Saturday, August 25, 2012

ಒ೦ದು ಪುಸ್ತಕ..ಒ೦ದು ಸಿನಿಮಾ..


ಬಿ.ಕೆ.ಶಿವರಾಂ ಅವರ ಪೊಲೀಸ್ ಕಂಡ ಕಥೆಗಳು ಓದಿಯಾಯಿತು. ಅದು ಪ್ರಜಾವಾಣಿಯಲ್ಲಿ ಬರುತ್ತಿದ್ದಾಗಲೇ ಅವಾಗಾವಾಗ ಓದುತ್ತಿದ್ದೆನಾದರೂ ಇಡಿಯ ಪುಸ್ತಕವನ್ನು ಓದುವ ಖುಷಿ ದೊಡ್ಡದು. ಅದೊಂದು ಸಮಗ್ರ ಭಾವನೆಗಳ ಕಾದಂಬರಿ ಎನ್ನಬಹುದು, ಅಥವಾ ಜಗತ್ತಿನ ಅಷ್ಟೂ ವಿಷಯಗಳ ಸಮಗ್ರ ಚಿತ್ರಣ ಎನ್ನಬಹುದು. ಯಾಕೇಂದರೆ ಇಲ್ಲಿ ಎಲ್ಲಾ ಇದೆ. ಪೋಲೀಸ್ ಜಗತ್ತಿನ ಮೂಲಕ ಪೋಲೀಸ್ ಕಣ್ಣುಗಳ ಮೂಲಕ ಒಂದಷ್ಟು ಘಟನೆಗಳನ್ನು ವಿವರಿಸುವ ಶಿವರಾಂ ಯಾವುದೇ ಉತ್ಪ್ರೇಕ್ಷೆಯ ಬರವಣಿಗೆಯ ಮಾರುಹೋಗದೆ ಸುಮ್ಮನೆ ನಡೆದಿದ್ದನ್ನು ನಡೆದ ಹಾಗೆ ಹೇಳುತ್ತಾ ಹೋಗುತ್ತಾರೆ. ಯಾರನ್ನೂ ಅತಿಯಾಗಿ  ಹೊಗಳದೆ ಆದರೆ ಅವರು ಕೆಲಸ ಮಾಡಿದ ರೀತಿ, ಅದರಿಂದಾದ ಲಾಭವನ್ನು ಶ್ಲಾಘಿಸುತ್ತಾ ಹಾಗೆಯೇ ಅವರ ಪರಿಶ್ರಮಕ್ಕೆ ಕಿರು ಶಹಬ್ಬಾಸ್ ಕೊಡುವ ಶಿವರಾಂ ಹಾಗೆಯೇ ಕೆಲವರ ಸಣ್ಣತನವನ್ನು ಅಷ್ಟೇ ನೇರವಾಗಿ, ಆದರೆ ಬೇಸರದಿಂದ ವಿವರಿಸುತ್ತಾ ಹೋಗುತ್ತಾರೆ. ಅತೀ ಚಿಕ್ಕ ಚಿಕ್ಕ ಕೇಸುಗಳಿಗೂ ಪೋಲೀಸರು ಪಡುವ ಶ್ರಮ ಎಷ್ಟಿರುತ್ತದೆ ಎಂಬುದು   ನಮಗೆ ಗೊತ್ತಾಗಬೇಕಾದರೆ ಈ ಪುಸ್ತಕವನ್ನೊಮ್ಮೆ ಓದಲೇಬೇಕು.ಪುಸ್ತಕ ಓದಿಯಾದ ಮೇಲೆ ನನಗೇ ಈಗ ಬಸ್ ನಿಲ್ದಾಣದಲ್ಲೋ, ರೈಲು ನಿಲ್ದಾಣದಲ್ಲೋ ಕಂಡು ಬರುವ ಭಿಕ್ಷುಕ, ಹಣ್ಣಿನ ವ್ಯಾಪಾರಿ, ಆಟೋ ಡ್ರೈವರ್, ಕಸ ಗುಡಿಸುವವನು ಪೊಲೀಸಿರಬಹುದಾ..? ಎನಿಸಲು ಪ್ರಾರಂಭಿಸಿಬಿಟ್ಟಿದೆ.
 ಪುಸ್ತಕದ ಇನ್ನೊಂದು ವಿಶೇಷವೆಂದರೆ ಅದರ ಕಾಲಘಟ್ಟ. ಶಿವರಾಮ್ ರವರು ತಾವು ಪೊಲೀಸಾದ ದಿನದಿಂದ ನಡೆದ ಘಟನೆಗಳನ್ನು ತೀರಾ ಕಾಲಕ್ರಮಬದ್ದವಾಗಿ ವಿವರಿಸದೇ ಹೋದರೂ 1978 ರ ನಂತರದ ಬೆಂಗಳೂರಿನ ಒಂದು ಮುಖವನ್ನು ತುಂಬಾ ಚೆನ್ನಾಗಿ ಪರಿಚಯಿಸುತ್ತಾರೆ. ಆವತ್ತಿನ ಪೋಲೀಸರ ಕಾರ್ಯ ವೈಖರಿ, ಪೇಜರ್  ಮೊಬೈಲ್ ಮುಂತಾದವುಗಳು ಬಂದ ಮೇಲೆ ಹೇಗೆ ಕಾರ್ಯವೈಖರಿ ಬದಲಾಯಿತು ಅದೇ ರೀತಿ ಅಪರಾಧ ಜಗತ್ತೂ ಹೇಗೆ ಬದಲಾಯಿತು ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಹೇಗೆ ಸಂವಹನ ತಂತ್ರಜ್ಞಾನವನ್ನು ಪೊಲೀಸ್ ವ್ಯವಸ್ಥೆ ಅಪರಾಧ ತಡೆಯಲು, ಫತ್ತೆ ಮಾಡಲು ಬಳಸಿಕೊಂಡಿತೋ ಅದೇ ರೀತಿಯಾಗಿ ಪಾತಕ ಜಗತ್ತು ಕೂಡ ಆಧುನಿಕ ತಂತ್ರಜ್ಞಾನವನ್ನು ಕೂಡ ಅಪರಾಧವೆಸಗಲು ಹೆಚ್ಚಾಗಿ ಬಳಸಿಕೊಂಡಿದ್ದು ವಿಪರ್ಯಾಸವೆನಿಸುತ್ತದೆ.
ಕೆಲವು ಅಪರಾಧಿಗಳನ್ನು ಹಿಡಿಯಲು ಪೋಲೀಸರು ನಡೆಸಿದ ಕಾರ್ಯಾಚರಣೆ ಯಾವ ಪತ್ತೆದಾರಿ ಕಥೆಗೂ ಕಡಿಮೆಯಿಲ್ಲದಂತೆ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಡಾ. ರಾಜಕುಮಾರ್ ವೀರಪ್ಪನ್‌ನಿಂದ ಅಪಹರಣವಾದಾಗಿನ ಪರಿಸ್ಥಿತಿ, ಅವರ ನಿಧನ, ವೀರಪ್ಪನ್ ಕಾಲದ ಕೆಲವು ಘಟನೆಗಳುಪೊಲೀಸ್ ಭಾಷೆ, ಅಪರಾಧ ಜಗತ್ತಿನಲ್ಲಿರುವ ಪದಪುಂಜಗಳು, ಕೊತ್ವಾಲ್, ಜಯರಾಜ್ ಮುಂತಾದವರ ಭೂಗತ ಜಗತ್ತಿನ ಪರಿಚಯ, ಅವರ ಸಾವಿನ ಹಿಂದಿನ ಕಥೆಗಳು, ರಾಜಕಾರಣಿಗಳ, ಹಿರಿಯ ಅಧಿಕಾರಿಗಳ ಹಿರಿಮೆ, ಪ್ರಾಮಾಣಿಕತೆ, ಸ್ವಾರ್ಥ ಮನೋಭಾವನೆ, ಅವಕಾಶವಾದಿ ನಡವಳಿಕೆ, ಸಣ್ಣತನ, ರಾಜೀವ್ ಗಾಂಧಿ ಹತ್ಯೆ, ಹಂತಕ ಶಿವರಾಶನ್ ಮತ್ತವನ ತಂಡದ ಕೊನೆಯ ಕ್ಷಣಗಳು ಹೀಗೆ ನಮಗೆ ಗೊತ್ತಿರುವ ಘಟನೆಗಳ ಗೊತ್ತಿಲ್ಲದ ಇನ್ನೊಂದು ಮುಖವನ್ನು     ಪರಿಚಯಿಸುವ ಉತ್ತಮ ಪುಸ್ತಕ ಪೊಲೀಸ್ ಕಂಡ ಕಥೆಗಳು
ನನಗೆ ಗೊತ್ತಿರುವಂತೆ ಸುಮಾರು ಜನ ಪೊಲೀಸರನ್ನು ಮನುಷ್ಯರಂತೇ ನೋಡುವುದೇ ಇಲ್ಲ.ಅವರನ್ನು ಒಂದು ರೀತಿಯ ಕಳ್ಳರಂತೆ, ಲಂಚಕೋರರಂತೆ ನೋಡುತ್ತಾರೆ. ಅವರ ಬೆನ್ನ ಹಿಂದೆ ಬೈಯ್ದುಕೊಳ್ಳುತ್ತಾರೆ. ಅವರಿಗೇ ಏನಾದರೂ ಆದರೆ ಸರಿಯಾಯ್ತು ಅವ್ರಿಗೆ.. ಎಂದು ಖುಷಿ ಪಡುತ್ತಾರೆ.ಅದಕ್ಕೆಲ್ಲಾ ಕೆಲವು ಅಪ್ರಾಮಾಣಿಕ ಪೊಲೀಸರೇ ಕಾರಣವಾದರೂ ಪೊಲೀಸರೂ ನಮ್ಮ ನಿಮ್ಮಂತೆಯೇ ಸಾಮಾನ್ಯರೇ..ಮತ್ತವರ ಕಷ್ಟಗಳೂ ಸಾಕಷ್ಟಿರುತ್ತವೇ ಎನ್ನುವುದನ್ನು ತುಂಬಾ ಚೆನ್ನಾಗಿ ವಿಶದ ಪಡಿಸುತ್ತದೆ ಈ ಕೃತಿ.
 ಭಯೋತ್ಪಾದಕರಿಂದ ಬರ್ಬರವಾಗಿ ಕೊಲೆಯಾದ ಪತ್ರಕರ್ತ ಡೇನಿಯಲ್ ಪರ್ಲ್‌ನ ಕಥೆಯಾಧಾರಿತ ಚಿತ್ರ ಎ ಮೈಟೀ ಹಾರ್ಟ್, 9 ಸಾಂಗ್ಸ್, ಎ ಸಮ್ಮರ್ ಇನ್ ಜಿನೋವಾ ಚಿತ್ರಗಳ ನಿರ್ದೇಶಕ ಮೈಕಲ್ ವಿಂಟರ್‌ಬಾಟಮ್ ನಿರ್ದೇಶನದ ತೃಷ್ಣಾ ಚಿತ್ರ ನೋಡಲು ಬೇರೆಯದೆ ಕಾರಣಗಳಿದ್ದವು ನನಗೆ. ಅದರಲ್ಲಿ ಮುಖ್ಯವಾದವು ಆ ಸಿನಿಮಾ ಅನುರಾಗ್ ಕಶ್ಯಪ್ ಸಹಭಾಗಿತ್ವದೊಂದಿಗೆ ತಯಾರಾದ ಚಿತ್ರ ಎನ್ನುವುದು ಮುಖ್ಯವಾದದ್ದು. ನನಗೇ ಬಾಲಿವುಡ್‌ನಲ್ಲಿ ಇಷ್ಟವಾದ ಚಿತ್ರಕರ್ಮಿ ಎಂದರೆ ಅನುರಾಗ್ ಕಶ್ಯಪ್. ಬರಹಗಾರನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಆತನ ಪ್ರಯತ್ನಗಳು    ಯಾವತ್ತಿಗೂ ಶ್ಲಾಘನೀಯವೇ. ವರ್ಮಾರ ಸತ್ಯ ಚಿತ್ರದ ಬರವಣಿಗೆಯ ಮೂಲಕ ಬೆಳಕಿಗೆ ಬಂದ ಕಶ್ಯಪ್ ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪು ಒತ್ತಿದ ವ್ಯಕ್ತಿ. ಕೌನ್, ಶೂಲ್, ಜಂಗ್,      ನಾಯಕ್,ಯುವ, ಪೈಸ ವಸೂಲ್, ವಾಟರ್, ವ್ಯಾಲಿ ಆಫ್ ಪ್ಲವರ್ಸ್, ತಲಾಶ್ ಚಿತ್ರಗಳಿಗೆ ಬರಹಗಾರನಾಗಿ, ಶೈತಾನ್, ಉಡಾನ್ನಂತಹ ಚಿತ್ರಗಳ  ನಿರ್ಮಾಪಕನಾಗಿ, ಗ್ಯಾಂಗ್ಸ್ ಆಫ್ ವಾಸ್ಸೀಪುರ್, ದೇವ್ ಡಿ, ಬ್ಲ್ಯಾಕ್ ಫ್ರೈಡೇ ನಂತಹ ಚಿತ್ರಗಳ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಕಶ್ಯಪ್ ಪ್ರತಿಭಾವಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನು ಸಿನಿಮಾದ ವಿಷಯಕ್ಕೆ ಬಂದರೆ ತೃಷ್ಣಾ ಸಿನಿಮಾ ಟಾಮ್ ಹಾರ್ಡಿಯ ಕಾದಂಬರಿ ಆಧರಿಸಿದ ಚಿತ್ರ. ಇದೇ ಕಾದಂಬರಿ ಆಧರಿಸಿ ಇದುವರೆವಿಗೆ ಮೂರ್ನಾಲ್ಕು ಸಿನಿಮಾಗಳು ಬಂದಿರಬಹುದು. ತೃಷ್ಣಾ ದುರಂತ ಹೆಣ್ಣುಮಗಳೊಬ್ಬಳ ಕಥೆ. ರಾಜಸ್ಥಾನದ ಟ್ರಕ್ ಡ್ರೈವರೊಬ್ಬನ ಮಗಳಾದ ತೃಷ್ಣಾಗೆ ಅದೊಂದು ದಿನ ಆಕಸ್ಮಿಕವಾಗಿ ಶ್ರೀಮಂತ ಕುಟುಂಬದ ಯುವಕನೊಬ್ಬ ಪರಿಚಯವಾಗುತ್ತಾನೆ. ಮುಂದೆ ಅನೂಹ್ಯ ಘಟನೆಗಳು ಜರುಗಿ ಅವರಿಬ್ಬರೂ ಒಂದಾಗುವಂತೆ ಮಾಡುತ್ತವಾದರೂ ಕೆಲವು ಅಂಶಗಳು ಸಮಾಜದಲ್ಲಿ ಅವರಿಬ್ಬರನ್ನು ಗಂಡ-ಹೆಂಡಿರಂತೆ ಬದುಕಲು ಆಸ್ಪದ   ಕೊಡುವುದಿಲ್ಲ. ಇದರಿಂದ ತುಂಬಾ ಖಿನ್ನತೆಗೊಳಗಾಗುವ ನಾಯಕಿ ಈ ಜಗತ್ತಿನ ಹಂಗೇ ಬೇಡ ಎನ್ನುವಂತೆ ಆತ್ಮಹತ್ಯೆ ಮಾಡಿಕೊಳ್ಳುವ ಅಂತ್ಯವಿರುವ ಈ 
 ಚಿತ್ರದಲ್ಲಿ ಪ್ರೀಡಾ ಪಿಂಟೊ ಸಂಯಮದ ಅಭಿನಯ ನೀಡಿದ್ದಾರೆ. ಆದರೆ ಕೆಲವು ಕಡೆ ಚಿತ್ರಕಥೆ ಇನ್ನೂ ಸೂಕ್ಷ್ಮವಾಗಿರಬೇಕಿತ್ತು ಎನಿಸುತ್ತದೆ. ಅದಕ್ಕೆ ಕಾರಣ ನಿರ್ದೇಶಕರಿರಬಹುದು. ಘಟನೆಗಳ ತೀವ್ರತೆ, ಅದರ ಪರಿಣಾಮಗಳು ಪ್ರೇಕ್ಷಕರನ್ನು ಅಷ್ಟಾಗಿ ತಟ್ಟುವುದಿಲ್ಲ. ಆದರೂ ಒಮ್ಮೆ ನೋಡಲಡ್ಡಿಯಿಲ್ಲ ಎನ್ನಬಹುದು.


4 comments:

 1. :-) am catching up on most of the movies..
  thanks
  ms

  ReplyDelete
 2. ಉತ್ತಮ ನಿರ್ದೇಶಕಗರಿಬೇಕಾದ ಸಂವೇದನೆ ನಿಮ್ಮಲಿದೆ .ಕನ್ನಡ ಚಿತ್ರರಂಗ ನಿಮ್ಮನು ಹೆಚ್ಚಾಗಿ ಬಳಸಿಕೂಳ್ಳಲಿ

  ReplyDelete
 3. ನಾನು ಸಿಕ್ಕಾಪಟ್ಟೆ ಸಿನೆಮಾ ನೋಡುತ್ತೇನೆ. ನನಗೆ ಸಿಕ್ಕಿರುವ/ಗೊತ್ತಿರುವ ಮಟ್ಟಿಗೆ ನನ್ನ೦ತೆಯೇ ಸಿನೆಮಾ ನೋಡುವ ಹುಚ್ಚರು ಬಹಳ ಕಮ್ಮಿ. ಅ೦ತಹವರಲ್ಲಿ ನೀವೊಬ್ಬರು. ನೀವು ವೃತ್ತಿ, ನನ್ನದು ಬರಿಯ ಪ್ರವೃತ್ತಿ.
  ಉಡಾನ್ ಒ೦ಥಾರ ನಮ್ಮ 'ದಿ 400 ಬ್ಲೋಸ್'. ಪಶ್ಚಿಮಾತ್ಯ ದೇಶದಲ್ಲಿ ಉತ್ತಮ ಹೆಸರು ಮಾಡಿದೆ. ಅನುರಾಗ್ ಚಿತ್ರಗಳನ್ನು ಜಾಸ್ತಿ ನೋಡಿಲ್ಲ. ನೋಡಲೇಬೇಕು. ಸದ್ಯಕ್ಕೆ ಮೈಕಲೆ೦ಜೆಲೋ ಆ೦ಟೊನಿಯೋ ನ L'avventura, La notte, L'eclisse ಸಾಲು ಸಾಲಾಗಿ ನೋಡಿದೆ. ಅತ್ಯುತ್ತಮ ಚಿತ್ರಗಳು. ಜರ್ಮನ್ ನ "ಟಿನ್ ಡ್ರಮ್" ಬಹಳ ಚೆನ್ನಾಗಿತ್ತು. ಪೆಡ್ರೋ ಅಮೊಲ್ಡೋವರ್ ನ 'Talk to Her', 'Women on the Verge of a Nervous Breakdown' ಮತ್ತು 'All About My Mother' ಎಲ್ಲವೂ ಚೆನ್ನಾಗಿದ್ದವು.

  ReplyDelete