Tuesday, September 25, 2012

ಬರ್ಫೀ ನೋಡಿದಿರಾ?


ಬರ್ಫೀ ನೋಡಿಲ್ಲವಾದರೆ ಒಮ್ಮೆ ನೋಡಿ. ಮರ್ಫೀ ಅಥವಾ ಬರ್ಫೀ ನಾಯಕನ ಹೆಸರು. ಮೂಕ ಮತ್ತು ಕಿವುಡ. ಅದ್ದರಿಂದ ಇಡೀ ಸಿನೆಮಾದಲ್ಲಿ ನಾಯಕನಿಗೆ ಮಾತೆ  ಇಲ್ಲ .ಆದರೆ ಆತ ತನ್ನ ಆಂಗಿಕ ಅಭಿನಯದಿಂದ , ಅದ್ಭುತವಾದ ಮುಗುಳ್ನಗೆಯಿಂದ ಅವನ ಭಾವನೆಯನ್ನ , ಮಾತುಗಳನ್ನು ಮಾತಿಗಿಂತ ಪರಿಣಾಮಕಾರಿಯಾಗಿ ಹೇಳುತ್ತಾನೆ. ಸಿನೆಮಾ ನೋಡುತ್ತಾ ನೋಡುತ್ತಾ ಮಾತಿಲ್ಲ ಎನ್ನುವ ಭಾವ ಮನಸಿಗೆ ಬರುವುದೇ ಇಲ್ಲ. ಕಥೆ, ನಿರೂಪಣೆ, ಮುಖ್ಯವಾಗಿ ಅಭಿನಯ ನಮ್ಮನ್ನು ಬೇರೇನೂ ಯೋಚಿಸಲು ಬಿಡದೆ ಹಾಗೆ ಕುರ್ಚಿಗೆ ಕೂರಿಸಿಬಿಡುತ್ತದೆ. ಇಲ್ಲಿ ಪ್ರಿಯಾಂಕ ಚೋಪ್ರರದು  ಕೂಡ ತುಂಬಾ ಭಿನ್ನವಾದ ಪಾತ್ರ. ಇಬ್ಬರೂ ಕೊನೆಯಲ್ಲಿ ಪುನರ್ಮಿಲನವಾಗುವ ಸನ್ನಿವೇಶ ನಿಮ್ಮ ಕಣ್ಣಲ್ಲೊಂದು ಹನಿ ತರಿಸದಿದ್ದರೆ ಕೇಳಿ. ಹಾಗಂತ ಅದು ನೋವಿನ ಹನಿಯಲ್ಲ ..ಆನಂದ ಭಾಷ್ಪ. ಹೌದು ಕೆಲವು ಸಿನೆಮಾಗಳ ಬಗ್ಗೆ ಬರೆಯಲು ಕುಳಿತಾಗಲೆಲ್ಲಾ ಆ ಸಿನೆಮಾದ ಭಾವ ನನ್ನನ್ನು ಆವರಿಸಿಬಿಡುತ್ತದೆ. ಏನೇ ಬರೆದರೂ ಅದು ಸಿನೆಮಾಕ್ಕೆ ಸಾಟಿಯಿಲ್ಲವೇನೂ ಅನಿಸಿಬಿಡುತ್ತದೆ . ಹಾಗಂತ ಸುಖಾಸುಮ್ಮನೆ ಹೊಗಳಿದರೂ ಅತೀ ಎನಿಸುತ್ತದೆ. ಅಂತಹ ಒಂದು ಸಿನೆಮಾ ಬರ್ಫೀ. ಮೂರು ಮುಖ್ಯ ಪಾತ್ರಗಳು. ಒಂದು ಅತ್ಯುತ್ತಮ ಪ್ರೇಮಕಥೆ ಬರ್ಫೀ ಚಿತ್ರದ್ದು. ಕಿವುಡ ಮೂಕ ಬರ್ಫೀಯ ಮೊದಲ ಪ್ರೀತಿ ಭಗ್ನವಾಗುತ್ತದೆ. ಆದರೆ ಆತನ ಆತ್ಮ ವಿಶ್ವಾಸ ಭರವಸೆ ನಮ್ಮಲ್ಲಿ ಅಚ್ಚರಿ ಮೂಡಿಸುತ್ತದೆ. ತನ್ನ ಅವಗುಣಗಳನ್ನು ಚೆನ್ನಾಗಿಯೇ ಮನವರಿಕೆ ಮಾಡಿಕೊಂಡು, ನಾಯಕಿಯನ್ನು ನಗುನಗುತ್ತಲೇ ಬೀಳ್ಕೊಡುತ್ತಾನೆ .ತಂದೆಯ ಆಪರೇಷನ್ ಗೆ ಲಕ್ಷಲಕ್ಷ ಹಣದ ಅವಶ್ಯಕತೆ ಬಂದಾಗ ಬರ್ಫೀ ಬ್ಯಾಂಕ್  ದರೋಡೆ ಮಾಡುವ ವಿಫಲ ಪ್ರಯತ್ನ ಮಾಡುತ್ತಾನೆ .. ಆನಂತರ ತನ್ನ ಬಾಲ್ಯದ ಗೆಳತಿ  ಪ್ರಿಯಾಂಕ ಚೋಪ್ರಳನ್ನು ಅಪಹರಣ ಮಾಡುವ ನಿರ್ಧಾರ ಕೈಗೊಳ್ಳುತ್ತಾನೆ. ಮುಂದೆ ಅ ನಿರ್ಧಾರವೇ  ಬರ್ಫೀಯ ಜೀವನದಲ್ಲಿ ಅನೂಹ್ಯ ಘಟನೆಗಳಿಗೆ ಕಾರಣವಾದರೆ ಪ್ರೇಕ್ಷಕರಿಗೆ ಒಂದು ಅದ್ಭುತ ಅನುಭವ ಕೊಡುತ್ತದೆ.
ಸಿನೆಮಾದುದ್ದಕೂ ನಗಿಸುವ , ನಗಿಸುತ್ತಲೇ ಕಣ್ತುಂಬಿಸುವ ನಿರ್ದೇಶಕ  ಅನುರಾಗ್ ಬಸುಗೆ ಒಂದು ಸಲ್ಯೂಟ್.
 ಕುಚ್ ಥೋ ಹೈ  ಚಿತ್ರದ ಮೂಲಕ ಬೆಳಕಿಗೆ ಬಂದ ನಿರ್ದೇಶಕ ಅನುರಾಗ್ ಬಸು.ಆನಂತರ 'ಸಾಯಾ' ನಿರ್ದೇಶಿಸಿದರೂ ಅದು  ನಿರೀಕ್ಷಿಸಿದಷ್ಟು ಚೆನ್ನಾಗಿರಲಿಲ್ಲ ..ಇವೆರೆಡು ಚಿತ್ರಗಳೂ ವಿದೇಶಿ ಸಿನಿಮಾಗಳಿಂದ ಸ್ಪೂರ್ತಿ ಪಡೆದ ಚಿತ್ರಗಳೇ..ಮೊದಲ ಚಿತ್ರ ಕುಚ್ ತೋ ಹೈ ಹಾಲಿವುಡಿನ ಐ  ನೋ ವಾಟ್ ಯೂ  ಡಿಡ್  ಲಾಸ್ಟ್ ಸಮ್ಮರ್ ಚಿತ್ರದಿಂದ ಪ್ರೆರೇಪಣೆಯಾದರೆ 'ಸಾಯ ' ಡ್ರಾಗನ್ ಪ್ಲೈ ಚಿತ್ರದ ನಕಲು.ಆಮೇಲೆ ಬಂದ, ಅತಿ ದೊಡ್ಡ ಯಶಸ್ಸು ಕಂಡ ಮರ್ಡರ್ ಕೂಡ ಖ್ಯಾತ ನಿದೇಶಕ ಅಡ್ರಿಯನ್ ಲಿನ್  ನಿರ್ದೇಶನದ ಅನ್ ಪೈತ್ ಫುಲ್   ಚಿತ್ರದಿಂದ ಸ್ಪೂರ್ತಿಗೊಂಡಿದ್ದು. ಅದರೂ ಅದನ್ನು ಇನ್ನಷ್ಟು ರಂಜಕವಾಗಿ, ಶೃಂಗಾರಮಯವಾಗಿ ತೋರಿಸಿದ್ದು ಅನುರಾಗ್ ಬಸುನ ಹೆಗ್ಗಳಿಕೆ ..ಆನಂತರ 1981ರ ಆರ್ಥರ್ ಚಿತ್ರವನ್ನು ಭಾರತೀಯ ತೆರೆಗೆ ತುಮ್ಸಾ ನಹಿ ದೇಖ ಎನ್ನುವ ಹೆಸರಲ್ಲಿ ಅನುವಾದಿಸಿದರೂ ಅದೂ ಕೂಡ ಗಮನೀಯ ಪ್ರಯತ್ನ ಎನಿಸಲಿಲ್ಲ. ಆನಂತರ ಬಂದ ಗ್ಯಾಂಗ್ ಸ್ಟರ್ ವಿಮರ್ಶಕರಿಂದಲೋ ಪ್ರೇಕ್ಷಕರಿಂದಲೂ ಮೆಚ್ಚಿಸಿಕೊಂಡ ಚಿತ್ರ. ನಿಜಕ್ಕೂ ಈ ಸಿನಿಮಾ ಒಂದು ಒಳ್ಳೆಯ ಪ್ರಯತ್ನ ಎನ್ನಬಹುದು ..ಅಪಾರ್ಟ್ ಮೆಂಟ್[1960], ಪ್ಲೇಯಿಂಗ್ ಬೈ ಹಾರ್ಟ್[1998], ಇನ್ನೋಸೆನ್ಸ್[2000], ಡೇವಿಡ್ ಲೀನ್ ನಿರ್ದೇಶನದ ಬ್ರೀಫ್ ಎನ್ಕೌಂಟರ್ [1945] ನಾಲ್ಕು ಚಿತ್ರಗಳನ್ನಾಧರಿಸಿದ ಚಿತ್ರವೆ ಲೈಫ್ ಇನ್ ಅ ಮೆಟ್ರೋ. ನನಗೆ ಸಿನಿಮಾ ನೋಡುತ್ತಾ ನೋಡುತ್ತಾ ಇದು ಆ ಸಿನಿಮಾದ್ದಲ್ಲವಾ..ಇದು ಈ ಸಿನಿಮಾದ್ದಲ್ಲವಾ ? ಎನಿಸಲಿಕ್ಕೆ ಶುರುವಾದರೂ ಆ ನಾಲ್ಕು ಕಥೆಗಳನ್ನು   ಬಸು ಜೋಡಿಸಿದ ರೀತಿಗೆ ನಿಜಕ್ಕೂ ಮಾರುಹೋಗಿದ್ದೆ.ಎಲ್ಲೂ ಯಾವುದೂ ಅತಿಯಾಗದಂತೆ ಬಸು ಚಿತ್ರಕಥೆಯಲ್ಲಿ
  ಗಮನಹರಿಸಿರುವುದಕ್ಕೆ ಈ ಚಿತ್ರವೇ ಸಾಕ್ಷಿ. ರೀಮೇಕ್ ಆಗಲಿ ಅಥವಾ  ಸ್ಪೂರ್ತಿಯಿಂದ ತಯಾರಾದ ಚಿತ್ರವೇ ಆಗಲಿ ಅದು ಫ್ರೇಮ್ ಟು  ಫ್ರೇಮ್ ಇದ್ದಾಗ ಬೇಸರವಾಗುವುದು ಸಹಜ. ಆದರೆ ಬುದ್ಧಿವಂತಿಕೆಯಿಂದ ಅದನ್ನು ನಮ್ಮ ನೆಲಕ್ಕೆ ಒಗ್ಗಿಸುವುದಿದೆಯಲ್ಲಾ ಅದು ಗ್ರೇಟ್ ಎಂದೇ ಹೇಳಬಹುದು.
 ಈಗ ಬರ್ಫೀ ಯಲ್ಲೂ ಹಲವಾರು ಸಿನೆಮಾಗಳ ದೃಶ್ಯಗಳನ್ನು  ಯಥಾವತ್ತು ನಕಲಿಸಿರುವುದನ್ನು ಕಾಣಬಹುದು....
ಅಂದಹಾಗೆ ತುಮ್ಸಾ ನಹೀ ದೇಖ ಎನ್ನುವ ಸಿನೆಮಾ ನಿರ್ದೇಶಿಸುವಾಗ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಸುಗೆ ವೈದ್ಯರು ಎರಡು ತಿಂಗಳಷ್ಟೇ ಬದುಕುವುದು ಎಂದು ಹೇಳಿದ್ದರಂತೆ ...ಆನಂತರ ಕೀಮೋಥೆರಪಿ ಯಾ ಸಹಾಯದಿಂದ ಬಸು ಗುಣಮುಖರಾದರು.
ಸಿನಿಮಾ ಪ್ರಶಸ್ತಿಗಳ ಜೊತೆಗೆ ಅಮೇರಿಕನ್ ಕಾನ್ಸೆರ್  ಸೊಸೈಟಿಯಿಂದ ಪ್ರಶಸ್ತಿ ಪಡೆದಿದ್ದಾರೆ ಅನುರಾಗ್ ಬಸು.

2 comments:

  1. Niha watched this movie..she was not very impressed ante..

    ReplyDelete
  2. ನಾನು ನೋಡಿದೆ. ಉತ್ತರಾರ್ಧವನ್ನು ಸ್ವಲ್ಪ ಮೊಟಕುಗೊಳಿಸಿದ್ದರೆ ಚೆನ್ನಾಗಿತ್ತು ಮತ್ತು ಉತ್ತರಾರ್ಧ ಮಾಮೂಲಿ ಬಾಲಿವುಡ್ ಕ್ಲೀಷೆ. Good in parts. ವಿಭಿನ್ನ ಪ್ರಯತ್ಯ.
    ಆಸ್ಕರ್ ಗೆ ಅರ್ಹವಲ್ಲ. ಗ್ಯಾ೦ಗ್ಸ್, ಪಾನ್ ಸಿ೦ಗ್ ತೋಮಾರ್ ಬಿಟ್ಟು ಬರ್ಫಿ ಯನ್ನು ಆಸ್ಕರ್ ಗೆ ನೋಮಿನೇಟ್ ಮಾಡಿದ್ದಾರೆ ಅ೦ದ್ರೆ ಆಸ್ಕರ್ ನೋಮಿನೇಷನ್ ಕಮಿಟಿಯ ಅಜ್ಞಾನ ಸಾಬೀತಾಗುತ್ತದೆ.

    ReplyDelete