Saturday, December 14, 2013

ಹಾಡಿನ ಹಿನ್ನೆಲೆಯಲ್ಲಿ...

ಬಟ್ಟಲು ಗನ್ನಿನ ಚಲುವೆ ಲೇಖನವನ್ನೂ ಮೆಚ್ಚಿ ಹಲವಾರು ಗೆಳೆಯರು ಫೋನ್ ಮಾಡಿದ್ದರು. ನನಗೆ ಪರಿಚಯವಿರುವ ಹಿರಿಯ ವ್ಯಕ್ತಿಯಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿದ್ದು ಈಗ ಅದನ್ನು ಮುಂದುವರೆಸದೆ ಆರಾಮವಾಗಿ ಮನೆಯಲ್ಲಿದ್ದಾರೆ. ಆದರೆ ಸಾಹಿತ್ಯದ ಬಗ್ಗೆ ಸಿನೆಮಾದ ಬಗ್ಗೆ ನಿರರ್ಗಳವಾಗಿ ಆಸಕ್ತಿಯಿಂದ ಗಂಟೆಗಟ್ಟಲೆ ಬೇಕಾದರೆ ಮಾತನಾಡುತ್ತಾರೆ. ನನಗವರ ಪರಿಚಯವಾದದ್ದು ಪಾರ್ಕಿನಲ್ಲಿ. ದಿನ ನಾನು ಒಂದಷ್ಟು ಕಸರತ್ತು[?] ಮಾಡಿ ಅಲ್ಲಿನ ಕಲ್ಲು ಬೆಂಚಿನ ಮೇಲೆ ಕುಳಿತುಕೊಳ್ಳುತ್ತಿದ್ದೆ. ಆಗ ಅದೊಂದು ದಿನ ಅವರೆ ನನ್ನ ಹಿನ್ನೆಲೆ ವಿಚಾರಿಸಿದರು. ನಾನು ಸಿನೆಮಾದವನು, ಜೊತೆಗೊಂದಿಷ್ಟು ಸಾಹಿತ್ಯದ ಜ್ಞಾನವಿದೆ ಎಂಬುದನ್ನು ತಿಳಿದ ಮೇಲಂತೂ ನನ್ನೊಡನೆ ಗೆಳೆತನ ಬೆಳೆಸಿಯೇಬಿಟ್ಟರು. ಅವರ ಕಾಲದ ಸಿನೆಮಾಗಳು ಅದು ಬಿಡುಗಡೆಯಾದ ದಿನಗಳಲ್ಲಿ ನಡೆದ ಆಸಕ್ತಿಕರವಾದ ಘಟನೆಗಳನ್ನೂ ಅಷ್ಟೇ ಆಸಕ್ತಿದಾಯಕವಾಗಿ ಹೇಳುತ್ತಾರೆ. ಆಗಾಗ ನನ್ನ ಬ್ಲಾಗ್ ಕೂಡ ಓದುತ್ತಾರೆ. ನನ್ನ ಲೇಖನ ಓದಿದ್ದ ಅವರು ಆವತ್ತು ಮಾತನಾಡಲು ಸಿದ್ಧರಾಗಿಯೇ ಬಂದಿದ್ದರೆಂದು ಕಾಣಿಸುತ್ತದೆ. ನನ್ನ ಲೇಖನದ ಬಗ್ಗೆ ಮಾತನಾಡಲು ಶುರು ಮಾಡಿದ ಅವರು ಸಿನಿಮಾದ ಹಾಡುಗಳ ಬಗ್ಗೆ ಹೊಸ ಲೋಕವೊಂದನ್ನೇ ತೆರೆದಿಟ್ಟರು.
ಒಂದು ಸಿನೆಮಾವನ್ನು, ಸಿನೆಮಾದ ಹಾಡುಗಳನ್ನ ಪ್ರತಿನಿಧಿಸುವುದಾದರೂ ಏನು? ನಮಗೆ ಇಷ್ಟವಾದದ್ದು ನಮ್ಮ ಹಿರಿಯರಿಗೆ ಏಕೆ ಇಷ್ಟವಾಗುವುದಿಲ್ಲ...ಈವತ್ತಿನ ನಮ್ಮ ಮೆಚ್ಚಿನ ಚಿತ್ರಗಳನ್ನ ಹಿರಿಯರು ಏಕೆ ಇಷ್ಟ ಪಡುವುದಿಲ್ಲ. ನಮ್ಮ ತಲೆಮಾರಿನ ನಾಯಕರುಗಳನ್ನು ಹಳಬರು ಯಾಕೆ ಇಷ್ಟ ಪಡುವುದಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಆವಾಗಾವಾಗ ಕಾಡುತ್ತಿರುತ್ತದೆ. ಉತ್ತರವೇನೋ ಸುಲಭ. ಅವರವರ ತಲೆಮಾರಿನ ಘಟನೆಗಳು ಚಿತ್ರಗಳು ಅವರವರಿಗೆ ಇಷ್ಟವಾಗುತ್ತವೆ ಎನ್ನುವುದಂತೂ ಖಚಿತ.ಆದರೆ ಅದಷ್ಟೇ ಅಲ್ಲ. ಅಲ್ಲಿ ನೆನಪುಗಳಿರುತ್ತವೆ.
'ಏನಪ್ಪಾ ಈಗ ಯಾಕೆ ಅಂತ ಸಿನೆಮಾಗಳನ್ನೂ ತೆಗೀತೀರಾ...ನಮ್ಮ ಕಾಲದಲ್ಲಿ ಎಷ್ಟೊಳ್ಳೆ ಸಿನೆಮಾಗಳು ಬರ್ತಿದ್ವು ಗೊತ್ತಾ..' ಎಂದರು. ನಾನು 'ಅಜ್ಜ..ನೀವು ಇತ್ತೀಚಿಗೆ ಯಾವ ಸಿನೆಮಾ ನೋಡಿದ್ದೀರಿ...ಎಂಬ ಪ್ರಶ್ನೆಗೆ ಅವರಿಂದ ಯಾವುದೂ ಇಲ್ಲಾ ಯಾಕೆಂದರೆ ಯಾವುದೂ ಚೆನ್ನಾಗಿರಲಿಲ್ಲ ಎನ್ನುವ ಉತ್ತರ ಬಂತು. ಯಾವ ಸಿನೆಮಾವನ್ನೂ ನೋಡದೆ ಚೆನ್ನಾಗಿಲ್ಲ ಎನ್ನುವುದಾದರೂ ಹೇಗೆ. ಹಾಗಾದರೆ ಅವರ ಕಾಲದಲ್ಲಿ ಬಂದ ಎಲ್ಲಾ ಸಿನೆಮಾಗಳೂ ಒಳ್ಳೆಯದಿತ್ತಾ?ಸುಮ್ಮನೆ  ಅವರ ಜೊತೆ ಮಾತಿಗಿಳಿದು ಅವರ ಕಾಲದ ಸಿನೆಮಾಗಳ ಬಗ್ಗೆ ಮಾತನಾಡಿದೆ. ಅವರು ಪ್ರತಿ ಸಿನೆಮಾದ ಹಿಂದೆ ಅವರ ಜೀವನದ ಘಟನೆಗಳನ್ನೂ ನೆನಪು ಮಾಡಿಕೊಂಡು ಹೇಳುತ್ತಿದ್ದರು. ಆ ಸಿನೆಮಾ ಬಂದಾಗ ನಾನು ಕಾಲೆಜಿನಲ್ಲಿದ್ದೆ, ಈ ಸಿನೆಮಾ ಬಂದಾಗ ನನ್ನ ಮದುವೆಯಾಗಿತ್ತು ಹೀಗೆ...ಆಗ ನನಗರ್ಥವಾದದ್ದು ಅವರ ಬದುಕಿನ ಮಜಳುಗಳಲ್ಲಿ ಸಿನೆಮಾಗಳೂ ಹಾಡು ಹೋಗಿದ್ದವು ಎಂಬುದು. ಹೌದು. ಒಂದು ಹಾಡು, ಸಿನಿಮಾದ ಹಿನ್ನೆಲೆಯಲ್ಲಿ ಜೀವನದ ಒಂದೊಂದು ಮಜಲುಗಳಿರುತ್ತವೆ. ಹಾಗಾಗಿ ಅದನ್ನು ಕೇಳಿದಾಗ ಅದ್ಯಾವುದೋ ಅವ್ಯಕ್ತ ಆತ್ಮೀಯ ಭಾವ ನಮ್ಮನ್ನು ಆವರಿಸಿ ಅದನ್ನು ಇಷ್ಟಪಡಿಸಬಹುದು. ಆದರೆ ಆವತ್ತಿನ ಹಿರಿಯರಿಗೆ ಈವತ್ತಿನ ಸಿನೆಮಾಗಳಲ್ಲಿ ಅಂತಹ ನೆನಪುಗಳು ಇರುವ ಸಾಧ್ಯತೆ ಕಡಿಮೆ. 

No comments:

Post a Comment