Tuesday, May 22, 2012

ಓದಿದ್ದು-1

ಸಿನಿಮಾದ ಕೆಲಸಗಳಿಂದಾಗಿ ಕೆಲವು ದಿನ ಪುಸ್ತಕಗಳನ್ನು ಓದುವುದೇ ಸಾಧ್ಯವಾಗಿರಲಿಲ್ಲ..ಬರೇ ಪುಸ್ತಕಗಳನ್ನು ಓದಬೇಕೆಂದು ಸಂಗ್ರಹಿಸಿ ಇಟ್ಟುಕೊಳ್ಳುವುದೇ ಆಗಿತ್ತು. ಆದರೆ ಕಳೆ ತಿಂಗಳು ಸುಳ್ಯದಲ್ಲಿರುವ ನಮ್ಮ ಮಾವನಮನೆಯಲ್ಲಿ ನಾಲ್ಕೈದು ದಿನ ಇರುವ ಸೌಭಾಗ್ಯ ಒದಗಿಬಂದದ್ದೇ ಮತ್ತೆ  ಓದಿಗೆ ತೆರೆದುಕೊಳ್ಳಲು ಸಾಧ್ಯವಾಯಿತು. ಸುಳ್ಯದ ಹತ್ತಿರವಿರುವ ನಮ್ಮ ಮಾವನ ಮನೆ ತೋಟದ ನಡುವಿದೆ. ಅಲ್ಲಿ ಯಾವ ಮೊಬೈಲ್ ಕಂಪನಿಯ ನೆಟ್‌ವರ್ಕ್ ಸಿಗುವುದೇ ಇಲ್ಲ.ಹಾಗಾಗಿ ಮೊಬೈಲ್ ರಗಳೆ ಇರುವುದಿಲ್ಲ.ಆಗ ಓದಲು ಪ್ರಾರಂಭಿಸಿದವನು ಬೆಂಗಳೂರಿಗೆ ಬಂದಾಗಲೂ ಓದನ್ನು ಮುಂದುವರೆಸಿದೆ. ಈ ಒಂದು ತಿಂಗಳಲ್ಲಿ  ವಿಲಿಯಮ್ ಡಾಲ್ರಿಂಪಲ್ ರವರ ನೈನ್ ಲಿವ್ಸ್, ಪ್ಯಾಪಿಲಾನ್‌ನ ಮುಂದುವರೆದ ಭಾಗವಾದ ಬ್ಯಾಂಕೋ, ನಾಗರಾಜ ವಸ್ತಾರೆಯವರ ನಿರವಯವ ಗಳನ್ನು ಓದಿ ಮುಗಿಸಿದೆ.
ಪ್ಯಾಪಿಲಾನ್ ಓದಿ ಸುಮಾರು ವರ್ಷಗಳೇ ಕಳೆದಿದ್ದರೂ ಬ್ಯಾಂಕೋ ಓದಲು ಆಗಿರಲಿಲ್ಲ. ಆದರೆ ಓದಲೇ ಬೇಕೆಂಬ ಉತ್ಕಟಾಸೆಯಂತೂ ಇದ್ದೇ ಇತ್ತು.ಹದಿನಾಲ್ಕು ವರ್ಷ ಬರೀ ಸ್ವಾತಂತ್ರ್ಯಕ್ಕಾಗಿ ತಪಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ, ಕ್ರೂರಾತಿಕ್ರೂರವಾದ ಶಿಕ್ಷೆಗಳನ್ನು ಅನುಭವಿಸಿ ಕಣ್ಣೆದುರು ಹಲವಾರು ಸಾವು ನೋವು, ಚಿತ್ರಹಿಂಸೆಯನ್ನು ಕಂಡ ಪ್ಯಾಪಿಲಾನನಿಗೆ ಕೊನೆಗೊಂದು ದಿನ ಬಿಡುಗಡೆಯಾಗುತ್ತದೆ. ಮುಂದೇನು?
ಈ ಹದಿನಾಲ್ಕು ವರ್ಷದಲ್ಲಿ ಬರೀ ತಪ್ಪಿಸಿಕೊಳ್ಳುವ ಪ್ರಯತ್ನ ಹೊರತುಪಡಿಸಿ ಬೇರೇನನ್ನೂ ಮಾಡಿರದ ಪ್ಯಾಪಿಲಾನನಿಗೆ ಮುಂದಿನ ಗುರಿ ಯಾವುದು?
ಇರುತ್ತದೆ.
ಅದು ದ್ವೇಷ. ನಿರಪರಾಧಿಯಾದ ತನ್ನನ್ನು ತನ್ನ ಕುಟುಂಬದಿಂದ ಬೇರ್ಪಡಿಸಿ ಇಷ್ಟಕ್ಕೆಲ್ಲಾ ಕಾರಣರಾದ ಆ ಮೂವರು ಅವರನ್ನು ಮಾತ್ರ ಸುಮ್ಮನೇ ಬಿಡಬಾರದು..ಮತ್ತೆ ತನ್ನೂರಿಗೆ ಹೋಗಬೇಕು, ಒಬ್ಬೊಬ್ಬರನ್ನೂ ಚಿತ್ರಹಿಂಸೆ ಕೊಟ್ಟು ಸಾಯಿಸಬೇಕು..ಅದೇ ಅವನ ಗುರಿಯಾಗುತ್ತದೆ. ಅದಕ್ಕಾಗಿ ಪ್ಯಾಪಿಲಾನ್ ಮತ್ತೆ ತನ್ನ ಪಯಣ ಆರಂಭಿಸುತ್ತಾನೆ.ಅದಕ್ಕಾಗಿ ಮತ್ತಷ್ಟು ಘನಘೋರವಾದ ತೊಂದರೆಗಳಲ್ಲಿ ಸಿಕ್ಕಿಕೊಳ್ಳುತ್ತಾನೆ..ಕೊನೆಗೆ ತನ್ನ ಸೇಡು ತೀರಿಸಿಕೊಳ್ಳುತ್ತಾನಾ..?
ಇಲ್ಲ.
ಲೇಖಕ ವಿಲಿಯಂ ಡಾಲ್ ರಿ೦ಪಲ್
ಸ್ನೇಹ -ಪ್ರೀತಿ-ಬದುಕಿನ ಮುಂದೆ ದ್ವೇಷ ದೊಡ್ಡದ್ದಲ್ಲ ಎನ್ನುವುದು ಅರಿವಾಗುತ್ತದೆ. ಹಾಗಂತ ಸಾಕ್ಷಾತ್ಕಾರವಾಗುವ ಸಂದರ್ಭವಿದೆಯಲ್ಲ ಅದನ್ನು ನೀವು ಓದಿಯೇ ಸವಿಯಬೇಕು..
**** ದಯವಿಟ್ಟು ಓದಿ.
ಬ್ಯಾ೦ಕೊ ಲೇಖಕ ಹೆನ್ರಿ ಚಾರಿಯೇರ್
ಇನ್ನು ವಿಲಿಯಮ್ ಡಾಲ್ರಿಂಪ್ಲ್ ನ ಪ್ರವಾಸ ಕಥನಗಳಲ್ಲಿ ನೈನ್ ಲಿವ್ಸ್ ತುಂಬಾ ಒಳ್ಳೆಯ ಕೃತಿ ಎನ್ನಬಹುದು. ಇಲ್ಲಿ ಬರುವ ಒಂಬತ್ತು ಜನರ ವೈವಿಧ್ಯಮಯವಾದ ಬದುಕಿನ ಚಿತ್ರಗಳು ಇಡೀ ಭಾರತದ ಜೀವನ ವೈಖರಿಯನ್ನು ಒಂದು ಮಟ್ಟಗಿನ ಇತಿಹಾಸವನ್ನು, ಸಂಸ್ಕೃತಿಯನ್ನು ತೆರೆದಿಡುವ ಪ್ರಯತ್ನ ಮಾಡುತ್ತದೆ. ತುಂಬಾ ಸರಳವಾಗಿ ತನಗೆ ಕಂಡದ್ದನ್ನು ಕಂಡ ಹಾಗೆ ಬರೆದುಕೊಂಡು ಹೋಗುವ ವಿಲಿಯಮ್ ಅದರ ಜೊತೆಗೆ ತಾನೂ ಭಾರತದ ಬಗ್ಗೆ ಮಾಡಿದ ಅಧ್ಯಯನವನ್ನೂ ಬಿಡಿಸುವುದರಿಂದ ಓದಲು ಪ್ರಾರಂಭಿಸಿದಾಗ ಇದೆಲ್ಲಾ ನಮಗೆ ಗೊತ್ತಿರುವುದೇ ಅಲ್ಲವೇ ಎನ್ನಿಸುತ್ತಾದರೂ ಇಡೀ ಪುಸ್ತಕ ಮುಗಿದ ಮೇಲೆ ನಮಗೆ ಗೊತ್ತಿಲ್ಲದ ಎಷ್ಟೋ ವಿಷಯಗಳು ನಮ್ಮರಿವಿಗೆ ಬಂದಿರುವುದು ಗೊತ್ತಾಗುತ್ತದೆ. ವಿಲಿಯಮ್ ಇಲ್ಲಿ ತಾನು ಕಂಡದ್ದನ್ನೇ ಯಥಾವತ್ತಾಗಿ ಭಟ್ಟಿ ಇಳಿಸುವುದಿಲ್ಲ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವಂತೆ ತಾನು ಕಂಡದ್ದನು ಮೊದಲಿಗೆ ಬರೆದು, ಆನಂತರ ಅದರ ಹಿನ್ನೆಲೆಯನ್ನು ಕೆದಕುತ್ತಾ ಸಾಗುತ್ತಾನೆ. ಮೊದಲಿಗೆ ಆ ಸಂಗತಿ, ಘಟನೆಯಲ್ಲಿರುವ ಜನರಿಂದ ಅದರ ಹಿನ್ನೆಲೆ ತಿಳಿಯುವ ವಿಲಿಯಮ್ ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಮತ್ತೆ ಆ ವಿಷಯಕ್ಕೆ ಸಂಬಂಧಪಟ್ಟಂತೆ ಮಾಹಿತಿ ಕಲೆಹಾಕುತ್ತಾನೆ, ಪುಸ್ತಕಗಳನ್ನು ಓದುತ್ತಾನೆ. ಈ ಎಲ್ಲಾ ಅಧ್ಯಯನದ ಮೂಲಕ ಆ ಕಥನವನ್ನು ಮುಂದುವರೆಸಿ ಒಂದು ಪರಿಪೂರ್ಣ ಚಿತ್ರ ಕಟ್ಟಿಕೊಡುತ್ತಾನೆ.
ಇನ್ನು ನಾಗರಾಜ ವಸ್ತಾರೆಯ ಕಥೆಯೊಳಗಿನ ಪ್ರಪಂಚವೇ ಬೇರೆ. ಓದುತ್ತಿದ್ದಂತೆಯೇ ಪಾತ್ರಗಳ ಹೆಸರೇ ನಮಗೆ ವಿಭಿನ್ನವೆನಿಸಲು ಪ್ರಾರಂಭಿಸುತ್ತದೆ. ಆನಂತರ ಅವರ ಭಾಷೆಯ ಶೈಲಿಗೆ ನೀವು ಮಾರುಹೋಗದಿದ್ದರೆ ಕೇಳಿ.
ಈಗ ಸಧ್ಯಕ್ಕೆ ನನ್ನ ಮುಂದೆ ರವಿಬೆಳೆಗೆರೆಯವರ ಹಿಮಾಗ್ನಿ,  ಪ್ರಶಾಂತ ಅಡೂರಕುಟ್ಟವಲಕ್ಕಿ, ಬಸವಣ್ಣೆಪ್ಪ ಕಂಬಾರಅಟಿಕೆ, ianMcEvan enduring love  ಪುಸ್ತಕಗಳಿವೆ. ಈ ತಿಂಗಳಲ್ಲಿ ಇಷ್ಟನ್ನೂ ಓದಲೇ ಬೇಕೆಂಬ ಹಠವಿದೆ.
ಅ೦ದಹಾಗೆ  ಈ ಎ೦ಡ್ಯುರಿ೦ಗ್ ಲವ್, ಡೆನಿಯಲ್ ಕ್ರೆಗ್ ಅಭಿನಯದಲ್ಲಿ ಸಿನಿಮಾ ರೂಪವನ್ನೂ ತಾಳಿದೆ.


4 comments:

  1. ಸರ್, ಬೇರೆಯವರ ಬ್ಲಾಗಿನ ಮೂಲಕ ನಿಮ್ಮ ಬ್ಲಾಗಿಗೆ ಬಂದೆ. ನಿಮ್ಮ ಪುಸ್ತಕ ಓದುವ ಕ್ರೇಜ್ ನೋಡಿ ತುಂಬಾ ಖುಷಿಯಾಯ್ತು. ಪ್ಯಾಪಿಲಾನ್ ಓದಿದ್ದೆ. ನೀವು ಬರೆದ ಮೇಲೆ ಬ್ಯಾಂಕೋ ಓದಬೇಕಿನಿಸಿದೆ....ಬಿಡುವಾದಾಗ ನನ್ನ ಬ್ಲಾಗಿಗೂ ಬನ್ನಿ..

    ReplyDelete
  2. ತು೦ಬಾ ತು೦ಬಾ ಥ್ಯಾಂಕ್ಸ್...ನಿಮ್ಮ ಬ್ಲಾಗ್ ಓದ್ತೀನಿ..ನೀವು ಪ್ಯಾಪಿಲಾನ್ ಒದಿದ್ದೇರ೦ದ್ರೆ ಬ್ಯಾ೦ಕೊ ಓದಲೇಬೇಕು.ತು೦ಬಾ ಚೆನ್ನಾಗಿದೆ...ಒದಿ ಹೇಳಿ..ಅಮೆಲೊ೦ದಿಷ್ಟು ಚರ್ಚೆ/ಮಾತಾಡೋಣ..ಹಾಗೆಯೇ ನೀವು ಓದಿದ ಪುಸ್ತಕಗಳ ಬಗ್ಗೆ ತಿಳಿಸಿ...

    ReplyDelete
  3. ನಮಸ್ಕಾರ ಸರ್, ನಿಮ್ಮ ಎಲ್ಲಾ ಬರಹಗಳನ್ನು ತಪ್ಪದೆ ಓದುತ್ತೇನೆ.... ನಿಮ್ಮಿಂದ ಹಲವಾರು ವಿಷಯಗಳು ತಿಳುಕೊಂಡೆ...
    ಹಾಗೂ ಹೊಸ ಹೊಸ ಶೈಲಿಯ ಸಿನಿಮಗಳನ್ನೂ ನೋಡಿದೆ......ತುಂಬಾ ಧನ್ಯವಾದಗಳು......ನೀವು ಫೇಸ್ ನಲ್ಲಿ ಇದ್ದೀರಾ ಸರ್..

    ReplyDelete
  4. ಧನ್ಯವಾದಗಳು....
    ನನ್ನ ಫೇಸ್ ಬುಕ್ :http://www.facebook.com/marchtwentythree.movie

    ಬನ್ನಿ ಸಿಗುವಾ.. ಮಾತಾಡುವ...

    ReplyDelete