Friday, April 26, 2013

ವರ್ಷಾಚರಣೆಯಲ್ಲಿ ನನ್ನ ಬ್ಲಾಗು...

ಸಾರ್..ಸಂಭಾವನೆ ಆಮೇಲೆ ಮಾತಾಡೋಣ..ನನ್ನ ಮೊದಲ ಚಿತ್ರವಾದ್ದರಿಂದ ನನಗೆ ಒಂದಷ್ಟು ಸ್ವಾತಂತ್ರ್ಯ ಕೊಡಿ, ನನ್ನ ಮೇಲೇ ನಂಬಿಕೆ ಇಡಿ ಎಂದು ನಮ್ಮ ನಿರ್ಮಾಪಕರಿಗೆ ಹೇಳಿದ್ದೆ. ಇದು ಮೂರ್ನಾಲ್ಕು ವರ್ಷಗಳ ಹಿಂದಿನ ಮಾತು. ಅದಕ್ಕೆ ನಿರ್ಮಾಪಕರೂ ಒಪ್ಪಿದ್ದರು . ಹಾಗೆ ನನ್ನ ಮೊದಲ ಸಿನೆಮಾದ ಯಾನ ಪ್ರಾರಂಭವಾಗಿತ್ತು. ಮೊದಲ ಸಿನಿಮಾ ಹೀಗೆಯೇ ಇರಬೇಕೆಂಬ ಆಸೆ, ಚಿತ್ರಣ ನನ್ನ ಕಣ್ಣಲ್ಲಿತ್ತು. ನನ್ನ ಗೆಳೆಯರು ನನ್ನ ಮೊದಲ ಸಿನಿಮಾವಾದ್ದರಿಂದ ಹೆಚ್ಚು ಹಣ ಅಪೇಕ್ಷೆ ಮಾಡದೇ ಕೆಲಸ ಮಾಡಲು ಸಿದ್ಧರಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏನಾಗುತ್ತಿತ್ತೋ? ಆದರೆ ಆಗಲಿಲ್ಲ, ನಿರ್ಮಾಪಕರ ಸಣ್ಣತನದ ಸಂಪೂರ್ಣ ಅರಿವಾಗುವಷ್ಟರಲ್ಲಿ ಕಾಲ ಮಿಂಚಿಹೋಗಿತ್ತು. ನಮ್ಮ ನಡುವೆ ಒಂದು ಒಪ್ಪಂದವೂ ಆಗಿಹೋಗಿತ್ತು. ಅದರ ಪ್ರಕಾರ ನಾನೇ ನಾನಾಗಿ ಸಿನಿಮಾ ಮಾಡುವುದಿಲ್ಲ ಎಂದು ಹೋಗುವ ಆಗಿರಲಿಲ್ಲ..ಅಕಸ್ಮಾತ್ ಹಾಗೆ  ಹೋಗುವುದಾದರೆ ಅಲ್ಲಿಯವರೆಗೆ ನಿರ್ಮಾಪಕರ ವೆಚ್ಚವನ್ನೆಲ್ಲಾ ಭರಿಸಿ ಹೋಗಬೇಕಾಗಿತ್ತು. ಹಾಗೆಯೇ ನಿರ್ಮಾಪಕರೂ ಸಕಾರಣವಿಲ್ಲದೇ ನನ್ನ ಸಿನಿಮಾ ಮಾಡದೆ ನಿಲ್ಲಿಸುವ ಹಾಗಿರಲಿಲ್ಲ. ಏಕೋ ಏನೋ ಚಿತ್ರದ ಬರವಣಿಗೆಯ ಕೆಲಸ ಮುಗಿದನಂತರ ನಿರ್ಮಾಪಕರಿಗೆ ಚಿತ್ರವನ್ನು ಮುಂದುವರೆಸುವ ಮನಸ್ಸಾಗಲಿಲ್ಲ. ಹಾಗಂತ ಸಿನಿಮಾ ನಿಲ್ಲಿಸುವ ಹಾಗೂ ಇರಲಿಲ್ಲ. ಅಷ್ಟರಲ್ಲಾಗಲೆ ಕೆಲವು ಲಕ್ಷಗಳೂ ಕೈಬಿಟ್ಟಿದ್ದವು. ಈ ಎಲ್ಲಾ ಗೊಂದಲಗಳಿಂದ ನಾನು ಒಂದೆಡೇ ಅನಾಮತ್ತು ಐದಾರು ತಿಂಗಳು ಸುಮ್ಮನೇ ಇರಬೇಕಾದ ಕೆಟ್ಟ ಪರಿಸ್ಥಿತಿ ಬಂದುಬಿಟ್ಟಿತ್ತು. ನನಗೂ ನಿರ್ಮಾಪಕರಿಗೂ ಮುಖ ಕಂಡರೇ ಆಗದಂತಹ ಪರಿಸ್ಥಿತಿ. ಆ ತಿಂಗಳುಗಳಲ್ಲಿ ಏನು ಮಾಡುವುದು? ಹತಾಷೆ ಬೇಸರ ನನ್ನನ್ನಾವರಿಸಿದ್ದವು. ಅದನ್ನು ಕಳೆಯಲು ಪುಸ್ತಕ ಸಿನಿಮಾಗಳ ಮೊರೆಹೋದೆ. ದಿನಕ್ಕೆ ಕನಿಷ್ಟ ನಾಲ್ಕು ಸಿನಿಮಾ ನೋಡತೊಡತೊಡಗಿದೆ. ಜಗತ್ತಿನ ಮೂಲೆಮೂಲೆಯ ಚಿತ್ರಗಳನ್ನು ಹುಡುಕಿಹುಡುಕಿ ನೋಡಿದೆ. ಆನಂತರ ಆ ಸಿನಿಮಾ ನಿಂತು ಹೋಗಿ ಆ ನಿರ್ಮಾಪಕರಿಗೂ ನನಗೂ ಸಂಧಾನವೂ ಆಗಿ ನಾನು ಮತ್ತೆ ಬಂದು ನನ್ನ ಕೆಲಸಗಳಲ್ಲಿ ತೊಡಗಿಸಿಕೊಂಡರೂ ಸಿನಿಮಾ ನೋಡುವುದನ್ನು ಬಿಟ್ಟಿರಲಿಲ್ಲ. ಮತ್ತೆ ಬದುಕು ಹೇಗೇಗೊ ಆಗುತ್ತಿತ್ತು. ಕೈ ಹಾಕಿದ ಕೆಲಸ ಕೈಹಿಡಿಯುತ್ತಿರಲಿಲ್ಲ. ಸೋಲು ಕಂಗೆಡಿಸುತ್ತಿತ್ತು. ಆದರೂ ಸಿನಿಮಾವನ್ನು ಎಡೇಬಿಡದೇ ನೋಡತೊಡಗಿದ್ದೆ. 
ಅದೊಂದು ದಿನ ನಾನು ಫಿಲಿಪ್ ಮಾತಾಡುತ್ತಾ ಕುಳಿತ್ತಿದ್ದೆವು. ಫಿಲಿಪ್ ನಿಮಗೆ ಇಷ್ಟು ಚಿತ್ರಗಳ ನಾಲೆಜ್ ಇದೆ. ಹಾಗೆ ಬರವಣಿಗೆಯೂ ಇದೆ. ಪುಸ್ತಕ ಓದುತ್ತೀರಿ. ನೀವ್ಯಾಕೆ ಇದಕ್ಕೆ ಸಂಬಂಧಿಸಿದ ಬ್ಲಾಗ್ ಬರೆಯಬಾರದು ಎಂದರು. ನನಗೆ ಬ್ಲಾಗ್ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಸರಿ ಪ್ರಯತ್ನಿಸುವ ಎಂದು ಮನೆಗೆ ಬಂದವನಿಗೆ ಫಿಲಿಪ್ ಒಂದಷ್ಟು ಬ್ಲಾಗುಗಳ ಲಿಂಕ್ ಕಳಿಸಿದ್ದರು. ಅದರ ಜೊತೆಗೆ ಕನ್ನಡದ ಸುಮಾರು ಬ್ಲಾಗುಗಳನ್ನು ಓದಿದೆ. ಸಿನಿಮಾಕ್ಕೆ ಸಂಬಂಧಿಸಿದ ಬ್ಲಾಗುಗಳನ್ನು ತಿರುವಿಹಾಕಿದೆ. ಸರಿ ಒಂದು ಬ್ಲಾಗು ಮಾಡೇ ಬಿಡುವ ಎಂದು ನನ್ನ ಮೊದಲ ಬ್ಲಾಗು ಬರೆದೆ. ಅದು ಯಶಸ್ವಿಯಾಗಲಿಲ್ಲ. ಅದನ್ನು ಪೋಸ್ಟ್ ಮಾಡುವ ಅದನ್ನು ಫೇಸ್ ಬುಕ್ ನಲ್ಲಿ ಲಿಂಕ್ ಮಾಡುವ ಮುಂತಾದವುಗಳು ನನಗೆ ಗೊತ್ತಿರಲಿಲ್ಲ. ಹಾಗೆ ನನಗೆ ಅಂತರ್ಜಾಲ ಸಂಬಂಧಿ ಗೆಳೆಯರೂ ಹೆಚ್ಚು ಜನರಿರಲಿಲ್ಲ.
ಆನಂತರ ರವೀಂದ್ರ ಟಾಕೀಸ್ ಮಾಡಿದೆ. ಈವತ್ತಿಗೆ ಒಂದು ವರ್ಷವಾಯಿತು. ಬರೆಬರೆಯುತ್ತಾ ಎಷ್ಟೋ ವಿಷಯಗಳು ನನಗೆ ಅರಿವಾದವು. ಈಗಂತೂ ದಿನಾ ಸಮಯ ಸಿಕ್ಕಾಗಲೆಲ್ಲಾ ಸುಮಾರಷ್ಟು ಬ್ಲಾಗುಗಳನ್ನು ಓದುತ್ತೇನೆ. ಕೆಲವನ್ನು ರೆಗ್ಯುಲರಾಗಿ ಓದುತ್ತೇನೆ. ಹೊಸ ಬ್ಲಾಗು ಪ್ರಾರಂಭವಾದರೆ ಇನ್ನು ಖುಷಿಯಿಂದ ಓದುತ್ತೇನೆ. ಬ್ಲಾಗುಗಳ ಮೂಲಕ ಹೊಸ ಲೋಕವೊಂದು ತೆರೆದುಕೊಂಡಂತೆನಿಸಿದೆ. ಹಾಗೆ ನನ್ನ ಹಲವಾರು ಸೋಲು ಹತಾಷೆಗೆ ಅದ್ಭುತವಾದ ಔಷಧವಾಗಿದೆಯಲ್ಲದೇ, ನನಗೆ ಹಲವಾರು ಸಮಾನಮನಸ್ಕ ಗೆಳೆಯರನ್ನು ಸಂಪಾದಿಸಿಕೊಟ್ಟಿದೆ.
ಹಾಗಾಗಿ ನಾನು ಬ್ಲಾಗಿಗೆ ಋಣಿಯಾಗಿದ್ದೇನೆ.

6 comments:

 1. congrats ಸಾರ್.. ನೀವು ಬರೆಯೋಕೆ ಶುರು ಮಾಡಿದ್ದು ನಿಜಕ್ಕೂ ಒಳ್ಳೆಯದೇ ಆಯ್ತು.. ನಿಜಕ್ಕೂ ಜಗತ್ತಿನ ಒಂದಷ್ಟು ಒಳ್ಳೆ ಸಿನಿಮಾಗಳ ಪರಿಚಯದ ಕೈಪಿಡಿ ನಿಮ್ಮ ಬ್ಲಾಗ್.. ಈ ಲವಲವಿಕೆ ನಿರಂತರವಾಗಿರಲಿ.. ನಿಮ್ಮ ಸಿನಿಮಾವನ್ನ ಎದುರು ನೋಡ್ತಾ ಇದ್ದೇವೆ.. ಆದಷ್ಟು ಬೇಗ ಬರಲಿ.. :)

  ReplyDelete
 2. ನಿಮ್ಮ ಸಿನಿಮಾ ಮತ್ತು ಬರವಣಿಗೆ ಬಗ್ಗೆ ಇರುವ ಪ್ರೀತಿ ನಿಜಕ್ಕೂ ನನಗೆ ಪ್ರೇರಣೆ!

  ReplyDelete
 3. Congrats Tamma. i enjoy reading ur posts.
  once lady luck will grace you there will be no turning back. do not be disheartened
  best wishes
  :-)
  malathi S

  ReplyDelete
 4. you are writing great as usual. congrats. and i am proud and happy.
  Good luck.


  Manjula.B

  ReplyDelete
 5. ಬರೀ ಒ೦ದೇ ವರ್ಷಾನಾ?
  ನಿಮ್ಮ ಈ ಸಿನೆಮಾ ಗೀಳಿಗೆ ಜಾಸ್ತಿ ಕಿಚ್ಚು ಹಚ್ಚಲಿ. ಇನ್ನೂ ಜಾಸ್ತಿ ಚಿತ್ರ ನೋಡಿರಿ ಬರೆಯಿರಿ. ಅಭಿನ೦ದನೆಗಳು.
  ನಾನೂ ವರ್ಲ್ಡ್ ಸಿನೆಮಾ ಬಗ್ಗೆ ಚಿಕ್ಕ ಚಿಕ್ಕ ನೋಟ್ಸ್ ಮಾಡೋನ ಈ ಬ್ಲಾಗ್ ಅ೦ತಾ ಶುರು ಮಾಡಿದ್ದೀನಿ.
  http://lokacinema.wordpress.com/
  ಸಮಯ ಸಿಗುತ್ತಿಲ್ಲ.

  ReplyDelete
 6. Congrats sir.. :)

  ReplyDelete