Monday, July 2, 2012

ಒ೦ದಷ್ಟು ತಮಿಳು ಚಿತ್ರಗಳು...

ವಾಳಕು ಎನ್ 18/9
ಅಳಗಿರಿ ಸಾಮಿಯನ್ ಕುದುರೈ
ಮೊನ್ನೆ ಮೊನ್ನೆ ತಮಿಳಿನಲ್ಲಿ 'ಅಳಗಿರಿಸಾಮಿಯನ್ ಕುದುರೈ' ಎಂಬ ಕಡಿಮೆ ಬಜೆಟ್ಟಿನ ಸಿನಿಮಾ ತೆರೆಗೆ ಬಂತು.ನಿಜಕ್ಕೂ ಉತ್ತಮ ಚಿತ್ರ.  ನೀವದನ್ನು ನೋಡಿಲ್ಲವಾದರೆ ದಯವಿಟ್ಟು ಒಮ್ಮೆ ನೋಡಿಬಿಡಿ. ಸರಳ ಸುಂದರ ಸಿನೆಮಾ ಅದು. ಒಂದು ಊರು, ಅಲ್ಲಿನ ಜನಜೀವನ, ಒಂದು ಜಾತ್ರೆ, ದೇವಸ್ಥಾನದ ಒಂದು ಕುದುರೆ ಇವುಗಳೇ ಚಿತ್ರದ ಪ್ರಮುಖ ಅಂಶಗಳಾದರೂ ಸಿನಿಮಾದ ಕಥೆ ಯಾವ ಕಾಲಘಟ್ಟೆಕ್ಕೂ ನಿಲುಕದೆ ಪ್ರಸ್ತುತ ಎನಿಸುತ್ತದೆ. ಅದಕ್ಕೆ ಕಾರಣ  ಅದರಲ್ಲಿನ ಸತ್ವ ಎನ್ನಬಹುದು.ಕಥೆ-ಚಿತ್ರಕಥೆಯೇ ಚಿತ್ರದ ಜೀವಾಳ. ಚಿತ್ರದಲ್ಲಿ ನಾಯಕನಿದ್ದರೂ ಅವನು ನಾಯಕನಲ್ಲ. ಇಲ್ಲಿ ಯಾವುದೇ ನಾಯಕ, ಖಳನಾಯಕ, ಪೋಷಕ ಪಾತ್ರ ತರಹದ ವಿ೦ಗಡನೆಗಳಿಲ್ಲ. ನಮ್ಮ ಅಕ್ಕಪಕ್ಕದ ಮನೆಯವರು, ದೂರದ ಸಂಬಂಧಿಗಳು , ಗೆಳೆಯರು ಇವುಗಳೇ ಇಲ್ಲಿ ಪಾತ್ರಗಳಾಗಿ ಮೆರೆದಿವೆ.
ಎ೦ಗೆಯು೦  ಎಪ್ಪೋದಂ
ಕಳಗು
ಮೈನಾ
ಖ್ಯಾತ ನಿರ್ದೇಶಕ  ಮುರುಗದಾಸ್ ನಿರ್ಮಾಣದ ಎನ್ಗೆಯಂ ಎಪ್ಪೋದಂ ಕೂಡ ಒಂದು ಸರಳ ಸುಂದರವಾದ ಚಿತ್ರವಾದರೂ ಅದರ ಅನಿರೀಕ್ಷಿತ ಕ್ಲೈಮಾಕ್ಸ್ ನಮ್ಮನ್ನು ದ೦ಗುಬದಡಿಸುವುದ೦ತೂ ನಿಜ. ಎರಡು ಪ್ರೇಮಕಥೆಗಳನ್ನು ತುಂಬಾ ಚೆನ್ನಾಗಿ ನವಿರಾಗಿ ನಿರೂಪಿಸುತ್ತಾ ಹೋಗುವ ನಿರ್ದೇಶಕ ಕೊನೆಯಲ್ಲಿ ಒಂದು ಅಪಘಾತ ಮಾಡಿಸಿ ಚಿತ್ರವನ್ನೂ ನೋವಿನಲ್ಲಿ ಮುಗಿಸಿಬಿಡುತ್ತಾನೆ.ಅದೇ ಸಿನಿಮಾದ ಪ್ರಾರ೦ಭವೂ ಹೌದು.ಇದು ಕೂಡ ಕಡಿಮೆ ಬಜೆಟ್ಟಿನ ಚಿತ್ರವೇ..ಆದರೂ ಸ್ಕ್ರಿಪ್ಟ್ ವಿಷಯದಲ್ಲಿ ಉತ್ತಮ ಚಿತ್ರವೇ ಸರಿ. ಹಾಗೆ ನೋಡಿದರೆ 'ತಮಿಳ್ ಪಡಂ', ಮೈನಾ ಮುಂತಾದ ಚಿತ್ರಗಳೂ ಕಡಿಮೆ ಬಂಡವಾಳದ ಚಿತ್ರಗಳೇ. ಈ ಚಿತ್ರಗಳು ಯಶಸ್ಸಾದದ್ದು ಸ್ಟಾರ್ ಗಳಿಂದ ಅಲ್ಲ. ಕಥೆ-ನಿರೂಪಣೆಯಿಂದ.  ಇತ್ತೀಚಿಗೆ ಬಂದ ತಮಿಳಿನ ಕಡಿಮೆ ಬಜೆಟ್ಟಿನ ಸಿನೆಮಾಗಳಲ್ಲಿ ಅದೆಂತಹ ಸತ್ವ ಇರುತ್ತದೆ ಎನಿಸುತ್ತದೆ. ಆ ಕಥಾಹಂದರ , ಭಾಷೆ, ಜನಜೀವನದ ಸೊಬಗನ್ನು ಎಷ್ಟು ಚೆನ್ನಾಗಿ ತೆರೆಯ ಮೇಲೆ ನಿರೂಪಿಸುತ್ತಾರಲ್ಲಾ ಅದು ಖುಷಿ ಕೊಡುತ್ತದೆ. ಹಾಗೆಯೇ ಮೊನ್ನೆ ಬಿಡುಗಡೆಯಾದ ಬಾಲಾಜಿ ಶಕ್ತಿವೇಲ್ ನಿರ್ದೇಶನದ ವಾಳಕ್ ಏನ್ 18/9 ಸಿನೆಮಾ ಕೂಡ ಅದೇ ಪಟ್ಟಿಗೆ ಸೇರಿಸಬಹುದಾದ೦ತಹ  ಚಿತ್ರ. ಕಳಗು ಕಥಾವಸ್ತುವಿನ ದೃಷ್ಟಿಯಿ೦ದ ವಿಶೇಷವಾದ  ಚಿತ್ರ ಎನಿಸಿಕೊಳ್ಳುತ್ತದೆ. ಇದು ಕೂಡ ದುರಂತದಲ್ಲಿ ಕೊನೆಯಾದರೂ ಒಂದು ವಿಶಿಷ್ಟವಾದ ಜನಾಂಗದ ನಡುವೆ ಇಟ್ಟಿರುವ ಪ್ರೇಮ ಕಥೆ ನಮ್ಮನ್ನು ತಟ್ಟದಿರದು .ಬೆಟ್ಟದ ಇರುಕಲು, ಪ್ರಪಾತಕ್ಕೆ  ಬಿದ್ದ ಹೆಣಗಳನ್ನು ಎತ್ತುವುದನ್ನೇ ಕಾಯಕ ಮಾಡಿಕೊಂಡಿರುವವರ ಕಥೆ ಇದೆ. ಒಂದು ಭಿನ್ನ ಅನುಭವಕ್ಕಾಗಿ ಈ ಚಿತ್ರವನ್ನೊಮ್ಮೆ ನೋಡಬಹುದು. 
 ನಮ್ಮಲ್ಲಿ ಕಡಿಮೆ ಬಂಡವಾಳದ ಚಿತ್ರಗಳೆಂದರೆ ಕಿರುತೆರೆ ಚಿತ್ರಗಳು ಎನ್ನುವಂತಾಗಿಬಿಟ್ಟಿದೆ.  ಅಂದರೆ ಕಿರುತೆರೆಗಾಗಿ ಅತೀ ಕಡಿಮೆ ವೆಚ್ಚದಲ್ಲಿ ರೀಲು ಸುತ್ತಿ, ಆನಂತರ ನಾಮಕಾವಸ್ತೆಗೆ ಒ೦ದು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ ಹಣಮಾಡಿಕೊಳ್ಳುವ ಚಿತ್ರಗಳು.ಬರೀ ಎರಡ್ಮೂರು ತಿಂಗಳಿಗೆ ಒ೦ದು ಸಿನಿಮಾ ಮುಗಿದುಹೋಗುತ್ತದೆ.   ನಿರ್ಮಾಪಕರಿಗೆ ಲಾಭವಾದರೂ ಕನ್ನಡಚಿತ್ರರಂಗ ಮಾತ್ರ ಅಧೋಗತಿಗೆ ಇಳಿದುಹೋಗುತ್ತದೆ.ಈಗ ಆಗಿರುವುದೂ ಅದೇ. ಕಡಿಮೆ ವೆಚ್ಚದ ಚಿತ್ರ ಅಂದರೆ ಮೊದಲೆಲ್ಲ ಪ್ರಯೋಗಾತ್ಮಕ ಅಥವಾ ಉತ್ತಮ ಕಥೆಯುಳ್ಳ ಚಿತ್ರ ಎನ್ನುವಂತಿತ್ತು. ಆದರೆ ಈವತ್ತು ಕನ್ನಡ ಚಿತ್ರರಂಗದಲ್ಲಿ ಕಡಿಮೆ ವೆಚ್ಚದ ಚಿತ್ರಗಳೆಂದರೆ ಚಾನೆಲ್ ಚಿತ್ರಗಳು ಎನ್ನುವಂತಾಗಿದೆ. ಹಿಂದಿಯಲ್ಲೂ ಕಡಿಮೆ ಬಜೆಟ್ಟಿನ ಚಿತ್ರಗಿಗೊ೦ದು ಹೆಸರಿದೆ.ಬೆಲೆ ಇದೆ. ಆದರೆ ನಮ್ಮಲ್ಲಿ ಕೆಲವು ದುರಾಸೆಯ , ಸಿನಿಮಾ ಪ್ರೀತಿಯಿಲ್ಲದ ಜನರಿಂದಾಗಿ ಈವತ್ತಿನ ಪರಿಸ್ಥಿತಿ ಬಂದೊದಗಿದೆ.
ತಮಿಳ್ ಪಡಂ
ಹಾಗ೦ತಹ ಬೇರೆ ಭಾಷೆಗಳಲ್ಲಿ  ಕೆಟ್ಟ ಸಿನಿಮಾಗಳು ಇಲ್ಲವೆಂದಲ್ಲ. ಆದರೆ ಇಲ್ಲಿಗಿಂತ ಕಡಿಮೆ.ಮೇಲಿನ ಸಿನೆಮಾಗಳನ್ನೆಲ್ಲ ನೋಡಿಲ್ಲವಾದರೆ ಬಿಡುವು ಮಾಡಿಕೊಂಡು ಒಮ್ಮೆ ನೋಡಿ.

No comments:

Post a Comment