Thursday, December 7, 2017

ಕತೆಯನ್ನು ಚಿತ್ರಕತೆಯಾಗಿಸುವುದು ಹೇಗೆ..?

ಕತೆಯನ್ನು ಚಿತ್ರಕತೆಯಾಗಿಸುವುದು ಹೇಗೆ..?
ಇದೊಂದು ಕ್ಲಿಷ್ಟಕರ ಪ್ರಶ್ನೆ. ನಾವೇನೋ ಕತೆಯನ್ನು ಹೆಣೆದು ಹೇಳಿಬಿಡುತ್ತೇವೆ. ಆದರೆ ಚಿತ್ರಕತೆ ಮಾಡಲು ಕುಳಿತಾಗ ಒದ್ದಾಡುವಂತಾಗುತ್ತದೆ. ಅಂದುಕೊಂಡ ಕತೆಯನ್ನು ಅರವತ್ತು ಎಪ್ಪತ್ತು ದೃಶ್ಯಗಳನ್ನಾಗಿ ವಿಂಗಡಿಸಿ ಕತೆಯ ವಿವರಗಳನ್ನು ಸಂಭಾಷಣೆ ಮೂಲಕ ತುಂಬುತ್ತಾ ಹೋಗುವುದು ಸುಲಭವಾಗುವುದೇ ಇಲ್ಲ.
ಅದರಲ್ಲೂ ಒಂದೊಂದು ದೃಶ್ಯ ಬರೆದಾದ ಮೇಲೆಯೂ ಇದು ಅನಾವಶ್ಯಕವೇ..? ಎಂದು ಪ್ರಶ್ನಿಸಿಕೊಳ್ಳುತ್ತೇವೆ..? ಜೊತೆಗೆ ಈ ದೃಶ್ಯ ನೋಡಿಸಿಕೊಂಡು ಹೋಗುತ್ತದೆಯೇ..? ಇದರಲ್ಲಿ ಮಜಾ ಇದೆಯೇ..? ಕತೆಯ ಸತ್ವ ಇದರಲ್ಲಿದೆಯೇ..? ಇದೆಲ್ಲವನ್ನು ಚೆಕ್ ಮಾಡುವುದು ಸುಲಭದ ಕೆಲಸವಲ್ಲ.
ಹಾಗೆ ನೋಡಿದರೆ ಬೇರೆ ಭಾಷೆಗಳಿಗಿಂತ ನಮ್ಮಲ್ಲಿ ಬರಹಗಾರರು ಕಡಿಮೆ. ಇದ್ದ ಒಂದಷ್ಟು ಜನ ನಿರ್ದೇಶಕರಾಗಿ ಹೋಗಿದ್ದಾರೆ. ಇನ್ನು ಬರಹಗಾರರು ಸಾಹಿತ್ಯದಿಂದ ದೂರ, ಅವರು ಕತೆ ಕಾದಂಬರಿ ಓದುವುದೇ ಇಲ್ಲ, ಅಥವಾ ತುಂಬಾ ಅಂದರೆ ತುಂಬಾ ಕಡಿಮೆ. ಹಾಗಾಗಿಯೇ ನೀವು ಸಿನಿಮಾ ಹಿಟ್ ಆಗಿರಲಿ, ಕೋಟ್ಯಾಂತರ ಹಣ ಬಾಚಿರಲಿ, ಅದರಲ್ಲಿನ ಬರವಣಿಗೆಯ ಸತ್ವ ಅಷ್ಟಕಷ್ಟೇ ಎಂದೇ ಎನಿಸುತ್ತದೆ.
ಇತ್ತೀಚಿನ ಚಿತ್ರಗಳ ಚಿತ್ರಕತೆ ಗಮನಿಸಿ. ಮೂಲಕತೆ ಅಥವಾ ಮೂಲಕತೆಯ ಎಳೆ ಸರಿಯಾಗಿರುತ್ತದೆ, ಆದರೆ ಉಪಕತೆಗಳು ಅದರೊಳಗೆ ಸರಿಯಾಗಿ ಅಡಕವಾಗಿರುವುದಿಲ್ಲ. ಅಥವಾ ನಾಯಕಿ ಸೇರ್ಪಡೆ, ಹಾಸ್ಯ ದೃಶ್ಯಗಳು ಚಿತ್ರದ ಓಘ ಸಮರ್ಪಕವಾಗಿರುವುದಿಲ್ಲ. ಹಾಗಾಗಿಯೇ ಸಿನಿಮಾ ಚೆನ್ನಾಗಿದೆ, ಆದರೆ ನಾಯಕಿಯ ದೃಶ್ಯಾವಳಿಗಳು ಸರಿಯಿಲ್ಲ, ಹಾಸ್ಯ ದೃಶ್ಯಗಳು ಬೇಕಿರಲಿಲ್ಲ ಎನ್ನುವ ಮಾತು ಕೇಳಿ ಬರುತ್ತದೆ. ಆನಂತರ ಮತ್ತೊಂದಿದೆ. ನಮ್ಮಲ್ಲಿ ಬೌಂಡ್ ಸ್ಕ್ರಿಪ್ಟ್ ಎನ್ನುವ ಮಾತಿದೆ. ಅಂದರೆ ಕತೆಯಾದ ಮೇಲೆ ಚಿತ್ರಕತೆ ಸಂಭಾಷಣೆ ಎಲ್ಲವನ್ನೂ ಅಡಕಗೊಳಿಸಿದ ಬರಹದ ಪ್ರತಿ. ಒಮ್ಮೆ ಕತೆಯಾದ ನಂತರ ಅದನ್ನು ಅಷ್ಟಕ್ಕೇ ಬಿಟ್ಟು ಅದನ್ನಷ್ಟೇ ಚಿತ್ರೀಕರಿಸುತ್ತಾ ಸಾಗಬೇಕು. ಚಿತ್ರೀಕರಣ ಸಮಯದಲ್ಲಿ ಸಣ್ಣ ಪುಟ್ಟ ಬದಲಾವಣೆ ಬರುತ್ತದೆಯಾದರೂ ಅದು ಕತೆಗೆ ಧಕ್ಕೆಯಾಗುತ್ತದೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ. ಚಿತ್ರೀಕರಣ ಸಮಯದಲ್ಲಿ ಒಂದಷ್ಟು ತಲೆಗೆ ಹೊಸ ಐಡಿಯಾಗಳು ಬಂದಾಗ ಅದನ್ನೆಲ್ಲಾ ಸೇರಿಸುತ್ತಾ ಸಾಗಿದರೆ ಸಿನಿಮಾ ಏನೋ ಆಗುತ್ತದೆ. ಬಹುತೇಕ ಚಿತ್ರಗಳ ಕತೆ ಇದೆ ಆಗಿದೆ.ಹೇಳಿದ ಕತೆಯೊಂದು ನೋಡುತ್ತಿರುವುದು ಇನ್ನೊಂದು ಎನ್ನುವ ಸ್ಥಿತಿ ಸುಮಾರು ಚಿತ್ರತಂಡದ್ದು.
ಇಷ್ಟಕ್ಕೂ ಕತೆ ಎಂದರೇನು..? ಎನ್ನುವುದು ಪ್ರಶ್ನೆ. ಒಂದು ಘಟನೆಗಳ ಸಂಚಯ, ಕಲ್ಪನೆಗಳ ಒಗ್ಗೂಡಿಸುವಿಕೆ ಏನೆಲ್ಲಾ ಅರ್ಥೈಸಬಹುದು. ನಾವು ದಿನಪತ್ರಿಕೆ, ವಾರಪತ್ರಿಕೆ, ಕತೆ ಕಾದಂಬರಿಗಳನ್ನು, ಕನ್ನಡದ ಸಾಹಿತಿಗಳನ್ನು ಓದಿಕೊಂಡರೆ ಕತೆಯ ಒಳಾರ್ಥ ಸಿಕ್ಕೆ ಸಿಗುತ್ತದೆ. ಯಾವುದೇ ಚಿತ್ರರಂಗ ಶ್ರೀಮಂತವಾಗಿರುವುದು ಸಾಹಿತ್ಯದಿಂದಾಗಿ ಮಾತ್ರ. ನೀವು ಈವತ್ತು ಹಾಲಿವುಡ್ ನ ಯಾವುದೇ ಚಿತ್ರ ತೆಗೆದುಕೊಳ್ಳಿ, ಅದರ ಮೂಲ ಸಾಹಿತ್ಯವೇ. ಹಾಗೆಯೇ ಅಲ್ಲಿನ ಬರಹಗಾರರ ಬಹುತೇಕ ಕತೆ, ಸಣ್ಣ ಕತೆ, ಕಾದಂಬರಿಗಳು ಸಿನಿಮಾ ಆಗಿ ಯಶಸ್ಸು ಕಂಡಿವೆ. ಜುರಾಸಿಕ್ ಪಾರ್ಕ್ ನಂತಹ ಸಿನಿಮಾವೇ ಕಾದಂಬರಿ ಆಧರಿಸಿದ್ದು ಎಂಬುದನ್ನು ಗಮನಿಸಿ. ಹಾಗೆಯೇ ಜೇಮ್ಸ್ ಬಾಂಡ್ ಸರಣಿಯ ಚಿತ್ರಗಳೂ ಕಾದಂಬರಿ ಆಧಾರಿತವೆ..!
ಆದರೆ ನಮ್ಮಲ್ಲಿ ಕಾದಂಬರಿ ಆಧಾರಿತ ಎಂದಾಕ್ಷಣ ಅದೊಂದು ಕಲಾತ್ಮಕ ಚಿತ್ರ ಇರಬಹುದು ಎನಿಸುತ್ತದೆ.ಅಥವಾ ಅವಾರ್ಡ್ ಸಿನಿಮಾ ಮಾಡಿರಬಹುದು ಎನಿಸುತ್ತದೆ..ನಮ್ಮಲ್ಲಿ ಕಮರ್ಷಿಯಲ್ ಸಿನಿಮಾದ ಕತೆಗಳಿಲ್ಲವೇ..? ಅಥವಾ ಇರುವ ಕತೆಯ ನಿರೂಪಣೆಯನ್ನು ಕಮರ್ಷಿಯಲ್ ಮಾಡಲು ಸಾಧ್ಯವಿಲ್ಲವೇ..? ಖಂಡಿತ ಸಾಧ್ಯವಿದೆ. ಭಾರತದ ಚಿತ್ರರಂಗದಲ್ಲಿ ಹೊಸ ಅಲೆ ಮೂಡಿಸಿದ “ಅಂತ” ಚಿತ್ರ ಕಾದಂಬರಿ ಆಧರಿಸಿದ್ದಲ್ಲವೇ..? ಹಾಗೆಯೇ ನಾಗರಹಾವು ಕಾದಂಬರಿ ಆಧಾರಿತ ತಾನೇ..?
ಅಂದರೆ ಈಗಿರುವ ಕತೆಯನ್ನು ಪರಿಣಾಮಕಾರಿ ಚಿತ್ರಕತೆಯನ್ನಾಗಿ ಪರಿವರ್ತಿಸುವ ಕಲೆ ನಮಗಷ್ಟು ಒಲಿದಿಲ್ಲವೇ ಎನ್ನುವುದು ಪ್ರಶ್ನೆ. ಆದರೆ ನಾವದನ್ನು ಓದಿಯೇ ಇಲ್ಲವಲ್ಲ. ನಾವುಗಳು ಕಾದಂಬರಿ-ಸಾಹಿತ್ಯ ಎಂದಾಕ್ಷಣ ಅಯ್ಯೋ ಅದೆಲ್ಲಾ ಸಿನಿಮಾಕ್ಕೆ ಆಗಿ ಬರುವುದಿಲ್ಲ, ಹಾಗಾಗಿ ಓದುವುದು ಯಾಕೆ..? ಎನ್ನುವ ಧೋರಣೆಗೆ ಬಿದ್ದಿದ್ದೇವೆ. ಫಲಿತಾಂಶ ಸಿನಿಮಾ ಸೂಪರ್ ಎನಿಸಿದರೂ ಅದಕ್ಕೆ ಕತೆ-ಚಿತ್ರಕತೆ ಮುಖ್ಯವಾಗಿದೆ, ಮೇಕಿಂಗ್ ಅದು ಇದು ಮುಖ್ಯ ಎನಿಸಿ, ಕೊನೆಯಲ್ಲಿ ಕತೆಯೇ ಇಲ್ಲ ಎನ್ನುವ ನಿರ್ಧಾರಕ್ಕೆ ಬರುವಂತಾಗಿದೆ.
ದಿ ಬೆಟ್ ಕತೆಯನ್ನು ಇಂಗ್ಲೀಷ್ ನಲ್ಲಿ ಓದಿ, ಅದರ ಕನ್ನಡ ಅನುವಾದಗಳನ್ನು ಓದಿಯಾದ ಮೇಲೆ, ಓದಿದವರೊಂದಿಗೆ ಚರ್ಚೆಗೆ ಕುಳಿತಾದ ಮೇಲೆ ಚಿತ್ರಕತೆಗೆ ಕುಳಿತಾಗ ಒದ್ದಾಟ ಶುರುವಾದದ್ದು ಖಂಡಿತ. ದೃಶ್ಯಗಳನ್ನು ವಿಂಗಡಿಸುತ್ತಾ, ಕತೆಯ ಸಾರವನ್ನು ಎಲ್ಲೂ ಜಾಲಾಗಿಸದೆ ಕಾಯ್ದುಕೊಳ್ಳುತ್ತಾ ಚಿತ್ರಕತೆ ಹೆಣೆಯುವ ಪ್ರಕ್ರಿಯೆಗೆ ಏನೆಲ್ಲಾ ಬೇಕು ಎನ್ನುವ ಯೋಚನೆ ಬಂದಿದ್ದೇ, ಇದನ್ನು ಬರೆಯಲು ಸಾಧ್ಯವಾಯಿತು ನೋಡಿ.