Monday, May 20, 2013

ಸಬ್ ಟೈಟಲ್ ಮತ್ತು ವಸುಧೇಂದ್ರ...

ಆವಾಗ ಬರೀ ದೂರದರ್ಶನ ಒಂದೇ ಇತ್ತು. ನಾನು ಆರನೆಯ ತರಗತಿ ಇರಬೇಕು.ನಮ್ಮೂರಿನಲ್ಲಿ ನಮ್ಮ ಮನೆಯೂ ಸೇರಿದಂತೆ ಮೂರ್ನಾಲ್ಕು ಮನೆಯಲ್ಲಿ ಮಾತ್ರ ಟಿವಿ ಇತ್ತು. ಭಾನುವಾರ ಬಂತೆಂದರೆ ಸಾಕು ನಮಗೆಲ್ಲಾ ಹಬ್ಬವೋ ಹಬ್ಬ.ಆವತ್ತು ಚಿತ್ರ ಅದೂ ಇದೂ ಕಾರ್ಯಕ್ರಮಗಳ ಭರಾಟೆ. ಆವತ್ತು ಸಂಜೆ ಐದಕ್ಕೆ ಕನ್ನಡ ಸಿನೆಮಾ ಹಾಕಿದರೆ ಮದ್ಯಾಹ್ನ ಒಂದು ಮೂವತ್ತಕ್ಕೆ ಪ್ರಾದೇಶಿಕ ಭಾಷಾ ಚಲನಚಿತ್ರ ಎಂದು ಬೇರೆ ಭಾಷೆಯ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದರು. ಅವುಗಳ ಕೆಳಗೆ ಉಪ ಶೀರ್ಷಿಕೆ ಅಥವಾ ಸಬ್ ಟೈಟಲ್ ಇರುತ್ತಿತ್ತು. ಅದೃಷ್ಟಕ್ಕೆ ಒಮ್ಮೊಮ್ಮೆ ಕನ್ನಡದಲ್ಲೂ ಉಪಶೀರ್ಷಿಕೆ ಇದ್ದರೆ ನನಗೆ ಸಂಭ್ರಮ. ಯಾಕೆಂದರೆ ಆ ಚಿತ್ರದ ಕಥೆ ನನಗೆ ಅರ್ಥವಾಗುತ್ತಿತ್ತಲ್ಲ. ಮರಾಥಿ,ಗುಜರಾತಿ, ಅಸ್ಸಾಮಿ ಪಂಜಾಬಿ ..ಹೀಗೆ ಎಲ್ಲಾ ಚಿತ್ರಗಳನ್ನೂ ನಾನು ನನ್ನಮ್ಮ ಕುಳಿತುಕೊಂಡು ನೋಡುತ್ತಿದ್ದೆವು. ಇಂಗ್ಲಿಷ್ ಸಬ್ ಟೈಟಲ್ ಇದ್ದ ದಿವಸ ನಾನು ನನಗರ್ಥವಾದ ಹಾಗೆ ನನ್ನಮ್ಮನಿಗೆ ಹೇಳಿಕೊಡುತ್ತಿದ್ದೆ. ಮೊಟ್ಟಮೊದಲಿಗೆ ಸಬ್ ಟೈಟಲ್ ಪರಿಚಯವಾದದ್ದು ಹಾಗೆ. ಆಮೇಲೆ ಬೆಂಗಳೂರಿಗೆ ಬಂದು ಕೈಗೆ ಸಿಕ್ಕ ಸಿಕ್ಕ ಭಾಷೆಯ ಸಿನೆಮಾಗಳನ್ನೆಲ್ಲಾ ನೋಡತೊಡಗಿದಾಗ ಸಬ್ ಟೈಟಲ್ ಮಹತ್ವ ನನಗರಿವಾಗಿತ್ತು. ಆಮೇಲಾಮೇಲೆ ನಾನು ಗೆಳೆಯ ಫಿಲಿಪ್ ಸಬ್ ಟೈಟಲ್ ಗಳನ್ನು ತಯಾರಿಸುವ ತಂತ್ರಾಂಶ ಅದೂ ಇದೂ ಎಲ್ಲದರ ಬಗ್ಗೆ ಅತೀ ಎನಿಸುವಷ್ಟು ತಲೆಕೆಡಿಸಿಕೊಂಡಿದ್ದೆವು.
ನಾನು ನಮ್ಮ ಮನೆಯಲ್ಲಿ ಮೆಲ್ ಗಿಬ್ಸನ್  ನಿರ್ದೇಶನದ ಅಪೋಕ್ಯಲಿಪ್ತೋ ಸಿನಿಮಾವನ್ನು ನಮ್ಮಮ್ಮನಿಗೆ ತೋರಿಸುತ್ತಿದ್ದಾಗ ಅಮ್ಮ ಪ್ರತಿ ಸಂಭಾಷಣೆಯನ್ನೂ ಕೇಳುತ್ತಿದ್ದರು. ನಾನು ಅದನ್ನು ಅನುವಾದ ಮಾಡಿ ಅಮ್ಮನಿಗೆ ಹೇಳಬೇಕಿತ್ತು.  ಹಾಗೆಯೇ ಮಮ್ಮಿ, ಮಮ್ಮಿ ರಿಟರ್ನ್ಸ್ ಟೈಟಾನಿಕ್ ಸಿನಿಮಾಗಳನ್ನು ನೋಡುವಾಗಲೂ ಅದೇ ಆಗಿತ್ತು. ಆಗ ನನ್ನ ತಲೆಗೆ ಹೊಕ್ಕದ್ದು ಈ ಚಿತ್ರಗಳಿಗೂ ಕನ್ನಡದಲ್ಲಿ ಉಪಶೀರ್ಷಿಕೆ ಇದ್ದರೆ ಚಂದ ಎಂದು..ಇಂಗ್ಲೀಷು ಬಾರದವರಿಗೆ, ನಮ್ಮಮ್ಮನಂತವರಿಗೆ ಜಾಗತಿಕ ಸಿನಿಮಾಗಳೂ ಅರ್ಥವಾಗುತ್ತಲ್ಲಾ ಎಂಬುದು.ಅದನ್ನೇ ಪಿಲಿಪ್ಹ್ ಗೆ ಹೇಳಿದೆ. ಮತ್ತೆ ನಮ್ಮ ಸಂಶೋಧನೆ, ಪ್ರಯೋಗ ಶುರುವಾಯಿತು.ಎಸ್.ಆರ್.ಟಿ. ಫೈಲಿನಲ್ಲಿ ಕನ್ನಡದ ಫಾಂಟ್ ಮೂಡಿಸಿ, ಅದನ್ನು ವೀಡಿಯೊ ಪ್ಲೇಯರ್ ನಲ್ಲಿ ಬರಿಸುವುದು ನಮಗೆ ಸಾಧ್ಯವಾಗಲಿಲ್ಲ.
ಇದೆ ಸಂದರ್ಭದಲ್ಲಿ ಒಮ್ಮೆ ವಸುಧೇಂದ್ರ ಸಿಕ್ಕರು.ಅವರದೊಂದು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಕೆಲವು ವೀಡಿಯೊ ಚಿತ್ರಣ ಮಾಡಬೇಕಿತ್ತು. ಆಗ ಈ ವಿಷಯವನ್ನು ಪ್ರಸ್ತಾಪ ಮಾಡಿದೆವು.ಆವತ್ತು ರಾತ್ರಿ ವಸುಧೇಂದ್ರರ ಮನೆಯಲ್ಲಿ ಪಿಲಿಪ್ಹ್ ಮತ್ತು ವಸುಧೇಂದ್ರ ಕನ್ನಡ ಉಪಶೀರ್ಷಿಕೆಯನ್ನು ಅದೆಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಗ ವಸುಧೇಂದ್ರ ಇಲ್ಲಾ ಇದನ್ನು ಮಾಡೋಣ..ಒಳ್ಳೊಳ್ಳೆ ಸಿನಿಮಾಗಳಿಗೆ ಕನ್ನಡ ಉಪಶೀರ್ಷಿಕೆ ಇದ್ದರೆ ಎಲ್ಲರಿಗೂ ಸಹಾಯವಾಗುತ್ತದೆ..ನಾನದನ್ನು ಮಾಡೆಮಾಡುತ್ತೇನೆ ಎಂದರು.
ಮೋಟಾರ್ ಸೈಕಲ್ ಡೈರೀಸ್, ಸೆಂಟ್ರಲ್ ಸ್ಟೇಶನ್ ಚಿತ್ರಗಳ ನಿರ್ದೇಶಕ ವಾಲ್ಟರ್ ಸಾಲ್ಸ್ ನಿರ್ದೇಶನದ ಬಿಹೈಂಡ್ ದಿ ಸನ್ ಒಂದು ಅತ್ಯುತ್ತಮ ಚಿತ್ರ. ವಸುಧೇಂದ್ರ ರ ಇಷ್ಟದ ಚಿತ್ರವೂ ಹೌದು. ಅವರಿಗೆ ಬೇರೆಯ ವಿಷಯಕ್ಕೆ ಫೋನ್ ಮಾಡಿದಾಗ  ಬಿಹೈಂಡ್ ದಿ ಸನ್ ಚಿತ್ರಕ್ಕೆ  ಕನ್ನಡದ ಉಪಶೀರ್ಷಿಕೆ ಮಾಡಿ ಪ್ರದರ್ಶಿಸಿದೆ ಎಂದಾಗ ನನಗೆ ಅತೀವ ಖುಷಿಯಾಯಿತು.ಏನೋ ಅದ್ಭುತವಾದದ್ದು ಪಡೆದುಕೊಂಡಂತೆನಿಸಿತು. ಯಾಕೆಂದರೆ ನನಗೆ ನನ್ನದೇ ಇಷ್ಟದ ಹಲವಾರು ಸಿನಿಮಾಗಳಿಗೆ ಕನ್ನಡದ ಉಪಶೀರ್ಷಿಕೆ ರಚಿಸುವ ಹುಚ್ಚಿದೆ. ವಸುಧೇಂದ್ರ ತುಂಬಾ ಸುಲಭ ಮನೆಗೆ ಬಾ ಕಲಿಸಿಕೊಡುತ್ತೇನೆ ಎಂದು ಬೇರೆ ಹೇಳಿಬಿಟ್ಟಿದ್ದಾರೆ...ವಸುಧೇಂದ್ರರಿಗೆ ಅದೆಷ್ಟು ವಂದಿಸಿದರೂ ಸಾಲದು...ಧನ್ಯವಾದಗಳು ಸಾರ್..

5 comments:

 1. very good...very happy to hear.vasudendra sir subtitle maadiruva cinemaana nODabEkalla..hEge?elli..?

  ReplyDelete
 2. ಸಬ್ ಟೈಟಲ್ ಒ೦ಥರಾ ಚಟವಾಗಿಬಿಟ್ಟಿದೆ. ಕೆಲವೊ೦ದು ಸಾರಿ ಥಿಯೇಟರ್ ನಲ್ಲಿ ಯಾಕೆ ಸಬ್ ಟೈಟಲ್ ಬರ್ತಿಲ್ಲ ಎ೦ಬ ಗೊ೦ದಲ ಮೂಡುತ್ತದೆ. ಎಲ್ಲಾ ಚಿತ್ರಗಳಿಗೂ ಸಬ್ ಟೈಟಲ್ ಹಾಕಿ ನೋಡುವ ಅಭ್ಯಾಸ ನನ್ನದು. ಸಿನೆಮಾದ ಹೆಸರಿನ ಜತೆ ಇ೦ಗ್ಲಿಷ್ ಸಬ್ ಟೈಟಲ್ ಸೇರಿಸಿ ಗೂಗಲ್ ಮಾಡಿದರೆ ಹೆಚ್ಚಿನವು ಸಿಗುತ್ತವೆ. ವಿಎಲ್ಸಿ ಪ್ಲೇಯರ್ ಅಥವಾ ಗೋಮ್ ಪ್ಲೇಯರ್ ನಲ್ಲಿ ಸ೦ಭಾಷಣೆಗೂ ಸಬ್ ಟೈಟಲ್ ಗೂ ಸುಲಭವಾಗಿ ಸಿ೦ಕ್ ಮಾಡಬಹುದು
  ಲೋಕ ಸಿನೆಮಾದ ಅತ್ಯುತ್ತಮ ಸಿನೆಮಾಗಳಿಗೆ ಕನ್ನಡ ಸಬ್ ಟೈಟಲ್ ಹಾಕಿ ದೂರದರ್ಶನದಲ್ಲಿ (ವರ್ಲ್ಡ್ ಮೂವಿಸ್ ಚಾನೆಲ್ ತರಹ) ಹಾಕಿದರೆ ಒಳ್ಳೆಯದು.

  ReplyDelete
 3. ನಿಮಗಿಬ್ಬರಿಗೂ ಅಭಿನಂದನೆಗಳು

  ReplyDelete
 4. We were in Kushalnagar, even I used to wait for kannada films. I remembered those days....my son inspite of having 400 channels not interested in any.....

  ReplyDelete