ್ಲಿಟ್ಟುಕೊಳ್ಳಲಾಗದ ಅನಿವಾರ್ಯ ಪರಿಸ್ಥಿತಿಯಿಂದಾಗಿ ಆತನನ್ನು ಸರ್ಕಾರೇತರ ಸಂಸ್ಥೆಗೆ ಸೇರಿಸುತ್ತಾನೆ ಶಿವ, ಅಥವಾ ಈಗಾಗಲೇ ಸೇರಿಸಿದ್ದಾನೆ. ತಂದೆಯನ್ನು ನೋಡಲು ಬಂದು ಮತ್ತೆ ಅವನನ್ನು ವಾಪಸ್ಸು ಕರೆತರುವಾಗ ತನ್ನದೇ ನಿರ್ಲಕ್ಷ್ಯದಿಂದಾಗಿ ತಂದೆ ವೆಂಕೋಬರಾವ್ ತಪ್ಪಿಸಿಕೊಳ್ಳುವಂತಾಗುತ್ತದೆ. ಸಂಸ್ಥೆಯ ತಾಯಿಗರುಳಿನ ವೈದ್ಯೆ ಸಹನಾ ಜೊತೆಗೆ ತಂದೆಯನ್ನು ಹುಡುಕುತ್ತಾ ಸಾಗುವ ಶಿವನಿಗೆ ಅಪ್ಪನ ಗೈರುಹಾಜರಿಯಲ್ಲಿ ಅಪ್ಪ ಸಿಗುತ್ತಾ ಹೋಗುತ್ತಾನೆ. ತಪ್ಪಿಸಿಕೊಂಡ ತಂದೆ ಸಿಗುತ್ತಾರಾ..?
ಚಿತ್ರ ಪ್ರಾರಂಭದಿಂದಲೇ ಮಂದಗತಿಯಲ್ಲಿ ಪಯಣ ಆರಂಭಿಸುತ್ತದೆ.. ನಿರ್ದೇಶಕರ ಸ್ಕ್ರಿಪ್ಟ್ ರಚನೆ ಮತ್ತು  ನಿರೂಪಣೆ ಯಾವುದೇ ಧಾವಂತವಿಲ್ಲದೆ ಕತೆ ಹೇಳುತ್ತಾ ಸಾಗುತ್ತದೆ. ಚಿಕ್ಕ ಚಿಕ್ಕ ಅಂಶಗಳನ್ನು ಜೋಡಿಸುತ್ತಾ ಚಿತ್ತಾರ ಬಿಡಿಸುತ್ತಾ ಸಾಗುವ ನಿರ್ದೇಶಕರು ತಮ್ಮ ಪಾತ್ರಗಳ ಆಯ್ಕೆಯಲ್ಲಿಯೇ ಅರ್ಧ ಗೆದ್ದಿದ್ದಾರೆ.  ಸಿನಿಮಾದ ಸಿದ್ಧ ಸೂತ್ರಗಳನ್ನು ಬದಿಗಿಟ್ಟು ಒಂದು ಕಾದಂಬರಿ ರೀತಿಯಲ್ಲಿ ಕತೆ ಹೇಳುತ್ತಾ ಸಾಗುತ್ತಾರೆ. ಒಮ್ಮೊಮ್ಮೆ ಏನಾಗುತ್ತದೆಯೋ ಎನ್ನುವ ಕಾತುರ ಕಳವಳ ಉಂಟು ಮಾಡುವ ಚಿತ್ರಕತೆ ಅಲ್ಲಲ್ಲಿ ಆದ್ರಗೊಳಿಸುತ್ತಾ ಸಾಗುತ್ತದೆ.
ಚಿತ್ರದ ಮುಖ್ಯಭೂಮಿಕೆಯಲ್ಲಿ ಅನಂತ ನಾಗ್ ನಟಿಸಿದ್ದಾರೆ. ಅವರ ಅನುಭವ, ಅವರ ವಯೋಮಾನಕ್ಕೆ ಎರಡೂ ಕತೆಯ ಪಾತ್ರಕ್ಕೆ ಸಾಥ್ ನೀಡಿರುವುದರಿಂದ ಅವರ ಅಭಿನಯದ ಬಗ್ಗೆ ಹೇಳಲು ಅವರು ಏನನ್ನೂ ಉಳಿಸುವುದಿಲ್ಲ. ನಾಯಕನಾಗಿ ರಕ್ಷಿತ್ ಶೆಟ್ಟಿ, ನಾಯಕಿಯಾಗಿ ಶ್ರುತಿಹರಿಹರನ್ ಅಚ್ಚುಕಟ್ಟಾಗಿ ಅಭಿನಯಿಸಿದ್ದರೂ ವಸಿಷ್ಠ ಸಿಂಹ ಗಮನ ಸೆಳೆಯುತ್ತಾರೆ. ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಸಿನಿಮಾಕ್ಕೆ ಪೂರಕವಾಗಿದೆ. ತಮ್ಮ ಮೊದಲ ಚಿತ್ರದಲ್ಲಿಯೇ ಒಂದು ಕೌಟುಂಬಿಕ ಕತೆಯನ್ನು ಕೈಗೆತ್ತಿಕೊಂಡಿರುವ ಹೇಮಂತ್ ಮೆಚ್ಚುಗೆ ಗಳಿಸುತ್ತಾರೆ.

ಜೊತೆಗೆ ಇಡೀ ಚಿತ್ರದಲ್ಲಿ ಒಂದೇ ಭಾವ ಸಾಗುತ್ತದೆ. ಹಾಗಾಗಿ ಒಂದಷ್ಟು ಹಾಸ್ಯ ಮನರಂಜನೆ ಇತ್ಯಾದಿ ಇತ್ಯಾದಿ ಬಯಸುವ ಹಾಡು ಕುಣಿತ ಅಪೇಕ್ಷೆ ಪಡುವ ಅಥವಾ ಜಾಲಿ ಸಿನಿಮಾ ಬೇಕೆನ್ನುವ ಪ್ರೇಕ್ಷಕ ನೀವಾಗಿದ್ದರೆ ಗೋದಿಬಣ್ಣ ಸಾಧಾರಣ ಎನಿಸುವ ಸಾಧ್ಯತೆ ಇದೆ. ಅಲ್ಲಲ್ಲಿ ತುಸುವೇ ನಿಧಾನ ಎನಿಸುವ ಸಾಧ್ಯತೆಯೂ ಇಲ್ಲದಿಲ್ಲ. ಅದಷ್ಟನ್ನು ಪಕ್ಕಕ್ಕಿಟ್ಟು ಹೊಸಬರ ಪ್ರಯತ್ನವನ್ನು ಶ್ಲಾಘಿಸುವ ಮನಸ್ಸಿದ್ದರೆ ಗೋದಿಬಣ್ಣ ನಿಮಗೆ ಮೋಸ ಮಾಡುವುದಿಲ್ಲ.

Thursday, June 2, 2016

ಯೋಗರಾಜ್ ಭಟ್ಟರ ಪತ್ರ ಮತ್ತು ರವಿಚಂದ್ರನ್ ಅಪೂರ್ವ...

ಅಪೂರ್ವ ರವಿಚಂದ್ರನ್ ಚಿತ್ರ. ಅವರದೇ ಕನಸು ಕನವರಿಕೆ ಕನಲಿಕೆಯನ್ನು ಒಳಗೊಂಡಿರುವ ಚಿತ್ರ. ಆದರೆ ಅದು ಪ್ರೇಕ್ಷಕರನ್ನು ತಟ್ಟುವಲ್ಲಿ ಯಶಸ್ವಿಯಾಗದೆ ಇರುವುದು ನೋಡುಗನಲ್ಲಿ ಬೇಸರ ಉಂಟುಮಾಡಿದ್ದು ಸತ್ಯ. ರವಿಚಂದ್ರನ್ ಎನ್ನುವ ಕನ್ನಡದ ಕ್ರೇಜಿಸ್ಟಾರ್ , ಶೋ ಮ್ಯಾನ್ ಬಗೆಗೆ ಒಂದಷ್ಟು ಎಳಸು ಚಿತ್ರಕರ್ಮಿಗಳು ಎಳಸಾಗಿ ಮಾತನಾಡಿದ್ದು ಕಂಡ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಒಂದು ಪತ್ರವನ್ನು ಬರೆದಿದ್ದಾರೆ, ಅದನ್ನು ಬರಹಗಾರ ಜೋಗಿ ಪ್ರಕಟಿಸಿದ್ದಾರೆ. ಒಕ್ಕಣೆ ಓದಿದಾಗ ಭಟ್ಟರ ಕಳಕಳಿ ಇಷ್ಟವಾಗುವುದಕ್ಕಿಂತ ಆಪ್ತವಾಗುತ್ತದೆ. ಹೌದಲ್ಲ, ರವಿಚಂದ್ರನ್ ಅವರ ಒಂದು ಅಪೂರ್ವ ಅದರ ಹಿಂದಿನ ಒಂದು ಬೇಸರವನ್ನು ಇಟ್ಟುಕೊಂಡು ಸುಖಾಸುಮ್ಮನೆ ಬ್ರಹ್ಮನಂತೆ ನಾವು ಮಾತನಾಡುವ ಯೋಗ್ಯತೆ ನಮಗೆ ಇದೆಯಾ ಎನಿಸುತ್ತದೆ. ಏಕೆಂದರೆ ರವಿಚಂದ್ರನ್ ಕನ್ನಡಕ್ಕೆ ಗ್ಲಾಮರ್ ತಂದುಕೊಟ್ಟವರು, ಶ್ರೀಮಂತಿಕೆ ತಂದುಕೊಟ್ಟವರು, ಅವರು ತುಟಿಗೆ ತುಟಿ ಇಟ್ಟು ಚುಂಬಿಸಿದರೆ ನಮಗೆ ಅಂತಹ ಮುಜುಗರವಾಗುವುದಿಲ್ಲ, ಅವರು ಹೊಕ್ಕಳ ಮೇಲೆ ದ್ರಾಕ್ಷಿ ಹಾಕಿದರೆ ಅದು ಅಸಹ್ಯ ಎನಿಸುವುದಿಲ್ಲ, ಆ ಮಟ್ಟಿಗೆ ನಮ್ಮ ಮನೆಮನೆಗಳಲ್ಲಿ ಮನದಾಳದಲ್ಲಿ ಹೆಸರು ಮಾಡಿದ್ದು ರವಿಚಂದ್ರನ್. ಸುಮ್ಮನೆ ಗಮನಿಸಿದರೆ ರವಿಚಂದ್ರನ್ ಅವರ ಶೃಂಗಾರ ಚಿತ್ರಣದ ಅರ್ಧದಷ್ಟನ್ನು ಕಾಶಿನಾಥ್ ಮಾಡಿದರೆ ಸಾಕು, ಅದು ಪೋಲಿ ಸಿನಿಮವಾಗುತ್ತದೆ, ಹೆಂಗಸರು ಮೂಗು ಮುರಿಯದೆ ಇರಲಾರರು, ಆದರೆ ರವಿಚಂದ್ರನ್ ಹೆಂಗೆಳೆಯರಿಗೆ ಅಚ್ಚುಮೆಚ್ಚು,  ಅವರು ಪೋಲಿಯಲ್ಲ, ಬದಲಿಗೆ ತುಂಟ..ಇಂತಹ ಒಂದು ಇಮೇಜ್ ಸೃಷ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ಆವತ್ತಿಗೆ ಹಳ್ಳಿಮೇಷ್ಟ್ರು ಸಿನೆಮಾವನ್ನು ಇಡೀ ಊರಿಗೆ ಊರೇ ಬಸ್ಸಿನಲ್ಲಿ, ಎತ್ತಿನ ಗಾಡಿಗಳಲ್ಲಿ ಕುಟುಂಬ ಸಮೇತರಾಗಿ ಬಂದು ನೋಡಿದ್ದಿದೆ. ಏಯ್ ರವಿಚಂದ್ರನ್ ಸಿನಿಮಾ ನೋಡಬೇಡ ಎಂದು ನಮಗೆ ಹಿರಿಯರು ಹೇಳಿದ್ದು ನೆನಪಿಲ್ಲ, ಆದರೆ ಕಾಶಿನಾಥ್ ಸಿನಿಮಾ ನೋಡಿದಾಗ ಬೈದದ್ದು ನೆನಪಿದೆ.[ನಮ್ಮಲ್ಲಿ ಇಂಗ್ಲೀಷ್, ಮಲಯಾಳಂ ಭಕ್ತಿಚಿತ್ರಗಳನ್ನು ನೋಡಿದಾಗಲೂ ಬರೀ ಆ ಭಾಷೆಯಿಂದಲೇ ಅದೊಂದು ಅಶ್ಲೀಲ ಎಂದುಕೊಂಡು ಬೈದವರಿದ್ದಾರೆ]
ಸುಮ್ಮನೆ ಗಮನಿಸಿದರೆ ರವಿಚಂದ್ರನ್ ಕನ್ನಡದಲ್ಲಿ ಸಿರಿವಂತಿಕೆ ತಂದದ್ದು ಸತ್ಯ. ಅವರ ಪ್ರೇಮಲೋಕ  ಚಿತ್ರದ ನಂತರ ಇಲ್ಲಿಯವರೆಗೆ ರವಿಚಂದ್ರನ್ ಸುಮಾರು ಅರವತ್ತೆಂಟಕ್ಕೂ  ಹೆಚ್ಚು   ಚಿತ್ರಗಳಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಅನಾಮತ್ತು ನಲವತ್ತನಾಲ್ಕು  ಚಿತ್ರಗಳು ಅಧಿಕೃತ ರಿಮೇಕ್ ಗಳು. ಇನ್ನು  ಅವರೇ ಇಷ್ಟಪಟ್ಟು ಸ್ವಮೇಕ್ ಮಾಡಿದ ಅದ್ದೂರಿ ಚಿತ್ರಗಳಲ್ಲಿ  ಶಾಂತಿಕ್ರಾಂತಿ, ಚಿನ್ನ, ಕಿಂದರಜೋಗಿ, ರಸಿಕ, ಜಾಣ, ಕಲಾವಿದ, ಮೊಮ್ಮಗ, ಹಠವಾದಿ ಮುಂತಾದ ಚಿತ್ರಗಳು ಯಾವುದೇ ರೀತಿಯಲ್ಲಿಯೂ ಗಮನ ಸೆಳೆಯುವಂತಹದ್ದಲ್ಲ. ಸೂಪರ್ ಡೂಪರ್ ಹಿಟ್ ಚಿತ್ರವಾದ ಮಲ್ಲ  ಚಿತ್ರದಲ್ಲಿಯೂ ಯಶಸ್ಸಿಗೆ ಬೇರೆ ಮಾನದಂಡವನ್ನು ಹುಡುಕಬಹುದು.
ದೃಶ್ಯಮಾಧ್ಯಮದಲ್ಲಿ ಏನೆಲ್ಲಾ ಹೊಸತನ್ನು ಸಿರಿವಂತಿಕೆಯನ್ನು ಕನ್ನಡಕ್ಕೆ ತಂದುಕೊಟ್ಟ ಇಂತಹ ನಿರ್ಮಾಪಕ ನಿರ್ದೇಶಕ ಉತ್ತಮ ಬರಹಗಾರರನ್ನು ಕತೆಗಾರರನ್ನು ಹುಟ್ಟುಹಾಕದೆ ಇದ್ದದ್ದು ವಿಪರ್ಯಾಸ. ಹಂಸಲೇಖರಂತಹ ಮಹಾನ್  ಸಂಗೀತ  ನಿರ್ದೇಶಕ ಸಾಹಿತ್ಯಕಾರನನ್ನು ಪೋಷಿಸಿದ ರವಿಚಂದ್ರನ್ ಯಾಕೆ ಕತೆಯ ವಿಷಯದಲ್ಲಿ ತಲೆ ಕೆಡಿಸಿಕೊಳ್ಳಲಿಲ್ಲ ಎಂಬುದು ಪ್ರಶ್ನೆ. ಕತೆಗಾರರನ್ನು, ಚಿತ್ರಕತೆಗಾರರನ್ನು ಹುಟ್ಟು ಹಾಕುವ ಕಡೆಗೆ ಅಥವಾ ನಮ್ಮಲ್ಲಿನ ಕಾದಂಬರಿಯನ್ನೂ ಕತೆಯನ್ನೂ ಸಿನಿಮಾರೂಪಕ್ಕೆ ತರುವ ಕಡೆಗೆ ರವಿಚಂದ್ರನ್ ಗಮನ ಹರಿಸಿದ್ದರೆ ಬಹುಶಃ ಈವತ್ತು ಕನ್ನಡದ ರವಿಚಂದ್ರನ್ ಬೇರೆ ಭಾಷೆಗಳಲ್ಲಿ ಬರೀ ಉತ್ತಮ ತಂತ್ರಜ್ಞ ಎಂದಷ್ಟೇ ಹೆಸರಾಗುತ್ತಿರಲಿಲ್ಲ.  ರವಿಚಂದ್ರನ್ ಅವರ ಸಿನಿಮಾ ಪಟ್ಟಿಯಲ್ಲಿ ಯಶಸ್ವಿ ಚಿತ್ರಗಳು ದೊರೆಯುತ್ತವೆಯೇ ಹೊರತು ಸ್ವಂತಿಕೆಯ ನಮ್ಮದೇ ಎನಿಸುವ ಹೆಮ್ಮೆಯಿಂದ ಹೇಳಿಕೊಳ್ಳುವ ಚಿತ್ರಗಳ ಸಂಖ್ಯೆ ಕಡಿಮೆ ಅಥವಾ ಇಲ್ಲವೇ ಇಲ್ಲ. ಒಬ್ಬ ನಟ ನಿರ್ಮಾಪಕ ಬರೀ ರಿಮೇಕ್ ಚಿತ್ರಗಳಿಂದಲೇ ತನ್ನ ಸ್ಥಾನವನ್ನು ಗುರುತಿಸಿಕೊಂಡದ್ದು ಒಂದು ರೀತಿಯಲ್ಲಿ ಬೇಸರದ ಸಂಗತಿಯೇ. ನಮ್ಮಲ್ಲಿನ ಒಂದಷ್ಟು ಕತೆಗಾರರನ್ನು ಚಿತ್ರಕತೆಗಾರರನ್ನು ರವಿಚಂದ್ರನ್ ಹುಟ್ಟುಹಾಕಿ ಸ್ವಂತಿಕೆಯ ಚಿತ್ರಗಳನ್ನು ನೀಡಿದ್ದರೇ ಅದರ ಖದರ್ರೆ ಬೇರೆಯಾಗುತ್ತಿತ್ತೇನೋ? ಆದರೆ  ರವಿಚಂದ್ರನ್ ಸ್ವಮೇಕ್ ಚಿತ್ರಗಳನ್ನು ಮಾಡಿದಾಗಲೆಲ್ಲಾ ಬಹುತೇಕ ಸೋತಿದ್ದಾರೆ. ಅವರ ಪ್ರೇಮಲೋಕ[ಅದು ಇಂಗ್ಲೀಷಿನ ಗ್ರೀಸ್ ನ ಸ್ಫೂರ್ತಿ] ಹೊರತುಪಡಿಸಿದರೆ ಆನಂತರ ಅವರು ಕೈಗೆತ್ತಿಕೊಂಡದ್ದು ಕಿಂದರಜೋಗಿ.ಆ  ಚಿತ್ರವನ್ನು. ಲೆಕ್ಕವಿಲ್ಲದಷ್ಟು ದಿನ ಚಿತ್ರೀಕರಣ ಮಾಡಿದ್ದು, ಮರು ಚಿತ್ರೀಕರಣ ಮಾಡಿದ್ದು ಅವರ ಆ ಸಿನಿಮಾದ ಹೆಗ್ಗಳಿಕೆ. ಆದರೆ ಚಿತ್ರ ಅವರಿಗೆ ಯಶಸ್ಸು ತಂದುಕೊಡಲಿಲ್ಲ..ಆನಂತರ ಮತ್ತೆ ರಾಮಾಚಾರಿಯಿಂದ ಚೇತರಿಸಿಕೊಂಡು ಶಾಂತಿಕ್ರಾಂತಿ ಬಿಡುಗಡೆಗೊಳಿಸಿದ್ದು ಅವರಿಗಾಗಲಿ, ಪ್ರೇಕ್ಷಕನಿಗಾಗಲಿ ಖುಷಿ ಕೊಡಲಿಲ್ಲ..ಅದಾದ ನಂತರ ಸಾಲು ಸಾಲು ರಿಮೇಕ್ ಮಾಡಿ ಗೆದ್ದ ಕ್ರೇಜಿಸ್ಟಾರ್ ಮತ್ತೆ ಸ್ವಮೇಕ್ ಎಂದು ಚಿನ್ನ ಮಾಡಿ ಸೋತರು. ಹೀಗೆ ಗಮನಿಸುತ್ತಾ ಹೋದರೆ ರವಿಚಂದ್ರನ್ ಅವರ ಯಶಸ್ಸು ನಿಂತಿರುವುದು ರಿಮೇಕ್ ಮೇಲೆಯೇ ಎನಿಸುತ್ತದೆ. ಇದು ಸರಿಯೋ ತಪ್ಪೋ...ಅಂತೂ ಬೇರೆ ನಿರ್ದೇಶಕರ, ಬೇರೆ ಭಾಷೆಯ ಸಿನಿಮಾ ಕತೆಗಳನ್ನು ತಂದು ಇಲ್ಲಿ ಸಿನಿಮಾ ಮಾಡಿ ಗೆದ್ದ ರವಿಚಂದ್ರನ್ ನಮ್ಮಲ್ಲಿನ ಕತೆಗಳನ್ನು, ಕತೆಗಾರರನ್ನು ನಂಬದೆ ಇದ್ದದ್ದು ವಿಪರ್ಯಾಸ.
ಈವತ್ತಿಗೂ ಏಕಾಂಗಿ ಆಗಿರಬಹುದು, ಅಥವಾ ಇತ್ತೀಚಿನ ಅಪೂರ್ವ ಆಗಿರಬಹುದು. ಏನಾದರೂ ಒಂದು ವಿಭಿನ್ನವಾದ ಅಥವಾ ವಿಶೇಷವಾದದ್ದನ್ನು ಮಾಡಬೇಕೆನ್ನುವ ತುಡಿತ ಆ ಚಿತ್ರಗಳಲ್ಲಿ ಕಾಣಸಿಗುವುದು ಸತ್ಯ. ಆದರೆ ಬರೀ ಆಶಯವಷ್ಟೇ ಸಿನಿಮಾ ಅಲ್ಲವಲ್ಲ. ಅಥವಾ ಎಲ್ಲವನ್ನು ಒಬ್ಬರೇ ಒಂದೆಡೆಯೇ ಕುಳಿತುಮಾಡಲು ಸಾಧ್ಯವೇ..? ಅದೀಗ ಮತ್ತೆ ಪ್ರೂವ್ ಆಗಿದೆ ಅಷ್ಟೇ. ಅಪೂರ್ವ ಚಿತ್ರದಲ್ಲಿನ ಒಂದೇ ಲಿಫ್ಟ್, ಹತ್ತೊಂಭತ್ತರ ಯುವತಿ ಮತ್ತು ಅರವತ್ತೊಂದರ ವೃದ್ಧನ ನಡುವಣ ಪ್ರೀತಿ ನಿರೀಕ್ಷಿತ ಭಾವನೆಗಳನ್ನು ಹುಟ್ಟುಹಾಕದೆ ಇದ್ದದ್ದಕ್ಕೆ ತಾಂತ್ರಿಕ ಅಂಶಗಳು ಏನೇ ಇರಲಿ, ಚಿತ್ರಕತೆ-ಕತೆ ಮುಖ್ಯ ಕಾರಣ. ಅದಕ್ಕೆ ಬೇಕಾದಂತಹ ಕತೆಯನ್ನು ರವಿಚಂದ್ರನ್ ನಮ್ಮಲ್ಲಿನ ಕತೆಗಾರರ ಕೈಯಲ್ಲಿ ಹೆಣಿಸಬಹುದಿತ್ತೇನೋ?ಆದರೆ ಎಲ್ಲವನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡದ್ದರ ಪರಿಣಾಮವೋ ಏನೋ..?ಭಾರಕ್ಕೆ ಜಗ್ಗಿದಂತಾಗಿದೆ ಸಿನಿಮಾ. ಒಬ್ಬ ನಿರ್ದೇಶಕ ನಟ, ನಟಿ ಅದೆಷ್ಟೇ ಇಷ್ಟವಾಗಲಿ, ಅವರ ಹಿಂದಿನ ಚಿತ್ರಗಳ ಸವಿನೆನಪು ಅದೆಷ್ಟೇ ಗಾಢವಾಗಿರಲಿ,  ಅವರದೇ ಸಿನಿಮಾ  ನಿರೀಕ್ಷಿಸಿದಂತೆ ಇರದಿದ್ದರೆ  ಚಿತ್ರಮಂದಿರದ ಒಳಗಣ ಎರಡೂವರೆ ಘಂಟೆ ಯಾತನಾಮಯ ಅನಿಸುವುದು ಸತ್ಯ. ಹಾಗಾಗಿಯೇ ಒಂದಷ್ಟು ಜನರು ಆ ಅಸಹನೆಯನ್ನು ಹೊರಹಾಕಿದ್ದಾರೆ ಎನಿಸುತ್ತದೆ. ಅಷ್ಟೇ.. ಅದರಾಚೆಗೆ ಬೇರೇನನ್ನೂ ಊಹಿಸಿಕೊಳ್ಳುವುದು ಸಮಂಜಸ ಅಲ್ಲವೇನೋ?