Monday, August 20, 2012

ನೂರೊ೦ದು ಕನ್ನಡ ಚಿತ್ರಗಳು


ಗೆಳೆಯ, ಆಸ್ಕರ್ಕನ್ನಡ ಚಲನಚಿತ್ರದ ನಿರ್ದೇಶಕ ಕೃಷ್ಣ ಮತ್ತು ನಾನು ಏನೇನೋ ಮಾತಾಡುತ್ತಾ ಕುಳಿತಿದ್ದೆವು. ಕೃಷ್ಣನನ್ನು ನಾನು ಮೈಸೂರಿನಿಂದಲೂ ಬಲ್ಲೆ. ಏನಾದರೊಂದು ಮಾಡುತ್ತಲೇ ಇರುತ್ತಾನೆ. ನಾವಾದರೋ ಬರೀ ಸಿನಿಮಾಕ್ಕೇ ಅಂಟಿಕೊಂಡಿದ್ದರೆ ಆತ ಹಾಗಲ್ಲ ವ್ಯಾವಹಾರಿಕವಾಗಿ, ಸಂಪಾದನೆಯ ನಿಟ್ಟಿನಲ್ಲಿ ಏನಾದರೊಂದು ಮಾಡೇಮಾಡುತ್ತಾನೆ. ನನ್ನ ಸಿನಿಮಾ ಮಾರ್ಚ್ 23 ಅಂತೂ ಇಂತೂ ಬಿಡುಗಡೆಯ ಹಂತದಲ್ಲಿದೆ. ನಾನು ಸಹ ನಿರ್ದೇಶಕನಾಗಿದ್ದಾಗ, ಬರಹಗಾರನಾಗಿದ್ದಾಗ ಹಣ ಸಂಪಾದನೆ ಚೆನ್ನಾಗೇ ಇತ್ತು. ಆವಾಗೆಲ್ಲಾ ಕೆಲಸ ಮಾಡುವ ರೀತಿ, ಕಸುಬುದಾರಿಕೆಯೇ ಬಂಡವಾಳ. ಆದರೆ ಒಮ್ಮೆ ಸ್ವತಂತ್ರ ನಿರ್ದೇಶಕನಾಗಿಹೋದರೆ ಕೇವಲ ಯಶಸ್ಸಷ್ಟೇ ಮಾನದಂಡ. ಆ ಸ್ವತಂತ್ರ ನಿರ್ದೇಶನದ ಸಿನಿಮಾ ಬಿಡುಗಡೆಯಾಗುವವರೆಗೆ ಬೇರೆ ಸಿನಿಮಾದಲ್ಲಿ ಸಹನಿರ್ದೇಶಕನಾಗಿಯೋ, ಬರಹಗಾರನಾಗಿಯೋ ಕೆಲಸ ಮಾಡಲಾಗುವುದಿಲ್ಲ. ಆ ಸಿನಿಮಾ ಬಿಡುಗಡೆಯಾಗಿ ಪರವಾಗಿಲ್ಲ ಎನಿಸಿಕೊಂಡರೆ ಮುಂದಿನ ದಾರಿ ಸುಲಭ. ಇಲ್ಲವಾದಲ್ಲಿ ಮತ್ತೆ ಅಆಇಈಯಿಂದಲೇ ಪ್ರಾರಂಭಿಸಬೇಕಾಗುತ್ತದೆ. ಕೃಷ್ಣ ಮಾತನಾಡುತ್ತ ಏನಪ್ಪಾ ಹೇಗಿದೆ ಸಂಪಾದನೆ ಎಂದದ್ದಕ್ಕೇ ಏನೂ ಇಲ್ಲಪ್ಪಾ ಸಧ್ಯಕ್ಕೆ ಎಂದು ಹೇಳಿದೆ.   
 ‘ಅಲ್ವೋ ಅಷ್ಟೊಂದು ಓದಿದ್ದೀಯ, ಬರೀತೀಯ..ನೀನೆ ಹೀಗಂದ್ರೆ ಹ್ಯಾಗಪ್ಪ..ಈಗೊಂದು ಕೆಲಸ ಮಾಡು..ಎಲ್ಲಾ ಹಾಲಿವುಡ್ ಸಿನಿಮಾಗಳ  ಪಟ್ಟಿಮಾಡಿ ನೋಡಲೇ ಬೇಕಾದ ನೂರೊಂದು ಸಿನಿಮಾಗಳು, ಐನೂರು ಸಿನಿಮಾಗಳು ಅಂತೆಲ್ಲಾ ಪುಸ್ತಕ ಬರೀತಾರೆ. ನೀನ್ಯಾಕೆ ನೋಡಲೇಬೇಕಾದ ಕನ್ನಡದ ನೂರೊಂದು ಚಿತ್ರಗಳು ಅಂತ ಪುಸ್ತಕ ಬರೀಬಾರ್ದು..ನೀನ್ ಬರೀತೀನಂದ್ರೆ ನಾನೆ ಪಬ್ಲಿಶ್ ಮಾಡ್ತೀನಿ..ನಿಂಗೂ ಖರ್ಚಿಗೆ ಕಾಸಾಗುತ್ತೆ..ಅಂದ. ನಾನು ಸರಿ ಎಂದೇನೋ ಒಪ್ಪಿಕೊಂಡು ಬಂದುಬಿಟ್ಟೆ. ಆದರೆ ಯಾವ ಆಧಾರದ ಮೇಲೆ ಸಿನಿಮಾಗಳನ್ನು ವಿಂಗಡಿಸುವುದು, ಮತ್ತು ಅಷ್ಟೆಲ್ಲಾ   
 ಸಿನಿಮಾಗಳನ್ನು ನಾನು ನೋಡುವುದು ಹೇಗೆ..? ಅವುಗಳು ಸಿಗುವುದೆಲ್ಲಿ..? ಎನ್ನುವ ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು.ಕನ್ನಡ ಭಾಷೆಯಲ್ಲಿ ಇಲ್ಲಿಯವರೆಗೆ ಬಂದಿರುವ ಅಷ್ಟೂ ಸಿನಿಮಾಗಳಲ್ಲಿ ಕೇವಲ ನೂರೆನೂರು ಆಯ್ಕೆ ಮಾಡುವುದು ಸರಿ ಕಾಣಲಿಲ್ಲ. ಪುಟ್ಟಣ್ಣ ನಿರ್ದೇಶನದ ಬಹುತೇಕ ಸಿನಿಮಾಗಳು, ಡಾ. ರಾಜಕುಮಾರ್ ಅಭಿನಯದ ಹೆಚ್ಚುಕಡಿಮೆ ನೂರಕ್ಕೂ ಹೆಚ್ಚು ಸಿನಿಮಾಗಳು ಮಾಸ್ಟರ್‌ಪೀಸ್‌ಗಳೇ. ಅದಕ್ಕಾಗಿ ಕನ್ನಡ ಸಿನಿಮಾ ಪ್ರಾರಂಭವಾದಾಗಿನಿಂದ  ಐವತ್ತು ವರ್ಷದವರೆಗಿನ ಸಿನಿಮಾಗಳಲ್ಲಿ ನೂರೊಂದು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವುದೆಂದು ನಿರ್ಧರಿಸಿದೆ. ಮೊದಲಿಗೆ ಕನ್ನಡ ಚಲನಚಿತ್ರದ ಇತಿಹಾಸವನ್ನು ಅದ್ಯಯನ ಮಾಡುವುದಿತ್ತು. ಅದಕ್ಕಾಗಿ ಒಂದಷ್ಟು ಪುಸ್ತಕ ಮತ್ತು ಹಿರಿಯರ ಮೊರೆಹೋದೆ. ಹಾಲಿವುಡ್ ಸಿನಿಮಾಗಳ ಬಗ್ಗೆಯಾದರೆ ಯೋಚನೆಯಿಲ್ಲ.  ಕಂಪ್ಯೂಟರ್ ಮುಂದೆ ಕುಳಿತರೆ ಅಂತರ್ಜಾಲಕ್ಕೆ ಗಂಟುಬಿದ್ದರೆ ಹೆಚ್ಚುಕಡಿಮೆ ಅರ್ಧ ಕೆಲಸ ಆಗಿಹೋಗುತ್ತದೆ. ಆದರೆ ಭಾರತೀಯ ಸಿನಿಮಾಗಳ ಬಗ್ಗೆಯಾದರೆ, ಅದರಲ್ಲೂ ಕನ್ನಡ ಸಿನಿಮಾಗಳ ಬಗ್ಗೆ ಅಷ್ಟು ಮಾಹಿತಿ ಸಿಗುವುದಿಲ್ಲ. ನಾವು ಕನ್ನಡ ಸಿನಿಮಾ ತಯಾರಿಸುವ ಮೊದಲು ಬ್ಯಾನರ್ ನೋಂದಣಿ ಮಾಡಿಸುವಾಗ ನಮ್ಮ ಕನ್ನಡ ಚಲನಚಿತ್ರ ವಾಣಿಜ್ಯಮಂಡಳಿಯವರು ಸುಮಾರು ಪುಸ್ತಕಗಳನ್ನು ಕೊಡುತ್ತಾರೆ. ಅವುಗಳಿಂದ ಸಾಕಷ್ಟು ಉಪಯೋಗವಾಯಿತು. 1934ರಲ್ಲಿ ಸತಿ ಸುಲೋಚನದ ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗ ತನ್ನ ಖಾತೆ ತೆರೆಯಿತು. ಅಲ್ಲಿಂದ 1984ರವರೆಗೆ ಸರಿಸುಮಾರು 938 ಸಿನಿಮಾಗಳು ಬಂದಿವೆ. ಮೊದಲಿಗೆ ಅಷ್ಟೂ ಸಿನಿಮಾಗಳ ಪಟ್ಟಿ ಮಾಡಿದೆ. ಅದೇ ಒಂದು ಸಾಹಸವಾಯಿತು. 1934ರ ಇಡೀ ವರ್ಷದಲ್ಲಿ ಕೇವಲ ಎರಡೇ ಎರಡು ಚಿತ್ರಗಳು ಬಿಡುಗಡೆಯಾದರೆ 1984ರಲ್ಲಿ ಸುಮಾರು 62 ಸಿನಿಮಾಗಳು ಬಿಡುಗಡೆಯಾಗಿವೆ. ಅಷ್ಟೂ ಸಿನಿಮಾಗಳ ಪಟ್ಟಿ ಮಾಡಿದ ಮೇಲೆ ನಾನು ನೋಡಿರುವ ಚಿತ್ರಗಳನ್ನು ಮೊದಲು ಪಕ್ಕಕ್ಕಿರಿಸಿದೆ. ಅದರಲ್ಲಾಗಲೇ ಅರ್ಧದಷ್ಟು ಸಿನಿಮಾ ನಾನು ನೋಡಿದ್ದೆ. ಅದಕ್ಕಾಗಿ ನಮ್ಮೂರಿನ ಚಿತ್ರಮಂದಿರ, ನಮ್ಮಜ್ಜಿ ಊರಿನ ಟೆಂಟು, ಟಿವಿ ವಾಹಿನಿಗಳು ಅದರಲ್ಲೂ ಬೆಂಗಳೂರು ದೂರದರ್ಶನಕ್ಕೆ ನಾನು ಋಣಿ. ಉಳಿದ ಸಿನಿಮಾಗಳಲ್ಲಿ ಬಹುತೇಕ ಡಿವಿಡಿ ಸಿಕ್ಕವು. ಮತ್ತಷ್ಟು ಸಿನಿಮಾಗಳು ಸಿಗಲೇ ಇಲ್ಲ. ಹಾಗಂತ ಬಿಡುವುದಾದರೂ ಹೇಗೆ. ಅದಕ್ಕಾಗಿ ಆ ಸಿನಿಮಾಗಳ ಪಟ್ಟಿ ಹಿಡಿದು ಅದರ ವಾರಸುದಾರರು, ನಿರ್ಮಾಪಕರು, ನಿರ್ದೇಶಕರು, ಲ್ಯಾಬ್ ಹೀಗೆ ಎಲ್ಲೆಂದರಲ್ಲಿ ಅಲೆದಾಡಿದ ಮೇಲೂ ಸಿಕ್ಕ ಮಾಹಿತಿ ಅಪೂರ್ಣ ಎಂದೇ ಹೇಳಬಹುದು. ಮಾಹಿತಿ ಸಿಕ್ಕರೂ ಸಿನಿಮಾ ನೋಡಲು ಸಿಗಲಿಲ್ಲ. ನಮ್ಮ ಆತ್ಮೀಯರು ಹರಿಹರಪುರ ಮಂಜುನಾಥ್ ಜೊತೆಗೆ, ಗೆಳೆಯರಾದ ಗಿರಿಬಾಲು, ಫಿಲಿಪ್ ಪಿಂಟೊ ಕೂಡ ಒಂದಷ್ಟು ಸಹಾಯ ಮಾಡಿದರು. ಈಗ ನೋಡುವಿಕೆ ಬಹುತೇಕ ಮುಗಿದಿದೆ.
ಇನ್ನೇನಿದ್ದರೂ ಬರವಣಿಗೆಯ ಕೆಲಸ.
 ಆದರೂ ಕನ್ನಡದ ಸಿನಿಮಾಗಳನ್ನು ಗುಡ್ಡೆ ಹಾಕಿಕೊಂಡು ನೋಡುತ್ತ ಬಂದರೆ ಅದರ ಅನುಭವವೇ ಬೇರೆ. ಕನ್ನಡ ಭಾಷೆ, ಆವತ್ತಿನ ಕರ್ನಾಟಕದ ಹಳ್ಳಿಗಳು, ಬೆಂಗಳೂರು, ಮೈಸೂರಿನ ಆವಾಗಿನ ಚಿತ್ರಗಳು, ನಮ್ಮದೇ ಆವಾಗಿನ ಸಂಸ್ಕೃತಿ, ಆವತ್ತಿನ ಸ್ಟೈಲ್ ಮುಂತಾದವುಗಳು ಕಣ್ಣಿಗೆ ಕಟ್ಟುತ್ತವೆ. ಅಪ್ಪ ತಾತರು ಹೇಳುತ್ತಿದ್ದ ಕಥೆಗಳಿಗೆ ಲಿಂಕ್ ಸಿಗುವುದಲ್ಲದೇ ಆ ಕಾಲದ ಅನುಭವವಾಗುತ್ತದೆ. ಆವತ್ತಿದ್ದ ವಾಹನಗಳು, ಊಟ ತಿಂಡಿ ಹೋಟೆಲುಗಳು, ವಸ್ತ್ರ ವಿನ್ಯಾಸ, ಕೇಶ ವಿನ್ಯಾಸ ಖುಷಿಕೊಡುತ್ತವೆ. ಅದೆಲ್ಲದರ ಜೊತೆಗೆ ಕನ್ನಡ ಚಿತ್ರರಂಗ ತೆರೆದುಕೊಂಡ ರೀತಿ, ಅದರ ಬೆಳವಣಿಗೆ ಹಂತಗಳು, ತಂತ್ರಜ್ಞಾನದ ಬಳಕೆಯ ಹಂತಗಳು, ಕಥಾವಸ್ತುಗಳ ಆಯ್ಕೆಯಲ್ಲಿನ ಬದಲಾವಣೆಗಳು, ನಟರ ಕಾಲಾನುಕ್ರಮೇಣದ ಬದಲಾವಣೆಗಳು ಚಿತ್ರರಂಗದ ಏಳುಬೀಳುಗಳೆಲ್ಲದರ ಬಗ್ಗೆ ವಿವರವಾದ ಅರಿವು ಮೂಡುತ್ತದೆ.
 ಈ ಪುಸ್ತಕದ ಕಾರಣದಿಂದಾಗಿ ನಮ್ಮ ಸಿನಿಮಾದ ತಲೆಬಿಸಿಯಲ್ಲೇ ಇದ್ದ ನನಗೆ ಒಂದಷ್ಟು ತಲೆಬಿಸಿ ಕಡಿಮೆಯಾಗಲು, ಹೊಸ ಅನುಭವಕ್ಕೆ ತೆರೆದುಕೊಳ್ಳಲು ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಚಿತ್ರರಂಗದ ಇತಿಹಾಸವನ್ನು ಅನುಭವಿಸಲು, ನನ್ನನ್ನು ನಾನು ತೊಡಗಿಸಿಕೊಳ್ಳಲು ಸಹಾಯವಾದದ್ದಂತೂ ನಿಜ. ಕೃಷ್ಣನ ಪ್ರಕಾಶನದ ಮೊದಲ ಪುಸ್ತಕ ಈಗ ಬಿಡುಗಡೆಗೆ ಸಿದ್ಧವಿದೆ. 


9 comments:

 1. Your blog is very interesting and informative. Please let us know when your book releases and where it will be available. Thanks!

  ReplyDelete
  Replies
  1. thanks and sure..i will let u...anyway BIG THANKS...

   Delete
 2. I saw mungaru male in list.Hope you are not keeping only success as yardstick.It should be only on quality of the movie not success.

  ReplyDelete
 3. no. actually ಮು೦ಗಾರು ಮಳೆ ಬರೋದೆ ಇಲ್ಲ. 1934 ರಿ೦ದ 1984 ರವರೆಗೆ ಬ೦ದ ಸಿನಿಮಾಗಳನ್ನ ಮಾತ್ರ ತಗೊ೦ಡಿರೊದು. ಹಾಗೆ ಬರೀ ಯಶಸ್ಸಷ್ಟೇ ಮಾನದ೦ಡ ಮಾಡಿಕೊ೦ಡಿಲ್ಲ.ಅದರ ಜೊತೆಗೆ, ಗುಣಮಟ್ಟ, ಕಥೆಯ ವಸ್ತು, ನಿರೂಪಣ ಶೈಲಿ ಸಿನಿಮಾದ ವಿಶೇಷತೆ...ಹೀಗೆ ಇದರ ಆಧಾರದ ಮೇಲೆ ಸಿನಿಮಾ ಆಯ್ಕೆ ಮಾಡಿಕೊ೦ಡಿದ್ದ್ದೇವೆ.

  ReplyDelete
 4. ಸೂಪರ್. ಇ೦ತಹ ಪುಸ್ತಕವೊ೦ದು ಕನ್ನಡಕ್ಕೆ ಅತ್ಯಗತ್ಯವಾಗಿ ಬೇಕಾಗಿದೆ. ಅದು ನೀವು ಮಾಡಿದ್ದೀರಾ!! ಒಳ್ಳೆಯ ಕೆಲಸ.
  ಒ೦ದಾನೊ೦ದು ಕಾಲದಲ್ಲಿ(5 ವರ್ಷಗಳ ಮು೦ಚೆ) ಬಿಡುವಿದ್ದಾಗ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲದಲ್ಲಿದ್ದ ಕನ್ನಡ ಚಿತ್ರಗಳ ಮಾಹಿತಿಯನ್ನು ವಿಕಿಪೀಡಿಯಾಕ್ಕೆ ನಾನು ಹಾಕಿದ್ದೆ. ಅದು ನಿಮಗೆ ಉಪಕಾರವಾಗಬಹುದೇನೋ..
  http://en.wikipedia.org/wiki/Kannada_films_of_the_1940s
  http://en.wikipedia.org/wiki/Kannada_films_of_the_1950s
  http://en.wikipedia.org/wiki/Kannada_films_of_the_1960s
  http://en.wikipedia.org/wiki/Kannada_films_of_the_1970s
  http://en.wikipedia.org/wiki/Kannada_films_of_the_1980s

  ReplyDelete
 5. ನಿಮ್ಮ ಈ ಪ್ರಯತ್ನಕ್ಕೆ ಯಸಸ್ಸು ಸಿಗಲೆಂದು ಹಾರೈಸುತ್ತೇನೆ! ಹಾಗೇನೆ, ನೀವು ಮಾಡಿದ ಚಿತ್ರಗಳ ಪಟ್ಟಿ, ಚಲನಚಿತ್ರಗಳು ದೊರಕುವ ಸ್ಥಳ, ಅವುಗಳ ಬಗ್ಗೆ ಮಾಹಿತಿ, ಇವನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಿ. ಸಿನೆಮಾ ನೋಡೋ ಹುಚ್ಚಿರೋ ನಮ್ಮಂತಹವರಿಗೂ ಸಹಾಯ ಆಗುತ್ತೆ!

  ReplyDelete
 6. Great work. Plz keep us updated about this work through your blog. Thanks.

  ReplyDelete