Wednesday, May 16, 2012

ಪುಟದಿಂದ ಪರದೆಗೆ-2


ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮಹಾ ಪಲಾಯನ ಓದುತ್ತಿದ್ದಾಗ ಅದರ ಮುನ್ನುಡಿಯಲ್ಲಿ ಒ೦ದು ಕಡೆ ತೇಜಸ್ವಿಯವರು ಪ್ಯಾಪಿಲಾನ್ ಕಾದಂಬರಿಯ ಹೆಸರನ್ನು ನಮೂದಿಸಿದ್ದರು. ಅದೇಕೋ ಆ ಕಾದಂಬರಿಯನ್ನು ಓದಲೇಬೇಕೆನ್ನಿಸಿ ಇಡೀ ಮೈಸೂರು ಹುಡುಕಾಡಿ ಆ ಕಾದಂಬರಿ ತೆಗೆದುಕೊಂಡಿದ್ದೆ. ಸುಮಾರು ಎರೆಡೆರೆಡು ಬಾರಿ ಓದಿದ್ದೆ. ಅಲ್ಲಿನ ಪಾತ್ರಗಳು, ಸನ್ನಿವೇಶಗಳು ನನ್ನನ್ನು ಬಹುದಿನಗಳವರೆಗೆ ತೀವ್ರವಾಗಿ ಕಾಡಿದ್ದವು. ಕಂಗೆಡಿಸಿದ್ದವು. ಮಾನವಜನಾಂಗದ ಇತಿಹಾಸದ ಪುಟಗಳ ಅಕ್ಷರ ಅಕ್ಷರವೂ ಇಷ್ಟೊಂದು ರಕ್ತಲೇಪಿತವಾಗಿದೆಯಲ್ಲ ಎನಿಸಿತ್ತು.
ಸಾಹಸಿ ಹೆನ್ರಿ ಚಾರಿಯೇರ್
ಈಗಲೂ ಆ ಕಾದಂಬರಿಯ ಪುಟಪುಟದ ವಿವರಗಳು ನನಗೆ ಸ್ಪಷ್ಟವಾಗಿ ಗೊತ್ತಿದೆ.ಕಣ್ಣ ಮುಂದೆ ಅದೆಲ್ಲಾ ನಡೆಯಿತೇನೋ ಅನ್ನುವಷ್ಟರ ಮಟ್ಟಿಗೆ ಆ ಕಾದಂಬರಿಯ ಪ್ಯಾರಾಗಳು ದೃಶ್ಯರೂಪದಲ್ಲಿ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿವೆ.ಮನುಷ್ಯನ ಸ್ವಾತಂತ್ರ್ಯದೆಡೆಗಿನ ಬಯಕೆ ಅದೆಷ್ಟು ಅದಮ್ಯ..ಎನ್ನುವುದರ ಅರಿವಾದದ್ದು ನನಗೆ ಪ್ಯಾಪಿಲಾನ್ ಓದಿದಾಗಲೇ. ಆನಂತರ ಆ ಕಾದಂಬರಿಯ ಆಧರಿಸಿ ಸಿನಿಮಾ ಬಂದಿದೆ ಎಂದು ಗೊತ್ತಾದ ಮೇಲೆ ಹುಡುಕಾಡಿ ಆ ಸಿನಿಮಾದ ಡಿವಿಡಿ ಕೊಂಡು ಅದೆಷ್ಟು ಕಾತರನಾಗಿ ಟಿವಿಯ ಮುಂದೆ ಕುಳಿತಿದ್ದೆನೆಂದರೆ ನನಗವತ್ತು ಪ್ರಳಯವಾಗಿದ್ದರೂ ಗೊತ್ತಾಗುತ್ತಿರಲಿಲ್ಲ. ಆದರೆ ನನಗೆ ಸಿನಿಮಾ ನಿರಾಸೆ ತರಿಸಿತ್ತು. ಆದರೂ ಮತ್ತೆ ನೋಡಿದೆ. ಆಗಲೂ ನಿರಾಸೆಯಾಗಿತ್ತು. ನಾನಂದುಕೊಂಡ, ಆ ಕಾದಂಬರಿಯಾಧಾರಿತ ನನ್ನ ಕಲ್ಪನೆಯ ಮುಖ್ಯವೆನಿಸುವ ದೃಶ್ಯಗಳು ಅಲ್ಲಿರಲೇ ಇಲ್ಲ. ಯಾಕೆ ಹೀಗೆ ಎಂದುಕೊಂಡು ನನ್ನನ್ನೇ ಹಲವಾರು ಬಾರಿ ಪ್ರಶ್ನಿಸಿಕೊಂಡಿದ್ದೆ. ಆನಂತರ ಮತ್ತೆ ಕೆ.ಪಿ.ಯವರೇ ಅನುವಾದಿಸಿದ ಕನ್ನಡದ ಪ್ಯಾಪಿಲಾನ್ ಓದಿದೆ. ಅದ್ಯಾಕೋ ಆ ಸಿನಿಮಾ ನನ್ನನ್ನು ಸೆಳೆಯಲೇ ಇಲ್ಲ. ಆಮೇಲೆ ನನ್ನ ಗೆಳೆಯರಿಗೆ ಈ ಸಿನಿಮಾ ತಕ್ಷಣ ನೋಡಿ, ಇದರ ಬಗ್ಗೆ ಚರ್ಚೆ ಮಾಡೋದಿದೆ ಎಂದು ಹೇಳಿ ಬಲವಂತವಾಗಿ ಅವರು ಸಿನಿಮಾ ನೋಡುವಂತೆ ಮಾಡಿದ್ದೆ. ಅವರಿಬ್ಬರೂ ಸಿನಿಮಾ ನೋಡಿ ಗದ್ಗದಿತರಾಗಿದ್ದರು. ಆ ಸಿನಿಮಾದ ಬಗ್ಗೆ ಸುಮಾರುಹೊತ್ತು ಮಾತಾಡಿದ್ದರು. ಆ ಪ್ಯಾಪಿಲಾನ್ ಇನ್ನೂ ಇದ್ದಾನಾ? ಇದು ನಿಜವಾಗಿಯೂ ಸತ್ಯ ಘಟನೆಯಾ..? ಎಂದೆಲ್ಲಾ ಪ್ರಶ್ನಿಸಿದ್ದರು. ಎಂಥ ಸಿನಿಮಾ ರೆಫರ್ ಮಾಡಿದೆ ಮಾರಾಯ..ನನಗೆ ಆ ಗುಂಗಿಂದ ಹೊರಬರಲು ಸಾಧ್ಯವಾಗಲೇ ಇಲ್ಲ..ಇಲ್ಲಿ ಯಾರನ್ನು ಕೆಟ್ಟವರು ಅನ್ನೋದು..ಯಾರನ್ನು ಒಳ್ಳೆಯವರು ಅನ್ನೋದು..ಏನೇ ಆಗಲಿ ಒಂದು ಅದ್ಭುತ ಮನುಕುಲದ ಸಾಕ್ಷ್ಯಚಿತ್ರ ತೋರಿಸಿದ್ದೀಯಾ..ತುಂಬಾ ತುಂಬಾ ಥ್ಯಾಂಕ್ಸ್ ಕಣೋ.. ಎಂದೆಲ್ಲಾ ನನ್ನನ್ನು ಕೊಂಡಾಡಿದ್ದರು. ನನಗೇ ಆ ಪುಸ್ತಕ ಬೀರಿದ್ದ ಪರಿಣಾಮವನ್ನು ಅಷ್ಟೇ ತೀವ್ರವಾಗಿ ಆ ಸಿನಿಮಾ ಅವರ ಮೇಲೆ ಬೀರಿತ್ತು. ಕಾರಣ ಅವರು ಆ ಪುಸ್ತಕ ಓದಿರಲಿಲ್ಲ.
ಪುಸ್ತಕ ಗಾತ್ರದಲ್ಲೂ, ವಿಷಯದಲ್ಲೂ ದೊಡ್ಡದಾದದ್ದೆ. ಪ್ಯಾಪಿಲಾನನಿಗೆ ನ್ಯಾಯಾಲಯ ಐವತ್ತು ವರುಷಗಳ ಕಠಿಣ ಖಾರಾಗೃಹವಾಸದ ಶಿಕ್ಷೆ ನೀಡಿದಾಗ ಅವನ ವಯಸ್ಸು ಇಪ್ಪತ್ತೈದರ ಆಸುಪಾಸು. ಅದು ತಾನು ಮಾಡದ ತಪ್ಪಿಗೆ! ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂಬುದು ಅವನ ಜೀವನದ ಏಕೈಕ ಗುರಿಯಾಗುತ್ತದೆ. ಆದರೆ ಅದಷ್ಟು ಸುಲಭವಲ್ಲ. ಸುಮಾರು ಹದಿನಾಲ್ಕು ಬಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲನಾದಾಗಲೂ ಅವನಿಗೆ ಮತ್ತಷ್ಟು ಘೋರಶಿಕ್ಷೆಯನ್ನು ವಿಧಿಸಲಾಗುತ್ತದೆ. ಅವೇನೂ ಸಾಮಾನ್ಯ ಶಿಕ್ಷೆಗಳಲ್ಲ. ಅಲ್ಲಿನ ಖೈದಿಗಳು  ರೋಗರುಜಿನಗಳಿಂದ, ಜೈಲಿನೊಳಗಿನ ಆಂತರಿಕ ಕಲಹಗಳಿಂದ ಅಥವಾ ಮಾನಸಿಕ ವೇದನೆಯಿಂದ ಹುಚ್ಚರಾಗಂತೂ ಸತ್ತೇಹೋಗುವಷ್ಟು ಕಠಿಣವಾದ, ಅಮಾನವೀಯವಾದ ಶಿಕ್ಷೆಗಳವು. ಅದೆಲ್ಲವನ್ನೂ ಮೀರಿ ಪ್ಯಾಪಿಲಾನ್ ಬದುಕುತ್ತಾನೆ. ತನ್ನ ದೇಹವನ್ನು, ಮನಸನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತಾನೆ..ಇದೆಲ್ಲಾ ಸಾಧ್ಯವಾಗುವುದು ಅವನ ಸ್ವಾತಂತ್ರ್ಯದೆಡೆಗಿನ ಅದಮ್ಯ ಬಯಕೆಯಿಂದಾಗಿ..
ಎರಡು ಘಂಟೆ, ಮೂವತ್ತೊಂದು ನಿಮಿಷ ಪ್ಯಾಪಿಲಾನ್ ಸಿನಿಮಾದ ಅವಧಿ. ನಿಜವಾಗಿ ಹೇಳಬೇಕೆಂದರೆ ಇಡೀ ಕಾದಂಬರಿಯನ್ನು ದೃಶ್ಯರೂಪಕ್ಕೆ ತರಲು ಈ ಸಮಯ ಏನೇನೂ ಅಲ್ಲ. ಹಾಗಂತ ಗಂಟೆಗಟ್ಟಲೇ ಸಿನಿಮಾ ಮಾಡಲಾಗುವುದಿಲ್ಲವಲ್ಲ.
ನನ್ನ ಪ್ರಕಾರ ನೀವು ಪುಸ್ತಕ ಓದಿ ಆನಂತರ  ಸಿನಿಮಾ ನೋಡುವುದೊಳ್ಳೆಯದು. ಓದಿಲ್ಲದಿದ್ದರೆ ದಯವಿಟ್ಟು ಒಮ್ಮೆ ಓದಿ.ಇದು ಕಾಲ್ಪನಿಕ ಕಥೆಯಲ್ಲ. ಆತ್ಮಚರಿತ್ರೆ. ಲೇಖಕ ಹೆನ್ರಿ ಚಾರಿಯೆರ್.ಇದು ಅವನದೇ ಬದುಕಿನ ಕಥೆ..ಅವನದೇ ವ್ಯಥೆ..
ಸಿನಿಮಾದ ವಿಷಯಕ್ಕೆ ಬಂದರೆ ಫ್ರಾಂಕ್ಲಿನ್ ಜೆ. ಶಾಫನೆರ್ ಈ ಚಿತ್ರದ ನಿರ್ದೇಶಕ. ಸ್ಟೀವ್ ಮ್ಯಾಕಿನ್, ಡಸ್ಟಿನ್ ಹಾಫಮನ್ ಪ್ರಮುಖ ಪಾತ್ರಧಾರಿಗಳು. 1973ರಲ್ಲಿ ತೆರೆಗೆ ಬಂದ ಈ ಚಿತ್ರ ಆಸ್ಕರ್ ಪ್ರಶಸ್ತಿಗೂ ನಾಮಾಂಕಿತವಾಗಿತ್ತು.ಪಾತ್ರಧಾರಿಗಳ ಅಭಿನಯ, ಲೊಕೇಷನ್‌ಗಳು ಉತ್ತಮವಾಗಿರುವ ಈ ಚಿತ್ರ ನೋಡಲೇಬೇಕಾದ ಚಿತ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ.

No comments:

Post a Comment