ಈವತ್ತಿನ ಮಟ್ಟಿಗೆ ಕನ್ನಡದಲ್ಲಿ ಒಂದಷ್ಟು ಒಳ್ಳೆಯ ಚಿತ್ರಗಳು ಬಿಡುಗಡೆಯಾಗಿದೆ ಎನ್ನುವುದು ಖುಷಿಯ ಸಂಗತಿಯೇ. ಹಾಗಾಗಿಯೇ ಅಂತಹ ಒಳ್ಳೆಯ ಚಿತ್ರಗಳನ್ನು ನಮಗೆ ನೀಡಿದ ನಿರ್ದೇಶಕರನ್ನು ಪ್ರಶಂಸೆ ಮಾಡುವುದು ಚಿತ್ರಪ್ರೇಕ್ಷಕರಾದ ನಮ್ಮ ಕರ್ತವ್ಯ. ಆದರೆ ಈ ಒಂದು ವಿಷಯದಲ್ಲಿ ನಾವು ನಿಜಕ್ಕೂ ಪ್ರಶಂಸಿಸಬೇಕಾದದ್ದು ನಿರ್ಮಾಪಕರನ್ನು. ನಿರ್ದೇಶಕ ಹೊಸತನವನ್ನು ಹೊಸಕತೆಯನ್ನು ಕೊಂಡೊಯ್ದಾಗ ವ್ಯಾವಹಾರಿಕವಾಗಿ ನಿರ್ಮಾಪಕ ಯೋಚನೆ ಮಾಡುವುದು ತಪ್ಪಲ್ಲ, ಆದರೆ ಕತೆಯ ಬಗ್ಗೆ ಗ್ರಹಿಸದೆ ಇರುವುದು ಸರಿಯಲ್ಲ. ನಮ್ಮಲ್ಲಿ ಅಂತಹ ಸೂಕ್ಷ್ಮಗ್ರಾಹಿ ನಿರ್ಮಾಪಕರ ಸಂಖ್ಯೆ ಕಡಿಮೆಯೇ.
ನಾನು ಒಬ್ಬ ನಿರ್ಮಾಪಕರಿಗೆ ಕತೆ ಹೇಳಲು ಹೋದಾಗ ಅವರು ಅರ್ಧ ಘಂಟೆ ಅದೂ ಇದೂ ಮಾತಾಡಿ ಕೊನೆಗೆ "ನೋಡಪ್ಪ..ಒಂದ್ ಕೆಲಸ ಮಾಡು.. ಅವರಿಗೆ ಸ್ಟೋರಿ ಹೇಳಿ ಒಪ್ಪಿಸಿಬಿಡು..ಅವರದ್ದು ಕಾಲ್ ಶೀಟ್ ತಂದ್ಬಿಡು..ಸಿನಿಮಾ ಮಾಡೋಣ .." ಅಂದರು. ನಾನು ಆಯ್ತು ಸಾರ್, ಆದರೂ ಒಮ್ಮೆ ಕತೆ ಕೇಳಿ ಎಂದದ್ದಕ್ಕೆ "ನಮಗೆ ಅದೆಲ್ಲಾ ಅರ್ಥ ಆಗಲ್ಲ ಗುರು.." ಎಂದು ಸಾರಾಸಗಟಾಗಿ ತಿರಸ್ಕರಿಸಿಬಿಟ್ಟರು. ಆಮೇಲೆ ಅದೂ ಇದೂ ಮಾತಾಡುತ್ತಾ ಅಲ್ಲೇ ಟಿವಿಯಲ್ಲಿ ಬರುತ್ತಿದ್ದ ತಮಿಳು ಸಿನಿಮಾ ಹೊಗಳುತ್ತಾ ಏನ್ ಸಿನಿಮಾ ಮಾಡ್ತಾರೆ ಇವ್ರು ಎಂದು ಲೋಚ್ಚಿಕ್ಕಿದರು. ನಾನು ಅಲ್ಲೇ ಹೇಳಿದೆ, ಸಾರ್ ಅಲ್ಲಿನ ನಿರ್ಮಾಪಕರು ಸ್ವಲ್ಪನಾದ್ರೂ ಕತೆ ಕೇಳ್ತಾರೆ, ಆದ್ರೆ ನೀವು ಕತೆಗಿಂತ ಸ್ಟಾರ್ ಗೆ ಹೆಚ್ಚು ಮಹತ್ವ ಕೊಡ್ತೀರಲ್ವಾ? ಹಾಗಾಗಿ ಸ್ಟಾರ್ ನಟನನ್ನು ಒಪ್ಪಿಸದಿದ್ದರೆ ಸಿನಿಮಾ ಆಗಲ್ಲ ಎನ್ನುವುದಾದರೆ ಸ್ಟಾರ್ ಗಳ ಹಿತಾಸಕ್ತಿಗೆ ತಕ್ಕಂತೆ ಕತೆ ಬದಲಾವಣೆ ಮಾಡಬೇಕಾಗುತ್ತದೆ.. ಎಂದೆ. ಹೇಳೋದ್ ಸುಲಭ ಕಣ್ರೀ ಸಿನಿಮಾಕ್ಕೆ ಹಣ ಹಾಕುವಾಗ ಗೊತ್ತಾಗುತ್ತೆ , ನಿಮಗೇನು ಗೊತ್ತು.. ನಿರ್ಮಾಪಕ ಪೈಸೆ ಪೈಸೆ ಗೆ ಎಷ್ಟು ಒದ್ದಾಡ್ತಾನೆ ಅಂತ ಎಂದವರು ಆ ನಿಟ್ಟಿನಲ್ಲಿ ನಷ್ಟ ಅನುಭವಿಸಿದವರ ಹೆಸರುಗಳ ಪಟ್ಟಿಯನ್ನೇ ನನ್ನ ಮುಂದಿಟ್ಟರು. ನಾನು ಅವರು ನಿರ್ಮಿಸಿದ ಚಿತ್ರಗಳ ಪಟ್ಟಿಯನ್ನು ಅವರ ಮುಂದಿಟ್ಟು ಅದರ ಬಗ್ಗೆ ಮಾತಾಡಿದೆ..ಇದೆಲ್ಲಾ ಸ್ವಯಂಕೃತ ಸರ್..ಅದೇಕೆ ಈ ಕತೆಯನ್ನು ಸಿನಿಮಾ ಮಾಡಿದ್ದು, ಅದ್ಯಾಕೆ ಅದನ್ನು ಹಾಗೆ ತೆಗೆದದ್ದು ..ನಿರ್ಮಿಸುವ ಇದರ ಬಗ್ಗೆ ಯಾಕೆ ಯೋಚಿಸಲಿಲ್ಲ, ಸೋಲೂ ಗೆಲುವುಗಳನ್ನೂ ಬ್ರಹ್ಮನೂ ಯೋಜಿಸಲಾರನೇನೋ.. ಆದರೆ ಒಂದು ಅಂದಾಜಂತೂ ಮಾಡಬಹುದು..ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನ್ನುವುದನ್ನು ಗ್ರಹಿಸಿಕೊಳ್ಳಬಹುದು. ಇಷ್ಟೆಲ್ಲದರ ನಂತರದ್ದು ದೈವೇಚ್ಛೆ ಎನ್ನಬಹುದೇನೋ..? ಆದರೆ ಅದಾವುದನ್ನು ಮಾಡದೆ ಒಂಟಿ ಕಣ್ಣಲ್ಲಿ ಸಿನಿಮಾ ಮಾಡಿ ಕಳೆದುಕೊಂಡು ಚಿತ್ರಜಗತ್ತೆ ಸರಿಯಿಲ್ಲ ಎನ್ನುವ ನಿರ್ಣಯದಿಂದ ಮೊದಲ್ಗೊಂಡು ನಾನಾಕಾರಣಗಳನ್ನೂ ಪಟ್ಟಿ ಮಾಡುತ್ತಾ ಹೋದರೆ ಹೇಗೆ?

ಉದಾಹರಣೆಗೆ ತಿಥಿಯಂತಹ ಕತೆಯನ್ನು ಮಾಮೂಲಿ ನಿರ್ಮಾಪಕರ ಮುಂದೆ ಹರವಿದ್ದರೆ ಅವರು ಹೌಹಾರದೆ ಇರುತ್ತಿದ್ದರೆ..? ಅಯ್ಯೋ ಗುರುವೇ ಇದು ನೆಗೆಟಿವ್ ಟೈಟಲ್...ಎಲ್ಲಿ ಹೋಗುತ್ತೆ ಗುರುವೇ ಅನ್ನುವುದರಿಂದಲೇ ಪ್ರಾರಂಭಿಸುತ್ತಿದ್ದರು. ಅವರ ಲೆಕ್ಕಾಚಾರಗಳೇ ಬೇರೆ ಇರುತ್ತವೆ. ಮುಂದಿನವಾರದಿಂದ ನಿಮ್ಮ ಮೆಚ್ಚಿನ ಚಿತ್ರಮಂದಿರದಲ್ಲಿ ತಿಥಿ ಅಂತಲೋ, ಪ್ರೇಕ್ಷಕ ಬಾರೋ ತಿಥಿಗೆ ಹೋಗೋಣ ಅಂತಲೂ ಹೇಗೆ ಮಾತನಾಡಿಕೊಳ್ಳುತ್ತಾನೆ ಎನ್ನುವ ಅನಿಸಿಕೆ ಅವರದ್ದು. ಹಾಗೆಯೇ ಇನ್ನು ಈವತ್ತಿನ ವಿಶೇಷ ಎನಿಸಿದ ಚಿತ್ರವಾದ ಗೋದಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಕತೆಯನ್ನು ನಿರ್ಮಾಪಕರ ಎದುರಿಗೆ ಕುಳಿತು ಸಾವಧಾನವಾಗಿ ನಿರೂಪಿಸಲು ಸಾಧ್ಯವಿತ್ತೆ..ತಪ್ಪಿಸಿಕೊಂಡ ಅಪ್ಪ, ಹುಡುಕುವ ಮಗ, ಓಪನಿಂಗ್ ಸಾಂಗ್ ಇಲ್ಲ, ಕೇಡಿಗಳಿದ್ದರೂ ಫೈಟ್ ಇಲ್ಲ, ಕಾಮಿಡಿ ಇಲ್ಲವೇ ಇಲ್ಲ.. ನಮ್ಮ ಕೈಲಿ ಆಗಲ್ಲಪ್ಪ ಎಂದು ಬುದ್ದಿವಾದ ಹೇಳಿ ಕಳುಹಿಸಿಬಿಡುತ್ತಿದ್ದರೇನೋ? ಅಥವಾ ಅದನ್ನು ಹೀಗೆ ಮಾಡಿದರೆ ಹೇಗೆ, ಹಾಗೆ ಮಾಡಿದರೆ ಹೇಗೆ, ಕೇಡಿಗಳು ಈಗಾಗಲೇ ಇರುವುದರಿಂದ ಫೈಟ್ ಇಡಬಹುದಲ್ಲಾ, ವಸಿಷ್ಠ ಅಚ್ಯುತ್ ಅವರನ್ನು ಕುಡಿಯಲು ಕರೆದುಕೊಂಡು ಹೋಗಿದ್ದನ್ನೇ ನೆಪ ಮಾಡಿಕೊಂಡು ಒಂದು ಐಟಂ ಡಾನ್ಸ್ ಹಾಕಿಬಿಡೋಣ ಎನ್ನುವ ಸಲಹೆಯಂತೂ ದೇವರಾಣೆ ಬರುತ್ತಿತ್ತೇನೋ? ಆದರೆ ನಿರ್ಮಾಪಕರು ನಿರ್ದೇಶಕರ ಕತೆ, ಅದರಲ್ಲಿರುವ ಸೂಕ್ಷ್ಮತೆಯನ್ನು ಗ್ರಹಿಸಿದ್ದಾರೆ, ಹಾಗಾಗಿಯೇ ಚಿತ್ರ ಹಾಗೆಯೇ ಮೂಡಿ ಬಂದಿದೆ, ಗಾಂಧಿನಗರದಲ್ಲಿನ ಸಿದ್ಧಸೂತ್ರಗಳನ್ನು ಪಕ್ಕಕ್ಕೆ ತೂರಿ ಗಂಭೀರ ಕತೆಯ ಚಿತ್ರ ಮೂಡಿದೆ, ಮತ್ತದು ಪ್ರೇಕ್ಷಕರಿಗೆ ಇಷ್ಟವಾಗಿದೆ.
ಅದಕ್ಕೆ ಹೇಳಿದ್ದು ಒಂದು ಹೊಸತನದ ಸಿನಿಮಾದ ಹಿಂದೆ ನಿರ್ದೇಶಕನ ವಿಷನ್ ಎಷ್ಟಿರುತ್ತದೋ ಅಷ್ಟೇ ಟ್ರಸ್ಟ್ ನಿರ್ಮಾಪಕರದ್ದಿರುತ್ತದೆ. ನಿರ್ಮಾಪಕರ ಸೂಕ್ಷ್ಮಗ್ರಹಿಕೆ ಮತ್ತು ಅವರ ಬುದ್ದಿವಂತಿಕೆಯೇ ಹೊಸತನಕ್ಕೆ ದಾರಿಯಾಗುತ್ತದೆ. ಸುಮ್ಮನೆ ಗಮನಿಸಿ, ಆವತ್ತಿನಿಂದ ಈವತ್ತಿನವರೆಗೆ ಯಾವುದಾದರೂ ಹೊಸ ಪ್ರಯತ್ನ, ಹುಬ್ಬೇರಿಸುವ ಸಿನಿಮಾಗಳೆಲ್ಲಾ ಬಂದಾಗ ನಿರ್ಮಾಪಕರು ಬಹುತೇಕ ಹೊಸಬರೇ ಆಗಿರುತ್ತಾರೆ. ಆನಂತರ ಅವರು ಅದನ್ನು ಕಾಯ್ದುಕೊಳ್ಳದೆ ಹೋಗುವುದು ಬಿಡುವುದು ಅವರಿಗೆ ಬಿಟ್ಟದ್ದು.
ಹಾಗಾಗಿ ನಮಗೆ ಸೂಕ್ಷ್ಮಗ್ರಾಹಿ, ಅಭಿರುಚಿಯುಳ್ಳ ಹಾಗೆಯೇ ಒಂದು ವಿಷನ್ ಇರುವ ನಿರ್ಮಾಪಕರು ಸಿಕ್ಕಿದ್ದಾರೆ. ಅವರನ್ನು ಉಳಿಸಿಕೊಳ್ಳುವುದು ನಿರ್ದೇಶಕರ ಬಹುದೊಡ್ಡ ಜವಾಬ್ದಾರಿಯಾಗಿದೆ..
ಅದಕ್ಕೆ ಹೇಳಿದ್ದು ಒಂದು ಹೊಸತನದ ಸಿನಿಮಾದ ಹಿಂದೆ ನಿರ್ದೇಶಕನ ವಿಷನ್ ಎಷ್ಟಿರುತ್ತದೋ ಅಷ್ಟೇ ಟ್ರಸ್ಟ್ ನಿರ್ಮಾಪಕರದ್ದಿರುತ್ತದೆ. ನಿರ್ಮಾಪಕರ ಸೂಕ್ಷ್ಮಗ್ರಹಿಕೆ ಮತ್ತು ಅವರ ಬುದ್ದಿವಂತಿಕೆಯೇ ಹೊಸತನಕ್ಕೆ ದಾರಿಯಾಗುತ್ತದೆ. ಸುಮ್ಮನೆ ಗಮನಿಸಿ, ಆವತ್ತಿನಿಂದ ಈವತ್ತಿನವರೆಗೆ ಯಾವುದಾದರೂ ಹೊಸ ಪ್ರಯತ್ನ, ಹುಬ್ಬೇರಿಸುವ ಸಿನಿಮಾಗಳೆಲ್ಲಾ ಬಂದಾಗ ನಿರ್ಮಾಪಕರು ಬಹುತೇಕ ಹೊಸಬರೇ ಆಗಿರುತ್ತಾರೆ. ಆನಂತರ ಅವರು ಅದನ್ನು ಕಾಯ್ದುಕೊಳ್ಳದೆ ಹೋಗುವುದು ಬಿಡುವುದು ಅವರಿಗೆ ಬಿಟ್ಟದ್ದು.
ಹಾಗಾಗಿ ನಮಗೆ ಸೂಕ್ಷ್ಮಗ್ರಾಹಿ, ಅಭಿರುಚಿಯುಳ್ಳ ಹಾಗೆಯೇ ಒಂದು ವಿಷನ್ ಇರುವ ನಿರ್ಮಾಪಕರು ಸಿಕ್ಕಿದ್ದಾರೆ. ಅವರನ್ನು ಉಳಿಸಿಕೊಳ್ಳುವುದು ನಿರ್ದೇಶಕರ ಬಹುದೊಡ್ಡ ಜವಾಬ್ದಾರಿಯಾಗಿದೆ..