Wednesday, July 18, 2012

ವಿ'ಚಿತ್ರ'ಗಳು-3


ಕೆಲವೊಂದು ಚಿತ್ರಗಳನ್ನು ದಾಖಲೆಗಾಗಿಯೇ ತೆಗೆಯಲಾಗುತ್ತದೆ. ಮತ್ತದು ತಪ್ಪೆಂದು ಹೇಳಲಾಗದಿದ್ದರೂ ಒಂದು ಸಿನಿಮಾ ಹೆಚ್ಚಾಗಿ ತಾನು ಹೇಳಬೇಕೆಂದಿರುವ ವಿಷಯವನ್ನು ಅಚ್ಚುಕಟ್ಟಾಗಿ ಮನಮುಟ್ಟುವಂತೆ ಹೇಳಿದರೆ ಅದೇ ದೊಡ್ಡ ಸಾಧನೆ ಎನ್ನಬಹುದು. ಉತ್ತಮ ದಾಖಲೆ ಎಂದು ಅರ್ಥೈಸಬಹುದು. ಸಿನಿಮಾದ ಸಾರ್ಥಕತೆ ಇರುವುದು ಅಲ್ಲೇ. ಆದರೂ ಕೆಲವೊಮ್ಮೆ ಹೇಳಿದ್ದನ್ನು ಬೇರೆಬೇರೆಯಾಗಿ ಹೇಳಿ, ಒಂದರ್ಥದಲ್ಲಿ ಎಲ್ಲಾ ರೀತಿಯ ಕಥೆಗಳನ್ನು ತಮ್ಮ ಮಿತಿಯೊಳಗೆ ವಿಭಿನ್ನ ರೀತಿಯಲ್ಲಿ ನಿರೂಪಿಸಿ ಬೇಸರವಾದಾಗ, ಅಥವಾ ಅದೇಕೋ ಏಕತಾನತೆ ಎನಿಸಿದಾಗ ಚಿತ್ರಕರ್ಮಿಗಳು ಏನಾದರೊಂದು ವಿಶೇಷವನ್ನು ಸಿನಿಮಾರಂಗದಲ್ಲಿ ಮಾಡಲು ಪ್ರಯತ್ನಿಸುತ್ತಾರೆ. ಸರಳವಾಗಿ ಕಥೆ ಹೇಳುತ್ತೇನೆ ಕೇಳಿ. ಅವನೊಬ್ಬ ಬಡವ. ಅವನಿಗೀಗ ಕೆಲಸ ಸಿಕ್ಕಿದೆ. ಅದೂ ಕಾಡಿನ ರಕ್ಷಕ ಅಥವಾ ಫಾರೆಸ್ಟ್ ಗಾರ್ಡ್ ಆಗಿ. ಕೆಲಸಕ್ಕಾಗಿ ಹಾತೊರೆಯುವ ಆತ ಯಾವ ಕೆಲಸವಾದರೂ ಮಾಡಲು ಸಿದ್ಧನಿದ್ದರಿಂದ ಆ ಕೆಲಸವನ್ನು ಬಹಳ ಪ್ರೀತಿಯಿಂದ ಸ್ವೀಕರಿಸುತ್ತಾನೆ. ಅವನು  ನಿರ್ಜನವಾದ ಕಾಡೊಂದರಲ್ಲಿ ಗಾರ್ಡ್ ಆಗಿ ನೇಮಕಗೊಳ್ಳುತ್ತಾನೆ. ದೋಣಿಯೊಂದು ಆ ನಿರ್ಜನ ಕಾಡಿನಲ್ಲಿ ಅವನನ್ನು ಬಿಟ್ಟು ಹೊರಟುಹೋಗುತ್ತದೆ. ಈಗ ಇಡೀ ಕಾಡೊಳಗೆ ಅವನನ್ನು ಬಿಟ್ಟರೆ ಅವನ ಕಣ್ಣಿಗೆ ಬೀಳುವುದು ಪ್ರಾಣಿ ಪಕ್ಷಿ ಸರ್ಪಗಳು ಮಾತ್ರ. ನಾಯಕ ಅವುಗಳೊಂದಿಗೆ ತನ್ನ ಜೀವನ ಪ್ರಾರಂಭಿಸುತ್ತಾನೆ. ಕೆಲವೇ ದಿನಗಳಲ್ಲಿ ತನ್ನ ಒಂಟಿತನ ಮರೆಯುತ್ತಾನೆ. ಅಷ್ಟರಲ್ಲಿ ಅಲ್ಲಿ ತಾನೊಬ್ಬನೇ ಇಲ್ಲ ಎಂಬ ಗುಮಾನಿ ಮೂಡಲು ಪ್ರಾರಂಭಿಸುತ್ತದೆ..ಮುಂದೆ..?
ಇದು 2001 ರಲ್ಲಿ ಏಕನಟನಿದ್ದ ಕಾರಣಕ್ಕೆ ಗಿನ್ನೆಸ್ ದಾಖಲೆ ಸೇರಿದ ಮಳಯಾಳಮ್ ಚಿತ್ರ ದಿ ಗಾರ್ಡ್‌ನ ಕಥೆ. ಕಳಾಭವನ್ ಮಣೀ ಅಭಿನಯದ ಈ ಚಿತ್ರದ ನಿರ್ದೇಶಕ ಹಕೀಮ್ ರಾಥರ್. ಯಾವುದೇ ದಾಖಲೆಯ ಮನ್ನಣೆಗೆ ಪಾತ್ರವಾದ ಸಿನಿಮಾಗಳಲ್ಲಿರುವಂತೆಯೇ ಈ ಚಿತ್ರದಲ್ಲೂ ಕೆಲವೊಂದು ಋಣಾತ್ಮಕ ಅಂಶಗಳಿವೆ. ಒಬ್ಬನೇ ನಟ ಮತಾಡುವುದು, ಓಡಾಡುವುದು ಮತ್ತು ಹೆಚ್ಚೆಚ್ಚು ಘಟನೆಗಳು ನಡೆಯದಿರುವುದು ನೋಡುಗರಿಗೆ ಬೋರ್ ತರಿಸುತ್ತದೆ. ಇಲ್ಲಿ ನಿರ್ದೇಶಕ ಹಕೀಮ್ ಒಂದಷ್ಟು ಬುದ್ದಿವಂತಿಕೆ ಮೆರೆದಿದ್ದಾರೆ. ಅದೇನೆಂದರೆ ನಾಯಕನಾಗಿ ಕಲಾಭವನ್ ಮಣಿಯನ್ನು ಆಯ್ಕೆ ಮಾಡಿರುವುದು. ಈ ಕಲಾವಿದನ ವಿಶೇಷತೆಯೆಂದರೆ ತುಂಬಾ ಒಳ್ಳೆಯ ಅಣುಕು ಕಲಾವಿದ. ಆದ್ದರಿಂದ ಅರ್ಧ ಸಿನಿಮಾ ಆತನ ಅಣುಕು ಅಭಿನಯ, ಸಂಭಾಷಣೆಗಳಿಂದ ಸಹನೀಯವೆನಿಸುತ್ತದೆ. ಇದರೊಟ್ಟಿಗೆ ಛಾಯಾಗ್ರಹಣ ಈ ಚಿತ್ರದ ಇನ್ನೊಂದು ಗಮನಾರ್ಹ ಅಂಶ. ಅಂದಹಾಗೆ ಈ ಚಿತ್ರದಲ್ಲಿ ಹಾಡುಗಳೂ ಇವೆ.
ಕುತೂಹಲವಿದ್ದರೆ ಮೋಸರ್‌ಬೇರ್ ಕಂಪನಿಯ ಡಿವಿಡಿಗಳು ಲಭ್ಯವಿದೆ. ಒಮ್ಮೆ ನೋಡಬಹುದು.
ಇದೇ ನಿಟ್ಟಿನಲ್ಲಿ ಇನ್ನು ಹೆಸರಿಸಬೇಕಾದ ಸಿನಿಮಾಗಳೆಂದರೆ ಕನ್ನಡದ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಶಾಂತಿ, ಸುನೀಲ್ ದತ್ ನಟಿಸಿ ನಿರ್ದೇಶಿಸಿದ್ದ ಯಾದೇ. 2004 ರಲ್ಲಿ ಬಿಡುಗಡೆಯಾದ ಶಾಂತಿ ಚಿತ್ರದಲ್ಲಿ ಭಾವನ ಮುಖ್ಯಭೂಮಿಕೆಯಲ್ಲಿದ್ದರು. ಕಲಾವಿದೆಯೊಬ್ಬಳ ಜೀವನದ ಕಥೆ ಇದಾಗಿತ್ತು. ಹಾಗೆ ಯಾದೇ ಚಿತ್ರದಲ್ಲಿ ಕೇವಲ ಇಬ್ಬರು ಕಲಾವಿದರು ಮಾತ್ರ ನಟಿಸಿದ್ದರು. ಅದರಲ್ಲೂ ಸುನಿಲ್ ದತ್ ಬಿಟ್ಟರೆ ಇನ್ನೊಂದು ಪಾತ್ರಧಾರಿ ನರ್ಗೀಸ್ ದತ್  ನೆರಳು ಮಾತ್ರ ಸಿನಿಮಾದಲ್ಲಿತ್ತು. ಈ ಚಿತ್ರ 1954ರಲ್ಲಿ ತೆರೆಗೆ ಬಂದು ಗಿನ್ನೆಸ್ ದಾಖಲೆಯ ಹಿರಿಮೆಯನ್ನು ತನ್ನದಾಗಿಸಿಕೊಂಡಿತ್ತು. ಹಾಗೆ 2010ರಲ್ಲಿ ತೆರೆಗೆ ಬಂದ ಬರೀಡ್ ಚಿತ್ರವೂ ಕೇವಲ ಒಬ್ಬನೇ ಒಬ್ಬ ಪ್ರಮುಖ ಪಾತ್ರಧಾರಿಯನ್ನು ಹೊ೦ದಿತ್ತು.ಅದು ಒ೦ದೆ ಸ್ಥಳದಲ್ಲಿ ಕೂಡ ಚಿತ್ರಿಸಲಾಗಿತ್ತು.


No comments:

Post a Comment