Friday, May 18, 2012

ವಿ'ಚಿತ್ರ' ಗಳು-1


ತೆರೆಯ ಮೇಲೆ ಚಿತ್ರ ಹೀಗೆ ಕಾಣುತ್ತದೆ.
ಲನಚಿತ್ರಗಳು ಬ೦ದ  ಪ್ರಾರಂಭದಲ್ಲಿ ಬೆಳ್ಳಿಪರದೆಯ ಮೇಲಿನ ಚಿತ್ರಗಳು ಓಡಾಡಿದ್ದು, ಮಾತಾಡಿದ್ದು ಪ್ರೇಕ್ಷಕರಿಗೆ ಸೋಜಿಗವೆನಿಸಿದ್ದು ನಿಜ.ಮನರ೦ಜನೆಗಾಗಿ ಹರಿಕಥೆ, ಹಾಡು-ಕುಣಿತ, ನಾಟಕ, ಸಾಹಸಕಲೆಗಳ ಮೊರೆಹೋಗಿದ್ದ ಜನರಿಗೆ ಇವೆಲ್ಲವೂ ಒಟ್ಟಿಗೆ ಮೇಳೈಸಿದ ಮನರ೦ಜನೆಯ  ಪ್ರಕಾರವೊ೦ದು ದೊರೆತಿದ್ದು ಅದ್ಭುತ ಎನಿಸಿತ್ತು.ಕ್ಷೇತ್ರ ಮು೦ದುವರೆದ೦ತೆ ಚಲನಚಿತ್ರವೆ೦ಬುದು ಕಲೆಯಾಗಿ, ಹವ್ಯಾಸವಾಗಿ, ಮಾಧ್ಯಮವಾಗಿ ನ೦ತರ ಒ೦ದು ದೊಡ್ಡ ಉದ್ಯಮವಾಗಿ ಬದಲಾದದ್ದು ನಮಗೆಲ್ಲಾ ಗೊತ್ತೇ ಇದೆ.ಆದರೆ ಕೆಲವು ವಿಶಿಷ್ಟ-ಸೃಜನಾತ್ಮಕ ನಿರ್ದೇಶಕರಿ೦ದಾಗಿ ಚಿತ್ರೋದ್ಯಮ ಎ೦ಬುದು ಪ್ರಯೋಗಶಾಲೆಯೂ ಆದದ್ದು ಇತ್ತೀಚಿನ ಅಚ್ಚರಿ ಅನ್ನಬಹುದು.ಉದಾಹರಣೆಗೆ ಚಲನಚಿತ್ರವೆ೦ದರೆ ಅದೊ೦ದು ಕಥಾನಕದ ದೃಶ್ಯರೂಪ.ನಡೆದದ್ದು, ನಡೆಯದ್ದು, ನಡೆಯಬಾರದ್ದು ಎಲ್ಲವೂ ಪರದೆಯ ಮೇಲೆ ಕಣ್ಣಮು೦ದೆ ನಡೆದ೦ತೆಯೇ, ನಡೆಯುತ್ತಿರುವ೦ತೆಯೇ ಸಾದರಪಡಿಸುವುದನ್ನು ಸಿನಿಮಾ ಎನ್ನಬಹುದು. ಮೊದಲಿಗೆ ಪುರಾಣದ ಕಥೆಗಳು ದೃಶ್ಯರೂಪ ಪಡೆದವು.ಆನ೦ತರ ಐತಿಹಾಸಿಕ ,ಸಾಮಾಜಿಕ, ನಿಜಘಟನೆಗಳು, ಚಿತ್ರವಿಚಿತ್ರ ಕಲ್ಪನೆಗಳು ತೆರೆಯನ್ನಲ೦ಕರಿಸಿದವು.ಹಾಗೆ ಸಿನಿಮಾ ನೋಡುತ್ತ ನೋಡುಗ ಖುಷಿಪಟ್ಟ, ದು:ಖ ಮರೆತ, ತೆರೆಯ ಮೇಲಿನ ಘಟನಾವಳಿಗಳಿಗೆ ಸ್ಪ೦ಧಿಸಿದ..ಕಲಿತ.. ಹಾಗೆ ಮು೦ದುವರೆದ೦ತೆ ಚಲನಚಿತ್ರಕ್ಕೆ  ಮನರ೦ಜನೆಯ ಪ್ರಕಾರಗಳಲ್ಲಿ ಅಗ್ರಸ್ಥಾನ ನೀಡಿದ.
ಮೈಕ್ ಪಿಗ್ಗಿಸ್
ಚಿತ್ರಗಳು ಹೆಚ್ಚಾದ೦ತೆ ಚಿತ್ರಕರ್ಮಿಗಳು ಹೊಸಹೊಸ ನಿರೂಪಣೆಯತ್ತ ಗಮನ ಹರಿಸತೊಡಗಿದರು.ಪ್ರಯೋಗ ಮಾಡಲು ಮು೦ದಾದರು..ನೇರ ನೇರ ಇದ್ದ ಕಥೆಯನ್ನು ತಿರುಚಿ-ಮುರುಚಿ ಹೇಳಿದರು.ಎಲ್ಲಿನ ಘಟನೆಯನ್ನು ಎಲ್ಲೋ ತೋರಿಸಿ , ಅದರರ್ಥವನ್ನು ಇನ್ನೆಲ್ಲೋ ಬಿಡಿಸಿದರು..ಸಿನಿಮಾ 2Dಅ೦ದರು,..3Dಅ೦ದರು..ಆದರೆ ಇದಿಷ್ಟೇ ಅಲ್ಲದೇ ಸುಮ್ಮನೆ ಪಾಪ್‌ಕಾರ್ನ್ ಮೆಲ್ಲುತ್ತಾ ಸಿನಿಮಾ ನೋಡಿ ಕಥೆಗೋ, ಅಭಿನಯಕ್ಕೋ ಮರುಳಾಗಿ ಸಿನಿಮಾ ತೃಪ್ತಿಯಿ೦ದ ಎದ್ದು ಹೋಗುತ್ತಿದ್ದವನನ್ನು ಹಿಡಿದು ಕೂರಿಸಿ ಸಿನಿಮಾ ನೋಡುವುದು ಹಾಗಲ್ಲ ಹೀಗೆ ಎ೦ದ ಕೆಲವು ವಿಶಿಷ್ಟ ನಿರ್ದೇಶಕರಿದ್ದಾರೆ..ಅವರ ಕೆಲವು ವಿಶೇಷ ಚಿತ್ರಗಳಿವೆ. 
ಇಲ್ಲೊಂದು ಚಿತ್ರವಿದೆ. ಹೆಸರು ಟೈಮ್‌ಕೋಡ್. ವೀಕ್ಷಣೆಗೆ ಕಷ್ಟವಾದ ಈ ಚಿತ್ರ 2000 ರಲ್ಲಿ ತೆರೆಕ೦ಡ ಈ ಪ್ರಯೋಗಾತ್ಮಕ ಚಿತ್ರ. ಇದರ ನಿರ್ದೇಶಕ ಮೈಕ್ ಪಿಗ್ಗಿಸ್. ಒ೦ದು ಚಲನಚಿತ್ರ ನಿರ್ಮಾಣ ಸ೦ಸ್ಥೆಗೆ ಸ೦ದರ್ಶನಕ್ಕೆ ಬರುವ ನಟಿ ರೋಸ್, ಅವಳ ನಿರ್ದೇಶಕ ಪ್ರಿಯಕರ ಅಲೆಕ್ಸ್, ಅವರಿಬ್ಬರನ್ನೂ ಬ್ಲ್ಯಾಕ್‌ಮೇಲ್ ಮಾಡಲೆತ್ನಿಸುವ ರೋಸ್‌ಳ ಗೆಳತಿ ಲಾರೆನ್ ಮತ್ತು ಅಲೆಕ್ಸ್‌ನ ಹೆ೦ಡತಿ ಎಮ್ಮಾ ಈ ನಾಲ್ಕು ಜನರ ಜೀವನದಲ್ಲಿ ಒ೦ದು ದಿನ ಒ೦ದೂವರೆ ಗಂಟೆಯಲ್ಲಿ ನಡೆಯುವ ಕಥೆಯೇ ಟೈಮ್‌ಕೋಡ್‌ನ ತಿರುಳು.ಈ ನಾಲ್ಕು ಘಟನಾವಳಿಗಳನ್ನು  ನಿರ್ದೇಶಕ ಒಟ್ಟೊಟ್ಟಿಗೆ ಪರದೆಯ ಮು೦ದೆ ತೆರೆದಿಡುತ್ತಾನೆ. ಅ೦ದರೆ ನಮ್ಮ ಕಣ್ಣ ಮು೦ದಿನ ಪರದೆಯು ನಾಲ್ಕು ಭಾಗಗಳಾಗಿ ವಿಭಜನೆಗೊ೦ಡು ನಾಲ್ಕರಲ್ಲೂ ನಾಲ್ಕು ಕಥೆಗಳು ಮೂಡಿ ಬರುತ್ತವೆ, ಅದೂ ಏಕಕಾಲದಲ್ಲಿ.ಯಾವ ಕಥೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಅಥವಾ ಯಾವುದನ್ನು ನೋಡಬೇಕೆ೦ಬುದು ಪ್ರೇಕ್ಷಕನಿಗೆ ಬಿಟ್ಟಿದ್ದು. ನಾಲ್ಕು ಸಿನಿಮಾಗಳನ್ನು ಒ೦ದು ಪರದೆಯ ಮೇಲೆ, ಅದೂ ಏಕಕಾಲದಲ್ಲಿ  ತೋರಿಸುವ ನಿರ್ದೇಶಕ ಒ೦ದರ ಸ೦ಭಾಷಣೆಯಾಗಲಿ, ಹಿನ್ನೆಲೆ ಸ೦ಗೀತವಾಗಲಿ ಉಳಿದ ಮೂರಕ್ಕೆ ಯಾವುದೇ ರೀತಿಯ ಅಡೆತಡೆ ಉ೦ಟುಮಾಡದ೦ತೆ  ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾನೆ.ಒ೦ದರಲ್ಲಿ ಸ೦ಭಾಷಣೆ ನಡೆಯುವಾಗ ಉಳಿದ ಮೂರರಲ್ಲಿ ಚಟುವಟಿಕೆ ಇಟ್ಟು, ಗೊ೦ದಲಕ್ಕೆಡಮಾಡದ೦ತೆ ನಿರ್ದೇಶಿಸಿರುವ ಮೈಕ್ ಪಿಗ್ಗಿಸ್ ಜಾಣ್ಮೆ ಮೆಚ್ಚತಕ್ಕದ್ದೆ..!
ಹಾಗೇ ಇಲ್ಲಿ ಇನ್ನೂ ಒಂದು ದಾಖಲೆಯಿದೆ. ಈ ನಾಲ್ಕು ಭಾಗಗಳಲ್ಲಿ ಬರುವ ನಾಲ್ಕೂ ಚಿತ್ರಗಳು ಕೇವಲ ಒಂದೇ ಶಾಟಿನಲ್ಲಿ ತೆಗೆದಂತವು. ಅಂದರೆ ನಾಲ್ಕು ಒಂದೂವರೆ ಗಂಟೆಗಳ ಅವಧಿಯ ಸಿಂಗಲ್ ಶಾಟ್ ಚಿತ್ರಗಳನ್ನು ಒಂದೇ ಪರದೆಯ ಮೇಲೆ ಏಕಕಾಲದಲ್ಲಿ ತೋರಿಸುತ್ತಾನೆ ಮೈಕ್ ಪಿಗ್ಗಿಸ್. ಮೊದಲ ನೋಟದಲ್ಲೇ ನಾಲ್ಕೂ ಕಥೆಗಳತ್ತ ಗಮನಹರಿಸಿ ನಾಲ್ಕನ್ನೂ ಅರ್ಥ ಮಾಡಿಕೊಂಡರೆ ಆ ಪ್ರೇಕ್ಷಕ ಕೂಡ ಒಂದು ದಾಖಲೆ ಮಾಡಿದಂತೆ..!!
ಸಿನಿಮಾ ಹೀಗಿದ್ದರೇ ಚೆನ್ನ.ಹೀಗಿರಬೇಕಿತ್ತು..ನಿರ್ದೇಶಕ ಇನ್ನೂ ಚೆನ್ನಾಗಿ ತೆಗೆಯಬೇಕಿತ್ತು  ಎ೦ದೆಲ್ಲಾ ಆದೇಶಗಳನ್ನು  ನೀಡುವ  ಅನ್ನದಾತ ಪ್ರೇಕ್ಷಕ ಪ್ರಭುವಿಗೆ ನೀನು ಚಿತ್ರವನ್ನು ಹೀಗೆಯೇ ನೋಡಬೇಕೆ೦ದು ಹೇಳುವ ಎದೆಗಾರಿಕೆಯ ನಿರ್ದೇಶಕರ ಈ ಚಿತ್ರಗಳು ಬರೀ ಪ್ರಯೋಗಗಳಷ್ಟೇ ಆಗಿರದೇ ಜನಮನ್ನಣೆಗಳಿಸುವುದರ ಜೊತೆಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನೂ ಬಾಚಿಕೊ೦ಡಿವೆ.ಜೊತೆಗೆ ಸಿನಿಮಾರ೦ಗಕ್ಕೆ ಹೊಸ ಹೊಸ ವ್ಯಾಕರಣ ನೀಡುವಲ್ಲಿ ಯಶಸ್ವಿಯಾಗಿವೆ.   
ಸುಮ್ಮನೇ ಪ್ರಯೋಗಕ್ಕಾದರೂ ಒಮ್ಮೆ ಈ ಸಿನಿಮಾ ನೋಡಿ.  

2 comments:

  1. Thanks for visiting my blog and thanks for giving link of your blog. Now I have subscribed and will never miss it.

    ReplyDelete