Thursday, May 24, 2012

ಮೂರು ಸಣ್ಣ ಕಥೆಗಳು..


ಬ್ರೇಕಿಂಗ್ ನ್ಯೂಸ್:
ಆವತ್ತು ಎಂದಿನಂತೆ ಸುದ್ಧಿವಾಹಿನಿಯ ಕೆಲಸ ಮಾಡುತ್ತಿದ್ದ ರಮಣನ ಕ್ಯಾಮೆರಾ ಕಣ್ಣಿಗೆ ರಾಜಕಾರಣಿಯೊಬ್ಬನ ಅಸಹ್ಯವೊಂದು ಸಿಕ್ಕಿತ್ತು. ತಡಮಾಡದೆ ಅಷ್ಟನ್ನೂ ಚಿತ್ರೀಕರಿಸಿದ್ದು ದೇಶದಲ್ಲೇ ದೊಡ್ಡ ಸಂಚಲನವನ್ನುಂಟುಮಾಡಿ ಆ ವ್ಯಕ್ತಿ ರಾಜಿನಾಮೆ ಕೊಡುವಂತೆ ಮಾಡಿತ್ತು. ಮೊದಲಿಂದಲೂ ಕ್ರಾಂತಿಕಾರಿ ಧೋರಣೆ ಹೊಂದಿದ್ದ ರಮಣನಿಗೆ ಆವತ್ತು ಎಲ್ಲರಿಂದಲೂ ಪ್ರಶಂಸೆಗಳ ಸುರಿಮಳೆ.ಇದೇ ರೀತಿ ಮುಂದುವರೆದರೆ ದೇಶವನ್ನು ಸುಧಾರಿಸಬಹುದು ಎಂದು ಎಲ್ಲರೂ ಹೊಗಳಿದ್ದೇ ಹೊಗಳಿದ್ದು.
ಇದೆಲ್ಲಾ ನಡೆದು ಸುಮಾರು ತಿಂಗಳುಗಳೇ ನಡೆದುಹೋಗಿವೆ.ಈಗ ರಾಜಕಾರಣಿ ಮತ್ತೆ ಅಧಿಕಾರಕ್ಕೆ ಬಂದಿದ್ದಾನೆ. ಮಾಧ್ಯಮದವರಿದ್ದಾರೆ ಎಂದರೆ ಎಲ್ಲರೂ ಎಚ್ಚರಿಕೆಯಿಂದಿರುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಜನರೂ ಅದನ್ನು ಮರೆತುಬಿಟ್ಟಿದ್ದಾರೆ.
ಈಗ ಜನರು ಮನರಂಜನೆಗಾಗಿ, ಥ್ರಿಲ್ಲಿಗಾಗಿ, ಸುದ್ಧಿವಾಹಿನಿಯವರು ಟಿಆರ್‌ಪಿಗಾಗಿ ಮತ್ತೊಂದು  ಬ್ರೇಕಿಂಗ್‌ನ್ಯೂಸ್‌ಗೆ ಕಾಯುತ್ತಿದ್ದಾರೆ.
ಆಟ:
ನೋಡ್ರೀ..ಎಷ್ಟು ಕೂಗಿದ್ರು ಊಟಕ್ಕೇ ಬರ್ತಿಲ್ಲಾ.. ಮನೆಗೆ ಬಂದ ತಕ್ಷಣ ಸುಷ್ಮಾ ಗಂಡ ರಘುಗೆ ಮಗನ ಮೇಲೆ ದೂರು ಹೇಳಿದಳು. ರಿತೇಶ್ ಏನ್ ಮಾಡ್ತಿದ್ದೀಯ..  ಎಂದು ಬೂಟು ಕಳಚುತ್ತಲೇ ರಘು ಕೂಗು ಹಾಕಿದ. ಡ್ಯಾಡಿ ಇನ್ನು ಎರಡು ಓವರ್ರಿದೆ..೧೮ ರನ್ ಬೇಕಿರೋದು.. ಎಂದವನು ತನ್ನ ಆಟದಲ್ಲಿ ಮಗ್ನನಾದ ಮಗ ರಿತೇಶ್ ಕ್ರಿಕೆಟ್, ುಟ್‌ಬಾಲ್ ವಾಲಿಬಾಲ್ ,ಶೂಟಿಂಗ್, ಸಿಕ್ಸರ್, ೋರ್, ಸೆಂಚ್ಯುರಿ ಮನೆಯಲ್ಲೇ ಕಂಪ್ಯೂಟರಿನಲ್ಲೇ ಆಡಿಬಿಡುತ್ತಾನೆ. ಆಟ ಮುಗಿಸಿ ಕನ್ನಡಕ ತೆಗೆದು ಕಣ್ಣುಜ್ಜಿಕೊಳ್ಳುತ್ತ ಕೆಳಗೆ ಬಂದ ಮಗನನ್ನು ಒಮ್ಮೆ ನೋಡಿದ ರಘು. ಶಾಲೆಯ ಬಸ್ ಮನೆ ಹತ್ತಿರಕ್ಕೆ ಬರುತ್ತದೆ, ಮನೆ ಪಾಠ ಬೇರೆ ಇದೆ, ಎನರ್ಜಿ ಡ್ರಿಂಕ್ ಕುಡಿಯುತ್ತಾನೆ..ಆದರೂ ಮಗ ಈಗಲೆ ಕನ್ನಡಕ ಹಾಕಿದ್ದಾನೆ, ಹೊಟ್ಟೆ ಡೊಳ್ಳಾಗಿದೆ.. ಸೌಲಭಗಳೇ ಇಲ್ಲದ ಊರಲ್ಲಿ ಬೆಳೆದ ರಘು ಚಿಕ್ಕವನಿದ್ದಾಗ ಶಾಲೆಯಿಂದ ಬಂದನೆಂದರೆ ಪುಸ್ತಕದ ಚೀಲ ಬೀಸಾಕಿ ಆಟವಾಡಲು ಹೋದರೆ ಬರುತ್ತಿದ್ದದ್ದು ರಾತ್ರಿಗೆ. ಇಡೀ ಮೈಯೆಲ್ಲಾ ಬೆವರುಬೆವರಾದರೂ ದೇಹ ಗಟ್ಟಿಯಾಗುತ್ತಿತ್ತು..ಸೌಲಭ್ಯ ಗಳೇ ಶಾಪವಾಯಿತಾ? ಎಂಬ ಪ್ರಶ್ನೆ ಕಾಡತೊಡಗಿತು ರಘುವಿಗೆ.
ನಾಣ್ಯ:
ದೇವಸ್ಥಾನದಲ್ಲಿ ಹುಂಡಿಗೆ ಹಾಕಲು ಹೆಂಡತಿಯಿಂದ ಚಿಲ್ಲರೆ ಕೈಗೆ ತೆಗೆದುಕೊಂಡ ಸತೀಶನಿಗೆ ಆ ಹೊಸ ನಾಣ್ಯ ನೋಡಿ ಅಚ್ಚರಿಯಾಯಿತು. ತನ್ನ ಬಾಲ್ಯದಲ್ಲಿ ಅಪ್ಪ, ಮಾವ ಕೊಡುತ್ತಿದ್ದ ಹತ್ತು ಪೈಸೆ, ಇಪ್ಪತ್ತು ಪೈಸೆಯ ನಾಣ್ಯಗಳನ್ನು ಜತನದಿಂದ ಕೂಡಿಡುತ್ತಿದ್ದದ್ದು ಅದರ ಇಸವಿಯ ಪ್ರಕಾರ ಸಂಗ್ರಹಿಸುತ್ತಿದ್ದದ್ದು , ಆವಾಗಾವಾಗ ನೋಡಿಕೊಂಡು ಪುಳಕಿತನಾಗುತ್ತಿದ್ದದ್ದು ನೆನೆಪಾಯಿತು. ನಾಣ್ಯವನ್ನೇ ತಿರುಗಿಸಿಮುರುಗಿಸಿ ನೋಡಿದ ರಾಘವ ಹೆಂಡತಿಯಿಂದ ಒಂದಷ್ಟು ನೋಟುಗಳನ್ನು ತೆಗೆದುಕೊಂಡು ತಿರುಗಿಸಿಮುರುಗಿಸಿ ನೋಡತೊಡಗಿದ. ತಿಂಗಳಿಗೆ ಲಕ್ಷದಷ್ಟೂ ಸಂಬಳ ತೆಗೆದುಕೊಂಡರೂ ಅಷ್ಟು ದುಡ್ಡನ್ನು ಕಣ್ಣಾರೆ ನೋಡಿ ಕೈಯ್ಯಾರೆ ಸ್ಪರ್ಷಿಸಿರಲಿಲ್ಲ. ಒಂದನೆಯ ತಾರೀಖು ಮೊಬೈಲಿಗೆ ಸಂಬಳದ ಹಣ ಜಮೆಯಾದ ಸಂದೇಶ ಬರುತ್ತಿತ್ತು. ಆನಂತರ ಐದನೇ ತಾರೀಖಿನ ನಂತರ ವಿದ್ಯುತ್ ಶುಲ್ಕ ಕಟ್ಟಾದದ್ದು, ಮನೆ ಸಾಲದ ಬಾಬತ್ತು, ಕಾರಿನ ಸಾಲದ ಬಾಬತ್ತು, ಮಧ್ಯಮಧ್ಯ ಇವನೋ ಹೆಂಡತಿಯೋ ಕಾರ್ಡ್ ಉಜ್ಜಿದ್ದರೆ ಅದು ಕಡಿತಗೊಂಡಿದ್ದ ಸಂದೇಶಗಳು ಬಂದು ಮೊಬೈಲಿಗೆ ಬೀಳುತ್ತಿದ್ದವು. ಸಂಬಳ ಬಂದದ್ದರಿಂದ ಹಿಡಿದು ಎಲ್ಲಾ ವ್ಯವಹಾರಗಳು ಮೊಬೈಲಿನಲ್ಲೇ ಮುಗಿದುಹೋಗುತ್ತಿದ್ದವು. ಹಣದ ಹಿಂದೆ ಬಿದ್ದು ಹಣ ಸಂಪಾದಿಸಿ ಹಣವನ್ನೇ ಸರಿಯಾಗಿ ನೋಡದ ನಾನು ಬದುಕಿನಲ್ಲಿ ಇನ್ನು ಏನೇನು ಕಳೆದುಕೊಂಡಿದ್ದೇನೋ ಎನ್ನುವ ಯೋಚನೆ ಸತೀಶನಿಗೆ ಕಾಡತೊಡಗಿತು.                                

5 comments:

 1. last story is really touching one.....

  ReplyDelete
 2. ಕೊನೆಯ ನಾಣ್ಯ ಎಂಬ ಕಥೆ ತುಂಬ ಚೆನ್ನಾಗಿದೆ.......

  ReplyDelete
 3. ಮೂರು ಕಥೆಗಳೂ ಬಹಳ ಚೆನ್ನಾಗಿವೆ....ಸೂಪರ್...

  ReplyDelete
 4. moorane kate hechchu isTa aaytu Ravindra!!
  :-)
  malathi S

  ReplyDelete