Monday, June 17, 2013

ಪುಸ್ತಕ ಬಿಡುಗಡೆಯ ಸಂತಸ....

“ನಾನು ಬೇಕಾದರೆ ಸಹಾಯ ಮಾಡುತ್ತೇನೆ ..ರವೀಂದ್ರ ಇನ್ನೊಂದು ಪುಸ್ತಕ ಬರೆಯಲಿ..ಕನ್ನಡದಲ್ಲಿ ನೋಡಲೇ ಬಾರದ ಚಿತ್ರಗಳು ಎಂದು..” ಎಂದವರು ನಿರ್ದೇಶಕ ಗುರುಪ್ರಸಾದ್.
“ಲೇಖಕರಿಗೆ 2000 ದಿಂದ 2009 ದವರಿಗೆ ಕೇವಲ ಮೂರ್ನಾಲ್ಕು ನೋಡಲೇಬೇಕಾದ ಚಿತ್ರಗಳು ಸಿಕ್ಕಿವೆ. ಇದು ಹೀಗೆ ಮುಂದುವರೆದರೆ ರವೀಂದ್ರ ನೋಡಿದ ಮೇಲೆ ಸಾಯಲೇ ಬೇಕಾದ ಚಿತ್ರಗಳು ಪುಸ್ತಕ ಬರೆಯಬೇಕಾಗುತ್ತೇನೋ ಎಂದವರು ಬರಹಗಾರ ಜೋಗಿ.
ಕಳೆದ ಶನಿವಾರ ಬೆಳಿಗ್ಗೆ ಹತ್ತೂಮೂವತ್ತಕ್ಕೆ ನಮ್ಮ ಪುಸ್ತಕ ಬಿಡುಗಡೆ ಸಮಾರಂಭವನ್ನು ಇಟ್ಟುಕೊಂಡಿದ್ದೆವು. ಅತಿಥಿಗಳಾಗಿ ನಿರ್ದೇಶಕರುಗಳಾದ ಟಿ.ಎಸ್.ನಾಗಾಭರಣ, ಗುರುಪ್ರಸಾದ್,ಉಮೇಶ್ ಕುಲಕರ್ಣಿ, ಬರಹಗಾರರಾದ ಜೋಗಿ, ಪತ್ರಕರ್ತರಾದ ಶ್ರೀಧರಮೂರ್ತಿ ಉಪಸ್ಥಿತರಿದ್ದರು. ಎಲ್ಲರೂ ಅರ್ಥಗರ್ಭಿತವಾಗಿ ಮಾತನಾಡಿದರು. ಅದರಲ್ಲೂ ನಿರ್ದೇಶಕ ಗುರುಪ್ರಸಾದ್ ಮಾತುಗಳು ತಮಾಷೆಯಾಗೂ ಇದ್ದವು. ಚಿಂತನಾಪ್ರೇರಕವಾಗಿಯೂ ಇದ್ದವು. ನಮ್ಮಲ್ಲಿ ಎರಡು ರೀತಿಯ ನಿರ್ದೇಶಕರಿದ್ದಾರೆ ರೇಶನ್ ನಿರ್ದೇಶಕರು ಮತ್ತು ಪ್ಯಾಶನ್ ನಿರ್ದೇಶಕರು ಎಂದು ಹೊಸ ವಿಂಗಡನೆಯೊಂದನ್ನು ಹೇಳಿದರು. ಕೈಗೆ ಸಿಕ್ಕಿದನ್ನು ಸುಮ್ಮನೆ ಹಣಕ್ಕಾಗಿ ಸಿನಿಮಾ ಮಾಡುವವರು ಮೊದಲನೇ ವಿಭಾಗಕ್ಕೆ ಸೇರುತ್ತಾರೆ, ಅಂತಹ ನಿರ್ದೇಶಕರ ಸಂಖ್ಯೆ ಕನ್ನಡದಲ್ಲಿ ಜಾಸ್ತಿ ಎಂಬ ಅಭಿಪ್ರಾಯ ಅವರದು.
ನಾಗಾಭರಣ ಪುಸ್ತಕದ ಬಗ್ಗೆ ಮಾತನಾಡಿ ಪ್ರೋತ್ಸಾಹಿಸಿದರು. ಶ್ರೀಧರಮೂರ್ತಿಯವರ ಮಾತುಗಳು ಸಿನಿಮಾದೊಳಗಿನ ಹೊಸಪ್ರಪಂಚವನ್ನು ತೆರೆದಿಟ್ಟಿತು ಎನ್ನಬಹುದು. ಚಿತ್ರಕ್ಕೆ ಅದರಲ್ಲಿನ ದೃಶ್ಯಕ್ಕೆ ಹಿನ್ನೆಲೆ ಸಂಗೀತ ಭಾವ ತುಂಬುವುದರಲ್ಲಿ ಮೊದಲ ಪಾತ್ರವಹಿಸುತ್ತದೆ. ಅದನ್ನು ಅವರು ಜಿ.ಕೆ.ವೆಂಕಟೇಶ್ ರವರ ಹಿನ್ನೆಲೆ ಸಂಗೀತವನ್ನು ಕಸ್ತೂರಿ ನಿವಾಸದ ಸಿನಿಮಾದ ಉದಾಹರಣೆ  ಮೂಲಕ ವಿವರಿಸಿದರು. ಅದರಲ್ಲಿ ಹಿನ್ನೆಲೆ ಸಂಗೀತ ಸಂಯೋಜಿಸುವಾಗ ಅದಕ್ಕೊಪ್ಪುವ ಭಾವಕ್ಕೆ ತಕ್ಕಂತಹ ರಾಗಗಳನ್ನು ಬಳಸಿದ್ದನ್ನು ಹೇಳಿದರು.ಶಾಸ್ತ್ರೀಯ ಸಂಗೀತದ ರಾಗಗಳ ಬಗ್ಗೆ ನನಗೆ ಅಲ್ಪ ಜ್ಞಾನವೂ ಇಲ್ಲದಿರುವುದು ಸಿನಿಮಾದಲ್ಲಿನ ಒಂದು ಆಯಾಮವೇ ನನಗೆ ಗೊತ್ತಿಲ್ಲ ಎನ್ನುವ ಸತ್ಯ ತಿಳಿಯಿತು.ಒಟ್ಟಿನಲ್ಲಿ ಇಡೀ ಕಾರ್ಯಕ್ರಮ ಚೆನ್ನಾಗಿತ್ತು.1934 ರಿಂದ 2009 ರವರೆಗೆ ಸರಿಸುಮಾರು 2844 ಚಿತ್ರಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ನಾನು ಹೆಚ್ಚು ಕಡಿಮೆ 2800 ಕ್ಕಿಂತಲೂ ಹೆಚ್ಚು ಸಿನೆಮಾ ನೋಡಿದ್ದೇನೆ. ನನಗೆ ಗೊತ್ತಿರುವಂತೆ ಒಂದಷ್ಟು ವಯಸ್ಕರ ಚಿತ್ರಗಳನ್ನು ಮತ್ತು ಪುಸ್ತಕದಲ್ಲಿನ ಮೊದಲ ಮೂರು ಚಿತ್ರಗಳನ್ನು ಬಿಟ್ಟರೆ ಎಲ್ಲವನ್ನೂ ನೋಡಿದ್ದೇನೆ. ಪುಸ್ತಕ ಬರೆಯಲು ಪ್ರಕಾಶಕರು ಹೇಳಿದಾಗಲೇ ನಾನು ಸುಮಾರಷ್ಟು ಸಿನಿಮಾ ನೋಡಿದ್ದರಿಂದ ಒಂದೆ ತಿಂಗಳಲ್ಲಿ ಬರೆದುಬಿಡುತ್ತೇನೆ ಎಂದುಕೊಂಡೆ ಪ್ರಾರಂಭಿಸಿದ್ದೆ. ಆದರೆ ಬರೆಯುತ್ತಾ ಬರೆಯುತ್ತಾ ಸಿನಿಮಾ ನೋಡುತ್ತಾ ಒಂಬತ್ತು ತಿಂಗಳುಗಳೇ ಕಳೆದುಹೋಗಿದ್ದವು. ನೋಡಿರದ ಸಿನಿಮಾಗಳನ್ನು ದಿನಕ್ಕೆ ಐದರಂತೆ ನೋಡಿದಾಗಲೂ ಸಮಯ ವ್ಯರ್ಥವಾಗುತ್ತಿದೆಯೇನೋ ಎನಿಸುತ್ತಿತ್ತು. ನೋಡಿ ನೋಡಿ ಕಣ್ಣು ತಲೆ ಮಿದುಳು ಬಿಸಿಯಾಗುತ್ತಿತ್ತು. ನೋಡಿಯೆಲ್ಲಾ ಆದ`ಮೇಲೆ ಬರೆಯಲು ಕುಳಿತರೆ ಒಂದು ಅಕ್ಷರವೂ ಕೈಗೆ ಬರುತ್ತಿರಲಿಲ್ಲ. ಸಿನಿಮಾ ನೋಡಲೇಬೇಕಾದ ವಿಭಾಗಕ್ಕೆ ಅರ್ಹ ಎನಿಸಿದರೂ ಅದರಲ್ಲಿನ ವಿಶೇಷತೆಗಾಗಿ ಹುಡುಕಾಟ ಶುರುವಾಗುತ್ತಿತ್ತು...ಆಗಾಗ ಪ್ರಕಾಶಕ ಕೃಷ್ಣ ಕರೆಮಾಡಿ, “ಗುರು..ಒಬ್ಬ ದೊಡ್ಡ ಸಾಹಿತಿ ಕೈಲಿ ಪುಸ್ತಕ ಬರೆಸಬಹುದು...ನಿನ್ನ ಕೈಲಿ ಬರೆಸೋದು ಕಷ್ಟ ಗುರು..” ಎಂದೆಲಾ ಮೂದಲಿಸುತ್ತಿದ್ದರೂ ಕೆಲಸ ಮಾತ್ರ ಮಾಡಿದಷ್ಟೂ ಉಳಿಯುತ್ತಿತ್ತು. ಕೊನೆಗೆ ಅಂತೂ ಇಂತೂ ಪುಸ್ತಕ ಮುಗಿದಾಗ ಒಂದು ದೊಡ್ಡ ಬೆಟ್ಟವೇ ತಲೆಯಿಂದ ಕೆಳಗಿರಿಸಿದಂತಹ ಅನುಭವವಾಗಿದ್ದಂತೂ ಸತ್ಯ.
ಪುಸ್ತಕ ಮುಗಿದಾಯ್ತು..ಬಿಡುಗಡೆ ಮಾಡಿಬಿಡೋಣ..ಚಿಕ್ಕದೊಂದು ಸಮಾರಂಭ ಮಾಡೋಣ ಎನಿಸಿ ಅದಕ್ಕಾಗಿ ಯೋಜಿಸಿ ಕಾರ್ಯರೂಪಕ್ಕೆ ತರುವಲ್ಲಿ ಮೂರು ತಿಂಗಳುಗಳೇ ಕಳೆದುಹೋದವು. ಈಗ ಬಿಡುಗಡೆಯಾಗಿದೆ. ಒಮ್ಮೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ಕೊಸರು:ನಾನು ನಮ್ಮ ಕಾರ್ಯಕ್ರಮಕ್ಕಾಗಿ ಹಿರಿಯರನ್ನು ಆಹ್ವಾನಿಸಲು ಗಿರೀಶ್ ಕಾಸರವಳ್ಳಿ ಯವರನ್ನು ಕರೆದಾಗ ಅವರು ಮೊದಲೇ ತೀರ್ಥಹಳ್ಳಿಯ ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದರು. ನನ್ನ ಮೊದಲ ಕಿರುಚಿತ್ರದ ಪ್ರದರ್ಶನದ ಮುಖ್ಯ ಅತಿಥಿಯಾಗಿದ್ದು ಕಾಸರವಳ್ಳಿಯವರು. ಆನಂತರ ರಮೇಶ್ ಅರವಿಂದ್, ನಾಗತಿಹಳ್ಳಿ ಚಂದ್ರಶೇಖರ್ ಕರೆದಾಗ ಅವರೂ ಬೇರೆ ಬೇರೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದರು. ಅದರಲ್ಲೂ ನಾಗತಿಹಳ್ಳಿ ಚಂದ್ರಶೇಖರ್ ನನಗೆ ಫೋನಿನಲ್ಲೇ ಹಾರೈಸಿದರಲ್ಲದೆ ನನ್ನ “ರವೀಂದ್ರ ಟಾಕೀಸ್” ಬ್ಲಾಗ್ ಬಗ್ಗೆ ಮಾತನಾಡಿದರು. ನಾನದನ್ನು ಓದುತ್ತಲೇ ಇರುತ್ತೇನೆ..ಸಿನಿಮಾ ಕುರಿತಾದ ಒಳ್ಳೊಳ್ಳೆ ಮಾಹಿತಿಗಳಿರುವ ಅತ್ಯುತ್ತಮ ಬ್ಲಾಗ್ ಎಂದರು..ನನಗೆ ಆಕಾಶದಲ್ಲಿ ಹಾರಾಡಿದ ಅನುಭವವಾಯಿತು.
[ನನ್ನ ಅಂತರ್ಜಾಲ ತೊಂದರೆಯಿಂದಾಗಿ ನಾನು ಒಂದು ತಿಂಗಳು ಅಜ್ಞಾತವಾಸ ಅನುಭವಿಸಬೇಕಾಯಿತು]

7 comments:

 1. ಸುಂದರ ನಿರೂಪಣೆ. ಕಾರ್ಯಕ್ರಮ ತಪ್ಪಿಸಿಕೊಂಡಿದ್ದರ ಬಗ್ಗೆ ಬೇಸರವಾಗುತ್ತಿದೆ. ಈ ಪುಸ್ತಕ ಸಿಗುವ ವಿಳಾಸವನ್ನು ತಿಳಿಸಿ (ಟೋಟಲ್ ಕನ್ನಡ, ಸ್ವಪ್ನ ಮುಂತಾದ ಕಡೆ). ಸಿನಿಮಾ ಹುಚ್ಚು ವಿಪರೀತ ಇದೆ. ಖಂಡಿತ ಓದಲೇ ಬೇಕು ಈ ಪುಸ್ತಕವನ್ನ.

  ಅಂದ ಹಾಗೆ ನಿಮ್ಮಲ್ಲಿ 2844 ಚಿತ್ರಗಳ ಪಟ್ಟಿಯನ್ನು ನಮಗೆ ಹಂಚಿಕೊಳ್ಳಲು ಸಾಧ್ಯವೇ.

  ಸುಂದರ ಕಾರ್ಯಕ್ರಮದ ನಿರೂಪಣೆ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಅಭಿನಂದನೆಗಳು ರವಿಂದ್ರ ಸರ್

  ReplyDelete
  Replies
  1. ಖಂಡಿತ..ಪಟ್ಟಿ ಕೊಡುತ್ತೇನೆ.

   Delete
  2. ಧನ್ಯವಾದಗಳು ಸರ್ ನನ್ನ ವಿಳಾಸ srmanjun@gmail.com

   Delete
 2. ಸೂಪರ್. ಅಭಿನ೦ದನೆಗಳು.

  ReplyDelete
 3. ಅಭಿನಂದನೆಗಳು , ಮತ್ತದೇ ಪ್ರಶ್ನೆ ಪುಸ್ತಕ ಎಲ್ಲಿ ಸಿಗುತ್ತದೆ ತಿಳಿಸಿ

  ReplyDelete
 4. ಸಪ್ನಾ ಬುಕ್ ಹೌಸ್, ನವ ಕರ್ನಾಟಕ, ಟೋಟಲ್ ಕನ್ನಡ ಡಾಟ್ ಕಂ, ಬೆಳೆಗೆರೆ ಬುಕ್ಸ್ ಅಂಡ್ ಕಾಫಿ, ಅಂಕಿತ, .....ಲಭ್ಯವಿದೆ.

  ReplyDelete
 5. ಒಹ್ ಅಂಕಿತಾ ಗೆ ಮೊನ್ನೆ ಹೋಗಿದ್ದೆ. ನಿಮ್ಮ ಪುಸ್ತಕ ಅಲ್ಲಿ ಸಿಗತ್ತೆ ಅಂತ ಗೊತ್ತಿದ್ರೆ ತೆಗೋತಿದ್ದೆ ಹಾಗೂ ಮಿತ್ರ ಸೃಜನ ಅನುವಾದಿಸಿದ 'ನನ್ನಿಷ್ಟ' ಕೂಡ ಮರೆತು ಹೋಗಿದ್ದು ನಿಮ್ಮ ಬರಹದಿಂದ ನೆನಪಾಯಿತು..A wednesday ನಿಜಕ್ಕೂ ಚೆಂದದ ಸಿನಿಮಾ...
  :-)
  ಎಮ್ ಎಸ್

  ReplyDelete