Monday, July 9, 2012

ನೋಡಲೇ ಬೇಕಾದ ಚಿತ್ರಗಳು -9


ಪಿಮ್ ಮತ್ತು ಪ್ಲಾಯ್ ಸಯಾಮಿ ಅವಳಿಗಳು. ಹುಟ್ಟಿದಾಗಿನಿಂದ ಹೊಟ್ಟೆಯ ಒಂದು ಭಾಗ ಅಂಟಿಕೊಂಡಿದ್ದರಿಂದ ಅವರಿಬ್ಬರಿಗೂ ಯಾವಾಗಲೂ ಜೊತೆಯಲ್ಲಿರಬೇಕಾದ ಅನಿವಾರ್ಯತೆ ಇದೆ.ಅದವರಿಗೆ ಬೇಸರವೂ ಇಲ್ಲ. ಮತ್ತು ರೇಜಿಗೆಯನ್ನೂ ಹುಟ್ಟಿಸಿಲ್ಲ. ಎರಡುದೇಹವಿದ್ದರೂ ಅದು ಒಂದಕ್ಕೊಂದು ಬೆಸೆದುಕೊಂಡಿರುವುದರಿಂದ ಎರಡುಜೀವ ಒಂದು ದೇಹವೆನ್ನುವಂತಾಗಿಬಿಟ್ಟಿರುತ್ತಾರೆ. ಅದರಲ್ಲೂ ಪ್ಲಾಯ್‌ಗೆ ಪಿಮ್ ಮೇಲೆ ಅತೀವ ಪ್ರೀತಿ. ಅತೀ ಎನ್ನುವಷ್ಟು ಪೊಸ್ಸೆಸಿವ್ ಆಗಿದ್ದರೂ ಪಿಮ್‌ಗೆ ಉಸಿರುಕಟ್ಟಿಹಾಕಿದಂತಾಗಿರುವುದಿಲ್ಲ. ಆ ಪ್ರೀತಿ ಅವಳಿಗೂ ಇಷ್ಟವೆ. ಆದರೆ ಅದೊಂದು ದಿನ ವೀ ಎನ್ನುವ ಹುಡುಗ ಪಿಮ್-ಪ್ಲಾಯ್‌ಗೆ ಪರಿಚಯವಾಗುತ್ತಾನೆ. ಅವನಿಗೆ ಪಿಮ್‌ನ ಮೇಲೆ ಪ್ರೀತಿ ಹುಟ್ಟುತ್ತದೆ. ಹಾಗೆ ಪಿಮ್‌ ಕೂಡ ಅವನಿಗೆ ಮನ ಸೋಲುತ್ತಾಳೆ.ಅವರ ಪ್ರೀತಿಗೆ ಅಡ್ಡಬರುವುದು ಇದೇ ಪ್ಲಾಯ್. ಪ್ಲಾಯ್ ಅವರಿಬ್ಬರು ಒಂದಾಗುವುದನ್ನು ಸಹಿಸದೆ ತಡೆಯಲು  ಪ್ರಾರಂಭಿಸುತ್ತಾಳೆ. ಅವರಿಬ್ಬರ ನಡುವೆ ತಾನೇ ತಡೆಗೋಡೆಯಾಗುತ್ತಾಳೆ.ಆಗ ಪಿಮ್ ಳಿಗೆ ಪ್ಲಾಯ್ ನ ಪ್ರೀತಿ ಚಿತ್ರಹಿ೦ಸೆಯಾಗಿ ಕಾಣತೊಡಗುತ್ತದೆ.ಜೀವನ ಪರ್ಯಂತ ನಾವು ಜೊತೆಯಲ್ಲೇ ಇರೋಣ ಎಂದು ಒಬ್ಬರೊನ್ನಬ್ಬರು ಹಚ್ಚಿಕೊಂಡಿದ್ದ ಸೋದರಿಯರಿಗೆ ಈಗ ಅರೆಘಳಿಗೆ ಜೊತೆಯಲ್ಲಿರುವುದೂ ಯಾತನಾಮಯವೆನಿಸುತ್ತದೆ.ಪಿಮ್ ವೈದ್ಯಕೀಯ ನೆರವಿನಿಂದ ಬೇರಾಗಲು ಯೋಚಿಸುತ್ತಾಳೆ.. ಆದರೆ ಪ್ಲಾಯ್ ಒಪ್ಪುವುದಿಲ್ಲ...ಇಂಥ ಸಂದಿಗ್ಧ ಪರಿಸ್ಥಿತಿ ಮುಂದೆ ಅದೆಷ್ಟು ಅವಘಡಗಳಿಗೆ ಕಾರಣವಾಗುತ್ತದೆಂದರೇ ಅದನ್ನು ನೋಡಿ ಅನುಭವಿಸುವುದೇ ಒಳ್ಳೆಯದು. ಹಾ..ಅಂದಹಾಗೆ ಇದು ಥೈವಾನ್ ಭಾಷೆಯ ಅಲೋನ್ ಚಿತ್ರದ ತಿರುಳು.
2007ರಲ್ಲಿ ತೆರೆಗೆ ಬಂದ ಈ ಚಿತ್ರದ ನಿರ್ದೇಶಕರು ಬಾಂಜೋಂಗ್ ಪಿಸನ್‌ತನುಕನ್ ಮತ್ತು ಪಾರ್ಕ್‌ಪೂಮ್ ವಾಂಗ್‌ಪೂಮ್. ಈ ನಿರ್ದೇಶಕದ್ವಯರ ಹಿಂದಿನ ಚಿತ್ರ ಶಟರ್ ನೀವು ನೋಡಿರಬಹುದಾದರೂ ಈ ಚಿತ್ರದ ವಿಭಿನ್ನ ಕಥೆ ಅವರ ನಿರ್ದೇಶನದ ಚಿತ್ರಗಳಲ್ಲೇ ವಿಶಿಷ್ಟವೆನಿಸುತ್ತದೆ. ಪ್ರಾರಂಭದಲ್ಲಿ ಹಾರರ್ ಭೂತ-ಪ್ರೇತ ಪಿಶಾಚಿಯ ಚಿತ್ರದಂತೆ ಭಾಸವಾದರೂ ಬರುಬರುತ್ತಾ ಮನಶಾಸ್ತ್ರದಡಿಯಲ್ಲಿ ಉತ್ತಮ ಮನೋವೈಜ್ಞಾನಿಕ ಚಿತ್ರವಾಗಿಯೂ, ಮನೋಜ್ಞ ಚಿತ್ರವಾಗಿಯೂ ನಮ್ಮ ಮನಗೆಲ್ಲುತ್ತದೆ. ಚಿತ್ರದ ಮಂದಗತಿಯ ನಿರೂಪಣೆ ಬೋರ್ ತರಿಸುವುದಿಲ್ಲ.
ಸಯಾಮಿ  ಅವಳಿಗಳ ಬಗ್ಗೆ ಸುಮಾರು ಸಿನೆಮಾಗಳು ಬಂದಿವೆ.ನೀವು ಖ್ಯಾತ ನಿರ್ದೇಶಕ ಬ್ರಯಾನ್ ಡಿ ಪಲ್ಮ ನಿರ್ದೇಶನದ 1973 ರಲ್ಲಿ ತೆರೆಗೆ ಬಂದ ಸಿಸ್ಟರ್ಸ್ ಸಿನೆಮಾ ನೋಡಿರಬಹುದು.ಅದು 2006 ರಲ್ಲೂ ಕೂಡ ಪುನರ್ನಿರ್ಮಾಣವಾಗಿತ್ತು. ಸಿಸ್ಟರ್ಸ್ ಹೆಚ್ಚುಕಡಿಮೆ ಇದೆ ರೀತಿಯ ಕಥೆ ಹೊಂದಿದ್ದರೂ ಅದರಲ್ಲಿ ಪತ್ತೆಧಾರಿಕೆಗೆ ಹೆಚ್ಚು ಗಮನಕೊಡಲಾಗಿತ್ತು.ಹಾಗೆ 2003ರಲ್ಲಿ ಬಂದ ಸ್ಟಕ್ ಆನ್ ಯೂ, 1999ರಲ್ಲಿ ಬಂದ ಟ್ವಿನ್ಸ್ ಫಾಲ್ಸ್ ಇಡಾಹೋ ಕೂಡ ಸಯಾಮಿ ಅವಳಿಗಳ ಕುರಿತಾದ ಸಿನೆಮಾಗಳಾಗಿವೆ.
ಈಗ ಕನ್ನಡದಲ್ಲೂ ಕೂಡ ದ್ವಾರಕೀಶ್ ನಿರ್ಮಾಣದ. ಪಿ.ಕುಮಾರ್ ನಿರ್ದೇಶನದ 'ಚಾರುಲತ' ಕೂಡ ಸಯಾಮಿ ಅವಳಿಸೋದರಿಯರ ಕಥೆಯಾಧಾರಿತ ಚಿತ್ರವಾಗಿದೆ.

.

1 comment:

  1. i have a great fascination for twins...the movies u named in this post are now in my list..thanks
    :-)
    malathi S

    ReplyDelete