Saturday, June 4, 2016

ಗೋದಿ ಬಣ್ಣ ಸಾಧಾರಣ ಮೈಕಟ್ಟು-ಚಿತ್ರವಿಮರ್ಶೆ

ಮಾತಿಗೆ ಮೊದಲೇ ಹೇಳಬೇಕೆಂದರೆ ಇದೊಂದು ಭಾವಪೂರ್ಣ ಚಿತ್ರ. ಇಡೀ ಚಿತ್ರದ ತುಂಬಾ ನೋಡುಗನನ್ನು ಆವರಿಸಿಕೊಳ್ಳುವುದು ಭಾವುಕತೆ. ಈವತ್ತಿನ ಬ್ಯುಸಿ ಜಗತ್ತಿನ ಮಗ, ಅರಳುಮರಳು ಖಾಯಿಲೆಯ ಅಪ್ಪ ಇವರ ನಡುವಣ ಸಂಬಂಧಗಳ ಸೂಕ್ಷ್ಮಗಳ ಜೊತೆಗೆ ಒಂದಷ್ಟು ಥ್ರಿಲ್ಲರ್ ಅಂಶಗಳನ್ನು ಬೆರೆಸಿರುವ ಚಿತ್ರವಿದು. ಹಾಗಾಗಿ ಒಂದೊಳ್ಳೆ ಕೌಟುಂಬಿಕ ಚಿತ್ರವನ್ನು ನೋಡಬೇಕೆನ್ನುವ ಹಗುರ ಮನದ ನೋಡುಗರಿಗೆ ಹೇಳಿ ಮಾಡಿಸಿದ ಚಿತ್ರವಿದು.
ಚಿತ್ರದ ಕತೆ ಸಾಧಾರಣವಾದದ್ದೆ. ಅಲ್ಜಮೈರ್ ಖಾಯಿಲೆಯ ತಂದೆಯನ್ನು ಮನೆಯಲ್ಲಿಟ್ಟುಕೊಳ್ಳಲಾಗದ ಅನಿವಾರ್ಯ ಪರಿಸ್ಥಿತಿಯಿಂದಾಗಿ ಆತನನ್ನು ಸರ್ಕಾರೇತರ ಸಂಸ್ಥೆಗೆ ಸೇರಿಸುತ್ತಾನೆ ಶಿವ, ಅಥವಾ ಈಗಾಗಲೇ ಸೇರಿಸಿದ್ದಾನೆ. ತಂದೆಯನ್ನು ನೋಡಲು ಬಂದು ಮತ್ತೆ ಅವನನ್ನು ವಾಪಸ್ಸು ಕರೆತರುವಾಗ ತನ್ನದೇ ನಿರ್ಲಕ್ಷ್ಯದಿಂದಾಗಿ ತಂದೆ ವೆಂಕೋಬರಾವ್ ತಪ್ಪಿಸಿಕೊಳ್ಳುವಂತಾಗುತ್ತದೆ. ಸಂಸ್ಥೆಯ ತಾಯಿಗರುಳಿನ ವೈದ್ಯೆ ಸಹನಾ ಜೊತೆಗೆ ತಂದೆಯನ್ನು ಹುಡುಕುತ್ತಾ ಸಾಗುವ ಶಿವನಿಗೆ ಅಪ್ಪನ ಗೈರುಹಾಜರಿಯಲ್ಲಿ ಅಪ್ಪ ಸಿಗುತ್ತಾ ಹೋಗುತ್ತಾನೆ. ತಪ್ಪಿಸಿಕೊಂಡ ತಂದೆ ಸಿಗುತ್ತಾರಾ..?
ಚಿತ್ರ ಪ್ರಾರಂಭದಿಂದಲೇ ಮಂದಗತಿಯಲ್ಲಿ ಪಯಣ ಆರಂಭಿಸುತ್ತದೆ.. ನಿರ್ದೇಶಕರ ಸ್ಕ್ರಿಪ್ಟ್ ರಚನೆ ಮತ್ತು  ನಿರೂಪಣೆ ಯಾವುದೇ ಧಾವಂತವಿಲ್ಲದೆ ಕತೆ ಹೇಳುತ್ತಾ ಸಾಗುತ್ತದೆ. ಚಿಕ್ಕ ಚಿಕ್ಕ ಅಂಶಗಳನ್ನು ಜೋಡಿಸುತ್ತಾ ಚಿತ್ತಾರ ಬಿಡಿಸುತ್ತಾ ಸಾಗುವ ನಿರ್ದೇಶಕರು ತಮ್ಮ ಪಾತ್ರಗಳ ಆಯ್ಕೆಯಲ್ಲಿಯೇ ಅರ್ಧ ಗೆದ್ದಿದ್ದಾರೆ.  ಸಿನಿಮಾದ ಸಿದ್ಧ ಸೂತ್ರಗಳನ್ನು ಬದಿಗಿಟ್ಟು ಒಂದು ಕಾದಂಬರಿ ರೀತಿಯಲ್ಲಿ ಕತೆ ಹೇಳುತ್ತಾ ಸಾಗುತ್ತಾರೆ. ಒಮ್ಮೊಮ್ಮೆ ಏನಾಗುತ್ತದೆಯೋ ಎನ್ನುವ ಕಾತುರ ಕಳವಳ ಉಂಟು ಮಾಡುವ ಚಿತ್ರಕತೆ ಅಲ್ಲಲ್ಲಿ ಆದ್ರಗೊಳಿಸುತ್ತಾ ಸಾಗುತ್ತದೆ.
ಚಿತ್ರದ ಮುಖ್ಯಭೂಮಿಕೆಯಲ್ಲಿ ಅನಂತ ನಾಗ್ ನಟಿಸಿದ್ದಾರೆ. ಅವರ ಅನುಭವ, ಅವರ ವಯೋಮಾನಕ್ಕೆ ಎರಡೂ ಕತೆಯ ಪಾತ್ರಕ್ಕೆ ಸಾಥ್ ನೀಡಿರುವುದರಿಂದ ಅವರ ಅಭಿನಯದ ಬಗ್ಗೆ ಹೇಳಲು ಅವರು ಏನನ್ನೂ ಉಳಿಸುವುದಿಲ್ಲ. ನಾಯಕನಾಗಿ ರಕ್ಷಿತ್ ಶೆಟ್ಟಿ, ನಾಯಕಿಯಾಗಿ ಶ್ರುತಿಹರಿಹರನ್ ಅಚ್ಚುಕಟ್ಟಾಗಿ ಅಭಿನಯಿಸಿದ್ದರೂ ವಸಿಷ್ಠ ಸಿಂಹ ಗಮನ ಸೆಳೆಯುತ್ತಾರೆ. ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಸಿನಿಮಾಕ್ಕೆ ಪೂರಕವಾಗಿದೆ. ತಮ್ಮ ಮೊದಲ ಚಿತ್ರದಲ್ಲಿಯೇ ಒಂದು ಕೌಟುಂಬಿಕ ಕತೆಯನ್ನು ಕೈಗೆತ್ತಿಕೊಂಡಿರುವ ಹೇಮಂತ್ ಮೆಚ್ಚುಗೆ ಗಳಿಸುತ್ತಾರೆ.

ಜೊತೆಗೆ ಇಡೀ ಚಿತ್ರದಲ್ಲಿ ಒಂದೇ ಭಾವ ಸಾಗುತ್ತದೆ. ಹಾಗಾಗಿ ಒಂದಷ್ಟು ಹಾಸ್ಯ ಮನರಂಜನೆ ಇತ್ಯಾದಿ ಇತ್ಯಾದಿ ಬಯಸುವ ಹಾಡು ಕುಣಿತ ಅಪೇಕ್ಷೆ ಪಡುವ ಅಥವಾ ಜಾಲಿ ಸಿನಿಮಾ ಬೇಕೆನ್ನುವ ಪ್ರೇಕ್ಷಕ ನೀವಾಗಿದ್ದರೆ ಗೋದಿಬಣ್ಣ ಸಾಧಾರಣ ಎನಿಸುವ ಸಾಧ್ಯತೆ ಇದೆ. ಅಲ್ಲಲ್ಲಿ ತುಸುವೇ ನಿಧಾನ ಎನಿಸುವ ಸಾಧ್ಯತೆಯೂ ಇಲ್ಲದಿಲ್ಲ. ಅದಷ್ಟನ್ನು ಪಕ್ಕಕ್ಕಿಟ್ಟು ಹೊಸಬರ ಪ್ರಯತ್ನವನ್ನು ಶ್ಲಾಘಿಸುವ ಮನಸ್ಸಿದ್ದರೆ ಗೋದಿಬಣ್ಣ ನಿಮಗೆ ಮೋಸ ಮಾಡುವುದಿಲ್ಲ.

3 comments:

 1. ರಕ್ಷಿತ್ ಶೆಟ್ಟಿ ತಮ್ಮ ಚಿತ್ರಗಳ ಆಯ್ಕೆಯಲ್ಲಿ ಗುಣಮಟ್ಟವನ್ನು ನೋಡುತ್ತಿರುವುದು ನಿಜಕ್ಕೂ ಖುಶಿ ಕೊಡುವ ವಿಚಾರ. ಹೀರೋಯಿಸಂ ಪಾತ್ರಗಳನ್ನು ಪಕ್ಕಕ್ಕಿಟ್ಟು ನಟನೆಗೆ ಆದ್ಯತೆ ಕೊಡುವ ಅವರ ಬುದ್ಧಿ ಉಳಿದವರಿಗೂ ಬರಲಿ ಅನ್ನುವ ಆಶಯ ನನ್ನದು. ಅನಂತ್ ನಾಗ್ ರಂತಹ ಮೇರು ನಟ ಕನ್ನಡಕ್ಕೆ ದೊರಕಿದ್ದು ನಮ್ಮ ಪುಣ್ಯ. ಅವರನ್ನು ಚಿತ್ರರಂಗ ಇನ್ನೂ ಉತ್ತಮವಾಗಿ ಬಳಸಿಕೊಂಡರೆ ಚಿತ್ರರಂಗಕ್ಕೂ ಕಲಾಭಿಮಾನಿಗಳಿಗೂ ಲಾಭವೇ.ಉತ್ತಮ ಚಿತ್ರ ನೀಡಿರುವ ನಿರ್ದೇಶಕರಿಗೆ ಅಭಿನಂದನೆಗಳು, ಚಿತ್ರ ಗೆಲ್ಲಲಿ... ಉತ್ತಮ ವಿಮರ್ಶೆ ರವೀ..

  ReplyDelete
 2. This comment has been removed by the author.

  ReplyDelete
 3. ಸುಂದರ ಚಿತ್ರ. ಮನಸ್ಸು ಭಾರವಾಗುತ್ತಲೇ ಮತ್ತೆ ಹಗುರಾಗುತ್ತಾ ಸಾಗುವ ಓಟ ಇಷ್ಟವಾಗುತ್ತದೆ..

  ಚಿಕ್ಕದಾಗಿ ಚೊಕ್ಕವಾಗಿರುವ ಚಿತ್ರದ ವಿಮರ್ಶೆ ಚೆನ್ನಾಗಿದೆ

  ReplyDelete