Saturday, May 5, 2012

ಒಂದು ತಮಾಷೆಯ ಪ್ರಸಂಗವು..

ಕನ್ನಡದಲ್ಲಿ ಕಡಿಮೆ ಬಜೆಟ್ಟಿನಲ್ಲಿ ಚಿತ್ರತೆಗೆದು ತಕ್ಕ ಮಟ್ಟಿಗೆ ಹೆಸರುವಾಸಿಯಾದ ನಿರ್ದೇಶಕರೊಬ್ಬರ ಶಿಷ್ಯ ಒ೦ದು ದಿನ ಅವರ ಮನೆಗೆ ಬಂದು ಗಡದ್ಧಾಗಿ ಬಿರಿಯಾನಿ ತಿಂದು ಕೈ ತೊಳೆದು ಒದ್ದೆ ಕೈಯನ್ನು ಪ್ಯಾಂಟಿನ ಜೇಬಿಗೆ ಇಳಿಬಿಟ್ಟು ಅಲ್ಲೇ ಒರೆಸಿ, " ಸಾರ್ ನಮ್ ಏರಿಯಾದಲ್ಲಿ ಫ್ರೆಂಡ್ಸ್ ಎಲ್ಲಾ ಸೇರ್ಕಂಡು ಒ೦ದು ಫಂಕ್ಷನ್ ಮಾಡ್ತಿದ್ದೀವಿ..ಎಷ್ಟಾದರೂ ತಾವುಗಳು ಗುರುಗಳು..ಅದ್ಕಿಯ ನಿಮಗೂ ಒಂದ್ ಸನ್ಮಾನ ಇಟ್ಕಂಡು ಬುಟ್ಟೀವಿ ..ತಾವು ಬರಲೇಬೇಕು ಸಾರ್.."ಎಂದು ಅಂಗಲಾಚಿದ.ಏನೋ ಪ್ರೀತಿಯ ಶಿಷ್ಯ ಫಂಕ್ಷನ್ ಮಾಡ್ತಾವ್ನೆ..ಅದ್ರಾಗೂ ಸನ್ಮಾನ ಬೇರೆ ಇಟ್ಕಂದವ್ನೆ..ಈವತ್ತು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರನ್ನು ಗುರುತಿಸೋದೆ ಕಷ್ಟ.. ಹೋಗೆ ಬಿಡೋವಾ.." ಎಂದುಕೊಂಡ ನಿರ್ದೇಶಕರು " ಸರಿ ಬತ್ತೀನಿ ನಡೀಲಾ.ಅಡ್ರೆಸ್ಸ್ ಕೊಡು.." ಎಂದಾಗ ಶಿಷ್ಯ ಉತ್ಸಾಹದಿಂದ "ಸಾ..ಏರಿಯಾಗೆ ಬಂದ್ಬಿಟ್ಟು "ಆಯಮ್ಮ ಇಸ್ಕೂಲ್" ಎಲ್ಲೀಂತ ಕೇಳ್ಬುಡಿ..ಯಾವಾನಾದ್ರೂ ತೋರಿಸ್ತಾನೆ.." ಎಂದವನು ಪ್ಯಾಂಟಿನಿಂದ ಕೈ ತೆಗೆದು ಉಳಿದ ಒದ್ದೆಯನ್ನು ನಿರ್ದೇಶಕರ ಕೈಕುಲುಕುವ ನೆಪದಲ್ಲಿ ಒರೆಸಿ ಅಲ್ಲಿಂದ ಹೊರಟೆ ಬಿಟ್ಟ.
ಫಂಕ್ಷನ್ ದಿನ ಬೆಳಿಗ್ಗೆ ಬೇಗನೆ ಎದ್ದ  ನಿರ್ದೇಶಕರು ಬೆಳಿಗ್ಗೆ    ಎಂಟು   ಘಂಟೆಗೆಲ್ಲ ರೆಡಿಯಾಗಿ ಕಾರು ಹತ್ತಿ ಏರಿಯಾಗೆ ಹೊರಟು ಬಂದದ್ದೆ ದಾರಿ ಹೋಕರನ್ನೆಲ್ಲ ಕೇಳಿದ್ದೆ ಕೇಳಿದ್ದು,.."ಆಯಮ್ಮನ ಸ್ಕೂಲ್ ಎಲ್ಲಿ " ಎಂದು. ವಿಚಿತ್ರವಾಗಿ ಇವರನ್ನೇ ನೋಡಿದ ಏರಿಯಾದ ಜನ 'ಅದ್ಯಾರು ಆಯಮ್ಮ ಅದ್ಯಾವ ಸ್ಕೂಲು, ಇದ್ಯಾರು ಈಯಪ್ಪ 'ಎಂದೆಲ್ಲ ಕನ್ಫ್ಯೂಸ್ ಆಗಿ ಬೇಸತ್ತು ಆಯಮ್ಮನೂ ಇಲ್ಲ ಈಯಮ್ಮನೂ ಇಲ್ಲ ಹೋಗಯ್ಯ ಅಂದು ಬಿಟ್ಟರು.ಇದೆಂತ ಕೆಲಸ ಮಾಡಿದ ಈ ಶಿಷ್ಯ ಮಹಾಶಯ ಎಂದು ಬೇಕಾಬಿಟ್ಟಿ ಬೈದುಕೊಂಡ ನಿರ್ದೇಶಕರು ಶಬ್ಧವೇದಿ ವಿದ್ಯಪಾರಂಗತರಂತೆ ಅಲ್ಲಿ ಕೇಳುತ್ತಿದ್ದ ಮೈಕ್ ಸೌಂಡ್ ಬೆನ್ನೆತ್ತಿ ಹೇಗೋ ಸಮಾರಂಭಕ್ಕೆ ಹಾಜರಾದರಂತೆ.ಆಮೇಲೆ ಸಮಾರಂಭವೂ ಆಯಿತು..ಸನ್ಮಾನವೂ ಮುಗಿಯಿತು.ಇನ್ನೇನು ಹೊರಡುವ ಸಮಯದಲ್ಲಿ ಶಿಷ್ಯೋತ್ತಮನನ್ನು ಸೈಡಿಗೆ ಕರೆದ ನಿರ್ದೇಶಕರು "ಅಲ್ಲಾ ಕಣ್ಲಾ ..ಮುಂದೆ ನೀ ಡೈರಕ್ಟರ್ ಅಗೋನು..ಸರ್ಯಾಗಿ ಒ೦ದು ಅಡ್ರೆಸ್ಸ್ ಹೇಳೋಕ್ಕಾಗಲ್ಲವೇನ್ಲಾ..ಅದೆಂಥ ಸಿಲ್ಮಾ ಮಾಡಿಯ ಮುಂದೆ..ಇಡೀ ಏರಿಯಾ ಬೀಟ್ ಹೊಡೆದರೂ ಅದೆಲ್ಲೂ ಆಯಮ್ಮನ ಸ್ಕೂಲ್ ಸಿಗಲೇ ಇಲ್ಲವಲ್ಲಾ.."ಎಂದು ಬೈದಿದ್ದಕ್ಕೆ, "ಸಾ ಸುಮ್ಕಿರಿ..ನೀವು ನಿಮ್ಮ ಕಾರು ನಿಲ್ಸಿದಿರಲ್ಲ..ಅದೇ ಆಲ್ವಾ ಆಯಮ್ಮನ ಶಾಲಾ.." ಎಂದವನು ತನ್ನ ಎರಡು ಕೈ ಮೇಲೆತ್ತಿ weight  lifter ನಂತೆ ಮೇಲೆ ಕೆಳಗೆ ಮಾಡಿದಾಗಲೇ ಆಯಮ್ಮನ ಶಾಲೆ ಎಂದರೆ ಏನೆಂದು ನಿರ್ದೇಶಕರಿಗೆ ಅರ್ಥವಾದದ್ದು.
"ವ್ಯಾಯಾಮ ಶಾಲೆ" ಎಂಬುದು ಶಿಷ್ಯನ ಬಾಯಲ್ಲಿ ಆಯಮ್ಮನ ಶಾಲೆ ಆಗಿತ್ತು..!!
ಮುಂದೆ ಇದೆ ಶಿಷ್ಯೋತ್ತಮ ಕನ್ನಡದಲ್ಲಿ ಸಿನಿಮಾ ನಿರ್ದೇಶಿಸಿದ್ದು ಬೇರೆ ಮಾತು ಬಿಡಿ.

1 comment:

  1. ತುಂಬ ಚೆನ್ನಾಗಿದೆ, ಹಿಂದೆ ನಮ್ಮ ಬೀದಿಗೆ ಬರುತ್ತಿದ ಸೊಪ್ಪಮ್ಮ ’ಸಿಂಪೂ ತಾವ ನಮ್ ಮನೆ’ ಎಂದಾಗ ಸ್ವಿಮ್ಮಿಂಗ್ ಪೂಲ್ ಎಂದು ಅರ್ಥವಾಗಲು ಸ್ವಲ್ಪ ಹೊತ್ತು ಬೇಕಾಯಿತು.

    ReplyDelete