Friday, August 31, 2012

ಗೂಳಿಯ೦ತವನು ನಾನು...-ಆಸ್ಕರ್ ಕಣದ ಚಿತ್ರಗಳು-4

ತ ಗೂಳಿಯ೦ತಹ ಮನುಷ್ಯ. ಎತ್ತರದ ನಿಲುವು. ಅಜಾನುಬಾಹು. ಪೈಲ್ವಾನನ೦ತಹ ದೇಹ.ಆತನನ್ನು ಎಲ್ಲರೂ ಕರೆಯುವುದು ಹಾಗೆಯೇ' ಗೂಳಿ' ಎ೦ದು . ಅವನು ನೋಡಲಿಕ್ಕೆ ಅಷ್ಟೇ ಗೂಳಿ ತಾರಾ ಅಲ್ಲ. ಆತನ ಒರಟುತನ, ಹಿ೦ದೆ ಮು೦ದೆ ನೋಡದೆ ಮುನ್ನುಗ್ಗುವಿಕೆ ಎಲ್ಲವೂ ಗೂಳಿಯ ರೀತಿಯೇ..ಬಾಲ್ಯದಲಿ ಅತೀಕೆಟ್ಟದಾದ ಅನುಭವಕ್ಕೆ ಒಳಗಾಗುವ ನಾಯಕ ತನ್ನ ಪುರುಷತ್ವವನ್ನೇ ಕಳೆದುಕೊಳ್ಳುತ್ತಾನೆ. ಆನ೦ತರ ದನದ ಮಾ೦ಸಕ್ಕಾಗಿ ಕೊಬ್ಬು ಹೆಚ್ಚಿಸುವ ಔಷಧ ತೆಗೆದುಕೊಳ್ಳುತ್ತಾ ಇಡೀ ತನ್ನ ದೇಹವನ್ನೂ ಹುರಿಗೊಳಿಸುತ್ತಾನೆ. ನೋಡಿದ ಯಾರಾದರೂ ಆಹ ಎನ್ನುವ೦ತಹ ಅ೦ಗಸೌಷ್ಟವ ಬೆಳೆಸಿಕೊಳ್ಳುತ್ತಾನೆ. ಆದರೆ ಮೇಲ್ನೋಟಕ್ಕೆ ಇದೆಲ್ಲಾ ಆತನನ್ನು ಅದ್ಭುತ ಗ೦ಡಸ೦ತೆ ತೋರಿಸಿದರೂ ಆತ ಗ೦ಡಸ್ತನವಿಲ್ಲದ ವ್ಯಕ್ತಿ...ಅವನ ಮನದೊಳಗಿನ ನೋವನ್ನ ಹತಾಷೆಯನ್ನು ಮರೆಯುವುದಾದರೂ ಹೇಗೆ? ಎಲ್ಲವನ್ನೂ ಬಿಚ್ಚಿಟ್ಟು ಹಗುರಾಗುವುದಾದರೆ ಅದಕ್ಕೆ ಸೂಕ್ತ ವ್ಯಕ್ತಿ ಯಾರು..?
ದನದ ಮಾ೦ಸ ಮಾರುವ, ದನದ ಜೊತೆಯಲ್ಲೇ ತನ್ನನ್ನು ಸಮೀಕರಿಸಿಕೊಳ್ಳುವ ಕಥೆ ಹೊ೦ದಿರುವ ಸಿನಿಮಾವೇ 'ಬುಲ್ ಹೆಡ್'. 2011 ರಲ್ಲಿ ' ಉತ್ತಮ ವಿದೇಶಿ ಚಲನಚಿತ್ರ ' ವಿಭಾಗದಲ್ಲಿ ಆಸ್ಕರ್ ಕಣದಲ್ಲಿ ಸ್ಪರ್ಧಿಸಿದ್ದ 'ಬೆಲ್ಜಿಯಂ ' ದೇಶದ ಚಲನಚಿತ್ರ. ಮೈಕೆಲ್ .ಆರ್ . ರೋಸ್ಕಂ ನಿರ್ದೇಶನದ ಈ ಚಲನಚಿತ್ರ ಮೇಲ್ನೋಟಕ್ಕೆ ದನದ ಮಾ೦ಸ ಮಾರಾಟ, ಅದರಲ್ಲಿನ ಮಾಫಿಯ ಮು೦ತಾದವನ್ನು ತೋರಿಸಿದರೂ ಆ೦ತರಿಕವಾಗಿ ಬೇರೆಯದೇ ಆದ ಕಥೆಯನ್ನೂ ಹೊ೦ದಿದೆ. ಸಿನಿಮಾದ ಗೆಲುವಿರುವುದು        ಅಲ್ಲೇ. ಯಾಕೆ೦ದರೆ ಸುಮ್ಮನೆ ನೋಡುತ್ತಾ ಹೋದ೦ತೆ ಮೊದಲಿಗೆ ಇದೊ೦ದು ಥ್ರಿಲ್ಲರ್ ರೀತಿಯಲ್ಲಿ ಭಾಸವಾಗುತ್ತದೆ. ಆನ೦ತರ ಈ ಸಿನಿಮಾವೊ೦ದು ಹೊಡೆದಾಟ , ಬಡಿದಾಟದ ಸಿನಿಮಾ ಇರಬಹುದು ಎನಿಸುತ್ತದೆ. ಹಾಗೆ ಕಥೆ ಮು೦ದುವರೆದರೆ ಇದೊ೦ದು ಸೇಡಿನ ಕಥೆ ಅ೦ತಲೂ ಅನಿಸುವುದಕ್ಕೆ ಪ್ರಾರಂಭಿಸುತ್ತದೆ. ಚಿತ್ರ ಎಲ್ಲಿ ಪ್ರಾರ೦ಭವಾಗುತ್ತದೋ ಅಲ್ಲೇ ಕೊನೆಯಾದರೂ       ಅದರೊಳಗಿನ ಕಥೆಯನ್ನೂ  , ನಾಯಕನ ದುರ೦ತ ಜೀವನವನ್ನೂ ಯಶಸ್ವಿಯಾಗಿ ಪ್ರೇಕ್ಷಕನ ಮನಸ್ಸಿನಲ್ಲಿ ಪಡಿಮೂಡಿಸುತ್ತದೆ. ಎಲ್ಲ ನಾವ೦ದುಕೊ೦ಡ೦ತೆ ಇರುವುದಿಲ್ಲ.ಬದುಕು ನಮ್ಮ ತೆಕ್ಕೆಗೆ ಸಿಗುವುದಿಲ್ಲ..ಎನ್ನುವುದನ್ನು ನಾಯಕನ ಪಾತ್ರದ ಮೂಲಕ ತೆರೆದಿಡುವ ನಿರ್ದೇಶಕ ಗೆಲ್ಲುವುದು ತನ್ನ ಸಾವಧಾನದ ನಿರೂಪನೆಯಿ೦ದಾಗಿ.ನೀವು ಎರಿಕ್ ವ್ಯಾನ್ ಲೂಯ್ ನಿರ್ದೇಶನದ ಯಶಸ್ವೀ ಥ್ರಿಲ್ಲರ್ ಚಿತ್ರ ' ಲೋಫ್ಟ್' ನೋಡಿದ್ದರೆ ಅದರಲ್ಲಿ ಐವರು ನಾಯಕರಲ್ಲಿ ಒಬ್ಬನಾದ ಮಥಿಯಾಸ್ ನನ್ನು ಮರೆಯಲು ಸಾಧ್ಯವೇ ಇಲ್ಲ. ಅದೇ ಮಥಿಯಾಸ್ ಇಲ್ಲಿ ನಾಯಕನ ಪಾತ್ರ ನಿರ್ವಹಿಸುವುದು. ಪಾತ್ರ ಸಹಜವಾದ ಭಾವನೆಯನ್ನು ವ್ಯಕ್ತ ಪಡಿಸುತ್ತ ನೈಜ ಅಭಿನಯ ನೀಡಿರುವ ಮಥಿಯಾಸ್ ಚಿತ್ರದುದ್ದಕ್ಕೂ ನೋಡುಗನ ಪ್ರೀತಿಗೆ ಕರುಣೆಗೆ ಪಾತ್ರನಾಗುತ್ತಾ  ಸಾಗುತ್ತಾನೆ. ಚಿತ್ರದ ಕೊನೆಯ ಕೆಲವು ದೃಶ್ಯಗಳಲ್ಲ೦ತೋ ಮಥಿಯಾಸ್ ಅಭಿನಯ ಸೂಪರ್.
ಒಮ್ಮೆ ನೋಡಿ.


Wednesday, August 29, 2012

'ಮೂಗಮುಡಿ' ನಿರೀಕ್ಷೆಯಲ್ಲಿ....

ಒಬ್ಬ ಶಕ್ತಿಯುತವಾದ ನಾಯಕನನ್ನು ಸೃಷ್ಟಿಸುವುದು ಎಲ್ಲ ನಿರ್ದೇಶಕರ ಕನಸು. ಅದರಲ್ಲೂ ಒಬ್ಬ ಸೂಪರ್ ಮ್ಯಾನ್ ನನ್ನು ತೆರೆ ಮೇಲೆ ತರಲು, ಆತನ ಮೂಲಕ ಜಗತ್ತಿನ ದುಷ್ಟ ಶಕ್ತಿಯನ್ನ ತೊಡೆದು ಹಾಕಿ, ಒಳ್ಳೆಯರಿಗೆ ಅಮಾಯಕರಿಗೆ ರಕ್ಷಣೆ ಕೊಡಿಸುವ ಆಸೆ ಬಹುತೇಕ ನಿರ್ದೇಶಕರ ಕನಸೂ ಆಗಿರುತ್ತದೆ. ಸಮಾಜದಲ್ಲಿನ ದುಷ್ಟ ಶಕ್ತಿಯನ್ನ ಒಬ್ಬ ನಾಯಕ ಕ್ಲೈಮ್ಯಾಕ್ಸನಲ್ಲಿ ಹೊಡಿದಾಕಿಬಿಡಬಹುದೇನೋ...ಆದರೆ ಅದು ತೀರ ಸಿನಿಮೀಯ ಎನಿಸಿಬಿಡುತ್ತದೆ. ಅದೇಗೆ ಅಷ್ಟೂ ಖಳರನ್ನು, ಅದೂ ಅಷ್ಟೋ೦ದು ಶಸ್ತ್ರಾಸ್ತ್ರ ಸಹಿತವಾಗಿದ್ದಾಗೂ ನಾಯಕ ಮಾತ್ರ ಬರಿಗೈಯಲ್ಲಿ ಹೊಡಿದಾಕುವ೦ತೆ ಮಾಡುವುದು ಎನ್ನುವ ಪ್ರಶ್ನೆ ಕಾಡದೆ ಬಿಡುವುದಿಲ್ಲ. ಆಗಲೇ ನಿರ್ದೇಶಕ ಸೂಪರ್ ಮ್ಯಾನ್ ಮೊರೆಹೋಗುವುದು. ಸ್ಪೈಡರ್ ಮ್ಯಾನ್ , ಬ್ಯಾಟ್ ಮ್ಯಾನ್ , ತೋರ್, ಐರನ್ ಮ್ಯಾನ್ , ಇವರೆಲ್ಲಾ ಹೀಗೆ ಸೃಷ್ಟಿಯಾದವರೇ. ನಮ್ಮಲ್ಲಿ ಕ್ರಿಶ್ ಬಿಟ್ಟರೆ ಮತ್ತೊಬ್ಬನ ಸುಳಿವಿಲ್ಲ. ರಾ.ಒನ್ ಚಿತ್ರದ ಜೀ.ಒನ್ ಯ೦ತ್ರ ಮಾನವನಾದ್ದರಿ೦ದ ಅವನು ಸೂಪರ್ ಮ್ಯಾನ್ ಪಟ್ಟಿಗೆ ಸೇರುವುದಿಲ್ಲ.

 ಅ೦ದಹಾಗೆ ನನ್ನ ಸಿನೆಮಾ ಮಾರ್ಚ್ ೨೩ ಕೂಡ ಅನ್ಯಾಯಕ್ಕೊಳಗಾದ ಯುವಕನೊಬ್ಬ ದುಷ್ಟ ಶಕ್ತಿಗಳ, ಸಮಾಜ ಘಾತುಕ ವ್ಯಕ್ತಿಗಳ, ಅವ್ಯವಸ್ಥೆಯ ವಿರುದ್ಧ ಹೋರಾಡುವ ಕಥೆ ಹೊ೦ದಿದೆ. ಹಾಗ೦ತ ನಾಯಕ ಹೊಡಿದಾಡುವುದಿಲ್ಲ. ಅಥವಾ ಅತಿಮಾನವನೂ ಅಲ್ಲ. ಬುದ್ದಿವ೦ತಿಕೆಯ ಮೂಲಕ ತನ್ನ ಗುರಿ ತಲುಪುತ್ತಾನೆ.
ಅ೦ಜಾದೆ
 ಇಷ್ಟರಲ್ಲೇ ಬಿಡುಗಡೆಯಾಗುತ್ತಿರುವ 'ಮೂಗುಮುಡಿ' ಸಿನಿಮಾ ಕುತೂಹಲ ಕೆರಳಿಸಲು ಸಾಕಷ್ಟು ಕಾರಣಗಳಿವೆ. ಅದರಲ್ಲಿ ಮುಖ್ಯವಾದ್ದದೆ೦ದರೆ ನಾಯಕ ಜೀವಾ ಮತ್ತು ನಿರ್ದೇಶಕ ಮಿಸ್ಕಿನ್. ತಮಿಳು ಚಿತ್ರರ೦ಗ ಕ೦ಡ ಅಪರೂಪದ ಚಿತ್ರಕರ್ಮಿಗಳಲ್ಲಿ ಮಿಸ್ಕಿನ್ ಕೂಡ ಒಬ್ಬರು. ತಮ್ಮ ವಿಶಿಷ್ಟ ಚಿತ್ರಕಥೆ, ನಿರ್ದೇಶನದ ಮೂಲಕ ಬೆಳಕಿಗೆ ಬ೦ದ ಅತ್ಯುತಮ ಸಿನಿಮಾ ನಿರ್ದೇಶಕ. ಅವರ ನಿರ್ದೇಶನದ ಎಲ್ಲಾ ಸಿನಿಮಾವು ವಿಚಿತ್ರ ಮತ್ತು ಉತ್ತಮ ನಿರೂಪಣೆ, ಸ್ವ೦ತಿಕೆ ಹೊ೦ದಿರುವ೦ತಹದ್ದೆ. ಚಿತಿರಂ ಪೇಸುದಡಿ, ಅ೦ಜಾದೆ, ನ೦ದಲಾಲ, ಯುದ್ಧಂ ಸೇಯ್ ನೋಡಿದಾಗ ಈ ನಿರ್ದೇಶಕನ ತಾಕತ್ತೇನು ಎಂಬುದು ಅರಿವಾಗುತ್ತದೆ.ಮಿಸ್ಕಿನ ಮೂಲ ಹೆಸರು ಷೆನ್ಮುಗ ರಾಜಾ.ದಸ್ತೋವಸ್ಕಿಯ ಕಾದಂಬರಿ ಈಡಿಯಟ್ ನಲ್ಲಿ ಬರುವ ಪಾತ್ರವಾದ ಮಿಸ್ಕಿನ್ ನಿ೦ದ ಪ್ರೆರೇಪಿತನಾಗಿ ತನ್ನ ಹೆಸರನ್ನು ಮಿಸ್ಕಿನ ಎ೦ದು ಬದಲಾಯಿಸಿಕೊ೦ಡು ಅದೇ ಹೆಸರಿನಲ್ಲಿ ಸಿನೆಮಾಗಳನ್ನೂ ಮಾಡುತ್ತಿರುವ ಶಕ್ತ ನಿರ್ದೇಶಕ. ಇನ್ನು ಜೀವಾ ಕೂಡ ಹೊಸತನಕ್ಕಾಗಿ ತುಡಿಯುವ ಕಲಾವಿದ.ಸ್ವತಹ ನಿರ್ಮಾಪಕರ ಪುತ್ರನಾದರೂ ತನ್ನದೇ ಶೈಲಿಯಲ್ಲಿ ವಿಭಿನ್ನ ಸಿನಿಮಾಗಳಲ್ಲಿ ನಟಿಸುತ್ತಾ ಬ೦ದ ವ್ಯಕ್ತಿ. ಆತನ 'ರಾಮ್', 'ಈ' ಮು೦ತಾದ ಚಿತ್ರಗಳೇ ಇದಕ್ಕೆ ಸಾಕ್ಷಿ. ಈಗ ಈ ಇಬ್ಬರು ದಿಗ್ಗಜರು ಒಟ್ಟಾಗಿದ್ದಾರೆ.
ಸಿನಿಮಾ ನಿರೀಕ್ಷೆ ಹುಟ್ಟಿಸುತ್ತಿದೆ...
ರಾಮ್

ಚಿತ್ತಿರಂ ಪೇಸುದಡಿ 

ನ೦ದಲಾಲ
ಅ೦ದಹಾಗೆ ಚಿತ್ತಿರಂ ಪೇಸುದಡಿ ಕನ್ನಡದಲ್ಲಿ 'ಸುದೀಪ್' ಅಭಿನಯದಲ್ಲಿ 'ಕಿಚ್ಚ ಹುಚ್ಚ' ನಾಗಿಯೂ, ಅ೦ಜಾದೆ 'ಅ೦ಜದಿರು' ಆಗಿಯೂ ಕನ್ನಡದಲ್ಲಿ ರೀಮೇಕ್ ಆಗಿದೆ.









Tuesday, August 28, 2012

ಅದ ಅಪ ದೆನ್ಗಾನ್ ಸಿಂಟ?

ಒ೦ದು ಕಾಲೇಜು. ಹದಿಹರೆಯದ ಒ೦ದಷ್ಟು ಹುಡುಗ-ಹುಡುಗಿಯರು.ಬಣ್ಣ ಬಣ್ಣದ ಕ್ಯಾ೦ಪಸ್..ಒ೦ದು ಪ್ರೇಮ ಕಥೆಯ ಸಿನೆಮಾಕ್ಕೆ ಇನ್ನೇನು ಬೇಕು...? ನಾನು ಪ್ರತಿ ಸಾರಿಯೂ ಟೀನ್ ಮೂವಿ ನೋಡುವಾಗಲೆಲ್ಲಾ ಕುತೂಹಲದಿ೦ದ ಗಮನಿಸುತ್ತೇನೆ. ನಮ್ಮಲ್ಲಿನ ಸಿನಿಮಾಗಳಿಗೂ ಬೇರೆ ದೇಶದ ಸಿನಿಮಾಗಳಿಗೂ ವ್ಯತ್ಯಾಸ ಏನಿರಬಹುದು..? ಹಾಗೆ ಸಾಮ್ಯತೆ ಏನಿರಬಹುದು.?ಯಾಕೆಂದರೆ ಪ್ರೀತಿ- ಪ್ರೇಮ ಎಲ್ಲಾ ಕಡೆ ಹೆಚ್ಚು ಕಡಿಮೆ ಒ೦ದೆ ಇರುತ್ತದೆ. ಆದರೆ ಕಾಲೇಜು, ಅಲ್ಲಿನ ಜೀವನ ಶೈಲಿ ಬೇರೆ ಬೇರೆ ಯಾಗುತ್ತ ಹೋಗುತ್ತದೆ. ಆದರೆ ನಮ್ಮಲ್ಲಿನ ಸಿನೆಮಾದಲ್ಲಿ ತ೦ದೆ ತಾಯಿಯರು, ಕುಟು೦ಬದ  ಪಾತ್ರ ಪ್ರಭಾವ ಜಾಸ್ತಿ. ಆದರೆ ಪಾಶ್ಚಿಮಾತ್ಯ ದೇಶಗಳ ಸಿನೆಮಾಗಳಲ್ಲಿ ಆ ಪ್ರಭಾವ ಕಡಿಮೆ. 
 ಅದ ಅಪ ದೆನ್ಗಾನ ಸಿ೦ಟಾ ಇ೦ಡೋನೇಶಿಯಾ ದೇಶದ ಸಿನಿಮಾ. ಇಲ್ಲಿ ಚ೦ದನೆಯ ಜೋಡಿ ಇದೆ.ಚಿತ್ರದ ನಾಯಕಿ ಸಿಂಟ.  ಗೆಳೆತನ ಮತ್ತು ಪ್ರೀತಿ ಬೇರೆ ಬೇರೆ ಎನ್ನುವುದು ಆಕೆಯ ಭಾವನೆ. ಅಷ್ಟೇ ಅಲ್ಲ ಅದನ್ನೇ ಬಲವಾಗಿ ನ೦ಬಿಯೂ       ಬಿಟ್ಟಿದ್ದಾಳೆ. ಗೆಳೆಯ ಜೋಡಿಯಾಗಲು, ಪ್ರೇಮಿಯಾಗಲು ಮತ್ತು ಮದುವೆಯಾಗಲು ಸಾಧ್ಯವೇ ಇಲ್ಲ ಎನ್ನುವುದು ಅವಳ ಮನಸ್ಸಿನಲ್ಲಿ ತು೦ಬಿ ಹೋಗಿರುತ್ತದೆ. ಆದರೆ ಅವಳ ಗೆಳೆತನ ನಾಯಕನ ಜೊತೆಯಾದಾಗ ಅವಳಿಗರಿವಿಲ್ಲದೆಯೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾಳೆ. ಆದರೆ ತಾನು ನ೦ಬಿಕೊ೦ಡಿರುವ ಸಿದ್ಧಾ೦ತ ಅವಳನ್ನು ಪ್ರೀತಿಯಿ೦ದ ದೂರ ಇಡುತ್ತದೆ. ಮು೦ದೆ..
ಒ೦ದು ಖುಷಿ ಕೊಡುವ ಮತ್ತು ಮತ್ತೆ ಮತ್ತೆ ನೋಡಲು ಪ್ರೇರೇಪಿಸುವ  ಕ್ಲೈಮ್ಯಾಕ್ಸ್ ಚಿತ್ರದಲ್ಲಿದೆ.
ತಿಳಿಯಾದ ಹಾಸ್ಯ ದೃಶ್ಯಗಳು, ಉತ್ತಮ ಛಾಯಾಗ್ರಹಣ ಮತ್ತು ಮಜಾ ಕೊಡುವ ಹಿನ್ನೆಲೆ ಸ೦ಗೀತ ಈ ಚಿತ್ರದ ಆಸ್ತಿ .
ಇ೦ಡೋನೇಶಿಯಾ ಸಿನಿಮಾಗಳಲ್ಲಿ ಇನ್ನೊ೦ದು ವಿಶೇಷವಿದೆ. ಅದೆ೦ದರೆ ಹೆಸರುಗಳು. ರಾಮ, ರ೦ಗಾ, ಆಲ್ಯಾ, ಮೌರ್ಯ ಇತ್ಯಾದಿ. ಹಾಗಾಗಿ ಈ ಸಿನಿಮಾಗಳು ಹೆಚ್ಚು ಹೆಚ್ಚು ನಮಗೆ ಹತ್ತಿರವಾಗುತ್ತವೆ.
 ನಿಕೊಲಸ್ ಸಪುತ್ರ, ಡಿಯಾನ್ ಸಸ್ತ್ರೋವರ್ದೊಯು ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ನಿರ್ದೇಶಕ ರೂಡಿ ಸುಜಾರ್ವೋ. 2002 ರಲ್ಲಿ ತೆರೆಗೆ ಬ೦ದು ಭಾರಿ ಹಣ ದೋಚಿದ ಈ ಸಿನಿಮಾವನ್ನು ನೋಡಿ ಖುಷಿ ಪಡಿ. ನಿಮ್ಮದೇ ಕಾಲೇಜಿನ ದಿನಗಳಿಗೆ ನೆನಪಿನಲ್ಲಿ ಭೇಟಿಕೊಡಿ.
ಈ  ಚಿತ್ರದ ಕೊನೆಯಲ್ಲಿ ಒ೦ದೆ ಒ೦ದು ಚುಂಬನದ ದೃಶ್ಯವಿದೆ. ಈ ಚಿತ್ರ 2002ರಲ್ಲಿ ಬಿಡುಗಡೆಯಾಗಿ ಭಾರಿ ಯಶಸ್ಸುಗಳಿಸಿದರೂ ಚು೦ಬನದ ದೃಶ್ಯದಿ೦ದಾಗಿ ವಿವಾದವನ್ನು ಸೃಷ್ಟಿಸಿತ್ತ೦ತೆ.ಯಾಕೆಂದರೆ ಸಿನಿಮಾ ವಿಷಯದಲ್ಲಿ ಇ೦ಡೋನೇಶಿಯಾದಲ್ಲಿ ಸ್ವಲ್ಪ ಮಡಿವಂತಿಕೆ ಜಾಸ್ತಿ. ಹಾಗಾಗಿ ಅಲ್ಲಿನ ಸಾಮಾನ್ಯ ಸಿನೆಮಾಗಳಲ್ಲಿ ಯಾವುದೇ ರೀತಿಯ ಅತೀ ಎನಿಸುವ ದೃಶ್ಯಗಳುಇರುವುದಿಲ್ಲ.