Tuesday, July 12, 2016

ಸಂಭಾಷಣೆಕಾರನಿಗೂ ನಿರ್ದೇಶಕನಿಗೂ ಬಂದಾರೆ ಮುನಿಸು...

ಚಿತ್ರಗಳಿಗೆ ಸಂಭಾಷಣೆ ಬರೆಯುವ ಕೆಲಸ ಒಂತರಾ ಖುಷಿ ಕೊಡುವ ಕೆಲಸವಾದರೂ ಅದು ಸವಾಲಿನ ಕೆಲಸ.. ಯಾಕೆಂದರೆ ಕತೆಯನ್ನು ತಲೆಗೆ ಹಾಕಿಕೊಂಡು ಇರುವ ದೃಶ್ಯಕ್ಕೆ ಸಂಭಾಷಣೆಯನ್ನು, ಮತ್ತು ಇಲ್ಲದ ದೃಶ್ಯವನ್ನು ಸೃಷ್ಟಿಸಿ ಹಾಗೆಯೇ ಆ ಸಂದರ್ಭ ಮತ್ತು ದೃಶ್ಯದ ಪ್ರಾಮುಖ್ಯತೆಯನ್ನು ಮನಗಂಡು ಹಾಗೆಯೇ ದೃಶ್ಯದಲ್ಲಿ ಅನಾವರಣಗೊಳ್ಳಬೇಕಾದ ಮುಖ್ಯ ಅಂಶ ಮತ್ತು ಮತ್ತು ದೃಶ್ಯಕ್ಕೆ ಒಟ್ಟಾರೆ ಚಿತ್ರದಲ್ಲಿರಬಹುದಾದ ನಿಗದಿತ ಸಮಯ ಇವೆಲ್ಲವನ್ನೂ ಲೆಕ್ಕ ಹಾಕಿ ಸಂಭಾಷಣೆ ಬರೆಯಬೇಕಾಗುತ್ತದೆ. ಮೂಲಕತೆ ಸಂಭಾಷಣೆಕಾರನದೆ ಆದರೆ, ಅಥವಾ ಸಂಭಾಷಣೆಕಾರನೇ ಕತೆಗಾರನಾದರೆ ಅಥವಾ ನಿರ್ದೇಶಕನೇ ಕತೆಗಾರ ಸಂಭಾಷಣೆಕಾರನಾಗಿದ್ದರೆ ಅದವರ ಮರ್ಜಿಗೆ ಬಿಟ್ಟದ್ದು. ಅಥವಾ ಸಿನಿಮ ರಿಮೇಕ್ ಆಗಿದ್ದರಂತೂ ಸಂಭಾಷಣೆಯಲ್ಲಿ ಸೃಜನಶೀಲತೆ ನೆಪಮಾತ್ರ ಎನ್ನಬಹುದು. ಆದರೆ ಬೇರೆಯವರ ಕತೆಗೆ ಸಂಭಾಷಣೆ ಬರೆದು ಅದನ್ನು ಒಪ್ಪಿಸುವ ಕೆಲಸ ಸುಲಭದ್ದಲ್ಲ. ಕೆಲವೊಮ್ಮೆ ನಿರ್ದೇಶಕನ ಆಶಯ, ಕತೆಯ ಆಶಯ, ಪಾತ್ರಧಾರಿಗಳ ಪಾತ್ರಪೋಷಣೆ ಇವೆಲ್ಲವೂ ಏರುಪೇರಾಗಿ ಬಿಡುತ್ತವೆ. ಜೊತೆಗೆ ದೃಶ್ಯದಲ್ಲಿರಬಹುದಾದ ಪಾತ್ರಗಳಿಗೆ ಹೆಚ್ಚು ಪಾತ್ರಗಳಿದ್ದರೆ ಸಂಭಾಷಣೆ ಹಂಚುವ ಮತ್ತು ಅವರುಗಳ ಸ್ವಂತಿಕೆ/ಪಾತ್ರಪೋಷಣೆ ಕಾಯ್ದುಕೊಳ್ಳುವ ಕೆಲಸ ಇವೆಲ್ಲಾ ತುಂಬಾ ಜಾಗರೂಕತೆಯಿಂದ ಮಾಡುವಂತಹದ್ದು. ಅದೊಂದು ಸಿನಿಮಾಕ್ಕೆ ಸಂಭಾಷಣೆ ಬರೆಯಲು ಒಪ್ಪಿಕೊಂಡ ಸಂಭಾಷಣೆಕಾರನಿಗೆ ನಿರ್ದೇಶಕರು ಕತೆಯನ್ನು ವಿವರವಾಗಿ ಬಿಚ್ಚಿಟ್ಟಿರಲಿಲ್ಲ..ಬದಲಿಗೆ ಹೀಗೂ ಇರಬಹುದು, ಅಥವಾ ಅದನ್ನು ಹೇಗಾದರೂ ಬರೆಯಬಹುದು, ಅಥವಾ ನಿಮಗಿಷ್ಟ ಬಂದ ಹಾಗೆ ಬರೆಯಿರಿ ಸಾರ್ ಎಂದೆ ಹೇಳುತ್ತಿದ್ದರು. ಕತೆಯನ್ನು ನಿರ್ಮಾಪಕರ ಮುಂದೆ, ಕಲಾವಿದರ ಮುಂದೆ ನಿರೂಪಣೆ ಕೊಡಲು ಸಂಭಾಷಣೆಕಾರನನ್ನು ಕರೆದುಕೊಂಡು ಹೋಗುತ್ತಿದ್ದರು. ಎಲ್ಲವೂ ಸೆಟ್ ಆಯಿತು. ನಿರ್ಮಾಪಕರಿಗೆ, ಕಲಾವಿದರುಗಳಿಗೆ ಎಲ್ಲರಿಗೂ ಕತೆಯನ್ನು ಸಂಭಾಷಣೆಯನ್ನು ಒಪ್ಪಿಸುವ ಜವಾಬ್ದಾರಿಯನ್ನು ಸಂಭಾಷಣೆಕಾರ ಮಾಡಿದ್ದರು. ಆದರೆ ಅಷ್ಟೆಲ್ಲಾ ಆದ ನಂತರ ನಿರ್ದೇಶಕರಿಗೂ ಸಂಭಾಷಣೆಕಾರರಿಗೂ ಯಾವುದೋ ಕಾರಣಕ್ಕೆ ಕಿರಿಕ್ಕು ಬಂದಿತ್ತು, ಯಾವಾಗ ಕೆಲಸಗಳೆಲ್ಲವೂ ಮುಗಿದಿತ್ತೋ ನಿರ್ದೇಶಕರೂ ಸಂಭಾಷಣೆಕಾರರನ್ನು ಸ್ವಲ್ಪ ಜೋರಾಗಿಯೇ ಝಾಡಿಸಿದ್ದರು. ಇದರಿಂದ ಕೋಪಗೊಂಡ ಸಂಭಾಷಣೆಕಾರ ತಾನು ಬರೆದಿದ್ದೆಲ್ಲವನ್ನು ಒಂದು ಪುಟವನ್ನೂ ಬಿಡದೆ ತೆಗೆದುಕೊಂಡು ಮನೆಗೆ ಬಂದವರು ಸಂಭಾಷಣೆ ಬೇಕಾದರೆ ನನ್ನೊಡನೆ ರಾಜಿಯಾಗಲಿ ಎಂದರು. ಆದರೆ ನಿರ್ದೇಶಕರು ತುಟಿಕ್ ಪಿಟಿಕ್ ಎನ್ನಲಿಲ್ಲ. ಶೂಟಿಂಗ್ ದಿನಗಳು ಹತ್ತಿರ ಬಂದರೂ ಉಹೂ .. ನಿರ್ದೇಶಕರ ಪತ್ತೆಯಿಲ್ಲ. ಈಗ ಸಂಭಾಷಣೆಕಾರಿಗೆ ಆಶ್ಚರ್ಯ ಇಡೀ ಸ್ಕ್ರಿಪ್ಟ್ ನನ್ನತ್ರವೇ ಇದೆ. ಶೂಟಿಂಗ್ ಬೇರೆ ಹತ್ತಿರ ಬರುತ್ತಿದೆ. ಅದೇಗೆ ನಿರ್ದೇಶಕರು ನಿರುಮ್ಮಳವಾಗಿದ್ದಾರೆ ಎಂದು. ಆದರೆ ಶೂಟಿಂಗ್ ಪ್ರಾರಂಭವಾಗಿ ಅನಾಯಾಸವಾಗಿ ನಡೆಯತೊಡಗಿದಾಗ ಬೆಚ್ಚಿ ಬಿದ್ದ ಸಂಭಾಷಣೆಕಾರರು ಚಿತ್ರತಂಡದವರನ್ನು ಸಂಪರ್ಕಿಸಿದಾಗ ಅದು ನಿರ್ದೇಶಕರ ಕಿವಿಗೆ ಬಿದ್ದಾಗ ಅವರು ಹೇಳಿದ್ದಿಷ್ಟು. "ಎಲ್ಲಾ ತಲೇಲಿ ಇದೆಯಮ್ಮ, ಸುಮ್ನೆ ನಾನು ಕುಳಿತ್ಕೊಂಡು ಬರೆಯೋಕ್ಕಾಗಲ್ಲವಲ್ಲ ಅದಕ್ಕೆ ಬರೆಸಿದ್ದು.. "
ಚಿತ್ರರಂಗದಲ್ಲಿ  ಇದೊಂದು ಆರೋಪ ಇದ್ದೇ ಇದೆ. ಅದೊಮ್ಮೆ  ಸ್ಕೈಲೈನ್ ಸ್ಟುಡಿಯೋ ಮುಂದೆ ಸಿಕ್ಕ ಸಂಭಾಷಣೆಕಾರ-ನಿರ್ದೇಶಕ ರಾಮ್ ನಾರಾಯಣ್ ಏನೇ ಆಗಲಿ ಕಣ್ರೀ ನಾವೇನೋ ಅಷ್ಟು ಚೆನ್ನಾಗಿ ಬರೆದುಕೊಡ್ತೀವಿ.. ಆದ್ರೆ ನಿರ್ದೇಶಕರು ಅದನ್ನು ತಗೋಳ್ಲೋದೆ ಇಲ್ಲ ಬಿಡಿ.. ಏನೇನೋ ಮಾಡಿ ಬಿಡ್ತಾರೆ, ಅದಕ್ಕೆ ಒಮ್ಮೊಮ್ಮೆ ಬೇಸರ ಆಗೋಗುತ್ತೆ.. ಇನ್ಮುಂದೆ ಸುಮ್ನೆ ನಾವು ಚೆನ್ನಾಗಿ ಸಂಭಾಷಣೆ-ಸ್ಕ್ರಿಪ್ಟ್ ಬರೆದು ನಿರ್ದೇಶಕರಿಗೆ ಕೊಟ್ಟು ಅದು ಹಾಳಾಗಿ ಅವರನ್ನು ಬೈದುಕೊಳ್ಳೋದಕ್ಕಿಂತ ಸುಮ್ನೆ ನಮ್ಮ ನಮ್ಮ ಸ್ಕ್ರಿಪ್ಟ್ ನಾವೇ ಡೈರೆಕ್ಟ್ ಮಾಡೋದು ಒಳ್ಳೇದು ಎಂದಿದ್ದರು. ಇದು ನಿಜವೂ ಹೌದು. ಸಂಭಾಷಣೆಕಾರ ಮತ್ತು  ನಿರ್ದೇಶಕ ಇಬ್ಬರ ಸಮಾಗಮ ಅಷ್ಟು ಸುಲಭವಲ್ಲ. ನಿರ್ದೇಶಕನ ಆಶಯವಷ್ಟೂ ಸಂಭಾಷಣೆಕಾರನ ತಲೆಗೆ ಅಚ್ಚೋತ್ತಬೇಕು.
ಮೊನ್ನೆ ಮೊನ್ನೆ ರನ್ ಅಂಟನಿ ಚಿತ್ರದ್ದು ಅದೇ ಕತೆ. ಸಂಭಾಷಣೆಕಾರ ಹರಿ ಪಾರಖ್ ನಾನು ಬರೆದ ಸಂಭಾಷಣೆಗಳಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದರು. ನಾನು ಸಂಭಾಷಣೆಕಾರನಾಗಿ ಚಿತ್ರರಂಗ ಪ್ರವೇಶಿಸಿದ ಹೊಸತರಲ್ಲಿ ಸಂಭಾಷಣೆ ಬರೆದು ಆನಂತರ ಸಿನೆಮಾವನ್ನು ಮೊದಲ ದಿನವೇ ನೋಡಿ, ನಾವು ಬರೆದ ಸಂಭಾಷಣೆ ಎಲ್ಲಿ ಎಂಬುದನ್ನು ಹುಡುಕುವುದೇ ಆಗಿತ್ತು. ಆದರೆ ನಾವೇ ಅಂದುಕೊಂಡಿದ್ದ ಮುಖ್ಯ ಎನಿಸಿದ್ದ ಸಂಭಾಷಣೆಗಳು ಅಲ್ಲಿರದೆ ಇದ್ದಾಗ ಬೇಸರವೂ ಆಗುತ್ತಿತ್ತು. ಕೇಳಿದರೆ ಅದಿಲ್ಲ ಇದಿಲ್ಲ, ಹಾಗಲ್ಲ ಹೀಗಲ್ಲ ಎಂಬೆಲ್ಲಾ ಉತ್ತರಗಳು ಬಂದುಬಿಡುತ್ತಿದ್ದವು. ತೀರಾ ಮಾತಾಡಿದರೆ ಬರವಣಿಗೆ ನಂಬಿಕೊಂಡ ನಮ್ಮಂತವರಿಗೆ ಮುಂದಿನ ಸಿನೆಮಾಗಳಲ್ಲಿ ಅವಕಾಶಗಳು ಸಿಗುವುದಿರಲಿ, ಬೇರೆ ಸಿನೆಮಾಗಳ ಅವಕಾಶಗಳು ತಪ್ಪಿಹೋಗುತ್ತಿದ್ದವು. ಹಾಗಾಗಿ ಹಣವಷ್ಟನ್ನೇ ತಲೆಯಲ್ಲಿಟ್ಟುಕೊಂಡು ಸಂಭಾಷಣೆ ಬರೆದು ಒಪ್ಪಿಸಿಬಂದು ಕೈ ತೊಳೆದುಕೊಳ್ಳುತಿದ್ದೆವು.
ನಾನು ಒಂದು ಚಿತ್ರಕ್ಕೆ ಸಂಭಾಷಣೆ ಬರೆಯಲು ಒಪ್ಪಿಕೊಂಡಿದ್ದೆ. ಸುಮಾರು 73 ದೃಶ್ಯಗಳಿದ್ದ ಸಿನಿಮಾದಲ್ಲಿ 64 ದೃಶ್ಯಗಳನ್ನು ಬರೆದು ಒಪ್ಪಿಸಿಬಿಟ್ಟಿದ್ದೆ. ಇನ್ನುಳಿದ 9 ದೃಶ್ಯಗಳು ಹಾಸ್ಯಮಯ ದೃಶ್ಯವಾಗಿದ್ದರಿಂದ ಅದಕ್ಕೆ ಒಂದಷ್ಟು ಸಮಯ ಕೋರಿದ್ದೆ. ಇದಾದ ಸ್ವಲ್ಪ ದಿನದಲ್ಲೇ ಕರೆ ಮಾಡಿದ ನಿರ್ದೇಶಕರು ಬೇಗನೆ ಭೇಟಿಯಾಗುವಂತೆ ಹೇಳಿದಾಗ ಹೋಗಿ ಭೇಟಿಯಾಗಿದ್ದೆ. ಅಲ್ಲಿ ಕನ್ನಡದ ಈವತ್ತಿನ ಪ್ರಮುಖ ಹಾಸ್ಯನಟರಲ್ಲಿ ಒಬ್ಬರಾದವರು ಕುಳಿತಿದ್ದು ಇವರು ಹಾಸ್ಯದೃಶ್ಯಗಳನ್ನು ಬರೆಯುತ್ತಾರೆ, ನಿಮ್ಮ ಅಭ್ಯಂತರ ಇಲ್ಲವೇ ಎಂದರು ನಿರ್ದೇಶಕರು. ನಾನು ಆಗಲಿ, ಒಳ್ಳೆಯದೇ ಎಂದೆ. ಇದಾದ ನಂತರ ಪತ್ರಿಕಾಗೋಷ್ಠಿ ಯಲ್ಲಿ ಸಂಭಾಷಣೆಕಾರ ಎಂದು ಅವರ ಹೆಸರನ್ನೇ ಪ್ರಮುಖವಾಗಿ ಘೋಷಿಸಿದ್ದರು. ಆನಂತರ ವೇದಿಕೆಯ ಕೆಳಗೆ ಬಂದ ಹಾಸ್ಯನಟರು ಬೇಸರಿಸಿಕೊಳ್ಳಬೇಡಿ, ನಾನು ಎಷ್ಟು ಹೇಳಿದರೂ ನಿರ್ದೇಶಕರು ಕೇಳಲಿಲ್ಲ, ಕೇವಲ ಒಂಭತ್ತು ದೃಶ್ಯ ಬರೆದು ಇಡೀ ಸಿನಿಮಾದ ಸಂಭಾಷಣೆಯ ಕ್ರೆಡಿಟ್ ತೆಗೆದುಕೊಳ್ಳುವುದು ನನಗೂ ಸರಿಹೋಗಲಿಲ್ಲ ಎಂದು ನುಡಿದಿದ್ದರು. ಅಷ್ಟರಲ್ಲಾಗಲೇ ನನಗೆ ಅದೆಲ್ಲಾ ರೂಢಿಯಾಗಿದ್ದರಿಂದ ನಕ್ಕು ಸುಮ್ಮನಾಗಿದ್ದೆ.
ಹಾಗಾದರೆ ಬರಹಗಾರರಿಗೆ ಬೆಲೆ ಇಲ್ಲವೇ..? ಅವರಿಗೆ ಸಿಗಬೇಕಾದ ಮರ್ಯಾದೆ ಸಿಗುತಿಲ್ಲವೇ..? ಅವರ ಬರವಣಿಗೆಗೆ ಕಿಮ್ಮತ್ತಿಲ್ಲವೇ..? ಖಂಡಿತ ಇದೆ. ಆದರೆ ಅದು ಒಬ್ಬ ನಿರ್ದೇಶಕನಿಗೆ ಗೊತ್ತಿರಬೇಕಾಗುತ್ತದೆ. ಒಂದು ಸಿನಿಮಾಕ್ಕೆ ಯಾವ ಯಾವ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು. ಏಕೆಂದರೆ ಬರಹ ಮತ್ತು ಸಂಗೀತ, ಸಾಹಿತ್ಯ ಇವು ಭಾವಕ್ಕೆ ಸಂಬಂಧಿಸಿದವು. ಶೈಲಿಗೆ ಸಂಬಂಧಿಸಿದವು. ಒಂದು ಸಿನೆಮಾವನ್ನು ನಿರ್ದೇಶಿಸಹೊರಡುವ ನಿರ್ದೇಶಕ ಮೊದಲಿಗೆ ತಾನು ಯಾವ ಕ್ಯಾಟೆಗರಿ ಸಿನಿಮಾ ಮಾಡುತ್ತಿದ್ದೇನೆ ಎಂಬುದನ್ನು ಅರಿತಿರಬೇಕು ಮತ್ತು ಅದರ ಬಗ್ಗೆ ಒಂದು ವಿಶದವಾದ ಅದ್ಯಯನ ಮಾಡಿರಬೇಕಾಗುತ್ತದೆ. ಏಕೆಂದರೆ ಪ್ರೇಮಕತೆ, ಥ್ರಿಲ್ಲರ್, ಹಾರರ್.. ಹೀಗೆ ನಾವೇನೆ ವಿಭಾಗಗಳನ್ನು ಮಾಡಿಕೊಂಡರೂ ಅದೆಲ್ಲದಕ್ಕೂ ಅದರದೇ ಆದ ನಿರೂಪಣೆಯ ಶೈಲಿ ವೇಗ, ಗತಿ ಇದ್ದೆ ಇರುತ್ತದೆ. ಇದರ ಜೊತೆಗೆ ನಿರ್ದೇಶಕನ ಶೈಲಿಯೂ ಸೇರಿಕೊಳ್ಳುತ್ತದೆ. ಅದು ಪಕ್ಕವಾದನಂತರ ನಾವು ಕಲಾವಿದರನ್ನು ಪಾತ್ರಕ್ಕೆ ತಕ್ಕಂತೆ ಹೇಗೆ ಆಯ್ಕೆ ಮಾಡುತ್ತೇವೆಯೋ ಹಾಗೆಯೇ ತಂತ್ರಜ್ಞರನ್ನೂ ಆಯ್ಕೆ ಮಾಡಬೇಕಾಗುತ್ತದೆ. ಇಲ್ಲಿ ನಿರ್ದೇಶಕ ಆಯಾ ತಂತ್ರಜ್ಞರ ಪರಣತಿಯನ್ನು ಅರಿತು ಅವರನ್ನು ಅಯ್ಕೆಮಾಡಿಕೊಳ್ಳಬೇಕಾಗುತ್ತದೆ ಅಥವಾ ಆಯ್ಕೆ ಮಾಡಿದ ತಂತ್ರಜ್ಞರಿಂದ ಇಚ್ಚಿತ ಕೆಲಸವನ್ನು ತೆಗೆದುಕೊಳ್ಳಬೇಕಾಗುತ್ತದೆ. ಎರಡೂ ಸಲ್ಲತಕ್ಕದ್ದೆ ಆದರೂ ಎರಡನೆಯದು ರಿಸ್ಕಿನ ಕೆಲಸ. ಇರಲಿ. ಅದರಲ್ಲೂ ಒಬ್ಬ ಬರಹಗಾರ, ಸಂಭಾಷಣೆಕಾರ ಎಂದಾಗ ಆತನ ವಿಶೇಷತೆ ಏನು ಎಂಬುದನ್ನು ಮನಗಾಣಬೇಕು. ಅವನ ಕಸುಬುದಾರಿಕೆಗೆ ಅವನ ಪ್ರಾವೀಣ್ಯತೆಗೆ ನಮ್ಮ ಸಿನಿಮಾದಲ್ಲಿ ಅವಕಾಶವಿದೆಯೇ, ಆತನ ಪ್ರತಿಭೆಗೆ ಸಾಟಿಯಾಗುವ ಕತೆ ನಮ್ಮ ಚಿತ್ರದ್ದೇ ಎಂಬುದನ್ನು ವಿಶ್ಲೇಷಣೆ ಮಾಡಬೇಕಾಗುತ್ತದೆ. ಆಗಾದಾಗ ಮಾತ್ರ ಅವರ ಪ್ರತಿಭೆಗೂ ನಮ್ಮ ಸಿನೆಮಾಕ್ಕೂ ಸಮಾಗಮ-ಸರಿಗಮ ಎನ್ನಬಹುದು. ಚುರುಕು ಮಾತುಗಳಿಂದ-ಬರಹಗಳಿಂದ, ತಮ್ಮ ವಿಶೇಷ ಪದಜೋಡನೆಯಿಂದ ಹೆಸರು ಮಾಡಿದವರ ಸಂಭಾಷಣೆಗೆ ಥ್ರಿಲ್ಲರ್ ಚಿತ್ರಗಳಲ್ಲಿ ಜಾಗ ಕಡಿಮೆಯೇ. ಹಾಗೆಯೇ ತುಂಬಾ ಗಂಭೀರವಾಗಿ, ವಸ್ತು ನಿಷ್ಟವಾಗಿ ಮತ್ತು ಅಂಕಿ ಅಂಶಗಳನ್ನ ಇಟ್ಟುಕೊಂಡು ಬರೆಯುವವರಿಗೆ ತಿಳಿ ಹಾಸ್ಯದ ಚಿತ್ರವನ್ನೂ ಕೊಟ್ಟುಬಿಟ್ಟರೆ ಸಿನಿಮಾದ ಕತೆ ಏನಾಗಬೇಡ ನೀವೇ ಹೇಳಿ. ಇತ್ತ ಅವರ ಪ್ರತಿಭೆಗೂ - ಸಿನಿಮಾದ ಆಶಯಕ್ಕೂ ಅಜಗಜಾಂತರವಾಗಿಬಿಡುತ್ತದೆ. ಆನಂತರ ನಿರ್ದೇಶಕರಿಗೆ ಬರೆದದ್ದು ಸಮಂಜಸ ಎನಿಸದೆ ತಮಗನ್ನಿಸಿದ್ದನ್ನು ಬರೆದುಕೊಳ್ಳುತ್ತಾರೆ. ಅಲ್ಲಿಗೆ ಮತ್ತೊಂದು ಆರೋಪ ಪಟ್ಟಿ ಶುರುವಾಗುತ್ತದೆ.
ಇದು ಕೇವಲ ಬರಹಗಾರನಿಗಷ್ಟೇ ಸಂಬಂಧಿಸಿದ್ದಲ್ಲ. ಸಂಗೀತ, ಸಾಹಿತ್ಯ, ಸಂಕಲನ, ಛಾಯಾಗ್ರಹಣ ಪ್ರತಿಯೊಂದಕ್ಕೂ ಸಂಬಂಧಿಸಿದ್ದು. ಹಾಗಾಗಿ ಮತ್ತು ಸಾಮಾನ್ಯವಾಗಿ ಎಲ್ಲರ ಆಯ್ಕೆ ನಿರ್ದೇಶಕನ ನಿರ್ಧಾರವಾದ್ದರಿಂದ ಆತನಿಗೆ ಅದರ ಸಂಪೂರ್ಣ ಅರಿವಿದ್ದರೆ ಪ್ರತಿಭೆಗೆ ನ್ಯಾಯ ಒದಗಿಸಬಹುದೇನೋ..?

No comments:

Post a Comment