Saturday, May 5, 2012

ಒಂದು ತಮಾಷೆಯ ಪ್ರಸಂಗವು..

ಕನ್ನಡದಲ್ಲಿ ಕಡಿಮೆ ಬಜೆಟ್ಟಿನಲ್ಲಿ ಚಿತ್ರತೆಗೆದು ತಕ್ಕ ಮಟ್ಟಿಗೆ ಹೆಸರುವಾಸಿಯಾದ ನಿರ್ದೇಶಕರೊಬ್ಬರ ಶಿಷ್ಯ ಒ೦ದು ದಿನ ಅವರ ಮನೆಗೆ ಬಂದು ಗಡದ್ಧಾಗಿ ಬಿರಿಯಾನಿ ತಿಂದು ಕೈ ತೊಳೆದು ಒದ್ದೆ ಕೈಯನ್ನು ಪ್ಯಾಂಟಿನ ಜೇಬಿಗೆ ಇಳಿಬಿಟ್ಟು ಅಲ್ಲೇ ಒರೆಸಿ, " ಸಾರ್ ನಮ್ ಏರಿಯಾದಲ್ಲಿ ಫ್ರೆಂಡ್ಸ್ ಎಲ್ಲಾ ಸೇರ್ಕಂಡು ಒ೦ದು ಫಂಕ್ಷನ್ ಮಾಡ್ತಿದ್ದೀವಿ..ಎಷ್ಟಾದರೂ ತಾವುಗಳು ಗುರುಗಳು..ಅದ್ಕಿಯ ನಿಮಗೂ ಒಂದ್ ಸನ್ಮಾನ ಇಟ್ಕಂಡು ಬುಟ್ಟೀವಿ ..ತಾವು ಬರಲೇಬೇಕು ಸಾರ್.."ಎಂದು ಅಂಗಲಾಚಿದ.ಏನೋ ಪ್ರೀತಿಯ ಶಿಷ್ಯ ಫಂಕ್ಷನ್ ಮಾಡ್ತಾವ್ನೆ..ಅದ್ರಾಗೂ ಸನ್ಮಾನ ಬೇರೆ ಇಟ್ಕಂದವ್ನೆ..ಈವತ್ತು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರನ್ನು ಗುರುತಿಸೋದೆ ಕಷ್ಟ.. ಹೋಗೆ ಬಿಡೋವಾ.." ಎಂದುಕೊಂಡ ನಿರ್ದೇಶಕರು " ಸರಿ ಬತ್ತೀನಿ ನಡೀಲಾ.ಅಡ್ರೆಸ್ಸ್ ಕೊಡು.." ಎಂದಾಗ ಶಿಷ್ಯ ಉತ್ಸಾಹದಿಂದ "ಸಾ..ಏರಿಯಾಗೆ ಬಂದ್ಬಿಟ್ಟು "ಆಯಮ್ಮ ಇಸ್ಕೂಲ್" ಎಲ್ಲೀಂತ ಕೇಳ್ಬುಡಿ..ಯಾವಾನಾದ್ರೂ ತೋರಿಸ್ತಾನೆ.." ಎಂದವನು ಪ್ಯಾಂಟಿನಿಂದ ಕೈ ತೆಗೆದು ಉಳಿದ ಒದ್ದೆಯನ್ನು ನಿರ್ದೇಶಕರ ಕೈಕುಲುಕುವ ನೆಪದಲ್ಲಿ ಒರೆಸಿ ಅಲ್ಲಿಂದ ಹೊರಟೆ ಬಿಟ್ಟ.
ಫಂಕ್ಷನ್ ದಿನ ಬೆಳಿಗ್ಗೆ ಬೇಗನೆ ಎದ್ದ  ನಿರ್ದೇಶಕರು ಬೆಳಿಗ್ಗೆ    ಎಂಟು   ಘಂಟೆಗೆಲ್ಲ ರೆಡಿಯಾಗಿ ಕಾರು ಹತ್ತಿ ಏರಿಯಾಗೆ ಹೊರಟು ಬಂದದ್ದೆ ದಾರಿ ಹೋಕರನ್ನೆಲ್ಲ ಕೇಳಿದ್ದೆ ಕೇಳಿದ್ದು,.."ಆಯಮ್ಮನ ಸ್ಕೂಲ್ ಎಲ್ಲಿ " ಎಂದು. ವಿಚಿತ್ರವಾಗಿ ಇವರನ್ನೇ ನೋಡಿದ ಏರಿಯಾದ ಜನ 'ಅದ್ಯಾರು ಆಯಮ್ಮ ಅದ್ಯಾವ ಸ್ಕೂಲು, ಇದ್ಯಾರು ಈಯಪ್ಪ 'ಎಂದೆಲ್ಲ ಕನ್ಫ್ಯೂಸ್ ಆಗಿ ಬೇಸತ್ತು ಆಯಮ್ಮನೂ ಇಲ್ಲ ಈಯಮ್ಮನೂ ಇಲ್ಲ ಹೋಗಯ್ಯ ಅಂದು ಬಿಟ್ಟರು.ಇದೆಂತ ಕೆಲಸ ಮಾಡಿದ ಈ ಶಿಷ್ಯ ಮಹಾಶಯ ಎಂದು ಬೇಕಾಬಿಟ್ಟಿ ಬೈದುಕೊಂಡ ನಿರ್ದೇಶಕರು ಶಬ್ಧವೇದಿ ವಿದ್ಯಪಾರಂಗತರಂತೆ ಅಲ್ಲಿ ಕೇಳುತ್ತಿದ್ದ ಮೈಕ್ ಸೌಂಡ್ ಬೆನ್ನೆತ್ತಿ ಹೇಗೋ ಸಮಾರಂಭಕ್ಕೆ ಹಾಜರಾದರಂತೆ.ಆಮೇಲೆ ಸಮಾರಂಭವೂ ಆಯಿತು..ಸನ್ಮಾನವೂ ಮುಗಿಯಿತು.ಇನ್ನೇನು ಹೊರಡುವ ಸಮಯದಲ್ಲಿ ಶಿಷ್ಯೋತ್ತಮನನ್ನು ಸೈಡಿಗೆ ಕರೆದ ನಿರ್ದೇಶಕರು "ಅಲ್ಲಾ ಕಣ್ಲಾ ..ಮುಂದೆ ನೀ ಡೈರಕ್ಟರ್ ಅಗೋನು..ಸರ್ಯಾಗಿ ಒ೦ದು ಅಡ್ರೆಸ್ಸ್ ಹೇಳೋಕ್ಕಾಗಲ್ಲವೇನ್ಲಾ..ಅದೆಂಥ ಸಿಲ್ಮಾ ಮಾಡಿಯ ಮುಂದೆ..ಇಡೀ ಏರಿಯಾ ಬೀಟ್ ಹೊಡೆದರೂ ಅದೆಲ್ಲೂ ಆಯಮ್ಮನ ಸ್ಕೂಲ್ ಸಿಗಲೇ ಇಲ್ಲವಲ್ಲಾ.."ಎಂದು ಬೈದಿದ್ದಕ್ಕೆ, "ಸಾ ಸುಮ್ಕಿರಿ..ನೀವು ನಿಮ್ಮ ಕಾರು ನಿಲ್ಸಿದಿರಲ್ಲ..ಅದೇ ಆಲ್ವಾ ಆಯಮ್ಮನ ಶಾಲಾ.." ಎಂದವನು ತನ್ನ ಎರಡು ಕೈ ಮೇಲೆತ್ತಿ weight  lifter ನಂತೆ ಮೇಲೆ ಕೆಳಗೆ ಮಾಡಿದಾಗಲೇ ಆಯಮ್ಮನ ಶಾಲೆ ಎಂದರೆ ಏನೆಂದು ನಿರ್ದೇಶಕರಿಗೆ ಅರ್ಥವಾದದ್ದು.
"ವ್ಯಾಯಾಮ ಶಾಲೆ" ಎಂಬುದು ಶಿಷ್ಯನ ಬಾಯಲ್ಲಿ ಆಯಮ್ಮನ ಶಾಲೆ ಆಗಿತ್ತು..!!
ಮುಂದೆ ಇದೆ ಶಿಷ್ಯೋತ್ತಮ ಕನ್ನಡದಲ್ಲಿ ಸಿನಿಮಾ ನಿರ್ದೇಶಿಸಿದ್ದು ಬೇರೆ ಮಾತು ಬಿಡಿ.

ಗಂಗಾವತರಣ-ನಾಟಕ.

ಬೇಂದ್ರೆಯವರ ಹತ್ತಿರ ಭವಿಷ್ಯ ಹೇಳುವವನೊಬ್ಬ ಬರುತ್ತಾನೆ..ನಾನು ಭವಿಷ್ಯ ಹೇಳುತ್ತೇನೆ ಎಂದಾಗ ಬೇಂದ್ರೆಯವರು 'ಇಲ್ಲ್ಯಾರೂ ಭವಿಷ್ಯ ಕೇಳುವವರಿಲ್ಲ..ನಿನ್ನ ಹಣ ತೆಗೆದುಕೊಂಡು ನೀನು ಹೋಗಪ್ಪ..' ಎನ್ನುತ್ತಾರೆ. ಅದಕ್ಕೆ ಆತ 'ಇಲ್ಲಾಸ್ವಾಮಿ ನಾನು ಶಾಸ್ತ್ರ ಹೇಳದೆ ಹಣ ಮುಟ್ಟುವುದಿಲ್ಲ..ಎಂದುತ್ತರಿಸುತ್ತಾನೆ..ಆಗ ಹೊರಬರುವ ಬೇಂದ್ರೆಯವರು ಅವನನ್ನು ಕರೆದು ದೂರದಲ್ಲಿ ಕುಳಿತ ಗಿಳಿಶಾಸ್ತ್ರದವನನ್ನು ತೋರಿಸುತ್ತಾ  'ಅ೦ವಾ ಹ್ಯಾಂಗ ಭವಿಷ್ಯಾ ಹೇಳ್ತಾನೋ..' ಕೇಳುತ್ತಾರೆ.
'ಅ೦ವಾ ಗಿಳೀನ ಹೊರಕ್ ಬಿಡ್ತಾನ..ಅದು ಒಂದು ದೇವರ ಪಟ ಹೊರಕ್ ತೆಗೀತದ..ಅದ್ನಾ ನೋಡಿ ಹೇಳ್ತಾನ.. ಆದರೂ ನಮಷ್ಟ ಕರೆ ಹೇಳಲ್ಲಾ.. ಅ೦ವ..' ಎಂದು ಜಂಭ ಕೊಚ್ಚಿಕೊಳ್ಳುತ್ತಾನೆ.
'ಅಲ್ಲಪಾ..ಆ ಗಿಳೀಗಾ ತಾನೂ ಹೊರ ಬಂದಾಗ ಎಲ್ಲಾರ ಹಾರೋಗಿ ಚಂದಾಗಿರ ಬೆಟ್ಟ ಮರ ಕಾಡಲ್ಲಿ  ಬದುಕಬೇಕಾನ್ನೋದ ಅದಕ ಗೊತ್ತಿಲ್ಲ..ಅ೦ತ ಹುದ್ರಲ್ಲಿ ಅದೆಂಗ್ ಬೇರೆಯವರ ಭವಿಷ್ಯ ಹೇಳ್ತಾದಾ..ಹಾಂಗ ನೀ ಬೆಳಗೆದ್ದು ಹೊರಡೋ ಮುನ್ನಾ ಯಾರ ಮನೆಗ್ ಹೋದ್ರ ಭವಿಷ್ಯ ಕೇಳ್ತಾರ..ಯಾರ ಕೇಳಲ್ಲ..ಅನ್ನೋ ಭವಿಶ್ಯಾನ ನಿ೦ಗ್ ಗೊತಿರ್ಕಿಲ್ಲಾ...ನೀ ಹ್ಯಾಂಗ ನನ್ನ ಭವಿಷ್ಯ ಹೇಳ್ತೀಯಾ..ಎಂದಾಗ ಆತ ಸುಸ್ತಾಗುತ್ತಾನೆ..
*********************

ಮಾಸ್ತರ ನಿಮಗ ಸರ್ಕಾರದೋರು ಡಾಕ್ಟರೇಟ್ ಕೊಟ್ಟಾರ..ನೀವಿನ್ನಾ ಡಾ ಬೇಂದ್ರೆ..
ಸಂತೋಷಪ್ಪಾ..ಆದರ ನಮ್ಮಪ್ಪ ಅವ್ವ ನಾ ಹುಟ್ಟಿದಾಗಲೇ ನಮಗೆ ಡಾಕ್ಟರೇಟ್ ಕೊಟ್ಟುಬಿಟಾರ..ನನ್ನ ಹೆಸರಾ ದ.ರಾ .ಬೇಂದ್ರೆ..ಅಂದ್ರಾ ಡಿ.ಆರ್.ಬೇಂದ್ರೆ ಆಯ್ತಲ್ಲಪ..ಡಾಕ್ಟರ..
***************
ಇವೆರೆಡು  ತುಣುಕುಗಳು ರಾಜೇಂದ್ರ ಕಾರಂತಗಂಗಾವತರಣ ನಾಟಕದ್ದು.
ನಿನ್ನೆ ಶುಕ್ರವಾರ ಹನುಮಂತನಗರದ ಕೆಂಗಲ್ ಹನುಮ೦ತಯ್ಯ ಕಲಾಸೌಧದಲ್ಲಿ ರಾಜೇಂದ್ರ ಕಾರಂತರ ಗಂಗಾವತರಣ ನಾಟಕವಿತ್ತು. ಬೇಂದ್ರೆಯವರ ಬದುಕು ಬರಹಗಳನ್ನಾಧರಿಸಿದ ಅದ್ಭುತ ನಾಟಕವದು. ವಸ್ತು ಮತ್ತು ನಿರೂಪಣೆಯೇ ವಿಶೇಷವಾದದ್ದು. ಅತ್ಯುತಮ ಕಲಾವಿದರು ಅಭಿನಯಿಸಿದ್ದ ಅನಾಮತ್ತು ಎರಡು ಘಂಟೆಗಳ ಈ ನಾಟಕವು ಒಂದು ನಿಮಿಷವೂ ನಿಮಗೆ ಬೋರ್ ಹೊಡಿಸುವುದಿಲ್ಲ. ಮತ್ತೆ ಎಲ್ಲಾದರೂ ಈ ನಾಟಕದ ಪ್ರದರ್ಶನವಿದ್ದರೆ ಅವಶ್ಯ ನೋಡಿ..ಅದ್ಭುತ ಅನುಭೂತಿಗೆ ಒಳಗಾಗಿ..

Wednesday, May 2, 2012

ನೋಡಲೇ ಬೇಕಾದ ಚಿತ್ರಗಳು-4

ಹಾರರ್ ಚಿತ್ರಗಳೆಂದರೆ ಕುತೂಹಲವಿದ್ದೆ ಇರುತ್ತದೆ. ಅದರಲ್ಲೂ ಕನ್ನಡದಲ್ಲಿ  ಅನಂತನಾಗ್ ಅಭಿನಯದ ನಾ ನಿನ್ನ ಬಿಡಲಾರೆ ಇರಬಹುದು ಅಥವಾ ಶರಪಂಜರ ಚಿತ್ರದ ದೃಶ್ಯಗಳಿರಬಹುದು.. ಎಂಥ ಗಂಡೆದೆಯವರನ್ನೂ ಒಂದು ಸಾರಿ ನಡುಗಿಸದೆ ಬಿಡುವುದಿಲ್ಲ. ಹಾಲಿವುಡ್ಡಿನಲ್ಲಿ ಬಂದ ಓಮನ್, ಎಕ್ಷಾರ್ಶಿಸ್ಟ, ಇವಿಲ್ ಡೆಡ್ ಚಿತ್ರದ ಸರಣಿಗಳನ್ನು ನಾವೆಲ್ಲರೂ ನೋಡಿರುತ್ತೇವೆ. ಈ ಹಾರರ್ ಚಿತ್ರಗಳಲ್ಲಿನ ಕೆಮರಾ ಮೂವ್ ಮೆ೦ಟ, ಅದರ ಹಿನ್ನೆಲೆ ಸಂಗೀತ ಪರಿಣಾಮಕಾರಿಯಾದಷ್ಟೂ ಸಿನೆಮಾ ಪ್ರೇಕ್ಷಕನಲ್ಲಿ ಭಯ ತರಿಸಬಲ್ಲದು..ಅಂದರೆ ನಿರೀಕ್ಷೆಯ ಪರಿಣಾಮ ಬೀರಬಲ್ಲುದು.. ಅದರಲ್ಲೂ ಹಾರರ್ ಚಿತ್ರಗಳಲ್ಲಿನ  ಚಿತ್ರಿಕೆಗಳ ಸ೦ಯೊಜನೆಯೇ ಜೀವಾಳವಾಗಿರುತ್ತದೆ. ಶೇಕಾಗುವ, ಯಾರೋ ಬಂದಂತೆ , ಓಡಾಡಿದಂತೆ ಭ್ರಮೆ ಮೂಡಿಸುವ ಸ್ಟೇಡಿಕ್ಯಾಮ್ ಶಾಟ್ ಗಳು ಇಂತಹ ಸಿನೆಮಾಗಳಲ್ಲಿ ಸರ್ವೆ ಸಾಮಾನ್ಯ. ಆದರೆ ನಿರ್ದೇಶಕ ನೈಟ್ ಜಿ. ಶ್ಯಾಮಲನ್ ನ ಹಾರರ್ ಚಿತ್ರಗಳ ವಿಶೇಷವೆಂದರೆ ಆತ ಇಂತಹ ಶಾಟ್ ಗಳನ್ನ ಹೆಚ್ಚಾಗಿ ಬಳಸದೆ ಇರುವುದು. ಆತನ ಸಿಕ್ಸ್ತ್ ಸೆನ್ಸ್ ಇರಬಹುದು, ವಿಲೇಜ್ ಇರಬಹುದು, ಹ್ಯಾಪನಿಂಗ್ ಇರಬಹುದು..ತಣ್ಣಗಿನ , ಮ೦ದಗತಿಯ ಚಲನೆಯ ಶಾಟ್ ಗಳೇ ಸಿನೆಮಾದ ಬಂಡವಾಳ. ಈ ನಿಟ್ಟಿನಲ್ಲಿ ಸ್ಪ್ಯಾನಿಶ್ ಭಾಷೆಯಲ್ಲಿನ ಸಿನೆಮಾವೊ೦ದಿದೆ.  El orfanato ಅಥವಾ ದಿ ಆರ್ಫನೇಜ್ ಅದರ ಹೆಸರು.2007ರಲ್ಲಿ ತೆರೆಗೆ ಬ೦ದ ಹಾರರ್ ಚಿತ್ರವನ್ನೊಮ್ಮೆ ನೀವು ನೋಡಲೇಬೇಕು. ಕುತೂಹಲಕಾರಿ ಕಥೆಯ ಜೊತೆಗೆ ಅಷ್ಟೇ ತಣ್ಣಗೆ ಮೈ ನಡುಗಿಸಿ ಬಿಡುವ ನಿರೂಪಣೆ ಈ ಚಿತ್ರದ್ದು. ಯಾವ ಸ್ಟಡಿಕ್ಯಾಮ್ ಶಾಟಿನ ಮೊರೆ ಹೋಗದ ನಿರ್ದೇಶಕ ಜುಆನ್ ಅ೦ಥೊನಿಯ ಬಯೋನ ಇಡೀ ಸಿನೆಮಾವನ್ನು ಎಷ್ಟು ಚೆನ್ನಾಗಿ ಕಲ್ಪಿಸಿ, ಚಿತ್ರೀಕರಿಸಿದ್ದಾನೆ೦ದರೆ ನೀವು ಸಿನೆಮಾ ನೋಡಿದ ಸುಮಾರು ದಿನಗಳವರೆಗೂ ಅದೇ ಗು೦ಗಿನಲ್ಲಿರುತ್ತೀರಿ. ಚಿತ್ರದ ಕಥೆಯೇನೂ ಹೇಳುವ೦ತಹದ್ದಲ್ಲ.ಹಾಗೆ ನೋಡಿದರೆ ಇಡೀ ಚಿತ್ರವನ್ನು ಬರವಣಿಗೆಯಲ್ಲಿ ಅಥವಾ ಮಾತಿನಲ್ಲಿ ವಿವರಿಸಲಾಗುವುದಿಲ್ಲ. ಆದರೂ ಸುಮ್ಮನೆ ಒಂದು ಚಿಕ್ಕ ಪರಿಚಯ ಮಾಡಿಕೊಡುವದಾದರೆ ಸುಮಾರು ವರ್ಷದ ನಂತರ ತನ್ನ ಮನೆಗೆ ವಾಪಸು ಬರುವ ನಾಯಕಿ ಆ ಮನೆಯನ್ನ ಒ೦ದು ಆನಾಥಾಶ್ರಮವಾಗಿ ಪರಿವರ್ತಿಸುತ್ತಾಳೆ.ಆದರೆ ಆಕೆಯ ಮಗ ದಿನ ಕಳೆದಂತೆ ವಿಚಿತ್ರವಾಗಿ ವರ್ತಿಸಲು ಪ್ರಾರ೦ಭಿಸುತ್ತಾನಲ್ಲದೆ ಅದೃಶ ವ್ಯಕ್ತಿಗಳ ಜೊತೆಗೆ ಮಾತನಾಡತೊಡಗುತ್ತಾನೆ..ಹಾಗೆಯೇ ನಾಯಕಿಗೂ ಇಲ್ಲೇನೋ ರಹಸ್ಯ ಅಡಗಿದೆ ಎನ್ನಿಸಲು ಪ್ರಾರಂಭಿಸುತ್ತದೆ..ಮು೦ದಿನ ಘಟನೆಗಳನ್ನ ಹೇಳುವುದಕ್ಕಿಂತ ಒಮ್ಮೆ ನೋಡಿ..ಆಮೇಲೆ ಬೇಕಾದರೆ ಕುಳಿತು ಸಿನಿಮಾದ ಬಗ್ಗೆ ಗಂಟೆಗಟ್ಟಲೆ ಮಾತಾಡೋಣ..ಎನ೦ತೀರಾ..? 

ಈ ಟ್ರೈಲರ್ ನೀವು ನೋಡಲೇಬೇಕು..

ಪುಟದಿಂದ ಪರದೆಗೆ -1

ಯಾವುದೇ ಸಿನೆಮಾಕ್ಕೂ ಮೂಲವಾಗಿ ಗಟ್ಟಿಯಾಗಿರಬೇಕಾದದ್ದು ಕಥೆ ಮತ್ತು ಚಿತ್ರಕಥೆ.ಒಂದು ಸಿನಿಮಾಕ್ಕೆ ಕಥೆ ಬರೆಯುವುದೇ ಬೇರೆ. ಹಾಗೆ ಈಗಾಗಲೇ ಪ್ರಕಟವಾಗಿರುವ ಕಥೆ/ಕಾದ೦ಬರಿಯನ್ನು ಸಿನೆಮಾವಾಗಿಸುವುದೇ ಬೇರೆ. ಸಿನಿಮಾಕ್ಕೆ ನೇರವಾಗಿ ಕಥೆ ಮಾಡುವಾಗ ಬೇಕಾದುದನ್ನು ಸೇರಿಸಿಕೊಳ್ಳಬಹುದು, ಬೇಡದ್ದನ್ನು ತೆಗೆದುಹಾಕಬಹುದು. ಆದರೆ ಒ೦ದು ಕಾದಂಬರಿಯನ್ನು ಸಿನಿಮಾ ರೂಪಕ್ಕೆ ತರುವಾಗ ಸಿನೆಮಾದ ನಿರ್ದೇಶಕ/ಚಿತ್ರಕಥೆಗಾರ ತುಂಬಾ ಶ್ರಮ ಪಡಬೇಕಾಗುತ್ತದೆ. ಯಾಕೆಂದರೆ ದೃಶ್ಯ ರೂಪಕ್ಕೂ ಬರವಣಿಗೆಗೂ ತುಂಬಾ ಅಂತರವಿದೆ. ಉದಾಹರಣೆಗೆ ಬರಹ ರೂಪದಲ್ಲಿ ನಾಯಕನು  ತುಂಬಾ ಮು೦ಗೋಪಿ ಎಂಬ ಒ೦ದೆ ಒ೦ದು ವಾಕ್ಯವನ್ನು  ದೃಶ್ಯ ರೂಪಕ್ಕೆ ತರಬೇಕೆ೦ದರೆ ನೀವೇ ಯೋಚಿಸಿ..ನಮ್ಮಲ್ಲಿ ಪುಟ್ಟಣ್ಣ ಕಣಗಾಲ್ , ಸಿದ್ದಲಿಂಗಯ್ಯ , ಗಿರೀಶ್ ಕಾಸರವಳ್ಳಿಯವರಂತಹ ನಿರ್ದೇಶಕರುಗಳು   ಕಾದಂಬರಿಯ ಸತ್ವವು ಒಂದಿಷ್ಟು ಸೋರಿ ಹೋಗದಂತೆ ದೃಶ್ಯ ರೂಪಕ್ಕಿಳಿಸಿದ ದಿಗ್ಗಜರು..ಬೆಳ್ಳಿಮೋಡ, ಭೂತಯ್ಯನ ಮಗ ಅಯ್ಯು, ನಾಗರಹಾವು, ಶರ ಪಂಜರ , ಗೆಜ್ಜೆ ಪೂಜಾ, ನಾಯಿ ನೆರಳು, ಕನಸೆಂಬ ಕುದುರೆಯನ್ನೇರಿ ಮುಂತಾದವುಗಳನ್ನು ನಾವು ನೋಡಿ ಆನಂದಿಸಬಹುದು..ಹಾಲಿವುಡ್ಡಿನಲ್ಲಿ ಹೆಚ್ಚು ಕಡಿಮೆ ಬಹುತೇಕ ಸಿನೆಮಾಗಳು ಕಥೆ/ಕಾದಂಬರಿ ಆಧಾರಿಸಿದವು. ಅ೦ದರೆ ಪ್ರಕಟಿತ ಬರಹಗಳನ್ನು ನೆಚ್ಸಿಕೊ೦ಡ೦ತವು. ಆದರೆ ನಮ್ಮಲ್ಲಿ ಕಾದಂಬರಿ ಆಧಾರಿತ ಎಂದರೆ ಕಮರ್ಷಿಯಲ್ ಅಲ್ಲದ ಸಿನೆಮಾ ಎಂಬ ತಪ್ಪು ಕಲ್ಪನೆ ಇತ್ತೀಸಿನವರಿಗಿದೆ.ಇರಲಿ.
ಒಂದು ಕಾದಂಬರಿಯನ್ನು ಸಿನಿಮವನ್ನಾಗಿಸಲು ಮೊದಲೇ ಹೇಳಿದಂತೆ ತುಂಬಾ ಶ್ರಮ  ಪಡಬೇಕು. ಹಾಗ೦ತ ಇಡೀ ಕಾದ೦ಬರಿಯ  ಪುಟಪುಟಕ್ಕೂ ನಿಷ್ಟವಾಗಿ ಬಿಟ್ಟರೆ ಅದೂ ಕೂಡ ಸಹನೀಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಕೆಲವು ಬದಲಾವಣೆಗಳು ಅನಿವಾರ್ಯವಾಗುತ್ತವೆ..
ಖ್ಯಾತ ನಾಟಕಕಾರ, ಕಾದಂಬರಿಕಾರ ಸಾಮರ್ ಸೆಟ್ ಮಾಮ್ ನಿಮಗೆ ಗೊತ್ತಿರಬಹುದು. ಅವನ ಬಹುತೇಕ ಕಾದಂಬರಿಗಳು, ನಾಟಕಗಳು ಚಿತ್ರರೂಪ ತಾಳಿವೆ. ಅವುಗಳಲ್ಲಿ ನನಗಿಷ್ಟವಾದದ್ದು ದಿ ಲೆಟರ್ ಅದು ಬಿಟ್ಟರೆ ದಿ ಪೇ೦ಟೆಡ್ ವೇಲ್. ಅದರಲ್ಲೂ ಇದೆ ಕಾದ೦ಬರಿ ಮೂರು  ಭಾರಿ ತೆರೆಯ ಮೇಲೆ ಬಂದಿದೆ. 1934ರಲ್ಲಿ, 1952ರಲ್ಲಿ ಮತ್ತು 2006 ರಲ್ಲಿ. ನನಗಿಷ್ಟವಾದದ್ದು 1934 ಮತ್ತು 2006ರಲ್ಲಿ ಬಂದ ಎಡ್ವರ್ಡ್ ನಾರ್ಟನ್ ಅಭಿನಯದ ಚಿತ್ರ.
ಸಾಮರ್  ಸೆಟ್ ಮಾಮ್ ಕಾದಂಬರಿಯಲ್ಲಿ ಬರುವ ಪಾತ್ರಗಳಾಗಲಿ , ಸನ್ನಿವೇಶಗಳಾಗಲಿ ಅಷ್ಟಾಗಿ ಬದಲಾವಣೆಯಾಗದೆ ಇದ್ದರೂ ನಾಯಕನ ಪಾತ್ರ ಮಾತ್ರ ಕಾದಂಬರಿಗಿಂತ ಚೆನ್ನಾಗಿ ಮೂಡಿ ಬಂದಿದೆ. ಹಾಗೆ ವೈದ್ಯಕೀಯ ವಿಷಯಗಳ ಬಗ್ಗೆ ಮಾಮ್ ಕೊಡುವ ವಿವರಗಳ ಬಗ್ಗೆ ಸಿನೆಮಾದಲ್ಲಿ  ಪ್ರಾಮುಖ್ಯತೆ ಕೊಟ್ಟಿಲ್ಲ. ಕೇವಲ ಗಂಡ -ಹೆಂಡತಿಯ ನಡುವಿನ ಸಂಬ೦ಧವನ್ನು ಅದ್ಭುತವಾಗಿ ತೆರೆಯ ಮೇಲೆ ತರಲಾಗಿದೆ.
1934 ರ ಪೇ೦ಟೆಡ್ ವೇಲ್ ಚಿತ್ರದ ಪೋಸ್ಟರ್
1934ರ ಚಿತ್ರದ ತುನುಕಿಗಾಗಿ ಇಲ್ಲಿ ಕ್ಲಿಕ್ಕಿಸಿ   
 ಕಥಾ ಹ೦ದರವನ್ನ ಪರಿಚಯಮಾಡಿಕೊಡುವದಾದರೆ ಹೆಂಡತಿ ಬೇರೊಬ್ಬನ ಜೊತೆ ಸ೦ಬ೦ಧ ಇಟ್ಟುಕೊ೦ಡಿರುವುದು ನಾಯಕನಿಗೆ ಗೊತ್ತಾಗುತ್ತದೆ. ನಾಯಕಿಯಲ್ಲಿ ಪ್ರಶ್ನಿಸಿದಾಗ ಅವಳು ನನಗೆ ನಿನ್ನ ಮೇಲೆ ಇಷ್ಟವಿಲ್ಲ..ನಾನು ಅವನೊ೦ದಿಗೆ ಮದುವೆಯಾಗುತ್ತೇನೆ, ನೀನು ಡೈವೋರ್ಸ್ ಕೊಡು ಎನ್ನುತ್ತಾಳೆ..ನಾಯಕ 'ನಾನು ಡೈವೋರ್ಸ್ ಕೊಡಬೇಕಾದರೆ ಒ೦ದು ಕಂಡಿಶನ್..ಈಗಾಗಲೇ ವಿವಾಹಿತನಾಗಿರುವ ನಿನ್ನ ಪ್ರೇಮಿ ತನ್ನ ಹೆ೦ಡತಿಗೆ ಡೈವೋರ್ಸ್ ಕೊಟ್ಟು ನಿನ್ನನ್ನು ಮದುವೆಯಾಗುವುದಾದರೆ ಮಾತ್ರ ನಾನು ಡೈವೋರ್ಸ್ ಕೊಡುತ್ತೇನೆ ಎನ್ನುತ್ತಾನೆ..ಮು೦ದೆನಾಗುತ್ತದೆ..ಸವಿಯಲು ಸಿನಿಮಾ ನೋಡಿ..
ಇಟಾಲಿಯನ್ ಜಾಬ್ ಸಿನೆಮಾದಲ್ಲಿ ವಿಲನ್ ಪಾತ್ರದಲ್ಲಿ ಮಿ೦ಚಿದ್ದ ಎಡ್ವರ್ಡ್ ನಾರ್ಟನ್ ಅಭಿನಯ ನಿಮ್ಮ ಕಣ್ಣಲ್ಲಿ ನೀರು ತರಿಸದಿದ್ದರೆ ಕೇಳಿ..
ಹಾಗೆ ಕಾದ೦ಬ ರಿಯನ್ನು ಓದಿ. ಆರಾಮಾಗಿ ಓದಿಸಿಕೊಂಡು ಹೋಗಿಬಿಡುತ್ತದೆ..2006 ರ ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಸಿನಿಮಾವನ್ನು ಜಾನ್ ಕ್ಯುರಾನ್ ನಿರ್ದೇಶಿಸಿದ್ದರೆ, ಎಡ್ವರ್ಡ್ ನಾರ್ಟನ್, ನವೋಮಿ ವ್ಯಾಟ್ಸ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ..



















Sunday, April 29, 2012

ನೋಡಲೇ ಬೇಕಾದ ಚಿತ್ರಗಳು..-3

There is nothing sweeter than revenge..!! ಇದು ಕ್ರಿಸ್ತಾಫ್ ಕಿಸ್ಲೋವಸ್ಕಿ ನಿರ್ದೇಶನದ ವೈಟ್ ಚಿತ್ರದ ತಲೆ ಬರಹ..ಅಥವಾ ಅಡಿಬರಹ. ಸಿನಿಮಾ ಕೂಡ ಅಷ್ಟೇ ಥ್ರಿಲ್ ಆಗಿದೆ ಮತ್ತು ಕೂಲಾಗಿದೆ.ನಾನು ಯಾವುದೇ ಸಿನೆಮಾ ಆಗಲಿ ನಿರ್ದೇಶಕರ ಬಗ್ಗೆ ತಿಳಿದುಕೊಳ್ಳದೆ ಸಿನೆಮಾ ನೋಡುವುದಿಲ್ಲ. ಅಥವಾ ಒಂದು ಸಿನೆಮಾ ಇಷ್ಟವಾಗಿ ಬಿಟ್ಟರೆ ಆ ಚಿತ್ರದ ನಿರ್ದೇಶಕನ ಸಿನೆಮಗಳನ್ನೆಲ್ಲಾ ನೋಡುವವರೆಗೆ ನೆಮ್ಮದಿಯಾಗಿ ನಿದ್ದೆ ಮಾಡಲಾಗುವುದಿಲ್ಲ. ಆ ನಿಟ್ಟಿನಲ್ಲಿ ಈ ನಿರ್ದೇಶಕನ ಸಿನಿಮಾ ನಾನು ಮೊದಲು ನೋಡಿದ್ದು ಕ್ಯಾಮೆರಾ ಬಫ್.ಸಿನಿಮಾ ಒಂದು ರೀತಿ ಫನ್ನಿಯಾಗಿದೆ ಅನಿಸಿ ಕ್ರಿಸ್ತಾಫ್ ನ ಉಳಿದ ಸಿನಿಮಾ ಹುಡುಕಿದಾಗ ನನಗೆ ಸಿಕ್ಕಿದ್ದು ಈ ಬ್ಲಾಂಕ್ ಅಥವಾ ವೈಟ್. ಇದು ತ್ರೀ ಕಲರ್ಸ್ ಸರಣಿಯ ಎರಡನೇ ಚಿತ್ರ.ಮೊದಲನೆಯದು ಬ್ಲೂ.ಮೂರನೆಯದು ರೆಡ್.1994ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ಸುಂದರಿ ಜ್ಯೂಲಿ ಡೆಲ್ಫಿ ಇದ್ದಾಳೆ.  ಅಷ್ಟೇ ಅದ್ಭುತ ಅಭಿನಯ ನೀಡಿರುವ ನಾಯಕನಿದ್ದಾನೆ.ಹಾಗೆ ಒಂದು ಅತ್ಯುತಮ ಎನಿಸುವ ಕಥೆಯಿದೆ. ಮತ್ತು ಕಾಡುವ ಸಂಗೀತವಿದೆ.  ಒಂದು ಸಿನೆಮಾ ನೋಡಲು ಇನ್ನೇನು ಬೇಕು..ಆದರೂ ಸಿನೆಮಾದ ಬಗ್ಗೆ ಸಣ್ಣ ಕಿರುಪರಿಚಯ ಮಾಡಿಕೊಡುವದಾದರೆ ಚಿತ್ರದ ನಾಯಕಿ ತನ್ನ ಗಂಡನಿಗೆ ಮೋಸ ಮಾಡಿ ಅವನ ಆಸ್ತಿಯನ್ನ್ನೆಲ್ಲ ಕಿತ್ತುಕೊಂಡು ಅವನನ್ನು ಬೀದಿಪಾಲು ಮಾಡುತ್ತಾಳೆ. ನಾಯಕ ಗೋಗೆರೆಯುತ್ತಾನೆ, ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ..ಅವಳು ಕರಗುವುದರ ಬದಲಿಗೆ ಇನ್ನಷ್ಟು ಘೋರವಾಗಿ ಅವಮಾನಿಸುತ್ತಾಳೆ. ಆಗ ನಾಯಕ ಆ ಊರೆ ಬಿಟ್ಟುಹೊರತುಹೋಗುತ್ತಾನೆ..ಆನಂತರ ಅವನು ತನ್ನ ದ್ವೇಷವನ್ನು ತೀರಿಸಿಕೊಳ್ಳುವ ರೀತಿಯಿದೆಯಲ್ಲ ಅದನ್ನು ನೋಡಿಯೇ ಸವಿಯಬೇಕು...ನೋಡಿಲ್ಲದಿದ್ದರೆ ಒಮ್ಮೆ ನೋಡಿ.
ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ಕಿಸಿ..