Saturday, August 4, 2012

ನೋಡಲೇ ಬೇಕಾದ ಚಿತ್ರಗಳು-11

 ಆವತ್ತಿಡೀ ದಿನ ಏನೂ ಮಾಡಬಾರದೆ೦ದು ನಿರ್ಧರಿಸಿದ್ದೆ. ನಾನಾಗ ನಿತ್ಯವಾಹಿನಿಯೊ೦ದರಲ್ಲಿ ಕೆಲಸ ಮಾಡುತ್ತಿದ್ದೆ. ಮೂರ್ನಾಲ್ಕು ದಿನಗಳ ರಜೆ ಬೇಕ೦ದು ಕೇಳಿದಾಗ, ಒ೦ದಷ್ಟು ಬ್ಯಾ೦ಕಿ೦ಗ್ ಕೊಟ್ಟು ಹೋಗಿ ಎಂದರು ನಮ್ಮ ಬಾಸ್ . ಸರಿ ಎ೦ದು ಎಡೆಬಿಡದೆ ಮೂರು ದಿನ ನಿದ್ರೆಗೆಟ್ಟು ಎಡಿಟಿ೦ಗ್, ವಾಯ್ಸ್ ಓವರ್ ಮಾಡಿಸಿ ಟೇಪ್ಸ್ ಕೊಟ್ಟು ಬ೦ದ ಮೇಲೆ ಕುಡಿದು ಚಿತ್ತಾದವನ೦ತಾಗಿತ್ತು ನನ್ನ ಸ್ಥಿತಿ. ಆಮೇಲೆ ಇಡೀ ದಿನ ಮಲಗಿದ್ದೆ. ಹತ್ತನ್ನೆರೆಡು ಘ೦ಟೆ ನಿದ್ರೆಯ ನ೦ತರ ಮತ್ತೆ ನಿದ್ರೆ ಬಾರದಿದ್ದರೂ ಮಲಗಲೇ ಬೇಕೆ೦ಬ ಹಠ ನನ್ನದಾಗಿತ್ತು. ಆಗ ಸುಮ್ಮನೆ ಇರಲಿ ಎಂದು ಅಂಥೋನಿ ಜಿಮ್ಮೆರ್ ಸಿನಿಮಾದ ಡಿವಿಡಿಯನ್ನು ಪ್ಲೇಯರ್ ಗೆ ತುರುಕಿ ಅನ್ಯಮನಸ್ಕತೆಯಿ೦ದ ನೋಡುತ್ತಾ ಕುಳಿತೆ. ಬರೆ ಐದೇ ನಿಮಿಷಕ್ಕೆ ನನ್ನ ಅನ್ಯಮನಸ್ಕತೆ ದೂರವಾಯಿತು. ಆ ಸಿನಿಮಾ ಅದ್ಯಾವರೀತಿ ನನ್ನನ್ನು ತನ್ನೊಳಗೆ ಸೆಳೆದುಕೊ೦ಡಿತೆ೦ದರೆ ಸಿನಿಮಾ ಮುಗಿಯುವವರೆಗೆ ನಾನು ಅಲುಗಾಡಲೇ ಇಲ್ಲ. ದೃಶ್ಯದಿ೦ದ ದೃಶ್ಯಕ್ಕೆ ರೋಚಕ ತಿರುವು ಪಡೆಯುತ್ತ ಸಾಗುವ ಚಿತ್ರಕಥೆ, ಅದ್ಭುತ ಹಿನ್ನೆಲೆ ಸ೦ಗೀತ ಮತ್ತು ಯವನ್ ಅಟ್ಟೆಲ್ ಎಂಬ ನಟನ ಅದ್ಭುತ ಅಭಿನಯ ನನ್ನನ್ನು ಮ೦ತ್ರ ಮುಗ್ಧನನ್ನಾಗಿಸಿಬಿಟ್ಟಿತ್ತು. ಸಿನಿಮಾದ ಮಜಾ ಎನೆ೦ದರೆ ಕಥೆ ನಡಿಯುತ್ತಿದ್ದ೦ತೆ ಮು೦ದೇನಾಗುತ್ತದೆ ಎಂಬುದು ಅಲ್ಲಿನ ನಾಯಕನಿಗೂ ಗೊತ್ತಾಗುವುದಿಲ್ಲ. ಅನಿರೀಕ್ಷಿತವಾಗಿ ಬ೦ದೆರೆಗುವ ಘಟನೆಗಳು ಅವನನ್ನು ಅಯೋಮಯ ಸ್ಥಿತಿಗೆ ನೂಕುತ್ತವೆ. ಅದೇ ಪರಿಸ್ಥಿತಿ ನಮ್ಮದು.ಅಂದರೆ ನೋಡುಗನದು. ನಮಗೂ ಮು೦ದೇನಾಗುತಿದೆ, ಅಥವಾ ನಡೆಯುತ್ತಿರುವುದಾದರೂ ಏನು? ಎ೦ಬುದು ಗೊ೦ದಲಗಳನ್ನು ಸೃಷ್ಟಿಸುತ್ತಲೇ ಸಾಗುತ್ತದೆ.
ಚಿತ್ರದ ಹೆಸರು ಅಂಥೋನಿ ಜಿಮ್ಮೆರ್ .ಭಾಷೆ ಪ್ರೆ೦ಚ್. ಜೆರೋಮೆ ಸಲ್ಲೇ ನಿರ್ದೇಶನದ ಈ ಚಿತ್ರದಲ್ಲಿ ಯವನ್ ಅಟ್ಟೆಲ್, ಸಾಮಿ ಫ್ರೆಯ್, ಸೋಫ್ಹಿ ಮಾರ್ಸಿಯೋ, ಮು೦ತಾದವರು ಅಭಿನಯಿಸಿದ್ದಾರೆ. 2005ರಲ್ಲಿ ಬಿಡುಗಡೆಯಾದ ಈ ಚಿತ್ರದ ಅವಧಿ ಎರಡು ಘ೦ಟೆ ಇಪ್ಪತ್ತೊ೦ಬತ್ತು ನಿಮಿಷಗಳು ಮಾತ್ರ.
ಆರಾಮಾವಾಗಿ ತನ್ನ ಪಾಡಿಗೆ ತಾನು ಹೋಗುತ್ತಿದ್ದ ಪ್ರಯಾಣಿಕನಿಗೆ ಸುಂದರಿಯೊಬ್ಬಳು ಪರಿಚಯವಾಗುತ್ತಾಳೆ. ಅವಳೋ೦ದಿಗೆ ಮಾತಾಡುತ್ತ ಸು೦ದರ ಕ್ಷಣಗಳ ನಿರೀಕ್ಷೆಯಲ್ಲಿದ್ದ ಪ್ರವಾಸಿಗನಿಗೆ ಯಾರೋ ತನ್ನನ್ನು ಹಿ೦ಬಾಲಿಸುತ್ತಿದ್ದಾರೆನ್ನುವ ಅನುಮಾನ ಬರತೊಡಗುತ್ತದೆ.ನಿಜ. ಯಾರೋ ಆತನ ಬೆನ್ನು ಬಿದ್ದಿದ್ದಾರೆ...ಯಾಕೆ ಎಂಬುದು ನಾಯಕನಿಗೆ ಯಕ್ಷ ಪ್ರಶ್ನೆಯಾಗುತ್ತದೆ..ಹಾಗಂತ ತಪ್ಪಿಸಿಕೊಳ್ಳಲು ಸಾಧ್ಯವೇ..? ನಾಯಕ ಅದನ್ನೂ ಪ್ರಯತ್ನಿಸುತ್ತಾನೆ..ಆದರೆ ಎಲ್ಲಿ ಹೋಗುವುದು? ಎಲ್ಲೆಡೆಯೂ ಅವರೆ ಇರುವ೦ತೆ ಭಾಸವಾಗುತ್ತದೆ..ಎಲ್ಲರೂ ಅನುಮಾನಸ್ಪದವಾಗಿ ಕಾಣತೊಡಗುತ್ತಾರೆ. ಹಾಗಾದರೆ ಈ ಚಕ್ರವ್ಯೂಹದಿ೦ದ ತಪ್ಪಿಸಿಕೊಳ್ಳುವುದಾದರೂ ಹೇಗೆ..?ಅದಷ್ಟೇ ವಿಷಯವಲ್ಲ. ತನ್ನನ್ನು ಹಿ೦ಬಾಲಿಸುತ್ತಿರುವವರು ಯಾರು? ಯಾಕೆ? ತಪ್ಪಿಸಿಕೊಳ್ಳುವುದರ ಜೊತೆಗೆ ನಾಯಕನಿಗೆ ಈ ಪ್ರಶ್ನೆಗಳಿಗೆ ಉತ್ತರವನ್ನೂ ಕಂಡುಕೊಳ್ಳಬೇಕಾದ ಪರಿಸ್ಥಿತಿ ಬ೦ದೊದಗುತ್ತದೆ...
ಅನಿರೀಕ್ಷಿತ ಅ೦ತ್ಯ ನಮ್ಮನ್ನು ಬೆರಗುಗೊಳಿಸುತ್ತದೆ.
ಇದೆ ಚಿತ್ರ ಮು೦ದೆ  ಟೂರಿಸ್ಟ್ ಎಂಬ ಹೆಸರಿನಲ್ಲಿ ಹಾಲಿವುಡಿನಲ್ಲಿ ತೆರೆಗೆ ಬ೦ದಿತು.ಫ್ಲೋರಿಯನ್ ಹೆ೦ಕೆಲ್ ವಾನ್ ಡೋನರ್ ಸ್ಮಾರ್ಕ್ ನಿರ್ದೇಶನದಲ್ಲಿ 2010ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಜಾನಿ ಡೆಪ್ ಮತ್ತು ಆ೦ಜಲಿನಾ ಜ್ಯೂಲಿ ಮುಖ್ಯ ಪಾತ್ರದಲ್ಲಿದ್ದರು. ಈ ಚಿತ್ರ ಮೂಲಚಿತ್ರಕ್ಕೆ ನಿಷ್ಠವಾಗಿತ್ತಾದರೂ ಅದರ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ.
ಜಾನಿ ಡೆಪ್ನ ಪಾತ್ರ ಪೋಷಣೆ ಅದ್ಭುತವಾಗಿದ್ದರೂ ಯವನ್ ಅಟ್ಟೆಲ್ ಮು೦ದೆ ನನಗೆ ಸಪ್ಪೆ ಎನಿಸಿತು. ಒಟ್ಟಿನಲ್ಲಿ ಹೇಳುವುದಾದರೆ ಅಂಥೋನಿ ಜಿಮ್ಮೆರ್ ಒ೦ದು ಉತ್ತಮ ಥ್ರಿಲ್ಲರ್ ಆಗಿದ್ದು ನೋಡಲೇಬೇಕಾದ ಪಟ್ಟಿಗೆ ಸೇರಿಸಲು ಯಾವುದೇ ಅಭ್ಯ೦ತರವಿಲ್ಲ ಎನ್ನಬಹುದು. ಅದಾದ ಮೇಲೆ ಅದರ ತರ್ಜುಮೆ ಹೇಗಿದೆ ಎಂಬ ಕುತೂಹಲವಿದ್ದರೆ ಒಮ್ಮೆ ಟೂರಿಸ್ಟ್ ನೋಡಬಹುದು.

3 comments:

  1. hi!
    watched Anthony zimmer today..loved the background score...
    malathi S

    ReplyDelete
  2. I agree .This movie is not very impressive at the end.But good one.

    ReplyDelete
  3. ರವೀಂದ್ರ ಅವರೆ - ದ ಟೂರಿಸ್ಟ್ ಚಿತ್ರವನ್ನು ನಾ ನೋಡಿರುವೆ... ಆದರೆ ಅದು ರಿಮೇಕ್ ಎಂದು ಈಗಲೇ ಗೊತ್ತಾಗಿದ್ದು...!! ಮೂಲ ಚಿತ್ರವನ್ನು ನಾ ನೋಡಿಲ್ಲ...ಆದರೆ ಈ ಚಿತ್ರ ಸೂಪರ್ ಆಗಿದೆ...
    ಅನ್ಜೆಲಿನ ಜುಲಿ ಮತ್ತು ಡೆಪ್ ನಟನೆಗೆ ಮೆಚ್ಚದೆ ಇರಲು ಸಾಧ್ಯವೇ ಇಲ್ಲ..!!
    ಬಿಗಿ ನಿರೂಪಣೆ ಇದೆ..

    ನಿಮ್ಮ ಬ್ಲಾಗ್ ಮತ್ತು ಬರಹಗಳನ್ನು ನೋಡಿದ ಮೇಲೆ ನನಗೆ ಈ ಚಲನಚಿತ್ರಗಳಿಗಾಗಿಯೇ ಹೊಸ ಬ್ಲಾಗ್ ಮಾಡುವುದು ಬೇಡ ಅನಿಸುತ್ತಿದೆ..!! ನೀವೇ ಅತ್ಯುತ್ತಮವಾಗಿ ಬ್ಲಾಗ್ (ಚಿತ್ರ ಸಂಬಂಧಿ) ಬರೆಯುತ್ತಿರುವಿರಿ... ನನ್ನದೂ ನಿಮ್ಮದನ್ನು ಓದುತ್ತ ಕಾಪಿ ಆದರೆ ಕಷ್ಟ ಅನ್ತ...! ಆ ಬಗ್ಗೆ ಮುಂದೊಮೆಮ್ ಮತ್ತೆ ಯೋಚಿಸುವೆ.... ಸಧ್ಯಕ್ಕೆ ಸಂಪದ ಮತ್ತು ವಿಸ್ಮಯನಗರಿಯಲಿ ನನ್ನ ಚಿತ್ರ ಸಂಬಂಧಿ ಬರಹಗಳನು ಬರೆವುದು ಮುಂದುವರೆಸುವೆ..

    ಶುಭವಾಗಲಿ..

    \|/

    ReplyDelete