Monday, September 10, 2012

ಕನ್ನಡ ಚಿತ್ರಗಳ ಪುಸ್ತಕದ ಬಗ್ಗೆ...


ಕನ್ನಡದ ಮಹಾತ್ಮ ಕಬೀರ್ ಚಿತ್ರವು ಬಿಡುಗಡೆಯಾದದ್ದು 1962ರಲ್ಲಿ .ಅನುಸೂಯ ದೇವಿ ಯವರು ಸಂಗೀತ ನೀಡಿದ್ದ ಈ ಚಿತ್ರದಲ್ಲಿ 22 ಹಾಡುಗಳಿವೆ...
ಖ್ಯಾತ ಕಾದಂಬರಿಕಾರ ಚದುರಂಗ ಚಲನಚಿತ್ರವನ್ನೂ ನಿರ್ದೇಶನ ಮಾಡಿದ್ದಾರೆ. ಅದರ ಹೆಸರು ಸರ್ವ ಮಂಗಳ ..ಬಿಡುಗಡೆಯಾದ ವರ್ಷ 1968.
ಡಾ.ರಾಜ್ ಅಭಿನಯದ ಚಿತ್ರ ಬಿಡುಗಡೆ.ನಾಯಕ ಗಲ್ಲು ಶಿಕ್ಷೆ ಯನ್ನು ಅಮಾನವೀಯ ಎಂದು ಪರಿಗಣಿಸಿ ಅದು ಬೇಡ ಎಂದು ಹೋರಾಡುವ ಕಥೆ ಇರುವ ಸಿನೆಮಾ.. ಸಿನೆಮಾ ಮೊದಲು ಬಿಡುಗಡೆಯಾದಾಗ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ರಾಜಕುಮಾರ್ ತನ್ನ ತಂದೆಯ ಗಲ್ಲು ಶಿಕ್ಷೆಯ ತಡೆಯಾಜ್ಞೆಯನ್ನು ಹಿಡಿದುಕೊಂದು ಓಡೋಡಿ ಬರುವ ಹೊತ್ತಿಗೆ ಶಿಕ್ಷೆ ಆಗಿಬಿಟ್ಟಿರುತ್ತದೆ. ಅಂದರೆ ಡಾ.ರಾಜರ ತಂದೆ ನಿಧನರಾಗಿರುತ್ತಾರೆ. ಆದರೆ ಚಿತ್ರ ಬಿಡುಗಡೆಯಾದ ಮೇಲೆ ಅಭಿಮಾನಿಗಳು, ಚಿತ್ರರಸಿಕರಿಗೆ ಸಿನೆಮಾದ ಕ್ಲೈಮ್ಯಾಕ್ಸ್ ಸರಿ ಅನಿಸಲಿಲ್ಲ , ಅಷ್ಟೆಲ್ಲಾ ಕಷ್ಟ ಪಟ್ಟು ಹೋರಾಡಿ ಗೆದ್ದು ಬರುವ ನಾಯಕ ತನ್ನ ತಂದೆಯನ್ನೇ ಉಳಿಸಿಕೊಳ್ಳದೇ ವಿಫಲನಾಗುವುದು ಉತ್ತಮ ಕ್ಲೈಮ್ಯಾಕ್ಸ್ ಅನಿಸಲಿಲ್ಲ. ಹಾಗಾಗಿ ಚಿತ್ರ  ಪ್ರೇಮಿಗಳು, ಅಭಿಮಾನಿಗಳು ಕ್ಲೈಮ್ಯಾಕ್ಸ್  ಬದಲಿಸುವಂತೆ ಒತ್ತಾಯಿಸಿದಾಗ ಬೇರೆ ದಾರಿ ಕಾಣದೆ ಬದಲಾಯಿಸಿದರಂತೆ..
 ಕನ್ನಡದ ನೋಡಲೇ ಬೇಕಾದ ನೂರೊಂದು ಚಿತ್ರಗಳು ಪುಸ್ತಕ ಬರೆಯಹೊರಟಾಗ ಅದಕ್ಕಾಗಿ  ಅದ್ಯಯನ ಮಾಡಿದಾಗ ಇಂತಹ ಹಲವಾರು ವಿಶೇಷವಾದ ಘಟನೆಗಳು ತಿಳಿದವು. ಬರೀ ಸಿನಿಮಾ ನೋಡಿ ಪುಳಕಿತನಾಗುತ್ತಿದ್ದವನಿಗೆ ಅದರ ಹಿನ್ನೆಲೆ , ಆಗ ನಡೆದ ವಿಶೇಷ ಘಟನೆಗಳು ಅದೆಷ್ಟು ಖುಷಿ ಕೊಟ್ಟಿತೆಂದರೆ ಸುಮ್ನೇ ತಿಳಿದುಕೊಳ್ಳುತ್ತಾ ಹೋದೆ.ನಮ್ಮ ಆತ್ಮೀಯ ಹರಿಹರಪುರಮಂಜುನಾಥ್ ರಾಜಕುಮಾರ್ ಅಭಿನಯದ ಒಂದು ಸಿನಿಮಾ ಬಿಟ್ಟು ಉಳಿದೆಲ್ಲವನ್ನೂ ಚಿತ್ರಮಂದಿರದಲ್ಲೇ ನೋಡಿದ್ದಾರೆ. ಹಾಗಾಗಿ ಆಗ ನಡೆದ ಘಟನೆಗಳು, ಆವಾಗಿನ ಪರಿಸ್ಥಿತಿ ಮುಂತಾದವನ್ನು ಅವರ ಬಾಯಿಂದ ಕೇಳುವಾಗ ಖುಷಿಯಾಗುತ್ತದೆ. ಹಾಗೆ ಅವರ ಗೆಳೆಯರಾದ ಪ್ರಕಾಶ್ ಕೂಡ ಸಿನಿಮಾ ಪ್ರೇಮಿಯೇ. ನನ್ನ ಕಿರುಚಿತ್ರದಲ್ಲಿ ಮಗನಿಂದ ದೂರಾದ ವೃದ್ಧ ತಂದೆಯ ಪಾತ್ರದಲ್ಲಿ ಗಮನಸೆಳೆದಿದ್ದ ಪ್ರಕಾಶ್ ಅವರ ಸ್ಮರಣ ಶಕ್ತಿ ಸೂಪರ್.
ಹಾಗಾಗಿ ಅವರೊಡನೆ ಮಾತಾಡುತ್ತ ಕುಳಿತರೆ ಆ ಕಾಲಘಟ್ಟವೆ ನನ್ನ ಮುಂದೆ ತೆರೆದುಕೊಳ್ಳುತ್ತದೆ.
 ಪುಸ್ತಕದಲ್ಲಿ ನೂರೊಂದು ಸಿನೆಮಾಗಳ ಪಟ್ಟಿಮಾಡಿ ಅದನ್ನು ನೋಡಲು ಪ್ರೇಕ್ಷಕರಿಗೆ ಹೇಳಿಬಿಡೋಣ ಎಂದಷ್ಟೇ ಮೊದಲಿಗೆ ಅಂದುಕೊಂಡಿದ್ದು. ಆದರೆ ಈಗೀಗ ಆ ಸಿನೆಮಾದ ವಿಶೇಷಗಳು, ಕಿರುಪರಿಚಯ ಮುಂತಾದವುಗಳನ್ನು ಸೇರಿಸುತ್ತಿದ್ದೇನೆ. ಹಾಗಾಗಿ ಪುಸ್ತಕ ಇನ್ನೂ ಆಸಕ್ತಿದಾಯಕವಾಗಿ ಮೂಡಿಬರುತ್ತಿದೆ.
ಇಲ್ಲಿ ಇನ್ನೊಂದು ವಿಷಯ ಹೇಳಬೇಕಾದ್ದಿದೆ. ನಾನು ಪುಸ್ತಕ ಬರೆಯುತ್ತಿರುವ ವಿಷಯ ಕೇಳಿ ಹಲವಾರು ಗೆಳೆಯರು ಉತ್ತಮ ಸಲಹೆ ನೀಡಿದ್ದಾರೆ. ಪ್ರಮೋದ್, ಫಿಲಿಪ್, ಗಿರಿಬಾಲು  ಮುಂತಾದವರು. ಖ್ಯಾತ ನಿರ್ದೇಶಕರಾದ  ಬಿ.ಸುರೇಶ ಕೂಡ ಒಂದು ಅತ್ಯುತ್ತಮ ಸಲಹೆ ನೀಡಿದ್ದಾರೆ...ಒಟ್ಟಿನಲ್ಲಿ ಖುಷಿಯಾಗುತ್ತಿದೆ.


2 comments: