Saturday, September 16, 2017

ನಾನು ಗೌರಿ..ನಾನು ಗೌರಿಯಲ್ಲ..ಗೌರಿ ಯಾರು..?

ಗೌರಿ ಲಂಕೇಶ್ ಹತ್ಯೆಯ ನಂತರ ಫೇಸ್ ಬುಕ್ ನಲ್ಲಿ ಆಗಿರುವುದಾದರೂ ಏನು?
ಸುಮ್ಮನೆ ಗಮನಿಸಿ.. ಕೆಸೆರೆರೆಚಾಟ ಬಿಟ್ಟರೆ ಮತ್ತೇನಿಲ್ಲ.
ನಾನು ಕಾಲೇಜು ದಿನಗಳಿಂದ ಹಾಯ್ ಬೆಂಗಳೂರು ಓದುತ್ತಿದ್ದೆ, ಈವತ್ತಿಗೂ ಓದುತ್ತೇನೆ. ಹಾಗೆಯೇ ತುಷಾರ, ಮಯೂರ ತರಂಗಗಳಿಂದ ಹಿಡಿದು, ಸ್ಟಾರ್ ಆಫ್ ಬೆಂಗಳೂರು, ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್, ಅಗ್ನಿ ಹೀಗೆ ಕೈಗೆ ಸಿಕ್ಕದ್ದನ್ನು ಓದುತ್ತೇನೆ. ಇಷ್ಟವಾದದ್ದು ಆಗುತ್ತವೆ, ಇಲ್ಲವಾದದ್ದು ಇಲ್ಲ. ಅದನ್ಯಾಕೆ ಓದುತ್ತೀಯ.. ಇದನ್ಯಾಕೆ ಓದುತ್ತೀಯ ಎನ್ನುವ ಗೆಳೆಯರಿಗೆ ಓದಬೇಕಲ್ಲಪ್ಪ.. ಚೆನ್ನಾಗಿಲ್ಲದಿದ್ದರೆ ಚೆನ್ನಾಗಿಲ್ಲ ಎನ್ನಲಾದರೂ ಓದಬೇಕಲ್ಲವೇ ಎಂದು ಪ್ರಶ್ನಿಸುತ್ತೇನೆ. ನಾನು ಆ ಪತ್ರಿಕೆಯನ್ನು ಓದುವುದೇ ಇಲ್ಲ, ಇಂತವರ ಸಿನೆಮಾವನ್ನು ನೋಡುವುದೇ ಇಲ್ಲ ಎನ್ನುವವರಿಗೆ ಅಲ್ಲಪ್ಪ..ನೀನು ಅದನ್ನು ಓದದೆಯೇ, ನೋಡದೆಯೇ ಕೆಟ್ಟದ್ದು ಎಂದು ಹೇಗೆ ನಿರ್ಧರಿಸುತ್ತೀಯ ಎನ್ನುತ್ತೇನೆ.
ಗೌರಿ ಲಂಕೇಶ್ ಧೋರಣೆ ಬೇರೆಯದೇ ಇತ್ತು. ಅವರು ಏಕಮುಖವಾಗಿ ಅವರಿಗೆ ಸರಿ ಎನಿಸಿದ್ದನ್ನು ಬರೆಯುತ್ತಿದ್ದರು. ಇಷ್ಟಕ್ಕೂ ಆಕೆ ಬರೆದಿರುವ ಕೆಲವೇ ಕೆಲವು ಪುಸ್ತಕಗಳನ್ನು ನಾನು ಓದಿದ್ದೇನೆ.ಅವರ ಅನುವಾದದ ದರವೇಶಿ ಕತೆಗಳು, ಗೌರಿ ಕಂಡ ಹಾಗೆ, ಆವರಣ ಒಂದು ವಿ ಕೃತಿ, ಬಸವರಾಜ ಮಾರ್ಗ ಓದಿದ್ದೇನೆ. ಆಕೆಯ ಪತ್ರಿಕೆಗಳು ಆನ್ ಲೈನ್ ನಲ್ಲಿ ಸಿಗುತ್ತಿದ್ದುದರಿಂದ ಕೊಂಡು ಓದುತ್ತಿದ್ದದ್ದು ಕಡಿಮೆಯೇ.
ನಾನು ಫೇಸ್ ಬುಕ್ ಗೆ ಬಂದಾಗ ಇಲ್ಲಿ ನನಗೆ ಹಲವಾರು ಕಲಾವಿದರು, ಬರಹಗಾರರು ಸಿಕ್ಕಿದ್ದು ಖುಷಿಯಾಗಿತ್ತು. ನಂಜನಗೂಡಿನ ಮೂಲೆಯಲ್ಲಿ ಬರೀ ಪತ್ರಿಕೆಯ ಮೂಲಕ ಪರಿಚಯವಾಗಿದ್ದವರು ಈಗ  ಒಂದು ವೇದಿಕೆಯಲ್ಲಿ ಸಿಗುತ್ತಾರೆ ಎನ್ನುವುದು ಖುಷಿ ಕೊಡುವ ಸಂಗತಿಯಲ್ಲವೇ. ಆದರೆ ಗೌರಿ ಲಂಕೇಶ್ ಚರ್ಚೆಗೆ ಸಿಗುತ್ತಿರಲಿಲ್ಲ. ಅವರ  ಏಕಮುಖ ಪ್ರವಾಹಗಳನ್ನ ಖಂಡಿಸಿ ಸಂದೇಶ ಕಳುಹಿಸಿದರೆ, ಅಥವಾ ಪ್ರತಿಕ್ರಿಯಿಸಿದರೆ ಅದಕ್ಕೆ ಪ್ರತ್ಯುತ್ತರಿಸದೆ ಇಗ್ನೋರ್ ಮಾಡುತ್ತಿದ್ದರು. ಆದರೂ ಆವಾಗವಾಗ ಅವರ ಸ್ಟೇಟಸ್ ಗಳಿಗೆ ಮೆಸೇಜ್ ಮಾಡುತ್ತಿದ್ದೆ. ಇಷ್ಟಕ್ಕೂ ಒಬ್ಬ ವ್ಯಕ್ತಿಯ ಧೋರಣೆ-ದೃಷ್ಟಿಕೋನ ಅವನ ವೈಯಕ್ತಿಕ ಅಲ್ಲವೇ.ಕೆಲವೊಮ್ಮೆ ಸಂದರ್ಭೋಚಿತವಾಗಿ ಗೌರಿ ಲಂಕೇಶ್ ಸರಿ ಎನಿಸಿದರೆ ಇನ್ನೂ ಕೆಲವೊಮ್ಮೆ ಅತಿ ಎನಿಸುತ್ತಿತ್ತು.
ಇದೆಲ್ಲಾ ಓಕೆ. ಆದರೆ ಮೊನ್ನೆ ಅವರ ಹತ್ಯೆಯಾಯಿತು. ಆ ನಂತರದ ಚಿತ್ರ ನಿಜಕ್ಕೂ ಗಾಬರಿ ಹುಟ್ಟಿಸುವಂತಹದ್ದು. ಆಕೆ, ಅಮ್ಮ, ತಾಯಿ, ಮಾತೆ ಹೀಗೆ ಶುರುವಾದ ಆಕೆಯ ಅಭಿಮಾನಿಗಳು ಆಕೆಯ ಬಗೆಗೆ ಮಾತನಾಡಿದ್ದಕ್ಕಿಂತ ಆಕೆಯ ವಿರೋಧಿಗಳ ಬಗ್ಗೆ ಜಾಸ್ತಿ ಬಾಯಿ ಮಾಡಿದರು. ಅಲ್ಲಿಗೆ ಪರ-ವಿರೋಧದವರ ಎರಡು ಗುಂಪುಗಳಾಗಿ ಹೋದವು.ಕೆಸೆರೆರೆಚಾಟ ಶುರುವಾಯಿತು ನೋಡಿ. ಈವತ್ತಿಗೂ ನಿಂತಿಲ್ಲ. ಪರವಾಗಿ ನಿಂತವರನ್ನು ನಿಲ್ಲಿಸಿ, ಗೌರಿ ಲಂಕೇಶ್ ಬಗೆಗೆ ಐದು ನಿಮಿಷ ಮಾತನಾಡಿ ಎಂದರೆ ಆಕೆ ಆಗೇ ಹೀಗೆ, ಆಕೆ ಅವರಿಗಾಗಿ ದುಡಿದರು, ಇವರಿಗಾಗಿ ಕೆಲಸ ಮಾಡಿದರು ಎಂದೆಲ್ಲಾ ಉತ್ತರಿಸುತ್ತಾರೆ. ಅದಿರಲಿ,,ಆಕೆಯ ಪತ್ರಿಕೆಯನ್ನು ಕೊಂಡು ಓದುತ್ತಿದ್ಯಾ..? ಆಕೆಯ ಪುಸ್ತಕಗಳು ಮನೆಯಲ್ಲಿದೆಯಾ..? ನೀನು ಓದಿರುವೆಯಾ ಎಂದರೆ ಅದಕ್ಕೆ ಉತ್ತರವಿಲ್ಲ. ನಾನು ಹೀಗೆಯೇ ಬಹುತೇಕ ಪರ-ವಿರೋಧಿಗಳನ್ನು ಪ್ರಶ್ನಿಸಿದ್ದೇನೆ.ಆದವರಿಗೆ ಬೇಕೂ ಆಗಿಲ್ಲ. ಇಲ್ಲಿ ಗೌರಿ ಲಂಕೇಶ್ ರನ್ನು ಅವರ ಆಶಯಗಳನ್ನು ತಿಳಿದುಕೊಳ್ಳುವುದಕ್ಕಿಂತ ಆಕೆಯ ಸಹಯೋಗದೊಂದಿಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಉಮ್ಮೆದಿಗೆ ಬಿದ್ದಿದ್ದಾರೇನೋ ಎನ್ನುವ ಅನುಮಾನ ಕಾಡುತ್ತದೆ. ಆಕೆಯನ್ನು ಸೈದ್ಧಾಂತಿಕವಾಗಿ ವಿರೋಧಿಸುವವರು ಇರಬಹುದೇನೋ? ಅವರೆಲ್ಲಾ ಆಕೆಯನ್ನು ಸಾಯಿಸಬೇಕು ಎಂದುಕೊಳ್ಳುತ್ತಾರೆಯೇ..? ಇಷ್ಟಕ್ಕೂ ವಿರೋಧಿಸಿ ಯುದ್ಧಕ್ಕೆ ನಿಲ್ಲುವವನು ಗೆಲ್ಲಲು ನೋಡುತ್ತಾನೆ. ಕೊಲ್ಲಲು ಪ್ರಯತ್ನಿಸಿದ ಅಂದರೆ ಪಾಖಂಡಿ.ಆದರೆ ಆ ತಕ್ಷಣ ಇವರೇ ಕೊಲೆ ಮಾಡಿದ್ದು ಎಂದು ಇವರು ಇಲ್ಲ, ಅವರಲ್ಲ ಇವರಿರಬಹುದು ಎಂದು ಅವರು...ಆನಂತರ ಅವರು ಸರಿಯಿಲ್ಲ, ಇವರು ಸರಿಯಿಲ್ಲ,..ಹೀಗೆ ಸಾಗುತ್ತ ವಾಗ್ವಾದ ವೈಯಕ್ತಿಕ ನಿಂದನೆಗೆ ಬಂದು ಬಿಟ್ಟಿದೆ. ಗೌರಿ ವಿರೋಧಿಸಿದವರನ್ನು ಅನ್ ಫ್ರೆಂಡ್ ಮಾಡುತ್ತೇನೆ ಎನ್ನುವವರು ಕೆಲವರು, ಗೌರಿ ಪರವಿರುವುದನ್ನು ನೋಡಿ, ಗೆಳೆತನಕ್ಕೆ ಚುಕ್ಕಿ ಇಡುವ ಇನ್ನೂ ಕೆಲವರು ..ಈಗ ಹೇಳಿ. ಗೌರಿ ಲಂಕೇಶ್, ಬಸವಣ್ಣ, ಬುದ್ಧ ಇತ್ಯಾದಿಗಳು ಗುಂಪುಗಾರಿಕೆ ಮಾಡಿ, ತನ್ನದೇ ಜಾತಿ ಧರ್ಮ ಕಟ್ಟುವ ಉಮ್ಮೆದಿಗೆ ಬಿದ್ದಿದ್ದರೆ..? ಜಾತಿ ಮತವಿಲ್ಲದ ದೇಶ ನಮ್ಮದಾಗಬೇಕು ಎನ್ನುವ ಆಶಯ ಅವರದಲ್ಲವೇ..? ಹಾಗಿದ್ದ ಮೇಲೆ ನಾವು, ನಮ್ಮ ಪರ ನಿಂತವರದ್ದೆ, ನಾವು ಹೇಳುವುದನ್ನು ವಿರೋಧಿಸಿದೆ ಜಿ ಹುಜೂರ್ ಎನ್ನುವವರನ್ನು ಸೇರಿಸಿಕೊಂಡು ನಮ್ಮವರದ್ದೆ ಗುಂಪು ಕಟ್ಟಿಕೊಂಡರೆ ಅವರ ಆಶಯಕ್ಕೆ ಧಕ್ಕೆಯಾಗುವುದಿಲ್ಲವೇ..?ಆಗಾದಾಗ ನಮ್ಮ ತಪ್ಪುಗಳೆಲ್ಲಿ ನಮಗೆ ಗೊತ್ತಾದೀತು...?
ಕೆಲವೊಮ್ಮೆ ನಾನು ಚರ್ಚೆಗೆ ನಿಲ್ಲುತ್ತೇನೆ, ಆದರೆ ಅದು ವಾಗ್ವಾದಕ್ಕೆ ತಿರುಗಿಕೊಂಡಾಗ ಸುಮ್ಮನಾಗುತ್ತೇನೆ ಅಷ್ಟೇ. ಚರ್ಚೆಯಿಂದ ವಿಷಯದ ಆಳ ತಿಳಿಯುತ್ತದೆ, ಆದರೆ ವಾದ ಮೊಂಡುವಾದಕ್ಕೆ ಕಾರಣವಾಗಿ, ಅದೇ ಅರ್ಥಹೀನ ಜಗಳಕ್ಕೆ ಕಾರಣವಾಗುತ್ತದೆ. ಅದು ನಮ್ಮನ್ನೂ ಏಕಮುಖಿ ಚಿಂತಕರನ್ನಾಗಿ ಮಾಡಿಬಿಡುತ್ತದೆ. ನೀವೇ ಗಮನಿಸಿ.ಈಗ ನಿಂದನೆ-ಪ್ರತಿನಿಂದನೆ ಮಾಡುತ್ತಿರುವವರು ಯಾರು..? ಅವರ್ಯಾರೂ ಅಜ್ಞಾನಿಗಳಲ್ಲ, ಅನಕ್ಷರಸ್ಥರಲ್ಲ..ಓದಿಕೊಂಡವರು, ಸಮಾಜದಲ್ಲಿ ತಮ್ಮದೇ ಆದ ಅಸ್ತಿತ್ವವನ್ನು ಹೊಂದಿರುವವರು. ಇದರಿಂದ ಏನು ಲಾಭ ಎನ್ನುವುದನ್ನೂ ಯೋಚಿಸದೇ ಅರಚಾಟ ಕಿರುಚಾಟ ಮಾಡುತ್ತಿರುವುದು ನೋಡಿದರೆ ಇವರ ಜ್ಞಾನ ಇಷ್ಟೇನಾ ಎನ್ನುವ ಅನುಮಾನ ಬರದೆ ಇರದು.
ಈಗ ನಾನು ಗೌರಿ, ನಾವೆಲ್ಲರೂ ಗೌರಿ ಎನ್ನುವ ಸಮಾವೇಶ ಮಾಡಿದರು. ಒಳ್ಳೆಯದು. ಇದೇ ಮುಖ ಪುಸ್ತಕದಲ್ಲಿ ಅದರ ಪರ ವಿರೋಧಗಳ ಮಾತುಕತೆಯೂ ಮಾಡಾಯಿತಲ್ಲ, ಆಗಿನ ಮಾತುಗಳನ್ನು ಸುಮ್ಮನೆ ಗಮನಿಸಿ, ಬಹುತೇಕ ಅವೆಲ್ಲವೂ ಕೊನೆಯಾಗಿರುವುದು ದೂಷಣೆಯಲ್ಲಿ, ಬೈಗುಳದಲ್ಲಿ.ಅದರ ಬದಲಿಗೆ ನಾವೆಲ್ಲರೂ ಗೌರಿ ಎನ್ನುವ ಪ್ರಜ್ಞಾವಂತರು ಅವರೆಷ್ಟರ ಮಟ್ಟಿಗೆ ಗೌರಿ ಎನ್ನುವುದನ್ನು ತೆರೆದಿಡುವ ಕೆಲಸ ಮಾಡಬಹುದು. ಗೌರಿ ಲಂಕೇಶರ ಬದುಕು, ಹೋರಾಟ, ಅವರ ಬರಹಗಳು, ಪುಸ್ತಕಗಳು, ಅವರು ಮಾಡಿರುವ ಸಮಾಜಮುಖಿ ಕಾರ್ಯಗಳು ಇತ್ಯಾದಿಗಳನ್ನು, ಅವರು ತಿಳಿದುಕೊಂಡದ್ದನ್ನು ತಮ್ಮ ಬರಹದಲ್ಲಿ ವಿಶದ ಪಡಿಸಬಹುದು. ವಿರೋಧಿಸುವವರ ವಾಲ್ ಮೇಲೆ, ಸಂದೇಶಗಳಲ್ಲಿ ಅದನ್ನಿಟ್ಟು ಇವರೇ ಗೌರಿ ಎಂದು ಪರಿಚಯಿಸಬಹುದು. ಆಗ ಗೌರಿ ಲಂಕೇಶ್ ಪರಿಚಯವಾಗುತ್ತದೆ. ನಿಜಕ್ಕೂ ಆಕೆಯ ಆಶಯಗಳು ಉನ್ನತವಾದದ್ದೇ ಆದಲ್ಲಿ ಬಹಳಷ್ಟು ಮಂದಿಗೆ ಅದು ಗೊತ್ತಿಲ್ಲದೇ ವಿರೋಧ ವ್ಯಕ್ತಪಡಿಸುತ್ತಿರುವವರಿಗೆ ತಿಳುವಳಿಕೆ ನೀಡಬಹುದು. ಆ ಮೂಲಕ ಭೌತಿಕವಾಗಿ ಇನ್ನಿಲ್ಲದ ಗೌರಿಯನ್ನು ಬರಹಗಳ ಮೂಲಕ ಜೀವಂತವಿಡಬಹುದು..ಆದರೆ ಇಲ್ಲಿ ಆಗುತ್ತಿರುವುದೇ ಬೇರೆ. ರಾಜಕೀಯ ಪಕ್ಷಗಳ ಬಗೆಗೆ, ಮೋದಿ ಸಿದ್ಧರಾಮಯ್ಯ, ಬಿಜೆಪಿ ಕಾಂಗ್ರೆಸ್, ಆರ್ ಎಸ್ ಎಸ್, ಹಿಂದೂ ಮುಸ್ಲಿಂ, ದೀನ ದಲಿತ ಎಲ್ಲದರ ಮೇಲೆಯೂ ವಾದಗಳಾಗುತ್ತಿವೆ. ಪರಸ್ಪರ ಸರಿ ತಪ್ಪುಗಳ ಲೆಕ್ಕಾಚಾರದಲ್ಲಿ ತೊಡಗಿರುವವರಿಗೆ ಅದನ್ನು ಪ್ರೂವ್ ಮಾಡುವ ನಿಟ್ಟಿನಲ್ಲಿ ಎದುರಿನವನ ಸರಿಗಳೂ ಗೌಣವಾಗುತ್ತಲಿವೆ. ಇದು ಹೇಗೆ ಆಗಿದೆಯೆಂದರೆ ನಿನ್ನ ಬಟ್ಟೆ ಕೊಳೆಯಾಗಿದೆ ನೋಡಿಕೋ ಎಂದವನಿಗೆ ನನ್ನದಿರಲಿ ನಿನ್ನ ಬಟ್ಟೆಯೂ ಕೊಳೆಯಾಗಿದೆ ಎನ್ನುವಂತಾಗಿದೆ. ಹೌದಾ.. ಇಲ್ಲವಲ್ಲ. ಅದು ಕೊಳೆಯಲ್ಲ ಎಂದು ನೋಡಿಕೊಳ್ಳುವುದು ಇಲ್ಲಿ ಬೇಕಾಗಿದೆಯೇ ಹೊರತು, ಅದು ಹಾಗೆಯೇ ಇರಲಿ ನಿನ್ನಲ್ಲೂ ಕೊಳೆಯಾಗಿದೆ ಎಂದು ತೋರಿಸುವುದರಿಂದ ಇಬ್ಬರ ಕೊಳೆಯೂ ಹಾಗೆಯೇ ಇರುತ್ತದೆಯಲ್ಲವೇ..?  ಗೌರಿ ಸತ್ತಿದ್ದಾರೆ..ಆಕೆ ಹೀಗಿದ್ದರು, ಇಷ್ಟೆಲ್ಲಾ ಮಾಡಿದ್ದರು ಎಂದು ಯಾರೊಬ್ಬರೂ ಪರಿಚಯಿಸುತ್ತಿಲ್ಲ. ಬದಲಿಗೆ ಅವರನ್ನು ಇವರು ಕೊಂದರು, ಆ ಪಕ್ಷ ಕೊಂದಿತು, ನಾವು ಹೀಗಿರಬೇಕು ಎನ್ನುವ ಮಾತಿನ ಜಗಳಕ್ಕೆ ನಿಂತಿರುವುದರಿಂದ ಇಲ್ಲಿ ಗೌರಿ ಲಂಕೇಶ್ ಮರೆಯಾಗಿ ಹತ್ಯೆಯಾಚೆಗಿನ ವಿಷಯಗಳೇ ಮಹತ್ವದ ಪ್ರಾಧಾನ್ಯತೆ ಪಡೆದುಕೊಳ್ಳುತ್ತಿದೆ. ಹಾಗೆಯೇ ಮುಂದುವರೆದು ಅದೂ ಮರೆಯಾಗಿ ನಕಲಿ ಫೋಟೋಗಳ ಪ್ರಕಟಣೆ, ಮಾತಿನ ದೂಷಣೆ ಅಲ್ಲಿ ಇಲ್ಲಿ ಆದ ಚಿಕ್ಕ ತಪ್ಪುಗಳು ಪ್ರಧಾನ ಪಾತ್ರ ವಹಿಸುತ್ತಿವೆ.
 ಇದು ಹೀಗೆ ಮುಂದುವರೆದರೆ ಯಾವುದೂ ನಿಚ್ಚಳವಾಗುವುದಿಲ್ಲ. ಬದಲಿಗೆ ಇಡೀ ಸಾಮಾಜಿಕ ಜಾಲತಾಣವೇ ಕೆಸರುಗುಂಡಿಯಾಗಿ ಬಿಡುತ್ತದೆ, ಜೊತೆಗೆ ನಮ್ಮ ಮನಸ್ಸುಗಳೂ ಕೂಡ.