Wednesday, February 12, 2014

ರಿಮೇಕ್ ಹಿಂದೆ ಬಿದ್ದಾಗ..


ಪರಭಾಷೆಯಲ್ಲಿ ಉತ್ತಮ ವಿಮರ್ಶೆ ಪಡೆದಿದ್ದ ಆದರೆ ಅಷ್ಟಾಗಿ ಯಶಸ್ಸು ಪಡೆಯದ ಒಂದು ಉತ್ತಮ ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡಿದ್ದ  ನಿರ್ಮಾಪಕರನ್ನು ಕೇಳಿದ್ದೆ. 'ಅಲ್ಲಾ ಸಾರ್..ಈ ಚಿತ್ರ ಅಲ್ಲೇ ತೋಪು..ಮತ್ಯಾಕೆ ಅದನ್ನು ಕನ್ನಡಕ್ಕೆ ಮಾಡಿದಿರಿ...ಅದ್ಯಾವ ಮಾನದಂಡದ ಅದರ ಮೇಲೆ ಹಣ ಹಾಕಿದಿರಿ..' ಅವರು ನಗುತ್ತಾ ಉತ್ತರಿಸಿದರು. 'ನಾನಾಗ ಚೆನ್ನೈ ನಗರಕ್ಕೆ ಯಾವುದೋ ಕೆಲಸಕ್ಕೆ ಹೋಗಿದ್ದೆ. ಸಮಯ ಸಿಕ್ಕಾಗ ಸಿನಿಮ ನೋಡುವುದು ನನ್ನ ಅಭ್ಯಾಸ.ಹಾಗೆಯೇ ಅಲ್ಲಿದ್ದ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿದೆ. ನನಗೆ ಅದೆಷ್ಟು ಇಷ್ಟವಾಯಿತು ಎಂದರೆ ಈ ಚಿತ್ರವನ್ನು ನನಗೆ ಗೊತ್ತಿರುವ ಮಂದಿಗೆಲ್ಲಾ ತೋರಿಸಿದೆ. ಫೋನ್ ಮಾಡಿ ನನ್ನ ಗೆಳೆಯರಿಗೆಲ್ಲಾ ಚಿತ್ರ ನೋಡುವಂತೆ ಹೇಳಿದೆ. ಅದಾದ ನಂತರವೂ ಯಾಕೋ ತೃಪ್ತಿಯಾಗಲಿಲ್ಲ. ಈ ಕತೆಯನ್ನು ಇಡೀ ಕನ್ನಡ ಜನಕ್ಕೆ ತೋರಿಸಬೇಕು ಎನಿಸಿತು..ಹಾಗಾಗಿ ಅದನ್ನು ಕನ್ನಡಕ್ಕೆ ತಂದೆ. ನಾನು ಹಣಕಾಸಿನ ಲೆಕ್ಕಾಚಾರದಲ್ಲಿ ಸೋತಿರಬಹುದು. ಆದರೆ ಗುಣಮಟ್ಟದ ಲೆಕ್ಕಾಚಾರದಲ್ಲಿ ಗೆದ್ದಿದ್ದೇನೆ...' ಎಂದಿದ್ದರು.
ಹೌದು. ನನ್ನ ಪ್ರಕಾರ ಅದೇ ಸರಿ. ಯಾರೇ ಆಗಲಿ ಒಂದು ಕತೆಯನ್ನು ಅಥವಾ ಸಿನೆಮಾವನ್ನು ಕನ್ನಡಕ್ಕೆ ತರಬೇಕೆಂದರೆ ಅದು ಅಷ್ಟರ ಮಟ್ಟಿಗೆ ನಮ್ಮನ್ನು ಕಾಡಬೇಕು. ನೋಡಿದಾಕ್ಷಣ ಎಲ್ಲರಿಗೂ ಇದನ್ನು ತೋರಿಸಬೇಕು ಎನಿಸಬೇಕು. ಆನಂತರವೇ ಅದನ್ನು ಸಿನಿಮಾ ಅಥವ ರೀಮೇಕ್ ಮಾಡಬೇಕು.
ಆದರೆ ಅದು ಅಷ್ಟರ ಮಟ್ಟಿಗೆ ನಮ್ಮಲ್ಲಿ ನಡೆಯುವುದಿಲ್ಲ. ಇಲ್ಲಿ ಯಶಸ್ಸೊಂದೆ ಮೂಲ ಮಂತ್ರ. ಆ ಚಿತ್ರ ಯಶಸ್ವಿಯಾಗಿದೆ. ಅದನ್ನು ಕನ್ನಡೀಕರಿಸೋಣ..ಸಮರೋಪಾದಿಯಲ್ಲಿ ಕೆಲಸ ಮಾಡಿ ಸಂತೆಗೆ ಮೂರು ಮೊಳ ನೇಯ್ದು ಮಾರಲು ಇಡಬೇಕು. ಅಷ್ಟೆ ಸಾರ್ಥಕತೆ. ಹಾಗಾಗಿಯೇ ಎಷ್ಟೋ ಚಿತ್ರಗಳು ನಮ್ಮಲ್ಲಿ ತೋಪು ಬೀಳುತ್ತವೆ. ಅಲ್ಲಿನ ಭಾವ, ಗತಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ನಮ್ಮವರು ಬರೀ ಯಶಸ್ಸೇ ಮಾನದಂಡ ಎಂದು ಕೊಳ್ಳುತ್ತಾರೆ.ಅಲ್ಲಿ ಹಿಟ್ ಆಗಿದೆ. ಹಾಗಾದರೆ ಇಲ್ಲೂ ಆಗಬಹುದು ಎನ್ನುವ ತಪ್ಪು ಕಲ್ಪನೆಯಷ್ಟೇ ನಿರ್ಮಾಪಕರ ತಲೆಯಲ್ಲಿ ತುಂಬಿರುತ್ತದೆ. ಹಾಗೆಯೇ ನಿರ್ದೇಶಕನಿಗೆ ಹೊಸ ಕತೆ ಮಾಡುವ ಅದನ್ನು ಚಿತ್ರಕತೆ ಮಾಡುವ, ನಿರ್ಮಾಪಕರಿಗೆ ಕಲಾವಿದರಿಗೆ ಒಪ್ಪಿಸುವ ರಿಸ್ಕು ಕಡಿಮೆಯಾಗಿ ಹೇಗೋ ಒಂದು ಸಿಡಿ ಕೊಟ್ಟು ಚಿತ್ರ ತಯಾರಿಗೆ ನಿಂತುಬಿಡುತ್ತಾನೆ.
ಆದರೆ ಕೇವಲ ಲೆಕ್ಕಾಚಾರವೇ ಸಿನಿರಂಗವನ್ನು ಆಳುವುದಿಲ್ಲ. 
ಸುಮಾರು ವರ್ಷದ ಹಿಂದೆ ಇಲ್ಲಿಂದ ಚೆನ್ನೈ ಗೆ ಕೆಲಸದ ಮೇಲೆ ಒಬ್ಬ ನಿರ್ಮಾಪಕರು ಹೋದರಂತೆ. ಹೋದವರೇ ಅಲ್ಲಿನ ಹಂಚಿಕೆದಾರರನ್ನು ಭೇಟಿ ಮಾಡಿ ಯಾವ ಯಾವ ಚಿತ್ರ ಯಾವ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ವಿಚಾರಿಸಿದಾಗ ಒಂದು ತಮಿಳು ಚಿತ್ರ ಯರ್ರಾಬಿರ್ರಿ ಓಡುತ್ತಿರುವುದು ಗೊತ್ತಾಗಿದೆ. ತಕ್ಷಣವೇ ಹಿಂದೆ ಮುಂದು ನೋಡದ ನಿರ್ಮಾಪಕರು ಆ ನಿರ್ಮಾಪಕರನ್ನು ಹೇಗೋ ಭೇಟಿ ಮಾಡಿದ್ದೆ ಅದರ ಕನ್ನಡ ಅವತರಣಿಕೆಯ ಹಕ್ಕುಗಳನ್ನು ಕೊಡುವಂತೆ ದುಂಬಾಲು ಬಿದ್ದಿದ್ದಾರೆ.ನಮ್ಮ ನಿರ್ಮಾಪಕರಿಗೆ ಅದೆಲ್ಲಿ ಬೇರೇಯವರ ಪಾಲಾಗಿ ಬಿಡುತ್ತದೋ ಎಂಬ ಭಯ ಏನೋ ಒಂದು ಹಣಕ್ಕೆ ತೆಗೆದುಕೊಂಡು ಜಗತ್ತನ್ನು ಗೆದ್ದವರಂತೆ ಕರ್ನಾಟಕ್ಕೆ ಬಂದಿದ್ದಾರೆ.
ಬಂದ ಮೇಲೆ ಗೊತ್ತಾಗಿರುವ ವಿಷಯವೆಂದರೆ ಆ ಚಿತ್ರ ಕನ್ನಡದ ರೀಮೇಕ್ ಎಂಬುದು.
ಇನ್ನೂ ಒಂದು ಚಿತ್ರದ ಕತೆ ಹೆಚ್ಚು ಕಡಿಮೆ ಇದೆ ಆಗಿದೆ. ಕನ್ನಡದಲ್ಲಿ ಬಿಡುಗಡೆಯಾದ ಚಿತ್ರವೊಂದು ಆನಂತರ ತಮಿಳಿನಲ್ಲಿ ರೀಮೇಕ್ ಆಗಿ ಆನಂತರ ಮತ್ತೆ ಕನ್ನಡದಲ್ಲಿ ಬಂದದ್ದು ಗೊತ್ತೇ ಇದೆ.
ದಿನೇಶ್ ಬಾಬು ನಿರ್ದೇಶನದ ಎಸ್. ನಾರಾಯಣ್ ಅಭಿನಯದಲ್ಲಿ ಬಲಗಾಲಿಟ್ಟು ಒಳಗೆ ಬಾ ಎಂಬ ಚಿತ್ರವೊಂದು ಬಂದಿತ್ತು. ಇಂಗ್ಲಿಷ್ ಚಿತ್ರದ ಕನ್ನಡ ಅವತರಣಿಕೆ ಅದು ಎನ್ನಬಹುದು.ಅದನ್ನು ರಾಜಮೌಳಿ ಮರ್ಯಾದೆ ರಾಮಣ್ಣ ಹೆಸರಿನಲ್ಲಿ ತೆಲುಗಿಗೆ ತಂದರು. ಅದು ಯಶಸ್ವಿಯೂ ಆಯಿತು. ತಕ್ಷಣವೇ ಅದನ್ನು ಕೋಮಲ್ ಕನ್ನಡಕ್ಕೆ ಅದೇ ಹೆಸರಿನಲ್ಲಿ ತಂದರು. ಚಿತ್ರ ಸೋತಿದ್ದು ಬೇರೆ ಮಾತು.
ಸ್ಕೂಲ್ ಮಾಸ್ಟರ್ ಚಿತ್ರದ್ದು ಅದೇ ಕತೆ.ಬಿ.ಆರ್.ಪಂತುಲು ಅಭಿನಯದಲ್ಲಿ ತೆರೆಗೆ ಬಂದ ಈ ಚಿತ್ರ 1958 ರಲ್ಲೇ ಬಿಡುಗಡೆಯಾದ
ಈ ಚಿತ್ರ ಹಿಂದಿಯಲ್ಲಿ ಭಾಗ ಬಾನ್ ಆಗಿ ಬಂದರೆ ಅದನ್ನೇ ಮತ್ತೆ ಈ ಬಂಧನ ಮಾಡಿದರು. ಹಾಗೆ ನೋಡಿದರೆ ಮೂರು ಚಿತ್ರದಲ್ಲಿ ಕ್ಲೈಮಾಕ್ಸ್ ಬಿಟ್ಟರೆ ಎಲ್ಲವೂ ಅದೇ ಕತೆ.ಆದರೂ ಅದನ್ನು ರೀಮೇಕ್ ಮಾಡಿದರು ನಮ್ಮವರು.
ಇದೆಲ್ಲವನ್ನೂ ಗಮನಿಸಿದರೆ ಇವರೆಲ್ಲರ ದೃಷ್ಟಿ ಕತೆಯ ಮೇಲೆ ಬೀಳುವುದೇ ಇಲ್ಲ ಎಂಬುದು ಗೊತ್ತಾಗುತ್ತದೆ. ಬರೀ ಯಶಸ್ಸನ್ನೇ ನೋಡುತ್ತಾರೆ.ಚಿತ್ರ ಯಶಸ್ವಿಯಾಗಿದೆ, ಯಾಕೆ ಅದರ ಕತೆ ಏನಿತ್ತು..ಕನ್ನಡದಲ್ಲಿ ಅದು ಆಗಿಬರುತ್ತದಾ...ಎಂಬುದನ್ನೆಲ್ಲಾ ಪರಾಮರ್ಶಿಸಿ ಆನಂತರ ಅದನ್ನು ಕನ್ನಡೀಕರಿಸಿದರೆ ಅದು ಸರಿ. ಅಲ್ಲಿ ಯಶಸ್ವಿಯಾಯಿತು ಎಂಬುದನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ ಅದೆಷ್ಟರ ಮಟ್ಟಿಗೆ ಸರಿ..?
ಮೊನ್ನೆ ಮೊನ್ನೆ ಇಂಗ್ಲಿಷ್ ಚಿತ್ರ ಬ್ಲೇರ್ ವಿಚ್ ಪ್ರೊಜೆಕ್ಟ್ ನ ಕನ್ನಡ ರೂಪವಾದ 6-5=2 ಬಿಡುಗಡೆಯಾಗಿ ಯಶಸ್ವಿಯಾದದ್ದು ಗೊತ್ತೇ ಇದೆ. ಬಹುಶ ಕನ್ನಡದ ಮಟ್ಟಿಗೆ ಇತ್ತೀಚಿಗೆ ಬರೀ ಹೊಸತನ, ನವ್ಯ ನಿರೂಪಣೆಯಿಂದ ಯಶಸ್ವಿಯಾದ ಚಿತ್ರವದು. ಈಗ ಅದನ್ನು ಹಿಂದಿ ರೀಮೇಕ್ ಮಾಡಲು ಹೊರಟಿರುವುದು ಸರಿ. ಆದರೆ ಅದರ ರೀಮೇಕ್ ಮಾಡಹೊರಟವರಿಗೆ ಅದೇ ತರಹದ ಚಿತ್ರವೊಂದು ಈಗಾಗಲೇ ಹಿಂದಿಯಲ್ಲಿ ಬಂದಿತ್ತು ಎಂಬುದು ಗೊತ್ತಿರಬಹುದಾ..? ಗೊತ್ತಿದ್ದೂ ತಲೆ ಕೆಡಿಸಿಕೊಳ್ಳದೆ ರೀಮೇಕ್ ಮಾಡುತ್ತಿದ್ದಾರಾ ಎಂಬುದೇ ಪ್ರಶ್ನೆ.
ನಿರೂಪಣೆ ಹೊಸತನವನ್ನು ಮೆಚ್ಚಿ ಅದನ್ನು ಹಿಂದಿಗೆ ರಿಮೇಕ್ ಮಾಡುತ್ತಿದ್ದರೆ ಅದಕ್ಕೆ ಶಹಬ್ಬಾಸ್ ಹೇಳಬಹುದು. ಆದರೆ ಇಲ್ಲಿ ಗೆದ್ದ್ದಿದೆ ಎಂಬುದಕ್ಕೆ ಹಿಂದೆ ಮುಂದೆ ನೋಡದೆ ರೀಮೇಕ್ ಮಾಡಲು ಒಪ್ಪಿರಬಹುದಾ..? 
2012 ರಲ್ಲಿ ಬಿಡುಗಡೆಯಾದ ಈ ಹಿಂದಿ ಚಿತ್ರದ ಹೆಸರು ?: ಎ ಕ್ವೆಶ್ಚನ್ ಮಾರ್ಕ್. ಏಳು ಜನ ವಿದ್ಯಾರ್ಥಿಗಳು ಒಂದು ಕಾಲೇಜ್ ಪ್ರೊಜೆಕ್ಟ್ ಗಾಗಿ ಮೂವಿ ಶೂಟ್ ಮಾಡಲು ಹೋಗುತ್ತಾರೆ. ಅವರು ವಾಪಸ್ಸಾಗುವುದಿಲ್ಲ. ಸುಮಾರು ದಿನದ ನಂತರ ಅವರ ಕ್ಯಾಮೆರಾ ಮುದ್ರಿತ ಟೇಪ್ ಸಿಗುತ್ತದೆ. ಅದರಲ್ಲಿದ್ದನ್ನೆ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗಿದೆ ಎಂದೇ ಹೆಸರು ಮಾಡಿಕೊಂಡು ತೆರೆಗೆ ಬಂದ ಈ ಚಿತ್ರದ ನಿರ್ದೇಶಕರು ಯಶ್ ದೇವ್ ಮತ್ತು ಆಲಿಸಿನ್ ಪಟೇಲ್. ಭಾರತದ ಮೊತ್ತ ಮೊದಲ 'ಫೌಂಡ್ ಫೂಟೇಜ್' ಫಿಲಂ ಎಂದೇ ಹೆಸರಾದ ಈ ಚಿತ್ರ ಹೇಳ ಹೆಸರಿಲ್ಲದಂತೆ ಸೋತದ್ದು ಬೇರೆ ಮಾತು.

ಒಟ್ಟಿನಲ್ಲಿ ರೀಮೇಕ್ ಎನ್ನುವುದು ತಪ್ಪೋ ಸರಿಯೋ. ಅದು ಬೇರೆ ಮಾತು. ಒಂದು ಭಿನ್ನವಾದ ವಿಶಿಷ್ಟವಾದ ಕತೆಯನ್ನು ನಮ್ಮಲ್ಲಿಗೆ ತರುವುದು ಒಳ್ಳೆಯದೇ. ಆದರೆ ಸುಖಾ ಸುಮ್ಮನೆ ಅಲ್ಲಿ ಗೆದ್ದಿದೆ ಎಂದಾಕ್ಷಣ ಅದರ ಕತೆ ಇನ್ನಿತರ ವಿಷಯದ ಬಗ್ಗೆ ಯೋಚಿಸದೆ ಕಣ್ಮುಚ್ಚಿಕೊಂಡು ಕನ್ನಡಕ್ಕೆ ತರುವುದು ನಮ್ಮಲ್ಲಿನ ಸೋಮಾರಿತನವನ್ನು ತೋರಿಸುತ್ತದೆ ಅಲ್ಲವೇ.ಅಥವಾ ನಮ್ಮಲ್ಲಿನ ಆತ್ಮ ವಿಶ್ವಾಸದ ಕೊರತೆಯನ್ನು ನಮ್ಮ ಕತೆಯಲ್ಲಿನ ಭರವಸೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ ಎನಿಸುವುದಿಲ್ಲವೇ?

1 comment:

  1. ಹೌದು. ಹಿಂದಿಯ ಆ ?? ಚಿತ್ರ ಯೂಟ್ಯೂಬಲ್ಲಿ ನೋಡಿದ್ದೆ.

    ReplyDelete