Thursday, May 23, 2013

ದಯವಿಟ್ಟು ಬನ್ನಿ ಪುಸ್ತಕ ಬಿಡುಗಡೆಗೆ,...

ಜಾಗತಿಕ ಮಟ್ಟದಲ್ಲಿ ಬಂದ ಹತ್ತು ಹಲವಾರು ಶ್ರೇಷ್ಠ ಚಿತ್ರಗಳಿವೆ.ಅವುಗಳ ವಿಭಿನ್ನತೆಯನ್ನು ಅನುಸರಿಸಿ ಹಲವಾರು ವಿಭಾಗಗಳನ್ನು ಮಾಡಿಕೊಂಡು ಒಂದು ಪುಸ್ತಕವನ್ನು ಬರೆಯೋಣ ಎನಿಸಿತು. ಆವತ್ತೊಂದು ದಿನ ನಾನು ಪಿಲಿಪ್ ಮೆಜಸ್ಟಿಕ್ ನ  ಹೋಟೆಲ್ಲೊಂದರಲ್ಲಿ ಕುಳಿತಿದ್ದೆವು. ನಾವು ಆಗಾಗ ಒಂದೊಂದು ಕಾಫಿ ಕುಡಿದು ಗಂಟೆಗಟ್ಟಲೆ ಮಾತನಾಡಲು ಕೆಲವು ಹೋಟೆಲ್ಲು ಗಳನ್ನು ನೋಡಿಕೊಂಡಿದ್ದೆವು. ನಾವು ನಮ್ಮ ಪಾಡಿಗೆ ಮಾತನಾಡುತ್ತಾ ಕುಳಿತರೆ ಸಪ್ಲೈಯರ್ ಗಳು ನಾವು ಕರೆಯುವವರೆಗೂ ನಮ್ಮ ಬಳಿಗೆ ಬರುತ್ತಿರಲಿಲ್ಲ.  ನಾವು ಬೇಟಿಯಾದಾಗಲೆಲ್ಲಾ ಸಿನಿಮಾ ಬಗ್ಗೆ, ನಿರ್ದೇಶಕರು ಅವರ ಶೈಲಿಯ ಬಗ್ಗೆ ಗಂಟೆಗಟ್ಟಲೆ ಚರ್ಚಿಸುತ್ತಿದ್ದೆವು. ಅಥವಾ ಅದನ್ನು ಮಾತನಾಡಲೆಂದೇ ಬೇಟಿಯಾಗುತ್ತಿದ್ದೆವು. ಆವಾಗಾಗಲೇ ನಮ್ಮ ನೋಡಿದ ಪಟ್ಟಿಯಲ್ಲಿ ಸಾವಿರಗಟ್ಟಲೆ ಚಿತ್ರಗಳಿದ್ದವು. ಎಲ್ಲೆಂದರಲ್ಲಿ ಹುಡುಕಿಹುಡುಕಿ ನೋಡಿಬಿಟ್ಟಿದ್ದೆವು. ಜಗತ್ತಿನ ಸಿನಿಮಾದ ಪ್ರಮುಖ  ಭಾಷೆಯ ಹತ್ತು ನಿರ್ದೇಶಕರ ಹೆಸರು ಹೇಳಿದರೆ ಅವರಲ್ಲಿ ಕನಿಷ್ಠ ಐದು ಜನರ ಸಿನಿಮಾಗಳನ್ನು ನಾವು ನೋಡಿದ್ದೆವು. ಪ್ರಮುಖ ನಿರ್ದೇಶಕರ ಚಿತ್ರಗಳು ಅವುಗಳಿಗೆ ಪ್ರೇರಣೆಯಾದ ಸಿನಿಮಾಗಳು,ಕಥೆಗಳು ಲೇಖನಗಳು ..ಹೀಗೆ ಎಲ್ಲವನ್ನು ಶೋಧಿಸಿದ್ದೆವು. ಹೀಗೆ ಮಾತನಾಡುತ್ತಿದ್ದಾಗ ಪಿಲಿಪ್ ಹೇಳಿದ್ದರು. 'ನೀವ್ಯಾಕೆ ಒಂದು ಸಿನಿಮಾದ ಬಗೆಗಿನ ಪುಸ್ತಕ ಬರೆಯಬಾರದು..?'
ನನಗೂ ಬರೆಯೋಣ ಎನಿಸಿತ್ತು. ಅದಕ್ಕಾಗಿ ಮತ್ತೆ ದಿನಗಳು, ತಿಂಗಳುಗಳು ವ್ಯಯವಾದವು. ಮತ್ತೆ ಸಾವಿರಗಟ್ಟಲೆ ಸಿನಿಮಾಗಳನ್ನು ನೋಡಿದ್ದಾಗಿತ್ತು. ಎಲ್ಲವನ್ನು ಸೇರಿಸಿ ಬರೆದು ಮತ್ತೆ ಗಿರಿ ಜೊತೆ ಚರ್ಚಿಸಿ ..ಹೀಗೆ ಪುಸ್ತಕ ಸಂಪೂರ್ಣವಾಗುವಲ್ಲಿಗೆ ಎರಡು ವರ್ಷ ಕಳೆದುಹೋಗಿತ್ತು.
ಅದಾದ ನಂತರ ಅದನ್ನು ಪ್ರಕಟಿಸುವುದು ಹೇಗೆ..? ಎಂಬ ಪ್ರಶ್ನೆ ಬಂದಿತು. ನಾವೇ ಹಣ ಹೊಂದಿಸಿ ಪ್ರಕಟಿಸೋಣ ಎನಿಸಿದರೂ ಅದನ್ನು ಮಾರಾಟ ಮಾಡುವ ಬಗೆ ಹೇಗೆ..ಅದರ ತಂತ್ರಗಳು ದಾರಿಗಳ ಬಗೆಗಿನ ಅಜ್ಞಾನ ನಮ್ಮನ್ನು ಕಾಡತೊಡಗಿತ್ತು. ಒಳ್ಳೆ ಪ್ರಕಾಶಕರ ಹತ್ತಿರ ಯಾವ ಹಣವನ್ನೂ ನಿರೀಕ್ಷೆ ಮಾಡದೆ[ಮಾಡಿದ್ದರೂ ಕೊಡುವವರ್ಯಾರು...ಎನ್ನುವುದು ಬೇರೆ ಮಾತು..] ಅಚ್ಚು ಹಾಕಿಸೋಣ ಎನಿಸಿತ್ತು..
ಅದಾದ ನಂತರ ಕೃಷ್ಣ ಒಂದು ಪುಸ್ತಕ ಪ್ರಕಟಿಸಿದ್ದ. ನನ್ನ ಪುಸ್ತಕ ನೋಡಿ ಪ್ರಕಟಿಸೋಣ ಅದಕ್ಕೂ ಮೊದಲು ಕನ್ನಡ ಸಿನಿಮಾಗಳ ಬಗ್ಗೆ ಈ ತರಹದ್ದೊಂದು ಪುಸ್ತಕ ಬರೆದುಕೊಡು ಎಂದ. ನಾನು ಖಾಲಿ ಇದ್ದದ್ದರಿಂದ ಕೈಹಾಕಿದೆ. ಆದರೆ ಕೆಲಸ ನಾನಂದುಕೊಂಡಷ್ಟು ಸುಲಭವಾಗಿರಲಿಲ್ಲ. ನಂದಲ್ಲ ಎನ್ನುವಂತೆ ಒಂಭತ್ತು ತಿಂಗಳು ಕಳೆದುಹೋಗಿತ್ತು. ದಿನ ಸಿನಿಮಾ ನೋಡುವುದು ಹುಡುಕುವುದು ಇದೆ ಕೆಲಸವಾಗಿತ್ತು. ಹಾಗೆ ರೂಪ ತಾಳಿದ್ದು ನೋಡಲೇಬೇಕಾದ ಕನ್ನಡದ ನೂರೊಂದು ಚಿತ್ರಗಳು ಪುಸ್ತಕ. ಈಗ ಬಿಡುಗಡೆಗೆ ಸಿದ್ಧವಾಗಿದೆ. 
ಇದೇ ಶನಿವಾರ ಬೆಳಿಗ್ಗೆ ಹತ್ತೂಮೂವತ್ತಕ್ಕೆ ನಯನ ರಂಗಮಂದಿರದಲ್ಲಿ.
ದಯವಿಟ್ಟು ಬನ್ನಿ ಎಂದು ಗೆಳೆಯ ಗೆಳತಿಯರಲ್ಲಿ ಕೇಳಿಕೊಳ್ಳುತ್ತೇನೆ.
ಮತ್ತು ನಿಮಗಾಗಿ ಕಾಯುತ್ತಿರುತ್ತೇನೆ...
ನನ್ನ ಮೊದಲ ಪುಸ್ತಕ "ಚಿತ್ರ-ವಿಚಿತ್ರ" ಕ್ಕೆ ಇನ್ನೂ ಬಿಡುಗಡೆಯ ಭಾಗ್ಯ ಬಂದಿಲ್ಲವೆನಿಸುತ್ತದೆ. ಈ ಪುಸ್ತಕದ ನಂತರ ಅದನ್ನು ಹೊರತರುವ ಯೋಜನೆಯಿದೆ...
ನೋಡೋಣ...


Monday, May 20, 2013

2012-ನೋಡಿದ ಚಿತ್ರಗಳು-2


5.ಮ್ಯಾನ್ ಆನ್ ಅ ಲೆಜ್: ಹೋಟೆಲ್ಲೊ೦ದರ  ಮಹಡಿ ಮೇಲೆ ಹತ್ತಿದ ವ್ಯಕ್ತಿಯೊಬ್ಬ ತಾನು ಅಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕೂಗಿ ಹೇಳುತ್ತಾನೆ. ತಕ್ಷಣ ಪೊಲೀಸರು, ಜನರು ಅಲ್ಲಿ  ಸೇರುತ್ತಾರೆ. ಅವನ ಬೇಕು ಬೇಡಗಳೇನು, ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಾರೆ. ಆದರೆ ಅದನ್ಯಾವುದನ್ನು ಬಾಯಿ ಬಿಡದ ಆತ ಮಾತ್ರ ತಾನು ಸಾಯುವುದು ಶತ ಸಿದ್ಧ ಅದಕ್ಕೂ ಮೊದಲು ನಾನು ಮಾತಾಡುವುದಿದೆ ಎನ್ನುತಾನೆ. ಈಗ ಪೊಲೀಸರಿಗೆ ಪೀಕಲಾಟಕ್ಕಿಟ್ಟುಕೊಳ್ಳುತ್ತದೆ..ಜನರಿಗೆ ಪುಕ್ಕಟ್ಟೆ ಮನರಂಜನೆ .ಆತ ಯಾರು ಎಂಬುದನ್ನು ಆತನ ಹೋಟೆಲಿನ ರೂಮಿನಲ್ಲಿದ್ದ ಬೆರಳಚ್ಚಿನ ಸಹಾಯದಿಂದ ಕಂಡುಹಿಡಿಯುತ್ತಾರೆ.ಆತ ಒಬ್ಬ ಮಾಜಿ ಪೋಲಿಸ್ ಅಧಿಕಾರಿ. ಒಂದು ದರೋಡೆಯ ಆರೋಪದಲ್ಲಿ ಜೈಲಿಗೆ ಹೋದವನು ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ.ಈಗ ಕಟ್ಟಡದ ತುದಿಯಲ್ಲಿ ನಿಂತಿದ್ದಾನೆ.ಆತನ ಅಹವಾಲು ಒಂದೆ.ನಾನು ನಿರಪರಾಧಿ ಎಂಬುದು.
ಅವನೂ ನಿಜಕ್ಕೂ ನಿರಪರಾಧಿಯಾ..?
ಅವನ ಯೋಜನೆ ಏನು.?
ಇದು ಮ್ಯಾನ್ ಆನ ಎ ಲೆಜ್ ಚಿತ್ರದ ಕಥಾ ಸಾರಾಂಶ. ಇಡೀ ಚಿತ್ರದ ಕಥೆ ಒಂದೆ ಜಾಗದಲ್ಲಿ ನಡೆದರೂ ಚಿತ್ರೀಕರಣ ಶೈಲಿ ತುಂಬಾ ಚೆನ್ನಾಗಿದೆ.ಹಾಗೆಯೇ ಕಥೆಯೂ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಕೊನೆಯಲ್ಲಿ ಬಯಲಾಗುವ ರಹಸ್ಯವನ್ನು ಊಹಿಸಬಹುದಾದರೂ ಮಜಾ ಕೊಡುತ್ತದೆ.
ಮೂವ್ ಆನ್ ಚಿತ್ರ ನಿರ್ದೇಶಿಸಿದ್ದ ಆಸ್ಗರ್ ಲೇತ್ ನಿರ್ದೇಶನದ ಈ ಚಿತ್ರದಲ್ಲಿ ಸ್ಯಾಮ್ ವರ್ತಿಂಗ್ಟನ್ ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರ ಒಂದು ಘಂಟೆ ನಲವತ್ತು ನಿಮಿಷಗಳಷ್ಟು ಉದ್ದವಿದೆ.
6.ದಿ ಗ್ರೆ : ನಾಯಕ ಲಿಯಾಮ್ ನೀಸನ್ ಅಭಿನಯದ ಈ ಚಿತ್ರ ಒಂದು ಥ್ರಿಲ್ಲರ್ /ಸಾಹಸಮಯ ಚಿತ್ರ. ನನಗೆ ಈ ಬ್ಲುಮೂನ್, ವ್ಯಾ೦ಪರಸ್ ಮುಂತಾದ ಚಿತ್ರಗಳ ಬಗ್ಗೆ ಒಂದು ರೀತಿಯ ಹೇವರಿಕೆ ಇದೆ. ಈ ಚಿತ್ರವೂ ಕೂಡ ಅದೇ ಸಾಲಿಗೆ ಸೇರಿದ್ದು ಎಂದುಕೊಂಡಿದ್ದೆ. ಆದರೆ ಚಿತ್ರ ನೋಡಿದ ಮೇಲೆ ನನ್ನ ಅಭಿಪ್ರಾಯ ಬದಲಿಸಿಕೊಂಡೆ. ಹಾಲಿವುಡಿನಲ್ಲಿನ ಬಹುತೇಕ ಸಾಹಸಮಯ ಚಿತ್ರಗಳಲ್ಲಿ ಒಂದು ವಿಶೇಷವಿರುತ್ತದೆ. ಅಥವಾ ಅದನ್ನೇ ಏಕತಾನತೆಯ ಅಂಶ ಎನ್ನಬಹುದೇನೋ? ಒಂದು ಗುಂಪು ಅದು ಕಾಲೇಜು ಹುಡುಗರೋ, ಕುಟುಂಬವೋ, ಸೇನಾ ತುಕಡಿಯೋ...ಎಲ್ಲೋ ಒಂದು ಕಡೆ ಸಿಕ್ಕಿಕೊಂಡಾಗ ಅಲ್ಲಿ ಎದುರಾಗುವ ವಿಲನ್ ಯಾವ ರೂಪದಲ್ಲೂ ಇರಬಹುದು...ಪ್ರಾಣಿ, ಪಕ್ಷಿ, ಭೂತ, ಪಿಶಾಚಿ, .ಹೀಗೆ...ಅವರೊಡನೆ/ಅದರೊಡನೆ ಹೋರಾಡಿ ಒಂದಷ್ಟು ಜನ ಸತ್ತರೆ ನಾಯಕನೆನಿಸಿಕೊ೦ಡವನು  ಕೈಲಾದರೆ ಒಂದಷ್ಟು ಜನರನ್ನು ರಕ್ಷಿಸಿ ಅವುಗಳ ನಿರ್ನಾಮ ಮಾಡುತ್ತಾನೆ. ಈ ಚಿತ್ರದಲ್ಲೂ ಅದೇ ಕಥೆ. ಆದರೆ ನೋಡಿಸಿಕೊಳ್ಳುತ್ತಾ ಸಾಗುವ ಕಥೆ, ಮೇಕಿಂಗ್ ಮತ್ತು ಹಿನ್ನೆಲೆ ಸಂಗೀತ  ಮಜಾ ಕೊಡುತ್ತದೆ. ಒಂದು ಟೈಮ್ ಪಾಸ್ ಸಿನೆಮಾ.
7.ಡಬ್ಲ್ಯೂ .ಇ:
ಖ್ಯಾತ ಸಂಗೀತ ಗಾರ್ತಿ ನಟಿ ಮಡೋನ್ನ ನಿರ್ದೇಶನದ ಚಿತ್ರ ಇದು. ಕೆಲವೊಂದು ಸಿನೆಮಾಗಳ ಪೋಸ್ಟರ್ ಗಳು ಸಿನೆಮಾವನ್ನು ನೋಡುವಂತೆ ಮಾಡಿಬಿಡುತ್ತವೆ.ನನಗೆ ಈ ಚಿತ್ರದಲ್ಲಿ ಆದದೂ ಅದೇ. ಈ ಚಿತ್ರದ ಪೋಸ್ಟರ್ ಗಳು ತುಂಬಾ ರೋಮಾಂಟಿಕ್ ಆಗಿದ್ದದ್ದರಿಂದ ನನ್ನ ಸೆಳೆದು ಒಮ್ಮೆ ನೋಡೋಣ ಎನಿಸಿತ್ತು. ಇಬ್ಬರು ಮಹಿಳೆಯರು, ಒಬ್ಬಳು ವಿಚ್ಛೇದಿತೆ ಮತ್ತೊಬ್ಬಳು ವಿವಾಹಿತೆ ಅತ್ರುಪ್ತೆ. ಇವರಿಬ್ಬರು ಮತ್ತಿಬ್ಬರ ಜೊತೆ ಜೊತೆ ಹುಟ್ಟುವ ಪ್ರೀತಿ, ಪ್ರೇಮ ವೇ ಕಥೆಯ ವಸ್ತು. ಚಿತ್ರದ ಹೊರಾಂಗಣಗಳು  ಚೆನ್ನಾಗಿದೆ. ಆದರೆ ಸಿನೆಮಾ ಅಲ್ಲಲ್ಲಿ ಬೋರ್ ಹೊಡೆಸುತ್ತದೆ. ಅದಕ್ಕೆ ಕಾರಣ ಚಿತ್ರಕಥೆ. ಚಿತ್ರಕಥೆಯಲ್ಲಿ ಏರಿಳಿತವಿಲ್ಲ. ಏಕಮುಖವಾಗಿ ಸಾಗುವ ಕಥೆ ಎಲ್ಲೂ ಕುತೂಹಲಕಾರಿ, ರಂಜನೀಯ ಎನಿಸುವುದಿಲ್ಲ. ಇದು ನಿಜ ಜೀವನದ ಕಥೆ. ರಾಜ ೭ನೆ ಎಡ್ವರ್ಡ್ ನಡೆ ಕಥೆ. ಸುಮಾರು ಎರಡು ಘಂಟೆಗಳ ಅವಧಿಯ ಈ ಚಿತ್ರ ಅಷ್ಟೇನೂ ಗಮನಸೆಳೆಯುವುದಿಲ್ಲ.
8.ಕೊರಯಾಲೋನಸ್ : ಸ್ಟೀವನ್ ಸ್ಪೀಲ್ ಬರ್ಗ್ ರ ಮಾಸ್ಟರ್ ಪೀಸ್ ಶಿಂಡ್ಲರ್ಸ್ ಲಿಸ್ಟ್ ನ ಕೆಟ್ಟ ಅಮಾನುಷ ಅಧಿಕಾರಿಯ ಪಾತ್ರ ನಿರ್ವಹಿಸಿದ್ದ ರಾಲ್ಫ್ ಫೀನ್ಸ್ ಅತ್ಯುತ್ತಮ ನಟ. ಎರೆಡು ಸಾರಿ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದ ಮಹಾನ್ ಕಲಾವಿದ. ಇದವನ   ನಿರ್ದೇಶನದ ಮೊದಲ ಚಿತ್ರ. ಶೇಕ್ಸ್ ಫಿಯರ್ ನ ಇದೆ ಹೆಸರಿನ ದುಃಖಾಂತ ನಾಟಕವನ್ನ ಆಧರಿಸಿದ ಚಿತ್ರ. ರೋಮ್ ನಗರದ ಧೀರ ಕೊರಿಯೋಲಾನಸ್ ನ ಹೋರಾಟ ಸಾವಿನ ಕುರಿತಾದ ಚಿತ್ರ ಇದು.ರೋಮ್ ನಗರದಿಂದ ಬಹಿಷ್ಕೃತ ನಾಗುವ ಕೊರಿಯೋಲಾನಸ್ ಆಟಿಯಂ ನ ದೊರೆ ಔಫಿದಸ್  ಜೊತೆ ಸೇರಿ ತನಗೆ ಮೋಸ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುವ ಕಥೆ ಇದು. ಚಿತ್ರ ಪ್ರಾರಂಭ ಅಂತ್ಯ ಚೆನ್ನಾಗಿದ್ದರೂ ಮಧ್ಯೆ ಮಧ್ಯೆ ಬೋರ್ ಹೊಡೆಸುತ್ತದೆ.
9.ಅಂಡರ್ ವರ್ಲ್ಡ್ :ಅವೆಕನಿಂಗ್-ನಿಜ ಹೇಳಬೇಕೆಂದರೆ  ನಾನು ಈ ಅಂಡರ್ ವರ್ಲ್ಡ್ ಸರಣಿಯ ನಾಲ್ಕು ಚಿತ್ರಗಳನ್ನೂ ನೋಡಿದ್ದೆನದರೂ ಯಾವುದೂ ಸಂಪೂರ್ಣವಾಗಿ ಅರ್ಥವಾಗಿಲ್ಲ. ಬಹುಶ ನಾನು ಕಥೆಯನ್ನೂ, ಚಿತ್ರಕಥೆಯನ್ನು ಗಮನಿಸದೆ ಇರುವುದೇನೋ..? ಇದು ಅದೇ ಸಾಲಿನ ಚಿತ್ರ. ನಾನು ಇಂತಹ ಚಿತ್ರಗಳ ಕಥೆಯನ್ನೂ ಅಷ್ಟಾಗಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಚಿತ್ರದ ಛಾಯಾಗ್ರಹಣ, ಮೇಕಿಂಗ್ , ಗ್ರಾಫಿಕ್ಸ್ ಮುಂತಾದ ತಾಂತ್ರಿಕ ಅಂಶಗಳಿಗಾಗಿ ನೋಡುತ್ತೇನೆ. ಹಾಗಾಗಿ ನನಗೆ ಕಥೆ ನಗಣ್ಯವಾಗಿಬಿಡುತ್ತದೆ. ಇದು ಅಷ್ಟೇ. ಒಂದಷ್ಟು ಮನುಷ್ಯರಲ್ಲದ ಮನುಷ್ಯರು ಎನೇನಕ್ಕೋ ಕಿತ್ತಾಡುತ್ತಾರೆ. ಆಮೇಲೆ ಹೊಡೆದಾಟ ಬಡಿದಾಟ. ಇಲ್ಲಿನ ಸಾವು ಸಾವಲ್ಲ. ನಗರ ನಗರವಲ್ಲ. ಅದರದೇ ಒಂದು ಭ್ರಾಮಕ ಲೋಕ. ನಾನಂತೂ ಟೈಂ ಪಾಸಿಗೆ ನೋಡುತ್ತೇನೆ. ನಿಮಗೂ ತಾಂತ್ರಿಕ ಅಂಶಗಳ ಬಗ್ಗೆ ಆಸಕ್ತಿಯಿದ್ದರೆ ಈ ಚಿತ್ರವನ್ನ ಒಮ್ಮೆ ನೋಡಬಹುದು.
10.ಜರ್ನಿ ಟು ದಿ ಮಿಸ್ಟೀರಿಯಸ್ ಐಲ್ಯಾಂಡ್ :
ಅದೊಂದು ಲೋಕದಲ್ಲಿ ಚಿಕ್ಕವೆಲ್ಲಾ ದೊಡ್ಡವು, ದೊಡ್ದವೆಲ್ಲಾ ಚಿಕ್ಕವು ..ಉದಾಹರಣೆಗೆ ಆನೆಯನ್ನು ನೀವು ಮೊಲದ ರೀತಿಯಲ್ಲಿ ಕೈಯಲ್ಲಿ ಎತ್ತಿಹಿಡಿದು ಆಡಿಸಬಹುದು, ಮುದ್ದಾಡಬಹುದು..ಆದರೆ ಸೊಳ್ಳೆ, ನೊಣ ಎಲ್ಲಾ ಬೃಹತ್ ಗಾತ್ರದವು...ಅಂತಹ ಒಂದು ಲೋಕವನ್ನು ಒಮ್ಮೆ ಸುತ್ತಿಬರಬೇಕೆಂದೆನಿಸಿದರೆ ಈ ಚಿತ್ರವನ್ನೊಮ್ಮೆ ನೋಡಬಹುದು.ಇಡೀ ಚಿತ್ರದ ತುಂಬಾ ಗ್ರಾಫಿಕ್ಸ್ ತುಳುಕಾಡಿದೆ ..ಅದು ಬಿಟ್ಟರೆ ಚಿತ್ರದಲ್ಲಿ ಹೇಳಿಕೊಳ್ಳುವ ವಿಷಯವಿಲ್ಲ..  ನಾಮಕಾವಸ್ತೆಗೆ ಒಂದು ಕಥೆ ಇದೆ..ಒಂದಷ್ಟು ನಟರಿದ್ದಾರೆ...ಆದರೆ ಗಮನಸೆಳೆಯುವುದು ಮಾತ್ರ ಗ್ರಾಫಿಕ್ಸ್..ಚಂದಮಾಮನ ಕಥೆಗಳ ದೃಶ್ಯರೂಪದಂತಿದೆ ಈ ಚಿತ್ರ.


ಸಬ್ ಟೈಟಲ್ ಮತ್ತು ವಸುಧೇಂದ್ರ...

ಆವಾಗ ಬರೀ ದೂರದರ್ಶನ ಒಂದೇ ಇತ್ತು. ನಾನು ಆರನೆಯ ತರಗತಿ ಇರಬೇಕು.ನಮ್ಮೂರಿನಲ್ಲಿ ನಮ್ಮ ಮನೆಯೂ ಸೇರಿದಂತೆ ಮೂರ್ನಾಲ್ಕು ಮನೆಯಲ್ಲಿ ಮಾತ್ರ ಟಿವಿ ಇತ್ತು. ಭಾನುವಾರ ಬಂತೆಂದರೆ ಸಾಕು ನಮಗೆಲ್ಲಾ ಹಬ್ಬವೋ ಹಬ್ಬ.ಆವತ್ತು ಚಿತ್ರ ಅದೂ ಇದೂ ಕಾರ್ಯಕ್ರಮಗಳ ಭರಾಟೆ. ಆವತ್ತು ಸಂಜೆ ಐದಕ್ಕೆ ಕನ್ನಡ ಸಿನೆಮಾ ಹಾಕಿದರೆ ಮದ್ಯಾಹ್ನ ಒಂದು ಮೂವತ್ತಕ್ಕೆ ಪ್ರಾದೇಶಿಕ ಭಾಷಾ ಚಲನಚಿತ್ರ ಎಂದು ಬೇರೆ ಭಾಷೆಯ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದರು. ಅವುಗಳ ಕೆಳಗೆ ಉಪ ಶೀರ್ಷಿಕೆ ಅಥವಾ ಸಬ್ ಟೈಟಲ್ ಇರುತ್ತಿತ್ತು. ಅದೃಷ್ಟಕ್ಕೆ ಒಮ್ಮೊಮ್ಮೆ ಕನ್ನಡದಲ್ಲೂ ಉಪಶೀರ್ಷಿಕೆ ಇದ್ದರೆ ನನಗೆ ಸಂಭ್ರಮ. ಯಾಕೆಂದರೆ ಆ ಚಿತ್ರದ ಕಥೆ ನನಗೆ ಅರ್ಥವಾಗುತ್ತಿತ್ತಲ್ಲ. ಮರಾಥಿ,ಗುಜರಾತಿ, ಅಸ್ಸಾಮಿ ಪಂಜಾಬಿ ..ಹೀಗೆ ಎಲ್ಲಾ ಚಿತ್ರಗಳನ್ನೂ ನಾನು ನನ್ನಮ್ಮ ಕುಳಿತುಕೊಂಡು ನೋಡುತ್ತಿದ್ದೆವು. ಇಂಗ್ಲಿಷ್ ಸಬ್ ಟೈಟಲ್ ಇದ್ದ ದಿವಸ ನಾನು ನನಗರ್ಥವಾದ ಹಾಗೆ ನನ್ನಮ್ಮನಿಗೆ ಹೇಳಿಕೊಡುತ್ತಿದ್ದೆ. ಮೊಟ್ಟಮೊದಲಿಗೆ ಸಬ್ ಟೈಟಲ್ ಪರಿಚಯವಾದದ್ದು ಹಾಗೆ. ಆಮೇಲೆ ಬೆಂಗಳೂರಿಗೆ ಬಂದು ಕೈಗೆ ಸಿಕ್ಕ ಸಿಕ್ಕ ಭಾಷೆಯ ಸಿನೆಮಾಗಳನ್ನೆಲ್ಲಾ ನೋಡತೊಡಗಿದಾಗ ಸಬ್ ಟೈಟಲ್ ಮಹತ್ವ ನನಗರಿವಾಗಿತ್ತು. ಆಮೇಲಾಮೇಲೆ ನಾನು ಗೆಳೆಯ ಫಿಲಿಪ್ ಸಬ್ ಟೈಟಲ್ ಗಳನ್ನು ತಯಾರಿಸುವ ತಂತ್ರಾಂಶ ಅದೂ ಇದೂ ಎಲ್ಲದರ ಬಗ್ಗೆ ಅತೀ ಎನಿಸುವಷ್ಟು ತಲೆಕೆಡಿಸಿಕೊಂಡಿದ್ದೆವು.
ನಾನು ನಮ್ಮ ಮನೆಯಲ್ಲಿ ಮೆಲ್ ಗಿಬ್ಸನ್  ನಿರ್ದೇಶನದ ಅಪೋಕ್ಯಲಿಪ್ತೋ ಸಿನಿಮಾವನ್ನು ನಮ್ಮಮ್ಮನಿಗೆ ತೋರಿಸುತ್ತಿದ್ದಾಗ ಅಮ್ಮ ಪ್ರತಿ ಸಂಭಾಷಣೆಯನ್ನೂ ಕೇಳುತ್ತಿದ್ದರು. ನಾನು ಅದನ್ನು ಅನುವಾದ ಮಾಡಿ ಅಮ್ಮನಿಗೆ ಹೇಳಬೇಕಿತ್ತು.  ಹಾಗೆಯೇ ಮಮ್ಮಿ, ಮಮ್ಮಿ ರಿಟರ್ನ್ಸ್ ಟೈಟಾನಿಕ್ ಸಿನಿಮಾಗಳನ್ನು ನೋಡುವಾಗಲೂ ಅದೇ ಆಗಿತ್ತು. ಆಗ ನನ್ನ ತಲೆಗೆ ಹೊಕ್ಕದ್ದು ಈ ಚಿತ್ರಗಳಿಗೂ ಕನ್ನಡದಲ್ಲಿ ಉಪಶೀರ್ಷಿಕೆ ಇದ್ದರೆ ಚಂದ ಎಂದು..ಇಂಗ್ಲೀಷು ಬಾರದವರಿಗೆ, ನಮ್ಮಮ್ಮನಂತವರಿಗೆ ಜಾಗತಿಕ ಸಿನಿಮಾಗಳೂ ಅರ್ಥವಾಗುತ್ತಲ್ಲಾ ಎಂಬುದು.ಅದನ್ನೇ ಪಿಲಿಪ್ಹ್ ಗೆ ಹೇಳಿದೆ. ಮತ್ತೆ ನಮ್ಮ ಸಂಶೋಧನೆ, ಪ್ರಯೋಗ ಶುರುವಾಯಿತು.ಎಸ್.ಆರ್.ಟಿ. ಫೈಲಿನಲ್ಲಿ ಕನ್ನಡದ ಫಾಂಟ್ ಮೂಡಿಸಿ, ಅದನ್ನು ವೀಡಿಯೊ ಪ್ಲೇಯರ್ ನಲ್ಲಿ ಬರಿಸುವುದು ನಮಗೆ ಸಾಧ್ಯವಾಗಲಿಲ್ಲ.
ಇದೆ ಸಂದರ್ಭದಲ್ಲಿ ಒಮ್ಮೆ ವಸುಧೇಂದ್ರ ಸಿಕ್ಕರು.ಅವರದೊಂದು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಕೆಲವು ವೀಡಿಯೊ ಚಿತ್ರಣ ಮಾಡಬೇಕಿತ್ತು. ಆಗ ಈ ವಿಷಯವನ್ನು ಪ್ರಸ್ತಾಪ ಮಾಡಿದೆವು.ಆವತ್ತು ರಾತ್ರಿ ವಸುಧೇಂದ್ರರ ಮನೆಯಲ್ಲಿ ಪಿಲಿಪ್ಹ್ ಮತ್ತು ವಸುಧೇಂದ್ರ ಕನ್ನಡ ಉಪಶೀರ್ಷಿಕೆಯನ್ನು ಅದೆಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಗ ವಸುಧೇಂದ್ರ ಇಲ್ಲಾ ಇದನ್ನು ಮಾಡೋಣ..ಒಳ್ಳೊಳ್ಳೆ ಸಿನಿಮಾಗಳಿಗೆ ಕನ್ನಡ ಉಪಶೀರ್ಷಿಕೆ ಇದ್ದರೆ ಎಲ್ಲರಿಗೂ ಸಹಾಯವಾಗುತ್ತದೆ..ನಾನದನ್ನು ಮಾಡೆಮಾಡುತ್ತೇನೆ ಎಂದರು.
ಮೋಟಾರ್ ಸೈಕಲ್ ಡೈರೀಸ್, ಸೆಂಟ್ರಲ್ ಸ್ಟೇಶನ್ ಚಿತ್ರಗಳ ನಿರ್ದೇಶಕ ವಾಲ್ಟರ್ ಸಾಲ್ಸ್ ನಿರ್ದೇಶನದ ಬಿಹೈಂಡ್ ದಿ ಸನ್ ಒಂದು ಅತ್ಯುತ್ತಮ ಚಿತ್ರ. ವಸುಧೇಂದ್ರ ರ ಇಷ್ಟದ ಚಿತ್ರವೂ ಹೌದು. ಅವರಿಗೆ ಬೇರೆಯ ವಿಷಯಕ್ಕೆ ಫೋನ್ ಮಾಡಿದಾಗ  ಬಿಹೈಂಡ್ ದಿ ಸನ್ ಚಿತ್ರಕ್ಕೆ  ಕನ್ನಡದ ಉಪಶೀರ್ಷಿಕೆ ಮಾಡಿ ಪ್ರದರ್ಶಿಸಿದೆ ಎಂದಾಗ ನನಗೆ ಅತೀವ ಖುಷಿಯಾಯಿತು.ಏನೋ ಅದ್ಭುತವಾದದ್ದು ಪಡೆದುಕೊಂಡಂತೆನಿಸಿತು. ಯಾಕೆಂದರೆ ನನಗೆ ನನ್ನದೇ ಇಷ್ಟದ ಹಲವಾರು ಸಿನಿಮಾಗಳಿಗೆ ಕನ್ನಡದ ಉಪಶೀರ್ಷಿಕೆ ರಚಿಸುವ ಹುಚ್ಚಿದೆ. ವಸುಧೇಂದ್ರ ತುಂಬಾ ಸುಲಭ ಮನೆಗೆ ಬಾ ಕಲಿಸಿಕೊಡುತ್ತೇನೆ ಎಂದು ಬೇರೆ ಹೇಳಿಬಿಟ್ಟಿದ್ದಾರೆ...ವಸುಧೇಂದ್ರರಿಗೆ ಅದೆಷ್ಟು ವಂದಿಸಿದರೂ ಸಾಲದು...ಧನ್ಯವಾದಗಳು ಸಾರ್..