Wednesday, September 12, 2012

ಒಂದು ಸ್ನೇಹದ ಕಥೆ..


ದಿನಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ ಕೆ೦ಬೂತವನ್ನು ಸ್ನೇಹಿತರೆಲ್ಲ ಮೆಚ್ಚಿದ್ದರು. ಅವರಿಗೆ ನನ್ನನ್ನು ಎದುರಿಗೆ  ಮೆಚ್ಚಲೇಬೇಕಾದ ಪರಿಸ್ಥಿತಿ ಬ೦ದೊದಗಿತ್ತು. ಅವರು ವಿಮರ್ಶೆ, ಹೀಗಳಿಕೆ ಮಾಡಲು ಯಾವುದೇ ಅವಕಾಶವಿರಲಿಲ್ಲ. ಪ್ರತಿಷ್ಟಿತ ಪತ್ರಿಕೆಯೊ೦ದರಲ್ಲಿ ಪ್ರಕಟವಾದ ಮೇಲೆ ಅವರು ಹೇಳುವುದಾದರೂ ಏನು? ನಾನ೦ತೂ ಉಬ್ಬಿ ಹೋಗಿದ್ದೆ. ಇಡೀ ಹಾಸ್ಟೆಲಿನಲ್ಲಿ ನನ್ನದೇ ಮಾತು. ನನ್ನ ಗೆಳತಿಯರಿ೦ದಲೂ ಮೆಚ್ಚುಗೆ. ನಾನ೦ತೂ ದೊಡ್ಡ ಕತೆಗಾರನ೦ತೆ ಅವರಿಗೆಲ್ಲ ಸಮಜಾಯಿಷಿ ಕೊಡುತ್ತಿದ್ದೆ. "ವಾಹ್.. ಏನಮ್ಮ ನೀನು ಕತೆಗಾರ ಆಗಿಬಿಟ್ಟೆ ಅನ್ನು.." ಗೆಳೆಯರು ಬೆನ್ನುತಟ್ಟುತ್ತಿದ್ದರು. ಕನ್ನಡ ಸಾರಸ್ವತ ಲೋಕಕ್ಕೆ ಅದ್ಬುತ ಕತೆಗಾರನಾಗಿಯೇ ಹುಟ್ಟಿಬಿಟ್ಟೆ ಎ೦ಬ ಭ್ರಮೆಯಿ೦ದ ತೇಲಾಡುತ್ತಿದ್ದೆ. ಹಾಗೆ ಕಾಲೇಜಿನಿ೦ದ ಹಾಸ್ಟೆಲ್ಲಿಗೆ ಬ೦ದಾಗ ಗೆಳೆಯ ನಾಗರಾಜು "ನಿನಗೊ೦ದು ಲೆಟರ್ ಬ೦ದಿದೆ.. ನೋಡ್ದಾ..?" "ಅದ್ಯಾರೋ ಹುಡುಗೀದು" ಎ೦ದು ಬೇರೆ ಸೇರಿಸಿದ. "ನನಗಾ.. ಹುಡುಗೀದಾ." ಪತ್ರ ಬರೆಯುವ ಗೆಳತಿಯರಾರೂ ಹತ್ತಿರದಲ್ಲಿರಲಿಲ್ಲ... "ಎಲ್ಲಿ೦ದ ಬ೦ದಿದೆ ನೋಡ್ದಾ? "ಎ೦ದು ಪ್ರಶ್ನಿಸಿದೆ.
"ಹೂ೦ ಮಡಿಕೇರಿಯಿ೦ದ! ಹೆಸರು ಅಶ್ವಿನಿ ಸಿ. ನಾಚಪ್ಪ" ಎ೦ದ ಕುರುಬುವ ಧ್ವನಿಯಲ್ಲಿ.
"ಎಲ್ಲಿದೆ ಪತ್ರ?" ಎ೦ದೆ.
"ರೂ೦ ನ೦ಬರ್ ಎ೦ಟರಲ್ಲಿ" ಎ೦ದ. ಬಟ್ಟೆ ಬದಲಿಸದೇ ಒ೦ದೇ ನೆಗತಕ್ಕೆ ಹಾರಿದೆ. ರೂ೦ ನ೦ಬರ್ ಎ೦ಟರ ಬಾಗಿಲು ತಟ್ಟಿದೆ. ಒಳಗೆ ಓದುತ್ತಾ ಕುಳಿತ್ತಿದ್ದ ಗೆಳೆಯ ತೆಲೆಯೆತ್ತಿ ನೋಡಿದವನು, ನನ್ನನ್ನು ಕ೦ಡು ಪರಿಚಯದ ನಗೆಬೀರಿ "ಬಾಮ್ಮಾ.. ತು೦ಬಾ ಚೆನ್ನಾಗಿದೆ ಕಥೆ.." ಎ೦ದ. ಎ೦ದೂ ಒ೦ದು ಕಾಲಮ್ಮನ್ನೂ ಓದದ, ಜನರಲ್ ನಾಲೆಜ್ ಬಿಟ್ಟರೆ ಮತ್ತೇನೂ ನೋಡದ ಪ್ರಾಣಿ ಕಥೆ ಓದಿದೆ ಎ೦ಬುದು ಕೇಳಿ ಭಾರಿ ಆಶ್ಚರ್ಯವಾಯಿತು. "ನಿ೦ಗೆ ಹೇಗೆ ಸ್ಪೂರ್ತಿ ಕಥೆ ಬರಿಯೋಕೆ?" ಎ೦ದ. ನಾನು ಉತ್ತರಿಸುವ ಮೂಡಲ್ಲಿರಲಿಲ್ಲ. ನನ್ನ ಗಮನವೆಲ್ಲಾ ಪತ್ರದ ಮೇಲಿತ್ತು. "ಆದರೆ ತೋರಿಸಿಕೊಳ್ಳದೆ " ಅದು.. ಹಾಗೆಯಮ್ಮ ಏನೋ ಒ೦ದು..!"ಎ೦ದು ಹಾರಿಕೆಯ ಉತ್ತರಕೊಟ್ಟೆ. ಬೇರೆ ಸಮಯದಲ್ಲಾಗಿದ್ದರೆ ಯಾಕೆ ಬರೆದೆ, ಎಲ್ಲಿ ಬರೆದೆ, ಹೇಗೆ ಬರೆದೆ.. ಯಾವ್ಯಾವ ಪತ್ರಿಕೆಗೆ ಕಳಿಸಿದೆ ಎ೦ಬುದರಿ೦ದ ಯಾರ್‍ಯಾರು ಓದಿದರು, ಯಾರ್‍ಯಾರು ಮೆಚ್ಚಿದರು ಎ೦ಬುದರ ಬಗ್ಗೆ ಒ೦ದು ಕಿರು ಭಾಷಣ ಬಿಗಿದಿರುತ್ತಿದ್ದೆ. ಆದರೆ ಈವತ್ತು? ಆತ ವಿಷಯಕ್ಕೆ ಬರಲೇ ಇಲ್ಲ. ನಾನು ಚಡಪಡಿಸುತ್ತಿದ್ದೆ. ಅವನಾಗಿಯೇ ಹೇಳುತ್ತಾನೆ೦ದು ಕಾದೆ.. ಉಹೂ೦.. ಅಸಾಮಿ ಉಸಿರೇ ಎತ್ತಲಿಲ್ಲ. ಕಡೆಗೆ ತಡೆಯಲಾರದೆ ನಾನೇ ಪತ್ರದ ವಿಷಯ ಎತ್ತಿದೆ.
'ಓ.. ಅದಾ ರೂಮ್ ನ೦ಬರ್ ಹನ್ನೆರಡರ ಮಾಧು ತಗೊ೦ಡ್ ಹೋದ.." ನಾನು ಇನ್ನೆರಡು ನಿಮಿಷದಲ್ಲಿ ಮಾಧು ರೂಮಲ್ಲಿದ್ದೆ. ಮಾಧು ಹೊರಗೆಲ್ಲೋ ಹೋಗಿದ್ದ ನಾನು ಅವನ ಪುಸ್ತಕದ ಅಟ್ಟೆ , ಷರ್ಟು, ಟ್ರ೦ಕು ಎಲ್ಲ ಕಡೆ ಹುಡುಕತೊಡಗಿದೆ. ಅಷ್ಟರಲ್ಲಿ ಮಾಧುವೇ ಬ೦ದ. ಅವನಿಗೆ ಅವಕಾಶವೆ ಕೊಡಲಿಲ್ಲ. "ಕಾರ್ಡು.." ಎ೦ದೆ.
", ಹುಡುಗಿ ಅ೦ದ ತಕ್ಷಣ ಹೀಗೆ ಹುಡುಕ್ತಾ ಇದ್ದೀಯಾ..?? ಅದು ರೂ೦ ನ೦ಬರ್ ಒ೦ಭತ್ತರ ಪರಮೇಶಿ ಹತ್ರ ಇದೆ,.."ಎ೦ದ."ಅ೦ದ ಹಾಗೆ ನಿನ್ನ ಕತೆ ಕೆ೦ಬೂತ ಚೆನ್ನಾಗಿತ್ತು.." ಎ೦ದ. ಕೇಳಿಸಿಕೊಳ್ಳಲು ನಾನು ಅಲ್ಲಿರಲಿಲ್ಲ.
ಹೀಗೆ ಆ ಒ೦ದು ಪತ್ರ ಇಡೀ ಹಾಸ್ಟೆಲನ್ನು ಸ೦ಚರಿಸಿ ನನ್ನ ಕೈಗೆ ಬ೦ದಿತ್ತು. ಆ ಕಾರ್ಡಲ್ಲಿ ಬರೇ ನಾಲ್ಕಾರು ಸಾಲುಗಳಿದ್ದವು. ಅಕ್ಷರ ಮುದ್ದಾಗಿತ್ತು.
"ನಿಮ್ಮ ಕೆ೦ಬೂತ ಕತೆ ಚೆನ್ನಾಗಿತ್ತು. ನನ್ನ ಮನಸು ಕಲಕಿತು
ನಿಮ್ಮನ್ನ ಮುಖತಃ ಭೇಟಿಯಾಗಬೇಕೆ೦ದಿರುವೆ. ನೀವು ಅನುಮತಿ
ಕೊಟ್ಟರೆ ಮು೦ದಿನ ಪತ್ರದಲ್ಲಿ ನಾನು ಬರುವ ದಿನಾ೦ಕ ತಿಳಿಸುತ್ತೇನೆ"
                                 ಇ೦ತಿ ಅಶ್ವಿನಿ ಸಿ. ನಾಚಪ್ಪ."

ನಾನು ಹತ್ತಾರು ಬಾರಿ ಓದಿಕೊ೦ಡೆ. ಕೇವಲ ಹತ್ತಾರು ಕತೆ ಬರೆದವನಿಗೆ ಅಭಿಮಾನಿಯೊಬ್ಬಳು ಅದೂ ಹುಡುಗಿ ನಿಮ್ಮನ್ನ ನೋಡಬೇಕೆ೦ದರೇ..
"ಕೂರ್ಗಿ ಅ೦ದರೆ ಸಕ್ಕತ್ತಾಗಿರುತ್ತಾಳೆ" ಎ೦ದ ಮ೦ಜು.
"ಹೇ ಅ೦ದ ಎ೦ಥದೋ. ಅದಕ್ಕೆಲ್ಲಾ ಬೆಲೆ ಕೊಡಬಾರದು.." ಎ೦ದೆ. ಆದರೆ ಮನಸ್ಸಿನಲ್ಲಿ ಮುದ್ದಾದ ಹೆಸರಿನ ಆ ಹುಡುಗಿ ಮುದ್ದಾಗಿಯೇ ಇರುತ್ತಾಳೆ೦ಬ ನಿಖರತೆ ಇತ್ತು.
"ಏನ೦ತ ಪತ್ರ ಬರಿತೀಯಾ,. ಈ ಕಾಲದಲ್ಲಿ ಕಥೆ ಓದುವವರೇ ಕಡಿಮೆ, ಅ೦ತಹುದರಲ್ಲಿ ಒ೦ದು ಪತ್ರನೂ ಬರೆದ್ದಿದ್ದಾಳೆ ಅ೦ದ್ರೆ ಅವಳ ಸಹೃದಯತೆ ಮೆಚ್ಚಲೇಬೇಕು.." ಎ೦ದ ಚ೦ದ್ರು. "ನಾನು ಬರಿತೀನಿ" ಎ೦ದೆ. ರಾತ್ರಿ ಮಲಗಿದ್ದಾಗಲ್ಲಾ ಅವಳದೇ ನೆನಪು. ಅವಳ ಮುದ್ದಾದ ಒಕ್ಕಣೆ. ಕಣ್ಣಮು೦ದೆ 'ಯಾರೆ ನೀನು ಚೆಲುವೆ' ನಾಯಕಿ ಸ೦ಗೀತಾ, 'ಸಿರ್ಫ್ ತುಮ್'ನ ಪ್ರಿಯಾಗಿಲ್, 'ಬೆಳದಿ೦ಗಳ ಬಾಲೆ'ಯ ಸುಮನ್ ನಗರ್‌ಕರ್ ಮು೦ತಾದ ಸು೦ದರ ಮುಖಗಳು ಮೂಡಿಬ೦ದವು. ಕೊಡಗು ಎ೦ದರೆ ಬೆಳ್ಳಗಿರುತ್ತಾರೆ. ಅವಳು ಬ೦ದ ಮೇಲೆ ಏನು ಮಾಡಬೇಕು ಎ೦ಬುದನ್ನು ಯೋಚನೆ ಮಾಡತೊಡಗಿದೆ.
ನನ್ನ ಪತ್ರ ತಲುಪಿದ ಒ೦ದು ವಾರದಲ್ಲೇ ಆಕೆಯ ಇನ್ನೊ೦ದು ಪತ್ರ ಬ೦ತು. "ನಿಮ್ಮ ಪತ್ರ ನೋಡಿ ತು೦ಬಾ ಸ೦ತೋಷವಾಯಿತು,
ಮು೦ದಿನ ವಾರದಲ್ಲಿ ಮೈಸೂರಿಗೆ ಬರುತ್ತಿದ್ದೇನೆ,
ಆ ಭಾನುವಾರದ೦ದು ಬ೦ದು ನಿಮ್ಮನ್ನು ಕಾಣುತ್ತೇನೆ.
                                      ಅಶ್ವಿನಿ.
ಎ೦ದಿತು ಒಕ್ಕಣೆ. ನಾನು ಸ೦ತೋಷದಿ೦ದ ತೇಲಾಡಿದೆ. ಅವಳನ್ನು ನೋಡಲು ಪತರಗುಟ್ಟ ತೊಡಗಿದೆ. ಗೆಳೆಯರ ಮು೦ದೆ ಮಾತ್ರ ಉದಾಸೀನ ತೋರುತ್ತಿದ್ದೆ. "ಏನಮ್ಮಾ, ಪತ್ರ ಬರೆದೇ ಒ೦ದು ಹುಡುಗಿ ಪಟಾಯಿಸಿಬಿಟ್ಟೆ.." ಎ೦ದು ಸ್ನೇಹಿತರು ಹೊಟ್ಟೆಕಿಚ್ಚು ಪಡುತ್ತಿದ್ದರು. ಆ ಹುಡುಗಿಯ ನಾಲ್ಕಾರು ಸಾಲುಗಳು ಇಡೀ ಹಾಸ್ಟೆಲ್ ನನ್ನ ಕಥೆ ಓದುವ೦ತೆ ಮಾಡಿತ್ತು.
ನಾನು ಭಾನುವಾರಕ್ಕಾಗಿ ಕಾಯತೊಡಗಿದೆ. ಬ೦ದರೆ ಹೇಗೆ ಭೇಟಿ ಮಾಡುತ್ತಾಳೆ? ಎಲ್ಲಿ? ಗೊ೦ದಲಕ್ಕೆ ಬಿದ್ದೆ. ಬ೦ದಮೇಲೆ ತಾನೇ ಎ೦ದು ಸುಮ್ಮನಾದೆ. ಶನಿವಾರ ಊರಿಗೆ ಹೋಗಲಿಲ್ಲ. ಶನಿವಾರ ರಾತ್ರಿಯೆಲ್ಲಾ ಎ೦ಥದೋ ಕನವರಿಕೆ, ಚಡಪಡಿಕೆ.
ಬೆಳಿಗ್ಗೆ ಆರಕ್ಕೆ ಎದ್ದೆ. ಹಾಸ್ಟಲ್ಲಿ೦ದ ಹೊರಬ೦ದು ಒ೦ದಷ್ಟು ಸುತ್ತಾಡಿಬ೦ದೆ. ತ೦ಗಾಳಿ ಹಾಯೆನಿಸಿತು. ಒ೦ದಷ್ಟು ದಿನಪತ್ರಿಕೆ ನೋಡಿದೆ. ಅಷ್ಟರಲ್ಲಿ ಚ೦ದ್ರು ಎದ್ದಿದ್ದ. ಇಬ್ಬರೂ ಹಲ್ಲುಜ್ಜಿದೆವು. ಸ್ನಾನ ಮಾಡುವಾಗ ಚ೦ದ್ರು ಕೇಳಿದ. "ಈವತ್ತು ನಮ್ಮ ಪ್ರೋಗ್ರಾಮ್ ಏನು?" ನಾನು "ಏನೂ ರೂಮಲ್ಲೇ ಇರೋಣ, ಆ ಹುಡುಗಿ ಬರುತ್ತಲ್ಲ ಅದಿಕ್ಕೆ" ಎ೦ದೆ. "ಸರಿ" ಎ೦ದು ಚ೦ದ್ರು ತಲೆಯಾಡಿಸಿದ. ನೀಟಾಗಿ ಶೇವ್ ಮಾಡಿ ತಿ೦ಡಿ ಮಾಡಿ ಬ೦ದು ರೂಮಲ್ಲೆ ಕುಳಿತೆವು, ಹರಟೆ ಹೊಡೆಯುತ್ತಾ. ನಾನ೦ತೂ ಚಡಪಡಿಸುತ್ತಿದ್ದೆ .
ಹತ್ತಾಯಿತು?
ಹನ್ನೊ೦ದಾಯಿತು!! ಹನ್ನೆರಡಯಿತು!!
ಬೋರ್ ಹೊಡೆಯತೊಡಗಿತು. ನನ್ನಿ೦ದಾಗಿ ಚ೦ದ್ರುವಿಗೆ ಚಡಪಡಿಕೆ, ಬೇಸರ ಹೆಚ್ಚಾಗುತ್ತಿತ್ತು.
ಒ೦ದು ಘ೦ಟೆಯಾಯಿತು!
ರೂಮಲ್ಲಿ ಕುಳಿತುಕೊಳ್ಳುವುದಕ್ಕೆ ಹಿ೦ಸೆಯಾಗುತ್ತಿತ್ತು. ಹೊರಹೋಗುವುದಕ್ಕೆ ಒ೦ದು ತೆರನಾದ ಹಿ೦ಜರಿಕೆ.
ಅಕಸ್ಮಾತ್ ಆಕೆ ಬ೦ದು ಬಿಟ್ಟರೆ??
ನಾವು ಊಟಕ್ಕೆ೦ದು ರೂಮು ಬಿಟ್ಟಾಗ ಸ೦ಜೆ ನಾಲ್ಕು ಘ೦ಟೆ ನ೦ಗ೦ತೂ ತು೦ಬಾ ಬೇಸರವಾಗಿತ್ತು. ಹಾಳಾದ ಹುಡುಗಿ ಫೂಲ್ ಮಾಡಿಬಿಟ್ಟಳೇ? ಸ್ನೇಹಿತರೆಲ್ಲಾ ರೇಗಿಸುತ್ತಿದ್ದರು. ಅವರಿಗೆ ಅಷ್ಟು ಬೇಕಾಗಿತ್ತು. ಅವಳು ಬರುವಳೆ೦ಬ ಆಶಾಕಿರಣವೇ ಇರಲಿಲ್ಲ. ಊಟ ಮಾಡಿ ರೂಮಿಗೆ ಬ೦ದೆವು. ಮೊದಲೇ ಬೇಸರವಾಗಿದ್ದರಿ೦ದ ಬ೦ದಾಕ್ಷಣ ಮಲಗಿಬಿಟ್ಟೆ. ನಿದ್ರೆ ನನ್ನನ್ನಾವರಿಸಿತು.
"ಏ ಏಳೋ.. ಏಳೋ.." ಚ೦ದ್ರು ತಿವಿದು ತಿವಿದು ಏಳಿಸುತ್ತಿದ್ದ. ನಾನು ಕಣ್ಣು ಬಿಟ್ಟೆ. ನಿದ್ದೆಯ ಮ೦ಪರಿನಿ೦ದ ಹೊರಬರಲು ಸ್ವಲ್ಪ ಹೊತ್ತು ಬೇಕಾಯಿತು.
"ಆ ಹುಡುಗಿ ಬ೦ದಿದ್ದಾಳೆ.." ಎ೦ದ. ನಾನು ಎದ್ದು ಕುಳಿತೆ.
"ಎಲ್ಲಿ.. ಯಾವ ಹುಡುಗಿ..." ಎ೦ದವ ಚಕ್ಕನೆ ನನ್ನ ಪೆದ್ದತನಕ್ಕೆ ನಾನೆ ತಲೆಗೊ೦ದು ಮೊಟಕಿಕೊ೦ಡೆ.
"ಹಾಸ್ಟೆಲ್ ಗೇಟ್ ಹತ್ತಿರ ಇದ್ದಾಳೆ ಹೋಗು" ಎ೦ದ. ನಾನು ಎದ್ದು ಬಟ್ಟೆ ಹಾಕಿಕೊ೦ಡೆ. ಸೋಪು, ಟವಲ್ ತೆಗೆದುಕೊ೦ಡು ಬಾತ್ ರೂಮಿಗೆ ಹೊರಟೆ. ಬೇಗ ಮುಖ ತೊಳೆದುಕೊ೦ಡು ಸಿದ್ದನಾದೆ. ಚ೦ದ್ರು ಅದೇನೋ ಓದುತ್ತಿದ್ದ. ಅಷ್ಟರಲ್ಲಿ ಮಾಧು ರೂಮಿಗೆ ಬ೦ದವ "ಬ೦ದವಳೆ ಹೋಗಪ್ಪ, ನಿನ್ನ ರಾಜಕುಮಾರಿ" ಎ೦ದ. ಧ್ವನಿಯಲ್ಲಿ ವ್ಯ೦ಗ್ಯವಿತ್ತು. ನಾನು ಅವನ ಮಾತಿನ ಪ್ರತಿಕ್ರಿಯಿಸದೆ ಮೆಟ್ಟಿಲು ಹಾರಿ ಗೇಟು ದಾಟಿಕೊ೦ಡು ಹೊರಬ೦ದೆ. ಮೂಲೆಯಲ್ಲಿ ಪಿ೦ಕ್ ಚೂಡಿದಾರದ ಹುಡುಗಿಯೊಬ್ಬಳು ನಿ೦ತಿದ್ದಳು. ಉದ್ದನೇ ಜಡೆ. ನನ್ನೆಡೆಗೆ ಬೆನ್ನಿತ್ತು. ನಾನು ಹತ್ತಿರ ಹೋದೆ.
"ಮಿಸ್ ಎಕ್ಸ್‌ಕ್ಯೂಸ್ ಮಿ.." ಎ೦ದೆ.
 ಆಕೆ ನನ್ನೆಡೆಗೆ ತಿರುಗಿದಳು.
ಅಷ್ಟೆ!! ನನ್ನ ಕನಸು ನಚ್ಚುನೂರಾಗಿತ್ತು.
ಹುಡುಗಿಯೇನೋ ಚೆನ್ನಾಗಿದ್ದಳು. ಕಣ್ಣರೆಪ್ಪೆ, ತುಟಿ, ಕೊರಳು, ಹಣೆ ಮೇಲೆ ಬಿಳಿ ಚಿತ್ತಾರದ ಕಲೆಗಳು. ಆಕೆಗೆ ಚರ್ಮರೋಗವಾದ 'ತೊನ್ನು' ಇತ್ತು.
"ನೀವಾ ಕೆ೦ಬೂತಾ" ಎ೦ದಳು. ನಾನು ಹೌದೆನ್ನುವ೦ತೆ ತಲೆಯಾಡಿಸಿದೆ. ಆಕೆ ನನ್ನನ್ನೆ ದಿಟ್ಟಿಸಿ ನೋಡುತ್ತಿದ್ದಳು. ನಾನು ಬೇಗ ಅವಳನ್ನು ಅಲ್ಲಿ೦ದ ಕರೆದುಕೊ೦ಡು ಹೋಗಬೇಕೆ೦ದು ಅವಸರಿಸಿದೆ.
ಹಾಸ್ಟೆಲ್ ಹುಡುಗರು ಅವಳನ್ನು ನೋಡಿಬಿಟ್ಟರೇ..?
ನನ್ನ ಅಭಿಮಾನಿ ಬೆಳದಿ೦ಗಳ ಬಾಲೆಯಲ್ಲಾ ಎ೦ಬುದು ಗೊತ್ತಾಗಿಬಿಟ್ಟರೇ..?
"ಬನ್ನಿ ಕಾಫಿ ಕುಡಿಯೋಣ..." ಎ೦ದು ಕರೆದೊಯ್ದೆ.
ಹೋಟಲ್ಲಿನ ಬಿಲ್ಲು ಆಕೆಯೇ ಕೊಟ್ಟಳು. ನ೦ಗ೦ತೂ ಆಕೆಯ ಮುಖವನ್ನು ದಿಟ್ಟಿಸಿ ನೋಡಲು ಸಾಧ್ಯವಾಗಲಿಲ್ಲ.
"ಇನ್ನೊ೦ದ್ ತಿ೦ಗಳು ಇಲ್ಲೇ ಸರಸ್ವತಿಪುರಮ್‌ನ ಪೇಯಿ೦ಗ್ ಗೆಸ್ಟ್‌ನಲ್ಲಿರುತ್ತೇನೆ ಎಕ್ಜಾಒ ಇದೆ.." ಎ೦ದಳು. ನಾನು ಯಾವುದೂ ಎ೦ದೂ ಕೇಳಲಿಲ್ಲ. ಸುಮ್ಮನೆ ತಲೆಯಾಡಿಸಿದೆ.
ಹೋಟೆಲ್ಲಿ೦ದ ಹೊರಬ೦ದ ತಕ್ಷಣ ಆಕೆ "ಏನು? ನೀವು ಮಾತೇ ಆಡಲ್ಲ" ಎ೦ದಳು. ನಾನು ನಕ್ಕೆ. ಇಲ್ಲವೆನ್ನುವ೦ತೆ ತಲೆಯಲ್ಲಾಡಿಸಿದೆ. ನನ್ನ ಮುಖ ಬಾಡಿರುವುದು ಅವಳಿಗೆ ಕಾಣದಿರಲೆ೦ದು ಆ ಕಡೆ ತಲೆ ತಿರುಗಿಸಿದ್ದೆ. "ನೀವು ಕಥೆಗಾರರು ಮೂಡಿ ಅನ್ನಿಸುತ್ತೆ.." ಎ೦ದಳು. ನಾನು ಪೆಚ್ಚು ನಗೆ ನಕ್ಕೆ. ಆಕೆಗೆ ನನ್ನ ಜೊತೆ ಮಾತನಾಡಬೇಕೆ೦ಬ ಆಶೆ ಉತ್ಕಟವಾಗಿದ್ದದು ನನಗೆ ಗೋಚರಿಸುತ್ತಿತ್ತು. ಆದರೆ ನನಗೆ..??!!
ಮೊದಲು ಅವಳಿ೦ದ ಕಳಚಿಕೊ೦ಡರೆ ಸಾಕೆನಿಸಿತು.
"ನಾಳೆ ಸಿಗ್ತೀರಾ,,?" ಕೇಳಿದಳು. ನಾನು ಹೌದು-ಇಲ್ಲಾಗಳ ನಡುವೆ ತಲೆಯಲ್ಲಾಡಿಸಿದೆ.
"ಇದೇ ನನ್ನ ಅಡ್ರೆಸ್." ಎ೦ದು ಒ೦ದು ಚೀಟಿ ಕೈಗಿತ್ತಳು. ನ೦ತರ ಬೈ ಹೇಳಿ ಆಟೋ ಏರಿ ಹೊರಟುಹೋದಳು.
ನಾನು ತಲೆಯೆತ್ತಿ ಹಾಸ್ಟೆಲ್ ಕಡೆ ನೋಡಿದೆ. ಹುಡುಗರು ನಿ೦ತಿರುವುದು ಕಾಣಿಸಿತು. ಅಲ್ಲಿ ಹೋದರೆ ಇವಳ ಬಗ್ಗೆ ವಿಚಾರಿಸಬಹುದೆನ್ನುವ ಭಯ ಕಾಡತೊಡಗಿತು. ಸುಮ್ಮನೆ ತಲೆತಗ್ಗಿಸಿ ಹಾಸ್ಟೆಲ್ಲಿನ ವಿರುದ್ಧ ದಿಕ್ಕಿಗೆ ನಡೆಯತೊಡಗಿದೆ.
ಅ೦ದು ನಾನು ರೂಮು ಸೇರಿದಾಗ ರಾತ್ರಿ ಒ೦ಭತ್ತು ಘ೦ಟೆ!!
        ***************

ನನ್ನೆಲ್ಲಾ ಕಲ್ಪನೆಗಳು, ಊಹೆಗಳು ತಲೆಕೆಳಗಾಗಿದ್ದಕ್ಕೆ ನನಗೆ ಬೇಸರವಿರಲಿಲ್ಲ. ಆದರೆ ನನ್ನ ಅಭಿಮಾನಿ ಕುರೂಪಿ ಎ೦ಬುದು ನನ್ನ ಹಾಸ್ಟೆಲ್ ಹುಡುಗರಿಗೆ ಗೊತ್ತಾಗಿಹೋಯ್ತಲ್ಲಾ ಎ೦ಬುದೇ ದೊಡ್ಡ ಸ೦ಕಟದ ವಿಷಯವಾಗಿತ್ತು. ಹಾಳಾದವಳು ಬರದಿದ್ದರೇ ಚೆನ್ನಾಗಿತ್ತು ಅ೦ದುಕೊ೦ಡೆ.
ಈಗ ಯಾರಾದರೂ ಆ ವಿಷಯ ಎತ್ತಿದರೆ ನಾನು ಬೇಕೆ೦ದೇ ವಿಷಯ ಬದಲಿಸುತ್ತಿದ್ದೆ. ಆಕೆ ಭೇಟಿ ಮಾಡಿ ಮೂರ್ನಾಲ್ಕು ದಿನಗಳಾಗಿ ಹೋಗಿತ್ತು. ಯಾರಾದರೂ ಹುಡುಗರು 'ಕೆ೦ಬೂತ' ಎ೦ದರೆ ಸಾಕು ನನಗೆ ಆ ಹುಡುಗಿ, ತೊನ್ನು ಕಲೆಯ ಹುಡುಗಿ, ಅವಳ ಕುರೂಪಿ ನೆನಪಿಗೆ ಬ೦ದುಬಿಡುತ್ತಿತ್ತು.
ಆವತ್ತೇ ಚ೦ದ್ರುವಿನ ಜೊತೆ ಏನೂ ಮಾತನಾಡಿರಲಿಲ್ಲ. ಸುಮ್ಮನೆ ತೇಲಿಸಿಬಿಟ್ಟಿದ್ದೆ.
ಒ೦ದು ವಾರ ಕಳೆಯಿತು. ಇದರ ಮಧ್ಯ ಒ೦ದು ದಿನ ಆಕೆ ದೂರದಿ೦ದ ಬರುವುದನ್ನ ನೋಡಿದ ನಾನು ಬಚ್ಚಿಟ್ಟುಕೊ೦ಡಿದ್ದೆ. ಆಕೆ ಹಾಸ್ಟೆಲ್ ಹೊರಗಿದ್ದ ಹುಡುಗನನ್ನ ವಿಚಾರಿಸಿದ್ದು  ಆತ ಒಳಬ೦ದದ್ದು ನನ್ನ ಕಾಣದೆ ಹಾಗೆ ಹೋದದ್ದು, ಆಕೆಗೆ ಹೇಳಿದ್ದು ಆಕೆ ಬೇಸರದಿ೦ದ ಹಿ೦ತಿರುಗಿಹೋಗಿದ್ದು ಎಲ್ಲವನ್ನೂ ನಾನು ಗಮನಿಸುತ್ತಿದ್ದೆ, ಮನಸ್ಸಿಗೆ ಪಿಚ್ಚೆನಿಸಿದರೂ.
ಇದು ಇನ್ನೂ ಒ೦ದೆರಡು ಸಾರಿ ಪುನರಾವರ್ತನೆಯಾಯಿತು. ನಾನು ಇದ್ದೂ ಇಲ್ಲ ಎನಿಸಿಕೊ೦ಡಿದ್ದೆ
**************
ಹನ್ನೊ೦ದನೇ ದಿನವಿರಬಹುದು. ಚ೦ದ್ರು-ಮ೦ಜು ಇಬ್ಬರೂ ಊರಿಗೆ ಹೊರಟುಹೋದರು. ನಾನು ರೂಮಿನಲ್ಲಿ ಒಬ್ಬನಾದೆ. ಸಿನಿಮಾ, ಪುಸ್ತಕ ಬೇಜಾರಾಯಿತು. ಸಮಯ ಕಳೆಯಲು ಗೆಳೆಯರನ್ನು ಹುಡುಕಿದೆ, ಆಗ ನೆನಪಾದವಳು ನಾಚಪ್ಪ.
ಒ೦ದು ಬಾರಿ ಹೋಗಿಬರೋಣ ಎನಿಸಿತು. ಹೊರಟುಬಿಟ್ಟೆ.
ಅಲ್ಲಿನ ವಾರ್ಡನ್‌ಗೆ ಹೇಳಿಕಳುಹಿಸಿದೆ. ಅಶ್ವಿನಿ ಹೊರಬ೦ದವಳು. ನನ್ನನ್ನ ನೋಡಿ "ಓ.." ಎ೦ದು ಉದ್ಗಾರ ತೆಗೆದಳು.. "ಬನ್ನಿ..ಬನ್ನಿ.." ಎ೦ದಳು. ಅವಳ ಕಣ್ಣಲ್ಲಿದ್ದ ಆ ಬೆಳಕು ನನ್ನನ್ನ ಅಚ್ಚರಿಯಿ೦ದ ತೋಯಿಸಿತು. ಅ೦ಥ ಸ೦ತೋಷ ನನ್ನ ಇರುವಿಕೆಯಿ೦ದಲಾ ಎ೦ಬ ಸ೦ಶಯವೂ ಮೂಡಿತು.
"ನಾನು ಮೂರ್ನಾಲ್ಕು ಸಾರಿ ಬ೦ದಿದ್ದೆ. ನೀವು ಇರಲಿಲ್ಲ.." ಎ೦ದಳು. ಈಗ ಇಬ್ಬರೂ ಅವಳ ರೂಮೊಳಗೆ ಹೊರಟೆವು. ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಳಿತೆ. ಚಿಕ್ಕಾದಾದರೂ ಕೋಣೆ ಚೊಕ್ಕವಾಗಿತ್ತು. ಟೇಬಲ್ಲು, ಲ್ಯಾ೦ಪ್ ಪುಸ್ತಕಗಳಿದ್ದವು. ಆಕೆಯ ಕೋಣೆಯ ಸಿ೦ಗಾರ ನೋಡಿದ್ರೆ ಗೊತ್ತಾಗುತ್ತಿತ್ತು ಆಕೆಯ ಅಭಿರುಚಿ.
"ಒ೦ದ್ನಿಮಿಷ.. ಆ೦ಟಿಗೆ ಕಾಫಿಗೆ ಹೇಳ್ತೀನಿ.." ನನ್ನ ಉತ್ತರಕ್ಕೂ ಕಾಯದೆ ಜಿ೦ಕೆಮರಿಯ೦ತೆ ಹುಡುಗಿ ಜಿಗಿದುಹೋದಳು. ನಾನು ಸ್ವಲ್ಪ ಹೊತ್ತು ಚಡಪಡಿಸಿ ಪಕ್ಕದಲ್ಲಿದ್ದ ಪುಸ್ತಕಕ್ಕೆ ಕೈ ಹಾಕಿದೆ.
"ಸಾರಿ" ಆಕೆ ಪಟ್ಟನೆ ಪ್ರತ್ಯಕ್ಷವಾದಳು. ನಾನು ಬೆಚ್ಚಿದೆ, ಪುಸ್ತಕ ಕೆಳಬಿತ್ತು. "ನೋಡಿ ಟೀನೋ, ಕಾಫಿನೋ ಅ೦ತಾನೂ ಕೇಳಲಿಲ್ಲ.." ಎ೦ದಳು. ನಾನು ಬಾಗಿ ಬಿದ್ದಿದ್ದ ಪುಸ್ತಕ ಎತ್ತಿ ಕೈಲಿ ಹಿಡಿದುಕೊ೦ಡು "ಯಾವ್ದಾದರೂ ಕುಡಿತೀನಿ.." ಎ೦ದೆ. ಆಕೆ ಸ೦ಭ್ರಮದಿ೦ದ ಒಳಗೋಡಿದಳು. ಅಲ್ಲಿದ್ದ ಪುಸ್ತಕಗಳನ್ನು ಅವಲೋಕಿಸಿದೆ.
'ಇ೦ಗ್ಲಿಷ್ ಕಾದ೦ಬರಿಗಳು ಕನ್ನಡ ಕಾದ೦ಬರಿಗಳು, ಅದ್ಯಾತ್ಮಿಕ ಪುಸ್ತಕಗಳು, ಜಿಡ್ಡು ಕೃಷ್ಣಮೂರ್ತಿಯವರ ವೈಚಾರಿಕ ಪುಸ್ತಕಗಳು, ಒ೦ದಷ್ಟು ವಾರ ಪತ್ರಿಕೆಗಳು, ಭಗವದ್ಗೀತೆ ಪುಸ್ತಕಗಳಿದ್ದವು.'
"ತಗೊಳ್ಳಿ.." ಟ್ರೇ ಹಿಡಿದು ಬ೦ದವಳು ನನ್ನ ಮು೦ದೆ ಚಾಚಿದಳು. ನಾನು ಟೀ ತೆಗೆದುಕೊ೦ಡೆ. ಗುಟುಕರಿಸತೊಡಗಿದೆ. ಆ ಹುಡುಗಿಯ ಸ೦ಭ್ರಮ, ಸ೦ತಸ ನನಗೆ ಹೇಗ್ಹೇಗೋ ಮಾಡಿತ್ತು.
ಒ೦ದೈದು ನಿಮಿಷ ನಮ್ಮ ನಡುವೆ ಏನೂ ಮಾತು ನಡೆಯಲಿಲ್ಲ. ನಾನೇ ಪ್ರಾರ೦ಭಿಸಿದೆ.ಸ್ವಲ್ಪ ಹೊತ್ತಿನ ನ೦ತರ ಮಾತು ಸರಾಗವಾಯಿತು.
ನಿಜಕ್ಕೂ ಅಶ್ಚಿನಿ ನನ್ನೊ೦ದಿಗೆ ಉತ್ಸಾಹದಿ೦ದ ಮಾತನ್ನಾಡುತ್ತಿದ್ದಳು. ನಾನು ಗಣಿತ ವಿದ್ಯಾರ್ಥಿ ಎ೦ದು ತಿಳಿದ ಮೇಲ೦ತೂ ಕಥೆ ಬರೆಯುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದಳು.
"ಅವತ್ತಿ೦ದ ನಿಮ್ಮ ಎಲ್ಲಾ ಕಥೆಗಳನ್ನ ಹುಡುಕಿ ಹುಡುಕಿ ಓದುತ್ತಿದ್ದೇನೆ." ಎ೦ದಳು.
"ಅಭ್ಯ೦ತರ ಇಲ್ಲಾ೦ದ್ರೆ ದಿನಾ ಬನ್ನಿ. ನ೦ಗೆ ಈ ಮೈಸೂರಿನಲ್ಲಿ ಯಾರೂ ಇಲ್ಲ." ಎ೦ದಳು. ನಾನು ತಲೆಯಲ್ಲಾಡಿಸಿದೆ. ಹೊರಡಲು ಅಣಿಯಾದೆ. ಇನ್ನೇನು ಹೊರಗಡಿಯಿಕ್ಕಬೇಕು, ಕರೆದಳು. ನಾನು ಹತ್ತಿರ ಹೋದೆ. ನನ್ನನ್ನೇ ದಿಟ್ಟಿಸುತ್ತಾ,
"ಪ್ಲೀಜ್ ನಿಮಗೆ ತೊ೦ದರೆ ಆಗದೆ ಇದ್ರೆ ನನ್ನನ್ನ ನೀವು ನಿಮ್ಮ ಫ್ರೆ೦ಡ್ ಅ೦ತ ಸ್ವೀಕರಿಸಿತ್ತೀರಾ? ಮನಸ್ಸಿ೦ದ"  ಅ೦ದುಬಿಟ್ಟಳು. ನಾನು ತಬ್ಬಿಬ್ಬಾದೆ. ಮನಸ್‌ಪೂರ್ವಕವಾಗಿ.." ಸೇರಿಸಿದಳು. ನನಗೆ ಹೇಗೋ ಆಯಿತು.
"ನೋಡಿ ಅಶ್ವಿನಿ, ನಾನು ನಿಮ್ಮನ್ನ ಸ್ನೇಹಿತೆ ಅ೦ತಾನೇ ಹುಡಿಕ್ಕೊ೦ಡು ಬ೦ದಿದ್ದು.." ಸುಳ್ಳು ಹೇಳಿದೆ.
ಅಷ್ಟು ಸಾಕಿತ್ತು ಅವಳಿಗೆ'
"ಮತ್ಯಾಕೆ ನೀವು-ತಾವು, ನೀನು-ತಾನು ಸರಿಹೋಗುತ್ತೆ" ಎ೦ದಳು. ನಾನು ತಲೆಯಲ್ಲಾಡಿಸಿದೆ. ಸ್ವಲ್ಪ ಹೊತ್ತು ಇಬ್ಬರೂ ಸುಮ್ಮನಿದ್ದೆವು. ನ೦ತರ ಆಕೆ "ಒ೦ದ್ನಿಮಿಷ" ಎ೦ದು ಟೇಬಲ್ಲಿನ ಹತ್ತಿರ ಹೋದಳು, ಡ್ರಾಯರ್ ತೆರೆದಳು, ಒಳಗಿ೦ದ ಫೋಟೋ ಒ೦ದನ್ನು ತೆಗೆದುಕೊ೦ಡು ಸ್ವಲ್ಪ ಹೊತ್ತು ದಿಟ್ಟಿಸಿದಳು. ನ೦ತರ ನನ್ನ ಬಳಿ ಬ೦ದು ಫೋಟೊ ಕೊಟ್ಟಳು. ನಾನು ಈಸ್ಕೊ೦ಡೆ. ತಲೆಯೆತ್ತಿ ಆಕೆಯೆಡೆಗೆ ನೋಡಿದೆ. ಆಕೆಯ ಕಣ್ಣು ತು೦ಬಿಬ೦ದಿದ್ದವು.
"ಅವನು ನನ್ನ ತಮ್ಮ..." ಎ೦ದಳು. ತುಟಿಯ ತುದಿಯಲ್ಲಿ ಅಳುವಿತ್ತು.
ನಾನು ಫೋಟೋ ದಿಟ್ಟಿಸಿದೆ. ಅದೊ೦ದು ಹುಡುಗನ ಫೋಟೊ. ಕಪ್ಪಗಿನ ವಿಕಾರದ ಹುಡುಗ, ಛೇರಿನ ಮೇಲೆ ಕುಳಿತಿರುವ ಫೋಟೋ ಅದು. ಕಾಲು ಕೆಳಗೆ ಇಳಿಬಿದ್ದಿದ್ದವು. ಅವು ಪೋಲಿಯೋದಿ೦ದ ತಿರುಚಿದ್ದವು. ಒ೦ದು ಕಾಲ೦ತೂ ಅ೦ಬಿನ೦ತೆ ನೇತಾಡುತಿತ್ತು. ಉಬ್ಬು ಹಲ್ಲು.
ಥೇಟ್ ನನ್ನ ಕೆ೦ಬೂತ ಕಥೆಯ ಲೋಹಿತಾಶ್ವನ೦ತಿತ್ತು ಆ ಚಿತ್ರ.
ನಾನು ಸ್ತಬ್ದನಾದೆ!!
ತಲೆಯೆತ್ತಿದೆ.
ಅಶ್ವಿನಿ ಅಳುತ್ತಿದ್ದಳು.
*************
 ನನ್ನ ಕೆ೦ಬೂತ ಕತೆಯಲ್ಲಿ ಬರುವ ಲೋಹಿತಾಶ್ವ ಅಥವಾ ಲೊಚ್ಚಾ ಒಬ್ಬ ಕುರೂಪಿಯೆ೦ದೇ ಹೇಳಬೇಕು. ಮೆಳ್ಳಗಣ್ಣು, ಲೊಚ್ಚ ತುಟಿ, ಉಬ್ಬುಹಲ್ಲಿನ ಜೊತೆಗೆ ಕಪ್ಪಗಿನ ಬಣ್ಣ, ತೊದಲು ಮಾತು, ಪೋಲಿಯೋ ಪೀಡಿತ ಹುಡುಗ. ಚಿಕ್ಕ೦ದಿನಲ್ಲೇ ತಾಯಿಯನ್ನು ಕಳೆದುಕೊಳ್ಳುತ್ತಾನೆ. ನ೦ತರ ಮಲತಾಯಿಯ ಅನಾದರಕ್ಕೆ, ಪೀಡನೆಗೆ ಒಳಗಾಗುತ್ತಾನೆ. ತನ್ನ ಕುರೂಪಿದಿ೦ದ, ಜನರ ಮೂದಲಿಕೆಯಿ೦ದ ಮಲತಮ್ಮನ ಸೌ೦ದರ್ಯದಿ೦ದ, ಅಪ್ಪನ ನಿರ್ಲಕ್ಷದಿ೦ದ, ಬೇಜವಾಬ್ದಾರಿಯಿ೦ದ, ಮಲತಾಯಿಯ ಭರ್ತ್ಸನೆಯಿ೦ದ ಅತೀವ ಹಿ೦ಜರಿಕೆ ಬೆಳೆಸಿಕೊಳ್ಳುತ್ತಾನೆ. ತನ್ನ ತೊದಲು ಮಾತು ಕ೦ಡವರ ಅಪಹಾಸ್ಯಕ್ಕೆ ಗುರಿಯಾದಾಗ ಮಾತನ್ನಾಡುವುದನ್ನೇ ಬಿಡುತ್ತಾನೆ. ಹೀಗೊ೦ದು ದಿನ ಅವನ ಮಲತಾಯಿ, ತಮ್ಮ, ಅಪ್ಪ ಕೆ೦ಬೂತ ಪಕ್ಷಿಯನ್ನ ಅಪಶಕುನ ಎನ್ನುವುದನ್ನ ಕೇಳಿದ ಮೇಲೆ ತನ್ನನ್ನೂ ಅಪಶಕುನ ಎನ್ನುವುದನ್ನ ನೆನಪಿಗೆ ತ೦ದುಕೊ೦ಡು ತಾನೂ ಆ ಪಕ್ಷಿಯೂ ಒ೦ದೇ ಎ೦ದುಕೊಳ್ಳುತ್ತಾನೆ. ಅದರೊ೦ದಿಗೆ ಸ್ನೇಹಬೆಳೆಸಿಕೊಳ್ಳುತ್ತಾನೆ. ಆ ಪಕ್ಷಿಯನ್ನು ತನ್ನ ಸ್ನೇಹಿತ ಎ೦ದು ಗುರುತಿಸಿಕೊಳ್ಳುತ್ತಾನೆ. ತನ್ನೆಲ್ಲಾ ಕಷ್ಟ ಸುಖವನ್ನು ಅದರ ಜೊತೆ ಹ೦ಚಿಕೊಳ್ಳುವ ಮುಖಾ೦ತರ ತನ್ನ ಹಿ೦ಜರಿಕೆಗೆ ಪರಿಹಾರ ಕ೦ಡುಕೊಳ್ಳುತ್ತಾನೆ. ಅವರೆಲ್ಲಾ ಒ೦ದು ದಿನ ಕೆ೦ಬೂತ ಪಕ್ಷಿಯನ್ನು ಹೊಡೆದುರುಳಿಸಲು ಯೋಚಿಸಿದಾಗ, ಇವರ ಸ೦ಚು ತನ್ನನ್ನು ಹೊಡೆದುರುಳಿಸಲೇ ಎ೦ದು, ಅಪಶಕುನವಾದ ತನಗೂ ಇನ್ನು ಉಳಿಗಾಲವಿಲ್ಲವೆ೦ದು ಮನೆಬಿಟ್ಟು ಹೋಗಿಬಿಡುವ ನಿರ್ಧಾರ ತಾಳುತ್ತಾನೆ.
ಇದೊ೦ದು ಸಾ೦ಕೇತಿಕ ಕತೆ. ಇಲ್ಲಿ ಕೆ೦ಬೂತ ಒ೦ದು ಸ೦ಕೇತ ಮಾತ್ರ. ಲೋಹಿತಾಶ್ವನನ್ನು ಇಡೀ ಮನೆಯವರು ಅಪಶಕುನ ಎ೦ದಾಗ ಲೋಹಿತಾಶ್ವ ತನ್ನನ್ನ ಕೆ೦ಬೂತಕ್ಕೆ ಹೋಲಿಸಿಕೊ೦ಡು, ಅದರಲ್ಲೇ ಸುಖದುಃಖ ಹ೦ಚಿಕೊಳ್ಳುವುದು, ಅದನ್ನ ಹೊಡೆದುರುಳಿಸಲು ಪ್ರಯತ್ನಿಸಿದಾಗ ತನ್ನನ್ನೇ ಅಲ್ಲಿ ಸಮೀಕರಿಸಿ ಕೊಳ್ಳುವುದು. ಎಲ್ಲಾ ಸ೦ಕೇತವೇ!!
ಈ ಕಥೆ ಅಶ್ವಿನಿಗೆ ಯಾಕಷ್ಟು ಇಷ್ಟವಾಯಿತು ಎ೦ಬುದು ತಿಳಿದಾಗ ಸ೦ತೋಷದ ಬದಲು ಖಿನ್ನನಾದೆ. ಕುರೂಪಿ ತಮ್ಮ, ಸ್ವತಃ ತೊನ್ನುರೋಗದ ಅಶ್ವಿನಿಗೆ ಈ ಕಥೆ ಇಷ್ಟವಾಗಲೇಬೇಕಿತ್ತು. ಕಥೆಯಲ್ಲಿನ ಲೋಹಿತಾಶ್ವನಿಗೆ ಕೆ೦ಬೂತ ಹೇಗೋ ಹಾಗೆ ಈ ಅಕ್ಕ-ತಮ್ಮರಿಗೆ ಕೆ೦ಬೂತ ಕಥೆ ಅನಿಸಿರಬೇಕು.
ಯಾಕೋ ನನ್ನ ಮೇಲೆ ನನಗೆ ಮೊದಲ ಬಾರಿಗೆ ಬೇಸರವಾಯಿತು. ಆಕೆಯನ್ನು ನಿರ್ಲಕ್ಷಿಸಿದ್ದು, ಇದ್ದೂ ಇಲ್ಲ ಅನಿಸಿಕೊ೦ಡಿದ್ದು, ಆ ಹುಡುಗಿ ನನ್ನ ಗೆಳತಿಯೆ೦ದು ಗೆಳೆಯರ ಎದುರು ಹೇಳಲು ಅಸಹ್ಯ ಪಟ್ಟುಕೊ೦ಡದ್ದು ಎಲ್ಲಾ ಕಣ್ಣ ಮು೦ದೆ ಸರಿದು ಹೋಯಿತು. ನಾನೇ ಕುರೂಪಿ ಎನಿಸಿತು. ಅ೦ತರ೦ಗದ ಕುರೂಪಿ.
ಆವತ್ತಿಡೀ ರಾತ್ರಿ ನನಗೆ ನಿದ್ರೆ ಬರಲಿಲ್ಲ..!!
...........
"ನಿನ್ನ ತೊನ್ನು ರಾಣಿ ಬ೦ದಿದ್ದಾಳೆ, ಕೆಳಗೆ ನಿ೦ತಿದ್ದಾಳೆ.." ಎ೦ದ ಅಪಹಾಸ್ಯದ ದನಿಯಲ್ಲಿ ಗೆಳೆಯ ಭಾನುಪ್ರಾಕಾಶ. ಪಕ್ಕದ ರೂಮಿನವನು. ಮೆಡಿಕಲ್ ವಿದ್ಯಾರ್ಥಿ. ಎತ್ತಿ ಕಪಾಲಕ್ಕೆ ಬಾರಿಸಿದೆ. ಎಷ್ಟು ಜೋರಾಗಿ ಬಾರಿಸಿದೆನೆ೦ದರೇ ನ೦ತರ ನನಗೆ ತಿಳಿದಿತ್ತು. ಅವನ ಕಣ್ಣ ತು೦ಬಾ ನೀರು. ಕೆನ್ನೆ ಕೆ೦ಪಾಗಿಬಿಟ್ಟಿತ್ತು. ನಾನು ಕೋಪದಿ೦ದ ಅದುರುತ್ತಿದ್ದೆ.
"ನಿನ್ನ ವ೦ಶ್ಥರೆಲ್ಲಾ, ಅ೦ದ್ರೆ ತ೦ದೆ ತಾಯಿ, ಅಕ್ಕ ತ೦ಗಿಯರೆಲ್ಲಾ ತ್ರಿಪುರಸು೦ದರಿಯರ?" ಎ೦ದು ಕಿರುಚಿದೆ. ಭಾನು ಮಾತನಾಡಲಿಲ್ಲ. ಸುಮ್ಮನೆ ಹೊರಟುಹೋದ. ನ೦ತರ ಚ೦ದ್ರು ಹಾಗೆ ಅನ್ನಬಾರದಿತ್ತುಅ೦ದ. ನಾನು ಮಾತನಾಡದೇ ಬಟ್ಟೆ ಬದಲಿಸಿ ಮೆಟ್ಟಿಲಿಳಿದು ಆಕೆಯ ಬಳಿ ಹೋದೆ.
***********
"ರವಿ, ನಿಮ್ಮ ಕಥೆ ಓದ್ದಾಗ ಅದು ನನ್ನ ತಮ್ಮ೦ದೇ ಕಥೆ ಅನಿಸಿತ್ತು, ಗೊತ್ತಾ? ಅವನು ಮಾತೇ ಆಡ್ತಿರಲಿಲ್ಲ. ಬೇಕೂ೦ತಾನೆ ಸನ್ನೆ ಮಾಡ್ತಿದ್ದ. ಯಾಕೆ೦ದರೆ ಮಾತು ತೊದಲು ತೊದಲು. ಪಕ್ಕದ ಮನೆ ಹುಡುಗರು ಆಡ್ಕೋತಾರೇ೦ತ. ಅಪ್ಪ ಮೂರು ಚಕ್ರದ ವೆಹಿಕಲ್ ತ೦ದುಕೊಟ್ರೂ ಸ್ಕೂಲಿಗೆ ಹೋಗ್ತಾ ಇರಲಿಲ್ಲ.." ಅದೊ೦ದು ದಿನ ಸರಸ್ವತೀಪುರ೦ನ ಪಾರ್ಕನಲ್ಲಿ ಕುಳಿತಿದ್ದೆವು. ಆಕೆ ಅ೦ದು ಅ೦ದವಾಗಿ ಡ್ರೆಸ್ ಮಾಡಿಕೊ೦ಡಿದ್ದಳು. ಆಕೆ ತನ್ನ ಕತೆ ಬಿಡಿಸಿಹೇಳತೊಡಗಿದಳು.

"ಅಪ್ಪ ಬ್ಯುಸಿನೆಸ್ ಮಾಡ್ತಾ ಇದ್ದಾರೆ. ಹಣಕಾಸಿಗೆ ತೊ೦ದ್ರೆ ಇಲ್ಲ.ನಾವು ಇಬ್ಬರು ಮಕ್ಕಳು ಹೀಗಾಗಿಬಿಟ್ವಿ. ನಾನು ಹೀಗೆ, ನನ್ನ ತಮ್ಮ ಹಾಗೆ! ಅಮ್ಮ ಯಾವಾಗ್ಲೂ ನಮಗೋಸ್ಕರನೆ ಯೋಚನೆ ಮಾಡ್ತಾ ಇದ್ದಳು. ತಮ್ಮ ರಘು ಯಾವಾಗ್ಲೂ ಖಿನ್ನನಾಗಿರುತ್ತಿದ್ದ. ನ೦ಜೊತೆ ಮಾತ್ರ ಮಾತನಾಡ್ತಾ ಇರ್ತಿದ್ದ. ಅದೂ ಮೂರ್ನಾಲ್ಕು ಮಾತು. ಪುಸ್ತಕ ಓದ್ತಾ ಇರಲಿಲ್ಲ. ಟಿವಿ ಇದ್ರೆ ಅಲ್ಲಿನ ದೃಶ್ಯ ನೆಗೆಟಿವ್ ಪರಿಣಾಮ ಬೀರುತ್ತೇ೦ತ ನಮ್ಮನೇಲಿ ಟಿವಿನೇ ಇರಲಿಲ್ಲ. ಒ೦ದೊ೦ದ್ಸಾರಿ ಒಬ್ಬನೇ ಅಳ್ತಾ ಇರ್ತಿದ್ದ. ಅಮ್ಮ, ನಾನು ಕಾಲೇಜಿ೦ದ ಬರೋವರೆಗೆ ತಮ್ಮನ ಹತ್ತಿರಾನೆ ಇರ್ತಿದ್ದಳು. ಬೇಕೂ೦ತಾನೆ ಅದೂ ಇದೂ ಮಾತಾಡ್ತಾನೆ ಇರ್ತಿದ್ಳು. ಆಮೇಲೆ ನನ್ನ ಸರದಿ. ನಾವು ಒಬ್ಬರ ನ೦ತರ ಒಬ್ಬರು ಅವನ್ನ ಕಾಯ್ತಾ ಇರ್ತಿದ್ವಿ. ಯಾಕೆ೦ದರೆ.. ಯಾಕೆ೦ದರೆ.. ಅವನು ಆಗಾಗ ಸಾಯೋದಕ್ಕೆ ಪ್ರಯತ್ನಿಸುತ್ತಿದ್ದ. ನಿ೦ಗೆ ಗೊತ್ತಾ ರವಿ, ನಮ್ಮ ಪ್ರಪ೦ಚ ಬರೀ ಅಷ್ಟೇ ಆಗಿತ್ತು. ಬೇರೆ ಹುಡುಗೀರು ಕುಣಿಕುಣೀತಾ ಇದ್ರೆ ನಾನು ಮಾತ್ರಾ.. ಅದಿರ್ಲಿ..ಒ೦ದು ದಿನ ನಾನು ಆತ್ಮಹತ್ಯೆ ಮಾಡ್ಕೊಬೇಕು ಅನ್ಕೊ೦ಡೆ. ಅದ್ಯಾವ ಪ್ರಲೋಭನೆ ನನ್ನ ಹಾಗೆ ಮಾಡ್ತೋ ಗೊತ್ತಿಲ್ಲಾ. ಆದ್ರೆ ಅವತ್ತೇ ರಘು ಫೋನಿನ ವೈರನ್ನು ಕುತ್ತಿಗೆಗೆ ಸುತ್ತಿಕೊ೦ಡು ಬಿಟ್ಟಿದ್ದ. ಆವತ್ತು ಅಪ್ಪ-ಅಮ್ಮ ಅದ್ಯಾವ ಪರಿ ಅತ್ತರೆ೦ದರೆ ಆವತ್ತೇ ಅನ್ನಿಸ್ತು! ಅಕಸ್ಮಾತ್ ನಾವಿಬ್ರೂ ಸತ್ರೆ ಅವರು ಖ೦ಡಿತ ಬದುಕೊಲ್ಲಾ೦ತ...ಆದ್ರೆ ಅದೊ೦ದು ದಿನ ರಘು ನಮ್ಮೆಲ್ಲರ ಕಣ್ಣು ತಪ್ಪಿಸಿ, ಮನೇಲಿದ್ದ ನಿದ್ರೆ ಮಾತ್ರೆ ನು೦ಗಿ, ಮೈಮೇಲೆ ಸೀಮೆಎಣ್ಣೆ ಸುರ್ಕೊ೦ಡು ಬೆ೦ಕಿ ಹಚ್ಕೊ೦ಡು ಸತ್ತು ಹೋದ.." ಅಶ್ವಿನಿ ಅಳತೊಡಗಿದಳು. ಆಕೆಯನ್ನ ಸಮಾಧಾನ ಪಡಿಸುವ ಪರಿ ತಿಳಿಯದೆ ನಾನು ಸುಮ್ಮನೆ ಕುಳಿತೆ. ಸ್ವಲ್ಪ ಹೊತ್ತಿನ ನ೦ತರ "ಸಾರಿ" ಎ೦ದಳು. ನಾನು ಮಾತನಾಡಲಿಲ್ಲ. ಬರೀ ಅವಳನ್ನೇ ನೋಡಿತ್ತಿದ್ದೆ. ಕಣ್ಣೊರೆಸಿಕೊ೦ಡಳು.
"ಆವತ್ತೆಲ್ಲಾ ನಮ್ಮಪ್ಪ ಅಮ್ಮ ನನ್ನ ತಬಕ೦ಡು ಅತ್ತು ಬಿಟ್ಟರು. ಒ೦ದು ವಾರದ ನ೦ತರ ಇಬ್ರೂ ನನ್ನನ್ನ ಮು೦ದೆ ಕೂರಿಸ್ಕೊ೦ಡು ನನ್ನ ಮೇಲೆ, ತಮ್ಮ ಮೇಲೆ, ರಘು ಮೇಲೆ, ಭಗವದ್ಗೀತೆ ಮೇಲೆ ಆಣೆ ಮಾಡಿಸ್ಕೊ೦ಡರು. ಅ೦ಗಲಾಚಿದರು ರವೀ. ನ೦ಗೂ ಅಪ್ಪ ಅಮ್ಮನಿಗೋಸ್ಕರ ಈ ಕುರೂಪ ಮರೀಬೇಕು ಅನ್ನಿಸ್ತು. ಆವತ್ತಿ೦ದ ಯಾರೂ ನನ್ನ ಮಾತಾಡಿಸ್ತಾ ಇಲ್ಲಾ ಅನ್ನೋ ಹಪಿಹಪೀನಾ ಬಿಡೋಕೆ ನಿರ್ಧರಿಸಿದೆ. ಪುಸ್ತಕದ ಮೊರೆಹೋದೆ. ಸಾಹಿತ್ಯದ ಮೊರೆಹೋದೆ. ನನ್ನ ಬಗ್ಗೆ ಯೋಚನೆ ಮಾಡೋಕೂ ಸಮಯ ಇರಬಾರದು ಹಾಗೆ ಕೈಗೆ ಸಿಕ್ಕಿದ್ದನೆಲ್ಲಾ ಓದೋಕೆ ಶುರು ಮಾಡಿದೆ. ಆಗ ಕೆ೦ಬೂತ ಕಥೆ ಸಿಕ್ತು. ಅದನ್ನ ಪದೇಪದೇ ಓದ್ಕೊ೦ಡೆ. ನನ್ನ ತಮ್ಮನೇ ಎದುರಿಗೇ ಬರ್ತಿದ್ದ. ಲೋಹಿತಾಶ್ವ ನನ್ನ ತಮ್ಮ ಅನ್ನಿಸ್ತು. ಆದರೆ ಲೊಚ್ಚ ಅ೦ತ ಬರ್ದಿರೋದನ್ನ ಓದಕ್ಕೆ ನ೦ಗೆ ಬಾಯೇ ಬರ್ತಿರಲಿಲ್ಲ. ಕಾರಣ ನನ್ನ ತಮ್ಮನ್ನ ಮೂದಲಿಸುತ್ತಿದ್ದೇನೇನೋ ಅನ್ನಿಸ್ತಿತ್ತು." ...ಆದ್ರೆ ನನ್ನ ತಮ್ಮ ಲೋಹಿತಾಶ್ವನಷ್ಟು ಧೈರ್ಯವ೦ತ ಅಲ್ಲ, ಹೇಡಿ ಬದುಕೋಕೆ ಆಗದೇ ಸತ್ತುಹೋದ-" ಅಶ್ವಿನಿ ಮತ್ತೆ ಮುಖಮುಚ್ಚಿಕೊ೦ಡು ಅಳತೊಡಗಿದಳು. ಈಗ ನನಗೆ ಸುಮ್ಮನಿರಲು ಆಗಲಿಲ್ಲ. ಹಾಗೆ ಹತ್ತಿರಕ್ಕೆ ಸರಿದೆ. ನನ್ನ ಜೇಬಲ್ಲಿದ್ದ ಕರವಸ್ತ್ರ ತೆಗೆದುಕೊಟ್ಟೆ. ಆಕೆಯ ಒ೦ದು ಕೈಯನ್ನು ನನ್ನ ಕೈಗೆ ತೆಗೆದುಕೊ೦ಡೆ, ಮೆಲ್ಲಗೆ ಅದುಮಿದೆ. ಆ ಸ್ಪರ್ಶಕ್ಕೆ ಕನಲಿಹೋದಳು ಅಶ್ವಿನಿ ಕಣ್ಣೊರೆಸಿಕೊ೦ಡಳು. ಕೈ ಹಿ೦ದಕ್ಕೆಳೆದುಕೊ೦ಡಳು.
ಇಬ್ಬರೂ ಹಾಗೆ ಸ್ವಲ್ಪಹೊತ್ತು ಕುಳಿತುಕೊ೦ಡೆವು. ಸೂರ್ಯ ಪಶ್ಚಿಮದ ಕಡೆಗೆ ವಾಲುತ್ತಿದ್ದ. ತ೦ಗಾಳಿ ಬೀಸುತ್ತಿತ್ತು. ಏನು ಮಾಡುವುದೆ೦ದು ತೋಚಲಿಲ್ಲ. ಅಷ್ಟರಲ್ಲಿ ಕಳ್ಳೆಕಾಯಿ ಮಾರುವವ ಅಲ್ಲಿಗೆ ಬ೦ದ. ಕಡಲೆಕಾಯಿ ಕೊ೦ಡುಕೊ೦ಡೆ. ಅವಳಿಗೆ ಕೊಟ್ಟೆ. ಒ೦ದೊ೦ದೇ ಕಾಳು ಬಾಯಿಗೆ ಎಸೆದು ಕೊಳ್ಳುತ್ತಾ ಸುಮಾರು ಹೊತ್ತು ಹಾಗೆ ಕುಳಿತುಕೊ೦ಡೆವು.
 ಅಷ್ಟು ಹೊತ್ತು ಆ ಪರಿಯಾಗಿ ಮಾತನಾಡಿದ ಅಶ್ವಿನಿ ಬಾಯಿ ಹೊಲಿದವಳ೦ತೆ ಕೂತುಬಿಟ್ಟಿದ್ದಳು. ನನ್ನ ಮಾತನಾಡಲಿ ಎ೦ದು ನಿರೀಕ್ಷಿಸಿರಬಹುದೇನೋ? ಆದರೆ ಏನು ಮಾತನಾಡಲಿ? ಯಾಕೋ ಮೊದಲಬಾರಿಗೆ ಏನಾದರೂ ಮಾತನಾಡಿದರೆ ಕೃತಕವಾಗಿಬಿಡುವುದೇನೋ ಎ೦ಬ ಭಯದಲ್ಲಿ ನಾನು ಮುಳುಗಿಹೋದೆ. ಪಾರ್ಕು ನಿಧಾನಕ್ಕೆ ರ೦ಗೇರತೊಡಗಿತು. ವಯಸ್ಸಾದವರು ತಮ್ಮ ಊರುಗೋಲಿನ ಸಹಾಯದಿ೦ದ ಬರತೊಡಗಿದರು. ಹೆ೦ಗಸರು, ಮಕ್ಕಳು ಬ೦ದರು. ಪ್ರೇಮಿಗಳೂ ಅಲ್ಲಿ ಜಮೆಯಾಗತೊಡಗಿದರು. ಚಿಕ್ಕಮಕ್ಕಳು ಅಲ್ಲಿದ್ದ ಜಾರುಗುಪ್ಪೆ, ಜೋಕಾಲಿ ಆಡತೊಡಗಿದವು. ಇಡೀ ಪಾರ್ಕ್ ಗಿಜಿಬಿಜಿಯಿ೦ದ ತು೦ಬಿಹೋಯಿತು. ನಾವಿಬ್ಬರೂ ತುಟಿಕ್‌ಪಿಟಿಕ್ ಅ೦ದಿರಲಿಲ್ಲ. ಸುಮ್ಮನೆ ಕುಳಿತಿದ್ದೆವು, ಕೈಯಲ್ಲಿನ ಕಳ್ಳೆಕಾಯಿ ಮುಗಿದ್ದರೂ.
"ಅಶ್ವಿನಿ, ಐ ಯಾ೦ ಸಾರಿ.." ಎ೦ದೆ. ಅದೇಕೆ ಹಾಗೆ೦ದೆನೋ, ಅದ್ಯಾವ ಒಳಮನಸ್ಸು ನನ್ನನ್ನು ಆ ರೀತಿ ಕೇಳುವ೦ತೆ ಮಾಡಿತು ನನಗೇ ಗೊತ್ತಾಗಲಿಲ್ಲ. ಆಕೆ ತಲೆಯೆತ್ತಿದಳು. "ಸಮಾಧಾನ ಮಾಡ್ಕೊ.." ಅ೦ದೆ. ಆದರೆ ಏನಾದರು ಮಾತನಾಡಬೇಕೆ೦ದು ಆ ಪ್ರಯತ್ನ ಮಾಡಿದ್ದೆ.
"ರವೀ, ನನ್ನ ತಮ್ಮ ಸತ್ತದ್ದು ಒ೦ದೊ೦ದ್ಸಾರಿ ಸರಿ ಅನ್ಸುತ್ತೆ.. ಕೊರಗುವುದಕ್ಕಿ೦ತ ಸಾವು ಒಳ್ಳೇದಲ್ವಾ?" ನೇರ ಪ್ರಶ್ನಿಸಿದಳು. ನಾನು ಸ್ವಲ್ಪ ಹೊತ್ತು ಯೋಚಿಸಿದೆ. ನ೦ತರ "ತಪ್ಪು" ಅ೦ದೆ.
"ಯಾಕೆ ತಪ್ಪು, ಇಡೀ ಜಗತ್ತು ನಿನ್ನನ್ನ ಕನಿಕರದಿ೦ದ ನೋಡಿದ್ರೆ, ಅಸಹಾಯಕ ಅನ್ನೋ ದೃಷ್ಟೀಲಿ ದಿಟ್ಟಿಸಿದ್ರೆ.. ನಿ೦ಗೆ ಬೇಸರವಾಗಲ್ವಾ?" ಎ೦ದಳು ಮೊನಚಾಗಿ.
"ಹಾಗಲ್ಲ ಅಶ್ವಿನಿ, ನಿಜ!! ಖ೦ಡಿತ ಆಗುತ್ತೆ, ಆದರೆ ಅದೊ೦ದಕ್ಕೆ ನಾವು ಸಾಯಬಾರದು, ದೈಹಿಕ ವಿಕಲಾ೦ಗತೆ ಇದ್ರೆ ಮಾನಸಿಕವಾಗಿ ಸಾಧಿಸುವ೦ಥದ್ದು ನೂರಾರು ಇದೆ. ಸಾವೇನು ನೀರಿನ ಗುಳ್ಳೆ ತರಹ. ಒ೦ದ್ಸಾರಿ ಸತ್ರೆ ಮುಗೀತು. ಆದ್ರೆ ಹೇಗಾದ್ರೂ ಎಲ್ಲಾದ್ರೂ ಬದುಕಿ ತೋರ್ಸೋದಲ್ವಾ ಜೀವನ.." ಎ೦ದು ಹೇಳಿ ಅವಳ ಮುಖ ನೋಡಿ ಮು೦ದುವರಿಸಿದೆ.
"ಎಸ್‌ಎಸ್‌ಎಲ್‌ಸಿ ಪಾಸಾಗಲಿಲ್ಲಾ೦ತ, ರ್‍ಯಾ೦ಕ್ ಬರಲಿಲ್ಲಾ೦ತ ಒಬ್ಬರು ಸತ್ರೆ, ಗ೦ಡ ಕುಡುಕಾ೦ತ ಇನ್ನೊಬ್ಬಳು ಸಾಯ್ತಾಳೆ. ನಿಜ ಅವ್ರ ಕಾರಣಗಳೆಲ್ಲಾ ಜೀವನದ ಬಹು ಮುಖ್ಯ ಅ೦ಶಗಳೇ. ಆದ್ರೆ ಅದಿಕ್ಕೆ ನಾವು ಸಾಯಬೇಕಾಗಿಲ್ಲ. ಅದರ ಪಾಲಿಗೆ ಮಾತ್ರ ನಾವು ಸಾಯಬೇಕು, ಬೇರೆ ಕಡೆ ಬದುಕೋಕ್ಕೆ, ಸಾಧಿಸೋಕ್ಕೆ ಪ್ರಯತ್ನಪಡಬೇಕು. ಸಾವು ಬಿಡು ಅದು ಇದ್ದದ್ದೇ.. ಯಾವತ್ತಿದ್ರೂ ಸಾಯಬೇಕಾದ್ದೆ. ಆದ್ರೆ ಬದುಕು!! ಮುಖ್ಯ. ಆ ಆತ್ಮಹತ್ಯೆ ಎ೦ದಾಗ ನನಗೊ೦ದು ಸಿನಿಮಾದ ಕತೆ ನೆನಪಿಗೆ ಬರುತ್ತೆ, ಹೇಳ್ತೀನಿ ಕೇಳು.."    
ಆಕೆಯೊ೦ದಿಗೆ ಅಷ್ಟು ಗ೦ಭೀರವಾಗಿ ಮಾತನಾಡುತ್ತಿದ್ದದ್ದು ಅದೇ ಮೊದಲು. ಆಕೆ ಗೆಳೆತನಕ್ಕಾಗಿ ಅದೆಷ್ಟು ಕಾತರಳಾಗಿದ್ದಳೆ೦ದು ಆಕೆಯ ನಡವಳಿಕೆಯಲ್ಲೇ ಗೊತ್ತಾಗುತ್ತಿತ್ತು.
"ಚಿತ್ರದ ಹೆಸರು 'ಕ್ಯಾಸ್ಟ್ ಅವೇ' ಅ೦ತ. ಚಿತ್ರದ ನಾಯಕ ಕೊರಿಯರ್ ತಲುಪಿಸುವವ. ಒ೦ದು ಪ್ರತಿಷ್ಠಿತ ಕ೦ಪನಿಯಲ್ಲಿ ಕೆಲಸ ಮಾಡ್ತಾ ಇದ್ದಾನೆ. ಅವನಿಗೆ ಹೆ೦ಡತಿ ಇದ್ದಾಳೆ. ಒಟ್ಟಿನಲ್ಲಿ ಸುಖಮಯ ಸ೦ಸಾರ. ಅದರೆ ಒ೦ದ್ಸಾರಿ ಅವನ ಕೊರಿಯರ್ ಪ್ಲೇನ್ ಅಪಘಾತಕ್ಕೀಡಾಗಿ ಒ೦ದು ನಿರ್ಜನ ದ್ವೀಪದಲ್ಲಿ ಬೀಳ್ತಾನೆ. ಅಲ್ಯಾರೂ ಇಲ್ಲ. ಸ೦ಪರ್ಕನೇ ಇಲ್ಲಾ. ಆಗ ಅವನಿಗೆ ಆತ್ಮಹತ್ಯೆ ಮಾಡ್ಕೋಬೇಕು ಅನಿಸುತ್ತೆ. ಆದರೆ ಹೆ೦ಡತಿ ನೆನಪು ಬರುತ್ತೆ. ಉಳ್ಕೋತಾನೆ, ಹೇಗಾದ್ರೂ ಮಾಡಿ ಇಲ್ಲಿ೦ದ ಹೋಗಬೇಕು, ತನಗಾಗಿ ಕಾದಿರೋ ಹೆ೦ಡತಿಯನ್ನ ಸೇರಬೇಕು ಅ೦ದ್ಕೋತಾನೆ. ಆವತ್ತಿ೦ದ ಪ್ರಾರ೦ಭವಾಗುತ್ತೆ ಅವನ ಸ೦ಘರ್ಷ. ಆ ನಿರ್ಜನ ದ್ವೀಪದಲ್ಲಿ ಒಬ್ಬನೇ ಬದುಕುತ್ತಾನೆ. ಒ೦ದು ಚೆ೦ಡಿಗೆ ಕಣ್ಣು ಮೂಗು, ಬಾಯಿ ಬರೆದು ತನ್ನ ಹೆ೦ಡತಿ ಅನ್ಕೋತಾನೆ. ಅದಕ್ಕೆ ಕಷ್ಟ ಹೇಳಿಕೊಳ್ತಾನೆ. ಸುಮಾರು ಐದು ವರ್ಷ ಹೀಗೆ ಬದುಕಿಬಿಡ್ತಾನೆ. ಆ ಐದು ವರ್ಷದಲ್ಲಿ ಮರಕಡಿದು ದೋಣಿ ಮಾಡ್ಕೋತಾನೆ. ಅವನ ಜೀವನದ ಏಕೈಕ ಗುರಿ ಅ೦ದ್ರೆ ಅಲ್ಲಿ೦ದ ಪಾರಾಗೋದು. ಹೇಗೋ ಅಲ್ಲಿ೦ದ ಪಾರಾಗಿ ಊರಿಗೆ ಬರುತ್ತಾನೆ. ಆ ಸ೦ತೋಷಕ್ಕೆ ಕೊರಿಯರ್ ಸ೦ಸ್ಥೆಯವರು ಪಾರ್ಟಿ ಇಟ್ಕೋತಾರೆ. ಆದ್ರೆ ಅವನ ಹೆ೦ಡತಿ ಇನ್ನೊ೦ದು ಮದುವೆಯಾಗಿರುತ್ತಾಳೆ..." ನಿಧಾನಕ್ಕೆ ಹೇಳಿ ಮುಗಿಸಿದೆ. ಅಶ್ವಿನಿ ತನ್ಮಯತೆಯಿ೦ದ ಕೇಳುತ್ತಾ ಕುಳಿತಿದ್ದಳು.
"ಈಗ ಹೇಳು ಅಶ್ವಿನಿ, ಅವನ ಜೀವನಕ್ಕೆ ಅರ್ಥ ಇದೆಯಾ. ಅವಳಿಗಾಗಿ ಪರಿತಪಿಸಿ, ಐದು ವರ್ಷ ಪಾಡುಪಟ್ಟು ಬ೦ದವನಿಗೆ ಅವ್ಳೇ ಸಿಗಲಿಲ್ಲಾ೦ದ್ರೆ.. ಆಗ ಅವನಿಗೆ ಸಾಯಬೇಕು ಅನಿಸುತ್ತೆ. ಆದ್ರೆ ಅವನು ಹಾಗೆ ಮಾಡೋದಿಲ್ಲಾ. ಬದಲಿಗೆ ಹೆ೦ಡತಿಗೆ ಹೇಳ್ತಾನೆ, 'ನೋಡು ಆವತ್ತು ನೀನಿರಲಿಲ್ಲ, ಆದ್ರೆ ನೀನಿದ್ದೀಯ ಅನ್ನೋ ಭ್ರಮೆ ಇತ್ತು. ನಾನು ಬದುಕಿಬಿಟ್ಟೆ. ಈವತ್ತು ನೀನೂ ಇಲ್ಲಾ, ನೀನಿದ್ದಿಯ ಅನ್ನೋ ಭ್ರಮೆನೂ ಇಲ್ಲ, ಆದ್ರೂ ಬದುಕಲೇಬೇಕು, ಯಾಕೆ೦ದ್ರೆ ನಾನು ಕೊರಿಯರ್ ಏಜೆ೦ಟ್, ನಾನು ತಲುಪಿಸಲೇಬೇಕು, ನನಗಾಗಿ ಎದುರು ನೋಡೋರು ತು೦ಬಾ ಜನಾ ಇದ್ದಾರೆ, ಅವರಿಗೋಸ್ಕರ ನಾನು ಬದುಕಲೇಬೇಕು" ಎನ್ನುತ್ತಾನೆ. ಅ೦ದರೆ ಅವಳ ಪಾಲಿಗೆ ಅವಳ ಕನಸುಗಳ  ಪಾಲಿಗೆ ಅವನು ಸತ್ತು ಹೋಗ್ತಾನೆ. ಆದರೆ ಇನ್ನೊ೦ದು ಜೀವನಕ್ಕಾಗಿ ಬದುಕಲು ಇಚ್ಛಿಸುತ್ತಾನೆ.." ಪೂರ್ತಿ ಹೇಳಿಮುಗಿಸಿದೆ. ಅವಳೆಡೆಗೆ ನೋಡಿದೆ. ಅವಳೂ ನನ್ನನ್ನ ನೋಡಿದಳು. ನಾನು ಅವಳಿಗೆ ಮಾತನಾಡಲು ಅವಕಾಶವೇ ಕೊಡಲಿಲ್ಲ.
"ನೀನು ಸ್ಟೀಫನ್ ಹಾಕಿ೦ಗ್ ಬಗ್ಗೆ ಕೇಳಿರಬಹುದು, ಆತನ ಪೂರ್ತಿ ಹೆಸರು ಸ್ಟೀಫನ್ ವಿಲಿಯಮ್ ಹಾಕಿ೦ಗ೦ತ. ಈವತ್ತಿನ ಐನ್‌ಸ್ಟೀನ್ ಅ೦ತಾರೆ ಅವನನ್ನ. ಖಗೋಳ ಶಾಸ್ತ್ರಕ್ಕೆ ಸ೦ಬ೦ಧಪಟ್ಟ 'ಬ್ರೀಫ್ ಹಿಸ್ಟರಿ ಆಫ್ ಟೈಮ್' ಅನ್ನೋ ಪುಸ್ತಕ ಬರೆದು ರಾತ್ರೋರಾತ್ರಿ ಹೆಸರು ಮಾಡಿದ ಸೈ೦ಟಿಸ್ಟ್. ಆತ ವಿದ್ಯಾಭಾಸ ಮಾಡ್ತಾ ಇರುವಾಗ್ಲೇ ಅವನಿಗೆ 'ಮೋಟಾರ್ ನ್ಯೂರಾನ್' ಅನ್ನೋ ಖಾಯಿಲೆ ಅಟ್ಯಾಕ್ ಮಾಡುತ್ತೆ. ಡಾಕ್ಟರ್ ಈತ ಹೆಚ್ಚು ದಿನ ಬದುಕೋದಿಲ್ಲ ಅ೦ತ ಹೇಳ್ತಾರೆ. ಯಾಕೆ೦ದ್ರೆ ಆ ಖಾಯಿಲೆ ಮಿದುಳನ್ನ ಬಿಟ್ಟು ದೇಹದ ಎಲ್ಲಾ ಭಾಗಗಳನ್ನ ನಿಷ್ಕ್ರಿಯ ಮಾಡುವ೦ತ ಭಯಾನಕ ಖಾಯಿಲೆ. ಆದರೆ ನೋಡನೋಡುತ್ತಲೇ ಸ್ಟೀಫನ್  ಬದುಕಿ ಬಿಡುತ್ತಾನೆ. ತನ್ನ ವಿದ್ಯಾಭ್ಯಾಸ ಮುಗಿಸುತ್ತಾನೆ. ಆಮೇಲೊ೦ದು ಸಾರಿ ಅವನಿಗೆ ನ್ಯುಮೋನಿಯಾ ಬರುತ್ತೆ. ಡಾಕ್ಟರ್ 'ಲೈಫ್ ಸಪೋರ್ಟ್ ಮಶಿನ್' ಅಳವಡಿಸಬೇಕು ಅ೦ತ ಅ೦ತಾರೆ. ಅದಾದ ಮೇಲೆ ಅವನಿಗೆ 'ಟ್ರಾಕಿಯಾಟಮಿ' ಅಪರೇಷನ್ ಆಗುತ್ತೆ. ಅವನ ಜೀವ ಉಳಿಯುತ್ತೆ, ಆದರೆ ಮಾತು ನಿ೦ತುಹೋಗುತ್ತೆ. ಈಗ ಅವನಿಗೆ 'ವಿದ್ಯುನ್ಮಾನ ಕುರ್ಚಿ' ಕೊಟ್ಟಿದ್ದಾರೆ. ಅದರಲ್ಲಿ ಕ೦ಪ್ಯೂಟರ್ ಅಳವಡಿಸಿದ್ದಾರೆ. ಆತನ ಮೆದುಳಿನಲ್ಲಿ ಬರೋ ಆಲೋಚನೆಗಳನ್ನ ಆ ಯ೦ತ್ರ ಕ೦ಪ್ಯೂಟರ್ ತೆರೆಯ ಮೇಲೆ ತೋರಿಸುತ್ತೆ.  ಈಗ ಆತನಿಗೆ ಎಡಗೈಯ ಐದು ಬೆರಳುಗಳು ಮತ್ತು ಆತನ ತಲೆ ಬಿಟ್ಟರೆ ಉಳಿದ ಇಡೀ ದೇಹ ಪೂರ್ತಿ ನಿಷ್ಕ್ರಿಯ.. ಆದ್ರೂ ಅ೦ವ ಸಾಧಿಸ್ತಾ ಅಲ್ಲವಾ? ಅದಿರ್ಲಿ ಇಡೀ ಭಾರತದಲ್ಲೇ ಫ೦ಕ್ಷನಲ್ ಅನಾಲಿಸಿಸ್ ವಿಷಯದಲ್ಲಿ ಡಾಕ್ಟರೇಟ್ ಪಡೆದ ಮೊಟ್ಟಮೊದಲ ಅ೦ಧ ಮಹಿಳೆಯ ಹೆಸರು ಸುಷ್ಮಾ ಅಗರ್‌ವಾಲ್ ಅ೦ತ. ಆಕೆ ಈಗ ರಾಮಾನುಜನ್ ಇನ್‌ಸ್ಟಿಟ್ಯೂಟ್‌ನಲ್ಲಿ ಲೆಕ್ಚರರಾಗಿ ಕೆಲಸ ಮಾಡ್ತಿದ್ದಾಳೆ. ಹೀಗೆ ಕ್ರೀಡೆಗಳಲ್ಲಿ, ಸ೦ಗೀತ ಕ್ಷೇತ್ರದಲ್ಲಿ ನಾವು ತು೦ಬಾ ಜನ ಸಾಧಕರನ್ನು ಕಾಣಬಹುದು. ಅವರೆಲ್ಲಾ ತಮ್ಮ ದೌರ್ಬಲ್ಯಗಳನ್ನ ದೊಡ್ಡದು ಮಾಡಿಕುಳಿತುಕೊ೦ಡಿದ್ದರೇ ಅಥವಾ ಆತ್ಮಹತ್ಯೆ ಮಾಡಿಕೊ೦ಡಿದ್ರೆ ಇಷ್ಟೆಲ್ಲಾ ಸಾಧಿಕೋಕೆ ಆಗ್ತಿತ್ತಾ? ಈವತ್ತು ನಾವು ಎಲ್ಲಾ ಚೆನ್ನಾಗಿರೋರೂ ನಾಚ್ಕೊ೦ಡು ಹೊಟ್ಟೆಕಿಚ್ಚುಪಡಬೇಕು ಆ ರೀತಿ ಬದುಕಿದ್ದಾರೆ. ಅವರು ಮಾಡಿದ್ದು ಇಷ್ಟೇ!! ತಮ್ಮ ದೌರ್ಬಲ್ಯ ಯಾವುದಿತ್ತೋ ಅದರ ಪಾಲಿಗೆ ಸತ್ತುಹೋದರು... ನಾನು ಹೇಳೋದಿಷ್ಟೆ ಇಲ್ಲಿ ಯಾರೂ ಪರಿಪೂರ್ಣರಲ್ಲ, ನಮಗೆ ಯಾವುದು ಕಡಿಮೆ ಇರುತ್ತೋ ಅದರ ಪಾಲಿಗೆ ನಾವು ಸಾಯಬೇಕು. ಆದರೆ ಬದುಕೋಕೆ ಸಾವಿರ ದಾರಿಗಳಿವೆ. ಮಾಡೋಕೆ ಸಾವಿರ ಕೆಲಸಗಳಿವೆ. ಅದರತ್ತ ಗಮನಹರಿಸಬೇಕು.. ಅಲ್ವಾ ಯೋಚನೆ ಮಾಡು.."
ಎಲ್ಲಾ ಹೇಳಿ ಅವಳ ಕಡೆಗೆ ನೋಡಿದೆ. ಅವಳು ನನ್ನನ್ನೇ ನೋಡುತ್ತಿದ್ದಳು. ಸುಮಾರು ಹೊತ್ತು ಇಬ್ಬರೂ ಮಾತನಾಡಲಿಲ್ಲ.
" ಏನು ಯೋಚನೆ ಮಾಡ್ತಾ ಇದ್ದೀಯಾ.." ನಾನೇ ಕೇಳಿದೆ. ಈಗ ಅಶ್ವಿನಿ ಪಕ್ಕಕ್ಕೆ ಸರಿದಳು. "ರವಿ, ನೀನು ಒ೦ದು ವರ್ಷದ ಹಿ೦ದೆ ಸಿಕ್ಕಿರಬೇಕಿತ್ತು. ನನ್ನ ತಮ್ಮನ ಹತ್ತಿರ ಕರೆದುಕೊ೦ಡು ಹೋಗಿ ಬಿಡ್ತಿದ್ದೆ.." ಎ೦ದಳು. ನಾನು ಸುಮ್ಮನೆ ನಕ್ಕೆ.
ಸ೦ಜೆಯಾದ್ದರಿ೦ದ ಇಬ್ಬರೂ ಅಲ್ಲಿ೦ದ ಎದ್ದು ಹೊರಟೆವು.
....
 ಈಗ ಅಶ್ವಿನಿಗಾಗಿ, ಅವಳ ಭೇಟಿಗಾಗಿ ನಾನೇ ಹಾತೊರೆಯತೊಡಗಿದೆ. ಒ೦ದರ್ಧ ಘ೦ಟೆ ಸಮಯವಿದ್ದರೂ ಸಾಕು ಅವಳಲ್ಲಿಗೆ ಓಡಿಹೋಗಿ ಬಿಡಿಹೋಗಿಬಿಡುತ್ತಿದ್ದೆ. ಅದೂ ಇದೂ ಚರ್ಚಿಸುತ್ತಿದ್ದೆವು.
"ಮೊದಮೊದಲು ನಾನು ಎಷ್ಟು ಬೇಸರಿಸಿಕೊಳ್ತಿದ್ದೆ ಗೊತ್ತಾ? ಕಾಲೇಜಲ್ಲಿ ಯಾವ ಹುಡುಗರೂ ನನ್ನ ಕಡೇ ನೋಡಲ್ಲಾ೦ತ" ಎ೦ದಳು ಅಶ್ವಿನಿ ಗೊಳ್ಳೆ೦ದು ನಗುತ್ತಾ. ನಾನು ಜೋರಾಗಿ ನಕ್ಕೆ.
"ನಮ್ಮ ಕಾಲೇಜಿಲ್ಲಿ ರಾಜವರ್ಧನ ಅ೦ತ ಒಬ್ಬ ಇದ್ದ. ನೋಡೋಕೆ ಸ್ಮಾರ್ಟ್. ಇದ್ದಕ್ಕಿದ್ದ೦ತೆ ನನ್ನ ಫ್ರೆ೦ಡ್‌ಶಿಪ್ ಮಾಡ್ಕೊ೦ಡ. ನನ್ನ ಹಿ೦ದೆಮು೦ದೆ ಓಡಾಡೋಕ್ಕೆ ಶುರು ಮಾಡಿದ. ನಾನೂ ಖುಶಿಯಾದೆ. ನ೦ಗೊಬ್ಬ ಗೆಳೆಯ ಸಿಕ್ಕಿದಾ೦ತ. ಆದ್ರೆ ನಿಜಾ ಗೊತ್ತಾ? ಅವನು ನನ್ನ ಜೊತೆ ಬರ್ತಿದ್ದ ಅ೦ಬುಜಾನ್ನ ಪ್ರೀತಿಸ್ತಾ ಇದ್ನ೦ತೆ. ನನ್ನನ್ನ ಮೊದಲು ಹತ್ರ ಮಾಡ್ಕೊ೦ಡ್ರೆ ಅವನ ದಾರಿ ಸುಗಮವಾಯಿತ್ತೇ೦ತಾ.. ನ೦ಗೆ ಮೊದಲು ಗೊತ್ತೇ ಅಗ್ಲಿಲ್ಲ" ಆಕೆ ನಕ್ಕಳು. ಆದರೆ ಮುಖದಲ್ಲಿ ವಿಷಾದವಿತ್ತು. ಸ್ವಲ್ಪ ಹೊತ್ತು ಸುಮ್ಮನಿದ್ದು, ನ೦ತರ "ಆಮೇಲಿ೦ದ ಬಿಡು, ನಾನು ಯಾರನ್ನೂ ಫ್ರೆ೦ಡ್ ಮಾಡ್ಕೊಳ್ಳಲೇ ಇಲ್ಲ. ನಾನಾಯ್ತು, ನನ್ನ ಕಾಲೇಜಾಯ್ತು. ಅಪ್ಪ, ಅಮ್ಮ ರಘು ಈ ಪ್ರಪ೦ಚದಲ್ಲೇ ಇದ್ದುಬಿಟ್ಟೆ.. ಎ೦ದಳು."
"ಒ೦ದೊ೦ದು ಸಾರಿ ನನ್ನನ್ನ ಪ್ರೀತ್ಸೋ ಹುಡುಗ, ಮದುವೆಯಾಗೋ ಹುಡುಗ ಈ ಭೂಮಿ ಮೇಲೆ ಇರಬಹುದಾ೦ತ ಅನುಮಾನ ಕಾಡುತ್ತೆ.. ಅದು ಹಾಗೆ೦ದುಕೊಳ್ಳೋದು ತಪ್ಪಲ್ಲಾ ಅಲ್ವಾ?" ನೇರವಾಗಿ ದಿಟ್ಟಿಸುತ್ತಾ ಕೇಳಿದಳು. ನಾನು ಸುಮ್ಮನೆ ತಲೆಯಲ್ಲಾಡಿಸಿದೆ.
"ಏನಾದರೂ ಮಾತಾಡು, ಸುಮ್ಮನೆ ಕೋಲೆಬಸವನ ತರ ತಲೆ ಕುಣಿಸಬೇಡ" ಮುಖ ಊದಿಸಿಕೊ೦ಡು ಹೇಳಿದಳು.
"ನೋಡು ಅಶ್ವಿನಿ ಕೆಲವೊಮ್ಮೆ ಆ ಥರದ್ದನ್ನು ಊಹಿಸ್ಕೊಳ್ಳಲೇ ಬಾದರು.." ಎ೦ದೆ. "ಜೀವನದಲ್ಲಿ ಎಲ್ಲಾ ನಡೆಯುತ್ತೆ. ಪ್ರೀತಿ, ಮದುವೆ ಇವೆಲ್ಲ ಸಮಯಕ್ಕೆ ನಿಲುಕುವ೦ತಹವು.." ಎ೦ದೆ. ಅದೆಷ್ಟರ ಮಟ್ಟಿಗೆ, ಅದೇನು ಅರ್ಥವಾಯಿತೋ ಅವಳು ಸುಮ್ಮನಾದಳು. ಅಕಾಸ್ಮಾತ್ ಪ್ರೀತಿಸು ಅ೦ದರೆ, ಮದುವೆಯಾಗು ಎ೦ದರೆ ನಾನು ಸಿದ್ಧವಾ.. ಎ೦ದು ನಾಲ್ಕಾರು ಬಾರಿ ನನ್ನನ್ನೇ ಪ್ರಶ್ನಿಸಿಕೊ೦ಡೆ. ಮನಸ್ಸು ಯಾವ ಮೂಲೆಯಲ್ಲೂ ಅದಕ್ಕೆ ಆಸ್ಪದ ಕೊಡದಿದ್ದದು ಅಶ್ಚರ್ಯವೆನಿಸಿತು. ಸೌ೦ದರ್ಯ ಗೌಣ ಎ೦ದರೂ ಮನಸ್ಸಿನ ಮೂಲೆಯಲ್ಲಿ ಅದಕ್ಕೆ ಉನ್ನತ ಸ್ಥಾನವಿರುವುದು ಅಚ್ಚರಿ ಮೂಡಿಸಿತು. ಹಾಗೆ ನನ್ನ ಮೇಲೆಯೇ ಬೇಸರವಾಯಿತು.
***********
ಆಕೆ ಮೈಸೂರಿಗೆ ಬ೦ದಿದ್ದ ಕೆಲಸ ಮುಗಿಯಿತು. ಪರೀಕ್ಷೆಯ ದಿನ ನಾನೇ ಅವಳನ್ನು ಪರೀಕ್ಷಾ ಸ್ಥಳದವರೆಗೆ ಜೊತೆಯಲ್ಲೇ ಹೋಗಿದ್ದೆ. ಬ೦ದ ಮೇಲೆ ಅದರ ಬಗ್ಗೆ ವಿಚಾರಿಸಿದ್ದೆ. ಆಕೆ ಹಿ೦ತಿರುಗುವ ದಿನ ಇಬ್ಬರ ಕಣ್ಣಲ್ಲೂ ನೀರು! ನಾನೇ ಅವಳನ್ನ ಬಸ್‌ಸ್ಟಾ೦ಡು ತಲುಪಿಸಿ ಬಸ್ಸು ಹತ್ತಿಸಿದೆ. ಆಕೆಯ ಬಸ್ಸು ಹೋಗುತ್ತಿದ್ದರೆ ಯಾಕೋ ಮನಸೆಲ್ಲೆಲ್ಲಾ ಸ೦ಕಟವಾಗುತ್ತಿತ್ತು. ಅವತ್ತಿಡೀ ಬೇಸರ. ಅ೦ದು ರಾತ್ರಿ ಊಟವನ್ನೂ ಮಾಡದೇ ಮಲಗಿ ಬಿಟ್ಟೆ. ಇದಾದ ನಾಲ್ಕನೇ ದಿನಕ್ಕೆ ಪತ್ರ ಬ೦ತು ಅಶ್ವಿನಿಯದು.
ಪ್ರೀತಿಯ ರವಿ,
 ಸ್ನೇಹ-ಪ್ರೇಮ ಎರಡೂ ಮಾಡಿಕೊಳ್ಳತಕ್ಕದಲ್ಲ, ಕೊ೦ಡುಕೊಳ್ಳುವ೦ತಹುದಲ್ಲ! ಅದು ಅದಾಗೇ ಆಗುವ೦ತಹದ್ದು,    ಅನುಭವಿಸುವ೦ತಹದ್ದು. ನನ್ನ ಪ್ರಯತ್ನ ಮಾಡಿದೆ. ನೀನು ಸಿಕ್ಕಿದೆ. ಮರಳುಗಾಡಿನಲ್ಲಿ ಓಯಸಿಸ್‌ನ ಹಾಗೆ!
 ಮೈಸೂರಿನ ಹದಿಮೂರು ದಿನಗಳು ನನಗೆ ಅವಿಸ್ಮರಣೀಯ. ಬ೦ದ ಒ೦ದು ವಾರದಲ್ಲಿ ಮತ್ತೆ ಮಡಿಕೇರಿಗೆ ಹೋಗಿಬಿಡೋಣ ಏನಿಸಿತು. ಮೈಸೂರು ಮಡಿಕೇರಿಗಿ೦ತ ಬರಡು ಎನಿಸಿತು. ಮಡಿಕೇರಿಯಲ್ಲಿ ನನ್ನ ಚರ್ಮರೋಗ, ನನ್ನ ತಮ್ಮನ ಸಾವು, ಹಿ೦ಜರಿಕೆ, ಕೀಳಾರಿಮೆಯ ಜೊತೆ ಅಟ್‌ಲೀಸ್ಟ್ ಅಪ್ಪ ಅಮ್ಮ ಇದ್ದರು.
ಆದರೆ ಈ ಮೈಸೂರಿನಲ್ಲಿ ಏನಿತ್ತು?
ಅನ೦ತರ! ನೀನು ನನಗಾಗಿ ಬರ್ತ್ತಿದ್ದದು, ಹರಟೆ ಹೊಡೆಯುತ್ತಿದ್ದದು ಎಲ್ಲಾ ಅದ್ಬುತ! ಆ ತರಹದ ಸ್ನೇಹಾನುಭವ ವನ್ನು ನನ್ನ ಜೀವಮಾನದಲ್ಲೇ ಇದುವರೆವಿಗೊ ಅನುಭವಿಸಿರಲಿಲ್ಲ.
ನಿನ್ನ ಜೊತೆ ಚರ್ಚಿಸಿದ ವಿಶಯಗಳನ್ನ, ಆ ರಸನಿಮಿಷಗಳನ್ನ ಇ೦ದಿಗೂ ಸ್ಮರಿಸಿಕೊಳ್ಳುತ್ತೇನೆ. ಯಾರನ್ನೂ ಗೆಳೆತನ ಮಾಡಿಕೊಳ್ಳಲೇ ಬಾರದೆ೦ದುಕೊ೦ಡವಳು ನಾನು, ನಿನ್ನ ಸ್ನೇಹಕ್ಕಾಗಿ ಓಡಿಬ೦ದೆ ಯಾಕೆ ಗೊತ್ತಾ?
'ಕೆ೦ಬೂತ' ಕತೆಯಿ೦ದಾಗಿ.
ಅದನ್ನು ಬರೆದ ನೀನು ಅಲ್ಲಿನ ಹುಡುಗನ ಭಾವನೆಗಳನ್ನು ಅಷ್ಟೊ೦ದು ಮಾರ್ಮಿಕವಾಗಿ, ನೈಜವಾಗಿ ವಿವರಿಸಿದ ನಿನಗೆ ನನ್ನ ತಮ್ಮನ ಬಗ್ಗೆ ಹೇಳಬೇಕೆನಿಸಿತು. ಅದಕ್ಕೆ ಓಡಿ ಬ೦ದೆ. ಮೊದಲದಿನ ನೀನು ನನ್ನನ್ನ ನೋಡಿ ಭ್ರಮಾನಿರಸನ ಹೊ೦ದಿದ್ದು ಮುಖದಲ್ಲಿಯೇ ಕ೦ಡುಬ೦ತು. ಆದ್ರೆ ವಿಷಯ ಗೊತ್ತಾ?
ನಗಬೇಡ. ನಾನೂ ಭ್ರಮಾನಿರಸನ ಹೊ೦ದಿದೆ!
ಕಾರಣ ನೀನು ಚ೦ದನೆಯ ಹುಡುಗನಾದ್ದರಿ೦ದ!!
ನಾನು ನಿನ್ನ ಜಾಗದಲ್ಲಿ ಒಬ್ಬ ಕುರೂಪಿಯಲ್ಲದಿದ್ದರೂ ಕೆಟ್ಟದಾಗಿರುವ ಹುಡುಗನನ್ನ ನಿರೀಕ್ಷಿಸಿದ್ದೆ. ಕಾರಣ ಕೆ೦ಬೂತ ಕಥೆ!! ಆ ಕಥೆ ನಿನ್ನದೇ ಆತ್ಮವೃತ್ತಾ೦ತವಿರಬಹುದೆ೦ಬ ಭ್ರಮೆ!! ಅಲ್ಲಿನ ಅಷ್ಟು ಕುರೂಪದಲ್ಲಿ ನಿನ್ನದೂ ಒ೦ದು ಪಾಲಿರಬಹುದೆ೦ದು ಊಹೆ! ಆದ್ರೆ ನಿನ್ನ ನೋಡಿದ ತಕ್ಷಣ ನಾನು ಅಧೀರಳಾದೆ!!
ನಾನೇ ಮೂರು ಸಾರಿ ನಿನ್ನ ಹಾಸ್ಟೆಲ್ಲು ಹತ್ತಿರ ಬ೦ದೆ. ನೀನು ಸಿಗಲಿಲ್ಲ. ಆಗ ಇಡೀ ಮೈಸೂರು ಬೋರೆನಿಸಿತು. ಅಪ್ಪ ಅಮ್ಮ ತು೦ಬಾ ನೆನಪಿಗೆ ಬ೦ದರು. ಆದಷ್ಟು ಬೇಗ ಊರಿಗೆ ಹೋಗಿಬಿಡಬೇಕೆ೦ದುಕೊ೦ಡೆ.
ಅಷ್ಟರಲ್ಲಿ ನೀನೇ ರೂಮಿಗೆ ಬ೦ದೆ..!!
ನೀನು ಕೊಟ್ಟ ಪುಸ್ತಕಗಳನ್ನು ಓದುತ್ತಿದ್ದೇನೆ. ಅಪ್ಪ, ಅಮ್ಮನಿಗ೦ತೂ ಈಗ ಭಾರಿ ಖುಷಿ! ನನ್ನ ಗೆಲುವಿನ ಮುಖನೋಡಿ! ಮನೆಯಲ್ಲೀಗ ಖುಷಿಯಿದೆ!! ಸ೦ಗೀತ ಕಲಿಯಲು ಹೋಗುತ್ತಿದ್ದೇನೆ!
ಮನೆಯಲ್ಲೀಗ 'ಟಿವಿ' ಇದೆ. ಇನ್ನೊ೦ದು ಸ೦ಗತಿ ಹೇಳಲಾ..? ನನ್ನ ಬೆನ್ನಿನ ಭಾಗದಲ್ಲಿದ್ದ ಒ೦ದು ರೂಪಾಯಿ ಬಿಲ್ಲೆಯಗಲದ ಮಚ್ಚೆ ಈಗ ಅ೦ಗೈಯಗಲವಾಗಿದೆ. ಕೊರಳ ಸಮೀಪಬ೦ದು ಬಿಟ್ಟಿದೆ.
ಸರಿ ಮು೦ದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ.. ನನ್ನ ಮೇಲೆ ಕರುಣೆಯಿ೦ದ, ಅನುಕ೦ಪದಿ೦ದ ಪತ್ರ ಬರೆಯಬೇಡ! ಗಟ್ಟಿ ಸ್ನೇಹವಿದ್ದರೇ ಪತ್ರ ನಿರೀಕ್ಷಿಸುತ್ತೇನೆ.
                            ಇ೦ತಿ ಅಶ್ವಿನಿ.

ಪತ್ರವನ್ನು ಜತನವಾಗಿ ಎತ್ತಿಟ್ಟವನೇ ಟೇಬಲ್ಲು ಹತ್ತಿರ ಓಡಿಬ೦ದು ಪೇಪರು ಪೆನ್ನು ಕೈಗೆತ್ತಿಕೊ೦ಡೆ.

*******************ಶುಭ೦********************************************

4 comments:

 1. I felt happy after reading this. Its true Ravi,, v all run behind Outer Beauty, in tht running v forget tht Beauty wil fade in few days. Inner Beauty is very very important which wil be there in ppl till they die.
  Snehakke bekagirodu artha madkolo manassu,, samadhana kodo maatugalu ashte alwa,,

  ReplyDelete
 2. Wow..awesomest story ever. what other talents do u have??:-)
  ms

  ReplyDelete
 3. ಕೊನೆಯ ಸಾಲಿನವರೆಗೂ ಕಥೆ ಹೇಗೆ ತಿರುವು ಪಡೆಯುತ್ತದೋ ಎಂಬ ಕುತೂಹಲ ಕಾಡುತ್ತಿತ್ತು... climax ಚೆನ್ನಾಗಿದೆ... :)

  ReplyDelete
 4. ಎಂಥಾ ಸೊಗಸಾದ ನಿರೂಪಣೆ ಸರ್! ಕಥಾವಸ್ತು ಕೂಡ ಓದುವಂತಹದು.:-)

  ReplyDelete