Thursday, October 18, 2012

ನಿರ್ಮಾಪಕ ರಾಮುರವರ ಜೊತೆ ಮಾತಾಡಿದ್ದು..

ಆವತ್ತು ಲಾಕಪ್ ಡೆತ್ ಸಿನೆಮಾ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. ನನಗೋ ಸಂಭ್ರಮ .ಅದೊಂದು ಅದ್ಭುತ ಫೈಟಿಂಗ್ ಸಿನಿಮಾ ಎಂಬುದನ್ನು ಅವರಿವರ ಬಾಯಿಂದ ಕೇಳಿದ್ದೆ. ಪತ್ರಿಕೆಯಲ್ಲಿ ಓದಿದ್ದೆ. ಅದರ ಚಿತ್ರೀಕರಣದ ಸಮಯದಲ್ಲಿ ಅಪಘಾತವಾದದ್ದು   ಮತ್ತಿತರ ವಿವರಗಳು ಗೊತ್ತಿದ್ದವು. ಆ ಚಿತ್ರ ನಂಜನಗೂಡಿಗೆ ಬಂದಿತ್ತಾದರೂ ನಾನು ಹೋಗಿ ನೋಡಿರಲಿಲ್ಲ . ನಮ್ಮದು ನಂಜನಗೂಡಿನಿಂದ 9 ಕಿಲೋ ಮೀಟರ್ ದೂರದ ಹಳ್ಳಿ . ಹಾಗಾಗಿ ಅದೇ ಸಿನೆಮಾ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗುವ  ಸುದ್ಧಿಯನ್ನು ಕಳೆದ ಭಾನುವಾರ ಮುನ್ನೋಟದಲ್ಲಿ ಕೇಳಿ ತಿಳಿದಿದ್ದ ನನಗೆ ಈ ಭಾನುವಾರ  ಅದೆಷ್ಟು ಬೇಗ ಬೇಗ ಬರುತ್ತದೋ ಎಂಬ ಕಾತರ ಹೇಳತೀರದಾಗಿತ್ತು. ಆವತ್ತು ವಿದ್ಯುತ್ ಹೋಗದಿರಲಿ ಎಂದು ದೇವರಿಗೆ ಹರಕೆ, ಪ್ರಾರ್ಥನೆ ಮಾಡಿಯೂ ಆಗಿತ್ತು. ನಮ್ಮೂರಲ್ಲಿ ಹಾಗೆಯೇ. ಭಾನುವಾರ ಬಂತೆಂದರೆ ವಿದ್ಯುತ್  ಕೈ  ಕೊಡುತ್ತಿತ್ತು ..ನೋಡಿದ್ದವರು ನಾನು ಅಷ್ಟು ಸಲ ನೋಡಿದ್ದೇನೆ , ಹಾಗಿದೆ  ಹೀಗಿದೆ ಎಂದೆಲ್ಲಾ ಕೊಚ್ಚಿ ಕೊಂಡದ್ದು ಬೇರೆ ನೋಡುವ ಕಾತರವನ್ನು ಹೆಚ್ಚಿಸಿತ್ತು. ಜೊತೆಗೆ ಚೇಸ್ ದೃಶ್ಯದ ವರ್ಣನೆಗಳು ಬೇರೆ ತಲೆಕೆಡಿಸಿದ್ದವು.
 ಚಿತ್ರದ ಪ್ರಸಾರ ಪ್ರಾರಂಭವಾಯಿತು. ಚಿತ್ರ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿತ್ತು. ಆವತ್ತು ವಿದ್ಯುತ್ ಕೂಡ ನಮ್ಮ ಜೊತೆಯಿತ್ತು . ಆಸ್ಪತ್ರೆಯಿಂದ ಪ್ರಕಾಶ ರೈ , ಶೋಭರಾಜ್ ಸಂಗಡಿಗರು ದೇವರಾಜರವರನ್ನು ಅಪಹರಿಸಿಕೊಂಡು ಹೊರಟರು. ಪೋಲಿಸರೂ ಅವರ ಬೆನ್ನು ಬಿದ್ದರು. ನಾವೆಲ್ಲಾ ಹುಡುಗರು ಮೈಯೆಲ್ಲಾ ಕಣ್ಣಾದೆವು...ಇನ್ನೇನು ಚೇಸ್ ಪ್ರಾರಂಭವಾಯಿತು ಅಂದುಕೊಂಡೆವು.....ಅಷ್ಟೇ !! ಸಲೀಸಾಗಿ ದೇವರಾಜ್ ಯಾವ ಅಡೆತಡೆಯೂ ಇಲ್ಲದೆ ಕಾಡು ಸೇರಿಕೊಂಡಿದ್ದರು. ನಮಗೆಲ್ಲಾ ಆಶ್ಚರ್ಯ ವಾಯಿತು ಇದೇನು ಪೋಲಿಸರೂ ಸುಮ್ಮನಾದರಾ?
ಕಾರಣವಿಷ್ಟೇ. ಆ ಚೇಸ್   ದೃಶ್ಯವನ್ನು ದೂರದರ್ಶನದವರು ಕತ್ತರಿಸಿಬಿಟ್ಟಿದ್ದರು.ನಮಗಾಗ ದೂರದರ್ಶನದ ಪ್ರದರ್ಶನದ ನಿಯಮಗಳ ಬಗ್ಗೆ, ಸೆನ್ಸಾರ್ ಬಗೆಗೆ ಗೊತ್ತಿಲ್ಲವಾದ್ದರಿಂದ ದೂರದರ್ಶನದವರನ್ನು   ಹಿಗ್ಗಾಮುಗ್ಗಾ ಬೈದುಕೊಂಡಿದ್ದೆವು.  
ಆನಂತರ ನಾನು ಕಾಲೇಜಿಗೆ ನಂಜನಗೂಡಿಗೆ ಬಂದೆ. ಆವಾಗೊಮ್ಮೆ ಲಾಕಪ್ ಡೆತ್ ಚಿತ್ರಮಂದಿರಕ್ಕೆ ಬಂದಿತು. ಮೂರ್ನಾಲ್ಕು ಸಾರಿ ನೋಡಿಬಿಟ್ಟೆ.
ಮೊನ್ನೆ ರಾಮು ಅವರನ್ನು ಭೇಟಿ  ಮಾಡಿದ್ದೆ . ಅವರಿಗೆ ಫೋನ್ ಮಾಡಿದಾಗ ಅವರು ಆಕಾಶ್ ಆಡಿಯೋ ಸ್ಟುಡಿಯೋಗೆ ಬನ್ನಿ  ಎಂದರು. ಮೊದಲೇ ಕೋಟಿ ರಾಮು! ಭಯದಿಂದಲೇ ಹೋದೆ. ಅದೆಷ್ಟು ಸರಳವಾಗಿದ್ದರೆಂದರೆ ನಾನು ಕಳೆದುಹೋದೆ. ಇವರೇನಾ ಕೋಟಿಕೋಟಿ ಖರ್ಚು ಮಾಡಿ ಸಿನೆಮಾ ಮಾಡಿರುವವರು ಮತ್ತು ಮಾಡುತ್ತಲೇ ಇರುವವರು ಎನಿಸಿತು. ನಾನು ನನ್ನ ಉದ್ದೇಶ ಹೇಳಿದೆ. ನಾನೊಂದು ಕಥೆ ಹೇಳಬೇಕು ಎಂದದಕ್ಕೆ 'ಅದಕ್ಕೇನು ಹೇಳಿ ..' ಎಂದರು. ನಾನು ಅನಾಮತ್ತು ನಲವತ್ತು ನಿಮಿಷ ಕಥೆ ಹೇಳಿದೆ. ಸಾವಧಾನವಾಗಿ ಕುಳಿತು ಕೇಳಿಸಿಕೊಂಡರು. ಮಧ್ಯದಲ್ಲಿ ಹತ್ತಾರು ಫೋನ್ ಬಂದರೂ ಮುಖ್ಯವಾದದದೊಂದು ಕರೆ ಮಾತ್ರ ಸ್ವೀಕರಿದರು. . ಕೇವಲ ಒಂದೇ ಒಂದು ಸಿನೆಮಾ, ಅದೂ ಬಿಡುಗಡೆಯಾಗಿಲ್ಲದ ಸಿನೆಮಾ ನಿರ್ದೇಶಕನ ಜೊತೆ ಅಷ್ಟು ದೊಡ್ಡ ನಿರ್ಮಾಪಕರು ಒಂದು ಘಂಟೆ ವ್ಯಯಿಸಿದ್ದು ನನಗೆ ಆಶ್ಚರ್ಯ ತರಿಸಿತು.  ಚಿಕ್ಕ ಪುಟ್ಟ ಕೆಲಸಗಳನ್ನು ಇಟ್ಟುಕೊಂಡು ನಾವು ಬ್ಯುಸಿ ಬ್ಯುಸಿ ಎಂದು ಕೂಗಾಡುವುದು ..ಅಷ್ಟೆಲ್ಲಾ ಸಿನೆಮಾ ಮಾಡಿದ ವ್ಯಕ್ತಿ ಅಷ್ಟು ಚೆನ್ನಾಗಿ, ಮಧ್ಯ ಮಧ್ಯ ಪ್ರಶ್ನೆ ಕೇಳುತ್ತಾ , ನನ್ನ ಕಥೆಗೆ ಸ್ಪಂದಿಸುತ್ತಾ ಸಂಪೂರ್ಣ ಕಥೆ ಕೇಳಿ ಆಮೇಲೂ ಅದರ ಬಗ್ಗೆ ಚರ್ಚಿಸಿದ್ದು ನನಗೆ ಖುಷಿಯಾದದ್ದಷ್ಟೇ ಅಲ್ಲಾ ದೊಡ್ಡವರಿಂದ ಕಲಿಯುವುದು ಸಾಕಷ್ಟಿದೆ ಎನಿಸಿತು.
'ಪ್ರತಿಯೊಬ್ಬರಿಗೂ ಸಮಯ ನೀಡುವ ವ್ಯಕ್ತಿಯೇ ನಿಜವಾಗಿಯೂ ಬ್ಯುಸಿಯಾದ ವ್ಯಕ್ತಿ..' ಎಂದು ಗೆಳೆಯ ಹೇಳಿದ್ದು ನಿಜ ಎನಿಸಿತು.

Tuesday, October 16, 2012

ಜನಶ್ರೀ ಪ್ರಶಸ್ತಿ ಮತ್ತು ಯೋಗರಾಜ್ ಭಟ್ ರ ಮಾತುಗಳು..

'ನಮಗೆ ಬುದ್ದಿ ಬಲಿತಾಗ ಸಿಹಿ ಅಂಗಡಿಯ ಮುಂದೆ ಹೋದಾಗ ಬೂಂದಿ ನೋಡಿ , ತಿನ್ನುವ ಆಸೆಯಾಗುವುದು ಸಹಜ. ಹಾಗೆ ತಿನ್ನುತ್ತಾ ಹೋದಂತೆ ಅದನ್ನು ಹೇಗೆ ಮಾಡುತ್ತಾರೆಂಬ ಕುತೂಹಲ ಉಂಟಾಗಿ ಅದರ ಬಗ್ಗೆ ತಲೆಕೆಡಿಸಿಕೊಂಡು ಮಾಡುವುದನ್ನು ಕಲಿತುಬಿಡುತ್ತೇವೆ. ಕಲಿತಾದ ಮೇಲೇ ಬೂಂದಿಯನ್ನು ಮಾಡಿ ಅಂಗಡಿ ಇಟ್ಟಾಗ ತಿನ್ನುವ ಖುಷಿ ಹೋಗಿಬಿಡುತ್ತದೆ. ಹಾಗೆ ನಮ್ಮ ನಾಲಗೆ ರುಚಿ ಕೆಡಿಸಿಕೊಳ್ಳುತ್ತದೆ. ಹಾಗೆ ಸಿನಿಮಾವೂ , ಸಿನೆಮಾ ತಂತ್ರಜ್ಞರೂ ಕೂಡ . ನಾವೆಲ್ಲಾ ರುಚಿ ಕೆಡಿಸಿಕೊಂಡ ತಂತ್ರಜ್ಞರು. ಒಬ್ಬ ಓದುಗ , ಪ್ರೇಕ್ಷಕ ಎಲ್ಲಿಯವರೆಗೆ ಬರೆ ಓದುಗನಾಗಿಯೇ ಅಥವಾ ಪ್ರೆಕ್ಷಕನಾಗಿಯೇ ಇರುತ್ತಾನೋ ಅಲ್ಲಿಯವರೆಗೆ ಆತ ಓದನ್ನು ,ಚಿತ್ರವನ್ನು ಸವಿಯಬಲ್ಲ..'
ಇದು ಮೊನ್ನೆ ಜನಶ್ರೀ ವಾಹಿನಿಯ ಕಿರುಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್ ಆಡಿದ ಮಾತುಗಳು . ನನಗೆ ಯೋಗರಾಜ್ ಭಟ್ ತುಂಬಾ ಇಷ್ಟ. ವ್ಯಕ್ತಿಯಾಗಿಯೂ, ನಿರ್ದೇಶಕನಾಗಿಯೂ . ಅವರ ಮುಂಗಾರು ಮಳೆಯನ್ನೂ ನಾನು ಚಿತ್ರಮಂದಿರದಲ್ಲೇ ಲೆಕ್ಕವಿಲ್ಲದಷ್ಟು ಸಲ ನೋಡಿದ್ದೇನೆ. ಅವರ ಜೊತೆ ನಾನು ಎರಡೇ ಮಾತಾಡಿರುವುದು. 
ನನಗೂ ಒಮ್ಮೆ ಭಟ್ಟರು ಹೇಳಿದಂತೆ ಭಾಸವಾಗಿಬಿಡುತ್ತದೆ. ಹಾಗಾಗಿಯೇ ನಾನು ಬರೆಯುವುದಕ್ಕಿಂತ ಓದುವುದನ್ನು ಹೆಚ್ಚು ಇಷ್ಟ ಪಡುತ್ತೇನೆ ಸಿನೆಮಾ ಮಾಡುವುದನ್ನು ಹಾಗೂ ನೋಡುವುದನ್ನು ಬೇರೆಬೇರೆಯಾಗಿ ಪರಿಗಣಿಸುತ್ತೇನೆ. ನಾಲಗೆ ರುಚಿ ಕೆಡಿಸಿಕೊಳ್ಳದಿರಲಿ ಎನ್ನುವ ಆಶಯ ನನ್ನದು.
 ಜನಶ್ರೀ ವಾಹಿನಿಯ ಕಿರುಚಿತ್ರದಲ್ಲಿ ನಮ್ಮ ಕಿರುಚಿತ್ರ 'ನಿರಾಕೃತ' ಕ್ಕೆ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರ  ಪ್ರಶಸ್ತಿ ಬಂದಿದೆ. ಸಂತಸವಾಗಿದೆ ನಮ್ಮ ಕಿರುಚಿತ್ರದ ಅವಧಿಯಿದ್ದದ್ದು 15 ನಿಮಿಷಗಳು. ಅದನ್ನು ಆರು ನಿಮಿಷಕ್ಕೆ ತುಂಡರಿಸಬೇಕಾದಾಗ ನನಗೆ ಅದರ ಭಾವವೇ ತುಂಡಾಗಿಬಿಡುತ್ತಲ್ಲ ಎನಿಸಿತ್ತು.ಅದು ನಿಜ ಕೂಡ.ಆದರೆ ಕಿರುಚಿತ್ರವೊಂದನ್ನು ಮನೆಯಲ್ಲಿಟ್ಟುಕೊಂಡು ನಾನು ತಯಾರಿಸಿದ ಕಿರುಚಿತ್ರದ ಅವಧಿಯಷ್ಟನ್ನೇ ಸ್ಪರ್ಧೆಗೆ ಇಡೀ ಎಂದು ಹೇಳಲಾಗುವುದಿಲ್ಲವಲ್ಲ... ಹಾಗಾಗಿ ಅದನ್ನು ತುಂಡರಿಸೋಣ ಎಂದು  ನಿರ್ಧರಿಸಿದೆ. ಅದಕ್ಕಾಗಿ ಸಂಕಲನ ಕೇಂದ್ರಕ್ಕೆ ಹೋಗುವುದು, ಅಲ್ಲಿ ಕುಳಿತು ನೀಟಾಗಿ ಭಾವಕ್ಕೆ ಧಕ್ಕೆ ಬರದಂತೆ ತುಂಡರಿಸುವುದು ಆವತ್ತಿನ ನನ್ನ ಕೆಲಸದ ಬಿಸಿಯಲ್ಲಿ ಸಾಧ್ಯವಿರಲಿಲ್ಲ . ಏನು ಮಾಡುವುದು ಎಂದು ಯೋಚಿಸಿದೆ. ನನ್ನಲ್ಲಿದ್ದ ಸಾಫ್ಟ್ ವೇರ್[ಅದು ಸಂಕಲನಕ್ಕೆ ಬಳಸುವ ಸಾಫ್ಟ್ ವೇರ್ ಅಲ್ಲ] ಒಂದರಿಂದ ನಾನೇ ಸಂಕಲನ  ಕಾರ್ಯ ಕೈಗೊಂಡೆ. ಕಿರುಚಿತ್ರವನ್ನು ಅದರ ಭಾವದ ಸಮೇತ ಸರಿ ಸುಮಾರು ಮೂರನೇ ಒಂದು ಭಾಗಕ್ಕಿಳಿಸುವಲ್ಲಿ ಯಶಸ್ವಿಯಾದೆ. ಆಮೇಲೆ ನೋಡಿದಾಗ ನನಗನಿಸಿದ್ದು ಇದಕ್ಕೆ ಯಾವ ವಿಭಾಗದಲ್ಲೂ ಅಂದರೆ ನಿರೂಪಣೆ, ಸಂಕಲನ, ನಿರ್ದೇಶನ.. ಹೀಗೆ ಪ್ರಶಸ್ತಿ ಕೊಡುವುದು ಸೂಕ್ತವಲ್ಲ ಎಂಬುದು. ಕಥೆಗಾಗಿ ಕೊಡಬಹುದು..ಆದರೆ ತಾಂತ್ರಿಕ ಅಂಶಗಳನ್ನು ನಾನೆ ನಿರ್ಜೀವಗೊಳಿಸಿಬಿಟ್ಟಿದ್ದೆ. ಬೇರೇನೂ ಮಾಡಲು ಆಗ ಸಮಯವೂ ಇರಲಿಲ್ಲ . ಹಾಗೆಯೇ ಕಳುಹಿಸಿದ್ದೆ.
ಈಗ ಜನಶ್ರೀಯವರು ಒಟ್ಟಾರೆಯಾಗಿ ಚಿತ್ರದ ಕಥೆಯ ಆಶಯವನ್ನು ಪರಿಗಣಿಸಿ ಪ್ರಶಸ್ತಿಕೊಟ್ಟಿದ್ದಾರೆ. 
ಇನ್ನೊಂದು ಖುಷಿಯ  ವಿಷಯವೆಂದರೆ ನನಗೆ ಪ್ರಶಸ್ತಿ ನೀಡಿದ್ದು ಅತೀ ಹೆಚ್ಚು ಚಿತ್ರಗಳ ನಿರ್ದೇಶಕ ಸಾಯಿಪ್ರಕಾಶ್.

Monday, October 15, 2012

ಸಿನೆಮಾ ಮತ್ತು ಪ್ರೊಜೆಕ್ಟರ್....

ನನಗೆ ನಿರ್ದೇಶಕರೊಬ್ಬರು ಹೇಳಿದ ಘಟನೆ ಇದು. ತಮಿಳಿನ ಖ್ಯಾತ ನಿರ್ದೇಶಕರೊಬ್ಬರ ಸಿನೆಮಾ ಅದು.  ಅದರ ನಾಯಕ ಪಾರ್ತಿಬನ್.ಅದು ಕನ್ನಡದಲ್ಲೂ ರೀಮೇಕ್ ಆಯಿತು. ಜೊತೆಗೆ ಅದಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಗಳಿಸಿತ್ತು. ಅದು ತಮಿಳುನಾಡಿಗಿಂತ  ಕರ್ನಾಟಕದ ಚಾಮರಾಜನಗರದ ಚಿತ್ರಮಂದಿರವೊಂದರಲ್ಲಿ ಅಭೂತ ಪೂರ್ವ ಯಶಸ್ಸುಗಳಿಸಿತ್ತಂತೆ. ಇದನ್ನು ಕಂಡ ಆ ಚಿತ್ರದ ನಿರ್ದೇಶಕರಿಗೆ ಅಚ್ಚರಿ. 'ತಮಿಳುನಾಡಿಗಿಂತ ಅದೇಗೆ ಇಲ್ಲಿ ಅಷ್ಟೊಂದು ಯಶಸ್ಸು ಕಾಣಲು ಸಾಧ್ಯ ' ಏನಿಸಿದ್ದೆ ಸೀದಾ  ಚಾಮರಾಜನಗರದ ಆ ಚಿತ್ರಮಂದಿರಕ್ಕೆ ಬಂದು ಒಂದು ಕುರ್ಚಿಯಲ್ಲಿ ಆಸೀನರಾದರು. ಅವರಿಗೆ ಜನರ ಪ್ರತಿಕ್ರಿಯೆಯನ್ನು ಗಮನಿಸುವುದಿತ್ತು. ಚಿತ್ರ ಪ್ರಾರಂಭವಾಯಿತು. ಹಾಗೆ ಮುಗಿಯಿತು. ಜನರೆಲ್ಲಾ ಚಿತ್ರದ ಭಾವಕ್ಕೆ ಪರವಶರಾಗಿದ್ದರು. ಹಾಗೆಯೇ ಚಿತ್ರದ ಉದ್ದವೂ ಮೊಟಕಾಗಿತ್ತು. ಕೆಲವು ಶಾಟ್ ಗಳು ಇರಲೇ ಇಲ್ಲ . ಇದೇನು ಎನಿಸಿ ನಿರ್ದೇಶಕ ಚಿತ್ರಮಂದಿರದ ಮಾಲೀಕನಲ್ಲಿ ತಮ್ಮ ಪರಿಚಯ ಮಾಡಿಕೊಂಡು ಅಲ್ಲಿನ ಪ್ರೊಜೆಕ್ಟರ್ ಕೊನೆಗೆ ಹೋಗಿ ಅಲ್ಲಿದ್ದ ಆಪರೇಟರ್ ನನ್ನು ಕೇಳಿದರಂತೆ. 'ಅಲ್ಲಪ್ಪಾ..ಅದೇಕೆ ಕೆಲವ್ವೊಂದು ಕಡೆ ಕಟ್ ಹಾಗಿರೋಹಂಗಿದೆ...' ಅದಕ್ಕೆ ಆ ಪ್ರೊಜೆಕ್ಟರ್ ಆಪರೇಟರ್ 'ಸಾರ್..ಅಲ್ಲೆಲ್ಲಾ ಬೋರ್ ಹೊಡಿತಿತ್ತು..ಮತ್ತದು ಬೇಕೂ ಇರ್ಲಿಲ್ಲಾ. ಫಸ್ಟ್ ದಿನ ಜನ ಎಲ್ಲಾ ಎದ್ದುಹೊಗ್ತಿದ್ರು. ಅದಕ್ಕೆ ಇಷ್ಟೊಳ್ಳೆ ಸಿನಿಮಾ ಬೋರ್ ಅಯ್ತೈತಲ್ಲಾ...ಅನ್ನಿಸ್ತು. ಎಲ್ಲೆಲ್ಲಿ ಜನ ಹೋಯ್ತಾ ಅವರೋ ಅದನ್ನು ನೋಡ್ಕಂಡು ಹೆಚ್ಚುಕಮ್ಮಿ ಆಗದಿರೋ ಹಂಗೆ ನಾನೇ ಕಟ್ ಮಾಡ್ಬಿಟ್ಟೆ....'ಅಂದನಂತೆ. ನಿರ್ದೇಶಕರು ಅವನನ್ನು ಮೆಚ್ಚಿದ್ದೆ ಅಲ್ಲ ಇನ್ನು ಮುಂದೆ ನನ್ನೆಲ್ಲಾ ಸಿನೆಮಾವನ್ನು ಬಿಡುಗಡೆಗೆ ಮುನ್ನ ಪ್ರೊಜೆಕ್ಟರ್ ಆಪರೇಟರ್ ಗೆ ತೋರಿಸಿ ಅವರ ಸಲಹೆ ಪಡೆಯುತ್ತೇನೆ ಎಂದು ನಿರ್ಧರಿಸಿದರಂತೆ.
ನಮ್ಮ ಚಿತ್ರ ಮಾರ್ಚ್ 23 ರ  ಗ್ರೇಡಿಂಗ್ ಮುಗಿದಿತ್ತು. ಅದರ ಎರಡು ರೀಲುಗಳನ್ನೊಮ್ಮೆ ಪರೀಕ್ಷೆ ಮಾಡೋಣ ಎಂದು ನಮ್ಮ ಕ್ಯಾಮೆರಾಮನ್ ನಿರಂಜನ ಬಾಬು ಹೇಳಿದರು. ಸರಿ ಎಂದದ್ದೆ   ಅಲ್ಲೇ ಇದ್ದ ಪ್ರೊಜೆಕ್ಟರ್ ನಲ್ಲಿ ಆ ಎರಡು ರೀಲುಗಳನ್ನು ನೋಡೇಬಿಡೋಣ ಎನಿಸಿದ್ದರಿಂದ ನಾನು, ನಮ್ಮ ನಿರ್ಮಾಪಕರು, ಸಂಭಾಷಣೆಗಾರ ಗಿರಿಬಾಲು ಮೂವರು ಪ್ರಸಾದ್ನಲ್ಲಿನ ಪೂರ್ವ ವೀಕ್ಷಣಾ ಚಿತ್ರಮಂದಿರದ ಕುರ್ಚಿಗಳಲ್ಲಿ ಆಸೀನರಾದೆವು. ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ನಮ್ಮದೇ ಸಿನಿಮಾ ನೋಡುವ ಖುಷಿ ನಮ್ಮದು. ಅಲ್ಲೀವರೆಗೆ ನಮ್ಮ ಸಿನೆಮಾವನ್ನು ಸಂಕಲನ ಮೇಜಿನ ಮೇಲೆ ನೂರಾರು ಬಾರಿ ನೋಡಿದ್ದಾಗಿತ್ತಾದರೂ ದೊಡ್ಡ ಪರದೆಯಲ್ಲಿ ಡಿಟಿಎಸ್ ಶಬ್ಧದೊಂದಿಗೆ ನೋಡುವ ಖುಷಿಯೇ  ಬೇರೆ. ಸಿನೆಮಾ ಶುರುವಾಯಿತು ಎರಡು ರೀಲು ಮುಗಿಯಿತು. ವರ್ಣವಿನ್ಯಾಸದಲ್ಲಿ ನಮಗೆ ತೃಪ್ತಿಯಿತ್ತು. ನಮ್ಮ ಸಿನೆಮಾದ ಕಥೆ ಮೂರು ಟ್ರಾಕ್ ನಲ್ಲಿ ಹೋಗುವುದರಿಂದ ಮೂರು ಟ್ರಾಕುಗಳೂ ಮೂರು ವಿಧದಲ್ಲಿದ್ದರೆ ಚೆಂದ ಮತ್ತು ಪರಿಣಾಮಕರ ಎಂಬುವುದು ನನ್ನ ಆಶಯವಾಗಿತ್ತು. ಅದಕ್ಕೆ ನಮ್ಮ ತಂತ್ರಜ್ಞರೂ ಹೌದು ಎಂದು ಕೊಂಡಾಡಿದ್ದರು. ಹಾಗಾಗಿ ಕೊನೆಯ ಸಾರಿ ಓಕೆ ಎನ್ನುವ ಮೊದಲು ನೋಡುವವರೆಗೂ ನಮ್ಮೆಲ್ಲರಿಗೂ ಒಂದು ರೀತಿಯ ಕಳವಳ-ಕುತೂಹಲ ಇದ್ದೇ ಇತ್ತು. ಬಹುಶ ಪ್ರತಿ ಪ್ರಯೋಗದ ಹಿಂದೆ ಈ ತೆರನಾದುದದೊಂದು ಭಯ ಕುತೂಹಲ ಇದ್ದೆ ಇರುತ್ತದೆನಿಸುತ್ತದೆ .
ಹೊರಗೆ ಬಂದೆವು. ಆಗ ಪ್ರಸಾದ್ ಪೂರ್ವ ವೀಕ್ಷಣ ಚಿತ್ರಮಂದಿರದ ಪ್ರೊಜೆಕ್ಟರ್ ನನ್ನ ಬಳಿ ಬಂದರು . ಬಂದವರು 'ಸಾರ್ ನೀವು ಮಾರ್ಚ್ 23 ಚಿತ್ರದ ನಿರ್ದೇಶಕರ..?' ಎಂದರು. ನಾನು ಹೌದೆಂದೆ. 'ಸಾರ್ ಯಾವತ್ತು ಇದರ ಪ್ರೀಮಿಯರ್ ಷೋ ಅಥವಾ ಪ್ರೊಜೆಕ್ಷನ್ ?'ಎಂದರು. 'ಗ್ರೇಡಿಂಗ್ ಮುಗೀಲಿ ಮಾಡೋಣ ' ಎಂದೇ. 'ಯಾಕೆ ಎನ್ನುವ ಪ್ರಶ್ನೆಯನ್ನೂ ಕೇಳಿದೆ .' ಸರ್ ನಾನು ಬಹುತೇಕ ಕನ್ನಡದ ಎಲ್ಲಾ ಸಿನೆಮಾನೂ ಇಲ್ಲಿ  ನೋಡ್ತೇನೆ.ಸೆನ್ಸಾರ್ ಮುಂಚೆ, ಸೆನ್ಸಾರ್ ಅದಮೇಲೆ ನೋಡೇ ನೋಡ್ತೀನಿ. . ಸುಮಾರು ಸಿನೆಮಾಗಳು ಎರಡ್ಮೂರು ರೀಲು ನೋಡ್ತಿದ್ದ ಹಾಗೆ ಅದರ ಕಥೆ ಮುಂದಾಗಬಹುದಾದ ಸಾಧ್ಯತೆಗಳು ಗೊತ್ತಾಗಿಬಿಡ್ತವೆ. ಇದರ ಸ್ಟೋರಿ ಇಷ್ಟೇ ಅನ್ಸಿಬಿಡುತ್ತೆ. ಆದರೆ ನಿಮ್ಮ ಸಿನೆಮಾದ ಎರಡು ರೀಲು ನೋಡಿದೆ. ಏನೂ ಅರ್ಥ  ಆಗ್ಲಿಲ್ಲ..ಅಷ್ಟೇ ಅಲ್ಲ. ಮುಂದೇನಾಗಬಹುದು ಅನ್ನೋ ಕ್ಯೂರಿಯಾಸಿಟೀ ಬಂತು...ಅದಕ್ಕೆ ನೋಡಬೇಕನ್ನಿಸುತ್ತೆ. ..ಏನೋ ಇದೆ ಅನ್ನಿಸ್ತು ಸಾರ್ ಅದಕ್ಕೆ ನಾನೇ ಕಾಯೋಹಾಗ್ ಮಾಡ್ತು ನಿಮ್ ಸಿನಿಮಾ ..' ಎಂದರು. ನಾನು ಒಳಗೊಳಗೇ ಖುಷಿಯಾದೆ. ನಮ್ಮತಂಡದವರಲ್ಲದ ಪ್ರೇಕ್ಷಕರೊಬ್ಬರು ಆಡಿದ ಮಾತು ನನಗೆ ಭರವಸೆ ತುಂಬಿತು. ಉಸಿರು ನಿರಾಳವಾಯಿತು. ನಾನಂದೆ 'ಸಾರ್ ಇಷ್ಟರಲ್ಲೇ ಮಾಡ್ತೀವಿ. ನೋಡಿದ ಮೇಲೆ ಎಲ್ಲಿ  ಯಾವ್ಯಾವ್ದು ಹೆಚುಕಡಿಮೆ ಆಯಿತು  ಅನ್ನೋದನ ಪ್ರಾಮಾಣಿಕವಾಗಿ ಹೇಳ್ಬೇಕು..' ಎಂದು ಮೇಲಿನ ಘಟನೆಯನ್ನು ಅವರಿಗೆ ಹೇಳಿದೆ.
ಈಗ ಮುಂದಿನ ತಿಂಗಳು ಬಿಡುಗಡೆಗೆ ತಯಾರಾಗುತ್ತಿದ್ದೇವೆ ...
ಬದುಕು ಯಾವ ತಿರುವು ಪಡೆಯುವುದೋ ಎನ್ನುವ ಕುತೂಹಲ ಹಾಗೆ ಇದೆ..?