Wednesday, July 30, 2014

ಹೀಗೊಂದು ತಲೆ ಹರಟೆ.

ಮೊನ್ನೆ ಒಗ್ಗರಣೆ ಚಿತ್ರ ನೋಡುತ್ತಿದ್ದೆ. ಅನಿವಾರ್ಯವಾಗಿಯಾದರೂ ಮೂರು ಮೂರು ಸಾರಿ ಇಷ್ಟಪಟ್ಟು ನೋಡಿದ ಸಿನಿಮಾ ಒಗ್ಗರಣೆ. ಅಲ್ಲೊಂದು ದೃಶ್ಯವಿದೆ. ನಾಯಕ ಕಾಳಿದಾಸ ಕಾಡಿನಜೀವಿ ಜಗ್ಗಯ್ಯನನ್ನು ಕರೆತಂದು ಮನೆಯಲ್ಲಿರಿಸಿಕೊಂಡಾಗ ಅದು ರಾಜಕಾರಣಿಗೆ ಗೊತ್ತಾಗುತ್ತದೆ. ಆ ಸನ್ನಿವೇಶದಲ್ಲಿ ಇಬ್ಬರಿಗೂ ಮಾತಿಗೆ ಮಾತು ಬೆಳೆಯುತ್ತದೆ. ಆಗ ರಾಜಕಾರಣಿ ಇನ್ಮೇಲೆ ನಾನೇ ನಿನಗೆ ವಿಲನ್ ತಿಳ್ಕೋ ಎನ್ನುತ್ತಾನೆ. ಆಗ ಪ್ರತಿಕ್ರಿಯಿಸುವ ಪ್ರಕಾಶ್ ರಾಜ್ ನನಗೆ ವಿಲ್ಲನ್ನಾ? ಎನ್ನುತ್ತಾರೆ. ಆ ಒಂದು ಸಂಭಾಷಣೆಗೆ ಇಡೀ ಚಿತ್ರಮಂದಿರ ಶಿಳ್ಳೆ ಹಾಕಿತ್ತು.
ಆ ಕ್ಷಣದಲ್ಲಿ ಅಲ್ಲಿನ ಅಸಹಾಯಕ ಕಾಳಿದಾಸನನ್ನು ಮರೆತ ಪ್ರೇಕ್ಷಕ ಮಾಮೂಲಿ ಖಳ ಪ್ರಕಾಶ ರಾಜನನ್ನು ತಟ್ಟನೆ ಮನಸ್ಸಿಗೆ ತಂದುಕೊಂಡಿದ್ದ. ಅಂದರೆ ಪ್ರಕಾಶ ತಮ್ಮ ಖಳನಾಯಕನ ಪಾತ್ರದಲ್ಲಿ ಅದೆಷ್ಟರ ಮಟ್ಟಿಗೆ ಬೇರೂರಿದ್ದಾರೆ ಜನಮಾನಸದಲ್ಲಿ ಎನಿಸದಿರಲಿಲ್ಲ. 
ಒಬ್ಬ ಕಲಾವಿದ ಕೆಲವು ಪಾತ್ರಗಳಿಂದ ಜನರಲ್ಲಿ ಬೇರೂರಿ ಬಿಡುತ್ತಾನೆ. ಅದು ಒಳ್ಳೆಯದಾ ಕೆಟ್ಟದಾ? ಅದು ಗೊತ್ತಾಗದ ಉತ್ತರವಿಲ್ಲದ ಪ್ರಶ್ನೆ. ಕೆಲವೊಮ್ಮೆ ಅದೇ ವರವಾದರೆ ಮತ್ತೆ ಕೆಲವೊಮ್ಮೆ ಅದೇ ಶಾಪವಾಗುತ್ತದೆ. ಉದಾಹರಣೆಗೆ ಕನ್ನಡೇತರ ಭಾಷೆಗಳಲ್ಲಿ ದೊಡ್ಡ ನಾಯಕರುಗಳಿಗೆ ಕೇರ್ ಮಾಡದ ಅಬ್ಬರಿಸುವ ಪ್ರಕಾಶ್ ರಾಜ್ ಕನ್ನಡಕ್ಕೆ ಬಂದಾಗ ಅಸಹಾಯಕರಂತೆ ಆಗಿಬಿಡುತ್ತಾರೆ. ಅವರ ನಾನು ನನ್ನ ಕನಸು ಚಿತ್ರದಲ್ಲೂ ಒದ್ದಾಡುತ್ತಾರೆ. ಎಲ್ಲಿ ಹೋದ ಆ ಖದರ್ ಖಳನಾಯಕ ಎನಿಸದೇ ಇರದು ಪ್ರೇಕ್ಷಕನಿಗೆ. ನನಗೆ ಎಷ್ಟೋ ಸಲ ಹಾಗೆ ಅನಿಸಿದ್ದಿದ್ದೆ.
ಇನ್ನೊಂದು ಚಿತ್ರ ರೋಜ್ ನಲ್ಲಿ ಸಾಯಿಕುಮಾರ್ ಅಭಿನಯಿಸಿದ್ದಾರೆ. ಅದೂ ಖಾಕಿಧಾರಿಯಾಗಿ. ಇನ್ನು ಕೇಳಬೇಕೆ. ? ನಾಯಕನಾಗಿ, ಪೋಲಿಸ್ ಆಗಿ  ಖಳರನ್ನು ದುಷ್ಟರನ್ನು  ಬರೀ ಹೊಡೆಯುವುದರಲ್ಲಷ್ಟೇ ನಿಷ್ಣಾತರಲ್ಲ ಸಾಯಿ. ಮುಲಾಜಿಲ್ಲದೆ ಅವಾಚ್ಯ ಶಬ್ಧಗಳಿಂದ ಅಕ್ಕನ, ಅಮ್ಮನ್, ಗಾಂಡು ಚೂತ್ಯ ಬೈಯುವುದರಲ್ಲಿ ಎತ್ತಿದ ಕೈ. ಎದುರಿನವನು ಯಾರೇ ಆಗಿರಲಿ ಬೈದೆ ಮಾತನಾಡುವುದು ಅವರ ಗುಣ. ರೋಜ್ ಚಿತ್ರದಲ್ಲಿ ಅವರು ಬಂದ ತಕ್ಷಣ ಜನರಿಗೆಲ್ಲಾ ರೋಮಾಂಚನ. ಅದರಲ್ಲೂ ಮುಂದಿನ ಬೆಂಚಿನ ಅಭಿಮಾನಿಗಳಂತೂ ಅವರ ಬಾಯಿಯಿಂದ ಉದುರುವ ಶಬ್ಧಗಳನ್ನು ಕೇಳಲು ಕಾತುರರಾಗತೊಡಗಿದರು. ಅಲ್ಲಿಯವರೆಗೆ ಆಕಳಿಸುತ್ತಾ ಏನೇನೋ ಕೌಂಟರ್ ಕೊಡುತ್ತಿದ್ದ ಪ್ರೇಕ್ಷಕನಿಗೆ ಸಾಯಿ ಕುಮಾರ್ ಬಾಯಿ ಮುಚ್ಚಿಸಿದ್ದರು. ಆದರೆ ಚಿತ್ರದಲ್ಲಿ ಸಾಯಿಕುಮಾರ್ ಗೆ ನಿರ್ದೇಶಕರು ಕಡಿವಾಣ ಹಾಕಿದ್ದರಿಂದ ಅವರು ಯಾರನ್ನೂ ಬೈಯಲಿಲ್ಲ. ಪ್ರೇಕ್ಷಕನಿಗೆ ಬೇಸರವಾದದ್ದಂತೂ ಸತ್ಯ.
ಹೌದು. ಕೆಲವು ಕಲಾವಿದರು ಹಾಗಿದ್ದರೆನೆ ಚೆನ್ನ ಎನಿಸಿಬಿಡುತ್ತದೆ. ಅವರೂ ನಮಗೆ ಇದೆ ತಕ್ಕದ್ದು ಎನ್ನುವಂತೆ ಮಾಡುತ್ತಾರೆ. ಅದರಿಂದ ಹೊರಬರುತ್ತಾರೋ ಇಲ್ಲವೋ? ಪ್ರೇಕ್ಷಕ ಮಾತ್ರ ಅದರಿಂದ ಹೊರಬರುವುದಿಲ್ಲ. ನನಗೆ ಹಾಲಿವುಡ್ ಚಿತ್ರದಲ್ಲಿ ಟಾಮ್ ಲಿ ಜೋನ್ಸ್ ಇದ್ದರೆ ಆತ ಯಾರನ್ನೋ ಹುಡುಕೆ ಹುಡುಕುತ್ತಾನೆ ಎನಿಸುತ್ತದೆ.  ಆತನ ಸಿನಿಮಾಗಳನ್ನು ನೋಡಿ ಬಹುತೇಕ ಚಿತ್ರದಲ್ಲಿ ಆತನ ಕೆಲಸ ಹುಡುಕುವುದು. ಯಾವುದೋ ಕೊಲೆಯನ್ನೂ ಕೊಲೆಗಾರರನ್ನು ಬೆನ್ನಟ್ಟುವುದು ತಾಮಿಲಿ ಜೋನ್ಸ್ ಗೆ ಖುಷಿ ಎನಿಸುತ್ತದೆ. ಒಂದು ಚಿತ್ರದಲ್ಲಂತೂ ಅತಿರೇಕ ಎನ್ನುವಂತೆ ತನ್ನನ್ನೇ ಹುಡುಕುತ್ತಿರುತ್ತಾನೆ.
ಹಾಗೆಯೇ ಇಮ್ರಾನ್ ಹಶ್ಮಿ ಯ ಬಗ್ಗೆ ನನ್ನ ಗೆಳೆಯನೊಬ್ಬ ಹೇಳುತ್ತಿದ್ದ. ಇವನೇನು ಗುರು ಕಂಡವರ ಹೆಂಡ್ರು ಅಂದ್ರೆ ಬಾಯಿ ಬಿಡ್ತಾನೆ ಎಂದು. ಕೇಳಲಿಕ್ಕೆ ನಗು ತರಿಸುತ್ತಾದರೂ ಇಮ್ರಾನ್ ಪರಪತ್ನಿ ಪ್ರೇಮಿ ಎನಿಸುತ್ತದೆ. ಹಾಗೆ ಇಮ್ರಾನ್ ಬೇರೆ ನಾಯಕರ ರೀತಿ ಪ್ರೀತಿಸುವುದಿಲ್ಲ. ಪ್ರೀತಿಯೋ ಮದುವೆಯೋ ಮೊದಲಿಗೆ ಮಂಚಕ್ಕೆ ಎಳೆದುಕೊಳ್ಳಲೆ ಬೇಕು, ಮುತ್ತಿಡಬೇಕು...ಜನರಿಗೂ ಇಮ್ರಾನ್ ಹೀಗೆ ಮಾಡಿದರೆ ಖುಷಿ. ಅದು ಬಿಟ್ಟು ಆತ ಯಾರೇ ನೀನು ಚಲುವೆ ನಾಯಕನಂತೆ, ಬೆಳದಿಂಗಳ ಬಾಲೆಯ ರೇವಂತ್ ನಂತೆ ಮುಖ ನೋಡದೆ, ಮುಟ್ಟದೆ ಮುತ್ತಿಡದೆ, ಬೆತ್ತಲೆ ಬೆನ್ನ ಮೇಲೆ ಕೈಯಾಡಿಸದೆ ಪ್ರೀತಿಸಲಾರನೇನೋ ಎನಿಸುತ್ತದೆ. ಹಾಗೆ ಆತ ಪ್ರೀತಿಸಿದರೂ ನಾಯಕಿಯನ್ನು ಆತ ಮುಟ್ಟದಿದ್ದರೆ ಜನರಿಂದ ಬೈಸಿಕೊಳ್ಳಲಿಕ್ಕೂ ಸಾಕು..
ಹಾಗೆಯೇ ಕೆಲವು ದಿವಸಗಳ ಹಿಂದೆ ದೇವರಾಜ್ ಪೋಲಿಸ್ ಡಿಪಾರ್ಟ್ಮೆಂಟ್ ಅನ್ನು ಗುತ್ತಿಗೆ ತೆಗೆದುಕೊಂಡ ಹಾಗೆ ಆದೆ ಪಾತ್ರಗಳನ್ನೂ ನಿರ್ವಹಿಸಿದ್ದರು. ಆಗೆಲ್ಲಾ ಏನು ದೇವರಾಜ್ ಅವರು ಶೂಟಿಂಗ್ ಎಂದಾಕ್ಷಣ ಮನೆಯಿಂದಲೇ ಪೋಲಿಸ್ ಯುನಿಫಾರ್ಮ್ ಹಾಕಿಕೊಂಡು ಹೋಗಿಬಿಡುತ್ತಾರಾ? ಎನಿಸುತ್ತಿತ್ತು.
ಹಾಗೆಯೇ ಅಲ್ಲಿಂದಿಲ್ಲಿಗೆ ಚಾಡಿ ಹೇಳಲು,  ಹಾಗೆಯೇ ಮನೆ ಮುರಿಯಲು ಸುಂದರರಾಜ್, ಹೆಣ್ಣು ಮಗಳನ್ನು ಮದುವೆ ಮಾಡಿಕೊಡುತ್ತೇನೆ ಎಂದರೂ ಬಿಡದೆ ಅತ್ಯಾಚಾರ ಮಾಡಲು ಮುಂದಾಗುವ ಕೀರ್ತಿ ರಾಜ್, ಕಂಡ ತಕ್ಷಣ ಮಾಸ್ತರ್ ಎನಿಸುವ ಸದಾಶಿವ ಬ್ರಹ್ಮಾವರ್, ಬಜಾರಿ ಅತ್ತೆಯಾಗಿ ಸತ್ಯಭಾಮ ಮುಂತಾದವರು ನಮ್ಮ ಮನಸ್ಸಿನಲ್ಲಿ ಆಯಾ ಪಾತ್ರಗಳ ಮೂಲಕ ಬೇರೂರಿಬಿಟ್ಟಿದ್ದಾರೆ. ಕೀರ್ತಿರಾಜ್ ಹುಡುಗಿಯೊಂದಿಗೆ ಸಭ್ಯವಾಗಿ ಮಾತನಾಡುತ್ತಾ ನಿಂತಿದ್ದರೂ ಅದೆಲ್ಲಿ ಪಕ್ಕಕ್ಕೆಳೆದೊಯ್ಯುತ್ತಾರೋ, ರೇಪ್ ಮಾಡುತ್ತಾರೋ ಎನಿಸುತ್ತದೆ. ಮಂಗಳಾರತಿ ತಟ್ಟೆ ಹಿಡಿದು ಸೊಸೆಯನ್ನು ಸತ್ಯಭಾಮ ಸಂತೋಷದಿಂದ ಮನೆಗೆ ಬರಮಾಡಿಕೊಂಡರೂ ಅದರಲ್ಲಿ ಏನೋ ಹುನ್ನಾರವಿರಬೇಕು ಎನಿಸದೇ ಇರದು. ಹಾಗೆಯೇ ಕಾಶಿನಾತ್ ಸುಮ್ಮನೆ ಮಾತನಾಡಿದರೂ ಅದರಲ್ಲಿ ಪೋಲಿತನವನ್ನೂ ಕಲ್ಪ್ಸಿಕೊಳ್ಳುವ ಪ್ರೇಕ್ಷಕರಿಗೆ ಕೊರತೆಯಿಲ್ಲ.ಎಷ್ಟೇ ಅಶಕ್ತ ಕೇಡಿಯಿದ್ದರೂ ಅನಂತನಾಗ್, ರಿಷಿ ಕಪೂರ್ ಹೊಡೆದಾಡಲು ಹಿಂದೆ ಮುಂದೆ ನೋಡುತ್ತಾರೆ ಎನಿಸುತ್ತದೆ. ಹಾಗೆಯೇ ಒಂದಷ್ಟು ದಿನದ ಹಿಂದೆ ರಮೇಶ್ ಪ್ರೀತಿಸಿ ಮನಸ್ಸಿನಲ್ಲಿಯೇ ಆ ಪ್ರೀತಿಯನ್ನು ಇಟ್ಟುಕೊಳ್ಳುತ್ತಿದ್ದರು. ಪ್ರೇಯಸಿಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಅವರ ಮದುವೆಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಕಣ್ಣೀರಿಡುತ್ತಾ ನಿಂತುಕೊಳ್ಳುತ್ತಿದ್ದರು.ನಮ್ಮೂರಲ್ಲಿ ದೂರದರ್ಶನವಿದ್ದ ಸಮಯದಲ್ಲಿ ಮುನ್ನೋಟ ಎನ್ನುವ ಕಾರ್ಯಕ್ರಮ ಪ್ರತಿ ಭಾನುವಾರ ಬರುತ್ತಿತ್ತು. ಅದರಲ್ಲಿ ವಾರದ ಪ್ರಮುಖ ಕಾರ್ಯಕ್ರಮಗಳನ್ನು ಹೇಳುತ್ತಿದ್ದಾಗ ಮುಂದಿನ ಭಾನುವಾರದ ಸಿನಿಮಾ ಯಾವುದಿರಬಹುದು ಎಂಬ ಕುತೂಹಲ ನಮ್ಮನ್ನು ಕಾಡುತ್ತಿತ್ತು. ಅದೇನಾದರೂ ರಾಜ್, ಅನಂತನಾಗ್ ಅವರದ್ದಾದರೆ ನಮ್ಮೂರ ಹೆಂಗೆಳೆಯರು ಖುಷಿ. ಯಾಕೆಂದರೆ ಸಂಸಾರಿಕ ಕತೆ ಅಲ್ಲಿರುತ್ತಿತ್ತು. ಆದರೆ ನಾವು ಹುಡುಗರು ಬೇಸರ ಪಟ್ಟುಕೊಳ್ಳುತ್ತಿದ್ದೆವು. ಯಾಕೆಂದರೆ ಕೊಲೆ ಸುಲಿಗೆ ಹೊಡೆದಾಟ ಯಾವುದೂ ಇಲ್ಲದ ಸಿನಿಮಾ ನೋಡುವುದು ನಮಗೆ ಚಿತ್ರಹಿಂಸೆ. ಆದರೆ ವಿಷ್ಣು ಅಂಬಿ ಶಂಕರ್ ನಾಗ್ ಎಂದರೆ ನಾವು ಕುಣಿದಾಡುತ್ತಿದ್ದೆವು.
ಈಗಲೂ ಕೆಲ ಕಲಾವಿದರು ಹೀಗೆಯೇ ಇದ್ದರೇ ಚೆನ್ನ ಎನಿಸುತ್ತದೆ. ಅಂತವರ ಪಟ್ಟಿಯಲ್ಲಿ ನಿಮ್ಮ ಮೆಚ್ಚಿನ ಕಲಾವಿದರು ಯಾರಿರಬಹುದು..?