Tuesday, May 7, 2013

ನಾಲ್ಕು ಸಣ್ಣ ಕಥೆ, ಒಂದು ದೊಡ್ಡ ಚಿತ್ರ..


 ಒಂದು ಸಿನಿಮಾ..ಅದರಲ್ಲಿ ನಾಲ್ಕು ಕಥೆಗಳು. ಈ ತರಹದ ಪ್ರಯೋಗ ಕನ್ನಡದ ಜೊತೆಗೆ ಬೇರೆಲ್ಲಾ ಭಾಷೆಯಲ್ಲೂ ಬಂದಿವೆ. ಬಾಲಿವುಡಿನಲ್ಲಿ ಇದಕ್ಕೂ ಮುನ್ನ ದಸ್ ಕಹಾನಿಯಾ ಎಂಬೊಂದು ಸಿನಿಮಾ ಬಂದಿತ್ತು. ಹಾಗೆ ಡರ್ನಾ ಮನಾ ಹೈ, ಡರ್ನಾ ಜರೂರಿ ಹೈ ಮೊನ್ನೆ ಮೊನ್ನೆ ಬಂದ ಡೇವಿಡ್ ಕೂಡ ಇದೇ ಪಟ್ಟಿಗೆ ಸೇರುವ ಚಿತ್ರಗಳು. ಬಾಂಬೆ ಟಾಕೀಸ್ ಚಿತ್ರದಲ್ಲಿ ನಾಲ್ಕು ಕಥೆಗಳಿವೆ. ಇಲ್ಲಿನ ವಿಶೇಷವೆಂದರೆ ನಾಲ್ಕು ಕಥೆಗಳ ನಿರ್ದೇಶಕರೂ ಬೇರೆ. ಹಾಗಾಗಿಯೇ ನಾಲ್ಕು ಭಿನ್ನರುಚಿಯ ನಿರ್ದೇಶಕರು ಒಂದೇ ಸಿನಿಮಾದಲ್ಲಿನ ನಾಲ್ಕು ಕಥೆಗಳನ್ನು ಕಟ್ಟಿಕೊಟ್ಟಿರುವುದು ಸಿನಿಮಾದ ಗುಣಮಟ್ಟವನ್ನು ಹೆಚ್ಚಿಸಿರುವುದರ ಜೊತೆಗೆ ಚಿತ್ರವನ್ನು ರಂಜನೀಯವಾಗಿಯೂ ಮಾಡುವಲ್ಲಿ ಯಶಸ್ವಿಯಾಗಿದೆ.
ಕರಣ್ ಜೋಹರ್ ತಮ್ಮ ವೈಭವಯುತ ಕೌಟುಂಬಿಕ ಚಿತ್ರಗಳಿಗೆ ಹೆಸರುವಾಸಿ. ಆದರೆ ಕರಣ್ ಇಲ್ಲಿ ತಮ್ಮ
ಎಂದಿನ ಶೈಲಿಯ ಚಿತ್ರೀಕರಣಕ್ಕೆ ಮೊರೆ ಹೋಗಿಲ್ಲ.ಅಜೀಬ್ ದಾಸ್ತಾನ್ ಹೈ ಯೆ ಹೆಸರಿನ ಕಥೆಯನ್ನು ಕರಣ್ ತುಂಬಾ ನೈಜವಾಗಿ ಚಿತ್ರೀಕರಿಸಿದ್ದಾರೆ. ನಗರದ ದಂಪತಿಗಳ ಸಹಬಾಳ್ವೆ ಅಥವಾ ಹಾಗೆ ನಟಿಸುವ ಹೊಂದಾಣಿಕೆ ಅನಿವಾರ್ಯತೆಗಳನ್ನು ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಇಬ್ಬರ ನಡುವೆ ಮೂರನೆಯವರ ಪ್ರವೇಶವಾದಾಗ ಆಗುವ ವ್ಯತ್ಯಾಸಗಳನ್ನು ತುಂಬಾ ಚೆನ್ನಾಗಿ ತೆರೆದಿಟ್ಟಿದ್ದಾರೆ ನಿರ್ದೇಶಕರು. ರಾಣಿ ಮುಖರ್ಜಿ, ರಣದೀಪ್ ಹೂಡಾ ಮತ್ತು ಸಾಕಿಬ್ ಸಲೀಮ್ ರವರ ಪೈಪೋಟಿಯ ಅಭಿನಯ ಮತ್ತು ಸಂಭಾಷಣೆ ಈ. ಚಿತ್ರಣದ ಹೈಲೈಟ್.
ಗ್ಯಾಂಗ್ಸ್ ಆಫ್ ವಾಸ್ಸೇಪುರ್ ಚಿತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದ ನವಾಜುದ್ದಿನ್ ಸಿದ್ದಿಕಿ ಪ್ರತಿಭೆಯನ್ನು ನಿರ್ದೇಶಕ ದಿಬಾಕರ್ ಬ್ಯಾನರ್ಜಿ ಸ್ಟಾರ್ ಕಥೆಯಲ್ಲಿ ಪರಿಪೂರ್ಣವಾಗಿ ಬಳಸಿಕೊಂಡಿದ್ದಾರೆ ಎನ್ನಬಹುದು. ಇದು ಭಾರತೀಯ ಚಿತ್ರರಂಗ ಕಂಡ ಖ್ಯಾತ ನಿರ್ದೇಶಕ ಸತ್ಯಜಿತ್ ರೇ ರವರ ಕಥೆಯನ್ನಾಧರಿಸಿದ್ದು. ಒಬ್ಬ ಮಹತ್ವಾಕಾಂಕ್ಷಿ ಕಲಾವಿದನೊಬ್ಬ ತನ್ನ ಪ್ರತಿಭೆಯ ಅನಾವರಣದ ಅವಕಾಶಕ್ಕಾಗಿ ಪರಿತಪಿಸುವ ವಸ್ತುವನ್ನು ಹೊಂದಿರುವ ಈ ಕಥೆಯ ನಿರೂಪಣೆ, ಚಿತ್ರಕಥೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಂತ್ಯ ಶಕ್ತಿಯುತವಾಗಿದೆ.
ಇನ್ನು ಜೋಯಾ ಅಖ್ತರ್ ನಿರ್ದೇಶನದ ಶೀಲಾ ಕಿ ಜವಾನಿ, ಅನುರಾಗ್ ಕಶ್ಯಪ್ ನಿರ್ದೇಶನದ ಮುರಬ್ಬ ಹೆಚ್ಚು ಕಡಿಮೆ ಒಂದೇ ನೆಲಗಟ್ಟಿನ ಕಥೆಯನ್ನಾಧರಿಸಿದೆ ಎನ್ನಬಹುದು. ಎರಡೂ ಕಥೆಯಲ್ಲಿ ಚಲನಚಿತ್ರದ ಸೂಪರ್ ಸ್ಟಾರ್ ಗಳು ಬಹುಮುಖ್ಯ ಪಾತ್ರವಹಿಸುವ ಮೂಲಕ ಜನಸಾಮಾನ್ಯ ಮತ್ತು ಜನಪ್ರಿಯ ವ್ಯಕ್ತಿಗಳ ನಡುವಿನ ಬಾಂಧವ್ಯವನ್ನು ಎತ್ತಿತೋರಿಸುವ ಪ್ರಯತ್ನ ಮಾಡುತ್ತವೆ.
ಚಿತ್ರದಲ್ಲಿನ ನಾಲ್ಕು ಕಥೆಗಳು ಭಿನ್ನ ಭಿನ್ನ ಶೈಲಿಯವುದಾದರೂ ಕಥೆಯಲ್ಲಿನ ಭಾವ, ಭಾವುಕತೆ ಮಾತ್ರ ಒಂದೆ ಎನ್ನಬಹುದು. ಒಬ್ಬ ವ್ಯಕ್ತಿಯ ಮೂಲಕ ಇಡೀ ಕುಟುಂಬದ ಆಗುಹೋಗುಗಳನ್ನು ಸಮಾಜದ ವಿವಿಧ ಸ್ತರಗಳ ನಡುವಣ ಸಾಮ್ಯ ಮತ್ತು ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ತೆರೆದಿಡುವ ಪ್ರಯತ್ನವಂತೂ ನಾಲ್ಕು ಕಥೆಯಲ್ಲಿ ಎದ್ದುತೋರುತ್ತದೆ. ಒಂದೊಂದು ಕಥೆಯ ಹಿನ್ನೆಲೆಯೂ ಬೇರೆ ಬೇರೆ. ಆದರೆ ಕಥೆಯಲ್ಲಿನ ಸತ್ವ ಮತ್ತು ಅಭಿನಯ ನಮಗೆ ನಾಲ್ಕು ಕಥೆಗಳೂ ಒಂದಕ್ಕೊಂದು ಬಸೆದುಕೊಂಡಂತೆ ಭಾಸವಾಗುತ್ತದೆ. 
ಈ ಚಿತ್ರದಲ್ಲಿನ ಇನ್ನೊಂದು ಅಚ್ಚರಿಯಂದರೆ ನಿರ್ದೇಶಕರುಗಳು. ನಾಲ್ಕೂ ನಿರ್ದೇಶಕರೂ ಅವರದೇ ಆದ ಕಥಾ ನಿರೂಪಣೆ, ಶೈಲಿಗೆ ಹೆಸರುವಾಸಿಯಾದವರು. ಮತ್ತವರ ಅಭಿರುಚಿಯೂ ಭಿನ್ನವಾದದ್ದು. ಆದರೆ ಈ ಚಿತ್ರದಲ್ಲಿ ಅವರು ಆಯ್ದುಕೊಂಡಿರುವ ಕಥೆ ಅವರದೇ ಅಭಿರುಚಿಯದಾದರೂ ನಿರೂಪಣೆಯಲ್ಲಿ ಮಾತ್ರ ತಮ್ಮ ಜಾಡನ್ನು ಸ್ವಲ್ಪ ಸಡಿಲಗೊಳಿಸಿದ್ದಾರೆ ಎನ್ನಬಹುದು. ಹಾಗಾಗಿಯೇ ನಾವು ನೋಡಿದ್ದ ಕರಣ್ ಜೋಹರ್ ಇಲ್ಲಿ ನಮಗೆ ಭಿನ್ನವಾಗಿ ಕಾಣಿಸುತ್ತಾರೆ. ಅನುರಾಗ್ ಕಶ್ಯಪ್ ತಮ್ಮ ಎಂದಿನ ನಿರೂಪಣಾ ಶೈಲಿಯಲ್ಲೇ ಮುಂದುವರೆದಿದ್ದರೂ ಕಥೆಯಲ್ಲಿನ ಗಟ್ಟಿತನದಿಂದಾಗಿ ನಮ್ಮೊಳಗಿನ ಪ್ರೇಕ್ಷಕನನ್ನು ತಣಿಸುವಲ್ಲಿ ಯಶಸ್ವಿಯಾಗುತ್ತಾರೆ.
ಚಿತ್ರದ ಕೊನೆಯ ಹಾಡು ಬೋನಸ್ ಎಂದುಕೊಳ್ಳಬಹುದು. ಹಾಗೆ ಶತಮಾನೋತ್ಸವ ಆಚರಿಸುತ್ತಿರುವ ಭಾರತೀಯ ಚಿತ್ರರಂಗಕ್ಕೆ ಬಾಂಬೇ ಟಾಕೀಸ್ ಅದ್ಭುತ ಕೊಡುಗೆ ಎನ್ನಬಹುದು. ಸಿನಿಮಾಸಕ್ತರು ಒಮ್ಮೆ ನೋಡಲೇಬೇಕಾದ ಚಿತ್ರವಿದು. 

4 comments:

 1. ನಾ ಓದಿದ ರಿವ್ಯೂಗಳಲ್ಲಿ ಒಳ್ಳೆಯ ರಿವ್ಯೂ. ಆ೦ಥೋಲೊಜಿ ಜಾತಿಗೆ ಸೇರಿದ ಈ ಚಿತ್ರದ ತರಹ, ಫೋರ್ ರೂಮ್ಸ್ ಎನ್ನೋ ಚಿತ್ರ ನೆನಪಾಗುತ್ತಿದೆ. ತು೦ಬಾ ಕೆಟ್ಟದಾಗಿತ್ತು. ಅರ್ಥವಿಲ್ಲದ್ದು ಅ೦ದುಕೊ೦ಡಿದ್ದೆ. ನೋಡಿ ಬಹಳ ವರ್ಷಗಳಾದುವು, ನೆನಪಿಲ್ಲ.
  http://en.wikipedia.org/wiki/Anthology_film

  ReplyDelete
 2. Paris, je t'aime ಎ೦ಬ ಚಿತ್ರ ಎ೦ಟು ಕಥೆ ಒಳಗೊ೦ಡಿದ್ದು, 22 ನಿರ್ದೇಶಕರು ನಿರ್ದೇಶಿಸಿದ ಚಿತ್ರ. ಇನ್ನೂ ನೋಡಿಲ್ಲ. ಹಾರ್ಡ್ ಡಿಸ್ಕ್ ನಲ್ಲಿ ಕೊಳೆಯುತ್ತಿದೆ.

  ReplyDelete
 3. me and girls enjoyed this movie 100%.:-)
  one common denominator for the 4 movies is 'the love of movies' be it in the form of a popular movie song, a failed actor, fan of katrina kaif, meeting with the Big B...etc
  koneyalli aa haadu beda ittu..
  other than that a satisfaction of watching a well made movie

  ReplyDelete