Friday, September 4, 2015

ಆಟ ಅಡ್ಸೋನು ಎಲ್ಲೋ ಕುಂತವ್ನೆ...

ಮೃತ್ಯು ಭಯ ಕಾಡಿದಾಗ ಮನುಷ್ಯ ಸತ್ಯವನ್ನು ಬಾಯಿಬಿಟ್ಟೆ ಬಿಡುತ್ತಾನೆ, ಸಾವು ಕಣ್ಣೆದುರಿಗೆ ಕಂಡಾಗ ಆತನಿಗೆ ತನ್ನ ತಪ್ಪಿನ ಅರಿವಾಗುತ್ತದೆ..ಇದು ನನ್ನ ಮೊದಲ ಚಿತ್ರದ ಒಂದು ಸಾಲಿನ ಎಳೆ. ಹಾಗೆ ನೋಡಿದರೆ ಮಾರ್ಚ್ 23 ಚಿತ್ರವನ್ನು ಒಂದು ಕತೆ ಬರೆದು ಅದಕ್ಕೆ ಚಿತ್ರಕತೆ ಹೆಣೆದು ಆನಂತರ ಮಾಡಿದ ಚಿತ್ರವಲ್ಲ. ಒಂದು ಸಿನಿಮಾ ಆಫೀಸ್ ನಲ್ಲಿ ಕುಳಿತಿದ್ದಾಗ ತಿಂಗಳು ಗಟ್ಟಲೆ ಆ ಸಿನಿಮಾ ಸೆಟ್ಟೇರದೇ ಇದ್ದಾಗ ಗೆಳೆಯರೆಲ್ಲಾ ಸೇರಿ ನಮ್ಮೆಲ್ಲರ ಬಳಿ ಇಷ್ಟು ಹಣವಿದೆ, ಇದಕ್ಕೆ ತಕ್ಕ ಹಾಗೆ ಒಂದು ಥ್ರಿಲ್ಲರ್ ಚಿತ್ರವನ್ಯಾಕೆ ಮಾಡಬಾರದು ಎಂದಿದ್ದರು. ಸರಿ. ಥ್ರಿಲ್ಲರ್ ಹೇಗೆ ಮಾಡಬಹುದು, ಯಾವ ಕತೆ ಆಯ್ಕೆ ಮಾಡಿಕೊಳ್ಳಬಹುದು  ಎಂದೆಲ್ಲಾ ತಲೆ ಕೆಡಿಸಿಕೊಂಡಿದ್ದ ನನಗೆ ಮಾಮೂಲಿ ಒಂದು ಕೊಲೆ ನಡೆಯುತ್ತದೆ, ಅದನ್ನು ಹುಡುಕುತ್ತಾರೆ ಎಂದೋ, ಅಥವಾ ಒಂದು ಪ್ರದೇಶದಲ್ಲಿ ಅಥವಾ ಒಂದು ನಿರ್ಧಿಷ್ಟ ಜಾಗದಲ್ಲಿ ಒಂದಷ್ಟು ಜನ ಟ್ರ್ಯಾಪ್ ಆಗುತ್ತಾರೆ, ಬಿಡಿಸಿಕೊಂದು ಬರಲು ಒದ್ದಾಡುತ್ತಾರೆ.. ಎಂದೋ ಕತೆ ಮಾಡುವುದು ಅಷ್ಟು ಸೇರಲಿಲ್ಲ. ಈ ನಡುವೆ ನಾನು ಸಾಕಷ್ಟು ತಲೆ ಕೆಡಿಸಿಕೊಂಡಿದ್ದು ಬ್ಲೇರ್ ವಿಚ್ ಪ್ರಾಜೆಕ್ಟ್ ಬಗ್ಗೆ. ಅಷ್ಟರಲ್ಲಾಗಲೇ ಟಿವಿ ವಾಹಿನಿಯೊಂದರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧೀ ಹಂತಕ  ಶಿವರಾಸನ್ ಮತ್ತವನ ತಂಡ ಸತ್ತ ಕೋಣನಕುಂಟೆ ಒಂಟಿ ಮನೆಯ ಸುತ್ತಾ ಈಗಲೂ ನರಳುವ, ಯಾರೋ ಓಡಾಡುವ ಸಪ್ಪಳ ಕೇಳಿ ಬರುತ್ತಿದೆ, ಜನ ಅಲ್ಲಿಗೆ ಹೋಗಲು ಹೆದರುತ್ತಿದ್ದಾರೆ ಎನ್ನುವ ಸುದ್ದಿ ಪ್ರಸಾರವಾಗಿತ್ತು. ನಾನು ಅದನ್ನೇ ಸಿನಿಮಾ ಮಾಡಿದರೆ ಹೇಗೆ ಎಂದು ಯೋಚಿಸಿದೆ. ಕತೆ ಇಷ್ಟೇ. ಸುದ್ದಿ ವಾಹಿನಿಯ ಸುದ್ದಿ ನೋಡಿದ ಐದಾರು ಯುವ ಸಿನಿಮಾಮಂದಿ ಅಥ್ವಾ ಸಿನಿಮಾ ವಿದ್ಯಾರ್ಥಿಗಳು ಅದನ್ನು ಲೈವ್ ಚಿತ್ರೀಕರಿಸಲು ಅದೊಂದು ದಿನ ಕೋಣನ ಕುಂಟೆ ಮನೆಗೆ ಹೋಗುತ್ತಾರೆ. ಆದರೆ ಯಾರೂ ವಾಪಸ್ಸು ಬರುವುದಿಲ್ಲ. ಮೂರುದಿನದ ನಂತರ ಅವರ ಕ್ಯಾಮೆರಾ ಮತ್ತು ಟೇಪ್ ಸಿಗುತ್ತದೆ. ಅದರಲ್ಲಿನ ವೀಡಿಯೊದ ಸಂಕಲಿತ ಚಿತ್ರಣವೇ ನಮ್ಮ ಸಿನಿಮಾ ಎಂದೇ. ಆದರೆ ಗೆಳೆಯರು ಅಯ್ಯೋ ಅದನ್ನೇ ಹೇಗೋ ಮಾರಾಯ ಎರಡು ಘಂಟೆ ಎಳೀತೀಯಾ ಜನ ಎದ್ದು ಹೋಗ್ತಾರೆ ಎಂದಿದ್ದರು.
ಈ ನಡುವೆ ನನಗೆ ಎ ವೆಡ್ನೆಸ್ ಡೇ ಇಷ್ಟವಾಗಿತ್ತು, ಸಾಮಾನ್ಯನೊಬ್ಬ ದೊಡ್ಡ ಮಟ್ಟದ ಮಾಸ್ಟರ್ ಪ್ಲಾನ್ ಮಾಡುವ ಕತೆ ಹಿಡಿಸಿತ್ತು. ನಮ್ಮಲ್ಲೂ ಒಬ್ಬ ಅತೀ ಸಾಮಾನ್ಯನನ್ನು ನಾಯಕನನ್ನಾಗಿ ಮಾಡಿ, ಒಂದು ಮಾಸ್ಟರ್ ಪ್ಲಾನ್, ಒಂದು ದಿನದ ಕತೆ ಆಯ್ಕೆ ಮಾಡಿಕೊಂಡೆವು. ಆವತ್ತಿನ ಜ್ವಲಂತ ವಿವಾದಗಳು ಯಾವುದು ಎಂದಾಗ, ನಿತ್ಯಾನಂದ ರಂಜಿತ ಪ್ರಕರಣ, ರಾಜಕಾರಣಿ ಅನೈತಿಕ ಪ್ರಕರಣ, ಸರಣಿ ಹಂತಕ ಮೋಹನ್ ಪ್ರಕರಣ ಹೀಗೆ .. ಒಂದಷ್ಟು ಘಟನೆಗಳನ್ನೂ ಆಯ್ಕೆ ಮಾಡಿಕೊಂಡು ಅದಕ್ಕೆ ಚಿತ್ರಕತೆ ಹೆಣೆದು ಸಿನಿಮಾ ಮಾಡಿದ್ದಾಯಿತು.
ಆನಂತರದ್ದು ಏನೇನೋ ಆಯಿತು ಬಿಡಿ. ಮೊನ್ನೆ ಯಾರೋ ಗೆಳೆಯರು ಆಟಗಾರ ಸಿನಿಮಾ ನೋಡಿ, ಗುರು ನೀನು ಹೇಳಿದ್ಯಲ್ಲಾ ನಿನ್ನ ಸಿನಿಮಾದ ಬಗ್ಗೆ ಅದೇ ಕತೆ ನೋಡು, ಅವರು ಸಿನಿಮಾ ಮಾಡಿ ಬಿಡುಗಡೆ ಮಾಡಿದ್ದಾರೆ, ನೀನು ಡಬ್ಬದಲ್ಲೇ ಇಟ್ಟುಕೊಂಡಿದ್ದೀಯ ಎಂದರು. ಇದ್ದರೂ ಇರಬಹುದು ಎಂದುಕೊಂಡೆ. ಒಂದು ಆಲೋಚನೆ ಮತ್ತೊಬ್ಬರಿಗೆ ಬರದಿರಲು ಅದೇನೋ ಅಂತಹ ಗ್ರೇಟ್ ಥಾಟ್ ಅಲ್ಲ ಬಿಡಪ್ಪ.. ಸಿನಿಮಾ ಇಷ್ಟವಾಯ್ತಾ ಖುಷಿ ಪಡು ಎಂದು ಅವನಿಗೆ ದಬಾಯಿಸಿದೆ.
ಆನಂತರ ಆಟಗಾರ ನೋಡಿದೆ. ಅದರ ವಿಮರ್ಶೆ ಬಿಡಿ. ನಮ್ಮ ಸಿನೆಮಾಕ್ಕೂ ಅದಕ್ಕೂ ಯಾವುದೇ ಸಾಮ್ಯತೆಯಿಲ್ಲದಿದ್ದದ್ದು ಖುಷಿಯ ಸಂಗತಿಯೇ. ಅದನ್ನೇ ಕರೆ ಮಾಡಿ ಹೇಳಿದೆ ಆತನಿಗೆ. ಆಟಗಾರ ಚಿತ್ರದ ಕತೆ ಅಗಾಥಕ್ರಿಷ್ಟಿ ಕಾದಂಬರಿಯ ಮೂಲದ ಕತೆಯೋ, ಅದನ್ನು ಆಧರಿಸಿ ತಯಾರಾದ ನಾಲ್ಕೈದು ಚಿತ್ರಗಳ ಅವತರಣಿಕೆಯೋ ಎನ್ನುವುದು ವಿಷಯವಲ್ಲ. ಹಾಗೆ ನೋಡಿದರೆ ಆಟಗಾರ ರಿಮೇಕ್ ಚಿತ್ರ. ತಮಿಳಿನಲ್ಲಿ ಅಷ್ಟಾಗಿ ಸದ್ದೇ ಮಾಡದ ಅಡುಥದು ಚಿತ್ರದ ಕನ್ನಡ ಅವತರಣಿಕೆ. 2011 ರಾಲಿ ತೆರೆಕಂಡ ಈ ಚಿತ್ರವನ್ನು ಥಕ್ಕಳಿ ಶ್ರೀನಿವಾಸನ್ ನಿರ್ದೇಶನ ಮಾಡಿದ್ದರು. ಬಹುತೇಕ ಹೊಸಬರೇ ನಟಿಸಿದ್ದ ಈ ಚಿತ್ರದಲ್ಲಿ ಅನಂತನಾಗ್ ಪಾತ್ರವನ್ನು ನಾಸರ್ ನಿರ್ವಹಿಸಿದ್ದರು. ಅಡುಥದು ಚಿತ್ರದ ಮಕ್ಕಿಕಾಮಕ್ಕಿ ಕನ್ನಡ ಅವತರಣಿಕೆಯಾದ ಆಟಗಾರ ಅಧಿಕೃತ ರಿಮೇಕೋ ಅನಧಿಕೃತ ರಿಮೇಕೋ ಗೊತ್ತಿಲ್ಲ.  
ಒಂದಷ್ಟು ವಿರಾಮವೋ, ಏನೋ ಚಿತ್ರರಂಗದಿಂದ ಅನಾಮತ್ತು ಎರಡು ವರ್ಷ ದೂರ ಇದ್ದದ್ದು ಆಯಿತು. ಆಕ್ಷನ್ ಕಟ್ ಪ್ರಪಂಚದಿಂದ ಬೇರೆ ಪ್ರಪಂಚಕ್ಕೆ ತೆರೆದುಕೊಂಡಿದ್ದೂ ಆಯಿತು. ಈಗ ಮತ್ತೆ ಹಳೆಯ ಕಡತಗಳಿಗೆ ಮನಸ್ಸು ಹೊರಳಿದೆ. ಹೊಸ ಚಿತ್ರಕ್ಕೆ ತಯಾರಿ ನಡೆದು, ಸ್ಕ್ರಿಪ್ಟ್ ಮುಗಿದಿದೆ. ಮೊನ್ನೆ ಲೊಕೇಶನ್ ಹಂಟಿಂಗ್ ಕೂಡ ಮಾಡಿದ್ದಾಗಿದೆ. ಇನ್ನೂ ಕಾಸ್ಟಿಂಗ್ ಅಥವಾ ತಾರಾಗಣದ ಆಯ್ಕೆಯ ದೊಡ್ಡ ಕೆಲಸ ಬಾಕಿಯಿದೆ.
ಕಲಾವಿದ ಆಕಾಂಕ್ಷಿಗಳು ಫೋಟೋ ಡೀಟೇಲ್ಸ್ ಅನ್ನು ಇಮೇಲ್ ಮಾಡಿದರೆ ಒಮ್ಮೆ ಪರಿಗಣನೆಗೆ ತೆಗೆದುಕೊಳ್ಳಬಹುದು.
ನಮಸ್ಕಾರ.

5 comments:

  1. Very nice. Interesting to see how a movie concept evolve.

    Reading ur post after a long time.

    Please watch the movie 'Thani Oruvan' last week released, if possible.

    All the best for ur next project.

    ReplyDelete
  2. ಚಿತ್ರ ಚೆನ್ನಾಗಿದೆ . ಹೌದು ಅದರ ಕನ್ನಡ ಅವತರಣಿಕೆ ಅಂತ ಒಪ್ಪಿಕೊಂಡಿದ್ದರೆ ಚೆನ್ನಾಗಿತ್ತು . ನೋಡುವಾಗ ಒಂದೆರಡು ಇಂಗ್ಲಿಷ್ ಸಿನೆಮಾದ ಹೆಸರು ಕೇಳ್ಪಟ್ಟೆ And there were none ಅಂತೇನೇನೋ

    ReplyDelete