Saturday, September 5, 2015

ರಿಮೇಕ್? ನನಗೆ ಗೊತ್ತಿಲ್ಲ..

ಅದನ್ನು ಧೈರ್ಯ ಎನ್ನಬೇಕೆ ಎಂಬುದು ಪ್ರಶ್ನೆ. ನಮಗೆಲ್ಲಾ ಗೊತ್ತಿರುವಂತೆ ಕೇಸ್ ನಂಬರ್ 18/9 ಚಿತ್ರದ ಮೂಲ ತಮಿಳು. ನಿರ್ದೇಶಕ ಬಾಲಾಜಿ ಶಕ್ತಿವೇಲು ಸುಮಾರು ಒಂದೂವರೆ ವರ್ಷ ಸಮಯ ತೆಗೆದುಕೊಂಡು ರಚಿಸಿದ ಸ್ಕ್ರಿಪ್ಟ್ ಅದು. ಬಿಡುಗಡೆಯಾಗಿ ಸೂಪರ್ ಹಿಟ್ ಆದ ಚಿತ್ರ ಆಸ್ಕರ್ ವರೆಗೂ ಸಾಗಿತ್ತು. ಅದನ್ನೇ ಕನ್ನಡದಲ್ಲಿ ಮಾಡಿದರು. ವಿಷಯ ಏನೆಂದರೆ ಆ ಚಿತ್ರದ್ದು ನಿಜವಾದ ಕತೆ, ಆ ಕತೆಯಲ್ಲಿರುವ ಪಾತ್ರಧಾರಿಗಳು ಈವತ್ತಿಗೂ ಬೆಂಗಳೂರಿನಲ್ಲಿದ್ದಾರೆ, ಜೆಪಿ ನಗರದಲ್ಲೋ ಎಲ್ಲೋ ಇದ್ದಾರೆ ಎಂದಿದ್ದರು ನಿರ್ದೇಶಕರು. ಅಷ್ಟೇ ಅಲ್ಲ, ವಾಹಿನಿಯೊಂದರಲ್ಲಿ ನೇರ ಪ್ರಸಾರದಲ್ಲಿ ದಿನಪೂರ್ತಿ ಅದರ ಬಗ್ಗೆ ಮಾತನಾಡಿದ್ದರು.
ಹಾಗಾದರೆ ಅದು ಧೈರ್ಯವಾ? ಕಣ್ಮುಂದೆ ಅದು ರಿಮೇಕ್ ಎಂಬುದು ಗೊತ್ತಿದ್ದರೂ ಒಬ್ಬ ನಿರ್ದೇಶಕ ಪ್ರಜ್ಞಾಪೂರ್ವಕವಾಗಿ ಅದೇಗೆ ಹಾಗೆ ಹೇಳಲು ಸಾಧ್ಯ. ಅದಕ್ಕಾಗಿ ಪುರಾವೆ ಸೃಷ್ಟಿಸಾಲು ಸಾಧ್ಯ. ಹಾಗೆಯೇ ಮತ್ತೊಂದು ಚಿತ್ರದ ಕನ್ನಡ ಅವತರಣಿಕೆಯಲ್ಲಿ ಇದು ಮಂಡ್ಯ ಬಳಿ ನಡೆದ ಸತ್ಯ ಘಟನೆ ಅದರ ನಿಜವಾದ ವ್ಯಕ್ತಿಗಳು ಇವರು ಎಂದು ಸಿನಿಮಾದಲ್ಲಿಯೇ ತೋರಿಸಲಾಗಿತ್ತು.
ಈಗ ಸಧ್ಯಕ್ಕೆ ಆಟಗಾರ ಚಿತ್ರದ ನಿರ್ದೇಶಕರು ನಾನು ರಿಮೇಕ್ ಮಾಡುವುದಿಲ್ಲ, ಅಡುಥದು ಚಿತ್ರದ ರಿಮೇಕ್ ಆಟಗಾರ ಎಂಬುದು ಸುಳ್ಳು ಎಂದಿದ್ದಾರೆ. ನನ್ನದು ಅಗಾಥಕ್ರಿಸ್ಟಿ ಕಾದಂಬರಿ ಪ್ರೇರಿತ ಸ್ವಮೇಕ್ ಎನ್ನುವ ಮಾತನಾಡಿದ್ದಾರೆ. ಹಾಗಾದರೆ ಇದು ಧೈರ್ಯವೇ?
ಕಣ್ಮುಂದೆ ಪುರಾವೆ ಇಟ್ಟು ತೋರಿಸಿದರೂ ಅದಲ್ಲ ಎಂದರೆ ಅದನ್ನು ಏನನ್ನೋದು ಅಲ್ಲವೇ? ಇಷ್ಟಕ್ಕೂ ರಿಮೇಕ್ ಸ್ವಮೇಕ್ ನಡುವೆ ರಿಮೇಕ್ ಮಾಡಲೇಬಾರದು ಎಂದು ಕಾನೂನು ಇಲ್ಲವಲ್ಲ. ಆಪ್ತಮಿತ್ರ ನೋಡಿದ ಸೂಪರ್ ಸ್ಟಾರ್ ರಜನಿ ಚಂದ್ರಮುಖಿಯನ್ನು ಭಟ್ಟಿ ಇಳಿಸಲಿಲ್ಲವೇ? ಘಜನಿ ಚಿತ್ರದಲ್ಲಿನ ಅಷ್ಟೂ ಪ್ರೀತಿಯ ದೃಶ್ಯಗಳು ಇಂಗ್ಲಿಷ್ ಚಿತ್ರದ ನಕಲಲ್ಲವೇ? ಲೈಫ್ ಇನ್ ಎ ಮೆಟ್ರೋ ಚಿತ್ರದ ನಾಲ್ಕು ಕತೆಗಳು ನಾಲ್ಕು ಚಿತ್ರಗಳಿಂದ ಯಥಾವತ್ತಾಗಿ ಕಾಪಿ ಮಾಡಿದ್ದಲ್ಲವೇ? ಎಷ್ಟು ಬಾರಿ ನೋಡಿದರೂ ಬೋರ್ ಆಗದ ಬರ್ಫಿ ಚಿತ್ರದ ಪ್ರತಿ ದೃಶ್ಯವೂ ಎರವಲು ಅಲ್ಲವೇ?
ರವಿಚಂದ್ರನ್ ಯಶಸ್ವಿ ಚಿತ್ರಗಳೆಲ್ಲಿ  ರಿಮೇಕ್ ಸಿಂಹಪಾಲಿದೆ. ಆದರೆ ಅವರ ರಿಮೇಕ್ ಗೆ ನಾವು ಅಂದರೆ ಪ್ರೇಕ್ಷಕರು ಮನಸೋತಿದ್ದೇವೆ. ಎಷ್ಟು ಚೆನ್ನಾಗಿ ರಿಮೇಕ್ ಮಾಡಿದ್ದಾರೆ ಎಂದು ಖುಷಿ ಪಟ್ಟಿದ್ದೇವೆ ಅಲ್ಲವೇ. ಅನುರಾಗ್ ಬಸು ಬರ್ಫಿ ಚಿತ್ರದಲ್ಲಿನ ಎಲ್ಲಾ ದೃಶ್ಯಗಳು ಕಾಪಿ ಆದರೂ ಅದನ್ನೆಲ್ಲಾ ಸೇರಿಸಿ ಹೆಣೆದ ಕತೆಗೆ ನಾವು ಮಾರುಹೊಗಿದ್ದೇವೆ. ಇಲ್ಲಿ ರಿಮೇಕ್ ಸ್ವಮೇಕ್ ಮುಖ್ಯವಾಗಿಲ್ಲ. ಬದಲಿಗೆ ಅದನ್ನು ಹೆಣೆದ ಪರಿಗೆ ಅನುವಾದಿಸಿದ ರೀತಿಗೆ ಮಾರುಹೋಗುವುದು ನಮ್ಮ ಜಾಯಮಾನ. ಚಿತ್ರ ಚೆನ್ನಾಗಿದೆ ಎಂದರೆ ಮತ್ತದನ್ನು ಚೆನ್ನಾಗಿ ಮಾಡಿದ್ದಾರೆ ಎಂದರೆ ಅದರ ಇತರೆ ವಿಷಯಗಳು ಗೌಣ. ಹಾಗಂತ ಶಾಟ್ ಗಳಿಂದ ಹಿಡಿದು, ಪಾತ್ರಧಾರಿಗಳ ಬಟ್ಟೆಗಳನ್ನು ಅನುಕರಿಸಿ ಪಕ್ಕಾ ಜೆರಾಕ್ಸ್ ಮಾಡುವುದು ಅಷ್ಟು ಸಮಂಜಸವಲ್ಲ. ಆ ಕತೆಯ ಭಾವವನ್ನು ಇಲ್ಲಿಯ ಸೊಗಡಿನ ಕತೆಗೆ ಅಳವಡಿಸಿದರೆ ಅದಕ್ಕಿಂತ ಚಂದವಾಗುವುದರಲ್ಲಿ ಸಂದೇಹವಿಲ್ಲ.
ಬಾಜಿಗರ್ ಚಿತ್ರವನ್ನು ತೆಗೆದುಕೊಳ್ಳಿ. ಎ ಕಿಸ್ ಬಿಫೋರ್ ಡೈಯಿಂಗ್ ಸಿನಿಮಾಕ್ಕೆ ಹಿನ್ನೆಲೆಕೊಟ್ಟು ನಾಯಕನ ಪ್ರತಿಕಾರಕ್ಕೆ ಕಾರಣ ಹೆಣೆದದ್ದರಿಂದ ಮ್ಯಾಟ್ ದಿಲ್ಲೊನ್ ಗಿಂತ ಶಾರುಖ್ ಇಷ್ಟ ಆಗುತ್ತಾರೆ. ಅಣ್ಣಯ್ಯ, ರಾಮಾಚಾರಿ ಮೂಲಕ್ಕಿಂತ ನಮ್ಮಲ್ಲೇ ಖುಷಿ ಕೊಟ್ಟಿವೆ. ಕೋರಿಯನ್ ಸಸ್ಪೆಕ್ಟ್ ಎಕ್ಷ್ ನ ಮೂಲ ತಿರುಳನ್ನು ತೆಗೆದುಕೊಂಡು ಇಲ್ಲಿಯ ಕತೆ ಹೆಣೆದ ದೃಷ್ಯಂ ಮೂಲಕ್ಕಿಂತ ಸಾವಿರಪಾಲು ಥ್ರಿಲ್ ಕೊಡುತ್ತದೆ. ಹೀಗೆ ರಿಮೇಕ್ ನಲ್ಲಿಯೂ ಸೂಪರ್ ಎನಿಸುವ ಚಿತ್ರಗಳನ್ನು ನಾವು ನೋಡಿದ್ದೇವೆ. ಆರನೆಯ ರಿಮೇಕ್ ಆದ ಟೈಟಾನಿಕ್ ಎಲ್ಲಾ ಟೈಟಾನಿಕ್ ಚಿತ್ರಗಳಿಗಿಂತ ಮುದ ನೀಡಿದೆ ಅಲ್ಲವೇ?
ಹಾಗಾಗಿ ಎಲ್ಲ ಕಡೆ ರಿಮೇಕ್ ಇದೆ. ಆದರೆ ಅದನ್ನು ಸಮರ್ಥವಾಗಿ ನಿರೂಪಿಸದೇ ಇದ್ದಾಗ ಮೂಲವೇ ಎಷ್ಟು ಚೆನ್ನಾಗಿತ್ತು ಎನಿಸಿಕೊಳ್ಳುತ್ತದೆ.  ಜಾನಿ ಡೆಪ್ ಅಂಜೆಲಿನಾ ಜೂಲಿ ಇದ್ದೂ ನಮಗೆ ಟೂರಿಸ್ಟ್ ಗಿಂತ ಫ್ರೆಂಚ್ ಚಿತ್ರ ಅಂತೋನಿ ಜಿಮ್ಮರ್ ಇಷ್ಟವಾಗುತ್ತದೆ, ಹಾಗೆಯೇ ದಿ ಗರ್ಲ್ ವಿಥ್ ಡ್ರ್ಯಾಗನ್ ಟಾಟೂ, ಓಲ್ಡ್ ಬಾಯ್ ಮುಂತಾದ ಚಿತ್ರಗಳ ರಿಮೇಕ್ ಪೇಲವ ಎನಿಸುತ್ತದೆ. ಕನ್ನಡದಲ್ಲಿಯೂ ಅಂತಹ ಪಟ್ಟಿ ಮಾಡಬಹುದಾಗಿದೆ. ಆದರೆ ಅದಲ್ಲವೇ ಅಲ್ಲಾ ಎನ್ನುವ ಧೈರ್ಯಕ್ಕೆ ಮಾತ್ರ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಸಧ್ಯದ ಚರ್ಚೆಯ ಸಂಗತಿ.
ಪ್ರೇಮಾಭಿಷೇಕ ಎನ್ನುವ ಕನ್ನಡ ಚಿತ್ರವೊಂದರ ಪತ್ರಿಕಾಗೋಷ್ಠಿ. ಅದರಲ್ಲಿ ನಿರ್ದೇಶಕರು ನಾನು ಶಿಕ್ಷಕ, ಒಂದೊಳ್ಳೆ ಕತೆ ಮಾಡಿ ಚಿತ್ರ ನಿರ್ದೇಶನ ಅಮಡಿ ನಾನೇ ನಾಯಕನಾಗಿದ್ದೇನೆ ಎಂದು ತಮ್ಮನ್ನೇ ಪರಿಚಯಿಸಿಕೊಂಡಿದ್ದರು. ಅದಾದ ಮೇಲೆ ತಮ್ಮ ಬಗ್ಗೆ ಹೇಳುತ್ತಾ ನಾನು ಆಗಾಗ ಸಣ್ಣಕವಿತೆಗಳನ್ನು ಬರೆಯುತ್ತೇನೆ, 
ಉದಾಹರಣೆಗೆ ಎಂದು ಒಂದು ಕವನವನ್ನು ಓದಿದರು.
ಅವಳು ಎದುರಿಗೆ ಸಿಕ್ಕಳು
ನನ್ನನ್ನು ನೋಡಿ ನಕ್ಕಳು
ನಮಗೀಗ ಎರಡು ಮಕ್ಕಳು 
ಎಂದರು. ಆಶ್ಚರ್ಯಚಕಿತರಾದ ಮಾಧ್ಯಮದವರು ಇದು ಡುಂಡಿರಾಜ್ ಅವರ ಕವನ ಅಲ್ಲವೇ ಎನ್ನುವ ಪ್ರಶ್ನೆಗೆ ಅವರ ಉತ್ತರ ಹೀಗಿತ್ತು.
"ಏನೋಪ್ಪಾ.. ಅವರೂ ಬರೆದಿರಬಹುದು.. ನನಗೆ ಗೊತ್ತಿಲ್ಲ..."

1 comment:

  1. ಅದೊಂಥರ ಭಂಡಧೈರ್ಯ. ಕೆಲವು ನಿರ್ದೇಶಕರು ಚಿತ್ರದ ಬಿಡುಗಡೆಯ ಮುನ್ನವೇ ಮೂಲ ಚಿತ್ರ ಯಾವುದೆಂದು ಹೇಳಿಬಿಟ್ಟರೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗುತ್ತದೆಂಬ ಕಾರಣದಿಂದಾಗಿ ರಿಮೇಕ್ ಎನ್ನುವುದನ್ನೇ ಮುಚ್ಚಿಡುತ್ತಾರೆ. ಆದರೆ ರಿಮೇಕ್ ಮಾಡಿದ ಚಿತ್ರವೂ ಪ್ರೇಕ್ಷಕನ ಮನಗೆದ್ದರೆ, ನಂತರವೂ ಮೂಲ ಚಿತ್ರದ ಕರ್ತೃಗಳಿಗೆ ಕ್ರೆಡಿಟ್ ಕೊಡದೆ ಹೋದರೆ ಆ ಮನಸ್ಥಿತಿಗೆ ಭಂಡತನವೆನ್ನದೇ ಬೇರೆ ಪದವಿಲ್ಲ!

    ReplyDelete