ನಮ್ಮ
ಮಾರ್ಚ್ 23 ಚಿತ್ರದಲ್ಲೊಂದು ಸನ್ನಿವೇಶವಿದೆ. ಚಿತ್ರದ ನಾಯಕ ಒಬ್ಬ ಸರಣಿ ಹಂತಕನನ್ನು ಒಂದು ಕಬ್ಬಿಣದ ಕುರ್ಚಿಗೆ ಕಟ್ಟಿಹಾಕಿ ಅವನನ್ನು ಮುಳ್ಳಿನ ತಂತಿಯಿ೦ದ ಬಿಗಿದು ಕಟ್ಟಿಹಾಕಿ ಅವನ ಹಿಂಬಾಗದಲ್ಲಿ ಕೊರಳಿಗೆ ಸರಿಯಾಗಿ ಡ್ರಿಲ್ಲಿಂಗ್ ಮೆಷಿನ್ ಇಟ್ಟು ಸತ್ಯ ಹೇಳದಿದ್ದರೆ ಡ್ರಿಲ್ಲಿಂಗ್ ಮೆಷಿನ್ ಆನ್ ಮಾಡಿ ಕೊರಳನ್ನು ಡ್ರಿಲ್ ಮಾಡಿ ಸಾಯಿಸುತ್ತೇನೆ ಎಂದು ಹೆದರಿಸುವ ದೃಶ್ಯ. ಅಲ್ಲಿ ನಾಯಕ ಇರುವುದಿಲ್ಲ. ಬರೀ ಅವನ ಧ್ವನಿ ಮಾತ್ರ ಇರುತ್ತದೆ. ಗೆಳೆಯ ಅರ್ಜುನ್ ಸರಣಿ ಹಂತಕನ ಪಾತ್ರ ಮಾಡುತ್ತಿದ್ದ. ಎಲ್ಲವನ್ನೂ ಶೂಟ್ ಮಾಡಿದರು ಡ್ರಿಲ್ಲಿಂಗ್ ಮೆಷಿನ್ ಅವನ ಕೊರಳ ಹಿಂಭಾಗದಲ್ಲಿ ಸುತ್ತುವ ಶಾಟ್ ಅನ್ನು ಚಿತ್ರೀಕರಿಸಿರಲಿಲ್ಲ. ನನ್ನ ಪ್ರಕಾರ ಅದನ್ನು ಗ್ರಾಫಿಕ್ ಮುಖಾಂತರ ಪೂರ್ಣ ಮಾಡುವುದೇ ಸರಿ ಅನ್ನಿಸಿತ್ತು.ಮೊದಲೇ ನನ್ನ ಮೊದಲ ಚಿತ್ರ. ಅದರಲ್ಲಿ ಯಾವುದೇ ತರಹದ ಅನಾಹುತಗಳಾಗುವುದು ನನಗಿಷ್ಟವಿರಲಿಲ್ಲ.. ಅದರಲ್ಲೂ ಡ್ರಿಲ್ಲಿಂಗ್ ಮೆಷಿನ್ ತುದಿಗೂ ಅವನ ಕೊರಳಿಗೂ ಒ೦ದಿ೦ಚಿಗಿಂತಲೂ ಕಡಿಮೆ ಅ೦ತರವಿದ್ದುದರಿ೦ದ ಆ ರಿಸ್ಕ್ ತೆಗೆದುಕೊಳ್ಳುವುದೇ ಬೇಡ ಎಂದು ನಾನು ಖಢಖಂಡಿತವಾಗಿ ಹೇಳಿಬಿಟ್ಟಿದ್ದೆ. ನಾವು ಚಿತ್ರೀಕರಣ ಮಾಡುತ್ತಿದ್ದದ್ದು ಭೂತಬಂಗಲೆಯಲ್ಲಿ. ಅಲ್ಲಾಗಲೇ ದೆವ್ವದ ಕಾಟವಿದೆ ಆ ಸಿನೆಮಾದ ಶೂಟಿಂಗ್ ಸಮಯದಲ್ಲಿ ಹಾಗಾಯಿತ೦ತೆ ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಹೀಗಾಯಿತ೦ತೆ ಎಂದೆಲ್ಲ ಗುಸುಗುಸು ಪಿಸುಪಿಸುಗಳಿದ್ದವು. ಅ೦ತದ್ದರಲ್ಲಿ ನನಗೆ ರಿಸ್ಕ್ ತೆಗೆದುಕೊಳ್ಳುವ ಯಾವ ಉಮ್ಮೇದು ಇರಲಿಲ್ಲ. ಎಲ್ಲ ಶಾಟ್ ಗಳನ್ನೂ ತೆಗೆದಿದ್ದಾಗಿತ್ತು. ಕೇವಲ ಕೆಲವು ಕ್ಲೋಸ್ ಅಪ್ ಶಾಟ್ ಬಾಕಿಯಿತ್ತು. ನಾನು ಕ್ಯಾಮೆರಾಮನ್ ಗೆಶಾಟ್ ವಿವರಿಸಿ ರೆಡಿ ಆಗಲು ಹೇಳಿ ಹೊರಗಡೆ ಇದ್ದೆ..ಅಷ್ಟರಲ್ಲಿ ನಮ್ಮ ಕ್ಯಾಮೆರಾಮನ್ ನಿರಂಜನ್ ಬಾಬು ಮತ್ತು ನಮ್ಮ ಸಹನಿರ್ದೇಶಕರು ಸೇರಿಕೊಂಡು ತಾವು ತಾವೇ ಮಾತಾಡಿಕೊಂಡು ಹೇಗಾದರೂ ಮಾಡಿ ಅದೊಂದು ಶಾಟ್ ಡ್ರಿಲ್ಲಿಂಗ್ ಮೆಷಿನ್ ತಿರುಗುವಾಗಲೇ ತೆಗೆದುಬಿಡೋಣ , ನೈಜವಾಗಿರುತ್ತೆ ಎಂದು ಮಾತಾದಿಕೊಡಿದ್ದಾರೆ. ಹಾಗೆಯೇ ಡ್ರಿಲ್ಲಿಂಗ್ ಮೆಷಿನ್ ಕೂಡ ರೆಡಿ ಮಾಡಿಕೊಂಡಿದ್ದಾರೆ..ಆದರೆ ಅರ್ಜುನ್ ಗೂ ಅದರ ಬಗ್ಗೆ ಏನೂ ಹೇಳಿಲ್ಲ. ಸರ್ ರೆಡಿ ಎಂದು ನಮ್ಮ ಸಹಾಯಕ ಹೇಳಿದಾಗ ನಾನು ಸ್ಪಾಟ್ ಗೆ ಹೋದೆ. ಆದರೆ ಆಕ್ಷನ್ ಹೇಳುವ ಮೊದಲು ಎಲ್ಲ ಸರಿಯಿದೆಯೇ ಎಂದೊಮ್ಮೆ ಪರೀಕ್ಷಿಸಿದೆ.ಡ್ರಿಲ್ಲಿಂಗ್ ಮೆಷಿನ್ ನ ಕೇಬಲ್ ಸ್ವಿಚ್ ಬೋರ್ಡಿಗೆ ಕನೆಕ್ಟ್ ಆಗಿತ್ತು. ನನಗ್ಯಾಕೋ ಅನುಮಾನ ಬಂತು. ಪಕ್ಕದಲ್ಲಿದ್ದ ಆರ್ಟ್ ಡಿಪಾರ್ಟ್ ಮೆಂಟಿನ ಪ್ರಭುವಲ್ಲಿ ಸ್ವಿಚ್ ಆನ್ ಮಾಡಿಬಿಟ್ಟೆಯಪ್ಪ ಹುಷಾರ್ ಎಂದದ್ದಕ್ಕೆ.ಈವಾಗ ಹಾಕಲ್ಲ ಸಾರ್ ಶಾಟಲ್ಲಿ ಹಾಕ್ತೀನಿ ಎಂದು ಬಾಯಿಬಿಟ್ಟುಬಿಟ್ಟ. ನಾನು ತಕ್ಷಣ ಪ್ಲಗ್ ಕಿತ್ತು ಬೀಸಾಕಿದವನೇ ಶೂಟಿಂಗ್ಗ್ ಪೂರ್ಣ ಮಾಡಿದೆ. ಆಮೇಲೆ ಅರ್ಜುನ್ ಕೂಡ ನನಗೆ ಗೊತ್ತಿರಲಿಲ್ಲ ಮಾರಾಯಾ..ಅಟ್ ಲೀಸ್ಟ್ ನನಗಾದರೂ ಹೇಳಿರಬೇಕಿತ್ತು..ನಾನು ಇದೇನು ಸದ್ದು ಅಂತ ಸ್ವಲ್ಪ ತಲೆ ಹಿಂದೆ ವಾಲಿಸಿದ್ದರೂ ಸ್ವರ್ಗವಾಸಿಯಾಗಿರುತ್ತಿದ್ದೆ ಎಂದ. ನನಗೂ ಹೌದೆನಿಸಿತು. ಅದಾದ ಮೇಲೆ ಇನ್ನಿ೦ತ ಹ ಸಾಹಸಗಳಿಗೆ ದಯವಿಟ್ಟು ಕೈಹಾಕಬೇಡಿ ಎಂದು ಬಾಬುಗೆ ಹೇಳಿದಾಗ ಬಾಬು ಮಾತಾಡಲಿಲ್ಲ. ಈಗಲೂ ಆ ಘಟನೆ ನೆನಪಿಸಿಕೊಂಡರೆ ಎದೆ ಝಲ್ ಎನ್ನುತ್ತದೆ.
No comments:
Post a Comment