Wednesday, January 9, 2013

ನಮ್ಮ ಚಿತ್ರರಂಗದಲ್ಲೂ ದಂತಕಥೆಗಳಿವೆ..

ರಭಾಷಾ ಚಿತ್ರರಂಗದಲ್ಲಿ ನಡೆಯುವ ವಿಶೇಷ ಘಟನೆಗಳು ದಂತಕಥೆಗಳಾಗಿ ಪ್ರಸಿದ್ಧವಾಗುತ್ತವಲ್ಲದೆ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗುತ್ತವೆ. ಆದರೆ ನಮ್ಮಲ್ಲೇ ನಡೆಯುವ ಘಟನೆಗಳ ಬಗ್ಗೆ ಯಾರೂ ಮಾತಾಡುವುದಿಲ್ಲ.
ನಮ್ಮ ಪುಸ್ತಕ ಬರೆಯುವ ಸಮಯದಲ್ಲಿ ಶಂಖನಾದ ಚಿತ್ರ ನನ್ನ ಗಮನ ಸೆಳೆದದ್ದು ಅದರ ವಿಶೇಷ ಕಥೆಯಿಂದಾಗಿ. ಮನೆಮನೆ ಅಲೆವ ದಾಸಯ್ಯನೊಬ್ಬ  ಅನಿರೀಕ್ಷಿತವಾಗಿ ಪಂಚಾಯತಿ ಚೇರ್ಮನ್ ಆಗಿಬಿಡುತ್ತಾನೆ. ಆನಂತರದ ಮತ್ತು ಅದಕ್ಕೂ ಮೊದಲಿನ ಘಟನೆಗಳು ನಮ್ಮನ್ನು ಆವತ್ತಿನ ಈವತ್ತಿನ ಮತ್ತು ಯಾವತ್ತಿನ ರಾಜಕೀಯ ಪರಿಸ್ಥಿತಿಯ ವಿಡಂಬನಾತ್ಮಕ ಲೋಕಕ್ಕೆ ಕರೆದುಕೊಂಡು ಹೋಗಿಬಿಡುತ್ತವೆ. ನನಗೆ ನಿರ್ದೇಶಕ ಉಮೇಶ್ ಕುಲಕರ್ಣಿ  ಯಾರೆಂಬುದು ಗೊತ್ತಿರಲಿಲ್ಲ. ಇಡೀ ಅಂತರ್ಜಾಲ ಹುಡುಕಾಡಿದಾಗಲೂ ಅದ್ಯಾರೋ ಮರಾಠಿ ಚಿತ್ರರಂಗದ ಉಮೇಶ್ ಕುಲಕರ್ಣಿಯ ವಿವರ ಸಿಕ್ಕಿತೆ ಹೊರತು ನನಗೆ ನಮ್ಮ ನಿರ್ದೇಶಕರ ಬೇರಾವ ವಿಷಯವೂ ದೊರೆಯಲಿಲ್ಲ. ಆದರೆ ಕಾನ್ಸೈನ್ಸ್ ಒಫ್ ದಿ ರೇಸ್' ಪುಸ್ತಕದಲ್ಲಿ  ಕನ್ನಡದ ಉಮೇಶ್ ಕುಲಕರ್ಣಿಯ ಬಗ್ಗೆ ಸ್ವಲ್ಪೇ ಸ್ವಲ್ಪ ವಿವರವಿತ್ತು. ನನಗೆ ಅವರನ್ನೊಮ್ಮೆ ಭೇಟಿಯಾಗಲೇ ಬೇಕೆಂಬ ಹಠ ಬಂದುಬಿಟ್ಟಿದ್ದೆ, ಹೇಗೇಗೋ ಮಾಡಿ ಅವರ ಮೊಬೈಲ್ ನಂಬರ್ ಸಂಪಾದಿಸಿದೆ. ಮಲ್ಲೇಶ್ವರಂ ನಲ್ಲಿರುವ ಅವರ ಮನೆಯ ಹತ್ತಿರ ಹೋದಾಗ ಅತ್ಯಂತ ಆತ್ಮೀಯತೆಯಿಂದ ಬರಮಾಡಿಕೊಂಡರು ಉಮೇಶ್ ಕುಲಕರ್ಣಿ. ನಾನು ನನ್ನ ಉದ್ದೇಶ ಹೇಳಿದಾಗ ತುಂಬಾ ಸಂತೋಷ ಪಟ್ಟರು. ಅವರ ಶಂಖನಾದ ಚಿತ್ರದ ಬಗ್ಗೆ ಕೆಲವು ವಿವರಗಳನ್ನು ತೆರೆದಿಟ್ಟರು.
ಅತೀ  ಕಡಿಮೆ ಬಜೆಟ್ಟಿನಲ್ಲಿ ತಯಾರಾದ ಶಂಖನಾದ ಚಿತ್ರದಲ್ಲಿ ಯಾವ ಸ್ಟಾರ್ ಗಳಿರಲಿಲ್ಲ. ಹಾಗಾಗಿ ಚಿತ್ರವನ್ನೂ ಗಾಂಧಿನಗರದ ಹಂಚಿಕೆದಾರರು ಬಿಡುಗಡೆ ಮಾಡಲು ಮುಂದೆ ಬರಲಿಲ್ಲ. ಇದು ಚಿತ್ರತಂಡವನ್ನು ಧೃತಿಗೆಡಿಸಿತ್ತು. ಮುಂದೆ ಬೇರೆ ದಾರಿ ಕಾಣದೆ ಚಿತ್ರವನ್ನೂ ತುಮಕೂರಿನ ಪಕ್ಕದ ಸಂಪಿಗೆಹಳ್ಳಿಯ ಟೆಂಟ್ ಒಂದರಲ್ಲಿ ಬಿಡುಗಡೆ ಮಾಡಲು ಚಿತ್ರತಂಡದವರು ನಿರ್ಧರಿಸಿದರು.ಕಾರಣ ಈ ಚಿತ್ರದ ಚಿತ್ರೀಕರಣ ನಡೆದಿದ್ದು ಅಲ್ಲಿಯೇ. ಅಲ್ಲಿ ಬಿಡುಗಡೆಯಾದ ಚಿತ್ರ ಭರ್ಜರಿ ಪ್ರದರ್ಶನ ಕಂಡಿತ್ತು. ಆನಂತರವಷ್ಟೇ ಅಲ್ಲಿಂದ ಬೆಂಗಳೂರಿನ ಕೈಲಾಶ್ ಚಿತ್ರಮಂದಿರದಲ್ಲಿ, ಮೈಸೂರಿನ ವುಡ್ ಲ್ಯಾಂಡ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಶತದಿನೋತ್ಸವ ಆಚರಿಸಿತು. ಇದೊಂದು ದಾಖಲೆಯೇ ಸರಿ. ಆನಂತರ ಈ ಚಿತ್ರವನ್ನ ರಾಜ್ಯ ಪ್ರಶಸ್ತಿಗೆ ಕಳುಹಿಸಿದರಾದರೂ ಕರ್ನಾಟಕ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿ ಈ ಚಿತ್ರವನ್ನ ಪರಿಗಣಿಸಲಿಲ್ಲ. ಆದರೆ ಇದೆ ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿ ಗಳಿಸಿತು.
ಈ ವಿಷಯಕ್ಕೆ ಬಂದಾಗ ಎಲ್ಲರೂ ಉದಾಹರಣೆ ಕೊಡುವುದು ತಮಿಳು ಚಿತ್ರ 'ಸೇತು' ವನ್ನ. ಹಣಕಾಸಿನ ತೊಂದರೆಯಿಂದಾಗಿ ಮುಖ್ಯ ಕೇಂದ್ರದಲ್ಲಿ ಚಿತ್ರವನ್ನೂ ಬಿಡುಗಡೆ ಮಾಡಲು ಸಾಧ್ಯವಾಗದಿದ್ದಾಗ ಅದನ್ನು ಇದೆ ತರಹ ಬೇರೆ ಕಡೆ ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾದ ಮೇಲೆ ಚೆನ್ನೈನ ಪ್ರಮುಖ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದ್ದ್ದರು. ಇದನ್ನು ಉದಾಹರಿಸುವ ನಮ್ಮವರು ಶಂಖನಾದವನ್ನು ಉದಾಹರಿಸುವುದಿಲ್ಲ.
ಉಮೇಶ್ ಕುಲಕರ್ಣಿ ನಿರ್ದೇಶಕ , ಸಂಕಲನಕಾರ ಮತ್ತು ಲೇಖಕರು ಕೂಡ. ಇತ್ತೀಚಿಗೆ ಅವರ 'ಅಂಚೆ ಅಂಟು-ಪರದೆ ನಂಟು' ಎಂಬ ಕೃತಿ ಕೂಡ ಬಿಡುಗಡೆಯಾಗಿದೆ. ಸುಮಾರು ಹೊತ್ತು ತಮ್ಮ ಕಾಲದ ಚಿತ್ರರಂಗದಲ್ಲಿ ನಡೆದ ಘಟನೆಗಳನ್ನೂ ನನ್ನ ಜೊತೆ ಹರಟಿದರು.ಅದರಲ್ಲಿ ಅವರು ಹೇಳಿದ ಬಾಲು ಮಹೇಂದ್ರರ ಕೋಕಿಲ ಚಿತ್ರದ ವಿಷಯ ನನಗೆ ಅದ್ಭುತ ಎನಿಸಿತು.
ಮೂಲತಹ ಶ್ರೀಲಂಕಾದವರಾದ ಬಾಲು ಮಹೇಂದ್ರ ರ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ಗೊತ್ತಿಲ್ಲ. ಅವರ ವಿರುದ್ಧ ಸುಳ್ಳು ಪಾಸ್ ಪೋರ್ಟ್ ದ ಆರೋಪ ಕೂಡ ದಾಖಲಾಗಿತ್ತಲ್ಲದೆ, ಅವರ ಚಿತ್ರದಲ್ಲಿ ನಟಿಸಿದ್ದ ನಟಿಯ ಸಾವಿಗೆ ಬಾಲು ಮಹೇಂದ್ರರು ಕಾರಣ ಎಂಬ ಆರೋಪವೂ ಇತ್ತು. ಕನ್ನಡದ ಪ್ರೇಕ್ಷಕರು ಚಿಂತನಾಶೀಲರು ಇಲ್ಲಿಯೇ ನನ್ನ ಮೊದಲ ಚಿತ್ರ ಮಾಡುತ್ತೇನೆ ಎಂದು ಅವರು ನಿರ್ದೇಶಿಸಿದ ಚಿತ್ರ 'ಕೋಕಿಲ' ಅದಕ್ಕೆ ಸಂಕಲನ ಇದೆ ಉಮೇಶ್ ಕುಲಕರ್ಣಿಯವರದು.
ಕೋಕಿಲ ಚಿತ್ರ ಎಲ್ಲಾ ಕಡೆ ಯಶಸ್ವಿಯಾಯಿತಲ್ಲದೆ, ಕನ್ನಡದ ಅವತರಣಿಕೆಯೇ ಬಾಂಬೆ, ಹೈದರಾಬಾದ್, ಚೆನ್ನೈ ನಲ್ಲಿ ಬಿಡುಗಡೆಯಾಯಿತು. ರಷ್ಯಾದ ಜಕೊಸ್ಲೋವಾಕಿಯಾದ ದೂರದರ್ಶನದಲ್ಲಿ 'ಚಾಯ್ಸ್ ಆಫ್ ಯುವರ್ ಮೂವಿ' ಎಂಬ ಕಾರ್ಯಕ್ರಮವಿದೆ. ಪ್ರೇಕ್ಷಕರು ಇಷ್ಟ ಪಟ್ಟ ಚಿತ್ರವನ್ನ ಆ ಕಾರ್ಯಕ್ರಮದಲ್ಲಿ ಪ್ರದರ್ಶಿಸುತ್ತಾರೆ. ನಮ್ಮಲ್ಲಿನ ನಿಮ್ಮ ಮೆಚ್ಚಿನ ಚಿತ್ರಗೀತೆಗಳು ಕಾರ್ಯಕ್ರಮದ ತರಹ. ಅಲ್ಲಿ ಸುಮಾರು ಏಳು ಸಾರಿ 'ಕೋಕಿಲ' ಚಿತ್ರ ಪ್ರದರ್ಶನಗೊಂಡಿದೆ. ಅಲ್ಲಿನ ಕೆಲವರು ಬಾಲು  ಮಹೆಂದ್ರರನ್ನು 'ಇಲ್ಲೇ ಬಾ..ಚಿತ್ರ ಮಾಡು ' ಎಂದು ಕರೆದಿದ್ದರೂ ಇವರ ಮೇಲೆ 'ಪೋಲಿಸ್ ಕೇಸ್ ' ಇದ್ದದ್ದರಿಂದ ದೇಶ ಬಿಟ್ಟು ಹೋಗಲು ಸಾಧ್ಯವಾಗಲಿಲ್ಲ.
ಇದೆಲ್ಲಾ ಗೊತ್ತಾದಮೇಲೆಯೇ ನನಗನಿಸಿದ್ದು 'ನಮ್ಮಲ್ಲೂ ದಂತಕಥೆಗಳಿವೆ..ಇತಿಹಾಸ ಪುರುಷರಿದ್ದಾರೆ ಎಂಬುದು.'
ಓದಿ  ಮೆಚ್ಚಿದ್ದು:
ಉದಯ ಹೆಗ್ಡ ಎನ್ನುವವರ ಬ್ಲಾಗ್ ಒಂದರಲ್ಲಿ ಅತ್ಯುತ್ತಮ ಫೋಟೋಗಳಿವೆ. ತನ್ನನ್ನು ತಾನು ಅಮೆಚ್ಯೂರ್ ಎಂದು ಕರೆದುಕೊಳ್ಳುವ ಉದಯ್ ತಮ್ಮ ಬ್ಲಾಗ್ ನಲ್ಲಿನ ಫೋಟುಗಳಲ್ಲಿ ಆ ಕುರುಹು ಬಿಟ್ಟುಕೊಟ್ಟಿಲ್ಲ. ನೀರಿನ ಚಿತ್ತಾರದ ಫೋಟೋ ನಿಜಕ್ಕೂ ಅದ್ಭುತವಾಗಿದೆ. ಆ ಬೆಳಕಿನ ಸಂಯೋಜನೆ, ವರ್ಣ ವಿನ್ಯಾಸ ನೀವೇ ನೋಡಿ. ನಾನು ಸುಮ್ಮನೆ ಒಂದಷ್ಟು ಚಿತ್ರಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಸಿಕ್ಕಿದ ಬ್ಲಾಗ್ ಇದು.

7 comments:

 1. ಅಬ್ಭಾ , ಕೊನೆಗೂ ನೀವು ಬರೆದ ಒಂದು ಚಿತ್ರ ನಾನು ನೋಡಿದ್ದೇನೆ.
  ಶಂಖನಾದ ತುಂಬಾ ಒಳ್ಳೆ ಚಿತ್ರ. ಕೋಕಿಲಾ ಮೋಹನ್ರ ರ ಕೋಕಿಲಾ ನೋಡ್ಬೇಕು.
  ಬ್ಲಾಗ್ಗಳನ್ನ ಪರಿಚಯಿಸುವ ನಿಮ್ಮ ರೀತಿ ಚೆನ್ನಾಗಿದೆ

  ReplyDelete
 2. ದ೦ತಕಥೆಗಳು ಎಲ್ಲರಿಗೂ ತಲುಪುವ೦ತೆ ಮಾಡುವ ನಿಮ್ಮ ಕೆಲಸಕ್ಕೆ ಸಲಾ೦ :)

  ReplyDelete
 3. ಹಿತ್ತಿಲ ಗಿಡ ಮದ್ದಲ್ಲ ಎಂಬ ಉದಾಸೀನ ಮನೋಭಾವ ನಮ್ಮವರದ್ದು. ಅದಿರಲಿ, ಶಂಖನಾದ ಒಂದು ಉತ್ತಮ ಮನರಂಜನಾತ್ಮಕ ಮತ್ತು ಸಾಮಾಜಿಕ ವಿಡಂಬನೆಯ ಚಿತ್ರ ಎಂಬುವುದರಲ್ಲಿ ಎರಡು ಮಾತಿಲ್ಲ. ಜೋಕಿಲ ಚಿತ್ರವನ್ನ ನೋಡಿಲ್ಲ. ನಿಮ್ಮ ಬರಹಕ್ಕೆ ಥ್ಯಾಂಕ್ಸ್.

  ReplyDelete
  Replies
  1. ನೋಡಿ. ಅಂತಹ ಗ್ರೇಟ್ ಚಿತ್ರ ಅಲ್ಲ..ಆದರೆ ಮನರಂಜನೀಯ ಚಿತ್ರ. ಧನ್ಯವಾದಗಳು ಸರ್

   Delete
 4. ಒಂದು ಒಳ್ಳೆಯ ಮಾಹಿತಿಯುಕ್ತ ಬ್ಲಾಗಿದು , ಚಿತ್ರರಂಗದ ಹಲವು ಅಪರೂಪದ ಮಾಹಿತಿಗಳು ಇಲ್ಲಿವೆ. ನನಗೆ ಇಷ್ಟವಾಯಿತು.

  ReplyDelete
  Replies
  1. ಧನ್ಯವಾದಗಳು ಸರ್...

   Delete