Tuesday, January 10, 2017

ಮೋಹನಸ್ವಾಮಿಯ ರಂಗರೂಪ

ಮೊನ್ನೆ ವಸುಧೇಂದ್ರ ಅವರ ಮೋಹನಸ್ವಾಮಿಯ ರಂಗರೂಪವನ್ನು ನೋಡಲು ಹೋಗಿದ್ದೆ. ಅದೇಕೋ ಏನೋ ಗೊತ್ತಿಲ್ಲ, ಯಾರಾದರೂ ನನ್ನನ್ನು ನೋಡಿದವರು ನಾನೂ ಗೇ ಎಂದುಕೊಳ್ಳಬಹುದಾ..? ಎಂಬೊಂದು ಅಳುಕು ಕ್ಷಣದಲ್ಲಿ ಕಾಡಿಬಿಟ್ಟಿತ್ತು. ಇಷ್ಟಕ್ಕೂ ಸಲಿಂಗಿಗಳ ಕಥಾನಕವನ್ನು ಆಧರಿಸಿದ ಕತೆಯನ್ನು ಓದಲು, ಸಿನಿಮಾ ನೋಡಲು ಸಲಿಂಗಿಯೇ ಆಗಬೇಕಾಗಿಲ್ಲ. ಆದರೆ ಅದೇಕೋ ಏನೋ ಆ ಕ್ಷಣದಲ್ಲಿ ಒಂದು ಮಟ್ಟದ ಹಿಂಜರಿಕೆ ಉಂಟಾದದ್ದು ಸತ್ಯ. ಅದೆಷ್ಟೇ ನಾನು ವಿಶಾಲವಾಗಿ ಯೋಚಿಸುವವನು ಅಂದುಕೊಂಡರೂ, ಹಾಗೆ ಸಮಾಜದ ಮುಂದೆ ಪೋಸು ಕೊಟ್ಟರೂ ಮನದಾಳದಲ್ಲಿ ಈ ತರಹದ ಭಾವನೆ ಇರುವ ಬಗೆಗೆ ನನಗೆ ಬೇಸರವಾದದ್ದಂತೂ ಸತ್ಯ. ನಾನು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾಗ ಕ್ವೀರ್ ಫೆಸ್ಟಿವಲ್ ಗೆ ಹೋಗಿದ್ದೇನೆ. ಹಲವರನ್ನು ಸಂದರ್ಶನವನ್ನೂ ಮಾಡಿದ್ದೇನೆ. ಅದೇನೇ ಇರಲಿ, ಮೊನ್ನೆ ಮೊನ್ನೆ ಆ ಹಿಂಜರಿಕೆ ಮಾತ್ರ ನನ್ನನ್ನು ಅಲ್ಲಾಡಿಸಿದ್ದು ಸತ್ಯ
ಸಲಿಂಗಿಗಳ ಬಗೆಗೆ ನ್ಯೂಟ್ರಲ್ ಅಭಿಪ್ರಾಯ ನನ್ನದು.ಆದರೆ ಆದಕ್ಕೆ ಸಂಬಂಧಿಸಿದ ಸಿನಿಮಾ, ಕಿರುಚಿತ್ರ, ಪುಸ್ತಕಗಳನ್ನು ಓದಿದ್ದು ಕಡಿಮೆಯೇ. ಅದೇಕೋ ಏನೋ ಸ್ತ್ರೀಸಲಿಂಗಿಗಳ ಕತೆಯಿದ್ದ ನೇಪಾಳಿ ಭಾಷೆಯ “ಸೂನ್ಗವ” ಚಿತ್ರವನ್ನು ಸುಮಾರು ಬಾರಿ ನೋಡಿದ್ದೇನೆ. ಅದಕ್ಕೆ ಕಾರಣ ಅದರಲ್ಲಿ ನಟಿಸಿರುವ ಸುಂದರಿಯರಾದ ಇಬ್ಬರು ಹೆಣ್ಣುಮಕ್ಕಳಿರಬಹುದೇನೋ? ಆದರೆ ಬ್ರೋಕ್  ಬ್ಯಾಕ್ ಮೌಂಟನ್, ಮಿಲ್ಕ್ ಮುಂತಾದವುಗಳನ್ನು ನೋಡಿದ್ದೇನಾದರೂ ರುಚಿಸಿಲ್ಲ.
ನಾನಾಗ ಚಿತ್ರರಂಗದಿಂದ ದೂರವಿದ್ದ ಸಂದರ್ಭದಲ್ಲಿ ಬೇರೆ ಕಡೆ ಕೆಲಸ ಮಾಡುತ್ತಿದ್ದೆ. ನನ್ನ ಸಹೋದ್ಯೋಗಿಯೊಬ್ಬಳು ತುಂಬಾ ಸುಂದರವಾಗಿದ್ದಳು. ಆಕೆಯ ಹೆಸರು ಶ್ವೇತಾ ಎಂದುಕೊಳ್ಳಿ. ಅದೇಕೋ ಏನೋ ಪರಿಚಯವಾದ ವಾರದಲ್ಲೇ ಇಬ್ಬರೂ ಕ್ಲೋಸ್ ಆಗಿದ್ದೆವು. ಆಕೆ ಹೆಚ್ಚು ಇಂಗ್ಲೀಷ್ ಸಾಹಿತ್ಯ ಓದಿದ್ದಳು. ನನಗೆ ಒಂದಷ್ಟು ಕಾದಂಬರಿಕಾರರು ಬಿಟ್ಟರೆ ಬೇರೆ ಗೊತ್ತಿರಲಿಲ್ಲ. ಹಾಗೆಯೇ ಹಿಂದಿ ಗಝಲ್ ಗಳ ಬಗ್ಗೆ ಮಾತನಾಡುತ್ತಿದ್ದಳು, ಭಾವುಕವಾಗಿ, ಕಣ್ಮುಚ್ಚಿಕೊಂಡು ತನ್ಮಯತೆಯಿಂದ ತನ್ನ ಸುಂದರವಾದ ಕಂಠದಲ್ಲಿ ಹಾಡುತ್ತಿದ್ದಳು. ಅರ್ಥವಾಗದಿದ್ದರೂ ನಾನು ಕೇಳುತ್ತಿದ್ದೆ. ಬದುಕು ರಸಮಯವಾಗಿ ವರ್ಣಮಯವಾಗಿ ಮುಂದುವರೆಯುತ್ತಿತ್ತು. ಹಾಗೆ ರಜಾ ಬಂದಾಗ ನಾವಿಬ್ಬರು ಬೇರೆ ಕಡೆ ಹೋಗೋಣವೆ..? ಎಂದು ಕೇಳಿದ್ದಳು. ನಾನು ಹೂ ಅಂದಿದ್ದೆ. ಹೋಗಿ, ಐದು ದಿನ ಇದ್ದು, ಬರುವುದು ಎಂದು ಪ್ಲಾನ್ ಮಾಡಿಕೊಂಡೆವು. ಅಲ್ಲೆಲ್ಲೋ ಬೇರೆಯದೇ ಆದ ಭಾಷೆ ಗೊತ್ತಿಲ್ಲದ ರಾಜ್ಯದಲ್ಲಿ ಒಂದು ಕೋಣೆಯಲ್ಲಿ ಅದೂ ಶುದ್ಧ ಗೆಳೆತಿಯ ಜೊತೆಗೆ ಕೋಣೆ ಹಂಚಿಕೊಳ್ಳುವುದು ಹೇಗೆ..? ಎನ್ನುವ ಪ್ರಶ್ನೆಯಲ್ಲಿಯೇ ಪುಳಕವಿತ್ತು. ಅಲ್ಲಿ ನನ್ನ ಫ್ರೆಂಡ್ ಜಾಯಿನ್ ಆಗುತ್ತಾಳೆ ಎಂದಿದ್ದಳು ಶ್ವೇತಾ.
ಹೋಟೆಲ್ಲಿನ ಕೋಣೆ ಸ್ವಲ್ಪ ದೊಡ್ಡದಾಗಿಯೇ ಇತ್ತು. ದೊಡ್ಡ ಮಂಚವಿತ್ತು. ಮಲಗುವ ಸಮಯದಲ್ಲಿ ನಾನು ಎಲ್ಲ ರೀತಿಯಿಂದಲೂ ಒಳ್ಳೆಯವನಾಗುವ ಭರದಲ್ಲಿ ಮಂಚವನ್ನು ಬೇರ್ಪಡಿಸೋಣ ಅಥವಾ ನಾನು ಹಾಸಿಗೆ ಹಾಸಿಕೊಂಡು ಕೆಳಗೆ ಮಲಗಲಾ ಎಂದು ಕೇಳಿದ್ದೆ. ಅದಕ್ಕೆ ಜೋರಾಗಿ ನಕ್ಕಿದ್ದ ಶ್ವೇತಾ, ಮಾರಾಯ ತಲೆ ಕೆಡಿಸಿಕೊಳ್ಳಬೇಡ , ನಿನ್ನ ಮೇಲೆ, ಮತ್ತು ನನ್ನ ಮೇಲೆ ನಂಬಿಕೆಯಿದೆ ಎಂದವಳೇ ನೈಟ್ ಪ್ಯಾಂಟ್, ಟೀ ಶರ್ಟ್ ತೊಟ್ಟು ನನ್ನ ಕಡೆಗೆ ಬೆನ್ನು ಮಾಡಿ, ಗುಡ್ ನೈಟ್ ಹೇಳಿ ಮಲಗಿಬಿಟ್ಟಿದ್ದಳು. ನಾನು ಆವತ್ತು ಜೀನ್ಸ್ ಪ್ಯಾಂಟ್ ನಲ್ಲಿಯೇ ಮಲಗಿದ್ದೆ, ಮತ್ತು ನಿದ್ರೇ ಬಾರದೆ ಒದ್ದಾಡಿದ್ದೆ.
ಬೆಳಿಗ್ಗೆ ಆಕೆಯ ಗೆಳತಿ ಬಂದು ನಮ್ಮನ್ನು ಸೇರಿದ್ದಳು. ಆ ಐದು ದಿನದಲ್ಲಿ ಅವರಿಬ್ಬರೂ ಅಗತ್ಯಕ್ಕಿಂತ ಹೆಚ್ಚು ಹತ್ತಿರವಾಗಿದ್ದರು. ಆಕೆ ಬಂದ ಮೇಲೆ ನಾನು ಪ್ರತ್ಯೇಕ ಕೋಣೆಯಲ್ಲಿದ್ದೆ. ನಾಲ್ಕು ದಿನ ಇದ್ದ ನಂತರ ಆಕೆ ಹೊರಟು ಹೋಗಿದ್ದಳು. ಮತ್ತೆ ಇಬ್ಬರೂ ಒಂದೇ ಕೋಣೆಗೆ ಸೇರಿದೆವು. ಆದರೆ ಆವತ್ತು ಶ್ವೇತಾ ಬಿಕ್ಕಿಬಿಕ್ಕಿ ಅಳುತ್ತಿದ್ದಳು. ನನಗೆ ಕಾರಣ ಗೊತ್ತಾಗದೆ ತಬ್ಬಿಬ್ಬಾಗಿದ್ದೆ. ನಾನು ಬಲವಂತ ಮಾಡಿದ ನಂತರ ಆಣೆ ಪ್ರಮಾಣ ಮಾಡಿಸಿಕೊಂಡು ಆಕೆ ಬಾಯಿಬಿಟ್ಟಿದ್ದಳು. ಗೆಳತಿಗೆ ಮದುವೆ ನಿಗದಿಯಾಗಿದೆ.. ಆದರೆ ನಾವಿಬ್ಬರು ಲೆಸ್ಬಿಯನ್ಸ್..ನಾನು ಒಂದು ಕ್ಷಣ ಆಕೆಯೆಡೆಗೆ ನೋಡಿದ್ದೆ. ತಕ್ಷಣಕ್ಕೆ ಎದ್ದು ಪಕ್ಕದ ಕೋಣೆಗೆ ಹೋಗಿ ಮಲಗಿಬಿಡಬೇಕು ಎನಿಸಿತ್ತು. ಅದ್ಯಾಕೆ ಹಾಗನ್ನಿಸಿತು ಗೊತ್ತಾಗಲಿಲ್ಲ.
ವಾಪಸ್ಸು ಬಂದ ನಂತರ ಕೆಲವೇ ವಾರದಲ್ಲಿ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಳು. ಗೆಳತಿ ಮದುವೆಯಾದ ಮೇಲೆ ಬದಲಾಗಿ ಸಂಸಾರ ಮಾಡಿದಳಾ..? ಅವರ ಬದುಕೇನು ಆಯಿತು..? ಗೊತ್ತಾಗಲಿಲ್ಲ. ಆದರೆ ಶ್ವೇತಾ ಸಾವಿನ ಕಾರಣ ಯಾರಿಗೂ ಗೊತ್ತಾಗಲಿಲ್ಲ, ಬಹುಶಃ ನನಗೂ ಗೊತ್ತಾಗುತ್ತಿರಲಿಲ್ಲವೇನೋ? ಆದರೆ ಆ ಪ್ರವಾಸದ ನಂತರ ಆಕೆ ಬಹಳಷ್ಟು ಮಾತನಾಡಿದ್ದಳು. ಮನೆಯಲ್ಲಿ ಮದುವೆ ವಿಷಯ ಎತ್ತಿದರೆ ಮೈ ಉರಿಯುತ್ತದೆ ಎನ್ನುತ್ತಿದ್ದಳು, ತನಗೆ ಪುರುಷರು ಯಾವ ಭಾವನೆಯನ್ನು ಹುಟ್ಟಿಸುವುದಿಲ್ಲ..ಆದರೆ ಮನೆಯವರು ಬಲವಂತ ಮಾಡಿ ಮದ್ವೆ ಮಾಡೇ ಮಾಡಿಸುತ್ತಾರೆ ಎಂದೆಲ್ಲಾ ಗೋಳಾಡಿದ್ದಳು, ಮನೆಯವರಿಗೆ ಹೇಳಿಬಿಡು ಎಂದದ್ದಕ್ಕೆ ಆಗ ಮನೆಯವರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಅತ್ತಿದ್ದಳು.
ಮೊನ್ನೆ ಮೋಹನಸ್ವಾಮಿ ನೋಡುತ್ತಾ ನೋಡುತ್ತಾ ಅದರಲ್ಲಿನ ಶಂಕರೇಗೌಡನ ದುರಂತ ಕತೆ ಮನದಾಳಕ್ಕೆ ಇಳಿಯುತ್ತಿದ್ದಂತೆ ನನಗೆ ನೆನಪಾಗುತ್ತಿದ್ದವಳು ಶ್ವೇತಾ. ನಗುನಗುತ್ತಾ ಮಾತನಾಡುತ್ತಿದ್ದ ಸುಂದರಿ ತನ್ನಿಷ್ಟಕ್ಕೆ ಬದುಕದೇ ಸತ್ತೆ ಹೋದಳಲ್ಲಾ..? ಹಾಗಂತ ಹೊಂದಿಕೊಂಡು(?) ಹೋಗಲು ಸಾಧ್ಯವಿತ್ತೆ..? ಥೂ ಅದೊಂದು ಬದುಕಾ? ನಿನಗೆಲ್ಲಿ ಅರ್ಥವಾಗುತ್ತೆ..ಹಾಗಾದರೆ ನೀನು ನಮ್ಮಂತೆ ಬದುಕಲು ಸಾಧ್ಯವಾ? ಎಂದೆಲ್ಲಾ ಪ್ರಶ್ನೆ ಹಾಕಿದಾಗ ನಾನು ಉತ್ತರ ಕಂಡುಕೊಳ್ಳುವ ಪ್ರಯತ್ನ ಪಟ್ಟಿದ್ದೆ.
ಮೋಹನಸ್ವಾಮಿ ನಾಟಕ ರೂಪ ಅತ್ಯಂತ ಖುಷಿ ಕೊಟ್ಟದ್ದು ಕಲಾವಿದರ ಅಭಿನಯದಿಂದಾಗಿ. ಈಗಾಗಲೇ ಮೋಹನಸ್ವಾಮಿಯಲ್ಲಿನ ಅಷ್ಟೂ ಕತೆಗಳನ್ನು ಓದಿದ್ದರಿಂದ ಅದರ ರಂಗರೂಪ ಹೇಗಿರಬಹುದೆಂಬ ಕುತೂಹಲ ಇದ್ದೆ ಇತ್ತು.  ನಾರ್ಮಲ್ ಆಗಿ ಕಾಣಿಸಿಕೊಳ್ಳುವ ಮೋಹನ, ಬರುಬರುತ್ತಾ ಪೊರೆ ಕಳಚಿ ಮೋಹನಸ್ವಾಮಿಯಾಗುವ ಘಟ್ಟಗಳನ್ನು ತನ್ನ ಅಭಿನಯದ ಮೂಲಕ ಅದ್ಭುತವಾಗಿ ಪ್ರೇಕ್ಷಕರ ಮುಂದಿರಿಸಿದ್ದು ಹರೀಶ್ ಎನ್ನುವ ಕಲಾವಿದರು. ಕನ್ನಡದ ಮಟ್ಟಿಗೆ ಅಪರೂಪದ ನಾಟಕ ಎನಿಸಿತು.