Thursday, May 24, 2012

ನೋಡಲೇ ಬೇಕಾದ ಚಿತ್ರಗಳು-7


ದಿ ಪ್ರೊಫೆಸರ್::-
ಒಂದು ಮಾಫಿಯಾದ ಬಗೆಗಿನ, ಭೂಗತಜಗತ್ತಿನ  ಬಗೆಗಿನ ಚಿತ್ರ ಹೇಗಿರಬೇಕೆಂಬುದಕ್ಕೆ ನಮ್ಮಲ್ಲಿ ಹಲವಾರು ಯಶಸ್ವಿ ಉದಾಹರಣೆಗಳನ್ನ ಕಾಣಬಹುದು. ಹಾಗೆ ಥಟ್ಟೆಂದು ಹೆಸರಿಸಬೇಕಾದರೆ ಅದು ಹಾಲಿವುಡ್ ನ ದಿ ಗಾಡ್ ಫಾದರ್. ಮೂರು ಭಾಗಗಳಾಗಿ ಬಂದು ಪ್ರಶಸ್ತಿ , ಪ್ರಶಂಸೆಗಳಿಸಿದ ಯಸಸ್ವಿ  ಚಿತ್ರ ಗಾಡ್ ಫಾದರ್, ಭೂಗತಲೋಕದ ತಣ್ಣಗಿನ ಕ್ರೂರತನಗಳು, ಒಳದ್ವಂದ್ವಗಳು, ಕೌಟುಂಬಿಕ ಕಲಹಗಳು, ದ್ವೇಷಾಸೂಯೆ, ಮತ್ಸರಗಳು, ಬರ್ಬರತೆಗಳನ್ನು ಸಾವಧಾನದಿಂದ, ಅಷ್ಟೇ ತಣ್ಣಗೆ ನಿರೂಪಿಸಿದವನು ಪ್ರಾನ್ಸಿಸ್ ಫೋರ್ಡ್ ಕಪೋಲಾ. ಚಿತ್ರದ ಓಘ ಕ್ಕೆ ಮಂದಗತಿಯ ನಿರೂಪಣೆ ಎಲ್ಲೂ ಅಡ್ಡಗಾಲು ಹಾಕುವುದಿಲ್ಲ. ಪ್ರತಿಯೊಂದು ದೃಶ್ಯವೂ ನಿಧಾನಕ್ಕೆ ನೋಡುಗನ ಮನದಾಳಕ್ಕಿಳಿಯುತ್ತಾ ಸಾಗಿದಂತೆ ಗಾಡ್ ಫಾದರ್ ಒಂದು ರೌಡಿಗಳ, ಭೂಗತನಾಯಕರ ಚಿತ್ರವೇ ಆದರೂ ಯಾವುದೂ ಒಂದು ಘನೋದ್ದೇಶದ ಹೋರಾಟದ ಕತೆ ಎನಿಸುವುದು ಈ ಕಾರಣದಿಂದಲೇ.!
ನಿರ್ದೇಶಕ ಗಿಸಿಪ್ಪೆ
ದಿ ಗಾಡ್ ಫಾದರ್, ಸತ್ಯಾ, ಕಂಪನಿ, ಒನ್ಸ್ ಅಪ್ ಆನ್ ಎ ಟೈಮ್ ಇನ್ ಅಮೇರಿಕಾ, ಮೀನ್ ಸ್ಟ್ರೀಟ್ಸ್, ಮುಂತಾದ ಚಿತ್ರಗಳು ಭೂಗತಲೋಕದ ಕಥೆಯನ್ನಾಧರಿಸಿ ತೆರೆಯಲಂಕರಿಸಿ ಯಶಸ್ವಿಗೊಂಡಿವೆ. ಹಾಗೆ ಈ ಭೂಗತಲೋಕದ ಚಿತ್ರಕಲ್ಲಿ ವಿಶೇಷವೆನಿಸಿದ ಚಿತ್ರ ಕೆಮರಿಸ್ಟಾ ಅಥವ ದಿ ಪ್ರೊಫೆಸರ್ !. 1986 ರಲ್ಲಿ ತೆರೆಗೆ ಬಂದ ಈ ಇಟಾಲಿಯನ್ ಚಿತ್ರದ ನಿರ್ದೇಶಕ ಗಿಸೆಪೆ  ಟಾರ್ನ್ ಟರ್. ಗಿಸೆಪೆ ಮರಾಜೋ ನ ಕಾದಂಬರಿ ಆಧರಿಸಿದ ಈ ಚಿತ್ರ ಗಿಸಿಪೆಯೆ ಮೊದಲ ಚಿತ್ರ.
ಪ್ರೊಫೆಸರ್ ಮೊದಲೇ ಹೇಳಿದಂತೆ ಭೂಗತಜಗತ್ತಿನ ಕಥೆಯಾಧಾರಿತ ಚಲನಚಿತ್ರ. ಯಾವುದೇ ಸ್ಟಾರ್ ಗಳಿಲ್ಲದಿರುವುದು ಈ ಚಿತ್ರದ ವಿಶೇಷ.ಹಾಗೇ ಚಿತ್ರದ ಕಥೆ ಹೂರಣ ದಟ್ಟವಾದದ್ದು. ತಂಗಿಯನ್ನು ರೇಗಿಸಿದರೆಂದು ಕೊಲೆ ಮಾಡಿಬಿಡುವ ಚಿತ್ರದ ಮುಖ್ಯಪಾತ್ರಧಾರಿ, ಅದರ ನಿಮಿತ್ತ ಜೈಲು ಪಾಲಾಗುತ್ತಾನೆ. 10 ವರ್ಷಗಳ ಜೈಲುವಾಸ ಯಾವುದೇ ಏರುಪೇರಿಲ್ಲದೆ ನೆಡೆದು ಹೋಗುತ್ತದೆ. ಜೈಲಿನಲ್ಲಿ ಇವನ ಮಾತು-ಕತೆ ಕೇಳಿದವರು ಅವನನ್ನು ಪ್ರೊಫೆಸರ್ ಎಂದೇ ಗೌರವದಿಂದ ಕರೆಯುತ್ತಿರುತ್ತಾರೆ. ಅವನಿಗೇನೊ ಹೊರಬಂದು ಭೂಗತಜಗತ್ತಿನ ಒಡೆಯನಾಗಬೇಕೆನ್ನುವ ಯಾವುದೇ ಆಮಿಷವಿರುವುದಿಲ್ಲ. ಆದರೆ ಬಿಡುಗಡೆಯಾದ ಮೇಲೆ ಹೊರಪ್ರಪಂಚಕ್ಕೆ ಕಾಲಿರಿಸಿದ ಮೇಲೆ ಮಾಡುವುದಾದರೂ ಏನು ? ಕೆಲಸ- ಉದ್ಯೋಗ-ವಿಧ್ಯಾಭ್ಯಾಸ.. ಉಹೂಂ ! ಯಾಕೆಂದರೆ ಜೈಲಿನಲ್ಲಿ ಕಳೆದ ಸಮಯ ಅಮೂಲ್ಯವಾದ ವಯಸನ್ನೇ ತಿಂದು ಹಾಕಿಬಿಟ್ಟಿರುತ್ತದೆ. ಆಗ ಯೋಚಿಸುತ್ತಾನೆ.... ಕೆಲವೊಂದು ಪ್ಲಾನ್ ಹಾಕುತ್ತಾನೆ.....
ಅದು ಪ್ರೊಫೆಸರ್ ಚಿತ್ರದ ಹೂರಣ! 1961ರಿಂದ 1986 ರವರೆಗೆ ಇಟಲಿಯಲ್ಲಿ ನಡೆದ ನೈಜ ಸಂಗತಿಗಳನ್ನು ಚಿತ್ರದುದ್ದಕ್ಕೂ ಸಾಂದರ್ಭಿಕವಾಗಿ,ಬಹುಚೆನ್ನಾಗಿ ಉಪಯೋಗಿಸಿಕೊಂಡಿದ್ದಾನೆ. ನಿರ್ದೇಶಕ. ಅಷ್ಟೇ ಅಲ್ಲ.ಮೊದಲನೇ ಚಿತ್ರಕ್ಕೆ ಬಹು ಆಸಕ್ತಿಕರ ಕಥೆ ಆರಿಸಿಕೊಂಡಿರುವ ಗಿಸೆಪೆ ನಿರೂಪಣೆಯನ್ನು ಮಾತ್ರ ಅನುಭವಿ ನಿರ್ದೇಶಕನಂತೆ ನೀಟಾಗಿ, ತಣ್ಣಗೆ ಮಂದಗತಿಯಲ್ಲಿ ಮತ್ತು ಆಸಕ್ತಿಕರವಾಗಿ ಜನರ ಮುಂದಿಡುತ್ತಾ ಹೋಗುತ್ತಾನೆ. ಹಾಗೆ ಚಿತ್ರದ ಕೆಲವೆಡೆ ವಿಷುವಲ್ ಮೆಟಾಫರ್ ಗಳನ್ನು ಬಹುಚೆನ್ನಾಗಿ ಬಳಸಿಕೊಂಡು ಅಗಾಧವಾದ ಕಥೆಯನ್ನು ಮೊಟಕುಗಳಿಸಿದರೂ ಭಾವಕ್ಕೆಲ್ಲೂ ಚ್ಯುತಿ ಬರದಂತೆ ಬುದ್ಧಿವಂತಿಕೆ ಉಪಯೋಗಿಸಿದ್ದಾನೆ.
ಒಟ್ಟಿನಲ್ಲಿ ಸಿನಿಪ್ರಿಯರಾಗಲಿ, ಸಿನಿಮಾ ಕರ್ಮಿಗಳಾಗಲಿ ಒಂದಷ್ಟು ಆಸಕ್ತಿಕರ ವಿಶೇಷವಾದ ಚಲನಚಿತ್ರಗಳನ್ನು ನೋಡಬೇಕೆಂದುಕೊಂಡ ಪಕ್ಷದಲ್ಲಿ ಗಿಸೆಪೆಯಾ ಪ್ರೊಫೆಸರ್ ಸಿನೆಮಾ ಪ್ಯಾರಡಿಸೋ ಮತ್ತು ದಿ ಲೆಜೆ೦ಡ ಆಫ್ 1900 ಚಿತ್ರಗಳನ್ನ ಮೊದಲು ಪಟ್ಟಿಯಲ್ಲಿರಿಸಿಕೊಂಡರೆ ಒಳ್ಳೆಯದು. ಈ ಚಿತ್ರಗಳು ಸಿನಿಮಾ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಾಗ್ರಿಯ ಜೊತೆ ಮನರಂಜನೆ ಮತ್ತು ಸಿನಿಮಾ ವ್ಯಾಕರಣವನ್ನು ಯಶಸ್ವಿಯಾಗಿ ಹೇಳಿಕೊಡುತ್ತವೆಂದರೆ ತಪ್ಪಾಗಲಾರದು. 

No comments:

Post a Comment