Wednesday, April 17, 2013

ಒಮ್ಮೆ ಪರದೇಶಿ ನೋಡಿ...

ಬಾಲಾರ ಮತ್ತೊಂದು ಚಿತ್ರ ಪರದೇಶಿ ತೆರೆಗೆ ಬಂದಿದೆ. ಯಾವುದೇ ಘಟನೆಯ, ವಿಷಯದ ವಿಕ್ಷಿಪ್ತ ರೂಪವನ್ನು ತೆರೆದಿಡುವುದರಲ್ಲಿ ಬಾಲ ಎತ್ತಿದ ಕೈ. ಸಿನಿಮಾದ ವಿಷಯ ವಸ್ತು ಏನೇ ಇರಲಿ...ಕಥಾ ಹ೦ದರವನ್ನು ಮಾತ್ರ ನಾವು ನೀವು ಕಂಡಿಲ್ಲದ, ಅಥವಾ ಸಾಮಾನ್ಯ ದೃಷ್ಟಿಗೆ ನಿಲುಕದಿರುವ0ತಹ ರೀತಿಯಲ್ಲಿ ಹೆಣೆಯುವುದರಲ್ಲಿ ಬಾಲ ಸಿದ್ಧ ಹಸ್ತರು.ಇಷ್ಟು ದಿನ ತನ್ನದೇ ಆದ ಮಾರ್ಗದಲ್ಲಿ ಕಥೆ ಹೆಣೆಯುತ್ತಿದ್ದ ಬಾಲಾ ಈಗ ಒಂದು ಕಾಲಘಟ್ಟದ ಕಥೆಯನ್ನ ತಮ್ಮ ಚಿತ್ರಕ್ಕೆ ಆಯ್ದುಕೊಂಡಿದ್ದಾರೆ. ಅದು ಪರದೇಶಿಯ ಕಥೆ. ಹಾಗೆ ಇದು ಕಾದಂಬರಿ ಆಧಾರಿತ. ಇಂಗ್ಲಿಷಿನ ಪಾಲ್ ಹ್ಯಾರಿಸ್ ಡೇನಿಯಲ್ ರವರ ರೆಡ್ ಟೀ ಕಾದ೦ಬರಿಯನ್ನು ತಮಿಳು ಚಿತ್ರರಂಗಕ್ಕೆ ಒಗ್ಗಿಸಿದ್ದಾರೆ.
ಪರದೇಶಿ ಚಿತ್ರದ ಕಥೆ ಸ್ವಾತಂತ್ರ್ಯ ಪೂರ್ವದ ಕಥೆ. ಅಂದರೆ 1930ನೆ ಇಸವಿಯಲ್ಲಿ ಮದ್ರಾಸಿನಲ್ಲಿ ನಡೆಯುವ ಕಥೆ. ಒಂದು ಟೀ ಎಸ್ಟೇಟ್ ನ ಒಳಹೊರಗನ್ನು ಎತ್ತಿಹಿಡಿಯುವ ಕಥನ.. ಇಲ್ಲಿ ಇತರ ಬಾಲಾರ ಸಿನೆಮಾಗಳ ಅಂಶಗಳಾದ ಕ್ರೌರ್ಯ, ಬಂಡಾಯ, ಭೀಭತ್ಸ, ಅನ್ಯಾಯ, ಶೋಷಣೆ ಎಲ್ಲವೂ ಇವೆ. ಮಟ್ಟವು ತುಸು ಅತಿಯಾಗಿಯೇ ಇವೆ. ಆದರೆ ಇದು ನಿಜವಾಗಿ ನಡೆದ ಕಥೆ ಎಂಬ ಹಣೆಪಟ್ಟಿ ಹೊತ್ತುಕೊ೦ಡಿರುವುದರಿಂದ ಅದರ ಬಗ್ಗೆ ನಾವೇನೂ ಹೇಳಲಾಗುವುದಿಲ್ಲ.
ಇಡೀ ಚಿತ್ರವನ್ನ ಬಾಲಾ ಕಣ್ಣಮುಂದೆ ನಡೆಯುವ ತೆರನಾಗಿ ಚಿತ್ರೀಕರಿಸಿದ್ದಾರೆ. ಯಾವುದೂ ಸಿನಿಮೀಯ ಎನಿಸುವುದಿಲ್ಲ. ಹಾಗಾದರೆ ಇದೆಲ್ಲಾ ನಡೆದಿತ್ತಾ ಎಂಬ ಪ್ರಶ್ನೆಗೆ ಬಾಲಾ ಹೌದು ಎನ್ನುವ ಉತ್ತರವನ್ನೂ ಅವರದೇ ರೀತಿಯಲ್ಲಿ ಕೊಡುತ್ತಾರೆ. ಚಿತ್ರದ ಆರಂಭ, ನಾಯಕ ನಾಯಕಿಯರ ಸಮ್ಮಿಲನ, ವಲಸೆ, ಜೀವನ ನಿರ್ವಹಣೆಗಾಗಿ ಪಡುವ ಯಮಯಾತನೆ ಹೀಗೆ ಬಾಲಾ ಪ್ರತಿಯೊಂದನ್ನು ನಿಜವಾಗಿ ಮತ್ತು ಹಿಂದೆಂದೂ ಕಂಡಿರದ ರೀತಿಯಲ್ಲಿ ಅಂದರೆ ಸ್ವಂತಿಕೆಯ ದೃಶ್ಯಾವಳಿಗಳ ಮೂಲಕ ವಿಷದಪಡಿಸುತ್ತಾ ಹೋಗುತ್ತಾರೆ. ಹಾಗಾಗಿಯೇ ಚಿತ್ರ ತೀರಾ ಒರಿಜಿನಲ್ ಎನಿಸಿಕೊಳ್ಳುತ್ತದೆ. ಹಾಗೆ ಪಾತ್ರಧಾರಿಗಳು...ನಾಯಕ ನಾಯಕಿ ಬಿಡಿ, ಪೋಷಕ ಪಾತ್ರಧಾರಿಗಳು ಸಹನಟರುಗಳು ಎಲ್ಲರಿಂದಲೂ ಯಾವೊಂದು ಉದಾಸೀನವೂ ಇಲ್ಲದೆ ಅತೀ ಚಿಕ್ಕಾತಿಚಿಕ್ಕ ಪಾತ್ರವನ್ನೂ ನಿರ್ಲಕ್ಷಿಸದೆ ಅಭಿನಯ ತೆಗೆಸಿದ್ದಾರೆ. ಹಾಗಾಗಿಯೇ ಇಡೀ ಚಿತ್ರ ಬರೀ ಸಿನಿಮಾವಾಗದೆ ಕಣ್ಮುಂದೆ ನಡೆಯುವ ಜೀವಂತ ಕಥನದ ಭಾವವನ್ನು ಮುಲಾಜಿಲ್ಲದೆ ಕೊಡುತ್ತದೆ.
ಹಾಗಂತ ಸಿನೆಮಾದಲ್ಲಿ ಋಣಾತ್ಮಕ ಅಂಶವೇ ಇಲ್ಲವ ಎಂಬೊಂದು ಪ್ರಶ್ನೆ ಹಾಗೆ ತೂರಿ ಬಂದುಬಿಡಬಹುದು. ಮೊದಲನೆಯದಾಗಿ ಇದೊಂದು ಸತ್ಯ ಘಟನೆ ಮತ್ತು ವಸ್ತು/ವಿಷಯವೇ ವಿಕ್ಷಿಪ್ತವಾದದ್ದು. ಮನರಂಜನೆಗೆ ಸುಮ್ಮನೆ ಎರಡು ತಾಸು ಕಳೆಯುವುದಕ್ಕೆ ತಕ್ಕ ಸಿನೆಮಾವಲ್ಲ ಇದು.ಹಾಗಾಗಿ ಸಿನೆಮಾದಲ್ಲಿ ಅಲ್ಲಲ್ಲಿ ಸ್ವಲ್ಪವೇ ಸ್ವಲ್ಪ ಹಾಯ್ ಎನಿಸುವ ದೃಶ್ಯಯಗಳಿದ್ದರೂ ಅದನ್ನು ಕ್ರೌರ್ಯದ ಸರಕು ಮೆಟ್ಟಿ ನಿಂತುಬಿಟ್ಟಿದೆ. ಹಾಗಾಗಿ ಚಿತ್ರವನ್ನೂ ನೋಡುವಾಗ ನೋಡಾದ ಮೇಲೂ ವಿಷಾದ ಭಾವ ನಮ್ಮನ್ನಾವರಿಸಿಬಿಡುತ್ತದೆ.
ನೆನಪಿರಲಿ ಚಿತ್ರ ಕೊನೆ ದುರಂತಮಾಯವಾಗಿದೆ.
ಸುಮಾರು ಇನ್ನೂರಕ್ಕೂ ಹೆಚ್ಚು ಸಹನಟರು ಅಂದರೆ ಜೂನಿಯರ್ಸ್ ಇಲ್ಲಿ ನಟಿಸಿದ್ದಾರೆ. ಅಷ್ಟೂ ಜನರ ವೇಷ ಭೂಷಣವನ್ನ, ಕೇಶ ಶೈಲಿಯನ್ನು  ಮತ್ತು ಪ್ರಸಾದನವನ್ನು ಬಾಲಾ ಅದ್ಭುತವಾಗಿ ಭಾರಿ ಆಸಕ್ತಿಯಿಂದ, ಮುತುವರ್ಜಿಯಿಂದ  ಮಾಡಿಸಿದ್ದಾರೆ. ಹಾಗೆ ಚಿತ್ರದ ಅಂತಿಮ ದೃಶ್ಯಕ್ಕಾಗಿ ನಾಯಕಿ ಕೃಶಳಾಗಿರಬೇಕಾಗುತ್ತದೆ. ಬಾಲಾ ನಿಜಕ್ಕೂ ಆ ಪಾತ್ರಧಾರಿಯನ್ನು ದಿನಗಟ್ಟಲೆ ಉಪವಾಸ ಕೆಡವಿದ್ದರಂತೆ. ಹಾಗೆ ಚಿತ್ರದಲ್ಲೀ ಇನ್ನೊಂದು ಗಮನ ಸೆಳೆಯುವ ಅಂಶವೆಂದರೆ ಚಿತ್ರೀಕರಿಸಿದ ಸ್ಥಳಗಳು. ವಿಶೇಷವಾಗಿ ಹಸಿರು ಸಮೃದ್ಧ ಕಾಡುಗಳು...
ತಲೆಯಲ್ಲಿ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೆ ಸುಮ್ಮನೆ ಪರದೇಶಿ ನೋಡಿಬಿಡಿ. ಹಿಂಡುವ ಮನಸ್ಸಿನೊಂದಿಗೆ ಬಾಲಾರ ಶ್ರಮ, ದೃಷ್ಟಿಕೋನಕ್ಕೆ ಒಂದು ಶಹಬ್ಬಾಸ್ ಕೊಟ್ಟುಬಿಡಿ.

2 comments:

  1. ತೀರ ಇತ್ತೀಚಿಗೆ ನಾನು ಆಸೆ ಪಟ್ಟು ನೋಡಿದ ಸಿನಿಮ ಪರದೇಶಿ.. ನಿಜಕ್ಕೂ ಕರುಳು ಹಿಂಡುತ್ತದೆ. ಚಿತ್ರದ ಯಾವ ಸನ್ನಿವೇಶಗಳೂ ಸಿನಿಮೀಯ ಅನ್ನಿಸೊಲ್ಲ. ಅಧರ್ವ ನಿಜಕ್ಕೂ ಅಭಿನಯದಿಂದ ಆಪ್ತವಾಗ್ತಾ ಹೋಗ್ತಾರೆ.. ಅವರ ಮಿಕ್ಕೆಲ್ಲ ಚಿತ್ರಕ್ಕಿಂತಲೂ ಪ್ರಬುದ್ಧ ಅನ್ನಿಸ್ತಾರೆ. ಮೊದಲಾರ್ದದ ಅಂತಿಮ ಅರ್ಧ ಗಂಟೆಯವರೆಗಿನ ಚಿತ್ರದ ತಾಜಾತನ, ಲವಲವಿಕೆ ಮುದ ನೀಡುತ್ತದೆ. ಚಿತ್ರದ ಕೊನೆಗೊಂದು ಕ್ರಾಂತಿ ಆಗತ್ತೆ.. ಎಲ್ಲರಿಗೂ ಬಿಡುಗಡೆ ಸಿಗತ್ತೆ.. ನಾಯಕ ಸಿಡಿದೇಳ್ತಾನೆ.. ಆ ಮನು ರೂಪಿ ರಾಕ್ಷಸರ ನಿರ್ನಾಮ ಆಗುತ್ತೆ ಅನ್ನೋ ಹುಚ್ಚು ಆಸೆಗಳನೆಲ್ಲ ಕೇವಲ ಆಸೆಯನ್ನಾಗೆ ಉಳಿಸಿ ದೊಡ್ಡ ಅನ್ಯಾಯ ಮಾಡಿಬಿಟ್ರು ಬಾಲ ಅನ್ನಿಸ್ತದೆ. ಇಂಗ್ಲೀಷರಿಂದ ಇನ್ನೂ ಹೇಗೆಲ್ಲ ನೋವು ತಿಂದಿರಬಹುದು ನಾವೆಲ್ಲಾ ಅನ್ನೋದಕ್ಕೆ ಮತ್ತೂ ಒಂದು ಉದಾಹರಣೆ ಸಿಗತ್ತೆ..

    ನಿಮ್ಮ ಬರವಣಿಗೆಯ ನಿರಂತರ ಓದುಗ ನಾನು.. ಕಾಮೆಂಟ್ ಹಾಕುವುದರಲ್ಲಿ ಜಿಪುಣ ಅಷ್ಟೇ. ಹೆಚ್ಚಿನ ಬರಹಗಳನ್ನ ಮೊಬೈಲ್ ನಲ್ಲೇ ಓದುವುದರಿಂದ ಕಾಮೆಂಟ್ ಹಾಕುವ ಕೆಲಸಕ್ಕೆ ಕೈ ಹಾಕೋದೆ ಇಲ್ಲ. ನಿಮ್ಮ ಬ್ಲಾಗಿನ ಯಾವ ಬರಹಗಳನ್ನೂ ಬಿಡದೆ ಓದಿದೀನಿ ಅಂದ್ರೆ ನೀವು ನಂಬಲೇ ಬೇಕು..!! ನನ್ನ ಬಹಳಷ್ಟು ಮಿತ್ರರ ಬಳಿ ನಿಮ್ಮ ಬರವಣಿಗೆ ಮತ್ತು ಬ್ಲಾಗ್ ಬಗ್ಗೆ ಪ್ರಸ್ತಾಪಿಸುತ್ತೇನೆ. ನಿಮ್ಮೆಲ್ಲಾ ಬರಹಗಳೂ ನಿಜಕ್ಕೂ ಅತೀ ಇಷ್ಟವಾಗ್ತವೆ. ನಾವು ಚೆಂದವಿದೆ ಸಾರ್ ಬರವಣಿಗೆ ಅಂತ ಹೇಳದೆಯೂ ಚೆಂದಕಿರುವ ಆ ಬರಹಗಳಿಗೆ ನಮ್ಮ ಯಾವ ಕಾಮೆಂಟುಗಳೂ ಪೂರ್ತಿ ನ್ಯಾಯ ಒದಗಿಸಲಾರವು ಅನ್ನೋದು ನಿಜ. ಬರೀರಿ ಸಾರ್ ಬರೆದು ಕೂಡಾ ಮತ್ತೊಬ್ಬರಿಗೆ ಖುಷಿ ಕೊಡೊ ಚೈತನ್ಯ ಖಂಡಿತ ನಿಮ್ಮಲ್ಲಿದೆ.. ಅಂದಹಾಗೆ ವೇದ ಮೇಡಂ ಪುರಾಣವನ್ನ ಅಷ್ಟು ಕಾಯಿಸಬೇಡಿ ಕಷ್ಟ ಆಗ್ತದೆ.. :)

    ReplyDelete
    Replies
    1. ನಿಜಕ್ಕೂ ಖುಷಿಯಾಗ್ತಿದೆ...ತುಂಬಾ ತುಂಬಾ ತುಂಬಾ ಧನ್ಯವಾದಗಳು ಸತೀಶ್....

      Delete