Tuesday, May 7, 2013

ಒಂದು ಚಲನ 'ಚಿತ್ರ'ಹಿಂಸೆ......

ಇತ್ತೀಚಿಗೆ ಒಂದಷ್ಟು  ಕನ್ನಡ ಚಿತ್ರಗಳು ಬಿಡುಗಡೆಯಾದವು. ಕೆಲವು ಸಿನಿಮಾಗಳು ಯಾವುದೇ ಕುತೂಹಲ ಹುಟ್ಟಿಸುವುದಿಲ್ಲ. ಹಾಗಂತ ಆ ಸಿನಿಮ ಕೆಟ್ಟ ಚಿತ್ರ ಎಂದು ಹೇಗೆ ಹೇಳುವುದು. ಬರೀ ಪೋಸ್ಟರ್ ನೋಡಿ , ಆ ಸಿನಿಮಾವನ್ನೇನು ನೋಡುವುದು ಎಂದು ಮೂಗು ಮುರಿಯುವುದು ಎಷ್ಟು ಸರಿ. ಒಂದೊಳ್ಳೆ ಬಜೆಟ್ ಇದ್ದಾಗ ಕೆಟ್ಟ ಚಿತ್ರವನ್ನೂ ಜನರಿಗೆ ತಲುಪಿಸಿ ಅವರು ಚಿತ್ರಮಂದಿರಕ್ಕೆ ಬರುವಂತೆ ಮಾಡಿ, ಆಮೇಲಿಂದ ಎಕ್ಕಾ ಮಕ್ಕಾ ಉಗಿಸಿಕೊಂಡು ಹೋದ ಅದೆಷ್ಟು ನಿರ್ದೇಶಕರಿಲ್ಲ...ಸಿನೆಮಾಗಳಿಲ್ಲ.
 ಆದರೆ ಕೆಲವು ಸಿನೆಮಾಗಳನ್ನು ಅದೆಷ್ಟು ಕೇವಲವಾಗಿ, ಬೇಜವಾಬ್ದಾರಿಯಿಂದ[ಬಹುಶ ಅವರು ತೀರಾ ಗಂಭೀರವಾಗಿಯೇ ತೆಗೆದುಕೊಂಡಿರುತ್ತಾರೇನೋ..?} ಮಾಡಿರುತ್ತಾರೆಂದರೆ ಅವರ ಮೇಲೆ ಬೇಸರ ಉಂಟಾಗುವುದಿಲ್ಲ. ಬದಲಿಗೆ ಹುಚ್ಚು ಕೋಪ ನೆತ್ತಿಗೇರಿ, ಸಿನಿಮಾದ ಮೇಲೆಯೇ ಜಿಗುಪ್ಸೆ ಬಂದುಬಿಡುತ್ತದೆ.
ಬರೀ ಒಳ್ಳೊಳ್ಳೆಯ, ನೋಡಲೇಬೇಕಾದ ಸಿನೆಮಾಗಳ ಪರಿಚಯವನ್ನೇ ಎಷ್ಟೂಂತ ಮಾಡೋದು ಎಂದು ನನಗೂ ಕೆಲವೊಮ್ಮೆ ಅನಿಸಿದ್ದಂತೂ ನಿಜ.ಹಾಗಾಗಿ ಎಷ್ಟೋ ಅಸಹನೀಯ ಚಿತ್ರಗಳನ್ನು ನೋಡಿದ್ದರು ಬರೆದು ಎಲ್ಲರಿಗೂ ಹಿಂಸೆ ಕೊಡಲು ಮನಸ್ಸು ಬಂದಿರಲಿಲ್ಲ. ಈಗ ಮೊನ್ನೆ ಮೊನ್ನೆ ಒಂದು ಸಿನೆಮಾ ನೋಡಿದೆ. ಮೊದಲೇ ಹೇಳಿದಂತೆ ನಾನು ಬಂದ ಸಾಧ್ಯವಾಗುವ ಎಲ್ಲಾ ಸಿನೆಮಾಗಳನ್ನೂ ನೋಡುತ್ತೇನೆ.
ಅದರ ಹೆಸರು ಬೆಂಕಿ ಬಿರುಗಾಳಿ. ಅದರ ಪೋಸ್ಟರ್ ಗಳನ್ನೂ ನೀವೀಗಾಗಲೇ ನೋಡಿರುತ್ತೀರಿ. ಅದರ ಬಗ್ಗೆ ಕೇಳುವ ಉತ್ಸಾಹ ಆಸಕ್ತಿ ನಿಮಗಿಲ್ಲ ಅನಿಸುತ್ತದೆ. ಆದರೆ ಅದನ್ನೇ ಏಕೆ ಗಂಭೀರವಾಗಿ ವಿಮರ್ಶೆ ಮಾಡಬಾರದು ಎನಿಸಿತು. ಅದೂ ಒಂದು ಈ ಹಾಳಾದ ಬದುಕಲ್ಲಿ ನಡೆದು ಹೋಗಲಿ ಎಂದು ಬರೆದ ಲೇಖನವಿದು.
ಇನ್ನುಮುಂದಿನದ್ದನ್ನು ನೀವು ಓದಬಹುದು..ಅಥವಾ ಓದದಿದ್ದರೂ..ನಿಮ್ಮಿಷ್ಟ.

ಬೆಂಕಿ ಬಿರುಗಾಳಿ.....ನೋಡುಗನ ನರಬಲಿ..!!
ಕೆಲವು ಚಿತ್ರಕರ್ಮಿಗಳು ಪ್ರಯೋಗ, ಹೊಸತನದ ನೆಪದಲ್ಲಿ ಸಿನಿಮಾವನ್ನು ಹೇಗೇಗೋ ತೆಗೆಯುವುದುಂಟು. ಹಾಗೆ ಕೆಲವು ಸಿನೆಮಾ ಜ್ಞಾನವಿರದ ಮಂದಿ ಅವಕಾಶವಿದೆಯೆಂದು ತಮ್ಮ ಅಡ್ಡಕಸುಬಿತನವನ್ನು ಸಿನಿಮಾದಲ್ಲಿ ತೋರಿಸುವುದೂ ಉಂಟು.ಇದು ಎರಡನೆಯ ವಿಭಾಗಕ್ಕೆ ಸೇರಿದ ಸಿನಿಮಾ. ಉದಾಹರಣೆಗೆ ಒಂದು ದೃಶ್ಯವಿದೆ ಚಿತ್ರದಲ್ಲಿ. ನಿರ್ದೇಶಕ ಚಿತ್ರದಲ್ಲಿ ನಿರ್ಮಾಪಕನಿಗೆ ಕಥೆ ಹೇಳುತ್ತಿದ್ದಾನೆ. ಅದನ್ನು ಅಲ್ಲೇ ಕೇಳಿಸಿಕೊಳ್ಳುತ್ತಿದ್ದ ಮಾಜಿ ನಿರ್ಮಾಪಕನೊಬ್ಬ ನಾಯಕ ಕಮ್ ನಿರ್ದೇಶಕನ ಹತ್ತಿರ ಬಂದು ’ಸಾರ್..ನಾನು ಒಂದು ಕಾಲದ ನಿರ್ಮಾಪಕ..ಆ ಸಂದರ್ಭದಲ್ಲಿ ಈಕೆಗೆ ಅವಕಾಶಕೊಡುತ್ತೇನೆ ಎಂದು ಪ್ರಮಾಣ ಮಾಡಿದ್ದೆ..ನಿಮ್ಮ ಚಿತ್ರದಲ್ಲಿ ಈಕೆಗೊಂದು ಅವಕಾಶಕೊಡಿ ..” ಎನ್ನುತ್ತಾನೆ. ಆಗ ನಿರ್ದೇಶಕ ಅದಕ್ಕೇನಂತೆ ಎಂದದ್ದೇ ಆಕೆಯ ಜೊತೆಗೊಂದು ಡುಯೆಟ್ ಹಾಡಿಬರುತ್ತಾನೆ. ನೆನಪಿರಲಿ
ಸಿನಿಮಾದಲ್ಲಿನ ಕಥೆಗೂ ಈ ಹಾಡಿಗೂ ಯಾವ ಸಂಬಂಧವೂ ಇಲ್ಲ. ಒಂದು ಸಿನಿಮಾವನ್ನು ಇಷ್ಟಬಂದಹಾಗೆ ಚಿತ್ರೀಕರಿಸುವುದೆಂದರೇ ಇದೇ ಇರಬೇಕು. ಹಾಗೆಯೇ ಇಡೀ ಸಿನಿಮಾದ ಕಥೆ, ನಿರೂಪಣೆ ನೋಡುಗನಲ್ಲಿ ಬರೇ ಬೇಸರವನ್ನ ತರುವುದಷ್ಟೇ ಅಲ್ಲ ಅದರ ಕರ್ತೃವಿನ ಮೇಲೆ ಅಸಾಧ್ಯ ಕೋಪವನ್ನ ಉಂಟುಮಾಡದೇ ಇರುವುದಿಲ್ಲ. ಬಹುಷ ಇಂತಹ ಇನ್ನೊಂದಷ್ಟು ಚಿತ್ರಗಳು ಬಂದುಬಿಟ್ಟರೇ ಸಾಕು ಪ್ರೇಕ್ಷಕನಿಗೆ ಕನ್ನಡ ಚಿತ್ರವೆಂದರೇ ಹೇವರಿಕೆ ಉಂಟಾಗಿಬಿಡುತ್ತದೆ.
ಚಿತ್ರ ಹೇಗೋ ಪ್ರಾರಂಭವಾಗುತ್ತದೆ. ಹಾಗೆಯೇ ಅರ್ಥಹೀನವಾಗಿ ಮುಗಿಯುತ್ತದೆ.ಇದರ ಮಧ್ಯ ಒಂದಷ್ಟು ಹಾಡುಗಳೂ ಹೊಡೇದಾಟಗಳೂ ಬಂದು ಹೋಗಿರುತ್ತವೆ. ನಾಯಕ ಒಬ್ಬನೇ ಆದರೂ ನಾಯಕಿಯರಿಗೇನೂ ಬರವಿಲ್ಲ. ರೇಖಾ,ನಮಿತ,ಸಂಧ್ಯಾ, ರಿಶಿಕಾ, ಶ್ವೇತಾ ಹೀಗೆ ಸುಂದರಿಯರ ದಂಡೇ ಇದೆ. ಕಾರಣವಿಲ್ಲದಿದ್ದರೂ ಎಲ್ಲರೂ ನಾಯಕನೊಂದಿಗೆ ಹಾಡಿ, ಕುಣಿಯುತ್ತಾರೆ. ಆದರೆ ಹಾಡಾಗಲಿ ಸಾಹಿತ್ಯವಾಗಲಿ ನಿಮಗೆ ಎಳ್ಳಷ್ಟೂ ಇಷ್ಟವಾಗುವುದಿಲ್ಲ. ಹಾಗೆ ಕೇಡಿಗಳೂ ಇದ್ದಾರೆ. ಮುಲಾಜಿಲ್ಲದೇ ನಾಯಕ ಹೊಡದಾಡುತ್ತಾನೆ. ಯಾಕೆ ಹೊಡೆದ, ಅವನ ಹೋರಾಟದ ಹಿಂದಿನ ಗುಟ್ಟೇನು ಎಂಬುದನ್ನು ನಿರ್ದೇಶಕ ಮಹಾಶಯರು ತಾವೇ ವಿವರಿಸಬೇಕು. ಇಷ್ಟಕ್ಕೂ ಚಿತ್ರದಲ್ಲಿನ ಕಥೆ ಏನು? ಎಂಬ
ಕುತೂಹಲ ನಿಮ್ಮನ್ನು ಕಾಡಬಹುದು. ಅನುರಾಗ್ ಬಸು ನಿರ್ದೇಶನದ ಗ್ಯಾಂಗ್ ಸ್ಟರ್ ಚಿತ್ರ ನಿಮಗೆ ನೆನಪಿರಬೇಕು. ಅತ್ಯುತ್ತಮ ಚಿತ್ರಕಥೆ,ಅದ್ಭುತ ಹಾಡುಗಳಿದ್ದ ಚಿತ್ರ ಅದು. ಬೆಂಕಿ ಬಿರುಗಾಳಿ ಆ ಚಿತ್ರದ ಕೆಟ್ಟ ರೀಮೇಕ್ ಎನ್ನಬಹುದು. ಅದೇ ಕಥೆಯ ಜೊತೆಗೆ ತಮ್ಮದೂ ಒಂದಷ್ಟು ಅಸಹನೀಯ ತಿರುವುಗಳನ್ನು ಸೇರಿಸಿ ಕಲಸುಮೇಲೋಗರ ಮಾಡಿದ್ದಾರೆ ನಿರ್ದೇಶಕರು.
ಚಿತ್ರದ ಯಾವ ವಿಭಾಗದ ಕೆಲಸದ ಬಗ್ಗೆಯೂ ಮಾತಾಡುವುದು ಹಾನಿಕಾರಕ. ಈ ಚಿತ್ರನೋಡಲು ಹೋದರೆ ಬರೀ ದುಡ್ಡು, ಸಮಯವಷ್ಟೇ ವ್ಯರ್ಥವಾಗುವುದಿಲ್ಲ. ಜೊತೆಗೆ ಮನಸ್ಥಿತಿಯೂ ಕುಲಗೆಟ್ಟುಹೋಗುವುದರಲ್ಲಿ ಸಂಶಯವಿಲ್ಲ. ನಿರ್ದೇಶಕ, ನಾಯಕ, ಕಥೆಗಾರ, ಸಂಭಾಷಣೆಗಾರ ಬಶೀದ್ ಯಾವ ವರ್ಗದ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟಕೊಂಡು ಈ ಚಿತ್ರವನ್ನ ಕಲ್ಪಿಸಿಕೊಂಡರೋ ಅವರಿಗೇ ಗೊತ್ತು. ಅಷ್ಟೆಲ್ಲಾ ತಂತ್ರಜ್ಞರು, ಕಲಾವಿದರು ಮತ್ತು ಹಣವನ್ನಿಟ್ಟುಕೊಂಡು ಎಲ್ಲಾ ರೀತಿಯಿಂದಲೂ ಇದಕ್ಕಿಂತ ಕೆಟ್ಟ ಚಿತ್ರ ನಿರ್ಮಿಸಲು ಸಾಧ್ಯವಿಲ್ಲ . ಹಾಗಾಗಿ ಬಶೀದ್ ಆ ವಿಷಯದಲ್ಲಿ ದಾಖಲೆ ಮಾಡಿದ್ದಾರೆ ಎನ್ನಬಹುದು.

No comments:

Post a Comment