Wednesday, April 25, 2012

ಲಲಿತ ಪ್ರಬಂಧ.


ತಾವು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರಿಂದ ನಾನೂ ಕೂಡ ಅವರಂತೆಯೇ ಶಿಕ್ಷಕರಾಗಬೇಕೆಂಬುದು ನಮ್ಮ ತಂದೆಯವರ ಮಹತ್ವಾಕಾಂಕ್ಷೆಯಾಗಿತ್ತು. ಆದರೆ ನನಗೋ ಸಿನೆಮಾ ಪತ್ರಿಕೋದ್ಯಮದ ಕಡೆ ಅತೀವ ಹುಚ್ಚು. ಪ್ರತಿ ಸಾರಿ ಊಟಕ್ಕೆ ಒಟ್ಟಿಗೆ ಕುಳಿತಾಗಲೂ ಶಿಕ್ಷಕರಿಗಿರುವ ಗೌರವ, ಇರಬೇಕಾದ ಜವಾಬ್ದಾರಿ ಮತ್ತು ಶಿಕ್ಷಕ ವೃತ್ತಿಯ ಮಹತ್ವವನ್ನು ವಿವರಿಸುತ್ತಿದ್ದರು. ನಾನು ಸುಮ್ಮನೆ ಹೂಂಗುಡುತ್ತಿದ್ದೆ. ಆಮೇಲೆ ಮಲಗಿಕೊಂಡಾಗ ನಿದ್ರೆ ಬರುವವರೆಗೂ ಯೋಚಿಸುತ್ತಿದ್ದೆ , ಅಪ್ಪ"ಹೇಳಿದ್ದೆಲ್ಲಾ ಸರೀನಾ' ಎಂದು. ಅದರಲ್ಲಿ ಸತ್ಯ ಎಷ್ಟಿದೆ? ಎಂಬುದರ ಪರೀಕ್ಷೆಗೆ ಬೀಳುತ್ತಿದ್ದೆ. ಆದರೆ, ಕೆಲವೊಂದು ಸರಿ ಎನಿಸಿದರೂ ಕೆಲವೊಂದು ವಿಷಯಗಳನ್ನು ಒಪ್ಪಿಕೊಳ್ಳಲು ಆಗುತ್ತಿರಲಿಲ್ಲ.

ಇಡೀ ಊರಲ್ಲಿ ಅಪ್ಪನನ್ನು "ಮೇಸ್ಟ್ರೇ...' ಎಂದೇ ಕರೆಯುತ್ತಿದ್ದರು. ಅವರ ಮಗನಾದ ನನ್ನನ್ನು ಎಲ್ಲರೂ ಪ್ರೀತಿಯಿಂದ, ಗೌರವದಿಂದ ನೋಡುತ್ತಿದ್ದರು. ಊರಲ್ಲಿ ಹೊಸ ಬೆಳೆ ಬಂದಾಗಲೆಲ್ಲ "ಒಂದು ಕೊಳಗ ಮೇಸ್ಟ್ರ ಮನೆಗೆ'  ಎಂದು ಎತ್ತಿಟ್ಟುಬಿಡುತ್ತಿದ್ದರು. ಒಂದು ಹೊರೆ ಸೌದೆಯನ್ನು ನಮ್ಮ ಹಿತ್ತಲಿಗೆ ತಂದಿಟ್ಟು ಮಾತಾಡಿ ಹೋಗುತ್ತಿದ್ದರು. ಇಡೀ ಊರಲ್ಲಿ ಏನೇ ತೊಂದರೆಯಾದರೂ ಅಪ್ಪನ ಹತ್ತಿರ ಬಂದು ವಿವರಿಸಿ ಅಭಿಪ್ರಾಯ, ಪರಿಹಾರಗಳನ್ನು ಕೇಳುತ್ತಿದ್ದರು.

ಆದರೆ, ನಮ್ಮಪ್ಪಶಿಕ್ಷಕರಾಗಿದ್ದ ಶಾಲೆಯಲ್ಲಿ ನಾನು ಓದಲಾಗಲೇ ಇಲ್ಲ.
ನಾನು ಮೂರನೆಯ ತರಗತಿಯಲ್ಲಿದ್ದಾಗ ಆರ್‌. ಗೌಡ ಎಂಬ ಶಿಕ್ಷಕ ರೊಬ್ಬರಿದ್ದರು. ಉದ್ದಕ್ಕೆ ಸಣ್ಣಕಿದ್ದ ಅವರ ಕಣ್ಣುಗಳು ಮಾತ್ರ ತೀಕ್ಷ್ಣವಾಗಿದ್ದವು. ಊರಿನ ಜನ, ಅದರಲ್ಲೂ ಹೆಂಗಸರು ಅವರನ್ನು ಬಿದಿರುಪೀಪಿ ಮೇಸ್ಟ್ರೆ ಎಂದೇ ಕರೆಯುತ್ತಿದ್ದರು. ಅವರ ವಿಶೇಷವೆಂದರೆ ಅವರು ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೊಂದು ಅಡ್ಡ ಹೆಸರು/ಉಪನಾಮ ಇಟ್ಟೇ ತೀರುತ್ತಿದ್ದರು. ಅವರ ಸ್ಮರಣಶಕ್ತಿ ಅದೆಷ್ಟು ಶಕ್ತಿಯುತವಾಗಿತ್ತೆಂದರೆ ರಿಜಿಸ್ಟರಿನಲ್ಲಿ ಹೆಸರು ಕೂಗುವಾಗಲೂ ಅದೇ ಅಡ್ಡನಾಮದಿಂದ ಕರೆಯುತ್ತಿದ್ದರು ಮತ್ತು ಆ ವಿದ್ಯಾರ್ಥಿ ಆ ಅಡ್ಡನಾಮವನ್ನೆ ಅಧಿಕೃತವಾಗಿ ಒಪ್ಪಿಕೊಂಡು "ಯಸ್‌ ಸಾರ್‌' ಎನ್ನಲೇಬೇಕಾದ ಅನಿವಾರ್ಯ ಪರಿಸ್ಥಿತಿ ತಂದೊಡ್ಡುತ್ತಿದ್ದರು. ""ಕರೆಕ್ಟಾಗಿ ಪಾಟ ಯೋಳು ಅಂದ್ರ ಎಲಿÅಗೂ ಅಡ್ಡ ಹೆಸ್ರಿಟಕೊಂಡು ಕುಣೀತಾವ°ಲ್ಲಾ ಆ ಪೀಪಿ ಮೇಸ್ಟ್ರೆ... ನನ್‌ ಮಗನ್‌ ಹೆಸ್ರಿಗೇನಾಗಿದ್ದು...' ಎಂದು ಅದೆಷ್ಟೋ ಹೆಂಗಸರು, ತಾಯಂದಿರು ಶಾಲೆಯ ಮುಂದೆ ಬಂದು ಜಗಳ ಆಡಿದ್ದೂ ಉಂಟು. ಆಗೆಲ್ಲಾ "ಅಮೌ¾... ನಿನ್‌ ಮಗ ಸರಿಯಾಗಿ ಓದಿನ ಇಲ್ವ ಅನ್ನದ್ನ ತಿಳ್ಕಂಡು ವಿಚಾರಿಸ್ಕ... ಅದ ಬಿಟ್ಟೂ ಹಿಂಗ ಇಸ್ಕೂಲ್‌ ಮುಂದ ಬಂದು ಜಗಳಾಡಿದ್ರ ಹುಚ್ಚುಮಾರಿ ಅಂತ ನಿಂಗೇ ಹೆಸರಿಡಬೇಕಾಯ್ತದೆ...' ಎಂದು ಅವರಿಗೇ ಜೋರು ಮಾಡಿ ಕಳುಹಿಸಿಬಿಡುತ್ತಿದ್ದರು. ಆಮೇಲೆ ಒಂದು ವಾರದವರೆಗೆ ಆ ವಿದ್ಯಾರ್ಥಿಗೆ 17ನೇ ಮಗ್ಗಿ, 21ನೇ ಮಗ್ಗಿ ಹೇಳಿಸಿ ತಪ್ಪು$ಮಾಡಿಸಿ ದೊಣ್ಣೆಯಿಂದ ಚಚ್ಚುತ್ತಿದ್ದರು. ಹುಡುಗರೂ ಏನೂ ಕಡಿಮೆಯಿರಲಿಲ್ಲ. ಮೇಸ್ಟ್ರೆ ಮಧ್ಯಾಹ್ನದ ಹೊತ್ತಿಗೆ ಲೋಟ ಕೊಟ್ಟು , "ಹಾಲು ತೆಗೆದುಕೊಂಡು ಬಂದು ಟೀ ಮಾಡು' ಎಂದಾಗ ತೀರಾ ಕೋಪವಿದ್ದವರು "ಸಾರ್‌, ನಾವು ಹಾಲು ತರುತ್ತೇವೆ' ಎಂದು ಹೇಳಿ, ಹಾಲು ತರುವಾಗ ಆ ಲೋಟಕ್ಕೆ ಕಳ್ಳಿàಗಿಡದ ಹಾಲು ಹಾಕಿ, ಅದು ಸರಿಯಾಗಿ ಟೀ ಆಗದೆ ಗೌಡರು ಅದನ್ನೇ ಕುಡಿದಾಗ, ""ಈವತ್ತು ರಾತ್ರಿಗೆ ಐತೆ ನಿಮಗೆ...' ಎಂದು ಸಂತಸದಿಂದ ಕುಣಿದಾಡಿ, ""ನಾಳಿಗೆ ಪೀಪಿ ಮೇಸ್ಟ್ರೆ ಬರಲ್ವಂತೆ...' ಎಂದು ಖಡಾಖಂಡಿತವಾಗಿ ಅನೌನ್ಸ್‌ ಮಾಡುತ್ತಿದ್ದರು.

ಊರಲ್ಲಿ ಮನೆ ಪಾಠಕ್ಕೆ ಹುಚ್ಚುಮೇಸ್ಟ್ರೆ ಇದ್ದರು. ತಲೆಯಲ್ಲಿ ಶಾಸ್ತ್ರಕ್ಕೆಂದರೂ ಒಂದು ಕಪ್ಪಗಿನ ಕೂದಲು ಸಿಕ್ಕುತ್ತಿರಲಿಲ್ಲ. ಮದುವೆಯಾಗಿರಲಿಲ್ಲವೋ, ಅಥವಾ ಹೆಂಡತಿ ಬಿಟ್ಟು ಹೋಗಿದ್ದಳ್ಳೋ ಅಂತೂ ಊರಿಗೆ ಬಂದದ್ದು ಒಂಟಿಯಾಗಿಯೇ! ಅದೆಲ್ಲಿ ಅದ್ಯಾವ ಶಾಲೆಯಲ್ಲಿ ಶಿಕ್ಷಕರಾಗಿದ್ದರೋ, ಅದ್ಯಾವ ವಿಷಯ ಬೋಧಿಸು ತ್ತಿದ್ದರೋ ಅವರು ನಿವೃತ್ತರಾಗಿದ್ದರೋ ಅಥವಾ ಕೆಲಸ ಬಿಟ್ಟಿದ್ದರೋ ಯಾರಿಗೂ ಗೊತ್ತಿರಲಿಲ್ಲ. ಆದರೆ ಬಂದದ್ದೇ ತಾನು ಮೇಸ್ಟ್ರೆ ಮನೆಪಾಠದ ಮೇಸ್ಟ್ರೆ ಎಂದು ಪರಿಚಯಿಸಿಕೊಂಡಿದ್ದರು. ಆದರೆ, ಅವರ ಹಿಂಸಾವಿನೋದಿಯ ಗುಣ ಮಾತ್ರ ವಿದ್ಯಾರ್ಥಿಗಳ ಚಡ್ಡಿಯಲ್ಲಿ ಉಚ್ಚೆಮಾಡುವಂತೆ ಮಾಡುತ್ತಿತ್ತು.
""ಸರಿಯಾಗಿ ಓದಲ್ವಾ... ನಾಳೆಯಿಂದ ಹುಚ್ಚುಮೇಸ್ಟ್ರ ಹತ್ರ ಮನೆಪಾಠಕ್ಕೋಗು...' ಎಂದರೆ ಸಾಕು ಆವತ್ತೆಲ್ಲಾ ಮೈ ಗಢಗಢ. ಮನೆ ಪಾಠಕ್ಕೆ ಕಾಲಿಡುತ್ತಿದ್ದಂತೆಯೇ ಮೊದಲಿಗೆ ಕಾಣುತ್ತಿದ್ದದ್ದು ತಲೆ ಕೆಳಗೆ ಹಾಕಿ ಕಾಲು ಮೇಲೆ ಹಾಕಿ ಗೋಡೆಗೊರಗಿ ಕಣ್ಣೀರು ಸುರಿಸುತ್ತಿದ್ದ ವಿದ್ಯಾರ್ಥಿಗಳು... ಮುಂದಿನ ಸಾಲಿನಲ್ಲಿ ಕುಕ್ಕರಗಾಲಿನಲ್ಲಿ ಕುಳಿತು ಕಾಲ ಕೆಳಗಿಂದ ಕೈ ತಂದು ಕುಂಡೆ ಎತ್ತಿ ಕಿವಿ ಹಿಡಿದು ಅಳುತ್ತಿದ್ದವರು...
ಅನಂತರ ಒಂದಿಬ್ಬರು ಕೈ ಉಜ್ಜಿಕೊಂಡು ಅಳುತ್ತ ಮಗ್ಗಿ ಒಪ್ಪಿಸುತ್ತಿದ್ದರೆ ಮೇಸ್ಟ್ರೆ ಬೆತ್ತವನ್ನು ಮೇಲೆ ಕೆಳಗೆ ಆಡಿಸುತ್ತ ಆರಾಮಾಗಿ ಕುರ್ಚಿಯಲ್ಲಿ ಕುಳಿತಿರುತ್ತಿದ್ದರು.

ಅವರು ತರಗತಿ ಪ್ರಾರಂಭವಾಗುವುದಕ್ಕೆ ಮುನ್ನ ಎಲ್ಲರ ಎದುರಿಗೆ ಬೆತ್ತವನ್ನು ದಿನವೂ ಪರೀಕ್ಷಿಸುತ್ತಿದ್ದರು. ಅದನ್ನು ಬಗ್ಗಿಸಿ, ಮುರಿಯುವಂತೆ ಮಾಡಿ ಆನಂತರ ಗೋಡೆಗೆ ಪಠೀರ್‌ ಪಠೀರ್‌ ಎಂದು ಬಾರಿಸಿ "ಗಟ್ಟಿಯಾಗಿದೆ' ಎಂಬಂತೆ ನಮ್ಮಗಳ ಕಡೆಗೆ ನೋಡುತ್ತಿದ್ದರು... ಈ ಹುಚ್ಚುಮೇಸ್ಟ್ರ ಹುಚ್ಚಾಟಗಳು ಇನ್ನೂ ಇದ್ದವು. ಮಗ್ಗಿಯನ್ನು ಉಲ್ಟಾ ಉರುಹೊಡೆಸುತ್ತಿದ್ದರು, ಪಾಠವನ್ನು ಹತ್ತತ್ತು ಬಾರಿ ಬರೆಸುತ್ತಿದ್ದರು, ತಪ್ಪು ಮಾಡಿದರೆ ರೂಮಲ್ಲಿ ಕೂರಿಸಿ, ಬಾಗಿಲು ಹಾಕಿ ಮೆಣಸಿನಕಾಯಿ ಹೊಗೆ ಹಾಕುತ್ತಿದ್ದರು... ಊರಿನ ಜನರೂ "ತಮ್ಮ ಪುಂಡು ಮಕ್ಕಳಿಗೆ ಬುದ್ಧಿ ಕಲಿಸಲು ಹುಚ್ಚು ಮೇಸ್ಟ್ರೆ ಸರಿ' ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದರು.
ಹೊಡೆಯುವುದಕ್ಕೆ ಮನೆಯವರ ಅಧಿಕೃತ ಅನುಮತಿ ಸಿಕ್ಕಮೇಲೆ ಕೇಳಬೇಕೆ? ಹುಚ್ಚುಮೇಸ್ಟ್ರ ಹುಚ್ಚಾಟ ಹದ್ದು ಮೀರುತ್ತಿತ್ತು.

ಅವನನ್ನು ಓಲಾಡದಂತೆ ಒಂಟಿಕಾಲಲ್ಲಿ ನಿಲ್ಲಿಸುತ್ತಿದ್ದರು. ಅವನ ಕಿವಿ ಹಿಸಿದುಹೋಗುವಂತೆ ಹಿಂಡಿಬಿಡುತ್ತಿದ್ದರು. ಅದಕ್ಕಿಂತ ಘನಘೋರ ಶಿಕ್ಷೆಯೆಂದರೆ ಅವನಿಗಿಂತ ಕಿರಿಯವಯಸ್ಸಿನವನ ಕೈಯಲ್ಲಿ ಕಪಾಲಕ್ಕೆ ಹೊಡೆಸುತ್ತಿದ್ದುದಷ್ಟೆ ಅಲ್ಲ , ಅವನ ಕಾಲ ಕೆಳೆಗೆ ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಮೂರು ಮೂರು ಬಾರಿ ನುಗ್ಗಿಸುತ್ತಿದ್ದರು, ಅದೂ ಮನೆಪಾಠದ ಮನೆಯಿಂದ ಹೊರಗೆ... ಎಲ್ಲರಿಗೂ ಕಾಣುವಂತೆ. ಇವೆಲ್ಲದ್ದರಿಂದಲೋ ಏನೊ, ಮಾರನೇ ದಿನ ಶಾಲೆಯಲ್ಲಿ ನಮ್ಮ ಮೇಸ್ಟ್ರೆ ಇತಿಹಾಸ ಪಾಠ ಮಾಡುತ್ತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಡಿದವರು ಅದೆಷ್ಟು ಕಷ್ಟಪಟ್ಟರು ಎಂದು ವಿವರಿಸುತ್ತಿದ್ದರೂ ಹುಚ್ಚುಮೇಸ್ಟ್ರ ಮುಂದೆ ಯಾವ ಬ್ರಿಟಿಷರು ಸಾಟಿಯಿಲ್ಲ ಎನಿಸಿಬಿಡುತ್ತಿತ್ತು.

ನನ್ನ ಹೈಸ್ಕೂಲ್‌ ಜೀವನವಂತೂ ವರ್ಣರಂಜಿತ ಎಂದೇ ಹೇಳಬಹುದು.ಅದು ಮಠದವರು ನಡೆಸುತ್ತಿದ್ದ , ಆಗತಾನೆ ಪ್ರಾರಂಭವಾಗಿದ್ದ ಶಾಲೆಯಾದ್ದ ರಿಂದ ಶಾಲೆಗೆ ಕಟ್ಟಡವೇ ಇರಲಿಲ್ಲ. ಅದಕ್ಕೆ ಊರಿನ ಜಮೀನಾªರರ ಮನೆ ಯಲ್ಲಿ , ಕೊಟ್ಟಿಗೆಯಲ್ಲಿ ತೋಟದ ಮನೆಯಲ್ಲಿ, ಅರ್ಧ ಕಟ್ಟಿದ ಮನೆಗಳಲ್ಲಿ ಸರ್ಕಾರಿ ಆಸ್ಪತ್ರೆಗೆಂದು ಕಟ್ಟಿಸಿದ್ದ ಪೂರ್ತಿಯಾಗಿರದ ಕಟ್ಟಡ ಹೀಗೆ ಎಲ್ಲೆಂದ ರಲ್ಲಿ ತರಗತಿಗಳು ನಡೆಯುತ್ತಿದ್ದವು. ಕೊಟ್ಟಿಗೆಯಲ್ಲಿ ಎಂಟನೆಯ ತರಗತಿ, ಪಾಳುಮನೆಯಲ್ಲಿ ಒಂಬತ್ತು ಮತ್ತು ತೋಟದ ಮನೆಯಲ್ಲಿ ಹತ್ತು...
ಆದರೆ ಪ್ರಾರ್ಥನೆ ಬೇರೊಂದು ಕಡೆ. ಅಲ್ಲಿಂದ ಪ್ರಾರ್ಥನೆ ಮುಗಿಸಿ ಸಾಲಾಗಿ ಇರುವೆ ಗಳಂತೆ ಒಂದು ಕಿಲೋಮೀಟರು ನಡೆದು ಊರಜನರೆಲ್ಲಾ ನೋಡುವಂತೆ ತರಗತಿಗೆ ಹೋಗಬೇಕಿತ್ತು. ಅದು ಕೆಲವರಿಗೆ ಲಾಭದಾಯಕವೂ ಆಗಿತ್ತು. ಕೆಲವರು ಮನೇಲೇ ಇದ್ದು ತಮ್ಮ ಕೆಲಸವನ್ನು ಮಾಡಿಕೊಂಡು ಪ್ರಾರ್ಥನೆ ಮುಗಿಸಿ ಕ್ಲಾಸ್‌ ರೂಮಿಗೆ ಹೋಗುವಾಗ ಅವರ ಮನೆಮುಂದೆ ಸಾಲು ಬಂದಾಗ ಮೆಲ್ಲಗೆ ಕಳ್ಳತನದಲ್ಲಿ ಸಾಲಿನಲ್ಲಿ ನುಸುಳಿಕೊಳ್ಳುತ್ತಿದ್ದರು. ನಮ್ಮ ತರಗತಿಯ ಹತ್ತಿರ ಹೋದಂತೆ ಕೊಕ್ಕರೆಯಂತೆ ಸೆಗಣಿ-
ಗಂಜಲವನ್ನು ದಾಟಿ ನಮ್ಮ ನಮ್ಮ ಡೆಸ್ಕಿಗೆ ಹಾರಿಕೊಳ್ಳಬೇಕಿತ್ತು. ಆಮೇಲೆ ಅಪ್ಪಿತಪ್ಪಿಯೂ ಡೆಸ್ಕಿಗೆ ಕಾಲು ಸೋಕಿಸುವಂತಿರಲಿಲ್ಲ. ಬ್ಯಾಗು, ಪುಸ್ತಕ ಅಪ್ಪಿತಪ್ಪಿ$ಕೆಳಗೆ ಬಿದ್ದರಂತೂ ಮುಗೀತು. ಎಲ್ಲವೂ ಸಗಣಿಮಯ. ಇದನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದವರೆಂದರೆ ಹೋಮ್‌ವರ್ಕ್‌ ಮಾಡದಿರುತ್ತಿದ್ದವರು!

ಹೋಮ್‌ವರ್ಕ್‌ ಪುಸ್ತಕವನ್ನು ಮೇಸ್ಟ್ರಿಗೆ ಕೊಡುವಾಗ ಕೈತಪ್ಪಿ$ಕೆಳಗೆ ಬೀಳುವಂತೆ ಮಾಡಿ ಸಗಣಿಮಯ ಮಾಡುತ್ತಿದ್ದರು. ಆಮೇಲೆ ಆತುರಾತುರವಾಗಿ ಅದನ್ನ ಎತ್ತಿಕೊಳ್ಳುವಂತೆ ಮಾಡಿ ಇನ್ನಷ್ಟು ಸಗಣಿ ಮೆತ್ತಿಸಿ ಮೇಸ್ಟ್ರೆ ಮುಟ್ಟದಂತೆ ಮಾಡಿ "ಸರಿ ನಾಳೆ ತಂದು ತೋರಿಸು...' ಎಂದು ಮೇಸ್ಟ್ರೇ ಹೇಳುವಂತೆ ಮಾಡುತ್ತಿದ್ದರು. ಅಲ್ಲಿದ್ದ ಮೇಸ್ಟ್ರೆಗಳಾದರೂ ಯಾರು? ಆಗತಾನೆ ಬಿ.ಎಡ್‌ ಮುಗಿಸಿದವರು, ಬಿ.ಎ. ಮುಗಿಸಿ ಊರಲ್ಲೇ ಇದ್ದವರು. ಮಠಕ್ಕೆ ಬಂದು ಪಾಠ ಮಾಡಿ ಎಂದು ಸ್ವಾಮಿಗಳಿಂದ ಅಪ್ಪಣೆಯಾಗುತ್ತಿದ್ದಂತೆ ಪ್ಯಾಂಟುಶರ್ಟು ತೊಟ್ಟು ಪಾಠ ಮಾಡಲು ಶಾಲೆಗೆ ಬಂದುಬಿಡುತ್ತಿದ್ದರು.

ಅದರಲ್ಲಿ ನನಗೆ ಚೆನ್ನಾಗಿ ನೆನಪಿರುವುದು ರಮೇಶ ಮೇಸ್ಟ್ರೆ. ನಿನ್ನೆಯೆಲ್ಲಾ ಊರಾಚೆಯ ಕಂಪೌಂಡಿನ ಮೆಲೆ ಕುಳಿತು ಬೀಡಿ ಸೇದುತ್ತಿದ್ದವನಿಗೆ ಏಕಾಏಕಿ ಮರ್ಯಾದೆ ಕೊಡುವುದಾದರೂ ಹೇಗೆ...? ಅವನೊ ಪಕ್ಕಾ ಮೇಸ್ಟ್ರಿಗಿಂತ ಹೆಚ್ಚಾಗಿಯೇ ಮೆರೆಯುತ್ತಿದ್ದನು. ""ಲೋ..ನಿಂಗೆ ರಾತ್ರಿ ಸ್ವಲ್ಪ$ಹೊರೆ ಎತ್ಕಂಡ್‌ ಬಾ ಅಂದ್ರೆ ಬರಕ್ಕಾಗ್ಲಿಲ್ಲ ಹೋಮ್‌ವರ್ಕ್‌ ಮಾಡದೆ ಬಂದ್‌ ನಿಂತಿದ್ದೀಯಾ... ಮೊನ್ನೆ ನಮ್‌ ಹೊಲಕ್ಕೇ ದನ ನುಗ್ಸಿಯ... ಗಡಿಭೈರವನ ಜೂಜಾಟ ದಲ್ಲಿ ಜಾತ್ರೇಲಿ ಮುನ್ನೂರುಪಾಯ್‌ ಗೆಲ್ಲಕಾಯ್ತದೆ ಹೋಮ್‌ವರ್ಕ್‌ ಮಾಡಕಾ ಗಲ್ವಾ...?' ಹೀಗೆ ವೈಯಕ್ತಿಕ ವಿಷಯಗಳನ್ನು ಹೋಮ್‌ವರ್ಕ್‌ ಜೊತೆ ಸೇರಿಸಿ ಬಡಿಯುತ್ತಿದ್ದುದಕ್ಕೆ ಇನ್ನೂ ಒಂದು ಕಾರಣವಿತ್ತು. ಗಡಿ ಭೈರವನ ಜಾತ್ರೆಯಲ್ಲಿ ಆಡುವ ಜೂಜಾಟದಲ್ಲಿ ಸ್ವತಃ ಗುರು ಶಿಷ್ಯರಿಬ್ಬರೂ ಪಾಲ್ಗೊಳ್ಳುತ್ತಿದ್ದದ್ದು.

""ಲೋ ಈ ಸಿದ್ದಪ್ಪನ ಮಗ ಬೇಜಾನ್‌ ಆಡ್ತಾನೆ ಕಣಾÉ... ಅವ್ನಿಗೆ ಡಿಗ್ರೀಲಿ ಇನ್ನೂ ಎರಡು ಸಬೆjಕುr ಉಳ್ಕಂಡಿದ್ದಂತೆ...' ಹುಡುಗರು ಮಾತಾಡಿಕೊಳ್ಳುತ್ತಿದ್ದೆವು. ಶಾಲೆ ಬಿಟ್ಟ ಮೇಲೆ ನಾವು ನಮ್ಮೂರಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದರೆ ಇದೇ ರಮೇಶ ಮೇಸ್ಟ್ರೆ ಸೌದೆ ಹೊರೆ ಹೊತ್ತುಕೊಂಡೋ, ದನಗಳನ್ನು ಹೊಡೆದು ಕೊಂಡೋ ಹೋಗುವುದನ್ನು ನೋಡುತ್ತಿದ್ದೆವು. ಆಗೆಲ್ಲಾ ನಮಸ್ಕಾರ ಮಾಡಿದರೆ ಏನೋ ಒಂದು ರೀತಿಯ ಬಿಗುಮಾನದ ನಗೆ ನಗುತ್ತಿದ್ದದ್ದುಂಟು. ಕೆಲವೊಮ್ಮೆ ಬೆಳಿಗ್ಗೆಯೇ ದನಕ್ಕೇ ನೇಗಿಲು ಹೇರಿಕೊಂಡು ಹೋಗುತ್ತಿದ್ದದ್ದೂ ಉಂಟು. ಆಗ ""ಸಾರ್‌, ಈವತ್ತು ಸ್ಕೂಲಿಗೆ ಬರಲ್ವಾ...?' ಎಂದರೆ, ""ಇಲ್ಲಾ ಕಣೊÅà ಸ್ವಲ್ಪ$ಹೊಲದಲ್ಲಿ ಕೆಲ್ಸ ಐತೆ... ಆಳುಗಳು ಬಂದಿಲ್ಲಾ...' ಎಂದುತ್ತರಿಸುತ್ತಿದ್ದರು. ಆಗ ನಾವೆಲ್ಲ , ""ಸಾ...
ನೀವು ಪ್ಯಾಂಟ್‌ ಹಾಕಿರೋದು ನೋಡಿ ಸ್ಕೂಲಿಗೆ ಬಂದರೇನೋ ಅನ್ಕೊಂಡ್ವಿ...' ಎಂದು ಕಾಣದಂತೆ ನಗುತ್ತಿದ್ದೆವು.

ಹಾಗೆ ಮಹದೇವಪ್ಪಎಂಬ ಇನ್ನೊಬ್ಬ ಶಿಕ್ಷಕರಿದ್ದರು.ಶಿವರಾಜು ಕುಮಾರ್‌ ಹೇರ್‌ ಕಟ್‌ ಅವರದು. ಅವರು ಶಾಲೆಯ ಕ್ಲರ್ಕ್‌ ಆಗಿದ್ದರೂ ಒಂದೊಂದು ಪಿರಿಯಡ್‌ ಜನರಲ್‌ ಕ್ಲಾಸ್‌ ಮಾಡುತ್ತೇನೆ ಎಂದು ಬಂದುಬಿಡುತ್ತಿದ್ದರು. ಅವರು ಬಂದರೆಂದರೆ ನಮಗೆಲ್ಲಾ ಪುಕ್ಕಟ್ಟೆ ಮನರಂಜನೆ.

ಅವರು ನಮಗೆ ಗೊತ್ತಾಗುವಷ್ಟು ಪೆದ್ದರಾಗಿದ್ದರು. ""ಸಾರ್‌ ಇವನು ಚೆನ್ನಾಗಿ ಹಿಂದಿ ಹಾಡು ಕಲ್ತಿದ್ದಾನೆ ಸಾರ್‌...' ಎಂದು ಗೆಳೆಯ ಪುಟ್ಸಾಮಿಯನ್ನು ತೋರಿಸುತ್ತಿದ್ದೆವು. ""ಬಾರೊ... ಹಾಡು' ಎಂದಾಕ್ಷಣ ಚಿಗರೆಯಂತೆ ಹಾರುತ್ತಿದ್ದ ಪುಟ್ಸಾಮಿ ಗಂಟಲು ಸರಿಪಡಿಸಿಕೊಂಡು ಬಾಯಿಗೆ ಬಂದದ್ದು ಹಾಡಿನ ತರದಲ್ಲಿ ಪೇಚಾಡುತ್ತಿದ್ದರೆ ನಾವು ಮುಸಿಮುಸಿ ನಗುತ್ತಿದ್ದೆವು. ಆದರೆ ಮಹದೇವಪ್ಪ ಮಾತ್ರ ನಮ್ಮೆಡೆಗೆ ಕೆಂಗಣ್ಣು ಬಿಟ್ಟು ನೋಡ್ರೋ ಎಷ್ಟ್ ಚೆನ್ನಾಗಿ ಕಲ್ತಿದ್ದಾನೆ ಹಿಂದಿ ಹಾಡನ್ನಾ... ನೀವೂ ಇದ್ದೀರಾ... ಎಂದು ಬೈಯುತ್ತಿದ್ದರು. ನಮಗಂತೂ ನಗು ತಡೆಯಲು ಆಗುತ್ತಲೇ ಇರಲಿಲ್ಲ.

ಮೀನಾ ನಮ್ಮ ತರಗತಿಯಲ್ಲಿದ್ದ ಹದಿನಾರು ಹುಡುಗಿಯರ ಪೈಕಿ ಸ್ವಲ್ಪ$ ಬೆಳ್ಳಗೆ ಸುಂದರವಾಗಿದ್ದಳು.ಅವಳನ್ನು ಭಾನುವಾರದಂದು ಮದುವೆಗೆ ಹೆಣ್ಣು ನೋಡಲು ಈ ಮಹದೇವಪ್ಪ ಹೋಗಿದ್ದರು.ಆಗ ಮೀನಾ ಮಹದೇವಪ್ಪನನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಕ್ಕೆ ಎರಡು ಕಾರಣಗಳನ್ನು ಕೊಟ್ಟಿದ್ದಳು. ಅವರನ್ನು ಈಗಾಗಲೇ ಸಾರ್‌... ಸಾರ್‌ ಎಂದು ಕರೆದು ರೂಢಿಯಾಗಿರುವುದರಿಂದ ಮದುವೆಯ ನಂತರ ಹಾಗೆ ಕರೆಯಲಿಕ್ಕೆ ಆಗದು ಎನ್ನುವುದು ಮೊದಲನೆಯ ಕಾರಣವಾಗಿದ್ದರೆ ಎರಡನೆಯದು ಮೇಸ್ಟ್ರೆಪೆದ್ದು ಎಂಬುದು. ಆದರೆ ಮಹದೇವಪ್ಪ ಮೇಸ್ಟ್ರೆ ಮೀನಾ ತನ್ನ ವಿದ್ಯಾರ್ಥಿನಿಯಾದ್ದರಿಂದ ತನ್ನನ್ನು ಒಪ್ಪೆಧೀ ಒಪ್ಪುತ್ತಾಳೆ, ಈ ಮದುವೆ ನಡೆಯುತ್ತದೆ ಎಂದು ಬಲವಾಗಿ ನಿರ್ಧರಿಸಿಬಿಟ್ಟಿದ್ದರು. ಆದರೆ, ಫ‌ಲಿತಾಂಶ ತಿಳಿದ ಮೇಲೆ ಅವರ ವರ್ತನೆಯೆ ಬೇರೆಯಾಗಿತ್ತು. ತರಗತಿಗೆ ಬಂದರೆ ಏನಾದರೊಂದು ವಿಷಯ ತೆಗೆದು "ಈಗಿನ ಕಾಲದ ಹುಡುಗೀರು ಸರಿಯಿಲ್ಲ..ಅವರ ಎಕ್ಸ್‌ಪೆಕ್ಟೇಷನ್‌ ಜಾಸ್ತಿ... ಅಂಥವರಿಗೆ ಸರಿಯಾಗೇ ಆಗುತ್ತೆ...' ಎಂದು ವಾರೆಗಣ್ಣಿಂದ ಮೀನಾಳೆಡೆಗೆ ನೋಡಿದರೆ, ಮೀನಾ ತಲೆತಗ್ಗಿಸುತ್ತಿದ್ದಳು. ನಾವು ಮುಸಿಮುಸಿ ನಗುತ್ತಿದ್ದೆವು.

ಕೊನೆಗೂ ಮೀನಾಳ ಮದುವೆಗೆ ಇಡೀ ನಮ್ಮ ಶಾಲೆಯೇ ನೆರೆದಿದ್ದರೂ ಮಹದೇವಪ್ಪ ಮಾತ್ರ ತನಗೆ ಕೆಲಸವಿದೆಯೆಂದು ತಪ್ಪಿಸಿಕೊಂಡರು.

ಇವರ ಜೊತೆಗೆ ನಮಗೆ ಪಾಠ ಚೆನ್ನಾಗಿ ಕಲಿಸಿದ ಗುರುಗಳು ಇದ್ದಾರೆ. ಆದರೆ, ಅವರಿಗಿಂತ ನೆನಪಿಗೆ ಬರುವುದು ಈ ಮೇಸ್ಟ್ರೆಗಳೇ... ನೆನಪಾದಾಗಲೆಲ್ಲ ನಗು ಬಂದರೂ ಅಮೇಲೆ ಯಾಕೋ ಕಣ್ತುಂಬಿ ಬರುತ್ತದೆ..ಅದು ಖುಷಿಗೋ, ಕಳೆದುಹೋದ ಕಾಲವನ್ನು ನೆನೆದೋ ಇಂದಿಗೂ ಗೊತ್ತಾಗಿಲ್ಲ.[ಇದು ನವಂಬರ 13 ರ೦ದು  ಉದಯವಾಣಿಸಾಪ್ತಾಹಿಕದಲ್ಲಿ ಪ್ರಕಟವಾಗಿದೆ.]

No comments:

Post a Comment