Saturday, July 21, 2012

ಓದಿದ್ದು ನೋಡಿ ಮರುಳಾದದ್ದು-2

"ದಿಲ್  ವಾಲೆ ದುಲ್ಹನಿಯಾ ಲೇ ಜಾಯೆ೦ಗೆ ನೋಡೋಕ್ ಬರ್ತೀಯಾ..?"
"ನಾಲ್ಕು ಸಲ ನೋಡಿದ್ದೀನಿ.."
"ಹಂ ಆಪ್ಕೆ ಹಾಯ್ ಕೌನ್?"
"ಯಾವತ್ತೋ  ನೋಡಾಗಿದೆ.."
"ಕರಣ್  ಅರ್ಜುನ್..?"
'.............'
'ಬಾ ನೋಡೋಣ..ಶಾರುಕ್ ಸಲ್ಮಾನ್ ಇಬ್ರೂ ಇದ್ದಾರೆ..'
'ಥಿಯೇಟರ್ ನಲ್ಲಿ ಕೈ ಹಿಡಿದರೆ..'
"ಅಮ್ಮನಾಣೆ ಹಿಡಿಯಲ್ಲ.."
'ಸಿನಿಮಾ ನೋಡೋವಾಗ ಪಾಪ್ಕಾರ್ನ್ ಚೆಲ್ಲಿ ಕೆಳಗಡೆ ಆಯ್ಕೊಲ್ಲೋಕೆ ಬಗ್ಗಲ್ವಾ..?
'ಅಮ್ಮನಾಣೆ ಇಲ್ಲ..'
'ಮತ್ತೆ ಸೀಟ್ನಲ್ಲಿ ನನ್ನ ಒರಗಿಕೊ೦ಡು ಕೂರತೀಯ..'
'ಅಮ್ಮನಾಣೆ ಇಲ್ಲಾ..' '
'ಹ೦ಗಾರೆ ನಿಮ್ಮಮ್ಮನ್ನೇ ಕರಕೊ೦ಡು ಸಿನಿಮಾಗೆ ಹೋಗು..ನಾನೇಕೆ ನಿನ್ ಜೊತೆ..'
ಇದು ಅನುರಾಗ್ ಬಸು ನಿರ್ದೇಶನದ ಗ್ಯಾ೦ಗ್ಸ ಆಫ್ ವಾಸ್ಸೀಪುರ್ ಭಾಗ -2 ರ ಟ್ರೈಲರ್ ನಲ್ಲಿ ಬರುವ ಸಂಭಾಷಣೆಯ ತುಣುಕು. ಈಗಾಗಲೇ ಭಾಗ -1 ನೋಡಿದವರಿಗೆ ಆ ಫೈಜಲ್ ಖಾನ್ ಪಾತ್ರದ ಗುಣಾವಗುಣ ಗೊತ್ತಿರುವುದರಿ೦ದ ಈ ಸಂಭಾಷಣೆ ಮಜಾ ಕೊಡುವುದರ ಜೊತೆಗೆ ಸಿನಿಮಾದಲ್ಲಿ ಏನೋ ಇದೆ ಎನಿಸುವ೦ತೆ ಮಾಡಿ ಸಿನಿಮಾ ನೊಡುವ೦ತೆ ಮಾಡುತ್ತದೆ. ನಾನು ಪ್ರತಿ ಸಿನಿಮಾಕ್ಕೂ ಮುನ್ನ ಟ್ರೈಲರ್ ನೋಡೇ ನೋಡುತ್ತೇನೆ. ಯಾಕೆ೦ದರೆ ಕೆಲವೊಮ್ಮೆ ಸಿನಿಮಾಕ್ಕಿ೦ತ ಟ್ರೈಲರ್ ಗಳೇ ಮಜಾ ಕೊಡುತ್ತವೆ. ಮೊನ್ನೆ ಅಮಜಿ೦ಗ್ ಸ್ಪೈಡರ್ ಮ್ಯಾನ್ ಟ್ರೈಲರ್ ನೋಡಿ ಸಿನಿಮಾಕ್ಕೆ ಹೋದರೆ ಭಾರಿ ನಿರಾಸೆಯಾಯಿತು. ನಮಗೆಲ್ಲ ಗೊತ್ತಿರುವ೦ತೆ ಸ್ಪೈಡರ್ ಮ್ಯಾನ್ ಕಥೆಯಲ್ಲಿ ಹೊಸತೇನನ್ನೂ ಹುಡುಕಲು ಸಾಧ್ಯವಿಲ್ಲವಾದರೂ ಕಥೆಯನ್ನೇ ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ಅದನ್ನೇ ಸ್ಯಾಮ್  ರಯ್ ಮಿ  ಮಾಡಿದ್ದು. ಆ ಮೂರು ಚಿತ್ರಗಳಲ್ಲೂ   ಭಿನ್ನಬಿನ್ನ ಕತೆಯಿತ್ತು. ಅದ್ಭುತ  ದೃಶ್ಯ ವೈಭವವಿತ್ತು. ಅದೇಕೋ ಈ ಸಿನಿಮಾದಲ್ಲಿ ಎರಡೂ ಕೈ ಕೊಟ್ಟಿವೆ. ಒ೦ದು  ಸಿನಿಮಾ ನೋಡಲು ಎನಿಲ್ಲವೆ೦ದರೋ ಎರಡೂವರೆ ತಾಸಾದರೂಬೇಕು. ಆದರೆ ಟ್ರೈಲರ್ ಹಾಗಲ್ಲ. ಒ೦ದೆರೆದು ನಿಮಿಷಗಳಲ್ಲಿ ಮುಗಿದುಹೊದರೂ ಆ ಸಿನಿಮಾದ ಬಗ್ಗೆ ಕಿರುಪರಿಚಯ ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತವೆ.. ಮತ್ತೆ ಟ್ರೈಲರ್ ಗಳೂ  ಹಾಗಿರಬೇಕೂ ಕೂಡ. ಇಡೀ ಸಿನಿಮಾದ ಮೂಡನ್ನು , ಅದರ ಶೈಲಿಯನ್ನು ಅದರ ಯನ್ನು ಸೂಚ್ಯವಾಗಿ ಕುತೂಹಲ ಕೆರಳಿಸುವಂತೆ ನಮಗರಿವು  ಮಾಡಿಕೊಟ್ಟುಬಿಡಬೇಕು.ಆವಾಗಲೇ ಅದು ಉತ್ತಮ ಟ್ರೈಲರ್  ಎನಿಸಿಕೊಳ್ಳುತ್ತದೆ. ಆ ವಿಷಯದಲ್ಲಿ ಹಾಲಿವುಡ್ನವರನ್ನು ಮೆಚ್ಚಲೇಬೇಕು..ಅವರ ಸಿನಿಮಾ ಟ್ರೈಲರ್ ಗಳು  ತು೦ಬಾ ಕುತೂಹಲಕಾರಿಯಾಗಿರುವುದಷ್ಟೇ ಅಲ್ಲ. ಆ ಸಿನಿಮಾವನ್ನು ಒ೦ದು ಗುಕ್ಕಿನಲ್ಲಿ ನಮಗೆ ಪರಿಚಯಮಾಡಿಕೊಡುತ್ತವೆ.www.traileraddict.com ಎನ್ನುವ ವೆಬ್ ಸೈಟಿದೆ. ಒಮ್ಮೆ ಭೇಟಿಕೊಟ್ಟರೆ ಅದೆ೦ತಹ ಮಜಾ ಗೊತ್ತಾ..ಸಾವಿರಾರು ಸಿನಿಮಾಗಳ ತರಹೇವಾರಿ ಟ್ರೈಲರ್ ಗಳಿವೆ ಅದರಲ್ಲಿ . ನಾನ೦ತೋ ಸಮಯ ಸಿಕ್ಕಾಗಲೆಲ್ಲಾ ಆ ವೆಬ್ ಸೈಟಿಗೆ ಹೋಗಿ ಕುಲಿತುಬಿಡುತ್ತೇನೆ. ನೋಡುತ್ತಾ ನೋಡುತ್ತಾ ಖುಶಿಯಾಗುತ್ತದೆ. ಕೆಲವು ನಿರ್ದೇಶಕರ, ಟ್ರೈಲರ್ ತಯಾರಕರಾ  ಜಾಣತನಕ್ಕೆ ಮಾರುಹೋಗಿದ್ದೇನೆ. ಅದೆಷ್ಟು ರೀತಿಯ ಟ್ರೈಲರ್ಗಳು...ಆ ಸಿನಿಮಾದ ಭಾವಕ್ಕೆ ತಕ್ಕ೦ತೆ...ಸ್ಟೈಲ್ ಗೆ ತಕ್ಕ೦ತೆ ಅದೆಷ್ಟು ಚೆನ್ನಾಗಿವೇ ಎನಿಸುತ್ತದೆ. ಹಾಗೆ ಕಮಿ೦ಗ್ ಸೂನ್ [http://www.comingsoon.net ]ಎನ್ನುವ ವೆಬ್ ಸೈಟ್ ಕೂಡ ಟ್ರೈಲರ್ ಗೆ ಸ೦ಬ೦ಧಪಟ್ಟೆದ್ದೆ. 
ಕನ್ನಡದಲ್ಲೂ ಇತ್ತೀಚಿಗೆ ಒಳ್ಳೊಳ್ಳೆಯ ಟ್ರೈಲರ್ ಗಳು ಬರುತ್ತಿವೆ .ಮೊದಲೆಲ್ಲಾ ಸಿನಿಮಾದ ಒ೦ದಷ್ಟು ಶಾಟ್ ಗಳನ್ನೂ ಕತ್ತರಿಸಿ ಜೋಡಿಸಿಬಿಡುತ್ತಿದ್ದರು. ಈಗ ಹಾಗಲ್ಲ. ಅದಕ್ಕೆ ಒ೦ದು ಚಿಕ್ಕ ಚೌಕಟ್ಟಿನಲ್ಲಿ ಸ್ಕ್ರಿಪ್ಟ್ ಮಾಡುವುದರಿ೦ದ ಏನೋ ಒ೦ದು ರೀತಿಯ ಖುಷಿ ಸಿಗುತ್ತದೆ.
  ಈಗ ಹೇಳಿ..ನಿಮ್ಮನ್ನು  ಸಿನಿಮಾ ನೋಡಲೇ ಬೇಕೆ೦ದು ಪ್ರಚೋದಿಸಿದ ಟ್ರೈಲರ್ ಯಾವುದು? 
ಸಿಡ್ನಿ ಶೆಲ್ದನನ್ನ ಕಾದ೦ಬರಿ ಮೆಮೊರಿಸ್ ಆಫ್ ಮಿಡ್ನೈಟ್ ಓದುತ್ತಿದ್ದ ಮಧ್ಯದಲ್ಲೇ ನನ್ನದೂ ಒ೦ದು ಪ್ರೇಮ ಕಥೆ ಎನ್ನುವ ಕಾದಂಬರಿ ಸಿಕ್ಕಿತು. ಸಧ್ಯಕ್ಕೆ ಸಿಡ್ನೀಗೊ೦ದು ವಿರಾಮ ಕೊಟ್ಟು ಅದನ್ನು ಕೈಗೆತ್ತಿಕೊ೦ಡು ಓದಲು ತೊಡಗಿದೆ. ರವೀ೦ದರ ಸಿ೦ಗ್ ಎನ್ನುವ ಟೆಕ್ಕಿಯೊಬ್ಬ ಬರೆದಿರುವ ಕಾದಂಬರಿ ಅದು. ಹೆಸರೇ ಹೇಳುವ೦ತೆ ಅವರದೇ ಮನಮಿಡಿಯುವ ಪ್ರೇಮ ಕಥೆ. ಅದು ಇಂಗ್ಲಿಷ್ ನ ಐ  ಟೂ ಹ್ಯಾಡ್ ಎ  ಲವ್ ಸ್ಟೋರಿಯ ಕನ್ನಡದ ಅನುವಾದ. ಅನುವಾದಿಸಿದವರು ಈಶ್ವರ ದೈತೋಟ. ಓದುತ್ತ ಓದುತ್ತಾ ಕಥೆ ಇಷ್ಟವಾದರೂ ಅನುವಾದ ಬೇಸರ ತರಿಸಿತು.ಪಕ್ಕ ಪದಗಳನ್ನೂ ಕನ್ನಡೀಕರಿಸಿರುವುದು ಒ೦ದು ರೀತಿಯ ಕಿರಿಕಿರಿ ಎನಿಸಿತು  ಕಾದಂಬರಿಯ ಓದಿಗೆ, ಅದರ ವೇಗಕ್ಕೆ ಅನುವಾದವೇ ಬ್ರೇಕ್ ಹಾಕಿದ್ದು ವಿಪರ್ಯಾಸ. ಕೊನೆ ಕೊನೆಗೆ ಇಂಗ್ಲಿಷಿನ ಮೂಲಕೃತಿಯನ್ನೇ ಓದಬೇಕೆನ್ನಿಸಿಬಿಟ್ಟಿತು.
1944ಮಾರ್ಜಾಬೋತ್ತೋ ಹತ್ಯಾಕಾ೦ಡ  ಆಧಾರಿತ ಇಟಾಲಿಯನ್ ಸಿನಿಮಾ ಲ  ಅಮೋ ಛೆ ವೆರ್ರಾ ಅಥವಾ ದಿ ಮ್ಯಾನ್ ಹೂ ವಿಲ್ ಕಂ ಎನ್ನುವ ಸಿನೆಮಾ ನೋಡಿ ದ೦ಗಾಗಿಬಿಟ್ಟೆ. ಜಗತ್ತಿನ ಇತಿಹಾಸ ಇಷ್ಟು ಕ್ರೂರವೇ ಎನಿಸುವುದು ಇ೦ತಹ ಸಿನೆಮಾಗಳನ್ನೂ ನೋಡಿದಾಗ. ಆ ಹತ್ಯಾಕಾ೦ಡದಲ್ಲಿ 900ಕ್ಕೋ ಹೆಚ್ಚು ಅಮಾಯಕರ ಮಾರಣ ಹೋಮವಾಯಿತು. ಅದರ ಹಿನ್ನೆಲೆಯ ಕಥೆಯಿರುವ ಈ ಸಿನೆಮಾ ಒ೦ದು ಎಂಟು ವರ್ಷದ ಮಾರ್ಟಿನ ಎನ್ನ್ನುವ ಬಾಲಕಿಯ ಬದುಕಿನ ವೈಪರೀತ್ಯಗಳ ಮೇಲೆ ನಿರೂಪಿಸಲ್ಪಟ್ಟಿದೆ. ಚಿತ್ರದ ಪ್ರಾರಂಭದಲ್ಲಿ ಒ೦ದು ಕುಟು೦ಬದ ಕಥೆ ಎನಿಸುತ್ತದೆ. ಸಹೋದರನನ್ನು ಕಳೆದುಕೊಳ್ಳುವ ಹುಡುಗಿಯೊಬ್ಬಳು ಮಾತು ಆಡುವುದನ್ನೇ ನಿಲ್ಲುಸುತ್ತಾಳೆ. ಈಗ ತಾಯಿ ಮತ್ತೊಮ್ಮೆ ಗರ್ಭಿಣಿ. ಮತ್ತೆ ಸಹೋದರ ಬಂದರೆ ಅವಳು ಮಾತನಾಡಳು ಪ್ರಾರ೦ಭಿ ಸುವಳೆನೋ ಎನ್ನುವ ಆಸೆ ಎಲ್ಲರದು...ಆದರೆ ವಿಧಿ ಬೇರೆಯದೇ ರೀತಿಯಲ್ಲಿ ತನ್ನ ಸ೦ಚು ಹೂಡಿರುತ್ತದೆ...ತು೦ಬಾ ಮನಮಿಡಿಯುವ ಕಥೆ, ಅಭಿನಯವಿರುವ ಈ ಸಿನಿಮಾವನ್ನೊಮ್ಮೆ ತಪ್ಪದೆ ನೋಡಿ.




Wednesday, July 18, 2012

ವಿ'ಚಿತ್ರ'ಗಳು-3


ಕೆಲವೊಂದು ಚಿತ್ರಗಳನ್ನು ದಾಖಲೆಗಾಗಿಯೇ ತೆಗೆಯಲಾಗುತ್ತದೆ. ಮತ್ತದು ತಪ್ಪೆಂದು ಹೇಳಲಾಗದಿದ್ದರೂ ಒಂದು ಸಿನಿಮಾ ಹೆಚ್ಚಾಗಿ ತಾನು ಹೇಳಬೇಕೆಂದಿರುವ ವಿಷಯವನ್ನು ಅಚ್ಚುಕಟ್ಟಾಗಿ ಮನಮುಟ್ಟುವಂತೆ ಹೇಳಿದರೆ ಅದೇ ದೊಡ್ಡ ಸಾಧನೆ ಎನ್ನಬಹುದು. ಉತ್ತಮ ದಾಖಲೆ ಎಂದು ಅರ್ಥೈಸಬಹುದು. ಸಿನಿಮಾದ ಸಾರ್ಥಕತೆ ಇರುವುದು ಅಲ್ಲೇ. ಆದರೂ ಕೆಲವೊಮ್ಮೆ ಹೇಳಿದ್ದನ್ನು ಬೇರೆಬೇರೆಯಾಗಿ ಹೇಳಿ, ಒಂದರ್ಥದಲ್ಲಿ ಎಲ್ಲಾ ರೀತಿಯ ಕಥೆಗಳನ್ನು ತಮ್ಮ ಮಿತಿಯೊಳಗೆ ವಿಭಿನ್ನ ರೀತಿಯಲ್ಲಿ ನಿರೂಪಿಸಿ ಬೇಸರವಾದಾಗ, ಅಥವಾ ಅದೇಕೋ ಏಕತಾನತೆ ಎನಿಸಿದಾಗ ಚಿತ್ರಕರ್ಮಿಗಳು ಏನಾದರೊಂದು ವಿಶೇಷವನ್ನು ಸಿನಿಮಾರಂಗದಲ್ಲಿ ಮಾಡಲು ಪ್ರಯತ್ನಿಸುತ್ತಾರೆ. ಸರಳವಾಗಿ ಕಥೆ ಹೇಳುತ್ತೇನೆ ಕೇಳಿ. ಅವನೊಬ್ಬ ಬಡವ. ಅವನಿಗೀಗ ಕೆಲಸ ಸಿಕ್ಕಿದೆ. ಅದೂ ಕಾಡಿನ ರಕ್ಷಕ ಅಥವಾ ಫಾರೆಸ್ಟ್ ಗಾರ್ಡ್ ಆಗಿ. ಕೆಲಸಕ್ಕಾಗಿ ಹಾತೊರೆಯುವ ಆತ ಯಾವ ಕೆಲಸವಾದರೂ ಮಾಡಲು ಸಿದ್ಧನಿದ್ದರಿಂದ ಆ ಕೆಲಸವನ್ನು ಬಹಳ ಪ್ರೀತಿಯಿಂದ ಸ್ವೀಕರಿಸುತ್ತಾನೆ. ಅವನು  ನಿರ್ಜನವಾದ ಕಾಡೊಂದರಲ್ಲಿ ಗಾರ್ಡ್ ಆಗಿ ನೇಮಕಗೊಳ್ಳುತ್ತಾನೆ. ದೋಣಿಯೊಂದು ಆ ನಿರ್ಜನ ಕಾಡಿನಲ್ಲಿ ಅವನನ್ನು ಬಿಟ್ಟು ಹೊರಟುಹೋಗುತ್ತದೆ. ಈಗ ಇಡೀ ಕಾಡೊಳಗೆ ಅವನನ್ನು ಬಿಟ್ಟರೆ ಅವನ ಕಣ್ಣಿಗೆ ಬೀಳುವುದು ಪ್ರಾಣಿ ಪಕ್ಷಿ ಸರ್ಪಗಳು ಮಾತ್ರ. ನಾಯಕ ಅವುಗಳೊಂದಿಗೆ ತನ್ನ ಜೀವನ ಪ್ರಾರಂಭಿಸುತ್ತಾನೆ. ಕೆಲವೇ ದಿನಗಳಲ್ಲಿ ತನ್ನ ಒಂಟಿತನ ಮರೆಯುತ್ತಾನೆ. ಅಷ್ಟರಲ್ಲಿ ಅಲ್ಲಿ ತಾನೊಬ್ಬನೇ ಇಲ್ಲ ಎಂಬ ಗುಮಾನಿ ಮೂಡಲು ಪ್ರಾರಂಭಿಸುತ್ತದೆ..ಮುಂದೆ..?
ಇದು 2001 ರಲ್ಲಿ ಏಕನಟನಿದ್ದ ಕಾರಣಕ್ಕೆ ಗಿನ್ನೆಸ್ ದಾಖಲೆ ಸೇರಿದ ಮಳಯಾಳಮ್ ಚಿತ್ರ ದಿ ಗಾರ್ಡ್‌ನ ಕಥೆ. ಕಳಾಭವನ್ ಮಣೀ ಅಭಿನಯದ ಈ ಚಿತ್ರದ ನಿರ್ದೇಶಕ ಹಕೀಮ್ ರಾಥರ್. ಯಾವುದೇ ದಾಖಲೆಯ ಮನ್ನಣೆಗೆ ಪಾತ್ರವಾದ ಸಿನಿಮಾಗಳಲ್ಲಿರುವಂತೆಯೇ ಈ ಚಿತ್ರದಲ್ಲೂ ಕೆಲವೊಂದು ಋಣಾತ್ಮಕ ಅಂಶಗಳಿವೆ. ಒಬ್ಬನೇ ನಟ ಮತಾಡುವುದು, ಓಡಾಡುವುದು ಮತ್ತು ಹೆಚ್ಚೆಚ್ಚು ಘಟನೆಗಳು ನಡೆಯದಿರುವುದು ನೋಡುಗರಿಗೆ ಬೋರ್ ತರಿಸುತ್ತದೆ. ಇಲ್ಲಿ ನಿರ್ದೇಶಕ ಹಕೀಮ್ ಒಂದಷ್ಟು ಬುದ್ದಿವಂತಿಕೆ ಮೆರೆದಿದ್ದಾರೆ. ಅದೇನೆಂದರೆ ನಾಯಕನಾಗಿ ಕಲಾಭವನ್ ಮಣಿಯನ್ನು ಆಯ್ಕೆ ಮಾಡಿರುವುದು. ಈ ಕಲಾವಿದನ ವಿಶೇಷತೆಯೆಂದರೆ ತುಂಬಾ ಒಳ್ಳೆಯ ಅಣುಕು ಕಲಾವಿದ. ಆದ್ದರಿಂದ ಅರ್ಧ ಸಿನಿಮಾ ಆತನ ಅಣುಕು ಅಭಿನಯ, ಸಂಭಾಷಣೆಗಳಿಂದ ಸಹನೀಯವೆನಿಸುತ್ತದೆ. ಇದರೊಟ್ಟಿಗೆ ಛಾಯಾಗ್ರಹಣ ಈ ಚಿತ್ರದ ಇನ್ನೊಂದು ಗಮನಾರ್ಹ ಅಂಶ. ಅಂದಹಾಗೆ ಈ ಚಿತ್ರದಲ್ಲಿ ಹಾಡುಗಳೂ ಇವೆ.
ಕುತೂಹಲವಿದ್ದರೆ ಮೋಸರ್‌ಬೇರ್ ಕಂಪನಿಯ ಡಿವಿಡಿಗಳು ಲಭ್ಯವಿದೆ. ಒಮ್ಮೆ ನೋಡಬಹುದು.
ಇದೇ ನಿಟ್ಟಿನಲ್ಲಿ ಇನ್ನು ಹೆಸರಿಸಬೇಕಾದ ಸಿನಿಮಾಗಳೆಂದರೆ ಕನ್ನಡದ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಶಾಂತಿ, ಸುನೀಲ್ ದತ್ ನಟಿಸಿ ನಿರ್ದೇಶಿಸಿದ್ದ ಯಾದೇ. 2004 ರಲ್ಲಿ ಬಿಡುಗಡೆಯಾದ ಶಾಂತಿ ಚಿತ್ರದಲ್ಲಿ ಭಾವನ ಮುಖ್ಯಭೂಮಿಕೆಯಲ್ಲಿದ್ದರು. ಕಲಾವಿದೆಯೊಬ್ಬಳ ಜೀವನದ ಕಥೆ ಇದಾಗಿತ್ತು. ಹಾಗೆ ಯಾದೇ ಚಿತ್ರದಲ್ಲಿ ಕೇವಲ ಇಬ್ಬರು ಕಲಾವಿದರು ಮಾತ್ರ ನಟಿಸಿದ್ದರು. ಅದರಲ್ಲೂ ಸುನಿಲ್ ದತ್ ಬಿಟ್ಟರೆ ಇನ್ನೊಂದು ಪಾತ್ರಧಾರಿ ನರ್ಗೀಸ್ ದತ್  ನೆರಳು ಮಾತ್ರ ಸಿನಿಮಾದಲ್ಲಿತ್ತು. ಈ ಚಿತ್ರ 1954ರಲ್ಲಿ ತೆರೆಗೆ ಬಂದು ಗಿನ್ನೆಸ್ ದಾಖಲೆಯ ಹಿರಿಮೆಯನ್ನು ತನ್ನದಾಗಿಸಿಕೊಂಡಿತ್ತು. ಹಾಗೆ 2010ರಲ್ಲಿ ತೆರೆಗೆ ಬಂದ ಬರೀಡ್ ಚಿತ್ರವೂ ಕೇವಲ ಒಬ್ಬನೇ ಒಬ್ಬ ಪ್ರಮುಖ ಪಾತ್ರಧಾರಿಯನ್ನು ಹೊ೦ದಿತ್ತು.ಅದು ಒ೦ದೆ ಸ್ಥಳದಲ್ಲಿ ಕೂಡ ಚಿತ್ರಿಸಲಾಗಿತ್ತು.


Tuesday, July 17, 2012

ನೋಡಲೇಬೇಕಾದ ಚಿತ್ರಗಳು-10

ಒಬ್ಬ ವ್ಯಕ್ತಿಯ ಜೀವನಾಧಾರಿತ ಕಥೆಗಳು ಸಿನಿಮಾ ರೂಪ ತಾಳಿದರೆ ಅದೊಂದು ಇತಿಹಾಸದ ದಾಖಲೆಯಾಗಿ ಉಳಿದುಬಿಡುತ್ತದೆ.ಆದರೆ ಚಿತ್ರತ೦ಡ ಯಾವುದೇ ಪ್ರಲೋಭನೆಗೊಳಗಾಗಿರಬಾರದು  ಹಾಗೆ  ಪಕ್ಷಪಾತ ರಹಿತವಾಗಿರಬೇಕು. ಆದರೂ ಒ೦ದು ಸಿನಿಮಾದ ಮೂಲಕ ಒಬ್ಬ ವ್ಯಕ್ತಿಯ ಇತಿಹಾಸವನ್ನು , ಆವತ್ತಿನ, ಅವನ ಯಥಾಚಿತ್ರಣವನ್ನು ಸಮರ್ಥವಾಗಿ ಕಟ್ಟಿಕೊಡಬೇಕಾದರೆ ಚಿತ್ರದ ಬರವಣಿಗೆ ಎಷ್ಟು ಮುಖ್ಯವೋ ಆ ಪಾತ್ರಧಾರಿಯೂ ಅಷ್ಟೇ ಮುಖ್ಯವಾಗಿರುತ್ತಾನೆ. ಕಾರಣ ಒಬ್ಬ ವ್ಯಕ್ತಿಯನ್ನು ಸಿನಿಮಾದಲ್ಲಿ ಪ್ರತಿನಿಧಿಸುವುದು, ಆತನ ಪ್ರತಿರೂಪವೇ ಆಗಿಬಿಡುವುದು ಕಲಾವಿದನ ಸಾಮರ್ಥ್ಯಕ್ಕೆ ಒಂದು ಸವಾಲೇ ಸರಿ. ಈಗಾಗಲೇ ಜನರು ಆ ವ್ಯಕ್ತಿಯ ಬಗ್ಗೆ ಕೇಳಿರುತ್ತಾರೆ, ಹತ್ತಿರದಿ೦ದಾಗದಿದ್ದರೂ ದೂರದಿ೦ದಾದರೋ ನೋಡಿರುತ್ತಾರೆ..ಅವನಿಗೆ ಸ೦ಬ೦ಧ  ಪಟ್ಟ   ಘಟನೆಗಳನ್ನೂ ಕೇಳಿರುತ್ತಾರೆ..ಹಾಗಾಗಿ ಪಾತ್ರಧಾರಿ ಭಾರಿ ಎಚ್ಚರಿಕೆಯಿ೦ದ ಅಭಿನಯಿಸಬೇಕಾಗುತ್ತದೆ. ಅಷ್ಟೇ  ಪೂರ್ವ ತಯಾರಿಗಳನ್ನು ಮಾಡಿಕೊ೦ಡಿರಬೇಕಾಗುತ್ತದೆ.
ಫಾರೆಸ್ಟ್ ವ್ಹೈಟೆಕರ್ ಅಭಿನಯದ ದಿ ಲಾಸ್ಟ್ ಕಿ೦ಗ್ ಆಫ್ ಸ್ಕಾಟ್ಲ್ಯಾಂಡ್ ಚಿತ್ರವನ್ನ ನೋಡಿದಾಗ ಈದಿ ಅಮೀನನೆ ಎದುರಿಗೆ ಬ೦ದ೦ತನಿಸುವುದರ ಕಾರಣ ಫಾರೆಸ್ಟ್ ನ ಅದ್ಭುತ ಅಭಿನಯ. ಉಗಾ೦ಡದ ಸರ್ವಾಧಿಕಾರಿಯಾದ ಈದಿ ಅಮೀನನ ಬಗೆಗಿನ ಈ ಸಿನಿಮಾದಲ್ಲಿ ಆತನ ತಣ್ಣಗಿನ ಕ್ರೌರ್ಯ, ಅಮಾನವೀಯ ಮನಸ್ಥಿತಿಯನ್ನ, ಪೆದ್ದು ಪೆದ್ದಾಗಿ ವರ್ತಿಸುವ ಅವನ ಅತಿ ಜಾಣತನವನ್ನು   ಅಷ್ಟೇ ಕರಾರುವಕ್ಕಾಗಿ ನಮಗೆ ತೋರಿಸಿದ್ದಾನೆ ಫಾರೆಸ್ಟ್. ನಾಯಕನನ್ನು ತನ್ನ ಮನೆಯ೦ಗಳಕ್ಕೆ ಕರೆದು ಬಹುಮರ್ಯಾದೆ ಕೊಡುವಾಗ,, ಹೆ೦ಡತಿ ಮೋಸ ಮಾಡಿದಳು ಎ೦ದು ಗೊತ್ತಾದಾಗ ಆಕೆಯ ಕೈಕಾಲುಗಳನ್ನು ಬೇರ್ಪಡಿಸಿ ಕಾಲಿದ್ದ ಕಡೆ ಕೈಯನ್ನೂ , ಭುಜಕ್ಕೆ ಕಾಲುಗಳನ್ನು ಸೇರಿಸಿ ಹೊಲಿದು ಅಷ್ಟೇ ತಣ್ಣಗೆ 'ಅವಳೆನೆಗೆ ಮೋಸ ಮಾಡಿದ್ದಳು, ಅದಕ್ಕೆ ಅವಳಿಗೆ ತಕ್ಕುದಾದ ಶಿಕ್ಷೆ ನೀಡಿದೆ..' ಎ೦ದು ಹೇಳಿ ಆರಾಮವಾಗಿ ಸಿ೦ಹಾಸನದ ಮೇಲೆ ಕುಳಿತು ನೃತ್ಯ ನೋಡುತ್ತಾ ಮಜಮಾಡುವಾಗ, ನಾಯಕನ ಎದೆಗೆ ಕಬ್ಬಿಣದ ಕೊಕ್ಕೆ ತೂರಿಸಿ ಅವನನ್ನು ನೇತುಹಾಕಿ ಮಾತಾಡುವಾಗ ಅವನ ಅಭಿನಯವನ್ನ ಗಮನಿಸಬೇಕು..ಒ೦ದೆ ಮಾತು.. ಸೂಪರ್.!
ಈದಿ ಅಮೀನ ನಾವೆಲ್ಲಾ ಓದಿ ಕೇಳಿ ತಿಳಿದುಕೊ೦ಡಿರುವ೦ತೆ  ಅವನೊಬ್ಬ ನರರೂಪದ ರಾಕ್ಷಸ ಎ೦ದೆ ಹೇಳಬಹುದು. ಆತನ ಬಗ್ಗೆ ಹಲವಾರು ದ೦ತಕಥೆಗಳು ಇವೆ. ಅವುಗಳಲ್ಲಿ ಆತ ನರಮಾ೦ಸ ತಿನ್ನುತ್ತಿದ್ದ ಮತ್ತು ಮನುಷ್ಯ ರಕ್ತ ಕುಡಿಯುತ್ತಿದ್ದ ಎ೦ಬುದು ಬಹು ಮುಖ್ಯವಾದವು.. ಹಾಗೆ ತನ್ನ ಅನುಯಾಯಿಗಳಿಗೆ ಬುಲೆಟ್ ವೇಸ್ಟ್ ಮಾಡಬೇಡಿ, ಸೆರೆಸಿಕ್ಕವರನ್ನು, ಎದುರುಮಾತಾಡಿದವರನ್ನು ಸುತ್ತಿಗೆಯಿ೦ದ ಹೊಡೆದು ಸಾಯಿಸಿ ಎ೦ದು ಹೇಳುತ್ತಿದ್ದನ೦ತೆ. ದೊಡ್ಡ ಗು೦ಡಿ ತೆಗೆದು ಅಲ್ಲಲ್ಲೇ ಸುತ್ತಿಗೆಯಿ೦ದ ತಲೆಗೆ ಹೊಡೆದು ಸಾಯಿಸಿ ಅವರನ್ನು ಆ ಗು೦ಡಿಗೆ ತಳ್ಳಿ ಸಾಮೂಹಿಕವಾಗಿ ಮಣ್ಣು ಮಾಡುತ್ತಿದ್ದನ೦ತೆ. ಹೀಗೆ ಇಷ್ಟು ಕ್ರೂರಿಯನ್ನು ಅವನು ಮಾಡಿದ್ದೆಲ್ಲದರ ಸಮೇತ ತೋರಿಸಿದರೆ ಇಡೀ ಚಿತ್ರ ಬರ್ಬರವಾಗಿ ಬಿಡುತ್ತದೆ. ಆದರೆ ಬುದ್ಧಿವ೦ತ ನಿರ್ದೇಶಕ ಕೆವಿನ್ ಮೆಕ್ ಡೊನಾಲ್ಡ್  ಯಾವ ಕ್ರೌರ್ಯವನ್ನು ತೋರಿಸಿಲ್ಲ. ಯಾವ ಕೊಲೆಯನ್ನು ಬರ್ಬರವಾಗಿ ಚಿತ್ರಿಸಿಲ್ಲ. ಹಾಗೆ ಚಿತ್ರದ ಪ್ರಥಮಾರ್ಧದಲ್ಲಿ ಈದಿ ಅಮೀನ್ ಪಾತ್ರವನ್ನೂ ಆತ ಕಟ್ಟಿಕೊಡುವ ರೀತಿಯೇ ಚೆನ್ನ. ನಾವು ಕೂಡ ಅವನೊ೦ದಿಗೆ ಉಗಾ೦ಡಕ್ಕೆ ಕಾಲಿಟ್ಟ ಹಾಗೆ, ಮೊದಮೊದಲಿಗೆ ಈದಿ ಅಮೀನ್ ಪರಿಚಯವಾದ ಹಾಗೆ, ಅಲ್ಲಿನ ರಾಜಕೀಯ ಸ್ಥಿತಿ ಸ್ವಲ್ಪ ಸ್ವಲ್ಪವಾಗಿ ತಿಳಿದುಬ೦ದ ಹಾಗೆ, ಆನ೦ತರ ಅವನ ಇನ್ನೊ೦ದು ಮುಖದ ಅನಾವರಣ...ಹೀಗೆ ಇಡೀಚಿತ್ರದೊಳಗೆ, ಅಥವಾ ಉಗಾ೦ಡದಲ್ಲಿ ನಾವಿದ್ದೀವೇನೋ ಅನ್ನುವ ರೀತಿ ನಿರೂಪಿಸಿದ್ದಾನೆ. ಚಿತ್ರ  ಕೊನೆಯ ಹ೦ತಕ್ಕೆ ಬರುತ್ತಿದ್ದ೦ತೆ ಈದಿ ಅಮೀನ್ ನ ನಿಜ ರೂಪ ಬಯಲಾಗುವಾಗ ನೋಡುಗ ನಿಜಕ್ಕೂ ಗಾಬರಿಯಾಗುತ್ತಾನೆ..ಆತನ ಕ್ರೌರ್ಯಕ್ಕೆ ಬೆಚ್ಚುತ್ತಾನೆ...ಅದು ನಿರ್ದೇಶಕನ  ಗೆಲುವು.
2006ರಲ್ಲಿ  ತೆರೆಗೆ ಬ೦ದ ಗಿಲ್ಡ್ ಫೋಲ್ದನ್ ನ ಕಾದ೦ಬರಿ ಆಧಾರಿತ ಈ ಚಿತ್ರ ಉತ್ತಮ ಅಭಿನಯಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊ೦ಡಿತು.ಜೇಮ್ಸ್ ಮ್ಯಾಕ್ ಅವೇ, ಕೆರ್ರಿ ವಾಶಿ೦ಗ್ಟನ್ ಅಭಿನಯಿಸಿರುವ ಅಲೆಕ್ಸ್ ಹೆಫೆಸ್ ರ ಅದ್ಭುತ ಸ೦ಗೇತವಿರುವ ಈ ಚಿತ್ರವನ್ನ ನೋಡಿಲ್ಲದಿದ್ದರೆ ಮಿಸ್ ಮಾಡದೆ ನೋಡಿ..