Friday, January 3, 2014

ಸಿನಿಮಾ ಕದ್ದು ನೋಡುವ ಚಾಳಿ..

ನೀನು ಗ್ರೇಟ್ ಗುರು ಅಂದ ಗೆಳೆಯ. ನಾನು ಉಬ್ಬಿ ಹೋಗಬೇಕಿತ್ತಾ? ಯೋಚಿಸಿದೆ. ಯಾಕೆಂದರೆ ಅವನು ನನ್ನನ್ನು ಹಾಗೆ ಹೊಗಳಿದ್ದು ನನ್ನ ಕಳ್ಳತನ ನೋಡಿ.
ಈ ಸಾರಿಯ ಬೆಂಗಳೂರು  ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹೋಗಲಾಗಲಿಲ್ಲ. ಆದರೂ ಅಲ್ಲಿ ಯಾವ ಯಾವ ಸಿನಿಮಾಗಳಿವೆ ಎನ್ನುವ ಕುತೂಹಲದಿಂದ ಅಲ್ಲಿದ್ದ ಚಿತ್ರಗಳ ಪಟ್ಟಿ ಮಾಡಿದೆ. ಅದರಲ್ಲಿನ ಸುಮಾರಷ್ಟು ಜಾಗತಿಕ ಚಿತ್ರಗಳನ್ನು ನೋಡಿದ್ದೆ. ನಮ್ಮದೇ ನೆಲದ ಒಂದಷ್ಟು ಚಿತ್ರಗಳನ್ನು ನೋಡಲಾಗಿರಲಿಲ್ಲ. ಅದರ ಬಗ್ಗೆ ಮಾತನಾಡುತ್ತಾ ನನ್ನ ಗೆಳೆಯನಿಗೆ ನಾನು ನೋಡಿರುವ ಪಟ್ಟಿಗಳನ್ನು ಹೇಳಿದಾಗ ಅವನು ಹುಬ್ಬೇರಿಸಿ ಎಲ್ಲಿ ನೋಡ್ತೀಯಾ ಮಾರಾಯಾ ನಮಗೆ ಸಿಗೋದೆ ಇಲ್ಲ..ನೀನು ಗ್ರೇಟ್ ಎಂದಿದ್ದ. ನಾನು ಆ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡಿರಲಿಲ್ಲ. ಮತ್ತವುಗಳ ಅಧಿಕೃತ ಡಿವಿಡಿಗಳನ್ನೂ ತಂದು ನೋಡಿರಲಿಲ್ಲ. ಅವುಗಳನ್ನು ಕದ್ದು ನೋಡಿದ್ದೆ.
ನಾನು ಸುಮ್ಮನೆ ವಿಕಿಪೀಡಿಯದಲ್ಲಿ ಇಸವಿ ಪ್ರಕಾರ ಚಿತ್ರಗಳನ್ನು ಹುಡುಕುತ್ತೇನೆ. ಪ್ರತಿ ವರ್ಷವೂ ಇದನ್ನು ಮಾಡುತ್ತೇನೆ. ಈ ವರ್ಷ, ಈ ತಿಂಗಳು ಯಾವ ಚಿತ್ರ ಹೆಚ್ಚು ಹಣ ಗಳಿಸಿತು, ಯಾವ ಚಿತ್ರ ಪ್ರಶಸ್ತಿ ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿತು, ಯಾವ ಚಿತ್ರ ವಿವಾದದ ಗೂಡಾಯಿತು..ಮುಂತಾದವುಗಳನ್ನು ನೋಡುತ್ತೇನೆ. ಎಲ್ಲಾ ದೇಶದ ಚಿತ್ರಗಳನ್ನು ಸುಮ್ಮನೆ ಒಮ್ಮೆ ನೋಡೋಣ ಎನ್ನುವ ಮನಸ್ಥಿತಿ ನನ್ನದು. ಹಾಗಾಗಿ ಗೊತ್ತು ಗುರಿಯಿಲ್ಲದ, ಹೆಸರೇ ಕೇಳಿಲ್ಲದ ದೇಶಗಳ ಹೆಸರುಗಳನ್ನೂ ತಿಳಿದು ಅಲ್ಲಿನ ಸಿನೆಮಾಗಳನ್ನೂ ನೋಡಲು ಪ್ರಯತ್ನಿಸುತ್ತೇನೆ.
ಇದು ನನ್ನ ಮೊದಲನೆಯ ಹಂತದ ಕೆಲಸ.ಕೊರಿಯಾದಲ್ಲಿ ಬ್ಲಾಕ್ ಬಸ್ಟರ್ ಸಿನಿಮಾ ಯಾವುದು ಎಷ್ಟು ಹಣ ಗಳಿಸಿತು ಎಂಬುದನ್ನು ತಿಳಿದು ಅದನ್ನು ಪಟ್ಟಿ ಮಾಡಿಕೊಂಡು ಅದನ್ನು ಅಂತರ್ಜಾಲದಲ್ಲಿ ಜಾಲಾಡುತ್ತೇನೆ. ಟೋರೆಂಟ್ ನಿಂದ ಎಲ್ಲೆಲ್ಲಿ ಡೌನ್ ಲೋಡ್ ಗೆ ಅವಕಾಶವಿದೆಯೋ ಅಲ್ಲೆಲ್ಲಾ ಹುಡುಕುತ್ತೇನೆ. ಯು ಟ್ಯೂಬ್, ಫಾರಿನ್ ಮೂವಿ ಡೌನ್ಲೋಡ್, ಫ್ರೀ ಸ್ಟ್ರೀಮಿಂಗ್ ಹೀಗೆ. ಅಲ್ಲೆಲ್ಲಾ ಸಿಗದೇ ಹೋದರೆ ಆನಂತರ ಆಯಾ ಭಾಷೆಯ ಅಂತರ್ಜಾಲ ಪುಟಗಳನ್ನೂ ತೆರೆಯುತ್ತೇನೆ. ಅಲ್ಲಿನ ಅಕ್ಷರಗಳನ್ನು ಕಾಪಿ ಪೇಸ್ಟ್ ಮಾಡಿಕೊಂಡು ಗೂಗಲ್ ಟ್ರಾನ್ಸ್ಲೇಷನ್ ನಲ್ಲಿ ಅದರ ಇಂಗ್ಲಿಷ್ ಅರ್ಥ ತಿಳಿದುಕೊಂಡು ಅಲ್ಲಿ ಎಲ್ಲಿ ಯಾವುದು ಡೌನ್ಲೋಡ್ ಎಂಬುದನ್ನು ಗೊತ್ತು ಮಾಡಿಕೊಂಡು ಡೌನ್ ಲೋಡ್ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಕೊರಿಯಾ ನಾಡಿನ ವೆಬ್ ಸೈಟ್ ಚಿತ್ತಾರವೇ ಒಂದು ಚಂದ..ಹಾಗೆ ಬರೀ ಝೆಡ್ ಗಳನ್ನ ಬೇಕೆಂದ ಕಡೆಯಲ್ಲ ತುರುಕುವ  ರಷ್ಯನ್ , ಅದೇನೋ ಇಂಗ್ಲಿಷೋ ಏನೋ ಗೊತ್ತಾಗದ ಪೋಲಿಷ್ ಮುಂತಾದವುಗಳು ವಿಚಿತ್ರ. ಅವುಗಳ ಅಂತರ್ಜಾಲ ಪುಟದಲ್ಲಿ ಮೊದಲಿಗೆ ಚಿತ್ರ ನೋಡಿ ಅದರ ಕೆಳಗಿನ ವಾಕ್ಯವನ್ನು ಭಾಷಾಂತರಿಸಿ ನೋಡಿ ಅವುಗಳಲ್ಲಿ ನನಗೆ ಬೇಕಾದ, ಆಪ್ತ ವೆನಿಸುವ 'ಡೌನ್ ಲೋಡ್' ಎನ್ನುವ ಪದ ಹುಡುಕುವುದಕ್ಕೆ ಗಂಟೆ ಗಟ್ಟಲೆ ಸಮಯ ಬೇಕಾಗುತ್ತದೆ.
ಅದನ್ನು ವಿವರಿಸಿದೆ. ಅಂವ ಇನ್ನೂ ಗ್ರೇಟ್ ಬಿಡಪ್ಪಾ ಎಂದ. ನಮ್ಮ ಸಿನಿಮಾ ಪೈರೇಟ್ ಆದರೆ ಕಿರುಚಾಡುವ ನಾವು, ಬೇರೆಯವರ ಸಿನೆಮಾ ನೋಡಲು ಪೈರೇಟ್ ಕಾಪಿ ಯನ್ನೇ ಕಾಯುವುದು ವಿಪರ್ಯಾಸ ಎನಿಸದಿರಲಿಲ್ಲ.
ಮೊದಲೆಲ್ಲಾ ನನ್ನ ಬಳಿ ಕಂಪ್ಯೂಟರ್ ಇರಲಿಲ್ಲ. ಅಂತರ್ಜಾಲ ವ್ಯವಸ್ಥೆ ಇರಲಿಲ್ಲ. ತಿಂಗಳಿಗೊಮ್ಮೆ ನ್ಯಾಷನಲ್ ಮಾರ್ಕೆಟ್ ಕಡೆಗಳಲ್ಲಿ ಜೇಬಲ್ಲಿ ಸಾವಿರ ಗಟ್ಟಲೆ ಹಣ ಇಟ್ಟು ಕೊಂಡು ಹೋಗಿ ಒಂದಷ್ಟು ಡಿವಿಡಿ ಕೊಡಿ ಎನ್ನುತ್ತಿದ್ದೆ. ಅವನು ಯಾವುದು ಬೇಕು ಎಂದರೆ ಎಲ್ಲಿ ಕೊಡಿ ಎಂದು ಅವನಿಂದ ಆ ಡಿವಿಡಿಗಳ ಸಂಪುಟ ತೆಗೆದುಕೊಂಡು ಬರೀ ಮೇಲಿನ ಚಿತ್ರಗಳನ್ನು ನೋಡಿ ಪಕ್ಕಕ್ಕಿರಿಸುತ್ತಾ ಹೋಗುತ್ತಿದ್ದೆ. ಹೆಚ್ಚು ಕಡಿಮೆ ಪಕ್ಕದಲ್ಲಿ ಅಂಗಡಿಯವನೆ ಅವಾಕ್ಕಾಗುವಷ್ಟು ಸಂಗ್ರಹವಾಗುತ್ತಿದ್ದಂತೆ ಒಂದೇ ಸಾರಿ ಐದು ಸಾವಿರವೋ ಹತ್ತು ಸಾವಿರವೋ ಕೊಟ್ಟು ಬರುತ್ತಿದ್ದೆ. ಹಾಗೆಯೇ ನನ್ನ ಗೆಳೆಯರು ಇದ್ದರು ಸಿನಿಮಾ ಹುಚ್ಚರು.ದುಡ್ಡು ಬರುತ್ತಿದ್ದಂತೆಯೇ ಡಿವಿಡಿ ಅಂಗಡಿಗೆ ಹೋಗಿ ಲೆಕ್ಕವಿಲ್ಲದಷ್ಟು ಡಿವಿಡಿ ಕೊಂಡು ಅಲ್ಲಿಂದಲೇ ಫೋನ್ ಮಾಡಿ ನೂರೈವತ್ತು ಡಿವಿಡಿ ಕೊಂಡಿದ್ದೇನೆ ಮನೆಗೆ ಬಾ ಎನ್ನುತ್ತಿದ್ದರು. ಪ್ರತಿ ಸಿನಿಮಾದ ಡಿವಿಡಿ ಹರಡಿಕೊಂಡು ಅದರ ಮೇಲಿನ ಪೋಸ್ಟರ್ ನೋಡುತ್ತಾ ಅದರ ಹಿಂದುಗಡೆಯ ವಿವರಗಳನ್ನು ಓದುತ್ತಾ,  ಡಿವಿಡಿ ಪ್ಲೇಯರ್ ಗೆ ಡಿವಿಡಿ ಹಾಕುವಾಗ ಪೋಸ್ಟರ್ ನಲ್ಲಿದ್ದ ಸಿನಿಮಾ ಇರುತ್ತದಾ ಎಂಬ ಸಂಶಯ ಪಡುತ್ತಾ ಸಿನಿಮಾ ನೋಡುವುದೇ ಒಂದು ಮಜಾ ಎನ್ನಬಹುದು. ಯಾಕೆಂದರೆ ಎಷ್ಟೋ ಸಾರಿ ಹೊರಗಿನ ಪೋಸ್ಟರ್ ಗೂ ಒಳಗಿನ ಸಿನಿಮಾ ಕ್ಕೂ ಸಂಬಂಧವೇ ಇರುತ್ತಿರಲಿಲ್ಲ. ಕೆಲವೊಮ್ಮೆ ಸಿನೆಮಾಗಳು ಅದೆಷ್ಟು ಇಷ್ಟವಾಗುತ್ತಿದ್ದವೆಂದರೆ ಛೆ ಇವನಿಗೆನ್ ನಾವು ಪೈರೇಟ್ ಕಾಪಿ ತೆಗೆದುಕೊಂಡು ಮೋಸ ಮಾಡುತ್ತಿದ್ದೇವೆ ಎನಿಸಿಬಿಡುತ್ತಿತ್ತು. ಸಿನಿಮ ಪರಡಿಸೋ ಚಿತ್ರವನ್ನು ಪದೇ ಪದೇ ನೋಡಿ ಆನಂತರ ಅದರ ಒರಿಜಿನಲ್ ಡಿವಿಡಿ ಕೊಂಡು ತಂದಿದ್ದೆ. ಯುದ್ಧಂ ಸೇಯ್ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ ಖುಷಿಯಾಗಿ ಅದರ ಪೈರೇಟ್ ಕಾಪಿ ತೆಗೆದುಕೊಂಡು ಬಂದು ನೋಡಿ ಅದರ ಒರಿಜಿನಲ್ ಬರುವವರೆಗೆ ಕಾದಿದ್ದು ಅದನ್ನೂ ಕೊಂಡು ಕೊಂಡಿದ್ದೆ. ಆದರೆ ಅದನ್ನು ನೋಡಿದಾಗ ನಿರಾಸೆಯಾಗಿತ್ತು. ಭಾರತದಲ್ಲಿ ಸಿಗುವ ಡಿವಿಡಿ ಸೆನ್ಸಾರ್ ಆದದ್ದರಿಂದ ಚಿತ್ರದಲ್ಲಿನ ಮುಖ್ಯ[?] ಅಂಶಗಳೇ ಇರುತ್ತಿರಲಿಲ್ಲ. ಉದಾಹರಣೆಗೆ ಯುದ್ಧಂ ಸೇಯ್ ಚಿತ್ರದ ಇಂಟರ್ವಲ್ ನ ಹೊಡೆದಾಟ ವೆ ಕತ್ತರಿ ಪ್ರಯೋಗಕ್ಕೆ ಒಳಗಾಗಿತ್ತು...
ಆದರೆ ಅದ್ಯಾವಾಗ ನನಗೆ ಕದಿಯಬಹುದು ಎಂಬುದು ಮನವರಿಕೆಯಾಯಿತೋ ಈಗೆಲ್ಲಾ ಬರೀ ಹಾರ್ಡ್ ಡಿಸ್ಕ್ ತುಂಬಾ ಸಿನೆಮಾಗಳೆ. ನೋಡುವುದು ಟಿಪ್ಪಣಿ ಮಾಡಿಡುವುದು ಅಳಿಸಿ ಹಾಕುವುದು..ರೂಢಿಯಾಯಿತು. ಇತ್ತೀಚಿಗೆ ನಾನು ಕೊಂಡ ಡಿವಿಡಿ ಯಾವುದು? ಎಂದರೆ ಉತ್ತರವೇ ಇಲ್ಲ.
ಮೊದಲೆಲ್ಲಾ ಶಾಲೆಯಲ್ಲಿದ್ದಾಗ ಮನೆಯಲ್ಲಿ ಗೊತ್ತಾದರೆ ಬಯ್ಯುತ್ತಾರೆ ಎಂದು ಸಿನೆಮಾಗಳನ್ನೂ ಕದ್ದು ನೋಡುತ್ತಿದ್ದೆ. ಈಗಲೂ ಅದೇ ಕದ್ದು ನೋಡುವ ಚಾಳಿ ಬೇರೆ ತರಹದಲ್ಲಿ ಮುಂದುವರೆಯುತ್ತಿದೆ ಎನಿಸದಿರಲಿಲ್ಲ.

Tuesday, December 31, 2013

2013 ಕ್ಕೆ ವಿದಾಯ ಹೇಳುತ್ತಾ..?

ಸುಮ್ಮನೆ ಕಳೆದ ಸಾರಿಯ ಇದೇ ದಿನವನ್ನು ಗಮನಿಸಿದರೇ ನನ್ನ ಬದುಕಿನಲ್ಲಿ ಅಂತಹ ಅದ್ಭುತ ಎನಿಸಿದ್ದು ಏನು ನಡೆದಿಲ್ಲ ಎನ್ನಬಹುದು. ಹೋದ ಸಾರಿ ಇದೇ ದಿನಗಳಲ್ಲಿ 5 ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿನಿಮಾ ನೋಡುತ್ತಾ ಕಾಲ ಕಳೆದಿತ್ತು. ಆದರೆ ಈ ಸಾರಿ ಅದು ಸಾಧ್ಯವಾಗಲೇ ಇಲ್ಲ. ಹಾಗಾದರೆ ಏನು ಮಾಡಿದೆ ಅಂತಹ ಸಾಧನೆ ಎಂಬ ಪ್ರಶ್ನೆಗೆ ಹೇಳಿಕೊಳ್ಳುವಂತಹ ಉತ್ತರವೂ ಇಲ್ಲ. ಬಿಡುಗಡೆಯಾಗಬೇಕಿದ್ದ ನನ್ನ ಸಿನಿಮಾ ಮತ್ತಷ್ಟು ಸಮಸ್ಯೆಯಲ್ಲಿ ಸಿಕ್ಕಿಕೊಂಡಿತ್ತು. ಆದರೆ ಅದೇಗೋ ಏನೋ 2013 ರ ವರ್ಷಾಂತ್ಯದ ಹೊತ್ತಿಗೆ ಎಲ್ಲಾ ಸಮಸ್ಯೆಗಳು ವಿವಾದಗಳು ಒಂದು ಮಟ್ಟಿಗೆ ಬಗೆ ಹರಿದಿದೆ. ನನ್ನ ಪುಸ್ತಕ ನೋಡಲೇಬೇಕಾದ ನೂರೊಂದು ಕನ್ನಡ ಚಿತ್ರಗಳು ಈ ವರ್ಷ ಬಿಡುಗಡೆಯಾಯಿತು. ಇಷ್ಟು ಬಿಟ್ಟರೆ ಒಂದಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನನ್ನನ್ನು ತೊಡಗಿಸಿಕೊಂಡದ್ದು ಬಿಟ್ಟರೆ ಬೇರೆ ಯಾವ ಸಾಧನೆಯೂ ಆಗಲಿಲ್ಲ.
ಆದರೆ ಈ ಸಾರಿಯೂ ನಾನು ನೋಡಿದ ಸಿನಿಮಾಗಳು ದಾಖಲೆಯ ಸಂಖ್ಯೆ ದಾಟಿವೆ ಎನ್ನಬಹುದು. ಮೊದಲಿಗೆ ಜನವರಿಯಿಂದ ಡಿಸೆಂಬರ್ ವರೆಗೆ ಕನ್ನಡದಲ್ಲೇ ಸರಿ ಸುಮಾರು ನೂರಾ ಹದಿನಾರು ಸಿನೆಮಾಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಮನಸಿನ ಪುಟದಲಿ, ನೀನಂದ್ರೆ ಇಷ್ಟಕಣೋ, ಮಾನಸ, ಬ್ಲೂ ಮೂನ್ ಮುಂತಾದ ಒಂದಷ್ಟು ಚಿತ್ರಗಳನ್ನು ಹೊರತು ಪಡಿಸಿದರೇ, ನೂರಾ ಒಂಭತ್ತು ಸಿನಿಮಾಗಳನ್ನ ನೋಡಿಬಿಟ್ಟಿದ್ದೇನೆ. ಹಾಗೆಯೇ ಬಾಲಿವುಡ್ ಚಿತ್ರಗಳಲ್ಲೂ ಸುಮಾರಷ್ಟು ನೋಡಿದ್ದೇನೆ. ಹಾಲಿವುಡ್ ನ ಜಗತ್ತಿನ ಸಿನಿಮಾಗಳು ನೂರ ಐವತ್ತಕ್ಕೂ ಹೆಚ್ಚು ನೋಡಿದ್ದೇನೆ. ಆ ಲೆಕ್ಕದಲ್ಲಿ ಸುಮಾರು ಎರಡು ನೂರ ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನೋಡಿದ ಸಂತಸ ನನ್ನದು. ಅವುಗಳಲ್ಲಿ ಸುಮಾರಷ್ಟು ಖುಷಿ ಕೊಟ್ಟಿವೆ. ಬೇಸರ ಕಳೆದಿವೆ, ಬೇಸರ ತರಿಸಿವೆ. ಅದು ಬೇರೆ ಮಾತು.
ಇನ್ನು ಈ ಸಾರಿಯ ಓದು ಸ್ವಲ್ಪ ಕಡಿಮೆ ಎನ್ನಬಹುದು. ಸುಮ್ಮನೆ ಲೆಕ್ಕ ಇಟ್ಟರೆ ಮೂವತ್ತು ಪುಸ್ತಕಗಳನ್ನು ಓದಿರಬಹುದಷ್ಟೇ.ಅದು ಬಿಟ್ಟರೆ ದಿನಪತ್ರಿಕೆ, ವಾರ ಪತ್ರಿಕೆಗಳು ಒಂದಷ್ಟು ಧಾರಾವಾಹಿಗಳನ್ನು ಅಲ್ಲಲ್ಲಿ ನೋಡಲಷ್ಟೇ ಸಾಧ್ಯವಾಯಿತು. ಮಿತ್ರರ ಬ್ಲಾಗ್ ನಲ್ಲಿದ್ದ ಒಂದಷ್ಟು ಬರಹಗಳನ್ನು ಓದಲೂ ಸಮಯ ಸಾಲದೇ ಅಲ್ಲಲ್ಲಿ ಓದಿದ್ದಾಯಿತು. ಬರವಣಿಗೆಯೂ ಅಷ್ಟಾಗಿಲ್ಲ. ಮಾರ್ಚ್ ತಿಂಗಳ ನಂತರ ಓಡಾಟ, ಕೆಲಸದ ಒತ್ತಡಗಳು ಜಾಸ್ತಿಯಾದ್ದರಿಂದ ಓದಲು ಸಮಯ, ಆಸಕ್ತಿ ಎರಡೂ ಕೊರತೆಯಾಗಿತ್ತು.ಹಾಗೆಯೇ ಇಡೀ ವರ್ಷದಲ್ಲಿ ಎರಡು ಪ್ರಬಂಧಗಳು, ಒಂದು ಕಥೆ ಮಾತ್ರ ಬರೆಯಲು ಸಾಧ್ಯವಾಯಿತಷ್ಟೇ.ನನ್ನ ಬ್ಲಾಗ್ ನಲ್ಲೂ ಕೂಡ ನಿಯಮಿತವಾಗಿ ಬರೆಯಲು ಸಮಯ ಮತ್ತು ಅದಕ್ಕೆ ಅನುಗುಣವಾದ ಪರಿಸ್ಥಿತಿ ಎರಡೂ ಸಿಗಲಿಲ್ಲ ಎಂದೇ ಹೇಳಬಹುದು.
ಹಾಗೆಯೇ ನನ್ನ ಸುಮಾರಷ್ಟು ಯೋಜನೆಗಳು ಇನ್ನೇನು ಪ್ರಾರಂಭವಾಯಿತು ಎನ್ನುವ ಹಂತಕ್ಕೆ ಬಂದು ನಿಂತು ಹೋದವು. ಕೆಲವು ಮುಂದಿನವರ್ಶಕ್ಕೆ ಮುಂದೂಡಲ್ಪಟ್ಟವು.
ಈ ವರ್ಷದಲ್ಲಿ ಒಂದಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಯಾವುದು ಫಲ ಕೊಡುತ್ತದೋ?

ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.