Thursday, April 10, 2014

ಮೋಹನ ಸ್ವಾಮಿಯ ಕತೆಗಳು:

ಪುಸ್ತಕಗಳನ್ನು ಓದಿ ತುಂಬಾ ದಿನಗಳೇ ಆಗಿದ್ದವು. ಹಾಗಾಗಿಯೂ ವಸುಧೇಂದ್ರರ ಹೊಸ ಪುಸ್ತಕ ಬಂದಿದೆ ಎಂದು ಗೊತ್ತಾದಾಗ ಅದನ್ನು ಖರೀದಿ ಮಾಡಿ ತಂದೆನಾದರೂ ಓದಲು ಸಮಯ ಸಿಕ್ಕಿರಲಿಲ್ಲ. ಮೊನ್ನೆ ಓದಿದ್ದಾಯಿತು.
ಮೋಹನ ಸ್ವಾಮಿಯಲ್ಲಿ ಸುಮಾರು ಕತೆಗಳಿವೆ. ಎಂದಿನಂತೆ ವಸುಧೇಂದ್ರರ ಸರಳ ಶೈಲಿ ಇನ್ನಷ್ಟು ಸರಳವಾಗಿದ್ದು ಕತೆಯ ಭಿನ್ನತೆ ಗಮನ ಸೆಳೆಯುತ್ತದೆ ಮತ್ತು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ ಎಂಬ ಸಾಲನ್ನು ವಸುಧೇಂದ್ರರ ಯಾವ ಪುಸ್ತಕಕ್ಕಾದರೂ ಹೇಳಬಹುದು/ ಬರೆಯಬಹುದು ಎನ್ನುವುದೇನೂ ಅತಿಶಯೋಕ್ತಿಯಲ್ಲ.ಯಾಕೆಂದರೆ ಅವರ ಭಾಷೆ ಸರಳ ಜೊತೆಗೆ ಅವರ ಕಥಾವಸ್ತು ಕೂಡ ಸರಳವೇ, ನಮ್ಮ ನಡುವಿನವೇ. ಆದರೆ ಹಳೆಯದಲ್ಲ. ಇದು ಗೊತ್ತಿತ್ತು ಎನಿಸಿದರೂ ಇದೆಲ್ಲೂ ಬಂದಿರಲಿಲ್ಲವಲ್ಲ ಎನಿಸುವಂತಹದ್ದು.
ಕಥಾಸಂಕಲನದಲ್ಲಿ ಪೂರ್ಣಾಹುತಿ ಎನ್ನುವ ಕತೆಯೊಂದಿದೆ. ಮೊಬೈಲ್ ಬಳಕೆ ಪರಿಣಾಮ, ದುರುಪಯೋಗ, ದುಷ್ಪರಿಣಾಮಗಳನ್ನು ಮನ ಮುಟ್ಟುವಂತೆ ವಿವರಿಸುವ ಕತೆ ಅದು.ಅಂದರೆ ಮೊಬೈಲ್ ಏವತ್ತುಎ ಷ್ಟು ಅವಶ್ಯಕ ಮತ್ತು ಅದನ್ನು ಯಾವ ಮಟ್ಟಕ್ಕೆ ಬಳಸಿಕೊಳ್ಳಬೇಕು ಎಂಬುದನ್ನು ವಿಶದವಾಗಿ ಕತೆಯ ರೂಪದಲ್ಲಿ ವಿವರಿಸುವ ಕತೆಯ ಆಶಯಕ್ಕೆ ನಿಜಕ್ಕೂ ಶರಣು.
ಇನ್ನು ಮೋಹನ ಸ್ವಾಮಿಯ ಮುಖ್ಯ ಕತೆಗಳೆಂದರೆ ಅಥವಾ ಹೂರಣ ಎಂದರೆ ಮೋಹನ ಸ್ವಾಮಿಯ ಕತೆಗಳೇ. ಸಲಿಂಗ ಪ್ರೇಮದ ಕತೆಗಳ ಸಂಕಲನವಾಗಲಿ ಅಥವಾ ಕತೆಗಳಾಗಲಿ ಸಿನಿಮಾಗಳಾಗಲಿ ನಮ್ಮಲ್ಲಿ ವಿರಳ ಎನ್ನಬಹುದು. ಅಥವಾ ಬರೆದಿದ್ದರೂ ಅದರಲ್ಲಿನ ಭಾವದಲ್ಲಿ ವಾಸ್ತವಕ್ಕಿಂತ ಕರುಣೆಯೇ ಮುಖ್ಯ ಪಾತ್ರವಹಿಸದೆ ಇರುವುದಿಲ್ಲ. ಯಾವತ್ತಿಗೂ ಅಷ್ಟೇ.ಒಂದು ಪಂಗಡದ, ಅಲ್ಪ ಸಂಖ್ಯಾತರ ಅಥವಾ ಒಂದು ವರ್ಗದ ಕತೆಯನ್ನು ಒಬ್ಬ ಕತೆಗಾರ ಹೇಳಲು ಹೊರಟಾಗ ಅಲ್ಲಿ ವಾಸ್ತವದ ಅಂಶಕ್ಕಿಂತ ಆ ಒಂದು ವಿಷಯದ ಬಗೆಗೆ ಕರುಣೆ, ಬೇರೆಯದೇ ಅಯ್ಯೋ ಪಾಪ, ಅವರ ಬದುಕು ಅವರದು ಎನ್ನುವಂತಹ ವಿಶಾಲ ಮನೋಭಾವದ[?] ಎನಿಸುವ ರೀತಿ ಬರೆಯುವುದೇ ಹೆಚ್ಚು. ಆದರೆ ವಸುಧೇಂದ್ರ ಅದ್ಯಾವ ಅಂಶವನ್ನೂ ಗಮನಾರ್ಹ ಎನಿಸುವುದಿಲ್ಲ.
ರಸ್ತೆಯಲ್ಲಿ ಹುಡುಗಿಯನ್ನು ರೇಗಿಸುವ ಪೋಲಿಗಳು,  ಹುಡುಗಿ ಆತ ರಹದ ಚೇಡಿಸುವಿಕೆ ಒಳಗಾಗುವುದನ್ನು ಬರೆಯುವುಷ್ಟೇ ಸಲೀಸಾಗಿ ಈ ತರಹದ ಕತೆಯನ್ನೂ ನಮ್ಮ ಮುಂದಿಡುತ್ತಾರೆ. ಹಾಗಾಗಿ ಅದು ನಮ್ಮದಲ್ಲದ[ಇದು ನನ್ನ ವೈಯಕ್ತಿಕ]ಬದುಕನ್ನು ನಮ್ಮ ಮುಂದಿಡುತ್ತಾ ಸಾಗಿದರೂ ಆಪ್ತ ಎನಿಸದೇ ಇರದು.
ಇಲ್ಲಿ ಮೋಹನ ಸ್ವಾಮೀ ಯಾರು? ಮೋಹನ ಸ್ವಾಮಿಯಂತಹ ಗೆಳೆಯರು ನಮ್ಮ ನಡುವೆ ಇರಬಹುದು. ಕೆಲವೊಮ್ಮೆ ನಮ್ಮ ಗಮನಕ್ಕೆ ಬರುತ್ತದೆ. ಅಥವಾ ಬರದೆ ಇರಬಹುದು.ಆದರೆ ಸಮಾಜದಲ್ಲಿ ಆ ತರಹ ಎಂದಾಕ್ಷಣ ನೋಡುವ ದೃಷ್ಟಿಯ ಹೇಗೆ ಬೇರೆಯಾಗುತ್ತದೆ ಎಂಬುದನ್ನು ಕತೆಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡುವ ವಸುಧೇಂದ್ರ ಅದನ್ನು ಅಷ್ಟೇ ಮಾರ್ಮಿಕವಾಗಿ ನಮ್ಮ ಮುಂದಿಡುತ್ತಾರೆ. ಭಾಷೆಯ ಬಳಕೆಯಲ್ಲಿ ಹೆಚ್ಚು ಸ್ವತಂತ್ರ ತೆಗೆದುಕೊಂಡಿರುವ ಅವರು ಅದನ್ನೂ ಸಭ್ಯತೆಯ ಸೋಗಿನಲ್ಲೇ ಹೇಳಹೊರಟಿದ್ದಾರೆ ಎನ್ನುವುದಕ್ಕೆ ಮಾತನ್ನು ಮಾತಿನಂತೆಯೇ ಆಡುವಂತೆಯೇ ಮತ್ತು ಆಯಾ ಸಂದರ್ಭದಲ್ಲಿ ಬರುವ ಸಾಮಾನ್ಯ ಮಾತುಗಳನ್ನು ಹಾಗೆಯೇ ಹರಿಬಿಟ್ಟಿದ್ದಾರೆ ಎನ್ನಬಹುದು.
ಮೋಹನ ಸ್ವಾಮಿಯ ವೈಯಕ್ತಿಕ ಬದುಕು, ಆತನ ಮಾನಸಿಕ ತುಮುಲಗಳು, ಕಾಮನೆಗಳು, ಅದನ್ನು  ಉಪಯೋಗಿಸಿಕೊಳ್ಳುವ, ದುರುಪಯೋಗ ಮಾಡಿಕೊಳ್ಳುವ ಖದೀಮರು, ಅವರ ಕುಟುಂಬದ ತಲ್ಲಣ ಮುಂತಾದವುಗಳನ್ನು ಕತೆಗಳ ಮೂಲಕ ಹಿಡಿದಿಟ್ಟಿದ್ದಾರೆ ಲೇಖಕರು. ಓದಿಸಿಕೊಳ್ಳುತ್ತಲೇ ಮಜಾ ಕೊಡುವ ನಗಿಸುವ ಬೇಸರ ಎನಿಸುವ ಮರುಕ ತರುವ  ಮೋಹನ ಸ್ವಾಮಿಯ ಕತೆಗಳು ಇಷ್ಟವಾಗುತ್ತವೆ.