Thursday, November 23, 2017

ದರ್ಶನ್ ಹೆಚ್ಚೋ..ಸುದೀಪ್ ಹೆಚ್ಚೋ...?

ನಾನು ವಿಷ್ಣುವರ್ಧನ್ ಅಭಿಮಾನಿ. ನಾನು ಎಂಟನೆಯ ತರಗತಿಯಲ್ಲಿದ್ದಾಗ ವಿಷ್ಣುವರ್ಧನ್ ಅವರ ಭಾವಚಿತ್ರ ಅದಕ್ಕೆ ಬಣ್ಣ ಹಚ್ಚಿದ್ದೆ. ಆದರೆ ನನ್ನದೇ ಗೆಳೆಯ ರಾಜ್ಅಭಿಮಾನಿ ಅದರ ಮೇಲೆ ಪೆನ್ನಿನಿಂದ ಗೀಚಿ ವಿರೂಪಗೊಳಿಸಿದ್ದ. ಅದು ದೊಡ್ಡ ಜಗಳಕ್ಕೆ ಕಾರಣವಾಗಿತ್ತು. ಸುಮಾರು ವರ್ಷಗಳವರೆಗೆ ನಮ್ಮೂರಿನಲ್ಲಿ ಇದೊಂದು ಜಗಳ ನಡೆಯುತ್ತಲೇ ಇತ್ತು. ಹಬ್ಬಕ್ಕೆ ವಿಶೇಷ ದಿನಗಳಲ್ಲಿ ಟಿವಿ ಮತ್ತು ವಿಸಿಪಿ ತಂದು ಅದನ್ನು ಊರ ಚಾವಡಿಯ ಮುಂದೆ ಪ್ರದರ್ಶಿಸಲಾಗುತ್ತಿತ್ತು. ಹೆಚ್ಚಾಗಿ ಅದು ನಡೆಯುತ್ತಿದ್ದದ್ದು ಗಣೇಶ ಹಬ್ಬ ನಾಡದೇವತೆ ಹಬ್ಬಗಳಲ್ಲಿ ಅಂತಹ ಸಂದರ್ಭಗಳಲ್ಲಿ ಈ ಸ್ಟಾರ್ ವಾರ್ ತಾರಕಕ್ಕೇರುತ್ತಿತ್ತು. ದಿನಕ್ಕೆ ನಾಲ್ಕು ಕ್ಯಾಸೆಟ್ ಲೆಕ್ಕ.ಮುಗಿಯುವಷ್ಟರಲ್ಲಿ ಬೆಳಗಾಗುತ್ತಿತ್ತು ಅಥವಾ ಊರಜನರೆಲ್ಲಾ ನಿದ್ದೆ ಮಾಡಿಬಿಡುತ್ತಿದ್ದರು.ರಾತ್ರಿ ಒಂಭತ್ತಕ್ಕೆ ಚಾವಡಿಯ ಮುಂದೆ ಚಾಪೆ ಹಾಸಿಕೊಂಡು ಕುಟುಂಬಗಳು ನೆಲೆಗೊಳ್ಳುತ್ತಿದ್ದವು.
ಒಂದು ವಿಷ್ಣುವರ್ಧನ್, ಒಂದು ರಾಜಕುಮಾರ್, ಒಂದು ಅಂಬರೀಶ್ ಮತ್ತೊಂದು ದೇವರ ಚಿತ್ರ ಆಗ ಕಂಪಲ್ಸರಿ. ಯಾರ ಸಿನೆಮಾವೇನಾದರೂ ಮಿಸ್ಸಾದರೆ ಅಲ್ಲಿಗೆ ಆವತ್ತು ಸಿನಿಮಾ ನಡೆಯುತ್ತಲಿರಲಿಲ್ಲ. ಬದಲಿಗೆ ಆ ಅಭಿಮಾನಿತಂಡದವರು ಶೋ ಶುರುವಾಗುವವರೆಗೆ ಸುಮ್ಮನಿದ್ದು ಸ್ವಲ್ಪ ಹೊತ್ತಿಗೆ ಊರಾಚೆ ಹೋಗಿ ಲೈಟ್ ಕಂಭಕ್ಕೆ ಕಲ್ಲು ಹೊಡೆದು ಫ್ಯೂಸ್ ಹಾರಿಹೋಗುವಂತೆ ಮಾಡುತ್ತಿದ್ದರು. ಜಿದ್ದಾಜಿದ್ದಿಗೆ ಬಿದ್ದ ಅಭಿಮಾನಿ ಬಳಗದವರು ಲೈಟ್ ಕಂಭದ ಹತ್ತಿರ ಒಂದು ಗುಂಪನ್ನು ಕಾವಲಿಗೆ ನಿಲ್ಲಿಸುತ್ತಿದ್ದರು. ಅಲ್ಲೊಂದು ಜಟಾಪಟಿ ಶುರುವಾಗುತ್ತಿತ್ತು. ಅದು ಸಾಧ್ಯವಾಗದೆ ಹೋದರೆ ಸಿನಿಮಾ ನೋಡುತ್ತಾ ಕುಳಿತವರಿಗೆ ದೂರದಿಂದ ಕಲ್ಲು ಹೊಡೆಯುವ ಮಣ್ಣು ಎರಚುವ ಚೇಷ್ಟೆಗಳನ್ನೂ ಮಾಡಿ ಸಿನಿಮಾ ವೀಕ್ಷಣೆಗೆ ಭಂಗ ತರುತ್ತಿದ್ದರು. ಈ ಎಲ್ಲಾ ಕಾರಣಗಳಿಂದ ಉಭಯಸಂಘದ ಅಭಿಮಾನಿಗಳು ಈ ಒಮ್ಮತದ ನಿರ್ಣಯಕ್ಕೆ ಬಂದು ಯಾರೇ ಸಮಾರಂಭ ಮಾಡಿದರೂ ಮೂರು ಸ್ಟಾರ್ ನಟರುಗಳ ಸಿನೆಮಾವನ್ನು ತರುವ ಮೂಲಕ ಸೌಹಾರ್ದತೆ ಕಾಪಾಡಿಕೊಳ್ಳುವ ದೊಡ್ದತನ ತೋರಿದ್ದರು. ಆದರೆ ಇದರಲ್ಲಿಯೂ ಕುಚೇಷ್ಟೆಗಳು ಇಲ್ಲದಿರಲಿಲ್ಲ. ರಾಜ್ಕುಮಾರ್ ಅಭಿಮಾನಿಗಳು ಸಿನಿಮಾ ತಂದರೆ ಗಂಧದಗುಡಿ ತಂದು ಅದರಲ್ಲಿ ವಿಷ್ಣುವರ್ಧನ್ ಅವರನ್ನು ಖಳನಾಯಕನ್ನಾಗಿ ನೋಡಿ ವಿಚಿತ್ರ ಖುಷಿ ಪಡುತ್ತಿದ್ದರು. ಹಾಗೆಯೇ ವಿಷ್ಣು ಅಭಿಮಾನಿಗಳು ಶೂ ಏರ್ಪಡಿಸಿದರೆ ರಾಜಕುಮಾರ್ ರವರ ಫೈಟ್ ಜಾಸ್ತಿಯಿಲ್ಲದ ಮಜಾ ಕೊಡದ ಚಿತ್ರವನ್ನು ತರುತ್ತಿದ್ದರು. ಯಾರ ಸಿನಿಮಾ ಮೊದಲಿಗೆ ಪ್ರದರ್ಶನವಗುತ್ತದೋ ಅವರ ಅಭಿಮಾನಿಗಳು ಸಿನಿಮಾ ವೀಕ್ಷಣೆ ಏರ್ಪಡಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆದರೆ ಊರ ಹಿರಿಯರು, ಹೆಂಗಸರು ಮೊದಲಿಗೆ ದೇವರಸಿನೆಮಾ ಹಾಕಿಬಿಡಿ, ಆಮೇಲೆ ನಿಮಗಿಷ್ಟ ಬಂದದ್ದನ್ನು ಹಾಕಿ ಎಂದು ಜಗಳ ಮಾಡುವ ಸನ್ನಿವೇಶವೂ ಇರುತ್ತಿತ್ತು.

ಪುಟಾಣಿ ಸಫಾರಿ ಚಿತ್ರದಲ್ಲೂ ಇಂತಹದ್ದೊಂದು ಸನ್ನಿವೇಶವಿತ್ತು. ದರ್ಶನ್ ಮತ್ತು ಸುದೀಪ್ ಅಭಿಮಾನಿಗಳಾದ ಇಬ್ಬರು ಹುಡುಗರು ಜಗಳವಾಡುವ ದೃಶ್ಯ. ನಾವು ಸಿನಿಮಾ ಶೂಟ್ ಮಾಡುವ ಸಮಯಕ್ಕೆ ದರ್ಶನ್ ಮತ್ತು ಸುದೀಪ್ ಇಬ್ಬರ ನಡುವ ಗೆಳೆತನ ತುಂಬಾ ಚೆನ್ನಾಗಿತ್ತು.ಆದರೆ ಬಿಡುಗಡೆಯ ಸಮಯ ಹತ್ತಿರಕ್ಕೆ ಬರುತ್ತಿದ್ದಂತೆ ಇಬ್ಬರ ನಡುವಣ ಗೆಳೆತನ ಅಷ್ಟು ಸರಿಹೋಗಲಿಲ್ಲ. ದರ್ಶನ್ ನಾನು ಸುದೀಪ್ ಗೆಳೆಯನಲ್ಲ ಎಂಬರ್ಥದ ಟ್ವೀಟ್ ಮಾಡಿಬಿಟ್ಟರು.ಆರೋಗ್ಯಕರವಾಗಿದ್ದ ಈ ದೃಶ್ಯ ಆನಂತರ ಗೊಂದಲಕ್ಕೆ ಕಾರಣವಾಗಿತ್ತು. ಸುಖಾಸುಮ್ಮನೆ ವಾಗ್ವಾದ ವಿವಾದ ಆಗಿಬಿಡುತ್ತದೆ ಎನಿಸಿತು. ತುಂಬಾ ಜನ ಆಗಲಿ ಬಿಡಿ, ಅದರಿಂದ ನಿಮ್ಮ ಸಿನಿಮಾಕ್ಕೆ ಪ್ರಚಾರ ಸಿಗುತ್ತದೆ ಎಂದೂ ಕೂಡ ಸಲಹೆ ನೀಡಿದರು, ಅದನ್ನೇ ಸುದ್ದಿ ಮಾಡಿ ಎಂದರು. ಒಂದು ಸಿನಿಮಾದ ಪ್ರಚಾರ ಏನೇ ಆದರೂ ಧನಾತ್ಮಕವಾಗಿರಬೇಕು ಎಂಬುದು ನನ್ನ ಆಶಯ. ಸುಖಾಸುಮ್ಮನೆ ವಿವಾದ ಹುಟ್ಟು ಹಾಕುವುದು ಆ ಮೂಲಕ ಸಿನೆಮಾವನ್ನು ಪ್ರಮೋಟ್ ಮಾಡುವುದು ಮನಸ್ಸಿಗೆ ಒಗ್ಗುವುದೂ ಇಲ್ಲ. ಹಾಗಾಗಿ ಆ ಎರಡು ವಾಕ್ಯಗಳನ್ನು ಕತ್ತರಿಸಿದೆ.